ಪ್ರಶಸ್ತಿ ಅಂಕಣ

ಬರವಣಿಗೆಯ ಶನಿವಾರವೂ ಜೋಗಿಯವ್ರ ಕಾಲಂಬರಿಯೂ: ಪ್ರಶಸ್ತಿ.ಪಿ.

ಕನಸೊಳಗೊಂದು ಕನಸು, ಅದರೊಳಗೆ ಮತ್ತೊಂದು, ಅದರೊಳಗೆ ಇನ್ನೊಂದು ಕನಸು. ಹೀಗೆ ಕನಸೊಳಗೆ ಕನಸ ಬಿತ್ತುತ್ತಲೇ ವಾಸ್ತವ ಕನಸುಗಳ ಪರಿವೆಯಿಲ್ಲದೇ ಕಥೆ ಕಟ್ಟುತ್ತಾ  ಸಾಗುವ ಸಿನಿಮಾವೊಂದಿದೆ ಇಂಗ್ಲೀಷಲ್ಲಿ,inception ಅಂತ. ವಾಸ್ತವ ಕನಸುಗಳ ಅರಿವಿಲ್ಲದಂತೆ ಸಾಗುವ ಅದಮ್ಯ ಪರಿಯದು. ಅದೇ ತರ ವಿಮರ್ಶೆಯ ಬಗ್ಗೆ ವಿಮರ್ಶೆ ಬರದ್ರೆ ? ಕತೆಗಾರನೊಬ್ಬನ ಕತೆ ಹುಟ್ಟಿದ ಬಗ್ಗೆಯೇ, ಕಥಾಸಂಕಲನದಲ್ಲಿ ಬಂದ ಕತೆಗಳ ಬಗ್ಗೆಯೇ ಒಂದು ಕತೆ ಬಂದ್ರೆ ? ಪಂಪಕಾವ್ಯದಲ್ಲಿ ಬರುವ ಕರ್ಣನ ಬಾಯಲ್ಲಿ ಬರುವ ಭಾನಾಮತಿಯ ದ್ಯೂತದ ಪ್ರಸಂಗದ ಬಗ್ಗೆ ಬರೆದ ವಿಮರ್ಶಕರ ಅನಿಸಿಕೆಗಳನ್ನು ಸಂಗ್ರಹಿಸಿ ಮಾಡಿದ ಬುಕ್ಕಿನ ಬಗ್ಗೆಯೇ ಒಂದು ಲೇಖನ ಮೂಡಿಬಂದ್ರೆ.. ಕಾಲಘಟ್ಟದಲ್ಲಿ ಹಿಂದೆಂದೆ ಸಾಗಿ ನವ್ಯ, ನವೋದಯ, ಬಂಡಾಯ , ದಲಿತ ಕಾವ್ಯಗಳ ಪರಿಯನ್ನು, ಬಂಡೀಪುರದ ಕಾಡಿಂದ ಬೆಂಗಳೂರಿನ ಹೊಸ ಪೀಳಿಗೆಯ ಕತೆಗಾರರಾದ ವಿವೇಕ ಭಾಗವತರಿಂದ, ನೇಗಿಲೋಣಿ, ಕಾಯ್ಕಿಣಿಯವರ ಬಗೆಗಿ, ಸಿನಿಮಾಲೋಕದ ದಿನೇಶ್ ಬಾಬು ಅವರಿಂದ ಗಿರೀಶ್ ಕಾಸರವಳ್ಳಿಯವರ ಬಗ್ಗೆ, ನಾಟಕ, ಖಂಡಕಾವ್ಯ ಹೀಗೆ ಎಲ್ಲದರ ಬಗೆಗೂ ಬರೆಯುತ್ತಾ ಹೋಗೋದು ಅಂದ್ರೆ ಉಫ್.. ಸಾಮಾನ್ಯ ಓದುಗನ ಪಾಲಿಗಂತೂ ಅದೊಂದು  ಕಲ್ಪನಾಲೋಕದಲ್ಲಿ ಮುಳುಗೇಳುವ ಅನುಭವ. ಅದ್ಯಾವ ಪುಸ್ತಕವಪ್ಪಾ ಅದು ಅಂದ್ರಾ ?   ಸೋಂಬೇರಿತನದ ಶನಿವಾರದಂದು ಸುಮ್ಮನೇ ಓದಲೆಂದು ಕೈಗೆತ್ತಿಕೊಂಡು ಕೊನೆಯವರೆಗೂ ಓದಿಸಿಕೊಂಡ ಜೋಗಿಯವರ "ಕಾಲಂಬರಿ" ಪುಸ್ತಕದ ಬಗ್ಗೆ ಹೇಳಹೊರಟಿದ್ದು ನಾನೀಗ. 

ಉದಯವಾಣಿ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಗಿರೀಶ್ ರಾವ್ ಹತ್ವಾರ್ ಅಥವಾ ಜೋಗಿಯವ್ರ ಪ್ರಕಟವಾದ ೨೯ಕ್ಕೂ ಹೆಚ್ಚು ಪುಸ್ತಕಗಳಲ್ಲಿ ಕಾಲಂಬರಿ ಇಪ್ಪತ್ತೊಂಭತ್ತನೆಯದು.  ಉದಯವಾಣಿಯ ಖಾಯಂ ಓದುಗನಾಗಿಲ್ಲದ ಕಾರಣ ಅವರ ಬರಹಗಳನ್ನು ಪ್ರಾಯಶಃ ಮಿಸ್ ಮಾಡಿಕೊಂಡ ನನ್ನ ಪಾಲಿಗೆ ಅವರ ಬರಹಗಳನ್ನು ಓದಲು ಸಿಕ್ಕಿದ್ದು ಇದೇ ಮೊದಲು. ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಸಿಕ್ಕಿದ್ದ ಹೃದಯಶಿವ ಅವ್ರು ಜೋಗಿಯವ್ರ ಬರಹಗಳ ಓದಿದ್ದೀಯ, ಓದಿ ಒಮ್ಮೆ ಓದಿಲ್ಲದಿದ್ರೆ ಅಂದಿದ್ರು. ಅದಾದ ಮೇಲೆ ಅವರು ಅದೆಷ್ಟೋ ಸಲ ಸಿಕ್ಕಿರಬಹುದು. ಬೇರೆ ಹಲವು ವಿಷಯಗಳ ಬಗ್ಗೆ ಮಾತಾಡಿರ್ಬೋದು. ಆದ್ರೆ ಈ ಜೋಗಿ ಅನ್ನೊ ಹೆಸ್ರು ನಂಗೇ ಅರಿವಿಲ್ಲದಂಗೆ ಮನಸ್ಸಲ್ಲಿ ಕೂತು ಬಿಟ್ಟಿತ್ತು. ಮೊನ್ನೆ ಕಛೇರಿಯ ಕನ್ನಡ ರಾಜ್ಯ್ಯೋತ್ಸವದ ದಿನ ಈ "ಕಾಲಂಬರಿ" ಅನ್ನೋ ಪುಸ್ತಕ ಕಂಡಾಕ್ಷಣ ಹಿಂದಿನದೆಲ್ಲಾ ನೆನಪಾಗಿ ಓದಲೇಬೇಕನ್ನೋ ಹಂಬಲದಲ್ಲಿ ಈ ಪುಸ್ತಕ ಖರೀದಿಸುವಂತಾಗಿತ್ತು.

ಶ್ರೇಷ್ಠ ಆಡಳಿತಗಾರರು ಅಂತ ದಕ್ಕೋಕಾಗುತ್ತಾ ಅಂತ ಕೊಂಚ ವಿಭಿನ್ನವಾಗಿ ಶುರುವಾಗುವ ಅವರ ಲೇಖನಗಳಲ್ಲಿ ಲೋಕರೂಢಿಗಿಂತ ವಿಭಿನ್ನವಾದ ನಿಲುವಿದ್ಯಲ್ಲಾ ಅನಿಸ್ತಾ ಇತ್ತು. ಕ್ರಮೇಣ ಚಿಮ್ಮಲಗಿಯ ತರುಣ ಹೊಟ್ಟೆಪಾಡರಸಿ ಬೆಂಗಳೂರಿಗೆ ಬಂದ ಕತೆ, ಅವ ಇಲ್ಲಿನ ಇಂಗ್ಲೀಷ್ ದಾಳಿಗೆ ಸಿಕ್ಕು ಸಿಕ್ಕ ವೈಟರ್ ಕೆಲಸವನ್ನೂ ಕಳೆದುಕೊಳ್ಳೋವರೆಗೆ ಮುಂದುವರೆಯುತ್ತೆ. ಕತ್ತಿ ಮಸೆಯುವವನ ಕತೆ ಒಂದು ಕತೆ ಬರುತ್ತೆ. ಕ್ರಾಂತಿ ಮಾಡುತ್ತೇನೆ ಅಂತ ಕೊನೆಯವರೆಗೂ ಕತ್ತಿ ಮಸೆಯುತ್ತಾ, ಕತ್ತಿ ಮಸೆಯುವ ಪ್ರಾಧಿಕಾರ ಅಂತ ಸರ್ಕಾರ ಸ್ಥಾಪಿಸೋ ಪ್ರಾಧಿಕಾರದ ಅಧ್ಯಕ್ಷನಾಗಿಬಿಡುವ ವ್ಯಕ್ತಿಯ ಪ್ರಸಂಗ ಬರುತ್ತೆ ಇಲ್ಲಿ !. ಪ್ರಸ್ತುತ ಪರಿಸ್ಥಿತಿಯ ವಿಢಂಬನೆಯಿಲ್ಲಿ. ನಂತರ ಬರುವ ಹುಲಿಯ ಕಾಡ ಕತೆಯಲ್ಲಿ ಕಾಡನಾಶಕ್ಕೆ ಆದಿವಾಸಿಗಳು ಕಾರಣ ಅನ್ನೋ ಆಧಿಕಾರಿಗಳು, ಅಧಿಕಾರಿಗಳು ಕಾರಣ ಅನ್ನೋ ಆದಿವಾಸಿಗಳು.. ಇವೆರಡರ ನಡುವಣ ದ್ವಂದ್ವದಲ್ಲಿ ನಮ್ಮನ್ನು ತಂದು ನಿಲ್ಲಿಸಿ ನಿರ್ಧಾರವನ್ನು ನಮ್ಮ ನಿಲುವಿಗೆ ಬಿಟ್ಟು ಬಿಡುತ್ತಾರೆ.

ಸಾಹಿತಿಗಳ ಬಡತನದ ಬಗ್ಗೆ, ಸಾಹಿತ್ಯದಲ್ಲಿ ಆ ಪಂಥ, ಈ ಪಂಥಗಳೆಂದು ಕಚ್ಚಾಡೋ ಜನರ ಬಗ್ಗೆ, ಐಟಿ ಕ್ಷೇತ್ರದಲ್ಲಿದ್ದೂ ಬರೆಯುತ್ತಿರೋ ಜನರ ತುಚ್ಚೀಕರಿಸೋ ಪಟ್ಟಭದ್ರರ ಬಗ್ಗೆ. ಹೀಗೆ ಹತ್ತು ಹಲವು ಮಜಲುಗಳಲ್ಲಿ ಸಾಗುತ್ತದೆ ಅವರ ಬರಹ. ಪುಸ್ತಕಗಳ ಅಂಗಡಿಗೆ ಹೋಗಿ ಪೆಂಗ್ವಿನ್ ಪ್ರಕಾಶನದ ದುಬಾರಿ ಪುಸ್ತಕಗಳ ಬೆನ್ನುಡಿ ಕಂಡು ಅದನ್ನು ಕೊಳ್ಳಲಾಗದ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸುತ್ತಲೇ ಕೊನೆಗೊಂದು ದಿನ ತಾವೂ ಪುಸ್ತಕ ಬರೆಯುವ ಸ್ಥಿತಿ ತಲುಪಿದ ಬಗ್ಗೆ,  ತಾವೇ ಬರೆದ ಪುಸ್ತಕದ ಬಗೆಗಿನ ಜನರ ಪ್ರತಿಕ್ರಿಯೆಯ ಬಗ್ಗೆ ಹೀಗೆ ಎಲ್ಲದರ ಬಗ್ಗೆಯೂ ಬರೆದಿದ್ದಾರೆ. ಯಶವಂತ ಚಿತ್ತಾಲರು, ಗಿರೀಶ್ ಕಾರ್ನಾಡರು, ಲಂಕೇಶ್, ಎ.ಎಸ್. ಮೂರ್ತಿಯವ್ರು, ಜ.ನಾ.ತೇಜಶ್ರೀ , ಬಿ.ಎಲ್.ವೇಣು, ಅ.ರಾ.ಸೇ, ರಾಮಚಂದ್ರ ಶರ್ಮ ಅವ್ರು.. ಹೀಗೆ ಅದೆಷ್ಟೋ ಉಲ್ಲೇಖಗಳು ಬಂದು ಹೋಗತ್ತೆ ಇಲ್ಲಿ. ಅದೆಷ್ಟೋ ವಿಷಯಗಳು ಒಂದೆಡೆ ಕಲೆಹಾಕಿದ ಭಾವವ ಪಡೆಯಲು ಈ ಪುಸ್ತಕವನ್ನೇ ಓದಬೇಕು. ಇಲ್ಲಿ ಬಂದ ಸಾಹಿತಿಗಳ ಬಗ್ಗೆ ಓದಿದ  ಜನರ ಭಾವ ಏನೋ ಗೊತ್ತಿಲ್ಲ. ಆದರೆ ಇದರಲ್ಲಿ ಅಡಿಗ, ಕುವೆಂಪು, ತೇಜಸ್ವಿ ಹೀಗೆ ಕೆಲವರನ್ನು ಬಿಟ್ರೆ ಅದೆಷ್ಟೊ ಹೊಸ ಹೆಸರುಗಳು ಅನಿಸೋ ನನ್ನಂತ ಪೀಳಿಗೆಯವರಿಗೆಂತೂ ನೀನರಿಯದ ದೊಡ್ಡ ಲೋಕವೇ ಇದೆಯೊಂದು. ಬಿದ್ದಿರೊ ಬಾವಿಯಿಂದ ಹೊರಬಂದು ಜಗತ್ತ ಕಾಣು ಎಂದು ಕರೆಕೊಟ್ಟಂತೆ ಅನಿಸುತ್ತೆ. ಅಂದಂಗೆ ಕನ್ನಡಹಬ್ಬದಂದು ಕೊಂಡ ಇನ್ನೂ ಐದು ಪುಸ್ತಕಗಳು ನನ್ನ ಹಾದಿ ಕಾಣುತ್ತಿವೆ. ಬೆಳಗೆರೆ, ಲಂಕೇಶ್, ಗಣೇಶಯ್ಯ, ಡಿ.ವಿ.ಜಿ, ಜೋಗಿಯವರದೇ ಮತ್ತೊಂದು ಪುಸ್ತಕಗಳು ಬಾ ಎನ್ನ ಎತ್ತಿಕೋ ಅಂತ ಕಾಡುತ್ತಿವೆ. ಶನಿವಾರ ಏನಾದ್ರೂ ಬರಿಬೇಕಂತಿದ್ದೆ. ಆದ್ರೆ ಓದಿದ ಪುಸ್ತಕದ ಬಗೆಗಿನ ಅನಿಸಿಕೆಯೇ ಒಂದು ಲೇಖನವಾಗಿಬಿಟ್ಟಿದೆ ! ಮುಂದಿನ ಬಾರಿ ಸಿಗುವೆ ಮತ್ತೊಂದಿಷ್ಟು ಓದಿನೊಂದಿಗೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *