ಗಡಿನಾಡ ಕನ್ನಡ: ನಾಗೇಶ್ ಟಿ.ಕೆ.

ನನ್ನ ಹೆಸರು ನಾಗೇಶ್ ಟಿ.ಕೆ.

ಮೂಲತ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬನ್ನಿಮರದಕೊಪ್ಪಲು ನಿವಾಸಿ. ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೨೦೦೭ರಲ್ಲಿ ಶಿಕ್ಷಕನಾಗಿ ತೆಲುಗು ಪ್ರಭಾವವಿರುವ ಗಡಿನಾಡಿನ ಶಾಲೆಯಲ್ಲಿ ನಿಯೋಜನೆಗೊಂಡು ಕೆಲಸ ಪ್ರಾರಂಭಿಸಿದಾಗ ನನಗಾದ ಭಾಷಾ ಸಮಸ್ಯೆ ಹಾಗೂ ಇಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಅಥವಾ ಮಾತೃಭಾಷಾ ಅಭಿಮಾನ ಇಲ್ಲದಿರುವುದನ್ನು ನೋಡಿ ಈ ೮ ವರ್ಷದಲ್ಲಿ ನನಗಾದ ಎಲ್ಲಾ ಅನುಭವಗಳನ್ನು ಕ್ರೋಢೀಕರಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಕನ್ನಡ ಬಾರದ ಊರಲ್ಲಿ
ಕನ್ನಡ ರಾಜ್ಯೋತ್ಸವ
ಆಚರಿಸಲು ಹೊರಟ
ನಾನೊಬ್ಬ ಕನ್ನಡಿಗ
ಇದು ಕರ್ನಾಟಕವೆಂದೇನಲ್ಲ
ಪಕ್ಕದಲ್ಲಿ ಆಂಧ್ರದ ಗಡಿಯಿದೆಯಲ್ಲ
ಇಲ್ಲಿ ಕನ್ನಡ ಕಾರ್ಯಕ್ರಮಗಳು
ನಡೆಯುವುದೇ ಇಲ್ಲ
ಕಾರಣ ಸಂಘಟನಾಕಾರರು
ಹೋಗಿ ಬರಲು ಸೂಕ್ತ ರಸ್ತೆಗಳಿಲ್ಲ.

ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯು ಹಾಗೂ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯ ಸ್ಥಿತಿ ಕೇವಲ ನವೆಂಬರ್ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗುತ್ತಿರುವುದು ಶೋಚನೀಯ.

ಶತಶತಮಾನಗಳಿಂದ ರಾಜಾಶ್ರಯವನ್ನು ಪಡೆದು ಉಚ್ಚ್ರಾಯ ಸ್ಥಿತಿಯಲ್ಲಿ ಬೆಳೆದು ಬಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಇಂದು ಪರ ಭಾಷಾ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ದುರಂತವೆ ಸರಿ. ಕನ್ನಡ ಭಾಷೆ ಮತ್ತು ಸಾಹಿತ್ಯ ಶ್ರೇಷ್ಠವಾಗಿಲ್ಲ ಎಂದೇನಿಲ್ಲ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯಲ್ಲಿ ಕನ್ನಡಕ್ಕೆ ೨೯ನೇ ಸ್ಥಾನವಿದೆ. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಮತ್ತು ಎಸ್.ಎಲ್ ಭೈರಪ್ಪನವರ ಕೃತಿಗಳು ಭಾರತದ ೧೪ ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೆ ಯಾವ ಭಾಷೆಗೂ ಸಿಗದಷ್ಟು ೮ ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಇಂತಹ ಒಂದು ಮಾತೃಭಾಷೆ ಕನ್ನಡಿಗರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ಕನ್ನಡಿಗರಾದ ನಾವು ಕನ್ನಡಕ್ಕೆ ಮಾಡುತ್ತಿರುವ ಅಪಮಾನ.

೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ. ಇವರಲ್ಲಿ ೫.೫ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಇವರಲ್ಲಿ ಗಡಿಭಾಗದ ಕನ್ನಡಿಗರಿಗೆ ನೆರೆ ರಾಜ್ಯದ ಭಾಷೇಯೇ ಮಾತೃಭಾಷೆಯಾಗಿದ್ದರೂ ಅತಿಶಯೋಕ್ತಿಯಿಲ್ಲ. ಬೇರೆ ಭಾಷಿಗರಲ್ಲಿ ಇಲ್ಲದ ಈ ಮಾತೃಭಾಷೆ ತಾತ್ಸಾರಾ ನಮ್ಮ ಕನ್ನಡಿಗರಲ್ಲಿ ಏಕೆ? ಬೇರೆಯವರು ಅವರವರ ಭಾಷೆಗೆ ತೋರುವ ಅಭಿಮಾನ, ವಾತ್ಸಲ್ಯ ನಮಗೇಕೆ ಇಲ್ಲ? ಎಲ್ಲವೂ ಕೇವಲ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇನ್ನಾದರೂ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಮೈಕೊಡವಿ ಎದ್ದು ನಿಲ್ಲಬೇಕು. ಇಲ್ಲವಾದರೆ, ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತಾಗುತ್ತದೆ.

ಗಡಿನಾಡ ಕನ್ನಡದ ಸ್ಥಿತಿ:- ಶಿಕ್ಷಕರು ಪಾಠ ಮಾಡುತ್ತಾ ಮಕ್ಕಳನ್ನು ಕೇಳುತ್ತಾರೆ ಎಲ್ಲರೂ ಜೇನು ತಿಂದಿದ್ದೀರಾ? ಲೇದು ಸರ್ ಮಕ್ಕಳಿಂದ ಬಂದ ಉತ್ತರ. ಮತ್ತೆ ಶಿಕ್ಷಕರು ತಿಂದಿರ್ತಿರಾ ನೆನಪು ಮಾಡ್ಕೊಳ್ಳಿ, ಅದೇ ಕಡ್ಡಿಯ ಮೇಲೆ ಹುಳುಗಳು ಗೂಡು ಕಟ್ಟಿ ತಯಾರಿಸಿದ್ದನ್ನ ನಾವು ಹುಳು ಓಡಿಸಿ ಗೂಡನ್ನ ಹಿಂಡಿ ನೆಕ್ಕಿ ರುಚಿ ನೋಡುತ್ತೇವಲ್ಲ ಎಂದು ಅಭಿನಯ ಮಾಡಿ ತೋರಿಸಿದಾಗ ಮಕ್ಕಳು ಹೇಳಿದ್ದು ಸರ್ ಅದು ತ್ಯಾನೆ..  ಜೇನಿಗೆ ತೆಲುಗಿನಲ್ಲಿ ತ್ಯಾನೆ ಎಂದು ಕರೆಯುತ್ತಾರೆ. ಹೀಗೆ ಅದೆಷ್ಟೊ ಪದಗಳನ್ನು ಮಕ್ಕಳಿಗೆ ಅರ್ಥ ಮಾಡಿಸಲು ಪ್ರತಿ ತರಗತಿಯಲ್ಲೂ ಶ್ರಮ ಪಡೆಬೇಕಾಗಿತ್ತು. 

ಮತ್ತೊಂದು ಪ್ರಸಂಗ:- ದಾಖಲಾತಿ ಪುಸ್ತಕಕ್ಕೆ ಮಗುವಿನ ಜಾತಿಯನ್ನು ನಮೂದಿಸಬೇಕಾಗಿರುತ್ತದೆ. ಶಿಕ್ಷಕರು ಮಗುವನ್ನು ಕರೆದು ಕೇಳುತ್ತಾರೆ ನೀವು ಯಾವ ಕ್ಯಾಸ್ಟ್ ಮಗೂ? ಮಗುವಿನಿಂದ ಉತ್ತರವಿಲ್ಲ. ಮತ್ತೆ ಲೇ ನೀವು ಯಾವ ಜಾತಿನೋ? ಮತ್ತೆ ಮಗುವಿನಿಂದ ಉತ್ತರವಿಲ್ಲ, ಸಮಾಧಾನದಿಂದ ಶಿಕ್ಷಕರು ನಿನಗೆ ಕನ್ನಡ ಅರ್ಥ ಆಗೋಗಿಲ್ಲ ಅಲ್ವ ಸರಿ ಇವಾಗ ಹೇಳು ಮೀರು ಏಮ್ ಟೊಳ್ಳು? ತಕ್ಷಣ ಉತ್ತರಿಸಿದ ಮಗು ಮಂಚೋಳು ಸರ್ ಅಂತು. ಅಂದರೆ ನೀವು ಯಾವ ಜನ ಅಂತ ತೆಲುಗಿನಲ್ಲಿ ಕೇಳಿದ್ದಕ್ಕೆ ಮಗುವಿನಿಂದ ತಕ್ಷಣದ ಪ್ರತಿಕ್ರಿಯೆ ಒಳ್ಳೆಜನ ಅಂತ ಉತ್ತರಿಸಿತ್ತು. ಶಿಕ್ಷಕರು ಬೇರೆ ದಾರಿ ಕಾಣದೆ ಕಛೇರಿ ಕಡತ ತೆಗೆದು ಮಗುವಿನ ಜಾತಿ ನೋಡಿ ನಮೂದಿಸಿಕೊಂಡರು.

ಇಂದು ನಮ್ಮ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ಅದರಲ್ಲೂ ಇಂಗ್ಲೀಷ್ ಪ್ರಭಾವವಂತು ಅಧಿಕವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಕನ್ನಡದ ಬಗ್ಗೆ ತಾತ್ಸಾರ ಮೂಡುತ್ತಿದೆ. ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಬೇಕೆಂಬ ಹಠಕ್ಕೆ ಬಿದ್ದು ಕನ್ನಡ ಶಾಲೆಗಳನ್ನು ಕಡೆಗಣಿಸುತ್ತಿದ್ದಾರೆ. ಇಂದು ಕನ್ನಡ ಶಾಲೆಗಳಲ್ಲಿಯೂ ಸಹ ಇಂಗ್ಲೀಷ್‌ನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ, ಅದರೂ ಪೋಷಕರಿಗೆ ಪೂರ್ಣ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಅನಿವಾರ್ಯವಾಗುತ್ತಿದೆ.ಬೇರೆ ಭಾಷೆಯನ್ನ ಕಲಿಯುವುದು ತಪ್ಪಲ್ಲ. ಆದರೆ ನಮ್ಮ ಮಾತೃ ಭಾಷೆಯನ್ನ ತಿರಸ್ಕರಿಸುವಷ್ಟು ಮನೋಧೋರಣೆ ಇದೆಯಲ್ಲ ಅದನ್ನು ಸಹಿಸಲಾಗದು. ನಮ್ಮ ಕನ್ನಡ ಭಾಷೆಯನ್ನು ನಮ್ಮ ಮನೆಯ ಮುಖ್ಯಧ್ವಾರದಂತೆ ಇಟ್ಟುಕೊಳ್ಳೋಣ, ನಮ್ಮ ದಿನ ನಿತ್ಯದ ಓಡಾಟ ಅದರ ಮೂಲಕವೇ ಅಲ್ಲವೇ, ಹಾಗೆ ನಮ್ಮೆಲ್ಲ ವ್ಯವಹಾರಗಳು ಕನ್ನಡದಲ್ಲೆಆಗಲಿ, ಗಳಿ ಬೆಳಕಿಗೆ ಕಿಟಕಿಗಳನ್ನು ಇಟ್ಟುಕೊಂಡ ಹಾಗೆ ಪ್ರಪಂಚ ಜ್ಞಾನ ತಿಳಿಯಲು ಇಂಗ್ಲೀಷ್ ಅವಲಂಬಿಸೋಣ,
    
ಗಡಿಭಾಗದ ಜನರಲ್ಲಿ ನೆರೆ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿರುತ್ತದೆ. ಆದರೆ, ಪಕ್ಕದ ರಾಜ್ಯದವರು ಮಾತ್ರ ನಮ್ಮ ಭಾಷೆಯನ್ನು ಇಷ್ಟು ಅವಲಂಬಿಸಿರುವುದಿಲ್ಲ ಅದು ಅವರ ಭಾಷೆಯ ಮೇಲೆ ಅವರಿಗಿರುವ ಸ್ವಾಭಿಮಾನ ಎನ್ನಬಹುದು.

ನಾವು ಇಂದು ನಮ್ಮ ಭಾಷೆಯನ್ನ ಬಿಟ್ಟು ಬೇರೆ ಭಾಷೆಗಳತ್ತ ಒಲವು ತೋರಿಸುತ್ತಿದ್ದೇವೆ. ಎಂದರೆ ಅದಕ್ಕೆ ಕಾರಣ ಭಾಷೆಯ ಶ್ರೀಮಂತಿಕೆಯೊ ಅಥವಾ ನಮ್ಮ ಭಾಷೆಯ ಬಡತನವೊ ಗೊತ್ತಿಲ್ಲ ಯಾರು ಕೂಡ ನಮ್ಮ ಭಾಷೆಯನ್ನ ಪ್ರೀತಿಸಿ ಅವಲಂಭಿಸಿ ಅನುಕರಿಸಿ ಎಂದು ಉಡುಗೊರೆ ಕೊಟ್ಟಾಗಲಿ ಸನ್ಮಾನ  ನೀಡಿ ಗೌರವಿಸಿ ಕರೆಯುತ್ತಿಲ್ಲ ನಾವೇ ನಾವಾಗಿ ಅವಲಂಬಿಸುತ್ತಿದ್ದೇವೆ.ಇದಕ್ಕೆ ಕಾರಣಗಳು ಹಲವರು ಇರಬಹುದು. ಇದೇ ರೀತಿ ಬೇರೆಯವರು ನಮ್ಮ ಭಾಷೆಯನ್ನ ಸಂಸ್ಕೃತಿಯನ್ನ ಅಚಾರ ವಿಚಾರಗಳ ಅನುಸರಿಸುವಂತೆ, ನಾವು ನಮ್ಮ ಕನ್ನಡ ಭಾಷೆಯನ್ನ ಏಕೆ ಶ್ರೀಮಂತಗೊಳಿಸಬಾರದು ?

ಇದಕ್ಕೆ ಇಂದು ಉದಾರಣೆ ನಮ್ಮ ಹೋಬಳಿ ಮಟ್ಟದಲ್ಲಿ ೨ ಖಾಸಗಿ ಶಾಲೆಗಳಲ್ಲಿ ಶಾಲಾ ವಾರ್ಷಿಕೊತ್ಸವ ಎಂದು ಆಚರಿಸಿ ಬರೀ ಅನ್ಯ ಭಾಷೆಗಳ ಗೀತೆಯನ್ನು ಹಾಕಿ ನೃತ್ಯ ಮಾಡಿಸಿದರು. ನನಗ್ಯಾಕೋ ತುಂಬಾ ಬೇಸರವಾಯಿತು. ನಮ್ಮ ಶಾಲೆಯಲ್ಲಿಯೆ ಒಂದು ಉತ್ತಮ ಕನ್ನಡ ಕಾರ್ಯಕ್ರಮ ಏಕೆ ನಾಡಬಾರದೆಂದು ಭಾವಿಸಿ ಕನ್ನಡ ನುಡಿ ಹಬ್ಬ ಎಂಬ ಕಾರ್ಯಕ್ರಮ ಮಾಡಲಾಯಿತು. ಪ್ರಾರಂಭದಲ್ಲಿ ತಾತ್ಸಾರ ತೋರಿದ ಜನ ಕಾರ್ಯಕ್ರಮದ ನಂತರ ಹಾಡಿ ಹೋಗಳಿ ಬಿಟ್ಟರು. ಕಾರಣ ಆ ಕಾರ್ಯಕ್ರಮ ಆಜನತೆಯಲ್ಲಿ ಕನ್ನಡದ ಶ್ರೀಮಂತಿಕೆಯನ್ನು ತಿಳಿಸಿತು. ಇನ್ನೂಂದೆಯು ಇಂತಹ ಕಾರ್ಯಕ್ರಮ ಬೇಕಂಬ ಆಶಯ ತೋರಿಸುತ್ತಿದ್ದಾರೆ ಅಲ್ಲದೆ ಕನ್ನಡವನ್ನು ಪ್ರೀತಿಸುತ್ತಿದ್ದಾರೆ.

ನಮ್ಮ ಕನ್ನಡ ಸಂಘಟನೆಗಳ ಕನ್ನಡ ಕಾರ್ಯಕ್ರಮಗಳು ಕೇವಲ ಜಿಲ್ಲೆ ತಾಲ್ಲೂಕು ಮಟ್ಟಕ್ಕೆ ಸೀಮಿತವಾಗುತ್ತವೆ ಇದನ್ನು ದಾಟಿ ಗ್ರಾಮ ಗ್ರಾಮಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿದ್ದೇ ಆದರೆ ಗಡಿ ನಾಡ ಜನತೆಗೆ ಕನ್ನಡ ನಾಡ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ ಕನ್ನಡಾಭಿಮಾನವನ್ನು ಮೂಡಿಸಬಹುದು. ಈ ಒಂದು ಪ್ರಯತ್ನವಾಗಿ ಗೌರಿಬಿದನೂರು ತಾ|| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಜಯ್ಯಗಾರಹಳ್ಳಿಯಲ್ಲಿ ಕನ್ನಡ ನುಡಿ ಹಬ್ಬ ಎಂಬ ಕಾರ್ಯಕ್ರಮವನ್ನು ರೂಪಿಸಿ ಕರ್ನಾಟಕವಾಗಿದ್ದರೂ ಸಹ ಕನ್ನಡವೇ ಬಾರದ ಗ್ರಾಮಸ್ಥರಲ್ಲಿ ಮತ್ತು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಹೊಸ ಪ್ರಯತ್ನ ನಡೆಯುತ್ತಿದೆ.

ಇಂದು ಶ್ರಮಿಸಿದರೆ
ಇನ್ನೊಂಬತ್ತು ತಿಂಗಳಲ್ಲಿ
ಹುಟ್ಟಬಹುದು ಒಂದು ಕಂದ
ವಿಪರ್ಯಾಸವೆಂದರೆ ನವೆಂಬರ್ ಕಳೆದರೆ
ಮತ್ತೆ ಹನ್ನೊಂದು ತಿಂಗಳು
ಕಾಯಬೇಕು ನಾವಾಗಲು ಕನ್ನಡದ ಕಂದ

ಕನ್ನಡ ರಾಜ್ಯೋತ್ಸವದ ಬರಾಟೆಯಲ್ಲಿ ಕೇವಲ ನವೆಂಬರ್ ಕನ್ನಡಿಗರಾದರೆ ನಮ್ಮ ಕುವೆಂಪುರವರು ಹೇಳಿರುವ ಹಾಗೆ ಸತ್ತಂತಿಹರನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ, ಕನ್ನಡ ಡಿಂಡಿಮವನ್ನು ಬಾರಿಸೋಣ. ಅಲ್ಲದೆ, ಡಿ,ಎಸ್ ಕರ್ಕಿಯವರು ಹೇಳಿರುವ ಹಾಗೆ ನಡುನಾಡೇ ಇರಲಿ ಗಡಿನಾಡೇ ಇರಲಿ ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೋ ಅಲ್ಲೆಲ್ಲ ಕನ್ನಡ ಕಹಳೆಯನ್ನು ಊದಿ ಕನ್ನಡದ ಕರುನಾಡ ಸಿರಿನುಡಿಯ ದೀಪವನ್ನು ಹಚ್ಚೋಣ ಎಂದು ಶಪಥಗೈಯೋಣ.
-ನಾಗೇಶ್ ಟಿ.ಕೆ    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಹೊರಾ.ಪರಮೇಶ್
ಹೊರಾ.ಪರಮೇಶ್
9 years ago

ಪ್ರಿಯ ಮಿತ್ರ ನಾಟಿಕೆಯವರೇ, ನಿಮ್ಮ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ನಿಜವಾಗಿಯೂ ಬೇರೆ ಬೇರೆ ಕಾರಣಗಳ ಜೊತೆಗೆ ಹಳೆಯ ತಲೆಮಾರಿನ ಪೋಷಕರ ಅಭಿಮಾನದ ಕೊರತೆಯಿಂದ ಕಡೆಗಣಿಸಲ್ಪಟ್ಟ ಕನ್ನಡ ನುಡಿಯು ಮುಂದಿನ ಪೀಳಿಗೆಯಲ್ಲಾದರೂ ಉಳಿದು ಬೆಳೆಯಬೇಕಾದರೆ ನಿಮ್ಮ ನಮ್ಮಂಥ ಮೇಷ್ಟ್ರುಗಳ ಪರಿಶ್ರಮವೂ ಅಗತ್ಯವಾಗಿ ಬೇಕಾಗುತ್ತದೆ. ಮುಂದೆಯೂ ಇಂತಹ ಲೇಖನಗಳು ನಿಮ್ಮಿಂದ ಮೂಡಿಬರಲಿ.

Mohammed ali
Mohammed ali
7 years ago

Sir,

Kannadakkagi tamma seve shlaganiya,NNimage nanna Salama

Purushotham
Purushotham
4 years ago

ಅತ್ಯುತ್ತಮ ಕಾಯ೯ ಗಡಿನಾಡು ಅಲ್ಲ ಸಂಪೂರ್ಣ ಜಿಲ್ಲೆಯೇ ಹಾಗಿದೆ ಅದರಲ್ಲೂ ಗಡಿನಾಡಲ್ಲಿ ಕೇಳಬೇಕೆ ಅಂತಹದರಲ್ಲಿ ಇಂದು ಇಡೀ ಜಿಲ್ಲೆಗೆ ನಿಮ್ಮ ಗ್ರಾಮ ಪರಿಚಯವಾಗಿದೆ ಇದಕ್ಕಿಂತ ದೊಡ್ಡ ಕಾಯ೯ ಇನ್ನೇನು ಬೇಕು ಜೈ ಕನ್ನಡಾಂಬೆ…

3
0
Would love your thoughts, please comment.x
()
x