ಬದುಕ ಕಟ್ಟಿಕೊಳ್ಳಲು ಬಂದವರು ಭಾಷೆಯನ್ನು ಕಟ್ಟಿದ್ದರು: ನಿಶಾಂತ್. ಜಿ.ಕೆ


ಯಾವ ಟಿ.ವಿ, ಚಾನೆಲ್ ಹಾಕಿದ್ರೂ ಈಗ ಸ್ವಲ್ಪ ದಿನದಿಂದ ಬರೀ ಅಮ್ಮನದೇ ಸುದ್ದಿ, ಓ ಕನ್‌ಫ್ಯೂಸ್ ಆದ್ರ ಸಾರಿ ನಾನ್ ಹೇಳಿದ್ದು ನಮ್ಮ ನೆರೆಯ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಿ ಜೆ. ಜಯಲಲಿತಾ ಅವರ ಬಗ್ಗೆ ಅವರ ಅವ್ಯವಹಾರ, ಅದು ಇದು ಸದ್ಯಕ್ಕೆ ಬೇಡ ಆದ್ರೆ ನಾನು ಈಗ ಹೇಳ್ಬೇಕು ಅಂತ ಹೊರಟಿರೋ ವಿಷಯ ತಮಿಳರ ಅಭಿಮಾನದ ಬಗ್ಗೆ, ಅದು ಕೇವಲ ಜಯಲಲಿತಾ ಅವರ ವಿಷಯವಾಗಿ ಅಲ್ಲ ಮುಖ್ಯವಾಗಿ ಅವರ ಭಾಷಾಬಿಮಾನ, ನಾಡಿನ ಬಗೆಗಿರುವ ಅತಿಯಾದ ಕಾಳಜಿಯ ಬಗ್ಗೆ.

ಮೊನ್ನೆ ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬಸ್ಸಿನಲ್ಲಿ ಬರ್ತಾ ಇದ್ದೆ ಆರರಿಂದ ಏಳು ಘಂಟೆಗಳ ದಾರಿ ಜೊತೆಗೆ ತೇಜಸ್ವಿ ಅವರ ಕಾಡು ಮತ್ತು ಕ್ರೌರ್‍ಯ ಕೃತಿ ಕೈಯಲ್ಲಿತ್ತು. ಪಕ್ಕದಲ್ಲಿ ಕುಳಿತವರನ್ನ ಮಾತಾಡ್ಸೋ ಅಭ್ಯಾಸ ಮೊದಲಿಂದಲೂ ಸ್ವಲ್ಪ ದೂರಾನೇ, ಹೇಗೂ ಓದೋಕೆ ಒಂದು ಬುಕ್ಕಿತ್ತಲ್ಲ ಸುಮ್ನೆ ಓದ್ತಾ ಕೂತೆ. ನನ್ನ ಮುಂದಿನ ಸೀಟನಲ್ಲಿ ಕುಳಿತಿದ್ದ ನನ್ನದೇ ವಯಸ್ಸಿನ ಇಬ್ಬರು ಹುಡುಗರು ತಮಿಳಿನಲ್ಲಿ ಏನೋ ಗಾಡ ಚರ್ಚೆಯಲ್ಲಿದ್ರು ಅಂತ ಕಾಣತ್ತೆ ತುಂಬಾ ಜೋರಾಗಿ ಮಾತಾಡ್ತಾ ಇದ್ರು ಸ್ವಲ್ಪ ಇರಿಸು ಮುರಿಸಾದ್ರು ಅಪರಿಚಿತರು ಹೇಳೋದ್ ಹೇಗೆ? ಹಾಗಾಗಿ ನನ್ ಪಾಡಿಗೆ ನಾನಿದ್ದೆ.

ಬಸ್ಸು ಶ್ರೀರಂಗಪಟ್ಟಣದಲ್ಲಿ ನಿಂತಾಗ ಇಬ್ಬರು ಮದ್ಯ ವಯಸ್ಕ ದಂಪತಿಗಳು ಬಸ್ಸನ್ನೇರಿದ್ರು, ಅವರು ನನ್ನ ಪಕ್ಕ ಇದ್ದ ಸೀಟಲ್ಲಿ ಕೂತ್ರು, ಅರಸೀಕೆರೆಗೆ ಟಿಕೆಟ್ ಕೊಂಡ ಅವರ ಸಂಭಾಷಣೆ ಕೇಳಿದ ಮೇಲೆ ತಿಳಿದಿದ್ದು ಅವರಿಗೆ ಕನ್ನಡದ ಗಂಧವೂ ಇಲ್ಲವೆಂದು. ಏನಪ್ಪ ಇದು ಮತ್ತಿಬ್ರು ತಮಿಳು ಭಾಷಿಕರು ಅಂದು ಕೊಳ್ಳೊದ್ರ  ಒಳಗೇನೇ ಅಲ್ಲಿದ್ದ ಇಬ್ಬರ ಜೊತೆ ಇನ್ನಿಬ್ಬರ ಪರಿಚಯದ ಮಾತುಗಳಿಗೆ ನಾನೇ ಸಾಕ್ಷಿಯಾಗಿದ್ದಲ್ಲದೆ ಏನೋ ಒಂತರ ಕೀಳರಿಮೆಗೆ ನನ್ನ ಮುಖಾಂತರ ಎಲ್ಲ ಕನ್ನಡಿಗನೂ ಒಳಗಾಗಿದ್ದ ಎನ್ನುವ ಭಾವನೆ ಬಂತು.

ಅಲ್ಲ ಎಲ್ಲೋ ಇನ್ನೊಂದು ಭಾಷೆ ಮಾತಾಡೋ ನಾಡಲ್ಲಿ ನಮ್ಮ ಭಾಷೆ ಮಾತಾಡೋ ಜನ ಸಿಕ್ರೆ ಖುಷಿಯಿಂದ ಮಾತಾಡೋ ವಿಷಯ ಸಹಜಾನೆ ಬಿಡಿ ಆದ್ರೆ ನನ್ನನ್ನ ಆತೀವವಾಗಿ ಅವತ್ತು ಕಾಡಿದ ವಿಷಯ ತಮಿಳರಿಗಿರುವ ಭಾಷಾಭಿಮಾನ ಅವರ ಜನರ ಬಗೆಗಿರುವ ಕಾಳಜಿ ಪ್ರೀತಿ ನಮ್ಮಲೇಕೆ ಅತೀವವಾಗಿ ಚಿಮ್ಮುವುದಿಲ್ಲ, ತಮಿಳರು ಭಾಷಾಂದರು ಎಂದು ದೂರುವ ನಾವು ಉದಾರಿಗಳಗಿದ್ದರಿಂದಲೇ ಅಲ್ಲವೇ ಇಂದು ಬದುಕ ಕಟ್ಟಿಕೊಳ್ಳಲು ಬಂದವರು ಭಾಷೆಯನ್ನು ಕಟ್ಟಿದ್ದು?

ವಿಶ್ವೇಶ್ವರಯ್ಯನವರು ವಿಶ್ವಕ್ಕೆ ಚಿರಪರಿಚಿತ ಕನ್ನಡಿಗ ಆ ಪುಣ್ಯಾತ್ಮನ ಸಾದನೆಗಳು ಒಂದೋ ಎರಡೋ ಇಂತಹ ಸಾದನೆಗಳಲ್ಲಿ ಶ್ಲಾಘನೀಯವಾದ ಒಂದು ನೀರಾವರಿ ಯೋಜನೆ ಶಾಂತಿಸಾಗರದ (ಸೂಳೆ ಕೆರೆ) ಬಳಿ ಕಾಣಬಹುದು ಅದು ಕಡಿದಾದ ಪರ್ವತದ ನಡುವೆ ೧೫ ಅಡಿ ಆಳದ ಕಾಲುವೆಯ ಮೂಲಕ ಭದ್ರಾ ಜಲಾಶಯದ ನೀರನ್ನು ದಾವಣಗೆರೆ ಜಿಲ್ಲೆಗೆ ಹರಿಸಿರುವ ಅವರ ಆ ಯೋಜನೆಯನ್ನು ನೋಡಿದರೆ ಎಂತಹವರೂ ನಿಬ್ಬೆರಗಾಗುವುದೂ ಸರಿಯೆ, ಈ ಯೊಜನೆಯ ಫಲವಾಗಿಯೇ ದಾವಣಗೆರೆ ಚನ್ನಗಿರಿ ಭಾಗಗಳು ಭತ್ತ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ ಇಲ್ಲಿ ನಾನು ಈ ವಿಷಯ ಪ್ರಸ್ಥಾಪಿಸಲು ಕಾರಣವೆಂದರೆ ಮೊನ್ನೆ ಗೆಳಯ ಸತೀಶನ ಮನೆಗೆ ಹೋದಾಗ ಆದ ಅಚ್ಚರಿ ಅದೇನೆಂದರೆ, ಈಗ ಆ ಸಮೃದ್ದ ನೆಲ ಸಂಪೂರ್ಣ ತೆಲುಗುಮಯವಾಗಿದೆ, ಅಲ್ಲಿ ೯೦ರ ದಶಕದಲ್ಲಿ ಕಾಲುವೆ ನಿರ್ಮಾಣವಾಗಿ ಕೃಷಿ ಪ್ರಾರಂಭವಾದಾಗ ಕೆಲಸ ಅರೆಸಿ ಪಕ್ಕದ ಆಂಧ್ರದಿಂದ ಬಂದ ಸಮುದಾಯ ಕ್ರಮೇಣ ಭೂ ಹಿಡುವಳಿದಾರರಾಗಿ ಇಂದು ಆ ಸಂಪೂರ್ಣ ಪ್ರದೇಶವೇ ಅವರ ಮಾಲಿಕತ್ವದಲ್ಲಿದೆ ಇಲ್ಲಿಗೆ ಕುಟುಂಬ ಸಮೇತರಾಗಿ ಬಂದು ನೆಲಸಿ ಅಲ್ಲಿನ ಸಂಪ್ರದಾಯ, ದೇಗುಲಗಳ ನಿರ್ಮಾಣದ ಜೊತೆಗೆ ಅವರ ಭಾಷೆಯನ್ನು ನಮ್ಮವರಿಗೆ ಪರಿಚಯಿಸಿದರೆ ಹೊರೆತು ಕನ್ನಡ ಅವರಿಗಿನ್ನು ಎನ್ನಡವೇ?

ಕೇವಲ ಇದು ಒಂದು ಉದಾಹರಣೆಯಷ್ಟೆ ಇಂತಹುದೇ ನೂರಾರು ಉದಾಹರಣೆಗಳು ಇಂದು ನಮ್ಮ ಮುಂದಿವೆ ಆದರೂ ಇನ್ನು ಎಚ್ಚೆತ್ತುಕೊಳ್ಳವ ಬದುಲು ನಾವು ತೂಕಡಿಸುತ್ತಲೇ ಇದ್ದೇವೆ. ಮೊನ್ನೆ ಸೌತ್ ಇಂಡಿಯಾ ಫಿಲ್ಮ್ ಫೇರ್ ಪ್ರಶಸ್ತಿ ಪ್ರಾದಾನ ಸಮಾರಂಭವೊಂದು ಕನ್ನಡ ವಾಹಿನಿಯೊಂದರಲ್ಲಿ ಪ್ರಾಸಾರವಾಗುತ್ತಿತ್ತು ಅದು ಕನ್ನಡದ ಹೊರೆತು ಉಳಿದ ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳೇ ಅಧಿಕವಾಗಿದ್ದವು ಕೇವಲ ಇದೊಂದೇ ಕಾರ್ಯಕ್ರಮದಲ್ಲಲ್ಲ ಅನೇಕ ವಾಹಿನಿಗಳು ಕೆಲವೊಮ್ಮೆ ಕನ್ನಡದವೋ ಅಥವಾ ಬೇರೆ ಭಾಷೆಯವೋ ಅನ್ನೋ ಗೊಂದಲ ಮೂಡಿಸುತ್ತವೆ, ಅದೇ ಸೌತ್ ಇಂಡಿಯಾ ಫಿಲ್ಮ್ ಫೇರ್ ಪ್ರಶಸ್ತಿ ಪ್ರಾದಾನ ಸಮಾರಂಭವನ್ನು ತೆಲುಗಿನ ಅಥವಾ ತಮಿಳಿನ ವಾಹಿನಿ ಭಿತ್ತರಿಸಿದರೆ ಕನ್ನಡದ ಕಾರ್ಯಕ್ರಮವಿರಲಿ ಮಾತನ್ನು ಕೇಳಲೂ ಆಗುವುದಿಲ್ಲ. ಇದನ್ನು ತಾನೆ ಹಿಂದಿಯ ಖ್ಯಾತ ನಿರ್ದೆಶಕರು ಭಂಡವಾಳ ಮಾಡಿಕೊಳ್ಳುತ್ತಿರುವುದು ದಕ್ಷಿಣದ ಚನೈನತ್ತ ಮುಖ ಮಾಡಿ ಅದೇ ಶೀರ್ಶಿಕೆಯ ಚಿತ್ರವನ್ನೂ ಮಾಡಿ ಅವರ ಭಾಷೆಯನ್ನು ಬಹುವಾಗಿ ಬಳಸಿ ತಮಿಳುನಾಡಿನಲ್ಲೂ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದು.

ಕಳೆದ ೩೦-೩೫ ವರ್ಷಗಳಿಂದ ಅಖಿಲ ಭಾರತ ಕೃಷಿ ವೈಜ್ಞಾನಿಕ ಸೇವೆಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಮಹಾ ನಿರ್ದೇಶಕ ಹೆಮ್ಮೆಯ ಕನ್ನಡಿಗ ಡಾ. ಎಸ್. ಅಯ್ಯಪ್ಪನ್ ರವರು ನಮ್ಮ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಗೆ ಅಥಿತಿಯಾಗಿ ಬಂದಿದ್ದಾಗ ಸರಾಗವಾಗಿ ಒಂದು ಘಂಟೆಗಳಿಗೂ ಅಧಿಕ ಸಮಯ ಕನ್ನಡದಲ್ಲಿ ಮಾತನಾಡಿ ಭಾಷಾಭಿಮಾನ ಮೆರೆದರೆ ೧೦ನೇ ತರಗತಿ ಪಾಸಾಗಲೂ ಅರ್ಹತೆ ಇಲ್ಲದ ನಮ್ಮ ಜನಪ್ರತಿನಿಧಿಗಳು ಒಮ್ಮೆ ವಿಮಾನ ಏರಿ ಇಳಿದರೆಂದರೆ ಕನ್ನಡವನ್ನು ಮರೆತು ಗೊತ್ತಿಲ್ಲದ ಭಾಷೆಗೆ ಗುಲಾಮರಾಗುತ್ತಾರೆ.

ಭಾಷಾಬಿಮಾನವನ್ನು ಭಾಷಾಂದರೆನ್ನುವ ಬದಲು ಅವರ ಹಾದಿಯಲ್ಲಿ ಕಿಂಚಿತ್ತಾದರೂ ಯೋಚನೆ ಮಾಡುವ ಸಂಯಮ ಕನ್ನಡಿಗರಿಗಿದ್ದಿದ್ದರೆ ಬೆಳಗಾಂ- ಬೆಳಗಾವಿಯಾಗಿ ದಶಕಗಳೇ ಉರುಳಿರುತ್ತಿದ್ದವು. ಕನ್ನಡ ರಾಜ್ಯೋತ್ಸವದಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಲಾಭಿ ನಡೆಸುವಂತಹ ಮನೋದೃಷ್ಟಿ ಎಷ್ಟು ಕಾಲ ಮುಂದುವರೆಯುತ್ತದೆಯೋ ಅಷ್ಟೇ ಬೇಗ ಕನ್ನಡದ ಅವಸಾನವೂ ಸಮೀಪಿಸುತ್ತದೆ. ನವೆಂಬರ್ ಸಮೀಪಿಸುತ್ತಿದೆ ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗಬೇಡಿ, ಕನ್ನಡ ಸರ್ವ ಋತುಗಳ ಸಾರ್ವತ್ರಿಕ ಭಾಷೆಯಾಗಲು ಪ್ರತಿಯೊಬ್ಬ ಕನ್ನಡಿಗನು ಕನ್ನಡದ ಉಳಿವಿಗೆ ಬೆಳವಿಗೆ ಇಂದೇ ಪ್ರತಿಜ್ಞೆ ತೊಡಬೇಕು.
– ನಿಶಾಂತ್. ಜಿ.ಕೆ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x