ನೋವಿನ ಸಮುದ್ರದ ಮೇಲೆ ಸತ್ತ ಮನುಷ್ಯನ ನಡೆದಾಟ: ಸಚೇತನ

 

ಡೆಡ್ ಮ್ಯಾನ್ ವಾಕಿಂಗ್

ನೋಡಿಬಿಡು

ಪ್ರೀತಿಯ ಮುಖದಲ್ಲಿನ  ಆ ಕಣ್ಣುಗಳ

ಅವಳ ಕಣ್ಣುಗಳ ದಿಟ್ಟಿಸು

ಓ  ಅಲ್ಲೊಂದು ಶಾಂತಿಯಿದೆ.

ಇಲ್ಲ, ಯಾವುದೂ ಸಾಯುವದಿಲ್ಲ

ಈ ದಿವ್ಯ ಬೆಳಕಿನಲ್ಲಿ.

ಮೂವತ್ತು ವರ್ಷದ ಜೀವನ ಕಳೆಯಲು

ಕೇವಲ ಒಂದು ಘಂಟೆಯ

 ಈ ಪವಿತ್ರ ಬೆಳಕು ಮಾತ್ರ  ಸಾಕು.

ಕೇವಲ ಒಂದು ಘಂಟೆ

ದಯವಿಟ್ಟು ಬಂದು ಹೋಗು !

ಮರಣ ಅಥವಾ ಬದುಕು ಇವೆರಡರ ಮಧ್ಯದ ಸೂಕ್ಷ್ಮತೆಗಳನ್ನು ಬಿಡಿಸಿಡುವ  ಟಿಮ್ ರಾಬಿನ್ಸನ್ ನಿರ್ದೇಶನದ  ಡೆಡ್  ಮ್ಯಾನ್ ವಾಕಿಂಗ್ ಎನ್ನುವ ಶಕ್ತಿಯುತ ಸಿನಿಮಾದ ಶುರುವಾತು ನಸ್ರತ್  ಫ಼ತೇ ಅಲೀ ಖಾನ್ ರ ಭಾರವಾದ ಧ್ವನಿಯ ಈ ಹಾಡಿನಿಂದ. ಸಮಕಾಲೀನ ಯುಗದ ಅತ್ಯಂತ ವಿವಾದಾತ್ಮಕ ಹಾಗೂ ಬಹು ಭಿನ್ನಾಭಿಪ್ರಾಯವುಳ್ಳ 'ಮರಣದಂಡನೆಯ' ವಸ್ತುವಿನ ಸುತ್ತ ಹೆಣೆದ ಅದ್ಭುತ ಸಿನಿಮಾವಿದು.  

ಸಾಮಾನ್ಯವಾಗಿ ಸಮಕಾಲೀನ ವಸ್ತುವಿನ  ಸುತ್ತ ಹೆಣೆದ ಬಹುತೇಕ ಸಿನಿಮಾಗಳು ವಸ್ತುವಿನ ಬಗ್ಗೆ ಏಕ ಪ್ರಕಾರದ ತೀರ್ಪನ್ನು ಹೇಳಿಬಿಡುವ ದಾರಿಯಲ್ಲಿ ಸಾಗಿ ಕೊನೆಯಾಗುತ್ತವೆ. ಅಲ್ಲಿ ಸಿನಿಮಾದ ನಿರ್ದೇಶಕನ, ಬರಹಗಾರನ ಮನಸ್ಥಿತಿ ತೀರ್ಪಾಗುತ್ತದೆಯೆ ಹೊರತು ವಸ್ತುವಿನ, ಘಟನೆಯ ನೈಜ ಎಳೆಗಳನ್ನಾಧರಿಸಿ ಪ್ರೇಕ್ಷಕ ಯಾವ ನಿರ್ಧಾರಕ್ಕೆ ಬರಬಹುದು ಎನ್ನುವದಲ್ಲ.  ಶ್ರೇಷ್ಠ ಸಿನಿಮಾವೊಂದು ನಿರ್ಮಾಣವಾಗುವದು ಮುಕ್ತ ಆಯ್ಕೆಯಿರುವ ( ಓಪನ್ ಎಂಡೆಡ್ ) ದೃಶ್ಯಗಳಿಂದ. ಅಲ್ಲಿ ಪ್ರೇಕ್ಷಕನ ಚಿಂತನೆಗಳಿಗೆ ಅವಕಾಶಗಳಿವೆ.  ದೃಷ್ಟಿ ವಿಧ ವಿಧವಾಗಿರುವ ಪ್ರತಿಯೊಬ್ಬರಲ್ಲೂ ಅಭಿಪ್ರಾಯ ವಿಧ ವಿಧವಾಗಿ ಹೊರಬರುತ್ತದೆ. ವಸ್ತುವಿನ ಬಗ್ಗೆ ಧನಾತ್ಮಕ ಚರ್ಚೆಗೆ ಅವಕಾಶ ಸಿಗುತ್ತದೆ.

ಸಿನಿಮಾದ ಕಥೆ ಅತ್ಯಂತ ಸರಳವಾದದ್ದು :  ನಗರ ಪ್ರದೇಶದ ತಣ್ಣಗಿನ ಕ್ರೂರತೆಯ ಭಯಾನಕ ಕತ್ತಲಿನ ಎಡೆಯಿಂದ ಎದ್ದು ಬಂದ  ವ್ಯಕ್ತಿಗಳಿಬ್ಬರು ಹದಿಹರೆಯದ ಮಕ್ಕಳಿಬ್ಬರನ್ನು  ಸಿಗಿದು ಹಾಕಿದ್ದಾರೆ. ಮುಗ್ದ ಜೀವಗಳನ್ನು ಹೊಸಕಿ ಅಟ್ಟಹಾಸಗೈದ ಈ ಇಬ್ಬರಲ್ಲಿ ಒಬ್ಬ ಮಧ್ಯವಯಸ್ಕ, ಅವನಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅವಕಾಶವಿರುವ ಶ್ರೀಮಂತ ಹಿನ್ನೆಲೆ. ಇನ್ನೊಬ್ಬ ಕೆಳ ಮಧ್ಯಮವರ್ಗದಿಂದ ಬಂದ, ಅಸಹಾಯಕ ಕುಟುಂಬದ ನೀಲಿ ಕಣ್ಣಿನ ಕೋಲು ಮುಖದ ಅಸಾಧ್ಯ ಉಡಾಫೆಯ ನಿರ್ಗತಿಕ ಯುವಕ  ಮಾಥ್ಯೂ ಪ್ಲಂಕೆಟ್. ಇವನ ಪರವಾಗಿ ಕಾನೂನು ಹೋರಾಟ ಮಾಡುವವರು ಯಾರೂ ಇಲ್ಲ.  ಕಾನೂನಿನ ಬಲಿಷ್ಠ ಕೈಗಳು ಇವನನ್ನು ಮರಣದಂಡನೆಗೆ ನೂಕಿವೆ. ಈ  ತೆರನಾದ ನಿರ್ಗತಿಕ ಕೈದಿಗಳ ಪರವಾಗಿ ಹೋರಾಡುವ ಸ್ವಯಂ ಸೇವಾ ಸಂಸ್ಥೆಯಿಂದ ಬಂದ ನನ್, ಹೆಲೆನ್. ಸೂಕ್ಷ್ಮ ಮನಸ್ಸಿನ ಹೆಲೆನ್ ಹಾಗೂ ಮರಣದಂಡನೆಯ  ಅಂಚಿನಲ್ಲಿನ ಮಾಥ್ಯೂ ಪ್ಲಂಕೆಟ್ ಇವರಿಬ್ಬರ ಹೋರಾಟ, ಮಾತುಕತೆ, ಮೌನ, ಅಳು, ಸುತ್ತಲಿನ ಸಮಾಜ , ಜನ, ಕೊಲೆಯಾದ ಮಕ್ಕಳ ಪಾಲಕರು ಇವರೆಲ್ಲರ ಸುತ್ತ ತಿರುಗಾಡುವ ಕಥೆ ಸಿನಿಮಾದ್ದು.

ಇಡಿ ಸಿನಿಮಾ ನಿಂತಿರುವದು ನಿರ್ದೇಶಕ ಟಿಮ್  ರಾಬಿನ್ಸನ್ ನಿರೂಪಣೆ, ಪಾತ್ರಗಳನ್ನು ಕಟ್ಟಿಕೊಡುವ ಪರಿ , ಡೆವಿಡ್ ರಾಬಿನ್ಸ್ ನ  ಹಿನ್ನೆಲೆ ಸಂಗೀತ, ಹೆಲೆನ್ ಪಾತ್ರದಲ್ಲಿ ಅಭಿನಯಿಸಿರುವ ಸುಸಾನ್ ಸರಾಂಡನ್ ಹಾಗೂ ಶಾನ್ ಪೆನ್  ಅವರ ಪಾತ್ರ ಪರಕಾಯದಿಂದ.

ಸೆರೆಮನೆಯಲ್ಲಿ ಹೆಲೆನ್ ಳನ್ನು ಭೇಟಿಯಾಗುವ ಮಾಥ್ಯೂ ಪ್ಲಂಕೆಟ್  ಕೈಕೋಳದ ಒಳಗಿನಿಂದ ಸಿಗರೇಟು ಹಚ್ಚಿ ವ್ಯರ್ಥ ಪುಂಡತನವನ್ನು ಪ್ರದರ್ಶಿಸುವ ಅಥವಾ ಸಾವಿಗೆ ಅಣಕಿಸುವ ಪೊಳ್ಳುತನ ಮೆರೆಯುವ ಹಂಬಲದಲ್ಲಿದ್ದಾನೆ.  ಹೊಳೆಯುವ ನೀಲಿ ಕಣ್ಣಿನ ಒಳಗೆ, ಹುರಿಗಟ್ಟಿರುವ ಮೈ ಮೇಲೆ ಸಾವಿನ ಭಯದ ಧೂಳು ಕುಳಿತುಕೊಂಡಿದೆ. ಮೊತ್ತ ಮೊದಲ ಬಾರಿಗೆ ಗಲ್ಲು ಶಿಕ್ಷೆಗೊಳಗಾದ ಕೈದಿಗಳ ಜೊತೆ ಕೆಲಸ ಮಾಡುತ್ತಿರುವ ಹೆಲೆನ್ ಳ  ಕಣ್ಣುಗಳಲ್ಲಿ ಅಸಾಧ್ಯ ಕರುಣೆಯಿದೆ.  ಬಹುತೇಕ ಮೌನದಲ್ಲಿ ನಡೆಯುವ ಇವರಿಬ್ಬರ ಸಂಭಾಷಣೆಯಲ್ಲಿ ತೀವ್ರವಾದ ನೋವಿದೆ.  ಬೆಳೆದು ನಿಂತ ಮಕ್ಕಳ ಕಳೆದುಕೊಂಡ ತಂದೆ ತಾಯಿಯರಲ್ಲಿ,  ಮಾಥ್ಯೂ ಪ್ಲಂಕೆಟ್ ನ ಮರಣ ದಂಡನೆಗೆ ಗುರಿಯಾಗಿ ಅದರಿಂದ ಪರೋಕ್ಷವಾಗಿ ತಮ್ಮ ಸೇಡನ್ನು ತೀರಿಸಿಕೊಳ್ಳುವ  ಭಾವವಿದೆ.  ಸಾಯಲು ಹೊರಟು ನಿಂತಿರುವ ಮಾಥ್ಯೂ ಪ್ಲಂಕೆಟ್ ನ ತಾಯಿ ಪ್ರತಿ ದಿನ ಮಗನ ಸಾವಿನ ದಿನಗಳನ್ನು ಎಣಿಸುತ್ತ   ಕಲ್ಲಾಗಿದ್ದಾಳೆ.

ಹೀಗೆ ಸಿನಿಮಾ ಕಟ್ಟಿ ಕೊಡುವದು ಹಲವಾರು ಶಕ್ತಿಯುತ  ದೃಶ್ಯಗಳಿಂದ.  ಹತ್ಯೆಯಾದ ಎಳೆಯ ಮಕ್ಕಳ  ಪೋಷಕರ ಜೊತೆ ಮಾತನಾಡಿಸಲು ಬರುವ ಸಿಸ್ಟರ್ ಹೆಲೆನ್ ಎದುರು ಕೂಡುವ ಪಾಲಕರ ಕೈಯಲ್ಲಿ ಕಾಣಿಸುವ ಅವರ ಮಕ್ಕಳ ಬಾಲ್ಯದ ಆಟಿಕೆ ಸಾಮಾನು, ಫೋಟೊ, ಅವರ ಬಟ್ಟೆಗಳು, ನೆನಪುಗಳು ಕಂಗೆಡಿಸಿದಂತೆ ಸಹಜವಾಗಿ  ಮಾಥ್ಯೂ ಪ್ಲಂಕೆಟ್ ನ ತಾಯಿಯ ಜೊತೆ  ಮಾತನಾಡುವಾಗ ಅವಳು ಹಿಡಿದು ಕೂತ  ಮಗನ ಬಾಲ್ಯದ  ಫೋಟೋ ನಡುಕವನ್ನು ತಂದಿದೆ  . ಮರೆಯಾದ ಮಕ್ಕಳ ತಾಯಿ, ಮರೆಯಾಗಲಿರುವವನ ತಾಯಿ ಇವರಿಬ್ಬರೂ ಸಮನಾಗಿ ಹೆಲೆನ್ ಳನ್ನು ಅಸ್ಥಿರಗೊಳಿಸುತ್ತಾರೆ. 

ಇಡಿ ಸಿನಿಮಾದುದ್ದಕ್ಕೂ ಪ್ಲಂಕೆಟ್ ಮತ್ತು ಅವನ ಮಿತ್ರ ನಡೆಸಿದ ಕೊಲೆಯ ದೃಶ್ಯಗಳು ಫ್ಲಾಶ್ ಬ್ಯಾಕ್ ಹಾಗೆ  ಬಂದು ಹೋಗುತ್ತವೆ. ಕಪ್ಪು ಬೆಳಕಿನ ಆ ದೃಶ್ಯಗಳು ಸಿನಿಮಾದ ಬೇರೆ ಬೇರೆ ಘಟ್ಟಗಳಲ್ಲಿ, ಪ್ಲಂಕೆಟ್ ನ ಬೇರೆ ಬೇರೆ ಮನಸ್ಥಿತಿಗಳಲ್ಲಿ ಕಾಣುತ್ತವೆ. ಯಾವುದೋ ದುರ್ಬಲ ಕ್ಷಣಗಳ ಅಡಿಯಲ್ಲಿ ನಡೆಸಿದ ದಟ್ಟ ಕಪ್ಪು ಕೊಲೆ ಸಿನಿಮಾದ ಉದ್ದಕ್ಕೂ ಗಾಢ ವಿಷಾದವಾಗಿ ಹರಿದು ಬಂದಿದೆ.

ಕೊಲೆಗಾರನೊಬ್ಬನ ಪರವಾಗಿ  ಗಲ್ಲು ಶಿಕ್ಷೆಯನ್ನು ತಪ್ಪಿಸಲು ಹೋರಾಡುವ ಹೆಲೆನ್ ಸಮಾಜಕ್ಕೆ ಅರ್ಥವಾಗುತ್ತಿಲ್ಲ, ಜೀವಕ್ಕೆ ಅವಳು ಕೊಡುವ ಪ್ರಾಮುಖ್ಯತೆ ಸಮಾಜಕ್ಕೆ ನಗಣ್ಯ. ಸಂಪೂರ್ಣ ನಾಗರಿಕ ಸಮಾಜ, ರಾಜಕೀಯ ವ್ಯವಸ್ಥೆ  ಈ ಮರಣದಂಡನೆಯನ್ನು ಕಾಯುತ್ತಿವೆ.  ಕೊಲೆಗಾರನನ್ನು ಕೊಂದ ಆನಂದಕ್ಕೆ ಕಾಯುತ್ತಿರುವ ಜನಕ್ಕೆ ಅಡ್ಡಲಾಗಿ ಬಿಂತಿರುವ ಹೆಲೆನ್, ' ನೋಡು ನಾನು ಇಷ್ಟನ್ನು ಹೇಳಲಿಕ್ಕೆ ಬಯಸುತ್ತೇನೆ, ಸಾಯಿಸುವದು ಅಪರಾಧ, ಅದು ನಾನಾಗಿರಬಹುದು , ನೀನಾಗಿರಬಹುದು ಅಥವಾ ಈ ಸರ್ಕಾರವಾಗಿರಬಹುದು ' ಎನ್ನುವ ಪ್ಲಂಕೆಟ್ ನ ಮಾತನ್ನು ಸಮಾಜಕ್ಕೆ ತಲುಪಿಸಲು, ಅವನ ಪರವಾಗಿ ವಕೀಲರನ್ನು  ನೇಮಿಸಿ ಹೋರಾಡುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದಾಳೆ.

 ಗಲ್ಲು ಶಿಕ್ಷೆಯ ಹಿಂದಿನ ದಿನ ಜೈಲಿನ ಕೋಣೆಯೊಂದರಲ್ಲಿ  ತನ್ನ ಕುಟುಂಬವನ್ನು ಭೇಟಿಯಾಗುವ ಪ್ಲಂಕೆಟ್, ಸೋಪಾದ ಮೇಲೆ ಕುಳಿತಿರುವ ತನ್ನ  ತಾಯಿ, ತಮ್ಮ ಹಾಗೂ ಕಿರಿಯ ತಮ್ಮನನ್ನು ನಗಿಸಲು  ಮಾಡುವ ವ್ಯರ್ಥ ಪ್ರಯತ್ನ ಅವನ  ಉಳಿವಿಗಾಗಿ ಹೆಲೆನ್ ಮಾಡುತ್ತಿರುವ  ವ್ಯರ್ಥ ಹೋರಾಟ ದಂತೆ ಭಾಸವಾಗುತ್ತಿವೆ. ಒಂದು ಕೊನೆಯ ಬಾರಿ ಕಾನೂನಿನ ಅವಕಾಶವಿಲ್ಲದೆ  ತಾಯಿಯನ್ನು ಆಲಂಗಿಸಲಾಗದೆ ಕಣ್ಣೀರಿಡುವ  ತಾಯಿ ಹಾಗೂ  ಮಗನ ದು:ಖ  ತೆರೆಯ ಆಚೆಗೂ ತಲುಪಿ ನೋಡುಗರನ್ನು  ತಾಕುತ್ತದೆ. ಸಮಯ ಮುಗಿದ ಮೇಲೆ ಮರಳಿ ಹೋಗುವ ಕುಟುಂಬವನ್ನು ಮತ್ತೆ ಮತ್ತೆ ನೋಡುವ ಪ್ಲಂಕೆಟ್ ಗೆ ಕುಳಿತ ಕೋಣೆಯ ವಿಸ್ತಾರ ಕಿಲೋಮೀಟರ್ ಗಳಂತೆ ಭಾಸವಾಗುತ್ತಿದೆ.

ಮರಣದಂಡನೆಗೆ  ಅತ್ಯಾಧುನಿಕ ಯಂತ್ರದೊಂದಿಗೆ ಸಜ್ಜು ನಡೆಯುತ್ತಿದೆ, ಹಂತ ಹಂತವಾಗಿ ನೋವಿಲ್ಲದೆ ಸಾಯಿಸುವ  ಈ ಯಂತ್ರದ ಬಗ್ಗೆ ಸಂಪೂರ್ಣ ಅರಿವಿರುವ ಪ್ಲಂಕೆಟ್ ಗೆ ' ಸಾವಿನ ಮೊದಲು ಎಲ್ಲರ ಕ್ಷಮೆ ಕೇಳು  ಮತ್ತೆ ಮನುಷ್ಯನಾಗುತ್ತಿಯ, ಮುಕ್ತನಾಗುತ್ತಿಯ ಎನ್ನುವ ಹೆಲೆನ್ ಅಮ್ಮನಂತೆ, ಅಕ್ಕನಂತೆ ಭಾಸವಾಗುತ್ತಾಳೆ. ಸಾವಿನ ತಯಾರಿ ನಡೆಸಿರುವ ಜೈಲಿನ  ಮನೆಯಲ್ಲಿ  ಹತ್ಯೆಗೊಳಗಾದ ಮಕ್ಕಳ ಪಾಲಕರು ಬಂದು ಕುಳಿತಿದ್ದಾರೆ.  ಸಾವಿನ ದ್ರವ ಯಂತ್ರದಿಂದ, ದೇಹಕ್ಕೆ ಚುಚ್ಚಿದ ನಾಳಗಳ ಮೂಲಕ ಹಂತ ಹಂತವಾಗಿ ಇಳಿಯುತ್ತಿದ್ದಂತೆ, ಮೊದಲ ಹಂತದ ನಂತರ ಸಭೆಗೆ ಎದುರಾಗಿ ಪ್ಲಂಕೆಟ್ ನನ್ನು ನಿಲ್ಲಿಸಲಾಗಿದೆ 'ನಿಮ್ಮ ಮಕ್ಕಳನ್ನು ಕೊಲ್ಲಬಾರದಾಗಿತ್ತು ಕ್ಷಮಿಸಿ ' ಎನ್ನುವ ಅವನ ತೊದಲಿನ ನುಡಿ, ಅವನ ಸಾವಿನ  ಸುರುಳಿಗಳು ಎಲ್ಲರನ್ನು ಕಂಗೆಡಿಸಿವೆ.  ಪ್ಲಂಕೆಟ್ ನ ಆತ್ಮಕ್ಕೆ ವಿದಾಯ ಹೇಳುವಂತೆ  ಹೆಲೆನ್ ಅವನತ್ತ ಕೈ  ಚಾಚಿದ್ದಾಳೆ. 

ಇಡಿ ಸಿನಿಮಾಕ್ಕೆ ಜೀವ ತುಂಬಿರುವದು  ಪ್ರಖರವಾದ ಸಂಗೀತ. ಯಾವುದೋ ಅಪೂರ್ವವಾದ  ಆತ್ಮದೆಡೆಗೆ  ಕೈ ಚಾಚಿದಂತೆ, ಸಾಯುತ್ತಿರುವ  ಪ್ಲಂಕೆಟ್  ಕಡೆಗೆ ಕೈ ಚಾಚಿರುವ ಹೆಲೆನ್, ಹಂತ  ಹಂತವಾಗಿ ಇಳಿಯುತ್ತಿರುವ ರಾಸಾಯನಿಕ, ಪಟಲದ ಮೇಲೆ ಹರಿದು ಬರುತ್ತಿರ ಕೊಲೆಯ ದೃಶ್ಯಗಳು ಇವೆಲ್ಲವುಗಳನ್ನು ಜೋಡಿಸುವಂತೆ ಹಿಂದಿನಿಂದ ಕೇಳುತ್ತಿರುವ ಆಲಾಪ,  ನೀಲಿ ಕಣ್ಣಿನ ಪಶ್ಚಾತ್ತಾಪ, ಕರುಣ ಕಣ್ಣಿನ ಗಾಢ ವಿಷಾದ, ನೆರೆದಿರುವ ಅಪರಾಧಿ ಭಾವ, ಎಲ್ಲವು ಸೇರಿ ನೋವಿನ ಸಮುದ್ರವನ್ನು ನಿರ್ಮಿಸುತ್ತವೆ. ನೋವಿನ ಸಮುದ್ರದ ಮೇಲೆ ಸತ್ತ ಮನುಷ್ಯನ ನಡೆದಾಟ.

ಸಿನಿಮಾ : ಡೆಡ್  ಮ್ಯಾನ್ ವಾಕಿಂಗ್  (Dead Man Walking)

ಭಾಷೆ : ಇಂಗ್ಲೀಶ್

ದೇಶ : ಅಮೇರಿಕ 

ನಿರ್ದೇಶನ : ಟಿಮ್ ರಾಬಿನ್ಸ

Final Cut :

ಸಿನಿಮಾದ ಉದ್ದಕ್ಕೂ ಅದ್ಭುತ ಸಂಭಾಷಣೆಗಳಿವೆ, ಅದರಲ್ಲಿ ಒಂದು :

ಹೆಲೆನ್ : ನನಗೊಂದಿಷ್ಟು ಗೌರವ ತೋರಿಸು ಮಾಥ್ಯೂ

ಮಾಥ್ಯೂ : ಯಾಕೆ  ? ನೀನೊಬ್ಬಳು  ನನ್ ಎನ್ನುವದಕ್ಕಾಗಿಯೇ ?

ಹೆಲೆನ್:  ಯಾಕೆಂದರೆ ನಾನೊಬ್ಬ ಮನುಷ್ಯ

 

ಇಂತಿ,

ಸಚೇತನ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x