ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಮಾದಕ ವಸ್ತುಗಳು: ಸುವರ್ಣ ಶಿ. ಕಂಬಿ


 

"ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", "ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ.

ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದಾನೆ. ಅನೇಕ ಸಂಶೋಧನೆಗಳನ್ನು ಮಾಡಿದ್ದಾನೆ. ಆದರೆ ಅವುಗಳಲ್ಲಿ ಎಷ್ಟೋ ಸಂಶೋಧನೆಗಳು ಮಾನವನಿಗೇ ವಿರುದ್ಧವಾಗಿವೆ. ಅವನ ಪ್ರಾಣವನ್ನೇ ತೆಗೆಯುತ್ತಿವೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ, ತಾನು ಮಾಡಿದ ತಪ್ಪುಗಳಿಗೆ ತಾನೇ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದು ಕೇವಲ ಒಂದೆರಡು ವಸ್ತುಗಳಿಗೆ ಸಂಬಂಧಿಸಿದ್ದು. ಮುಖ್ಯವಾಗಿ ಮಾದಕ ವಸ್ತುಗಳು ಇಂದಿನ ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಏನೆಂಬುದನ್ನು ತಿಳಿಯೋಣ.

ವಿದ್ಯಾರ್ಥಿಗಳ ಭವಿಷ್ಯವನ್ನು ಮಾದಕ ವಸ್ತುಗಳು ಮಾರಕಗೊಳಿಸುತ್ತಿವೆ. ಅವರ ಬಾಳು ಕತ್ತಲೆಯಾಗುವಂತೆ ಮಾಡುತ್ತಿವೆ. ಹಾಗಾದರೆ ಮಾದಕ ವಸ್ತುಗಳು ಎಂದರೇನು? ಅವು ಯಾವುವು? ಅವುಗಳ ಪರಿಣಾಮ ಏನು? ಎಂಬುದು ಈ ಕೆಳಗಿನಂತಿದೆ:

ಅಮಲೇರಿಸುವ ವಸ್ತು ಅಥವಾ ದ್ರವ್ಯಗಳನ್ನು ಮಾದಕ ವಸ್ತುಗಳೆನ್ನುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಾರ ಮಾದಕ ಪದಾರ್ಥಗಳೆಂದರೆ, "ಔಷಧಿಗಳ ತಯಾರಿಕೆಗಾಗಿ ಉಪಯೋಗಿಸುವ ವಸ್ತುಗಳಾದ ಗಾಂಜಾ, ಚರಸ್, ಭಾಂಗ್ ಭ್ರಮಾಜನಕಗಳು, ನಿದ್ರಾಜನಕಗಳು, ಶಾಮಕಗಳು, ಹೊಗೆಸೊಪ್ಪು, ವೇದನೆ ಶಮನಗೊಳಿಸುವ ವಸ್ತುಗಳಾದ ಅಫೀಮು, ಮಾರ್ಫಿನ್, ಹೆರಾಯಿನ್, ಕೊಕೈನ್ ಮತ್ತು ಮದ್ಯಸಾರ ಮುಂತಾದವುಗಳು." 

ಮಾದಕ ವಸ್ತುಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳೆಂದರೆ:
೧)ಅಫೀಮು, ಕೊಕೈನ್ ಮತ್ತು ಇವುಗಳಿಗೆ ಸಂಬಂಧಿಸಿದ ಇತರ ಪದಾರ್ಥಗಳಾದ ಮಾರ್ಫಿನ್, ಹೆರಾಯಿನ್, ಪೆಥಡಿನ್ ಮುಂತಾದವುಗಳು.
೨)ಸೆಡೆಟಿವ್, ಔಷಧಗಳು, ನಿದ್ರಾಜನಕ ದ್ರವ್ಯಗಳು, ನೋವುನಿವಾರಕಗಳು, ನಿದ್ರಾಗುಳಿಗೆಗಳು, ಬಾರ್ಬಿ ಚುರೆಟ್ಸ್ ಮುಂತಾದವುಗಳು.
೩) ಗಾಂಜಾ, ಚರಸ್, ಭಾಂಗ್, ಹೆಂಪ್ ಪ್ಲ್ಯಾಂಟ್ ಮುಂತಾದವುಗಳು.
ಇವುಗಳನ್ನು ಯಾವುದರಿಂದ ತಯಾರಿಸುತ್ತಾರೆ ಮತ್ತು ಹೇಗೆ ಉಪಯೋಗಿಸುತ್ತಾರೆ ಎಂಬುದು ಈ ಕೆಳಗಿನಂತಿದೆ:

ಅಫೀಮು: ಇದನ್ನು ಪಾಪ್ಹಿ ಎಂಬ ಗಿಡದಿಂದ ಪಡೆಯಲಾಗುತ್ತದೆ. ಇದನ್ನು ನೀರಿನಲ್ಲಿ, ಸಿಗರೇಟಿನಲ್ಲಿ, ತಂಬಾಕಿನಲ್ಲಿ, ಮಾತ್ರೆಯ ರೂಪದಲ್ಲಿ ಸೇವಿಸಬಹುದು. 

ಇದರಿಂದಾಗುವ ಪರಿಣಾಮವೇನೆಂದರೆ:
ವಿಪರೀತ ಸೇವನೆಯಿಂದ ದೇಹ, ಮನಸ್ಸು ಹಾಗೂ ವಿಚಾರ ಶಕ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನಸ್ಸು ಚಂಚಲಗೊಳ್ಳುತ್ತದೆ. ಬುದ್ದಿಶಕ್ತಿ ಕುಂಠಿತಗೊಳ್ಳುತ್ತದೆ.

ಅಫೀಮನ್ನು ಅಧಿಕವಾಗಿ ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡಿನಲ್ಲಿ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ೧೮೦೦೦೦ ದಿಂದ ೨೨೦೦೦೦ ಕೆ.ಜಿ. ಅಫೀಮು ಉತ್ಪಾದನೆಯಾಗುತ್ತದೆ. ೧೨೦೦೦೦ ಜನರು ಇದರ ಉತ್ಪಾದನೆಯಲ್ಲಿ ತೊಡಗಿದ್ದಾರೆ. ೧೯೫೩ ರಲ್ಲಿ ಶಾಸನರಿತ್ಯ ನಿರ್ಬಂಧನೆ ಹೇರಲಾಗಿದೆ. ಆದರೂ ಇದರ ಉತ್ಪಾದನೆ ಮತ್ತು ಬಳಕೆ ಕಡಿಮೆಯಾಗಿಲ್ಲ. ಉತ್ಪಾದಿಸುವವರು ಅಧಿಕ ಲಾಭ ಮಾಡಿಕೊಳ್ಳುತ್ತಾರೆ. ಆದರೆ ಇದನ್ನು ಬಳಸುವ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ನಮ್ಮ ದೇಶಕ್ಕೆ ತುಂಬಲಾಗದ ನಷ್ಟವಾಗುತ್ತಿದೆ. ಇದನ್ನು ತಡೆಯುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. 

ಕೊಕೈನ್: ಕೋಕಾ ಎಲೆಗಳಿಂದ ತಯಾರು ಮಾಡಲಾಗುತ್ತದೆ. ಇದನ್ನು ಚುಚ್ಚುಮದ್ದಿನ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಇದು ಸಹ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವ ಮಾದಕ ವಸ್ತುವಾಗಿದೆ. 

ಗಾಂಜಾ: ಹೆಂಪ್ ಪ್ಲ್ಯಾಂಟಿನ ಹೂವಿನ ಮುಂಭಾಗದಿಂದ ತಯಾರು ಮಾಡುತ್ತಾರೆ. ಇದನ್ನು ಬೀಡಿ-ಸಿಗರೇಟನೊಂದಿಗೆ ಮತ್ತು ಚಿಲುಮೆಗಳ ಮೂಲಕ ಸೇವಿಸಲಾಗುತ್ತದೆ. ಇದರ ಸೇವನೆಯಿಂದ ರಕ್ತದ ಒತ್ತಡ ಹೆಚ್ಚುತ್ತದೆ. ವ್ಯಕ್ತಿ ಮನೋನಿಗ್ರಹ ಕಳೆದುಕೊಳ್ಳುತ್ತಾನೆ. ರೋಗ-ರುಜಿನಗಳ ಆಗರವಾಗಿ ಹೃದಯ, ಯಕೃತ್ತು, ಜೀರ್ಣಾಂಗ ಮತ್ತು ಜ್ಞಾನೇಂದ್ರಿಯಗಳು ದುರ್ಬಲವಾಗುತ್ತವೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ. 

ಒಟ್ಟಿನಲ್ಲಿ ಈ ಮಾದಕ ಪದಾರ್ಥಗಳ ಪರಿಣಾಮಗಳೆಂದರೆ:
ವಿದ್ಯಾರ್ಥಿಗಳು ಧೈರ್ಯ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ವಿನಾಕಾರಣ ಜನರನ್ನು ದೂಷಿಸುವುದು, ಆಡಿದ ಮಾತನ್ನೇ ಆಡುವುದು, ಯಾವಾಗಲೂ ಗುಂಗಿನಲ್ಲಿಯೇ ಇರುವುದು, ಕೆಲಸದ ಬಗ್ಗೆ ನಿರುತ್ಸಾಹ, ಅತಿಯಾದ ಸೇವನೆಯಿಂದ ಯುವಕರು ನಪುಂಸಕರಾಗುವ ಮತ್ತು ವಾಸಿಯಾಗದ ರೋಗಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಡ್ರಗ್ ಅಡಿಕ್ಷನ್ ಒಂದು ಜಾಡ್ಯವಾಗಿದೆ. ಇದರಿಂದ ಯುವಜನಾಂಗ ಹಾದಿ ತಪ್ಪಿ ಸೂತ್ರವಿಲ್ಲದ ಗಾಳಿಪಟದಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ ಬದುಕಿನಲ್ಲಿ ಏರುಪೇರುಗಳನ್ನೇ ಕಾಣುತ್ತಿದೆ. ಭಂಗಿಯನ್ನು ಪಾನೀಯವೆಂದು ಬಳಸಲಾಗುತ್ತದೆ ಮತ್ತು ಸೇದುತ್ತಾರೆ. ಹೆರಾಯಿನ್, ಹಶೀಶನಂತಹ ಆಲಸ್ಯ ಹೆಚ್ಚಿಸುವ, ಭ್ರಮೆ ಹುಟ್ಟಿಸುವ, ಮನದಲ್ಲಿ ಮಿಥ್ಯ ಭಾವನೆಗಳನ್ನು ಹುಟ್ಟಿಸಿ ಯುವಕರಲ್ಲಿ ದಾಸ್ಯತನ ಬೆಳೆಸಿದೆ. ಹಶೀಶ ಮತ್ತು ಕೆನಬಿಸ್ ಒಂದೇ ಗಿಡದ ಭಾಗಗಳು. ಕೆನಾಬಿಸ್ ಸೇದಿದ ೩೦ ನಿಮಿಷಗಳಲ್ಲೇ ತನ್ನ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಸ್ಮರಣ ಶಕ್ತಿಯನ್ನು ಕುಗ್ಗಿಸಿ ಮೆದುಳನ್ನೇ ಸಂಪೂರ್ಣವಾಗಿ ನಿಸ್ತೇಜಗೊಳಿಸುತ್ತದೆ. ಎಲ್ ಸಿಡಿ ಯನ್ನು ಸೇವಿಸಿದವನು ಬುದ್ದಿಭ್ರಮಣಿಯಾದಂತೆ ವರ್ತಿಸುತ್ತಾನೆ. 

 ವಿದ್ಯಾರ್ಥಿಗಳು ತಿಳಿದೋ ಅಥವಾ ತಿಳಿಯದೆಯೋ ಈ ಮಾದಕ ಪದಾರ್ಥಗಳ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಮೊದಲು ಸರ್ಕಾರ ಕಠಿಣ ಕಾನೂನು ಕ್ರಮಗಳ ಮೂಲಕ ಮಾದಕ ಪದಾರ್ಥಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ನಂತರ ಈಗಾಗಲೇ ಮಾದಕ ವಸ್ತುಗಳಿಗೆ ಬಲಿಯಾಗಿರುವ ವಿದ್ಯಾರ್ಥಿಗಳನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ಅವರ ಭವಿಷ್ಯದ ಬಗ್ಗೆ ಅವರಲ್ಲಿ ಆಶಾಕಿರಣವನ್ನು ಮೂಡಿಸಬೇಕು. ನಮ್ಮ ದೇಶದ ಆಸ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲರೂ ಪ್ರಯತ್ನಿಸಬೇಕು.
-ಸುವರ್ಣ ಶಿ. ಕಂಬಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x