Facebook

ಸುಸಂಸ್ಕೃತ ಪರಂಪರೆ ನೆನಪಿಸಿದ ’ಹೇಮರೆಡ್ಡಿ ಮಲ್ಲಮ್ಮ’ : ಹಿಪ್ಪರಗಿ ಸಿದ್ಧರಾಮ

ಕನ್ನಡದ ಬರಹಗಳನ್ನು ಹಂಚಿ ಹರಡಿ


ಇತ್ತೀಚೆಗೆ (೧೭-೦೯-೨೦೧೪) ಧಾರವಾಡದಲ್ಲಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ನಾಲ್ಕನೇಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳ ’ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನು ಪ್ರದರ್ಶನ ನಡೆಯಿತು. ಕಳೆದ ಶತಮಾನದಲ್ಲಿ (೧೯೩೭) ಆರಂಭಗೊಂಡ ಪುರುಷ ಕಲಾವಿದರು (ಮಹಿಳಾ ಕಲಾವಿದರಿಲ್ಲದ) ಮಾತ್ರ ಇರುವ ವಿಶ್ವದ ಏಕೈಕ ವೃತ್ತಿ ನಾಟಕ ಕಂಪನಿಯೆಂದು ಹೆಸರಾಗಿರುವ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ಗತಕಾಲದ ರಂಗವೈಭವ ನೆನಪಿಸುವಂತೆ ಅಭಿನಯಿಸಿದರು. ಆಧುನಿಕ ಕಾಲದ ಹಲವಾರು ಮಾಧ್ಯಮಗಳ ಎದುರು ನಾಟಕ ಕಂಪೆನಿಗಳು ನೇಪಥ್ಯಕ್ಕೆ ಸರಿದು ಇತಿಹಾಸವಾಗಿರುವ ಸಂದರ್ಭದಲ್ಲಿ ಮಹಿಳಾ ಕಲಾವಿದರು ಇಲ್ಲದ ಈ ನಾಟಕ ಕಂಪನಿ ದೇಶದ ವಿವಿದೆಡೆಗಳಲ್ಲಿ ಕ್ಯಾಂಪು-ಪ್ರದರ್ಶನ ಎಂದು ಇಂದಿಗೂ ಕ್ರೀಯಾಶೀಲವಾಗಿರುವುದು ಈ ಕಾಲದ ವಿಸ್ಮಯವೇ ಸರಿ! 

ಕರುನಾಡಿನ ಸಾಮಾಜಿಕ-ಸಮಾನತೆಯ ಭಕ್ತಿ ಚಳುವಳಿಯ ಹನ್ನೆರಡನೇಯ ಶತಮಾನದ ಶಿವಶರಣರು ತಮ್ಮ ಆದರ್ಶ, ಸಾತ್ವಿಕ ಗುಣಗಳಿಂದ ಇಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ. ಶರಣರ ಇಂತಹ ಅನುಕರಣೀಯ ಆದರ್ಶ ಪಥದಲ್ಲಿ ಮಹಾಜ್ಯೋತಿಯಾಗಿ ಹದಿನಾಲ್ಕನೇ ಶತಮಾನದಲ್ಲಿ ಪ್ರಜ್ವಲಿಸಿದ ಮಹಾಸಾದ್ವಿ ಮಲ್ಲಮ್ಮ ತನ್ನ ದೈವಭಕ್ತಿ, ಕಾಯಕನಿಷ್ಠೆ, ದಾನಧರ್ಮದಿಂದ ಪ್ರಸಿದ್ಧಿ ಪಡೆದ ಸ್ತ್ರೀರತ್ನ. ಸುಖ-ದುಖ, ಶಾಂತಿ-ಸಹನೆ, ಅಂಬಲಿ-ಅಮೃತ, ಸ್ತುತಿ-ನಿಂದೆ ಹೀಗೆ ಜೀವನದಲ್ಲಿ ಬರುವ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದಾಕೆ. ತನ್ನ ಭಕ್ತಿಯ ಪುಣ್ಯಮಾರ್ಗದಿಂದ ಶ್ರೀಶೈಲದ ಅಧಿದೈವ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಮಲ್ಲಮ್ಮನ ಬದುಕು ಇಂದಿಗೂ ಅನುಕರಣೀಯ ಮತ್ತು ಸ್ಪೂರ್ತಿ ಎಂಬುದು ನಿಜದ ಮಾತು. ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದಾಕೆ. 

ಇತಿಹಾಸದ ದಾಖಲೆಗಳ ಪ್ರಕಾರ ಇಂದಿನ ತೆಲುಗು ನಾಡಿನಲ್ಲಿರುವ ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಾಪುರದ ರೆಡ್ಡಿ ಮನೆತನದ ನಾಗರೆಡ್ಡಿ-ಗೌರಮ್ಮ ದಂಪತಿಗಳಿಗೆ ಜನಿಸುವ ಮಲ್ಲಮ್ಮ ಸಂಸ್ಕಾರವಂತಳಾಗಿ ಬೆಳೆದು ನಿಂತಾಗ ರೆಡ್ಡಿ ಅರಸರ ೫ನೇಯ ಅರಸ ಸಿದ್ಧಾಪುರದ ಕುಮಾರಗಿರಿ ವೇಮರೆಡ್ಡಿಯ ಪುತ್ರ ಮುಗ್ದ-ಹುಚ್ಚನಂತಿರುವ ಭರಮರೆಡ್ಡಿಯೊಂದಿಗೆ ಮದುವೆಯಾಗುತ್ತದೆ. ಪಾಲಿಗೆ ಬಂದಿದ್ದು ಪಂಚಾಮೃತವೆಂದು ಪತಿಯಲ್ಲಿ ದೇವರನ್ನು ಕಾಣುತ್ತಾಳೆ. ವಿಷಯಲಂಪಟ ಮೈದುನ ವೇಮನನ್ನು ಮಗನಂತೆ ಕಂಡು, ಸ್ವಭಾವ ತಿದ್ದಿ ಮುಂದೆ ಯೋಗಿಯಾಗಿ ತೆಲುಗು ಸಾಹಿತ್ಯದಲ್ಲಿ ಅಜರಾಮರನಾಗುವಂತೆ ಮಾಡುತ್ತಾಳೆ. ಇಂತಹ ಕೆಲಸಗಳಿಂದ ಪ್ರಸಿದ್ಧಳಾಗುವ ಮಲ್ಲಮ್ಮನಿಗೆ ಅನೇಕರು ಅಪವಾದ-ಕಷ್ಟಗಳಿಗೆ ನೂಕಿದರೂ ಪಾರಾಗಿ ಮಲ್ಲಿಕಾರ್ಜುನನ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ತನ್ನ ಕೊನೆಗಾಲದಲ್ಲಿ ತನ್ನ ಬಂಧು-ಬಳಗಕ್ಕೆ ಎಂದೆಂದಿಗೂ ಬಡತನ ಬಾರದಿರಲೆಂಬ ವರ ಪಡೆದು ಸದ್ಗತಿ ಹೊಂದುವ, ಪರಹಿತಕ್ಕಾಗಿ ಹಂಬಲಿಸಿದ ವಿಶಾಲ ಹೃದಯೀ ಹೇಮರೆಡ್ಡಿ ಮಲ್ಲಮ್ಮ. ಶಿವಶರಣೆಯಾಗಿ ಬಾಳಿ, ಆದರ್ಶ ಬದುಕನ್ನು ತೋರಿದ ಹೇಮರೆಡ್ಡಿ ಮಲ್ಲಮ್ಮ ಶರಣರಂತೆ ಯಾವುದೇ ವಚನಗಳನ್ನು ರಚಿಸಿಲ್ಲದಿದ್ದರೂ ಅವಳ ಬದುಕು ಬೃಹತ್ ವಚನಸಂಪುಟವಾಗಿದೆ. 

ಇಂತಹ ಕಥಾನಕದ ನಾಟಕವು ರಂಗದಲ್ಲಿ ನವವಧು ಮಲ್ಲಮ್ಮನನ್ನು ಮನೆತುಂಬಿಸಿಕೊಳ್ಳುವ ಕಾರ್ಯಕ್ರಮದೊಂದಿಗೆ ಶುರುವಾಗುತ್ತದೆ. ಸೋಬಾನೆ ಪದಗಳು, ಒಡಪು ಹೇಳಿ ಗಂಡನ ಹೆಸರು ಹೇಳುವ ಪ್ರಸಂಗಗಳು ನಗೆಯುಕ್ಕಿಸಿದವು. ಇಂದಿನ ಟಿಆರ್‌ಪಿ ಕೇಂದ್ರಿತ ಟಿವಿ ಧಾರಾವಾಹಿಗಳನ್ನು ನೆನಪಿಸುವಂತೆ ಕೆಲವು ದೃಶ್ಯಗಳಲ್ಲಿ ಮುಗ್ದ ಸ್ವಭಾವದ ಮಲ್ಲಮ್ಮ ಗಂಡನ ಮನೆಯಲ್ಲಿ ಅತ್ತೆ-ನೆಗೆಣ್ಣಿಯರು ಕೊಡುವ ವಿಪರೀತ ಕಿರುಕುಳವನ್ನು ಮೌನಗೌರಿಯಂತೆ ಅನುಭವಿಸುವುದು ಶೋಷಿತ ಹೆಣ್ಣಿನ ಮಾದರಿಯಂತೆ ಭಾಸವಾಯಿತು. ಗಂಡನನ್ನು ಎತ್ತಿ ಕಟ್ಟುವುದು, ಶೀಲದ ಮೇಲೆ ಶಂಕೆ ಪಡುವುದು, ಮನೆಯಿಂದ ಹೊರದಬ್ಬುವುದು, ವಿಪರೀತ ಕೆಲಸ ಮಾಡಿಸುವುದು ಮೊದಲಾದ ಸಂಗತಿಗಳು ಹೆಣ್ಣಿನ ವ್ಯಕ್ತಿತ್ವದ ಕುರಿತ ಸಾಂಪ್ರದಾಯಿಕ ಕಟ್ಟುಪಾಡುಗಳು ಇಂದಿಗೂ ಜೀವಂತವಾಗಿರುವುದನ್ನು ತೋರಿಸಿಕೊಡುತ್ತಲೇ ಸುಖಾಂತ್ಯ ಕಾಣುವ ಎವರ್‌ಗ್ರೀನ್ ಕಥಾನಕದ ಈ ನಾಟಕ ಪ್ರಯೋಗ ಪ್ರೇಕ್ಷಕರನ್ನು ತಲುಪಿತು. ಆದರೆ ಮದ್ಯದಲ್ಲಿ ಬರುವ ನೃತ್ಯದ ಸನ್ನಿವೇಶದಲ್ಲಿ ’ಹೌಳಾ…ಹೌಳಾ…’ ಆಪ್ತಮಿತ್ರ ಸಿನೇಮಾ ಹಾಡಿನ ಟ್ರ್ಯಾಕಿಗೆ ನರ್ತನ ಮಾಡಿಸಿದ್ದು ಸಂಪೂರ್ಣ ಪ್ರಯೋಗಕ್ಕೆ ಕಪ್ಪುಚುಕ್ಕೆಯಂತೆ ಕಂಡು ಬಂದ ಅಭಾಸಕಾರಿ ಅಂಶ !

ಪರಮೇಶ ಪಾಳಾರವರ ತಬಲಾ ಮತ್ತು ಸಿದ್ಧಪ್ಪ ಮಾಸ್ತರ ಗುಳ್ಳೆಯವರ ಮನಸೂರೆಗೊಳ್ಳುವ ಹಾರ್ಮೋನಿಯಮ್/ಕೀಬೋರ್ಡ್ ರಂಗ ಸಂಗೀತದ ಜೊತೆಗೆ ರಂಗಪರಿಕರಗಳ ಮಿತಬಳಕೆ, ಸರಳ ವೇಷಭೂಷಣ ಮತ್ತು ಬೀಸುವ ಕಲ್ಲು ತಾನಾಗಿಯೇ ಬೀಸಿದಂತೆ ತೋರಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮಹಾದೇವ ಹೊಸೂರ (ಮಲ್ಲಮ್ಮ), ಬಾಬು ಸಾಲಹಳ್ಳಿ (ನಾಗಮ್ಮ), ವಿಜಯ ಕರಡಿಗುಡ್ಡ(ಮಹಾದೇವಿ), ಮಹೇಶ ಕೊಪ್ಪಳ (ಅತ್ತೆ), ರೇವಣಸಿದ್ದಯ್ಯ ಶ್ರೀಧರಗುಡ್ಡೆ (ಮಾವ), ಶಿವಪುತ್ರಯ್ಯ ಅಣ್ಣೀಗೇರಿ (ಭರಮರೆಡ್ಡಿ), ಗುರಯ್ಯ ಸಂಕನೂರು (ಮಲ್ಲಿನಾಥ), ನೂರುದ್ದೀನ್ ಮಂಗಳೂರು (ವೇಮಣ್ಣ), ಸೋಮು ಜಮಖಂಡಿ (ಸಖಿ), ಕುಮಾರ ಕೂಡಲಗಿ (ನೃತ್ಯಗಾತಿ), ಬೇಲೇರಿ ಬಸಣ್ಣ (ಧ್ವನಿ) ಮುಂತಾದ ಕಲಾವಿದರು ಅಭಿನಯಿಸಿದರು. ವಿರೂಪಾಕ್ಷಯ್ಯ ಬೆನಹಾಳ ತಂಡದ ನಿರ್ವಹಣೆ ಮಾಡಿದರು. ಇಂತಹ ಪ್ರಯೋಗಗಳು ನಿರಂತರ ಮತ್ತೆ ಮತ್ತೆ ರಂಗದಲ್ಲಿ ಪ್ರಯೋಗವಾಗುವುದರೊಂದಿಗೆ ರಂಗಪರಂಪರೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಉತ್ತಮವಾಗಲು ಕಾರಣವಾಗುವುದರಲ್ಲಿ ಸಂಶಯದ ಮಾತಿಲ್ಲ. ಕರುನಾಡಿನ ಮಹಿಮಾಪುರುಷರ ಕನಸಿನ ಕೂಸಾದ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ತಮ್ಮ ಇಡೀ ಜೀವಮಾನವನ್ನು ಇಂತಹ ಅಪರೂಪದ ಕ್ಲಾಸಿಕ್ ನಾಟಕಗಳನ್ನು ಹೆಚ್ಚು ಹೆಚ್ಚಾಗಿ ಪ್ರದರ್ಶಿಸಲಿ ಮತ್ತು ಈ ಕಂಪನಿ ನೂರುಕಾಲ ಕಲಾಸೇವೆಯಲ್ಲಿ ಇರಲಿ ಎಂಬುದು ಎಲ್ಲಾ ರಂಗಾಸಕ್ತರ ಮನದಾಳದ ಆಶಯ ಮತ್ತು ಹಾರೈಕೆ.

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply