ಭಾವಗಳ ಮೂಟೆ ಕಟ್ಟೋ ಹಾಗಿದ್ರೆ: ಪ್ರಶಸ್ತಿ

ಈ ಗಣಕ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಕೆಲೋ ಸಲ ಅಂದ್ರೆ ಅದನ್ನ ಬರಿ ಮಾತಲ್ಲಿ ಹೇಳೋಕಾಗದಷ್ಟು. ಯಾಕಂತೀರಾ ?  ಸದ್ಯಕ್ಕೆ ಸಮಯವಿಲ್ಲದಿದ್ದರೂ ಮುಂದೆಂದಾದರೂ ಬೇಕಾಗುವುದೆಂಬ ನಮಗಿಷ್ಟದ ಅದೆಷ್ಟೋ ಜೀ.ಬಿಗಟ್ಲೆ ಹಾಡುಗಳನ್ನು, ಸಿನಿಮಾಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ನೋಡಬಹುದಾದ ವ್ಯವಸ್ಥೆಯಿದೆಯೆಲ್ಲ ಅದೇ ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡೋದು ನಂಗೆ ಅಂದ್ರೆ ಕೆಲವರಿಗೆ ಅಷ್ಟೇನಾ ಅನಿಸಬಹುದು. ಕೆಲವರಿಗೆ  ತಮಾಷೆಯೆನಿಸಬಹುದು . ಕೆಲವರಿಗೆ ವಿಡಂಬನೆಯಂತೂ ಭಾಸವಾಗಬಹುದು. ನಮ್ಮ ಮನಸ್ಸಿನಲ್ಲಿರೋ.. ವೈಜ್ನಾನಿಕವಾಗಿ ಹೇಳೋದಾದ್ರೆ ಮೆದುಳಿನಲ್ಲಿರೋ ಮಾಹಿತಿಯ ವಾಹಕವಾಗಿ ಸಂಗ್ರಾಹಕವಾಗಿ ಕೆಲಸ ಮಾಡೋ ನ್ಯೂರಾನುಗಳಲ್ಲಿ ಸಂಗ್ರಹಿತವಾಗೋ ಭಾವಗಳನ್ನ ಹಾಗೇ ಸಂಗ್ರಹವಾಗಿಟ್ಟು ನಮಗೆ ಬಿಡುವಾದಾಗ 

ಹೊರತೆಗೆದು ಆನಂದಿಸುವ ವ್ಯವಸ್ಥೆಯಿದ್ದಿದ್ದರೆ ? ಕವನಕ್ಕೆ ಸ್ಪೂರ್ತಿಯಾಗೋ ಭಾವ ಧುಮ್ಮುಕ್ಕುತ್ತಿದೆ. ಆದ್ರೆ ಕೈಯಲ್ಲಿ ಪೆನ್ನು ಪೇಪರ್ಗಳಿಲ್ಲ, ಮೊಬೈಲೂ ಇಲ್ಲ. ಬೇರೇನೂ ಅರ್ಜೆಂಟ್ ಕೆಲಸದ ಮಧ್ಯ ಬೇರೆ ಇದ್ದೇನೆ. ಹಾಗಾಗಿ ಈ ಕಾವ್ಯ ಸ್ಪೂರ್ತಿಯ ಭಾವವ ಹಂಗೇ ಮುಚ್ಚಿಟ್ಟು ಸಂಜೆ ಬಿಡುವಾದಾಗ ತೆಗೆದು ಅದರಿಂದ ಒಂದು ಸುಂದರ ಕಾವ್ಯ ರಚಿಸುವಂತಿದ್ರೆ . ? ವಿಚಿತ್ರವೆನಿಸಬಹುದು  ಕಲ್ಪನೆ. ಒಂದೊಮ್ಮೆ ಹಾಗೇನಾದ್ರೂ ಇದ್ದಿದ್ರೆ ಅನ್ನೋ ಕಲ್ಪನೆಯೇ ಈ ಲೇಖನ..

ಮನಮನಗಳ ನಡುವೆ ಗೋಡೆ ಕಟ್ಟೋಕೆ ಕಾರಣವಾಗುವಂತೆ , ದೇಶ ಭಾವಗಳ ದಳ್ಳುರಿಯನ್ನು ಅಳಿಸುವಷ್ಟು ಪ್ರಬಲ ಶಕ್ತಿಯೂ ಇದೆ ಭಾವಗಳಿಗೆ. ಎನೋ ರೋಷಕ್ಕೆ ಸಿಕ್ಕಿ ಹಾಗಂದೆ ಕಣೋ. ಅದೇ ಮಾತನ್ನು ಸ್ವಲ್ಪ ತಡೆದಿದ್ರೆ ನಮ್ಮಿಬ್ಬರ ನಡುವಿನ ವರ್ಷಗಳ ಗೆಳೆತನ ಇನ್ನಷ್ಟು ವರ್ಷ ಮುಂದುವರಿತಿತ್ತೇನೋ ಅಂತ ಕ್ಷುಲಕ ಕಾರಣಕ್ಕೆ ಜಗಳವಾಡಿ ದೂರಾದ ಗೆಳೆಯರ ಬಾಯಲ್ಲಿ ಕೇಳ್ತಿರುತ್ತೇವೆ. ರೋಷಕ್ಕೆ ನಾಲಿಗೆಯನ್ನೋ, ಕೈಯನ್ನೋ ಕೊಡೋ ಮೊದ್ಲು ಆ ಭಾವವ ಸ್ವಲ್ಪ ತಡೆದು ನಂತರ ನಾವೊಬ್ಬರೇ ಇದ್ದಾಗ ಆತ್ಮಾವಲೋಕನದಂತೆ ಆ ಭಾವವ ತೆರೆದು ನಾವು ಮಾಡಹೊರಟದ್ದು ಸರಿಯಿತ್ತೆ ಅಂತ ಶಾಂತ ಮನದಿಂದ ಆಲೋಚಿಸೋ ಹಾಗಿದ್ರೆ .. ಸೂಪರಲಾ . ಅದೆಷ್ಟು ಜಗಳಗಳು ಉಳೀತಿತ್ತು ? ! ಊರಲ್ಲಿರೋ ತಾಯಿಯ ಒಂಟಿ ಭಾವವನ್ನು ಮಗನಿಗೂ , ಪೇಟೆಯಲ್ಲಿರಲಾಗದ ಊರಿಗೆ ಮರಳಲಾಗದ ಮಗನ ಅಸಹಾಯಕತೆಯನ್ನು ತಂದೆಗೂ ಮೂಟೆ ಕಟ್ಟಿ ದಾಟಿಸುವಂತಿದ್ರೆ ಹೆಂಗಿರ್ತಿತ್ತು ? !

ಅವನು ಹಂಗಂದ, ಇವನು ಹಿಂಗಂದ . ನಮ್ಮ ಬಗ್ಗೆ ಹಂಗನ್ನೋಕೆ ಅವನಿಗೆಷ್ಟು ಧೈರ್ಯ ? ನಮ್ಮ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡುವ ಹಕ್ಕು ಅವನಿಗಿದ್ಯಾ ಅಂತು ಅದೆಷ್ಟು ಬೇಗ ಕ್ಷುದ್ರರಾಗೋ ನಾವು ಆ ಭಾವಗಳ ಹತ್ತಿಕ್ಕೋ ಸಾಧ್ಯತೆಯಿದ್ದಿದ್ರೆ ? ಥೂ ಈ ಜೀವನದಲ್ಲಿ ಏನೂ ಇಲ್ಲ. ಎಲ್ಲೆಡೆ ಅನಿಷ್ಟಗಳೇ ಅಂತ ಜೀವನದಲ್ಲೇ ಜುಗುಪ್ಸೆಯ ಭಾವ ಮೂಡಿಬಿಟ್ಟಿರುತ್ತೆ ಕೆಲವರಿಗೆ. ಜೀವನವನ್ನೇ ನಾಶ ಮಾಡಿಕೊಳ್ಳೋಕೆ ಮುಂದಾಗಿರೋ ಅವರಿಗೆ ಆ ಭಾವವ ಕೆಲ ನಿಮಿಷಗಳಷ್ಟಾದರೂ ಮುಂದೆ ಹಾಕೋಕೆ ಸಾಧ್ಯವಿದ್ದರೆ ಅದೆಷ್ಟೋ ಜೀವಗಳು ಉಳಿದು ಬಿಡುತ್ತೆ. ಈ ಟ್ರಾಫಿಕ್ಕು, ಟೆನ್ಷನ್ನುಗಳ ಮಧ್ಯೆ ನಮ್ಮನ್ನೇ ಸುಟ್ಟುಕೊಳ್ಳೋ ಮೊದಲು ಎಂದೋ ಸುತ್ತಿಟ್ಟ ಕಾವ್ಯರಚನೆಯ ಭಾವವನ್ನೋ , ಹಾಸ್ಯಚಟಾಕಿಯ ನಗೆಯನ್ನೋ ಬಿಚ್ಚಿ ಅದರಲ್ಲಿ ತೊಡಗಿಕೊಳ್ಳುವಂತಿದ್ರೆ ? ಎಕ್ಸಾಂಗಳ ಮೇಲೆ ಎಕ್ಸಾಂಗಳು ಬಂದು ಈ ಓದೂ ಸಾಕು, ಈ ಎಕ್ಸಾಮೂ ಸಾಕಂತ ಬೇಸರ ಹತ್ತಿಬಿಡುವಾಗ ಆ ಭಾವವ ಅಲ್ಲೇ ಸುತ್ತಿಟ್ಟು ಮತ್ತೆ ಮುಂದಿನ ಎಕ್ಸಾಮಿಗೆ ಓದೋ ಭಾವ ನಿಗ್ರಹ ಸಾಧ್ಯವಾಗೋದಿದ್ರೆ .. ಆಹ್. .ಅದೆಷ್ಟು ಚೆನ್ನ ಅಂದ್ರಾ ? ಈ ಹುಚ್ಚುಚ್ಚು ನಾಯಕರ ಪ್ರಚೋದನಾಕಾರಿ ಭಾಷಣ ಕೇಳಿ ಮನೆಗಳಿಗೆ ಬೆಂಕಿ ಇಡುವ, ಟೈರು ಸುಡುವವರಲ್ಲೂ ಈ ಭಾವಗಲ ಮುಂದು ಹಾಕುವಿಕೆ , ಅವಲೋಕನ ಸಾಧ್ಯವಾಗುವಂತಿದ್ದರೆ ಅದೆಷ್ಟು ಶಾಂತಿ ನೆಲೆಸೀತೋ , ಕ್ಷುಲಕ ಕಾರಣಕ್ಕೂ  ಪ್ರತಿಭಟನೆ ಅಂತ ಮಾಡಿ ಜನರ ಭಾವನೆಗಳ ಕೆದಕೋ ಪೂರ್ವಾಗ್ರಹ ಪೀಡಿತರ ದುರಾಲೋಚನೆ, ಸ್ವಾರ್ಥಪರತೆಗಳಿಗೂ ಒಂದು ಕಡಿವಾಣ ಬಿದ್ದೀತು.

ಆದ್ರೆ ಭಾವಗಳಿಲ್ಲದ ಮಾನವ ಓಡಾಡೋ ಹೆಣ ಅಂತ ಕೆಲ ಜನರ ಭಾವ. ಭಾವ ನಿರ್ಲಿಪ್ತತೆ ಅನ್ನೋದು ಒಂದು ಶಕ್ತಿ ಅನ್ನೋದಕ್ಕಿಂತಲೂ ಒಂದು ದೌರ್ಬಲ್ಯದಂತೆಯೂ, ಹೇಡಿತನದಂತೆಯೂ ಕಾಣಬಹುದು ಕೆಲವರಿಗೆ. ನಗೋ ಸಮಯದಲ್ಲಿ ಸಗದೇ, ಅಳೋ ಸಂದರ್ಭದಲ್ಲಿ ಅಳದೇ ಇನ್ಯಾವಾಗಾದರೂ ಹಿಂದಿನದನ್ನು ನೆನೆಸಿ ಒಬ್ಬೊಬ್ಬನೇ ನಗುವ/ಅಳುವನನ್ನು ಮಾನಸಿಕ ಅಸ್ವಸ್ಥ ಅಂತಲೂ ಕರೆಯಬಹುದು ಕೆಲವರು. ಇಂದಿನ ಭಾವವ ನಾಳೆಗೆ ಮೂಟೆ ಕಟ್ಟೋಕಾಯ್ತು ಅಂತ್ಲೇ ಇಟ್ಟುಕೊಳ್ಳೋಣ. ನಾಳೆಯ ಹೊಸ ಭಾವಗಳ ಜೊತೆ ಈ ಹಳಸಲು ಭಾವವ ತೆರೆಯಲು ಮನಸ್ಸೊಪ್ಪೀತಾ ? 

ಒಮ್ಮೆ ಒಪ್ಪಿತೆಂದರೂ ಇಂದಿನ ಭಾವ, ನಾಳೆಗೆ ಪ್ರಸ್ತುತವೆನಿಸಿತಾ ? ಇವತ್ತಿನ ಸ್ಪೂರ್ತಿ ಅನ್ನೋದು ನಾಳೆಗೂ ಸ್ಪೂರ್ತಿಯಾಗೇ ಉಳಿದೀತಾ ಅನ್ನೋದೊಂದು ಪ್ರಶ್ನೆ. ನಗುವನ್ನು ನಗಲಾಗದ, ಅಳುವನ್ನು ಅಳಲಾಗದ , ಕಷ್ಟವನ್ನು ಕಷ್ಟವೆಂದು ಒಪ್ಪಲೂ ಆಗದ ಜೀವವೊಂದು ಜೀವವೇ ಅನ್ನೋದು ಮತ್ತೊಂದು ಮೂಲಭೂತ ಪ್ರಶ್ನೆ ! ಇವುಗಳಿಗೆ ಒಬ್ಬೊಬ್ಬರ ಉತ್ತರ ಒಂದೊಂದು ತೆರನಾಗಿರಬಹುದಾದ್ದರಿಂದ ಉತ್ತರದ ಆಯ್ಕೆಯನ್ನು ನಿಮಗೇ ಬಿಡುತ್ತೇನೆ.. ಮನಸು-ಕನಸುಗಳ ನಡುವೆ. ನಿನ್ನೆ-ನಾಳೆಗಳ ನಡುವೆ , ನೆನಪು-ಗುರಿಗಳ ನಡುವಿನ ಮಾತಿನ ಹೊಂದಾಣಿಕೆಯೇ ಜೀವನವೆಂಬ ಭಾವಗಳೊಂದಿಗೆ ಸದ್ಯಕ್ಕೊಂದು ವಿರಾಮ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಹೈಟೆಕ್ ಬದುಕಿನ ಶಿಷ್ಟಾಚಾರಗಳು ಗಟ್ಟಿಯಾಗಿ ನಗದಂತೆ
ಕಟ್ಟಿಹಾಕುತ್ತವೆ. ಹಾಗೆ ಯಾವುದೋ ಸಿಹಿಘಟನೆ ನೆನಪಾಗಿ
ನಕ್ಕರೆ, ಹುಚ್ಚನ ಪಟ್ಟ ಕಟ್ಟುವ ಸಮಾಜದಲ್ಲಿ, ಭಾವನೆಗಳ
ಬುಟ್ಟಿ ಕಟ್ಟಲು ಬಂದ್ದಿದ್ದರೇ??? ಚೆನ್ನಾಗಿರುತಿತ್ತು.

1
0
Would love your thoughts, please comment.x
()
x