ಮನುಕುಲದ ಅವಸಾನ ಹತ್ತಿರವಾಗುತ್ತಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ


ಭೂಮಿಯ ಮೇಲೆ ಒಂದು ತರಹದ ವೈರಸ್ ಸೃಷ್ಟಿಯಾಗಿದೆ. ಈ ವೈರಸ್‌ಗಳು ಮನುಷ್ಯನ ದೇಹವನ್ನು ಹೊಕ್ಕು ಅವಾಂತರ ಮಾಡಿ ಕ್ರಮೇಣ ಸಾಯಿಸುತ್ತವೆ. ಸತ್ತ ಹೆಣಗಳು ಮತ್ತೆ ಎದ್ದು ಕೂತು ದೆವ್ವಗಳಾಗಿ ಪರಿವರ್ತನೆ ಹೊಂದಿ ಉಳಿದ ಮನುಷ್ಯರನ್ನು ಕಾಡುತ್ತವೆ. ಈ ತರಹದ ಕಥಾವಸ್ತುವನ್ನು ಹರವಿಕೊಂಡು ನಿರ್ಮಿಸಲಾದ ಅಮೇರಿಕಾದ ಒಂದು ಪ್ರಸಿದ್ಧ ಧಾರಾವಾಹಿಯ ಹೆಸರು ದಿ ವಾಕಿಂಗ್ ಡೆಡ್. ಈ ಧಾರಾವಾಹಿಯು ಅತ್ಯಂತ ಪ್ರಸಿದ್ಧಿಯನ್ನು ಪಡೆದು ದಾಖಲೆ ನಿರ್ಮಿಸಿದೆ. ಕಾಲ್ಪನಿಕವಾಗಿ ಸೃಷ್ಟಿಸಲಾದ ಈ ಘಟನೆಗಳು ನಿಜವಾಗಲೂ ನಡೆಯುತ್ತವೆಯೇ? ಮನುಕುಲದ ಅವಸಾನ ಸನಿಹವಾಗುತ್ತಿದೆಯೇ? ಹೌದು ಎಂದು ಹೇಳುತ್ತಾರೆ ತಜ್ಞರು. ಆದರೆ ಕಾರಣಗಳ ಸ್ವರೂಪ ಮಾತ್ರ ಭಿನ್ನ. ಜಗತ್ತಿನ ಹೆಚ್ಚಿನ ಪರಿಸರವಾದಿಗಳು, ಹವಾಮಾನ ತಜ್ಞರು, ಭೌಗೋಳಿಕ ವಿಜ್ಞಾನಿಗಳ ಪ್ರಕಾರ ನಾವು ಈಗಿಂದಿಗಲೇ ಇಂಗಾಲಾಮ್ಲವೆಂಬ ವಿಷವನ್ನು ಕಕ್ಕುವುದನ್ನು ನಿಲ್ಲಿಸಿದರೂ ಹವಾಮಾನ ಬದಲಾವಣೆಯನ್ನು ತಡೆಯಲು ಸಾಧ್ಯವಿಲ್ಲ. ಕೈ ಮೀರಿ ಹೋದ ಪರಿಸ್ಥಿತಿಯ ಕೈಗೊಂಬೆಗಳು ನಾವಾಗಿದ್ದೇವೆ. ಹವಾಮಾನ ವೈಪರೀತ್ಯದ ಅವಘಡಗಳನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಈ ಅಭಿಪ್ರಾಯವನ್ನು ಪುಷ್ಟಿಕರಿಸಲು ಹತ್ತು ಕಾರಣಗಳನ್ನು ನೀಡಿದ್ದಾರೆ. ಆ ಕಾರಣಗಳು ಏನು ಎಂಬುದನ್ನು ಕೊಂಚ ವಿವರವಾಗಿ ನೋಡೋಣ.

ಮೊಟ್ಟ ಮೊದಲನೆಯದಾಗಿ, ಹವಾಮಾನ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ. ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲಾಮ್ಲ ಮತ್ತು ಮಿಥೇನ್ ಪ್ರಮಾಣ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ಜಾನುವಾರುಗಳು ಮಿಥೇನ್ ಅನಿಲವನ್ನು ಸಾಕಷ್ಟು ಪ್ರಮಾಣದಲ್ಲಿ ಕಕ್ಕುತ್ತವೆ. ಇದಲ್ಲದೇ ಇನ್ನೊಂದು ಅತಿಮುಖ್ಯ ಕಾರಣ ಆರ್ಕ್‌ಟಿಕ್ ಪ್ರದೇಶದ ಮಂಜುಗಡ್ಡೆಯ ಕೆಳಗೆ ಅಪಾರ ಪ್ರಮಾಣದ ಮಿಥೇನ್ ನಿಕ್ಷೇಪವಿದೆ. ಈ ಪ್ರದೇಶದಲ್ಲಿ ಮಂಜುಗಡ್ಡೆ ಇರುವಷ್ಟು ದಿನ ಮನುಕುಲ ಅಪಾಯದಿಂದ ದೂರ. ಆದರೆ ಅಲ್ಲಿ ಮಂಜುಗಡ್ಡೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕರಗಿ ನೀರಾಗುತ್ತಿದೆ. ೧೯೮೮ರಲ್ಲಿ ಜೇಮ್ಸ್ ಹಾಮ್ಸ್‌ನ್ ಎನ್ನುವ ಅಮೆರಿಕಾದ ವಿಜ್ಞಾನಿ ಶುಕ್ರ ಗ್ರಹವನ್ನು ಭೂಗ್ರಹದ ಜೊತೆಗೆ ತುಲನೆ ಮಾಡಿ ನೋಡಿ ಕೆಲವು ವಿಷಯಗಳನ್ನು ಅರುಹಿದ್ದ. ಶುಕ್ರ ಗ್ರಹದ ಅತಿ ಬಿಸಿಯಾದ ವಾತಾವರಣದಲ್ಲಿ ಯಾವುದೇ ಜೀವಿಗಳಿಲ್ಲ. ಸೀಸದಂತಹ ಲೋಹವೂ ಕರಗುವಷ್ಟು ಬಿಸಿ ವೀನಸ್ ಗ್ರಹದಲ್ಲಿದೆ. ಅಲ್ಲಿನ ವಾತಾವರಣದಂತೆ ಭೂಮಿಯ ವಾತಾವರಣವೂ ಬದಲಾಗುತ್ತಿದೆಯೆಂಬುದನ್ನು ಗ್ರಹಿಸಿ ಆಗಲೇ ಎಚ್ಚರಿಕೆಯನ್ನೂ ನೀಡಿದ್ದರು ಆ ವಿಜ್ಞಾನಿ. ಇಂಗಾಲಾಮ್ಲ ಭೂಆರೋಗ್ಯಕ್ಕೆ ಅಪಾಯಕಾರಿ, ಮುಂದೊಂದು ದಿನ ತಿರುಗಿ ಬರಲಾರದ ಹಂತಕ್ಕೆ ಹೋಗುತ್ತೇವೆ. ಇಂಗಾಲಾಮ್ಲ ವಾತಾವರಣಕ್ಕೆ ಸೇರುವ ಪ್ರಮಾಣವನ್ನು ಆದಷ್ಟು ಬೇಗ ನಿಯಂತ್ರಿಸಿ ಎಂದು ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇವರಿಗೆ ಬೆಂಬಲವಾಗಿ ನಿಂತವರು ದ ಇನ್‌ಕನ್ವೀನಿಯಂಟ್ ಟ್ರುಥ್ ಎಂಬ ಪರಿಸರ ಕಾಳಜಿ ಕಿರುಚಿತ್ರ ನಿರ್ಮಾಪಕ ಹಾಗೂ ಸೆನೆಟ್ ಸದಸ್ಯ ಆಲ್‌ಗೋರೆ ಮಾತ್ರ.

ಎರಡನೆಯದಾಗಿ ಜೀವಿ ವೈವಿಧ್ಯ ನಾಶ. ಎನ್ವಿರಾನ್‌ಮೆಂಟ್ ನ್ಯೂಸ್ ಸರ್ವಿಸ್ ಎಂಬ ಪತ್ರಿಕೆಯ ವರದಿಯಂತೆ ಪ್ರಸ್ತುತದಲ್ಲಿ ನೈಸರ್ಗಿಕವಾಗಿ ಅಥವಾ ಸ್ವಾಭಾವಿಕವಾಗಿ ಆಗುವ ಜೀವಿಗಳ ನಾಶಕ್ಕಿಂತ ೧೦೦೦ ಪಟ್ಟು ಹೆಚ್ಚು ವೇಗವಾಗಿ ಜೀವಿಗಳ ಅಳಿಯುವ ಪ್ರಕಿಯೆ ನಡೆದಿದೆ. ಇದಕ್ಕೆ ನೇರ ಕಾರಣ ಮಾನವನ ಅಭಿವೃದ್ದಿ ಪೂರಕ ಚಟುವಟಿಕೆಗಳು ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಜೀವಿಗಳ ಅಳಿವು ಹೆಚ್ಚಾಗುತ್ತಿದೆ. ಈ ಪ್ರಮಾಣ ೧೦ ಸಾವಿರ ಪಟ್ಟು ಹೆಚ್ಚು ವೇಗವಾಗಿ ಘಟಿಸುವ ಸಂಭವವಿದೆ. ೨೦೦೫ರ ಮಿಲಿಯನಿಯಮ್ ಇಕೋಸಿಸ್ಟಮ್ ಅಸೆಸ್‌ಮೆಂಟ್ ವರದಿಯ ಪ್ರಕಾರ ೧೦-೩೦% ಸಸ್ತನಿಗಳು, ಪಕ್ಷಿಗಳು, ಶೀತರಕ್ತ ಪ್ರಾಣಿ ಪ್ರಬೇಧಗಳು ತೀವ್ರವಾಗಿ ಅಳಿಯುತ್ತಿವೆ. ಇದಕ್ಕೆ ಕಾರಣ ಅರಣ್ಯ ನಾಶ ಹಾಗೂ ಇಂಗಾಲಾಮ್ಲ. ಅದರಲ್ಲೂ ಕಪ್ಪೆಗಳನ್ನು ಪಹರೆ ಜೀವಿ ಗಳು ಎನ್ನಲಾಗುತ್ತದೆ. ವಾತಾವರಣದಲ್ಲಿ ಏನೇ ಏರುಪೇರಾದರು ಅದರ ಪರಿಣಾಮ ಕಪ್ಪೆಗಳ ಮೇಲೆ ಆಗುತ್ತದೆ. ಇದೀಗ ಕಪ್ಪೆಗಳ ಸಂತತಿ ವೇಗವಾಗಿ ನಾಶವಾಗುತ್ತಿದೆ. ಎಚ್ಚರಿಕೆಯ ಗಂಟೆಯ ಸದ್ದು ಕೇಳದಂತೆ ಅಭಿವೃದ್ದಿಯ ಅಲೆಯ ಮೇಲೆ ತೇಲುತ್ತಿದ್ದೇವೆ. ಈ ಭೂಮಿಯ ಮೇಲೆ ಇದುವರೆಗೂ ೫ ಬಾರಿ ಸಾಮೂಹಿಕ ಜೀವಿಗಳ ನಾಶ ಆಗಿದೆ. ಕಳೆದ ೨೫೦ ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಸಮೂಹ ನಾಶದಲ್ಲಿ ೯೬% ಕಡಲ ಜೀವಿಗಳು ಹಾಗೂ ೭೦% ಭೂಜೀವಿಗಳು ನಾಶ ಹೊಂದಿದ್ದವು. ಇದೀಗ ೬ನೆಯ ಸಮೂಹ ನಾಶದ ಹೊಸ್ತಿಲಲ್ಲಿ ನಾವು ಇದ್ದೇವೆಯೇ?

ಮೂರನೆಯದಾಗಿ ಜೇನು ಹುಟ್ಟುಗಳ ನಾಶ. ನಾವು ಸೇವಿಸುವ ಪ್ರತಿ ತುತ್ತಿನಲ್ಲೂ ಜೇನು ಹುಳುಗಳ ಋಣವಿದೆ. ಜೇನು ಇಲ್ಲವೆಂದರೆ, ಆಹಾರವಿಲ್ಲ. ಪರಾಗಸ್ಪರ್ಶಕ್ರಿಯೆಗೆ ನಿಸರ್ಗ ಸೃಷ್ಟಿಸಿದ ಅಧ್ಬುತ ಜೀವಿ ಜೇನು. ನಾವು ಉಪಯೋಗಿಸುವ ರಾಸಾಯನಿಕಗಳಿಂದಾಗಿ ಜೇನು ಹುಟ್ಟುಗಳ ಮಾರಣ ಹೋಮವಾಗುತ್ತಿದೆ. ಇದಕ್ಕೆ ಕಾಲನಿ ಕೋಲಾಪ್ಸ್ ಡಿಸ್‌ಆರ್‍ಡರ್ ಎಂದು ಹೆಸರಿಸಲಾಗಿದೆ. ಮಕರಂದ ಹೊತ್ತು ತರಲು ಹೋದ ಜೇನು ದಾರಿತಪ್ಪಿ ಹೋಗುತ್ತವೆ. ವಾಪಾಸು ಗೂಡಿಗೆ ಮರಳಲಾರದೆ ದಾರಿಯ ಮಧ್ಯದಲ್ಲೇ ಸಾವನ್ನಪ್ಪುತ್ತವೆ. ಇದೇ ತರಹದ ಪ್ರಕ್ರಿಯೆ ನಿಸರ್ಗದಲ್ಲಿ ನಡೆಯುತ್ತಿದ್ದರೆ, ನಿಶ್ಚಿತವಾಗಿ ಆಧುನಿಕ ಮಾನವರು ಆಹಾರದ ತೀವ್ರ ಅಭಾವವನ್ನು ಎದುರಿಸಬೇಕಾಗುತ್ತದೆ.

ನಾಲ್ಕನೆಯದಾಗಿ ಬಾವಲಿಗಳ ಸಾಮೂಹಿಕ ನಾಶ. ಅರಣ್ಯ ನಾಶ, ಭೇಟೆಯ ಜೊತೆಗೆ ಬಾವಲಿಗಳನ್ನು ಕಾಡುವ ವೈಟ್ ನೋಸ್ ಸಿಂಡ್ರೋಮ್ ಎಂಬ ಕಾಯಿಲೆ. ಈ ಕಾಯಿಲೆಯಿಂದಾಗಿ ಬಾವಲಿಗಳು ನೊಣಗಳಂತೆ ಪುತು-ಪುತುನೆ ಉದುರಿ ಸಾಯುತ್ತಿವೆ. ಅಲ್ಲದೆ ಅತ್ಯಂತ ವೇಗವಾಗಿ ಈ ಕಾಯಿಲೆ ಸರ್ವವ್ಯಾಪಿಯಾಗಿ ಹರಡುತ್ತಿದೆ. ಇದಲ್ಲದೆ ಸ್ವಾಭಾವಿಕ ಅರಣ್ಯಗಳು ಕಡಿಮೆಯಾಗುತ್ತಿರುವುದರಿಂದ, ಬಾವಲಿಗಳು ತಮ್ಮ ನೆಲೆಯನ್ನು ಪೇಟೆ-ಪಟ್ಟಣಗಳಿಗೆ ವಿಸ್ತರಿಸಿಕೊಳ್ಳುತ್ತಿವೆ. ಬಾವಲಿಯ ಜೊತೆಗೆ ವೈರಸ್‌ಗಳು ಪೇಟೆಗೆ ದಾಳಿಯಿಡುತ್ತವೆ. ಅದು ನೇರವಾಗಿ ಜನ-ಜಾನುವಾರುಗಳ ಮೇಲೆ ತಮ್ಮ ದುಷ್ಪರಿಣಾಮ ಬೀರಬಲ್ಲವು. ಈಗಾಗಲೇ ಜಗತ್ತಿನಲ್ಲಿ ೭೫೦ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಎಬೋಲಾ ಎಂಬ ಕಾಯಿಲೆಗೆ ಬಾವಲಿಯಲ್ಲಿರುವ ವೈರಸ್‌ಗಳೇ ಕಾರಣವಾಗಿವೆ ಎಂದು ಸಂಶಯಿಸಲಾಗಿದೆ. ಪ್ರತಿ ವರ್ಷ ೫ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ನಾಲ್ಕು ರೋಗಗಳಿಗೆ ಪ್ರಾಣಿಗಳು ಕಾರಣ ಎಂದು ಜೀವಿ ವೈವಿಧ್ಯ ರಕ್ಷಣಾ ಸಂಸ್ಥೆಯಾದ ಇಕೋ ಹೆಲ್ತ್ ಅಲಯನ್ಸ್‌ನ ಜಾನ್ ಎಪ್‌ಸ್ಟಿನ್ ಹೇಳಿದ್ದಾರೆ.

ಐದನೆಯದಾಗಿ ಪ್ಯಾಂಡೆಮಿಕ್. ಪ್ರತಿ ವರ್ಷವೂ ಹೊಸ ಕಾಯಿಲೆಗಳು ಉತ್ಪತ್ತಿಯಾಗುತ್ತವೆ. ಕೆಲವು ಕಾಯಿಲೆಗಳು ಮನುಕುಲವನ್ನು ನಾಶ ಮಾಡುವಷ್ಟು ಮಾರಣಾಂತಿಕವಾಗಿರುತ್ತವೆ. ಉದಾಹರಣೆಯಾಗಿ ೧೯೧೮ರಲ್ಲಿ ಹರಡಿದ ಇನ್‌ಫ್ಲೂಯೆಂಜಾ ಜ್ವರಕ್ಕೆ ಪ್ರಪಂಚದ ಸುಮಾರು ೫೦ ಮಿಲಿಯನ್ ಜನಸಂಖ್ಯೆ ನಾಶವಾಗಿತ್ತು. ಇದು ಎರಡನೇ ಮಹಾಯುದ್ದದಲ್ಲಿ ಮಡಿದವರ ಸಂಖ್ಯೆಗಿಂತ ಹೆಚ್ಚು. ಕೆಲವು ವರ್ಷಗಳ ಹಿಂದೆ ಸಾರ್ಸ್ ರೋಗ ಭಯಜನಕವಾಗಿತ್ತು. ಈಗಂತೂ ಆಕಾಶವನ್ನು ಅಕ್ಷರಷ: ವಿಮಾನಗಳು ಆಳುತ್ತಿವೆ. ಒಬ್ಬ ವ್ಯಕ್ತಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದಾದ ಸಾಧ್ಯತೆಯಿದೆ. ಹೊಸ-ಹೊಸ ರೋಗಗಳು ಪ್ರಪಂಚದ ಯಾವ ಮೂಲೆಯಿಂದ ಯಾವ ಮೂಲೆಗಾದರೂ ಹರಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೆಲ್ತ್ ಪ್ರೊಟೆಕ್ಷನ್ ಸೊಸೈಟಿಯ ಮಾರಿಯಾ ಹೇಳಿದ್ದಾರೆ.
ಆರನೆಯದಾಗಿ, ಜೈವಿಕ/ಅಣು ಸಂಬಂಧಿತ ಭಯೋತ್ಪಾದನೆ. ಇಂದಿನ ವಿಜ್ಞಾನ ಯುಗದಲ್ಲಿ ವಿಜ್ಞಾನವನ್ನು ಬಲ್ಲವರೂ ಭಯೋತ್ಪಾಕರಾಗಿ ಬದಲಾಗುತ್ತಿದ್ದಾರೆ. ಇವರ ಕೈಗೆ ಅಣು ಬಾಂಬ್ ಅಥವಾ ಜೈವಿಕ ಯುದ್ದಾಸ್ತ್ರಗಳು ಎಟಕುವುದು ಕಷ್ಟವೇನಲ್ಲ. ರಾಸಾಯನಿಕ ಬಾಂಬ್‌ಗಳು ಅಥವಾ ಜೈವಿಕ ಅಸ್ತ್ರಗಳನ್ನು ಯಾರೂ ಬಳಸಲು ಆಗುವಂತಹ ವಾತಾವರಣ ಇಂದಿನ ದಿನಗಳಲ್ಲಿ ಇದೆ. ಅಂಗೈಯಲ್ಲೇ ಇಡೀ ವಿಶ್ವವನ್ನು ಅಳೆಯುವ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದೆ. ಪಾಕಿಸ್ತಾನ ಮತ್ತು ಉತ್ತರ ಕೋರಿಯಾಗಳಂತಹ ಜಗಳಗಂಟ ದೇಶಗಳ ಹತ್ತಿರ ಅಣ್ವಾಸ್ತ್ರವಿರುವುದು ಇಡೀ ಜಗತ್ತಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲ. 
ಏಳನೆಯದಾಗಿ, ಸೂಪರ್ ಜ್ವಾಲಾಮುಖಿಗಳು. ಪ್ರತಿ ೫೦,೦೦೦ ವರ್ಷಗಳಿಗೊಮ್ಮೆ ಸೂಪರ್ ಜ್ವಾಲಾಮುಖಿಗಳು ಈ ಭೂಮಿಯಲ್ಲಿ ಸ್ಪೋಟಿಸಿವೆ. ಒಂದು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಪ್ರದೇಶ ಧೂಳಿನಿಂದ ಮುಚ್ಚಿಹೋದ ನಿದರ್ಶನಗಳಿವೆ. ಸೂರ್ಯನ ಬಿಸಿಲು ನೆಲಕ್ಕೆ ತಲುಪದಷ್ಟು ದಟ್ಟವಾದ ಧೂಳಿನ ಮೋಡ ಆವರಿಸಿ ಆ ಪ್ರದೇಶದ ಜನ ಸಂಕಷ್ಟಗಳನ್ನು ಅನುಭವಿಸಿದ ಇತಿಹಾಸವಿದೆ. ೭೪೦೦೦ ವರ್ಷಗಳ ಹಿಂದೆ ಇಂಡೊನೇಷಿಯಾದಲ್ಲಿ ಸ್ಪೋಟಗೊಂಡ ಅತಿ ಬಲಶಾಲಿ ಜ್ವಾಲಾಮುಖಿಯಿಂದಾಗಿ ಎರಡೂ ಧ್ರುವಗಳ ಕಡೆಗೂ ವ್ಯಾಪಿಸಿದ ಧೂಳಿನ ಮೋಡದಿಂದಾಗಿ ಸುಮಾರು ೬ ವರ್ಷಗಳ ಕಾಲ ಹೆಚ್ಚು ಕಡಿಮೆ ಇಡೀ ಜಗತ್ತು ಕತ್ತಲಲ್ಲಿ ಮುಳುಗಿತ್ತು. ಭೂಮಿಯ ಉಷ್ಟಾಂಶ ಮಂಜುಗಡ್ಡೆಯಷ್ಟು ತಣ್ಣಗಿತ್ತು. ಈ ತರಹದ ಸೂಪರ್ ಜ್ವಾಲಾಮುಖಿಗಳು ಅಮೆರಿಕಾದ ಯೆಲ್ಲೋಸ್ಟೋನ್, ಸುಮಾತ್ರದ ಟೋಬಾ ಮತ್ತು ಇಂಡೊನೇಷಿಯಾಗಳಲ್ಲಿವೆ. ಅಥವಾ ನಮಗೆ ಗೊತ್ತಿಲ್ಲದ ಹಲವು ಸ್ಥಳಗಳಲ್ಲಿ ಇರಬಹುದು ಎನ್ನುತ್ತಾರೆ ಜ್ವಾಲಾಮುಖಿ ತಜ್ಞ ಬಿಲ್ ಮ್ಯಾಕ್‌ಗುರೆ.

ಎಂಟನೆಯದಾಗಿ, ಆಕಾಶಕಾಯಗಳು. ಡೀಪ್ ಇಂಪ್ಯಾಕ್ಟ್ ಎನ್ನುವ ಹಾಲಿವುಡ್ ಸಿನೆಮಾದಲ್ಲಿ ಆಕಾಶಕಾಯ ಅಪ್ಪಳಿಸಿ ಇಡೀ ಭೂಮಿಯ ಜನ ನಾಶವಾಗುವುದನ್ನು ತೋರಿಸಲಾಗಿದೆ. ಹಲವು ಹಾಲಿವುಡ್ ಚಿತ್ರಗಳನ್ನು ವಾಸ್ತವಿಕತೆಯನ್ನು ಹತ್ತಿರವಾಗಿಟ್ಟುಕೊಂಡು ಚಿತ್ರಿಸಲಾಗಿದೆ. ರಷ್ಯಾದ ಚೆಲಿಬಿನ್ಸ್‌ಕ್ ಸ್ಥಳದಲ್ಲಿ ೨೦ ಮೀಟರ್ ಅಗಲದ ಆಕಾಶಕಾಯವೊಂದು ಅಪ್ಪಳಿಸಿತ್ತು. ಗಂಟೆಗೆ ೪೦ ಸಾವಿರ ಮೈಲು ವೇಗದಿಂದ ಬಂದು ಭೂಮಿಗೆ ಅಪ್ಪಳಿಸಿತ್ತು. ಇದು ಅಪ್ಪಳಿಸುವುದಕ್ಕೂ ಮುಂಚಿತವಾಗಿ ಯಾರಿಗೂ ಇದು ಅಪ್ಪಳಿಸುತ್ತದೆಯೆಂಬ ಮಾಹಿತಿ ಇರಲಿಲ್ಲ. ನಾಸಾದ ವಿಜ್ಞಾನಿ ಡೋನಾಲ್ಡ್ ಯೋಮನ್ಸ್ ಪ್ರಕಾರ ಮಹೋರಗಗಳ ಅಳಿವಿಗೆ ಇಂತಹ ಆಕಾಶಕಾಯಗಳೇ ಕಾರಣ. ಒಂದೊಮ್ಮೆ ೧ ಕಿ.ಮಿ. ದೊಡ್ಡದಾದ ಆಕಾಶಕಾಯವೇನಾದರೂ ಭೂಮಿಗೆ ಅಪ್ಪಳಿಸಿದರೆ, ಇದರಿಂದ ಏಳುವ ದೂಳು ಇಡೀ ಭೂಮಿಯನ್ನು ಆವರಿಸಿಕೊಳ್ಳುತ್ತದೆ. ಸೂರ್ಯನ ಶಾಖವಿಲ್ಲದೆ ಸಸ್ಯಗಳು ಅಳಿದು ಹೋಗುತ್ತವೆ. ಆಮ್ಲಮಳೆ ಸುರಿಯುವುದರಿಂದ ಕಡಲಜೀವಿಗಳು ಅಳಿದುಹೋಗುತ್ತವೆ, ಇಡೀ ಪ್ರಪಂಚ ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತದೆ. 

ಒಂಬತ್ತನೆಯದಾಗಿ, ಯಾಂತ್ರಿಕರಣದ ಪ್ರಭಾವ. ಅಂದರೆ ದಿನೇ ದಿನೇ ನಾವು ತಯಾರಿಸುವ ಕಂಪ್ಯೂಟರ್‌ಗಳ ಕ್ಷಮತೆ ಹೆಚ್ಚುತ್ತಿದೆ. ಎಲ್ಲಾ ಕ್ಷೇತ್ರಗಳನ್ನು ಇವತ್ತು ಕಂಪ್ಯೂಟರ್‌ಗಳು ಆಳುತ್ತಿವೆ. ನಾವು ತಯಾರಿಸಿದ ರೋಬಾಟ್‌ಗಳು ನಮಗಿಂತ ಹೆಚ್ಚು ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ತೋರುತ್ತಿವೆ. ಎಲ್ಲೋ ಕುಳಿತ ಡಾಕ್ಟರ್‌ಗಳು ರೋಬಾಟ್‌ಗಳಿಗೆ ನಿರ್ದೇಶನ ನೀಡಿ ಶಸ್ತ್ರಚಿಕಿತ್ಸೆಯಂತಹ ನಾಜೂಕು ಕಾರ್ಯವನ್ನು ಮಾಡಿಸುತ್ತಿದ್ದಾರೆ. ಕಂಪ್ಯೂಟರ್‌ಗಳಿಗೆ ಮತ್ತು ರೋಬಾಟ್‌ಗಳಿಗೆ ನಮ್ಮೆಲ್ಲಾ ಬುದ್ಧಿಮತ್ತೆಯನ್ನು ಧಾರೆಯರೆಯುತ್ತಿದ್ದೇವೆ. ರೇ ಕರ್ಜ್‌ವೆಲ್ ಎಂಬ ಭವಿಷ್ಯಕಾರನ (ಜ್ಯೋತಿಷಿ ಅಲ್ಲ) ಪ್ರಕಾರ ಈ ಕಂಪ್ಯೂಟರ್‌ಗಳು ಮತ್ತು ರೋಬಾಟ್‌ಗಳು ೨೦೨೯ರ ಹೊತ್ತಿಗೆ ಮನುಷ್ಯರಿಗೆ ಸರಿಸಮನಾಗಿ ಕಾರ್ಯನಿರ್ವಹಿಸುವ ಸ್ಥಿತಿಗೆ ತಲುಪುತ್ತವೆ. ೨೦೪೫ರ ಹೊತ್ತಿಗೆ ನಮ್ಮ ಬುದ್ಧಿಮತ್ತೆಗಿಂತ ಕೋಟಿಪಟ್ಟು ಬುದ್ಧಿವಂತರಾಗುತ್ತವೆ. ಪ್ರಪಂಚ ಕಂಡ ಮಹಾ ಮೇಧಾವಿ, ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಪ್ರಕಾರ ಯಂತ್ರಗಳು ಮನುಷ್ಯನನ್ನು ಮೀರಿಸಿದ ಬುದ್ಧಿಮತ್ತೆ ಹೊಂದುವ ದಿನ ಬರದೇ ಇರದು ಎಂದು ಹೇಳಿದ್ದಾರೆ.

ದೂರದ ಗ್ರಹದಿಂದ ಭೂತಗಳು-ದೆವ್ವಗಳು ಬಂದು ಮನುಷ್ಯರನ್ನು ನಿರ್ನಾಮ ಮಾಡುವ ಸಾಧ್ಯತೆಯನ್ನು ಅಲ್ಲಗಳೆದರೂ, ಚಿಕ್ಕದಾದ ಒಂದು ಪರಾವಲಂಬಿಯಿಂದ ಮನುಕುಲ ಬಿಕ್ಕಟ್ಟಿಗೆ ಸಿಲುಕಬಹುದು. ಪರಾವಲಂಭಿಯ ಹೆಸರು ಟಾಕ್ಸೋಪ್ಲಾಸ್ಮೋಸ ಗೊಂಡ್ಡಿ. ಅತಿಚಿಕ್ಕದಾದ ಪರಾವಲಂಭಿ ಈ ಜೀವಿ ಇಲಿಗಳಿಗೆ ಮಾರಕವಾಗಿ ಪರಿಣಮಿಸಿವೆ. ಇಲ್ಲೊಂದು ವಿಚಿತ್ರವಿದೆ ಈ ಪರಾವಲಂಭಿ ತನ್ನ ಸಂತತಿಯನ್ನು ಬೆಳೆಸುವುದು ಬೆಕ್ಕಿನ ಕರುಳಿನಲ್ಲಿ. ಸ್ವಾಭಾವಿಕವಾಗಿ ಬೆಕ್ಕು ಇಲಿಯನ್ನು ತಿನ್ನುತ್ತದೆ. ಇಲಿಯ ಮೂಲಕ ಬೆಕ್ಕಿನ ಹೊಟ್ಟೆ ಸೇರುವ ಪರಾವಲಂಭಿ ಅಲ್ಲಿ ತನ್ನ ಸಂತತಿಯನ್ನು ವೃದ್ಧಿಸಿಕೊಳ್ಳುತ್ತದೆ. ಇಲಿಯನ್ನು ತಿನ್ನುವ ಬೆಕ್ಕು ಹೊಟ್ಟೆ ತುಂಬಿದ ಸಂತಸದಿಂದ ಬೀಗುತ್ತದೆ. ಸಂತತಿಯನ್ನು ವೃದ್ಧಿಸಿಕೊಳ್ಳುವ ಪರಾವಲಂಭಿಯೂ ಸಂತಸದಿಂದ ಇರುತ್ತದೆ. ಆದರೆ ಇಲಿ? ತಿನ್ನಲ್ಪಡುವ ಇಲಿಗೇನು ಸಂತಸವಿರುವುದಿಲ್ಲ. ಇಷ್ಟಕ್ಕೂ ಇಲಿಯ ಸುಖ-ದು:ಖ ನಮಗೇಕೆ? ಆದರೂ ಇಲಿಗೂ ಮಾನವನಿಗೂ ಬಹಳ ಸಾಮ್ಯತೆಯಿದೆ. ಇದೇ ಅಂಶವೇ ಕಳವಳಕಾರಿಯಾದದು. ಪ್ರಪಂಚದ ಅರ್ಧ ಜನರ ಹೊಟ್ಟೆಯಲ್ಲೂ ಈ ಪರವಾಲಂಭಿ ಜೀವಿಯಿದೆ. ಆದರೆ ಸದ್ಯಕ್ಕೆ ಇಲಿಗೆ ಹಾನಿ ಮಾಡಿದಂತೆ, ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ಪ್ರಕೃತಿಯಲ್ಲಿ ಯಾವುದೂ ಅಚ್ಚರಿಯಲ್ಲ. ಇದೇ ಜೀವಿ ಒಂದು ದಿನ ಮಾನವನಿಗೆ ಕಂಟಕಪ್ರಾಯವಾದರೆ? ಈ ಆದರೆ??? ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಇಕೋವಾಚ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಭಾವಾನುವಾದ ಮಾಡಲಾಗಿದೆ – ಲೇಖಕ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Guruprasad Kurtkoti
9 years ago

ಅಖಿಲೇಶ, ಬರಹ ತುಂಬಾ ಚೆನ್ನಾಗಿದೆ! ಜೇನಿನ ಬಗ್ಗೆ ಬರೆದ ಸಂಗತಿಯಿಂದ ಹಿಡಿದು ಹಲವಾರು ವಿಷಯಗಳು ನನಗೆ ಗೊತ್ತಿರಲಿಲ್ಲ. ಮುಂದಿನದನ್ನು ನೆನೆಸಿಕೊಂಡರೆ ಭಯವಾಗುತ್ತದೆ. 🙁

prashasti.p
9 years ago

ಸಖತ್ ಅಖ್ಕಿ ಭಾಯ್ 🙂

2
0
Would love your thoughts, please comment.x
()
x