ಮಕ್ಕಳ ಹಕ್ಕುಗಳ ಬಗ್ಗೆ ಸಾಮಾನ್ಯರ ತಿಳುವಳಿಕೆ ಏನು ?

 

 

 

 

 

ಶ್ರೀಮತಿ ವೀಣಾ ಶಿವಣ್ಣ ಹೇಳುತ್ತಾರೆ, “ನನಗೆ ತಿಳಿದ ಮಟ್ಟಿಗೆ ಮಕ್ಕಳಿಗೆ ತಾವು ಬದುಕಲು ಬೇಕಾಗುವ ಒಳ್ಳೆಯ ಸೌಕರ್ಯ (ಊಟ, ಬಟ್ಟೆ, ಮಲಗಲು ಬೆಚ್ಚನೆಯ ಹಾಸಿಗೆ, ಆಟಿಕೆಗಳು), ಅವರು ಪಡೆದುಕೊಳ್ಳುವ ವಿದ್ಯಾಭಾಸ ಹಾಗೂ ಆರೋಗ್ಯ ಚೆನ್ನಾಗಿರಿಸಲು ಬೇಕಾಗುವ ವೈದ್ಯಕೀಯ ವ್ಯವಸ್ಥೆಯನ್ನು ಮಕ್ಕಳ ಹಕ್ಕುಗಳು ಎನ್ನಬಹುದು. ಹಾಗೆಯೇ ಮಕ್ಕಳು ಯಾವುದೇ ರೀತಿಯ ದೌರ್ಜನ್ಯ, ದುರುಪಯೋಗ, ಪಕ್ಷಪಾತದಿಂದ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎನ್ನುವುದನ್ನು ಓದಿ ತಿಳಿದುಕೊಂಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾಗುವ ಒಳ್ಳೆಯ ಸಾಮಾಜಿಕ ಸುಸ್ಥಿತಿ ಮಕ್ಕಳ ಹಕ್ಕಾಗಿರುತ್ತದೆ. ಆ ಹಕ್ಕನ್ನು ಕಲ್ಪಿಸಿ ಕೊಡುವ ಜವಾಬ್ದಾರಿ ತಂದೆ ತಾಯಂದಿರಿದಾಗಿರುತ್ತದೆ.

 

 

 

 

ಶ್ರೀಮತಿ ಮಂಜುಳ ಬಬಲಾದಿ ಹೇಳುತ್ತಾರೆ, “ಸಾಮಾನ್ಯವಾಗಿ ಕಾನೂನು ವಿಚಾರದಲ್ಲಿ ನಾನು ತಕ್ಕ ಮಟ್ಟಿಗೆ ಅನಕ್ಷರಸ್ಥಳೇ ಅಂತ ಹೇಳ್ಕೋಳೋಕೆ ನನಗೇನೂ ಮುಜುಗರ ಅನಿಸ್ತಿಲ್ಲ. ಮಕ್ಕಳ ಹಕ್ಕುಗಳ ಬಗ್ಗೆಯೂ ಅಷ್ಟೇ ನನ್ನ ಅರಿವು ತುಂಬಾ ಸೀಮಿತ. ಪ್ರಾಥಮಿಕ ಶಿಕ್ಷಣದ ಹಕ್ಕು, ಬಾಲ ಕಾರ್ಮಿಕರನ್ನು ನೇಮಿಸುವುದು ಅಪರಾಧ, ಇವೆರಡು ನನಗೆ ತಿಳಿದ ವಿಚಾರಗಳು. ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧದ ಕಾನೂನುಗಳ ಮಾಹಿತಿ ನನಗೆ ತಿಳಿದಿಲ್ಲ. ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸುವಲ್ಲಿ ಕಾನೂನು ವ್ಯವಸ್ಥೆ/ಸರ್ಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂಬ ಆಶಯವಂತೂ ಖಂಡಿತ ಇದೆ. ಆದರೆ ಇಂತಹ ಕಾರ್ಯಕ್ರಮಗಳು ಕಬ್ಬಿಣದ ಕಡಲೆ ಆಗದಿರಲಿ ಎಂಬ ಪೂರಕ ಆಶಯವೂ ಇದೆ.

 

 

 

 

ಶ್ರೀಮತಿ ವೀಣಾ ಭಟ್ ಹೇಳುತ್ತಾರೆ, “ಮಕ್ಕಳ ಹಕ್ಕುಗಳು ಎನ್ನುವ ವಿಷಯ ಇತ್ತೀಚೆಗೆ ಮಾಧ್ಯಮಗಳ ಮೂಲಕ ಪದೇಪದೇ ಕಿವಿಮೇಲೆ ಬೀಳುತ್ತಿದೆ. ಆದರೂ ನಾನು ಇದರ ಬಗ್ಗೆ ವಿವರವಾಗಿ ತಿಳಿದುಕೊಂಡಿಲ್ಲ. ಇಬ್ಬರು ಹದಿಹರೆಯದ ಹೆಣ್ಣು ಮಕ್ಕಳ ತಾಯಿಯಾಗಿ ನನ್ನ ಆತಂಕಕ್ಕೆ ಕೊನೆಯಿಲ್ಲ. ಇವತ್ತಿನ ಪ್ರಪಂಚದಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿಲ್ಲ. ಶ್ರೀಮಂತರು ಮಕ್ಕಳಿಗೆ ಬೇಕಾದ ಅನುಕೂಲಗಳನ್ನು ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೂ ಅವರುಗಳ ಸುರಕ್ಷತೆಯ ಬಗ್ಗೆ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಬಡವರ ಮಕ್ಕಳ ಪಾಡಂತೂ ಇನ್ನೂ ಕಷ್ಟಕರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನು ಮಾಡಿದರೂ ಅದನ್ನು ಯಶಸ್ವಿಯಾಗಿ ಜಾರಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 

 

 

 

 

 

ವಿದ್ಯಾರ್ಥಿನಿ ರುಚಿಕ ಭಟ್ ಹೇಳುತ್ತಾರೆ "ಮಕ್ಕಳಿಗೆ ಮೂಲಭೂತವಾಗಿ ಬೇಕಾಗುವ ಯಾವ ಸೌಲಭ್ಯಗಳೂ ಈ ದೇಶದಲ್ಲಿ ಇಲ್ಲ. ಹೊರದೇಶಗಳಲ್ಲಿ ಮಕ್ಕಳಿಗಾಗಿ ತುಂಬಾ ಅನುಕೂಲಗಳು ಇವೆ. ನಮ್ಮ ದೇಶದ ಅಂಗವಿಕಲ ಮಕ್ಕಳ ಸ್ಥಿತಿಯಂತೂ ಬಹಳ ಕೆಟ್ಟದಾಗಿದೆ. ಸರ್ಕಾರದೊಂದಿಗೆ ನಮ್ಮಂಥ ಯುವಕರು ಕೈಜೋಡಿಸಿದಾಗ ಮಾತ್ರ ವ್ಯವಸ್ಥೆಯನ್ನು ಸರಿ ಮಾಡಲು ಸಾಧ್ಯ”

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x