ಮೆಜೆಸ್ಟಿಕ್ಕಿನಲ್ಲೊಂದು ರಾತ್ರಿ: ಹೃದಯಶಿವ

 
ಮೆಜೆಸ್ಟಿಕ್ ಬಸ್ ಸ್ಟಾಂಡಿನ ನಿದ್ರಾಹೀನ ರಾತ್ರಿ. ಶ್ರೀಮಂತ ಬೆಂಗಳೂರಿನಲ್ಲೇ ಇಷ್ಟು ಚಳಿ ಇರಬೇಕಾದರೆ ನನ್ನ ಹಳ್ಳಿ ಬೆಚ್ಚಗಿರುತ್ತದೆ. ಹೌದು, ಬೆಚ್ಚಗಿರುತ್ತದೆ: ನನ್ನ ಹಳ್ಳಿ ಈ ಹೊತ್ತಿನಲ್ಲಿ ಕಂಬಳಿಯೊಳಗೆ ಮುದುಡಿರುತ್ತದೆ. ತೊಟ್ಟಿಲ ಮಕ್ಕಳ ತಲೆಗೆ ಕುಲಾವಿ ಇದ್ದರೆ, ಮುದುಕರು ಕಿವಿಗೆ ಬಿಗಿಯಾಗಿ ವಲ್ಲಿಬಟ್ಟೆಯನ್ನೋ, ಮಫ್ಲರನ್ನೋ ಸುತ್ತಿಕೊಂಡು ಗೊರಕೆ ಹೊಡೆಯುತ್ತಿರುತ್ತಾರೆ. ತನಗೆ ಮತ್ತಷ್ಟು ಕಾವು ಕೊಟ್ಟುಕೊಳ್ಳಲು ಬಯಸುವ ರಸಿಕ ದಿಂಬು ಹಂಚಿಕೊಂಡು ಮಲಗಿದ್ದ ತನ್ನಾಕೆಯ ಕಿವಿಯಲ್ಲಿ ಮೆಲ್ಲಗೆ ಉಸುರುತ್ತಾನೆ : "ಲೇ ಇವಳೇ, ನಿನ್ನ ಕೆನ್ನೆಗೆ ಕೆನ್ನೆಯೊತ್ತಿ ಗಟ್ಟಿಯಾಗಿ ಅಪ್ಪಿ ಮಲಗಿದರೆ ಕಂಬಳಿಯೇ ಬೇಡ" ಎನ್ನುವ ಕಾವ್ಯಾತ್ಮಕ ಮಾತಿಗೆ ಪೂರಕವಾಗಿ ಹಂಸಲೇಖಾ ಹೇಳಿದ್ದು: "ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ… ಛೀ ಪೋಲಿ… ಛೀ ಪೋಲಿ." 

ನಡುಗುತ್ತ ಕುಳಿತ ನನ್ನ ಕೈಯಲ್ಲಿರುವ ಪುಸ್ತಕವೊಂದರಲ್ಲಿ "ಲೋಕದ ಅತ್ಯಂತ ಅರ್ಥಪೂರ್ಣ ಕ್ರಿಯೆ ಮಿಥುನ; ಆದ್ಧರಿಂದಲೇ ಅದರಿಂದ ಅರ್ಥಪೂರ್ಣ ದುರಂತ" ಎನ್ನುವ ಲಂಕೇಶರ ಮಾತಿದೆ. ಒಂದು ತಲೆಮಾರಿನ ಕಣ್ಣು ತೆರೆಸಿದ ಈ ದೈತ್ಯ ಪ್ರತಿಭೆ ಗುರುವಿನಂಥವರು, ಒಂದು ರೀತಿಯಲ್ಲಿ ತನಗೇ ತಿಳಿಯದಂತೆ ಅನೇಕ ಆತ್ಮಗಳನ್ನು ಚಿಂತನೆಗೆ ಹಚ್ಚಿದ ಮಾಯಾವಿಯಂಥವರು. ಇನ್ನೊಂದು ರೀತಿಯಲ್ಲಿ ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡಿ ಮಡಿದ ಬುದ್ಧ, ಬಸವರ ಆಶಯ ಅರಿತವರು- ಇವೆಲ್ಲವುಗಳಾಚೆಗೆ ಇನ್ನೇನೋ ಇರಬಹುದು. 

ಈ ರಾತ್ರಿ ಮಾಮೂಲಿ ರಾತ್ರಿಯಂತಲ್ಲ. ಒಂದೆಡೆ ಕೂರದೆ ಸುಮ್ಮನೇ ಅಲೆಯುವೆ. ಖಾಲಿ ಹೊಡೆಯುವ ಕೆಂಪೇಗೌಡ ರಸ್ತೆ ಅತ್ಯಾಚಾರಕ್ಕೊಳಗಾಗಿ ಸೂರೆಗೊಂಡ ಹೆಣ್ಣಿನಂತೆ ಕಾಣುತ್ತದೆ. ಕದವಿಕ್ಕಿದ ಅಂಗಡಿ, ಷೋ ರೂಮಿನ ಬಾಗಿಲುಗಳು ಎದುರುಬದಿಯವೊಂದಿಗೆ ಏನನ್ನೋ ಮಾತಾಡುತ್ತಿವೆ ಎನ್ನಿಸುತ್ತದೆ. ಚಿತ್ರಮಂದಿರಗಳ ಮುಂದೆ ಎತ್ತರಕ್ಕೆ ನಿಂತ ಕಟೌಟುಗಳು ಅನಾಥವಾಗಿ ಬಿಕ್ಕುವಂತೆ ಭಾಸವಾಗುತ್ತದೆ. ಗೋಡೆಗಳ ಮೇಲಿನ ಸಿನಿಮಾ ಪೋಸ್ಟರುಗಳ ಮೇಲೆ ನಾಯಿ ಉಚ್ಚೆ ಹುಯ್ಯುತ್ತಿವೆ. ಕೆಂಪೇಗೌಡ ವೃತ್ತದಲ್ಲಿ ಪುತ್ಥಳಿಯಾಗಿ ಕೂತ ಡಾ.ರಾಜಕುಮಾರ್ ಒಬ್ಬಂಟಿಯಂತೆ ಕಾಣುತ್ತಾರೆ… ಇಲ್ಲಿ ಈ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾಲುಸಾಲಾಗಿ ಹೇಗೆಂದರೆ ಹಾಗೇ ಬಿದ್ದು ಹೊರಳಾಡುವ ನಿರಾಶ್ರಿತರು. ಶರ್ಟಿನ ಕಾಲರನ್ನು ಕಿವಿಯವಗೆರೆ ಎಳೆದುಕೊಂಡು ಚಳಿಗೆ ಮೈ ಮುದುಡಿ ಮಲಗಿರುವ ಜನ ಇವರು. ಒಂದು ಕಡೆ ಸೊಳ್ಳೆ, ಒಂದು ಕಡೆ ಚಳಿ, ಬಸ್  ನಿಲ್ದಾಣದ ಜಗಮಗ ಬೆಳಕು ಕಣ್ಣಿಗೆ ರಾಚುತ್ತದೆ, ಪ್ರಯಾಣಿಕರ ಗಿಜಿ ಗಿಜಿ ಮಾತು. ಕೆಎಸ್ಸಾರ್ಟಿಸಿಯರವ ಮೈಕು, ಪೋಲೀಸರ ಅನುಮಾನದ ಕಣ್ಣು. 

ನನಗೆ ಗೊತ್ತು, ಈ ಗಾಂಧಿನಗರ, ಚಿಕ್ಕಪೇಟೆ, ನಗರ್ತಪೇಟೆ, ಅಕ್ಕಿಪೇಟೆ, ಕಾಟನ್ ಪೇಟೆ, ಉಪ್ಪಾರ ಪೇಟೆ, ಅರಳೇ ಪೇಟೆ, ಬಳೆಪೇಟೆಗಳಲ್ಲಿನ ಸಾವಿರಾರು ಕಿಷ್ಕಿಂಧೆ ಮನೆಗಳಲ್ಲಿನ ಸಾವಿರಾರು ಜನ ಕಾಲು ಕೊಕ್ಕರಿಸಿಕೊಂಡು ಮಲಗಿದ್ದಾರೆ. ಶ್ರೀಮಂತ ಶೇಟು ಹೆಂಗಸರು ತಡರಾತ್ರಿಯವರೆಗೆ ಟಿವಿ ನೋಡುತ್ತಾ ಹಾಗೇ ನಿದ್ದೆಗೆ ಜಾರಿರುತ್ತಾರೆ… ನಾನು ಬಲ್ಲೆ, ಈ ಬ್ಯೂಟಿಫುಲ್ ಶೇಟು ಹುಡುಗಿಯರು ಪಾನಿಪುರಿ, ಭೇಲ್ ಪುರಿ, ಮಸಾಲಪುರಿ, ಪಾವ್ ಭಾಜಿ, ವಡಾ ಪಾವ್, ಸಮೋಸ, ಜಿಲೇಬಿ ತಿನ್ನುವುದರಲ್ಲಿ, ಅಭಿನಯ್ ಥಿಯೇಟರಿನಲ್ಲಿ ಹಿಂದಿ ಸಿನಿಮಾ ನೋಡುವುದರಲ್ಲಿ, ಜೈನಮಂದಿರಗಳಿಗೆ ಹೋಗಿ ಸ್ವಲ್ಪ ಹೊತ್ತು ಕೂತಿದ್ದು ಹಣೆಗೆ ಗಂಧ ಇಟ್ಟುಕೊಳ್ಳುವುದರಲ್ಲಿ, ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಓಡಾಡುವುದರಲ್ಲಿ ಸಂತೋಷ ಕಾಣುವವರು. ನುಣುಪು ಸೊಂಟದ, ಹೊಳಪುಗಣ್ಣಿನ, ಬಳುಕು ಮೈಯ್ಯ, ಕೋಮಲ ತ್ವಚೆಯ, ಸುಖದ ಖಜಾನೆಯಂತಿರುವ ಇವರೆಲ್ಲ ಒಂದೇ ಒಂದು ಸಲ ಹಳ್ಳಿಗೆ ಹೋಗಿ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರೆ, ರಾಗಿ ಹೊಲದಲ್ಲಿ ಕಳೆ ಕಿತ್ತರೆ, ಹಸುಗಳಿಗೆ ಹುಲ್ಲು ಕೊಯ್ದು ತಂದರೆ, ಸಗಣಿ ಬಾಚಿ ತಿಪ್ಪೆಗೆ ಸುರಿದರೆ ಹೇಗಿರುತ್ತದೆ ಅಂತ ನಿಮಿಷ ಕಾಲ ಯೋಚಿಸುತ್ತೇನೆ ಕ್ಷಮಿಸಿ. 

ಈ ಬರಹವನ್ನು ಇಲ್ಲಿಗೆ ಮುಗಿಸಿಬಿಡಬೇಕು ಎಂದುಕೊಂಡೆ- ಮುಂದುವರಿಯಬೇಕಿದೆ. ಮೋದಿ ಸರ್ಕಾರ ಈ ಸಲದ ಬಜೆಟ್ ಮಂಡನೆ ಮಾಡಿದೆ. ದೇಶಾದ್ಯಂತ ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ 7060 ಕೋಟಿ ರೂ. ವೆಚ್ಚ ಮಾಡುತ್ತಿದೆ. ಮೇಲ್ಸೇತುವೆಗಳು ನಿರ್ಮಾಣವಾದರೆ ದೇಶವೊಂದು ಉದ್ಧಾರವಾದಂತೆ ಎಂದು ಭಾವಿಸಿರುವ ಮೋದಿ ಸರ್ಕಾರಕ್ಕೆ ಮೇಲ್ಸುತುವೆಗಳ ಕೆಳಗೆ, ಕೊಳಚೆ ನೀರಿನ ಮಗ್ಗುಲಲ್ಲೇ ಪುಟ್ಟ ಪುಟ್ಟ ಜೋಪಡಿಗಳಲ್ಲಿ ವಾಸಿಸುವ ಬಡವರ ಬಗ್ಗೆಯೂ ಕಾಳಜಿ ಇರಬೇಕಾಗುತ್ತದೆ. ದೇಶಾದ್ಯಂತ ಸಣ್ಣ ವಿಮಾನ ನಿಲ್ದಾಣಗಳನ್ನು ನಿರ್ಮಿಸಿ ಈಗಿರುವ 116.37 ಮಿಲಿಯನ್ ಪ್ರಯಾಣಿಕರ ಸಂಖ್ಯೆ ಮುಂದಿನ ವರ್ಷದೊಳಗೆ 122.43ಕ್ಕೆ ಹೆಚ್ಚಳಗೊಳಿಸುವ ವಿಶ್ವಾಸ ಹೊಂದಿರುವ ಸರ್ಕಾರಕ್ಕೆ ಮೆಜೆಸ್ಟಿಕ್ ನಂಥ ಬಸ್ ನಿಲ್ದಾಣಗಳಲ್ಲಿ ಅನಾಥ ನಾಯಿಗಳಂತೆ ಬಿದ್ದು, ಬೆಳಗಾಗಿಸಿಕೊಳ್ಳುವ ಇಂಥ ನಿರಾಶ್ರಿತರ ಬಗ್ಗೆಯೂ ಗಮನ ಬೇಕು. ಇವರೆಲ್ಲ ಯಾಕೆ ಹೀಗಾದರು? ಈ ಸಮಸ್ಯೆಯ ಹಿಂದಿರುವ ಬೇರುಗಳೇನು ಎಂಬುದನ್ನು ಪತ್ತೆ ಮಾಡಬೇಕು. 

ಈ ನಿರಾಶ್ರಿತರ ಪೈಕಿ ಅದೆಷ್ಟೋ ಜನ ಉದ್ಯೋಗ ಹುಡುಕಿಕೊಂಡು ಎಲ್ಲೆಲ್ಲಿಂದಲೋ ಬೆಂಗಳೂರಿಗೆ ಬಂದು ಉದ್ಯೋಗ ಸಿಗದೇ ಹೀಗಾಗಿರುತ್ತಾರೆ. ಕೈಯಲ್ಲಿದ್ದ ದುಡ್ಡು ಖರ್ಚಾಗಿ, ಇರಲು ವಸತಿ ಇಲ್ಲದ, ಸ್ನಾನಕ್ಕೆ ಅವಕಾಶವಿಲ್ಲದ ವ್ಯಕ್ತಿಯು ತೊಟ್ಟ ಬಟ್ಟೆ ಕೆಲವೇ ದಿನಗಳಲ್ಲಿ ಕೊಳೆಯಾಗಿ, ಮಣ್ಣು, ಬೆವರುಗಳಿಂದ ಮಾಸಲಾಗಿ ಆ ವ್ಯಕ್ತಿ 'ಹುಚ್ಚ'ನಂತೆ ಕಾಣಲು ದಾರಿ ಮಾಡಿಕೊಡುತ್ತದೆ. ಜಗತ್ತು ಆತನನ್ನು ಆದಷ್ಟು ದೂರವಿಡಲು ಯತ್ನಿಸುತ್ತದೆ. ಇವೆಲ್ಲ ಬಾಧೆಗಳು ಆತನ ಮೆದುಳು ಮತ್ತು ಹೃದಯಗಳಲ್ಲಿ ಸುಪ್ತವಾಗಿ ಬೇರೂರಿ ಮಾನಸಿಕ ಅಸ್ವಸ್ಥನನ್ನಾಗಿಸುತ್ತವೆ. ಕಡೆಗೊಂದು ದಿನ ಆತ ಶಾಂತಲಾ ಸಿಲ್ಕ್ ಹೌಸ್ ಬಲಭಾಗದ ಪಾರ್ಕಿಗಂಟಿಕೊಂಡ ನಾಗರಕಟ್ಟೆ ಬಳಿಯೋ, ರೈಲ್ವೆ ಸ್ಟೇಷನ್ ಎದುರಿನ ಪಾರ್ಕಿನಲ್ಲೋ, ಕಿನೋ ಟಾಕೀಸ್ ಸಮೀಪದ ರೈಲ್ವೇ ಟ್ರ್ಯಾಕಿನ ಆಜುಬಾಜಿನಲ್ಲೋ ಒಂದು ನಿರ್ಜೀವ ವಸ್ತುವಿನಂತೆ ಉಳಿದುಬಿಡುತ್ತಾನೆ. ಹೆಣ್ಣಾದರೆ ಕಂಡಕಂಡವರ ತೃಷೆಗೆ ಆಹಾರವಾಗುತ್ತಾಳೆ. ಇಂಥವರು ಜಗತ್ತಿನ ಒಳಗಿದ್ದೂ ಹೊರಗುಳಿಯುವ ದುರ್ದೈವಿಗಳು, 'ಮೇರಾ ಭಾರತ ಮಹಾನ್ ಭಾರತ್' ಎನ್ನುವ ಹಳಸಲು ಡೈಲಾಗ್ ಹೊಡೆಯುವವರ ಕಣ್ಣಿಗೆ ಕಾಣದವರು… 

ಯುದ್ಧ ಸ್ಮಾರಕಗಳ ವಸ್ತು ಸಂಗ್ರಹಲಾಯ ಸ್ಥಾಪನೆಗೆ 100 ಕೋಟಿ ಖರ್ಚು ಮಾಡುವ ಮೋದಿ ಸರ್ಕಾರ, ಎಲ್ಲಾ ಗ್ರಾಮಗಳಿಗೂ ಇಂಟರ್ ನೆಟ್ ಸೌಲಭ್ಯ ಒದಗಿಸ ಬಯಸುವ ಮೋದಿ ಸರ್ಕಾರ, ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಸುಖಾಸುಮ್ಮನೆ 200 ಕೋಟಿ ಖರ್ಚು ಮಾಡುವ ಮೋದಿ ಸರ್ಕಾರ ಇಂತಹ ನಿರ್ಗಗತಿಕರ, ನಿರಾಶ್ರಿತರ ಬದುಕುವ ಹಕ್ಕಿಗಾಗಿ ಯೋಜನೆಗಳನ್ನು ರೂಪಿಸಬೇಕು. ಔಷಧದ ಬೆಲೆ ಇಳಿಸುವ ಮೋದಿ ಸರ್ಕಾರ ಇಂಥವರ ಆರೋಗ್ಯದ ಬಗ್ಗೆ ಚಿಂತಿಸಬೇಕು. ಪಾದರಕ್ಷೆಗಳ ಬೆಲೆ ಇಳಿಸುವ ಮೋದಿ ಸರ್ಕಾರ ಇಂಥವರು ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. 'ನಾನು ಮಹಾತ್ಮ ಗಾಂಧಿ ನೆಲದಿಂದ ಬಂದವನು' ಎಂದು ಪದೇ ಪದೇ ಹೇಳಿಕೊಳ್ಳುವ ಮೋದಿ, 'ಪ್ರತಿಯೊಬ್ಬ ಭಾರತೀಯನೂ ಸ್ವಾಭಿಮಾನದಿಂದ ಬದುಕಬೇಕು' ಎಂಬ ಗಾಂಧಿಯ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು. ಕಡೆಯ ಪಕ್ಷ ನಮ್ಮ ಕಾರ್ಪೋರೇಷನ್ನಿನವರಾದರೂ ಇಂತಹ ನಿರ್ಗತಿಕ, ನಿರಾಶ್ರಿತ, ಬುದ್ಧಿಮಾಂದ್ಯ, ಹುಚ್ಚರೆಂಬ ಹಣೆಪಟ್ಟಿಯ, ಅಸಯಾಯಕ ಜೀವಗಳನ್ನು ಮಾಗಡಿ ರಸ್ತೆಯ ಸುಮ್ಮನಹಳ್ಳಿಗೆ ಸಾಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು. 

ಈಗಷ್ಟೇ ಬಿಎಂಟಿಸಿ ಬಸ್ಸುಗಳ ಲೈಟುಗಳು ಹತ್ತಿಕೊಳ್ಳುತ್ತಿವೆ. ಡ್ರೈವರು ಗಣಪತಿ ಫೋಟೋಗೆ ಕಡ್ಡಿ ಹಚ್ಚುತ್ತಿದ್ದಾನೆ, ಕಂಡಕ್ಟರು ಕೈ ಮುಗಿಯುತ್ತಿದ್ದಾನೆ. ಇಲ್ಯಾರೋ ಪೇಪರುಗಳ ಬಂಡಲು ಕಟ್ಟುತ್ತಿದ್ದಾರೆ. ರೈಲು ನಿಲ್ದಾಣದ ಕಡೆಯಿಂದ ಬ್ಯಾಗು, ಲಗ್ಗೇಜು ಹೊತ್ತ ಪ್ರಯಾಣಿಕರು ಗುಂಪುಗುಂಪಾಗಿ ಹೊರಬರುತ್ತಿದ್ದಾರೆ. 'ಎಲ್ಲಿಗೆ ಸಾರ್? ಕಿದರ್ ಜಾನಾ? ಎಂಗೆ ಪೋಣು?' ಎಂದೆಲ್ಲಾ ಆಟೋದವರು ಅವರನ್ನು ಕೇಳುತ್ತಿದ್ದಾರೆ. ಟೀ ಅಂಗಡಿ ಸುತ್ತ ಜನ ಮುತ್ತಿದ್ದಾರೆ. ಪೋಲೀಸರ ಲಾಟಿ ಪೆಟ್ಟು ಕುಂಡಿಗೆ ಬೀಳುತ್ತಿದ್ದಂತೆಯೇ ಮೈ ಮುದುರಿ ಮಲಗಿದ್ದ ನಿರಾಶ್ರಿತರು ಒಬ್ಬೊಬ್ಬರೇ ಗಾಬರಿಯಿಂದ ಎದ್ದು ಕೂರುತ್ತಿದ್ದಾರೆ. 

ಭಾರತದ ಆಗಸದಿ ನವಸೂರ್ಯೋದಯವಾಗುತಿದೆ…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಅರಗಿಸಿಕೊಳ್ಳಲಾಗದ ಸತ್ಯಗಳು.
ಭಾರತ ಗಾಢಾಂದಕಾರದಲ್ಲಿ ಮಲಗಿದೆ.

hridaya shiva
hridaya shiva
9 years ago

ನಿಮ್ಮ ಓದಿಗೆ ಧನ್ಯವಾದಗಳು 

prashasti.p
9 years ago

ಪ್ರಸ್ತುತ ಪರಿಸ್ಥಿತಿಯ ದುರಂತ 🙁 ಊರಲ್ಲಿ ಕೆಲಸವಿಲ್ಲದೇ ತಾನೇ ಇದ್ದಬದ್ದೋರೆಲ್ಲಾ ಬೆಂಗಳೂರಿಗೆ ಬರೋದು ?
ಈ ಕೆಲಸವಿಲ್ಲದೇ ಬಂದು ನಿರ್ಗತಿಕರಾದೋರಲ್ಲಿ ಕನ್ನಡದವರಲ್ಲದೇ, ತಮಿಳ್ರು, ತೆಲುಗ್ರು, ಮಲೆಯಾಳಿಗಳು, ಉತ್ತರದವ್ರು ಎಲ್ಲಾ ಇದ್ದಾರೆ. ಹಾಗಾಗೇ ಈ ಎಲ್ಲಾ ನಿರಾಶ್ರಿತರ ಸೃಷ್ಟಿಯಲ್ಲಿ ಆಯಾ ರಾಜ್ಯ ಸರ್ಕಾರಗಳದ್ದು, ಊರಲ್ಲಿ ಕೆಲ್ಸ ಒದಗಿಸದೇ ಊರು ಬಿಡುವಂತೆ ಮಾಡಿದ ಪಂಚಾಯ್ತಿಗಳದ್ದು.. ಹೀಗೆ ದೇಶದ ತುಂಬೆಲ್ಲಾ ತುಂಬಿರೋ ಭ್ರಷ್ಟರ ಕೊಡುಗೆಯೇನು ಕಮ್ಮಿಯಿಲ್ಲ 🙁
ಒಬ್ಬ ಮೋದಿಯಿಂದ ಏನಾಗುತ್ತೆ ?  ಅರವತ್ತು ವರ್ಷಗಳಿಂದಾಗದ ಬದಲಾವಣೆ ಕೆಲ ದಿನಗಳಲ್ಲಿ ಆಗೋದು ಕನಸೇ ಸರಿ.
ಪ್ರತಿಮೆ ನಿರ್ಮಾಣಕ್ಕೆ, ಮತ್ತೊಂದಕ್ಕೆ ಅಂತ ಕೋಟಿಗಟ್ಲೆ ಸುರಿಯೋದು ಬೇಡಿತ್ತೆಂಬ ಮಾತು ಒಪ್ಪಬಹುದಾದ್ರೂ ಹೊಸ ಸರ್ಕಾರ ಕೆಲ ಹೊಸ ನಿರೀಕ್ಷೆಗಳನ್ನ ಹುಟ್ಟಿಸಿದ್ದೆಂತೂ ಹೌದು.. ನೋಡೋಣ ಏನಾಗತ್ತೆ ಅಂತ 🙂 🙁

hridaya shiva
hridaya shiva
9 years ago
Reply to  prashasti.p

ಕಾದು ನೋಡೋಣ…

Utham danihalli
9 years ago

Waw edi bengulurina chithrana mejasticnale darshana madsidree olleya lekana

hridaya shiva
hridaya shiva
9 years ago

hmmm

Hanamant haligeri
Hanamant haligeri
9 years ago

 Bengaloremba maha kadamnariya arambhika pputadanitide. munduvaresi..

hridaya shiva
hridaya shiva
9 years ago

ಬರಹ ಓದಿದ್ದಿಕ್ಕೆ ಥ್ಯಾಂಕ್ಸ್ ಬ್ರದರ್… 

amardeep.p.s.
amardeep.p.s.
9 years ago

ಚೆನ್ನಾಗಿದೆ ಕವಿಗಳೇ….

hridaya shiva
hridaya shiva
9 years ago
Reply to  amardeep.p.s.

thank you

ಶಿವಾನಂದ ಆರ್ ಉಕುಮನಾಳ
ಶಿವಾನಂದ ಆರ್ ಉಕುಮನಾಳ
8 years ago

ಈ ಲೇಖನ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ಬೇರೆ ದಾರಿ ತೋಚದೆ ಬಸವಳಿದು ಬಳಲುವ, ನಿರಾಶ್ರಿತರಾಗಿ ನರಳುವ,
ಬುಧ್ಧಿಮಾಂದ್ಯರಾಗಿ ಅಲೆಯುವ ಜನರ ಬದುಕಿಗೆ
ಹಿಡಿದ ಕನ್ನಡಿಯಂತಿದ್ದು ಇದರ ತೀಕ್ಷ್ಣ ಛಾಯೆ ಅಧಿಕಾರ ಹೊಂದಿದವರ ಮುಖಕ್ಕೆ ರಾಚುವುದೇ ಕಾಯ್ದುನೋಡಬೇಕಷ್ಟೆ.
– ಉಶಿರು(ಶಿವು)
ಉಕುಮನಾಳ ಶಿವಾನಂದ ರುದ್ರಪ್ಪ

11
0
Would love your thoughts, please comment.x
()
x