ಮಕ್ಕಳ ಮೇಲಿನ ದೌರ್ಜನ್ಯಗಳ ಹಲವು ಮುಖಗಳು: ಕೆ.ಎಂ.ವಿಶ್ವನಾಥ (ಮಂಕವಿ)

ನಮ್ಮ ದೇಶದಲ್ಲಿ ಮಕ್ಕಳೆಂದರೆ  ಹಲವು ಯೋಚನೆಗಳು ಮನದ ಮೂಲೆಯೊಳಗೆ ಮೂಡಿ ಬರುತ್ತವೆ. ನಮ್ಮ ಮಕ್ಕಳು ಬರಿ ಮಕ್ಕಳಲ್ಲ ಅವರು ಸಂಪೂರ್ಣ ವ್ಯಕ್ತಿಗಳು ಎಂದು ಪರಿಗಣಿಸಿ, ಅವರನ್ನು ತುಂಬ ಜಾಗುರೂಕತೆಯಿಂದ ಬೆಳೆಸಿ, ಅವರೇ ನಮ್ಮ ಭಾರತದ ಭವ್ಯ ಭವಿಷ್ಯ, ನಮ್ಮ ನಾಡನ್ನು ಆಳುವ ರಾಜಕಾರಣಿಗಳು ಹೀಗೆ ಹಲವು ಮಾತುಗಳು ನಮ್ಮಲ್ಲಿ ಕೇಳಿ ಬರುತ್ತವೆ.  ಆದರೆ ಇತ್ತೀಚಿಗೆ ನಮ್ಮ ದೇಶದಲ್ಲಿ ನಮ್ಮ  ಮಕ್ಕಳ ಮೇಲೆ ನಡೆಯುತ್ತಿರುವ ಹಲವು ದೌರ್ಜನ್ಯಗಳು ಸಾಕಷ್ಟು ವಿಚಿತ್ರ ಯೋಚನೆಗಳು ಒಡಮೂಡಿ ಬರುತ್ತಿರುವುದು ಕೂಡ ಗಮನಿಸಬೇಕಾದ ಅಂಶವೇ ಸರಿ.

ಪ್ರತಿ ಬಾರಿಯೂ ನಮ್ಮ  ಮಕ್ಕಳನ್ನು ಭಾವೀ ಪ್ರಜೆಗಳಾಗಿ ಸಧ್ಯದ ಮಕ್ಕಳಾಗಿ  ಬಿಂಬಿಸಿದ್ದದೇ ಹೆಚ್ಚು. ಮಕ್ಕಳ ಆಶೆ ಆಕಾಂಕ್ಷೆಗಳು ಸದಾ ಕಾಲವು ವಯಸ್ಕರರಿಂದ ಹೇರಲ್ಪಟ್ಟವು ಒತ್ತಡದಿಂದ ಕೊಡಲ್ಪಟ್ಟವು ಮಕ್ಕಳ ಧ್ವನಿಯನ್ನು ಹಿಡಿದಿಟ್ಟದ್ದೇ ವಯಸ್ಕರಾದವರ ಬಹುದೊಡ್ಡ ಸಾಧನೆ, ಹೆಚ್ಚು ಬೆಳವಣಿಗೆ ಹೊಂದದ ಮಕ್ಕಳ ದೇಹವನ್ನು ಆಟಿಕೆಗಳಂತೆ, ಪ್ರಯೋಗದ ವಸ್ತುಗಳಂತೆ ಬಳಕೆ ಮಾಡಿದ್ದು ಹಿರಿಯರಾದ ನಮ್ಮ ಬಹುದೊಡ್ಡ ಸಾಧನೆ,ಆಗ ಮಕ್ಕಳು ಧ್ವನಿ ಎತ್ತಿ 'ಸಾಧ್ಯವಿಲ್ಲ' ಎಂದು ನೋವಿನ ಧ್ವನಿ ಎತ್ತಿದಾಗ ವಯಸ್ಕರು ತನ್ನ ಅನುಭವದ ಕತೆಗಳನ್ನು ಹೇಳಿ ಮಕ್ಕಳಿಗೆ ಮತ್ತಷ್ಟು ಒತ್ತಡವನ್ನುಂಟು ಮಾಡಿದ ಅನೇಕ ಸಂಗತಿಗಳು ಮನುಷ್ಯ ಮಾನವೀಯತೆ ಮರೆತಿರುವುದಕ್ಕೆ ಕನ್ನಡಿ ಹಿಡಿದಂತಿದೆ.

ನಮ್ಮ ಪ್ರಪಂಚದ ಇತಿಹಾಸದಲ್ಲಿ ದೇಶ ದೇಶದಗಳ ನಡುವಿನ ಮನಸ್ಥಾಪದಲ್ಲಿ ಯುದ್ಧ ಸಂಭವಿಸಿ ಸೋತ ದೇಶದ ನಾಗರೀಕರನ್ನು ಅವಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು, ಇಷ್ಟೆಲ್ಲಾ ನಡೆದಾಗಲೂ ಅಲ್ಲಿಯ ವಯಸ್ಕರರಿಗೆ ಆದ ಹಾನಿಯನ್ನೇ ಲೆಕ್ಕ ಹಾಕಿದ್ದೇ ಹೆಚ್ಚು, ಮಕ್ಕಳ ಮೇಲಾದ ಹಿಂಸೆಯಂತಹ ಚಟುವಟಿಕೆಗಳು ದೌರ್ಜನ್ಯಗಳು ಯಾವತ್ತೂ ಅವಮಾನವೀಯ ಎಂದು ಲೆಕ್ಕಿಸಲೇ ಇಲ್ಲ.

ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸೆ ಮಾನವ ನಿರ್ಮಿತ ವಾತಾವರಣದಿಂದ ಆಗಿರುವುದು ಒಂದೆಡೆಯಾದರೆ ಪ್ರಕೃತಿ ಕೂಡ ಹಲವು ಬಾರಿ ಮನುಕುಲದ ಮೇಲೆ ತನ್ನ ಕ್ರೂರ ಛಾಯೆಯನ್ನು ತೋರಿಸಿದೆ, ಆಗ ಮಕ್ಕಳಿಗೆ ಬಂದೆರಗುವ ಶೋಚನೀಯ ಸ್ಥಿತಿ ಆ ಮೂಲಕ ಮಕ್ಕಳ ಬೆಳವಣಿಗೆಯಲ್ಲಿ ಆಗುವ ಮಾರಕ ಪರಿಣಾಮವು ನಮ್ಮ ಕಣ್ಣಿಗೆ ಬಿದ್ದರೂ ಅಂತಹ ದೃಶ್ಯಗಳನ್ನು ನೋಡಿ ಅನುಕಂಪ ತೋರಿದ್ದೇ ಹೆಚ್ಚು ಯಾವತ್ತೂ ಮಗುವಿನ ಮನಸ್ಸನ್ನು ಅರಿಯುವ ಪ್ರಯತ್ನ ನಾವೆಲ್ಲ ಮಾಡಲೇ ಇಲ್ಲ.

ವಯಸ್ಕರು ತನಗೆ ಶೋಷಣೆಯ ಮತ್ತು ಹಿಂಸೆಯಂತಹ ಅನುಭವವಾದಾಗ ಧ್ವನಿ ಎತ್ತಿದಾಗ ಅದರ ಗಂಭೀರತೆಯನ್ನು  ಅರಿಯುವ ನಾವು ಮಕ್ಕಳ ಮನಸ್ಸಿಗೆ ಆಗುವ ನೋವು ಕೇಳಿಸುವುದೇ ಇಲ್ಲ. ದೇಶದ ಅಥವಾ ರಾಜ್ಯದ ಅಭಿವೃದ್ಧಿಯನ್ನು ನಾವು ಆದಾಯದ ಗಳಿಕೆ, ಮಾನವ ಸಂಪನ್ಮೂಲದ ಬಳಕೆ ಮತ್ತು ಉತ್ಪತ್ತಿಗಳ ಮೇಲೆಯೇ ಅಳೆದು ತೂಗುತ್ತೇವೆಯೇ ಹೊರತು ರಾಜ್ಯದ ಅಥವಾ ರಾಷ್ಟ್ರದ ಮಕ್ಕಳ ಸುರಕ್ಷಿತ ಜನನ, ಮಕ್ಕಳ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡುವುದಿಲ್ಲ.

ಪ್ರತಿಯೊಬ್ಬನು ತನ್ನ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಿ ಪ್ರತಿಷ್ಟೆ ಮೆರೆಯುವುದರಲ್ಲೇ ತೊಡಗಿಕೊಂಡಿದ್ದು ಯಾವೊಬ್ಬ ಸಾಮಾನ್ಯ ವ್ಯಕ್ತಿಯೂ  ತನ್ನ ಮನೆಯಲ್ಲಿರುವ ಮಕ್ಕಳ ಮೇಲೆ ನಡೆಯುವ ಹಿಂಸೆ ಮತ್ತು ದೌರ್ಜನ್ಯವನ್ನು ಕಂಡು ಕಾಣದ ಕುರುಡನಾಗಿದ್ದಾನೆ, ಆಸ್ತಿ ಮತ್ತು ಹಣ ಗಳಿಕೆಯ ನಾಗಾಲೋಟದಲ್ಲಿ ಮಗುವಿನ ನೋವನ್ನು ಅರ್ಥೈಸುವುದನ್ನೇ ಮರೆತು  ಪ್ರತಿ ದಿನ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಾನೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ(1989)ಗೆ ಭಾರತ ಒಪ್ಪಿಗೆ ಸೂಚಿಸಿದ್ದರೂ ಮಕ್ಕಳ ಹಿತರಕ್ಷಣೆ ಅವರಿಗೆ ಅನುಕೂಲಕರವಾದ ಸ್ನೇಹ ಪೂರ್ವಕ ವಾತಾವರಣ ನೀಡುವಲ್ಲಿ ಇನ್ನೂ ಯಶಸ್ವೀಯಾಗಿಲ್ಲ ಎನ್ನುವುದು ನಾಚಿಕೆಗೇಡು. ಮಕ್ಕಳ ಹಕ್ಕುಗಳ ರಕ್ಷಣೆಯ ಹೆಸರಲ್ಲಿ ಅನೇಕ ಕಾರ್ಯಕ್ರಮಗಳು ಚಾಲನೆಯಲ್ಲಿದ್ದರೂ ಇನ್ನು ಮಗುವಿನ ಅಗತ್ಯತೆ ಹಾಗೂ ಅವಕಾಶವಂಚಿತ ಮಗುವಿನ ಸಂಪರ್ಕವನ್ನು ನಾವು ಸಾಧಿಸಿಲ್ಲ. 

ವೈಯಕ್ತಿಕವಾಗಿ ಯೋಚಿಸಿದ್ದರೂ ನಮ್ಮ ಸುತ್ತ ಮುತ್ತ ಮಗು ಸ್ನೇಹಿ ವಾತಾವರಣ ಉಂಟುಮಾಡುವಲ್ಲಿಯೂ ನಾವು ಗಮನಹರಿಸಿಲ್ಲ. ಅದೆಷ್ಟೂ ಬಾರಿ ಮಕ್ಕಳ ಹಕ್ಕುಗಳ ರಕ್ಷಣೆ ಎಂದರೆ ಮಗುವಿಗೆ ಮಾಹಿತಿ ನೀಡಿ ನಿಮಗೆ ಹಕ್ಕುಗಳಿವೆ, ನೀವು ಹೀಗೆ ಮಾಡಿ ಹಾಗೆ ಮಾಡಬೇಡಿ ಎನ್ನುವ ಮಾಹಿತಿಗಳ ಮಹಾ ಪೂರವೇಹರಿಸಲಾಗಿದೆ. ಇತ್ತೀಚೆಗೆ ಅರಿವನ್ನು ಉಂಟುಮಾಡುವ ದೃಷ್ಟಿಯಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮಗಳು ಮಕ್ಕಳ ಮನಸನ್ನು ಅರಿಯದೆ ಒಂದು ದಿನದ ಹಬ್ಬವೆಂಬಂತೆ ಪ್ರಚಾರಕ್ಕೆಂಬಂತೆ ಬಿಂಬಿತವಾಗಿದೆ.

ಮಕ್ಕಳಿಗೆ ಬೇಕಾಗಿರುವುದು ಪ್ರೇರಕ ಮತ್ತು ಭಯ ರಹಿತ ವಾತಾವರಣ ಇವನ್ನು ಕಲ್ಪಸದೆ ಮಕ್ಕಳ ಹಕ್ಕುಗಳ ಮಾಹಿತಿ ಅರಿವಿನಿಂದ ಸಾಧನೆ ಸಾಧ್ಯವಾಗಲಾರದು. ಮಕ್ಕಳಿಗೆ ಹಕ್ಕುಗಳನ್ನು ನೀಡುವುದಲ್ಲ, ಹಕ್ಕುಗಳೆಂಬುದು ಬಳುವಳಿಯೂ ಅಲ್ಲ  ಬಿಕ್ಷೆಯೂ ಅಲ್ಲ, ಹಾಗೆಯೇ ಹಕ್ಕುಗಳೆಂಬುದು ಅನುಭೂತಿಯಿಂದ ನೀಡುವ ವಸ್ತುಗಳಲ್ಲ, ಮಕ್ಕಳ ಹಕ್ಕುಗಳೆಂದರೆ ಮಗು ಬದುಕಲು, ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ಮಾಡಿಕೊಡುವ ಮತ್ತು ಮಗುವಿನ ಬೆಳವಣಿಗಗೆ ಬೇಕಾಗುವ ವ್ಯವಸ್ಥೆಗಳನ್ನು ಪೂರಕವಾಗಿಸುವುದೇ ಆಗಿದೆ. 

ಮಕ್ಕಳ ದೌರ್ಜನ್ಯಗಳ ಹಲವು ಮುಖಗಳು.
ಇಡಿ ಪ್ರಪಂಚಕ್ಕೆ ಅನರ್ಘ್ಯ ಕೊಡುಗೆಗಳನ್ನು ನೀಡಿದ ಭಾರತದಂತಹ ಭವ್ಯ ದೇಶದಲ್ಲಿ ನಮ್ಮ ಮಕ್ಕಳು ಎಲ್ಲಿ ಸುರಕ್ಷಿತ ಎಂದು ಯೋಚಿಸಿದರೆ ಯಾಕೊ ಎಲ್ಲಿಯೂ ಸುರಕ್ಷಿತವಿಲ್ಲ ಎಂಬ ಕಲ್ಪನೆ ಮೂಡು ಬರುತ್ತಿರವುದು ಇಂದಿನ ಸ್ಥಿತಿಗತಿ ಗಮನಿಸಿದಾಗ ನಮ್ಮ ಮಕ್ಕಳು  ಪ್ರತಿಯೊಂದು ಕ್ಷೇತ್ರದಲ್ಲಿ  ಹಲವಾರು ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿರುವರು ಅವುಗಳನ್ನೊಮ್ಮೆ ಮೆಲುಕು ಹಾಕಿದಾಗ ಮನಸ್ಸು ಝಲ್ ಎನಿಸುತ್ತದೆ. 

ಸ್ವಂತ ಮನೆಯಲ್ಲಿ 
ಮಕ್ಕಳು ಮನೆಯಲ್ಲಿ ಸೇಫ್ ಅಂದುಕೊಂಡರಾ? ಇಲ್ಲ ಸ್ವತ: ಸಂಬಂದಿಕರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಕ್ಕಳನ್ನು ನಾವು ದಿನ ಬೆಳೆಗಾದರೆ  ಸುದ್ದಿ ನೋಡುತ್ತೇವೆ. ತಂದೆ ಮಗಳ ಮೇಲೆ ದೌರ್ಜನ್ಯ, ತಾಯಿ ಮಗಳ ಮೇಲೆ ದೌರ್ಜನ್ಯ, ಅಣ್ಣ ತಂಗಿಯ ಮೇಲೆ ದೌರ್ಜನ್ಯ ಹೀಗೆ ಮಾನಸಿಕ,ದೈಹಿಕ,ಸಾಮಾಜಿಕ, ಕಿರುಕುಳ ಮಕ್ಕಳು ಬೇಡವೆಂದರು ಕೊಡುವ ವಿಚಾರಗಳು ಒತ್ತಡದ ವಾತಾವರಣದಲ್ಲಿ ನಮ್ಮ ಮಕ್ಕಳು ಹೇಗೆತಾನೆ ಬೆಳೆಯಲು ಸಾಧ್ಯ ಅವರು ನಾವು ಬೆಳೆಸಿದ ಹೂವುಗಳು ಆಗದೇ ಅವರೆಲ್ಲ ನಾವು ಬೆಳೆಸುತ್ತಿರುವ ಭಯಂಕರ ವಾತಾವರಣದ ಬೆಂಕಿಯ  ಹೂವು ಇಂದು ಚಿಕ್ಕಂದಿನಲ್ಲಿ ಚೆಂದ ಅನಿಸಿದರೆ ಬೆಳೆದು ನಿಂತಾಗ ಚುಚ್ಚುವ ಮುಳ್ಳುಗಳಾಗಿ ಪರಿಣಮಿಸುತ್ತವೆ. ನೀವು ಮಕ್ಕಳನ್ನು ಚಿಕ್ಕಂದಿನಲ್ಲಿ ಹಾಸ್ಟೆಲ್ ನಲ್ಲಿ ತಂದೆ ತಾಯಿ ಪ್ರೀತಿಯಿಲ್ಲದೇ ಬೆಳೆಸುತ್ತೀರಿ ನೀಮಗೆ ವಯಸ್ಸಾದ ನಿಮ್ಮ ಮಕ್ಕಳು ನಿಮ್ಮನ್ನು ವೃದ್ದಾಶ್ರಮದಲ್ಲಿ ಇರಿಸುವ ಕಾಲ ಬರುತ್ತದೆ . ಮನೆಯಲ್ಲಿ ಅಪ್ಪ ಅಮ್ಮ ಹೇಳಿದ ಕೋರ್ಸ್ ಓದಿ ಬದುಕಿನುದ್ದಕ್ಕೂ ತಮ್ಮೊಳಗಿನ ಅದಮ್ಯ ಚೇತನ ತೋರದೇ ಬೆಳೆಯುತ್ತಿರುವ ಮಕ್ಕಳು ನಮ್ಮ ಮನೆಯಲ್ಲಿದ್ದಾರೆ.  

ಶಾಲೆಗಳಲ್ಲಿ  
ಶಾಲೆ ನಮ್ಮ ಜೀವನ ರೂಪಿಸುವ ಪ್ರೇರಕ ಶಕ್ತಿ ಶಾಲೆ ಕಲಿಯುವುದು ದೇಶದಲ್ಲಿ ಬಹು ನಿರ್ಣಯ ಪಾತ್ರ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ . ಹಲವು ರೀತಿಯಲ್ಲಿ ತನ್ನ ಭವಿಷ್ಯದ ಜವಾಬ್ದಾರಿಯನ್ನು ಅರೆಯುವ ಕೆಲಸ ಮಕ್ಕಳು ಶಾಲೆಯಲ್ಲಿ ಮಾಡಬೇಕು ನಮ್ಮ ಮಕ್ಕಳ  ವಿಪರ್ಯಾಸ ನೋಡಿ ಶಾಲೆ ಕಲಿಸುವ ಶಿಕ್ಷಕರಿಂದ, ಶಾಲೆಯ ಸಹಪಾಠಿಗಳಿಂದ ಹಲವು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಶಾಲೆಯ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಯ ಮೇಲೆ ಲೈಂಗಿಕ, ಮಾನಸಿಕ ದೌರ್ಜನ್ಯ ಮಾಡುವ ಕಾಲ ಬಂದು ಒದಗಿದೆ ಇನ್ನೂ ತನ್ನ ಸಹಪಾಠಿಗಳಿಂದಲೂ ನಮ್ಮ ಮಕ್ಕಳು ಸೇಫ್ ಇಲ್ಲ ತನ್ನ ಹೆಣ್ಣು ಮಗು ಸಹಪಾಠಿಗಳಿಗೆ ಮೋಸದಿಂದ ಕರೆದೊಯ್ದು ಹಲವು ರೀತಿಯ ದೌರ್ಜನ್ಯಗೊಳಪಡಿಸುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯಿವೆ. 

ಬಾರ್ ಮತ್ತು ಹೋಟೆಲ್ ಗಳಲ್ಲಿ  
ಮನೆಯಲ್ಲಿ ಒಂದು ತರಹದ ದೌರ್ಜನ್ಯವಾದರೆ ನಮ್ಮ ಮಕ್ಕಳು ಒತ್ತಡ ಪೂರ್ವಕವಾಗಿ ಅನುಭವಿಸುವ ಮತ್ತೊಂದು ಕ್ಷೇತ್ರವೆಂದರೆ ಈ ಹೋಟೆಲ್ ಬಾರ್ ಗಳಲ್ಲಿ ಕೆಲಸ ಮಾಡುವುದು ದೈಹಿಕವಾಗಿ ಹಿಂಸೆಗೆ ಒಳಪಡುವ ನಮ್ಮ ಮಕ್ಕಳು ಅಲ್ಲಿನ ಅನೇಕ ರೀತಿಯ ಮಾನಸಿಕ ದೌರ್ಜನ್ಯಕ್ಕೂ ಒಳಗಾಗುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರಕಾರ ನಮ್ಮ ಮಕ್ಕಳಿಗಾಗಿಯೇ ಅನೇಕ ಅನೇಕ ಯೋಜನೆ ರೂಪಿಸಿದ್ದು ಕೋಟ್ಯಾನು ಕೋಟಿ ಹಣ ವ್ಯಯ ಮಾಡುತ್ತಿದ್ದು ಅದರ ಋಣ ಮಾತ್ರ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ ನಮ್ಮ ಮಕ್ಕಳು ಹೋಟೆಲ್ ಬಾರ್ ಗಳಲ್ಲಿ ದುಡಿಯುವುದು ತಪ್ಪುತ್ತಿಲ್ಲ. 

ಕೃಷಿಯಲ್ಲಿ  
ನಮ್ಮ ದೇಶದ ಪ್ರಧಾನ ಕಸುಬು ಕೃಷಿ ಈ ದೇಶದ ಬೆನ್ನುಲುಬು ರೈತ ಎಂದೆಲ್ಲ ಮಾತನಾಡುತ್ತೇವೆ. ಆದರೆ ನೈಜವಾಗಿ ಕೃಷಿಯಲ್ಲಿ ಹೆಚ್ಚು ಕೆಲಸ ಮಾಡುವ ವ್ಯಕ್ತಿ ಮಕ್ಕಳು ಎಂಬ ಕಲ್ಪನೆ ನಮಗೆ ಮೂಡುವುದೇ ಇಲ್ಲ ಕಾರಣ ಅವರು ಮಕ್ಕಳು ಅವರೇನು ಮಾಹಾ ಕೆಲಸ ಮಾಡುವರು ಎಂಬ ಅಸಡ್ಡೆ ಮನೋಭಾವ. ನೈಜವಾಗಿ ಕಡಿಮೆ ಕೂಲಿಗೆ ಅತಿಹೆಚ್ಚು ಕೆಲಸ ಬಹು ನಿಷ್ಠೆಯಿಂದ ಕೆಲಸ ಮಾಡುವ  ವ್ಯಕ್ತಿಗಳು ಮಕ್ಕಳು ಮಾತ್ರ. ಹಿರಿಯ ಕೂಲಿ ಆಳುಗಳಾಗದರೆ ಊಟಕ್ಕೆ, ತಿಂಡಿಗೆ, ಬೀಡಿ ಸಿಗರೇಟು ಸೇದುವುದಕ್ಕೆ ಹಾಗೆ ಹೀಗೆ ಕೂಲಿ ದಿನದ ಸಮಯದಲ್ಲಿ ಕಾಲ ಕಳೆಯುವುದು ಹೆಚ್ಚು ಆದರೆ ಮಕ್ಕಳು ಇದಾವುದು ಮಾಡದೇ ಇರುವ ವ್ಯಕ್ತಿಗಳು ಮತ್ತೇ ಬೇಸರಿಸಿಕೋಳ್ಳುವುದಿಲ್ಲ ಹಾಗೂ ನಾನು ಮಾಡಲಾರೆ ಎಂಬ ವಾದವಿಲ್ಲ ಅದರಲ್ಲಿಯೇ ಖುಷಿಯಾಗಿ ತೊಡಗಿಸಿಕೊಳ್ಳುವ ಮಕ್ಕಳು ನಿಜವಾಗಿ ದುಡಿಯುತ್ತಾರೆ ಹೆಚ್ಚಿಗೆ ಕೂಲಿ ಕೇಳುವುದಿಲ್ಲ ಸುಮ್ಮನೆ ಕೆಲಸ ಮಾಡಿಕೊಂಡು ಮುನ್ನಡೆಯುತ್ತಾರೆ ಇಲ್ಲಿಯೂ ಮಕ್ಕಳಿಗೆ ಕೆಲಸ ಕೊಡುವ ಮೂಲಕ ನಾವು ದೈಹಿಕ ದೌರ್ಜನ್ಯ ಮಾಡುತ್ತಿದ್ದೇವೆ ಅನಿಸುತ್ತಿದೆ ಅಲ್ಲವಾ?

ಕಾರ್ಖಾನೆಗಳಲ್ಲಿ 
ನಮ್ಮ ದೇಶದಲ್ಲಿರುವ ಅದೆಷ್ಟೊ ಕಾರ್ಖಾನೆಗಳಲ್ಲಿ ಮಕ್ಕಳು ಇಲ್ಲದೇ ಕೆಲಸ ನಡೆಯುವುದೇ ಇಲ್ಲ ಚಿಕ್ಕ ಕಾರ್ಖಾನೆಯಿಂದ ಹಿಡಿದು ಅತೀ ದೊಡ್ಡ ಕಾರ್ಖಾನೆಯವರೆಗೂ ಮಕ್ಕಳು ಕೆಲಸಕ್ಕೆ ಬೇಕೆ ಬೇಕು. ಅಲ್ಲಿನ ಅವರ ದೌರ್ಜನ್ಯ ಅಲ್ಲಿ ಹೋಗಿ ಗಮನಿಸಿದವರೇ ಬಲ್ಲರು ನಿಜಕ್ಕೂ ಆ ಮಕ್ಕಳ ವೇದನೆ ಹೇಳತೀರದು. ದೈಹಿಕವಾಗಿ ಎಷ್ಟು ಕುಗ್ಗಿ ಹೋಗುತ್ತಾರೆ ಎಂದರೆ ಅವರ ಸ್ಥಿತಿಗತಿ ಈ ಕಣ್ಣುಗಳ ಮೂಲಕ ನೋಡಲಾಗದು ಉಂಡು ಆಡುವ ವಯಸ್ಸಿನಲ್ಲಿ ಎಂತಹದ್ದೊ ದೌರ್ಜನ್ಯಕ್ಕೆ ಒಳಗಾಗುತ್ತಾರೆ ನಮ್ಮ ಮಕ್ಕಳು.  

ಸರಕಾರೇತರ ಸಂಸ್ಥೆಗಳಲ್ಲಿ  
ಇತ್ತೀಚಿಗೆ ಮಕ್ಕಳ ಹೆಸರಮೇಲೆ ಕೆಲಸ ಮಾಡುವ ಹಾಗೂ ಮಕ್ಕಳ ಹೆಸರ ಮೇಲೆ ಹಲವು ಮಕ್ಕಳ ಮೇಲಿನ ದೌರ್ಜನ್ಯ ಮಾಡುತ್ತಿರುವ ಸರಕಾರೇತರ ಸಂಸ್ಥೆಗಳನ್ನು ನಾವಿಂದು ನಮ್ಮ ದೇಶದಲ್ಲಿ ಕಾಣುತ್ತೇವೆ. ಮಕ್ಕಳನ್ನು ರಕ್ಷಣೆ ಮಾಡುತ್ತೇವೆ ಎಂಬ ಸುಳ್ಳು ವಾದ ಮುಂದೆ ಮಾಡುತ್ತ ನೈಜವಾಗಿ ಮಕ್ಕಳ ಮೇಲಿನ ದೌರ್ಜನ್ಯ ಮಾಡುತ್ತಿರುವೇವು ಎಂಬ ಕಲ್ಪನೆ ಅವರಿಗಿಲ್ಲ. ಬಾಲಕಾರ್ಮಿಕರು, ಬಾಲ್ಯ ವಿವಾಹಕ್ಕೆ ಒಳಪಟ್ಟ ಮಕ್ಕಳು, ಮನೆಯಿಂದ ಓಡಿಬಂದ ಮಕ್ಕಳು, ಕಾಣೆಯಾದ ಮಕ್ಕಳು, ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು, ಅನಾಥ ಮಕ್ಕಳು ಹೀಗೆ ಈ ಮಕ್ಕಳನ್ನು ಅವರವರ ಮನೆಗೆ ಸೇರಿಸದೇ ತಮ್ಮ ಸ್ವಂತ ಲಾಭಕ್ಕಾಗಿ ಮಕ್ಕಳನ್ನು ಅವರ ಸಂಸ್ಥೆಯಲ್ಲಿಟ್ಟು ಅನೇಕ ರೀತಿಯ ಕೆಲಸಕ್ಕೂ ಬಳಕೆ ಮಾಡುತ್ತಾರೆ ಜೊತೆಗೆ ಶಿಕ್ಷಣ ಕೊಡುವ ಹೆಸರಿನಲ್ಲಿ ಮಕ್ಕಳ ನೈಜ ಬದುಕಿನೊಂದಿಗೆ ಆಟ ಆಡುತ್ತಿದ್ದಾರೆ. 

ಅಧಿಕಾರಿಗಳ ಮನೆಗಳಲ್ಲಿ  
ಮಕ್ಕಳ ಕ್ಷೇತ್ರದಲ್ಲಿ ದಿಗ್ಗಜರೆನಿಸಿರುವ ಅದೆಷ್ಟೊ ಅಧಿಕಾರಿಗಳು ಐಎಸ್, ಕೆಎಸ್ ಅಧಿಕಾರಿಗಳ ಮನೆ ಕೆಲಸಕ್ಕೆ ಮಕ್ಕಳು ಬಿಟ್ಟು ಬೇರೆ ಯಾರು ಇರುವುದಿಲ್ಲ. ಆ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದು ಸುಮ್ಮನೆ ಕುಳಿತುಕೊಳ್ಳುವ ಅಧಿಕಾರಿಗಳನ್ನು ನಮ್ಮ ದೇಶ ಹೊಂದಿದೆ.  ಪ್ರತಿಯೊಬ್ಬ ಉನ್ನತ ಅಧಿಕಾರಿಗಳ ಮನೆಯಲ್ಲಿ ಮಕ್ಕಳಿದ್ದಾರೆ ಕೆಲವೊಮ್ಮೆ ಹೊರಬರುತ್ತಾರೆ ಕೆಲವೊಮ್ಮೆ ಹೊರಗೆ ಕಾಣುವುದಿಲ್ಲ ತಾಯಿಯ ಕೆಲಸದಲ್ಲಿ ಸಹಾಯ ಮಾಡುವಳು ಎಂಬ ನೆಪದಲ್ಲಿ ದೊಡ್ಡ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. 

ಹೀಗೊಮ್ಮೆ ನಮ್ಮ ಚಿಂಥನೆ ಮಕ್ಕಳ ಕಡೆಗೆ ಹರಿಸಿದರೆ ನಮ್ಮ ಮಕ್ಕಳು ಎಲ್ಲಿ ಸೇಫ್ ಎಂಬ ಪ್ರಶ್ನೆ ಎದುರಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ನಮ್ಮ ಮಕ್ಕಳು ಎಲ್ಲಿಗೆ ಹೋಗಬೇಕು ಪ್ರತಿಯೊಂದು ರಂಗದಲ್ಲಿಯೂ ಮಕ್ಕಳು ಮೂಲೆ ಗುಂಪಾದರೆ ಅವರು ಯಾವ ರಂಗದಲ್ಲಿ ಮುನ್ನಗ್ಗಬೇಕು. ಮಕ್ಕಳಿಗೆ ಅವರ ಬಾಲ್ಯದಲ್ಲಿ ಸಿಗಬೇಕಾದ ಸೌಲಭ್ಯ ಹಾಗೂ ಹಕ್ಕುಗಳು ಸಿಗದೇ ಹೋದರೆ ಅವರೆಲ್ಲಿ ಸೇಫ್ ಆಗಿ ಬದುಕಬೇಕು ನಾವೆಲ್ಲ ತಿಳಿದೊ ತಿಳಿಯದೋ ಮಕ್ಕಳ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆ ಮಾಡುತಿದ್ದೇವೆ. ಮಕ್ಕಳ ಜೊತೆಗೆ ತಾರತಮ್ಯವೂ ಅಷ್ಟೆ ಸರಿಯಾಗಿ ಮಾಡುತ್ತಿದ್ದೇವೆ. 

ಮನೆಯಲ್ಲಿ ಮಕ್ಕಳೆಂದರೆ ಏನೊ ಅಸಡ್ಡೆ ಇರಲಿಬಿಡು ಅವೆಷ್ಟು ತಿನ್ನುತ್ತವೆ. ಅವರಿಗೇಕೆ ಬೇಕು, ಅವರ ಅವಶ್ಯಕತೆ ಏನಿದೆ ಅವರು ಲೆಕ್ಕಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತವೆ. ಇನ್ನೂ ಈ ಬಸ್ ನಲ್ಲಿ ನಿರ್ವಾಹಕ ಟಿಕೇಟ್ ಮಾತ್ರ ಸರಿಯಾಗಿ ತೆಗೆದುಕೊಳ್ಳುತ್ತಾನೆ ಆಸನ ವ್ಯವಸ್ಥೆ ಕೊಡುವಾಗ ಮಾತ್ರ "ಏ ನೀನು ಚಿಕ್ಕವನು ಸ್ವಲ್ಪ ನಿಂತಕೊ ದೊಡ್ಡವರು ಕುಳಿತುಕೊಳ್ಳಲಿ" ಅಂತಾನೆ ಇದು ನಮ್ಮ ಮಕ್ಕಳಿಗೆ ಇನ್ನೊಂದು ತರಹದ ದೌರ್ಜನ್ಯ ಎನಿಸುತ್ತದೆ. 

ಇದೀಗ ಮತ್ತೆ ಶಾಲೆ ಪ್ರಾರಂಭೋತ್ಸವ ನಡೆದಿದೆ ಈ ಸಂದರ್ಭದಲ್ಲಿ ಶಾಲೆಯ ಆಸೆ ಮನದೊಳಗಿದ್ದರು ಶಾಲೆಯ ಮುಖ  ನೋಡಲು ಆಗದೇ ಹಲವು ರೀತಿಯಲ್ಲಿ ತಮ್ಮ ಬಾಲ್ಯದ ಹಲವು ಹಕ್ಕುಗಳಿಂದ ವಂಚಿತರಾಗಿರುವ ಮಕ್ಕಳಿದ್ದಾರೆ. ಸಮಾಜದ ಒಬ್ಬ ವ್ಯಕ್ತಿಯಾಗಿ ನಾವೆಲ್ಲ ನಮ್ಮ ಅಕ್ಕ ಪಕ್ಕದಲ್ಲಿ ಕಂಡು ಬರುವ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ನಮ್ಮ ಕೈಲಾದ ಧ್ವನಿ ಎತ್ತುವ ಮೂಲಕ ಮಕ್ಕಳ ಹಕ್ಕುಗಳನ್ನು ಕಾಯುವುದು ಒಳಿತು ಉತ್ತಮ ಶಾಲೆ, ಉತ್ತಮ ಆಹಾರ, ಪೋಷಣೆ ಮತ್ತು ರಕ್ಷಣೆ ಎಲ್ಲ ಮಕ್ಕಳಿಗೆ ಕೊಡುಸುವಲ್ಲಿ ಸಹಕರಿಸೋಣಾ ಸ್ನೇಹಿತರೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Shankar
Shankar
9 years ago

Dear Sir

It was very good Article sir realy i appreciate ur article

1
0
Would love your thoughts, please comment.x
()
x