ಇಂತಿ: ಬಸವರಾಜು ಕ್ಯಾಶವಾರ

ಪ್ರೀತಿಯ ಚಂದ್ರು,
 
ಕಳೆದ ಹತ್ತು ವರ್ಷಗಳಿಂದ್ಲೂ ದಿನವೂ ಪುಸ್ತಕ ತೆಗೆದು ಮತ್ತೆ ಮತ್ತೆ ನೋಡ್ತಾನೇ ಇದ್ದೀನಿ, ಆದರೆ ನೀನು ಕೊಟ್ಟ ನವಿಲುಗರಿ ಮರಿ ಹಾಕಿಲ್ಲ. ಆದ್ರೆ ಇವತ್ತಲ್ಲ ನಾಳೆ ಅದು ಮರಿ ಹಾಕುತ್ತೆ ಅಂತ ಕಾಯುತ್ತಿದ್ದೇನೆ. ವಿಶೇಷ ಅಂದ್ರೆ ನಮ್ಮಿಬ್ಬರ ನಡುವೆ ಇದ್ದ ಗೆಳೆತನ ಮಾಗಿ ಪ್ರೇಮದ ಮರಿ ಹಾಕಿದೆ.
 
ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲೂ ಹಳ್ಳಿಯ ಆ ಹೈಸ್ಕೂಲಿನ ದಿನಗಳು, ನಮ್ಮಿಬ್ಬರ ಬಾಲ್ಯದ ಸಂತಸದ ಕ್ಷಣಗಳು ಮತ್ತೆ ಮತ್ತೆ ನೆನಪಾಗ್ತಿವೆ. ನನ್ನ ಕೋಣೆ ತುಂಬೆಲ್ಲಾ ಹತ್ತು ವರ್ಷಗಳ ಹಿಂದೆ ನೀನು ತಂದು ಕೊಟ್ಟ ಜಾತ್ರೆಯ ಬಳೆ, ಕನ್ನಡಕ, ಗೀಜಗನ ಗೂಡುಗಳನ್ನು ಹರಡಿದ್ದೇನೆ.
 
ರಾತ್ರಿಯ ಆಗಸದಲ್ಲಿ ಚಂದ್ರನ ಸುತ್ತಾ ಮುತ್ತಿಕ್ಕುವ ಆ ಅಸಂಖ್ಯಾತ ನಕ್ಷತ್ರಗಳಂತೆ ಈ ಎಲ್ಲ ವಸ್ತುಗಳು ಬಾಲ್ಯದ ಸಿಹಿ ನೆನೆಪಿನ ಸಕ್ಕರೆಯನ್ನು ತಿನ್ನಿಸುತ್ತಿವೆ. ನಂಗೆ ಎಲ್ಲವೂ ನೆನಪಿದೆ, ಹೊಸದಾಗಿ ನಿಮ್ಮೂರಿಗೆ ಬಂದ ನಾವು ನಿಮ್ಮ ಓಣಿಯಲ್ಲೇ ಮನೆಮಾಡಿದ್ವಿ. ನಮ್ಮ ಹೈಸ್ಕೂಲಿಗೆ ಹತ್ತಿರದಲ್ಲೇ ನಮ್ಮಪ್ಪ ಕೆಲ್ಸ ಮಾಡ್ತಿದ್ದ ಪೋಸ್ಟ್ ಆಫೀಸ್ ಇತ್ತು. ಈ ಊರಿಗೆ ಬರೋವಷ್ಟು ಹೊತ್ತಿಗೆ ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆ. ಸರ್ಕಾರಿ ನೌಕ್ರಿ ಮಾಡೋ ಅಪ್ಪಂಗೆ ವರ್ಗ ಆಗಿದ್ದು ಈ ಊರಿಗೆ ಬರೋದಕ್ಕೆ ಕಾರಣ. ಹೊಸ ಜಾಗ, ಹೊಸ ಶಾಲೆ ಏನೋ ಸಂಕೋಚ, ಮುಜುಗರ. ನಾನಂತೂ ಯಾರ್ ಜೊತೆನೂ ಮಾತಾಡ್ತಿತರ್ಲಿಲ್ಲ. ಹುಡುಗಿಯರ ಜೊತೆ ಕೂಡ… ನನ್ನಂತಹ ನಾಚಿಕೆ ಸ್ವಭಾವದ ಹುಡುಗಿಯನ್ನು ಮೊದಲ ಬಾರಿಗೆ ಮಾತಿಗೆ ಎಳೆದು, ಗೆಳೆತನ ಮಾಡಿದ್ದು ಚಡ್ಡಿ ಹಾಕ್ಕೊಂಡು ಸ್ಕೂಲ್ ಲೀಡರ್ ಅಂತ ಬೀಗುತ್ತಿದ್ದ ನೀನೇ…
 
ಲೀಡರ್ ಅಂತ ಎಂದಿಗೂ ಅಷ್ಟಾಗಿ ಕೊಚ್ಚಿಕೊಳ್ಳದ ನೀನು ನಿಜವಾಗಿಯೂ ನಾಯಕನೇ ಕಣೋ. ಮೇಸ್ಟ್ರು ಪ್ರಶ್ನೆ ಕೇಳಿ ಮುಗಿಸುವ ಮುನ್ನವೇ ಥಟ್ ಅಂತ ಉತ್ತರಿಸುತ್ತಿದ್ದೆ. ಸಭೆ-ಸಮಾರಂಭಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದೆ. ನಿನಗೆ ತೊಡಕು ಅಂತ ಇದದ್ದು ಬಡತನ ಮಾತ್ರ. ಆದರೂ ನಿನ್ನ ಆ ಸಹಜ ನಗು ನೆನಸ್ಕೊಂಡ್ರೆ… ಈಗ್ಲೇ ನಿನ್ನನ್ನ ನೋಡಬೇಕು ಅನಿಸುತ್ತೆ. ಅಂಥ ಆಕರ್ಷಣೆ ಇತ್ತು ಅದ್ರಲ್ಲಿ..
 
ಶನಿವಾರ ಆದ್ರೆ  ಸಾಕು, ಇಬ್ಬನಿಯನ್ನೇ ನುಂಗಿ ಬದುಕುತ್ತಿದ್ದ ಶಾಲೆಯ ಆವರಣದಲ್ಲಿದ್ದ ಹಸಿರು ಹುಲ್ಲಿನ ಮೇಲೆ ಕೂರಿಸಿ ಕನ್ನಡದ ಪದ್ಯ ಹೇಳಿಸುತ್ತಿದ್ದರು. ಅಂತಹ ಒಂದು ದಿನ ನಾನು ಪದ್ಯ ಹೇಳದೇ ಕನ್ನಡ ಮಾಸ್ಟರ್ ವಿ.ಟಿ.ಎಸ್‍ರಿಂದ ಒದೆ ತಿಂದಿದ್ದು. ಚಳಿಯೆಲ್ಲಾ ಒಮ್ಮೆಗೆ ಮಾಯವಾಗಿ, ಕಣ್ತುಂಬಿ ಬಂದದ್ದು. ಅವತ್ತು ನೀನ್ಯಾಕೆ ಅತ್ತಿದ್ದು? ಆಗ ಕೇಳೋಣ ಅನಿಸಲೇ ಇಲ್ಲ. ಈಗ ಕೇಳ್ತಿದ್ದೀನಿ ಯಾಕೋ ಅವತ್ತು ನೀನು ಅತ್ತಿದ್ದು?
 
ಹ್ಞಾ… ನಾವೆಲ್ಲಾ ಸೇರಿಕೊಂಡು ಯೂನಿಯನ್ ಡೇ ದಿನ ನಾಟಕ ಆಡಿದ್ದು ನೆನಪಿದೆಯಾ? ಆ ನಾಟಕದಲ್ಲಿ ನಾನೂ ಒಂದು ಪಾತ್ರ ಮಾಡಿದ್ದೆ; ಗಯ್ಯಾಳಿ ಪಾತ್ರ. ನಾಟಕದ ನನ್ನ ಪಾತ್ರಕ್ಕೂ, ನಿಜ ಜೀವನಕ್ಕೂ ಒಂದಂಕ್ಕೊಂದು ಸಂಬಂಧವೇ ಇರ್ಲಿಲ್ಲ. ಅವತ್ತು ನಾವೆಲ್ಲ ತೆಗೆಸಿಕೊಂಡ ಫೋಟೋ ನೋಡಿದ್ರೆ ಈಗ್ಲೂ ನಗು ಉಕ್ಕಿ ಬರುತ್ತೆ. ಯಾಕಂದ್ರೆ ಆ ನಾಟಕದಲ್ಲಿ ನೀನು ಮುದುಕನ ಪಾತ್ರ ಮಾಡಿದ್ದೆ.
 
ನೆನಪಿದೆ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂತು, ನಿಂದೇ ಹೈಯಸ್ಟ್ ಸ್ಕೋರ್. ನಂದು ಫಸ್ಟ್ ಕ್ಲಾಸ್. ಆ ಕೊನೆಯ ದಿನ ನೆನೆಸಿಕೊಂಡರೇ ಕಣ್ತುಂಬಿ ಬರುತ್ತೆ. ಅವತ್ತು ನೀನು ನನ್ನನ್ನ ಮಾತಾಡಿಸ್ಲೇ ಇಲ್ಲ? ಶಾಲೆಗೆ ಹೋಗುವಾಗ, ಬರುವಾಗ, ಲೀಜರ್ ಟೈಮ್‍ನಲ್ಲೆಲ್ಲಾ ಜೊತೆಗೆ ಇದ್ದು ಮಾತಾಡುತ್ತಿದ್ದ ನೀನು, ಅವತ್ತು ಯಾಕೆ ಮಾತಾಡಲಿಲ್ಲ? ನಾನು ನಿನಗಾಗಿ ಒಂದು ಉಡುಗೊರೆ ತಂದಿದ್ದೆ. ನಾನು ಮಾತಾಡಿಸೋಕೆ ಬಂದಾಗ ಅಳುತ್ತಾ ದೂರ ದೂರ ಓಡುತ್ತಾ ಹೋಗಿದ್ದು, ಯಾಕೆ? ಈ ಪ್ರಶ್ನೆಗಳಿಗೆ ಇಂದಿಗೂ ನನ್ನ ಹತ್ರ ಉತ್ರ ಇಲ್ಲ.
 
ಈ ಬಗ್ಗೆ ನಾಳೆ ಕೇಳೋಣ ಅಂದ್ಕೊಂಡೆ. ಬೆಳಗಾಗುವ ಹೊತ್ತಿಗೆ ನಾನು ಋತುಮತಿಯಾಗಿದ್ದೆ. ನನ್ನ ಗೃಹಬಂಧನ ಮುಗಿಯುವ ಹೊತ್ತಿಗೆ ನನ್ನಪ್ಪನಿಗೆ ಮತ್ತೆ ವರ್ಗಾವಣೆ ಆಗಿತ್ತು. ಅದು ದೂರದ ಬೆಂಗಳೂರಿಗೆ. ಆ ನಂತರ ಬೆಳೆದ ವಯಸು, ಹೊಸ ಜಾಗ, ಹೊಸ ಜನರ ಮಧ್ಯೆಯೂ ನಿನ್ನ ನೆನಪು ಅಚ್ಚಳಿಯದೇ ಉಳಿದುಕೊಂಡೆ ಬರುತ್ತಿದೆ.  ಈ ಯುಗಾದಿಗೆ ನೀನು ನನ್ನ ಬಾಲ್ಯಕ್ಕೆ ಕಾಲಿಟ್ಟು ಹತ್ತು ವರ್ಷಗಳಾಗುತ್ತವೆ. ಈ ಪತ್ರ ನಿಮ್ಮೂರಿಗೆ ತಲುಪುವ ಹೊತ್ತಿಗೆ ನೀನು ಅಲ್ಲಿರುತ್ತಿಯಾ ಅಂತ ನಂಬಿಕೊಂಡು ಈ ಪತ್ರ ಬರೆಯುತ್ತಿದ್ದೇನೆ.
 
ನಿಮ್ಮ ಊರನ್ನು ಬಿಟ್ಟ ನಂತರ ನಾನು ಹಲವಾರು ಬಾರಿ ಕಮಲಾಳಿಗೆ ಪತ್ರ ಬರೆದು ನಿನ್ನ ಬಗ್ಗೆ ವಿಚಾರಿಸುತ್ತಿದ್ದೆ. ನೀನು ಸೇನೆ ಸೇರಿರುವುದಾಗಿ ತಿಳಿಸಿದ್ದಳು. ಕೊನೆಯ ಪತ್ರ ಬರೆದಾಗ ಈ ಯುಗಾದಿಗೆ ನೀನು ಊರಿಗೆ ಬರುತ್ತಿರುವ ವಿಚಾರವನ್ನು ಬರೆದು ಕಳುಹಿಸಿದ್ದಳು. ಪ್ಲೀಸ್, ಈ ಪತ್ರ ಓದಿದ ಕೂಡಲೇ ಬೆಂಗಳೂರಿಗೆ ಬಾ, ನಾ ನಿನ್ನೊಂದಿಗೆ ಸಾಕಷ್ಟು ಮಾತನಾಡಬೇಕಿದೆ. ಆ ಮಾತುಗಳು ನಮ್ಮಿಬ್ಬರನ್ನು ಮತ್ತೇ ಸೇರಿಸುತ್ತವೆ ಅಂತ ಭಾವಿಸಿದ್ದೇನೆ. ಬರೀತಾ ಹೋದ್ರೆ ಈ ಪತ್ರ ಕೂಡ ಸಾಲುವುದಿಲ್ಲ. ನೀನು ಕೊಟ್ಟ ಗೀಜಗನ ಗೂಡಲ್ಲಿ ನನ್ನ ಕಾತರದ ಮನಸು ನಿರೀಕ್ಷೆಯ ಮೊಟ್ಟೆಗೆ ಕಾವು ಕೊಡುತ್ತಿದೆ. ನೀನು ಬಂದ ದಿನವೇ ನಿರೀಕ್ಷೆಯ ಮೊಟ್ಟೆ ಹಾಗೂ ನವಿಲು ಗರಿ ಮರಿ ಹಾಕುವುದೇನೋ?
 
ನಿನ್ನ ನಿರೀಕ್ಷೆಯಲ್ಲಿ…

*******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x