ಹೆಸರಿಡದ ಕತೆಯೊಂದು (ಭಾಗ 3): ಪ್ರಶಸ್ತಿ ಪಿ.

(ಇಲ್ಲಿಯವರೆಗೆ)

ಕಾಲೇಜು ದಿನಗಳಿಂದ್ಲೂ ಭಾಷಣ, ಚರ್ಚೆ ಅಂತೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶಾರುಗೆ ತನ್ನ ಡಿಗ್ರಿ ಮುಗಿದ ಮೇಲೆ ತಾನೂ ಒಂದು ಕೆಲಸ ಮಾಡ್ಬೇಕಾ ಅನ್ನೋ ಕಲ್ಪನೆಯೇ ಬೇಸರ ತರಿಸುತ್ತಿತ್ತು. ಕಾಲೇಜಲ್ಲಿ ಪ್ಲೇಸ್ಮೆಂಟಂತ ಬಂದು ತನ್ನ ಗೆಳತಿಯರೆಲ್ಲಾ ಒಬ್ಬೊಬ್ಬರಾಗಿ ಆಯ್ಕೆಯಾಗೋಕೆ ಶುರುವಾದಾಗ ತಾನೂ ಆಯ್ಕೆಯಾಗಿದ್ರೆ ಅನ್ನಿಸೋಕೆ ಶುರುವಾಗಿತ್ತು. ಆದ್ರೆ ಅನಿಸಿದ್ದೇ ಬಂತು. ಆ ಸೀಸನ್ನೇ ಮುಗಿದೋದ್ರೂ ಕೆಲಸ ಅನ್ನೋದು ಸಿಕ್ಕಿರಲಿಲ್ಲ.  ಯಾಕಾದ್ರೂ ಕೆಲ್ಸ ಕೆಲ್ಸ ಅಂತ ಹುಡುಕ್ತಾರೋ , ತಾನೆಂತೂ ಆರಾಮಾಗಿದ್ದುಬಿಟ್ತೀನಿ ಅಂತ ಹಿಂದಿನ ವರ್ಷ ಅಂದುಕೊಂಡಿದ್ದ ನಿರ್ಣಯಗಳೆಲ್ಲಾ ವಾಸ್ತವದಿಂದ ಎಷ್ಟು ದೂರ ಅನ್ನೋದ್ರ ಅರಿವಾಗ್ತಾ ಬಂದಿತ್ತು. ಮನೇಲೇ ಇದ್ದುಬಿಡು, ಬೇಜಾರು ಮಾಡ್ಕೋಬೇಡ ಅಂತ ಅಪ್ಪ ಅಮ್ಮ ಎಷ್ಟು ಹೇಳಿದ್ರೂ ಯಾಕೋ ಆಕೆಗೇ ಕಾಲೇಜು ಮುಗಿದ ಮೇಲಿನ ದಿನಗಳು ಕಾಡತೊಡಗಿದ್ವು. ಅಂತೂ ಹೊರಟು ಬಂದಿದ್ಲು ಪೇಟೆಗೆ.  ಅವಳ ಕಾಲೇಜು ದಿನಗಳ ಪಟ್ ಪಟ ಪಟಾಕಿಯಂತ ಮಾತನಾಡೋ ಗುಣ ನೋಡಿದ್ದ ಯಾರೋ ಒಬ್ಬರು ಯಾವುದೋ ಎಫ್.ಎಂ ಸ್ಟೇಷನ್ನಿನ್ನ ಬಗ್ಗೆ ತಿಳಿಸಿದ್ರು. ಸುಮ್ನೆ ಒಂದು ಕೈ ನೋಡೋಣ ಅಂತ ಹೋದವ್ಳು ಆಯ್ಕೆಯಾಗೇ ಬಿಡಬೇಕೇ ? ರೋಗಿ ಬಯಸಿದ್ದೂ ಹಾಲು ಅನ್ನ. ವೈದ್ಯ ಹೇಳಿದ್ದೂ ಹಾಲು ಅನ್ನ ಅಂತ ಸಿಕ್ಕಾಪಟ್ಟೆ ಖುಷಿಯಾಗಿದ್ಲು ಶಾರು. ಅಪ್ಪ ಅಮ್ಮನ ಛತ್ರಛಾಯೆಯಲ್ಲಿ ಬೆಳೆಯುತ್ತಿದ್ದ ಶಾರುಗೆ ಸ್ವತಂತ್ರವಾಗಿ ಹೊರ ಹೊರಟು ಕೆಲಸ ಮಾಡತೊಡಗಿದಾಗಲೇ ಪ್ರಪಂಚದ ಕಟುವಾಸ್ತವಗಳ ಅರಿವಾಗತೊಡಗಿದ್ದು.ಎಲ್ಲಾರು ಮಾಡುವುದು ಹೊಟ್ಟೆಗಾಗಿ. ತುಂಡು ಬಟ್ಟೆಗಾಗಿ ಅನ್ನೋ ದಾಸವಾಣಿ ನೆನಪಾಗತೊಡಗಿದ್ದು.

ಇನ್ನು ಪೇಟೆಯಲ್ಲೇ ಹುಟ್ಟಿ ಬೆಳೆದಿದ್ದ ಶ್ವೇತಂಗೂ ಪಟಾಕಿ ಶಾರೂಗೂ ಸಖತ್ ಸ್ನೇಹ. ಹೈಸ್ಕೂಲಿಂದ ಡಿಗ್ರೀವರ್ಗೂ ಜೊತೆಗೇ ಓದಿದ್ದ ಇಬ್ರಲ್ಲೂ ಸಖತ್ ಅನ್ಯೋನ್ಯತೆ. ಇವರಿಬ್ರೂ ಸೇರಿಬಿಟ್ರು ಅಂದ್ರೆ ಎದ್ರಿಗಿರೋರು ಹುಡುಗ್ರೇ ಆಗ್ಲಿ ಹುಡುಗೀರೇ ಆಗ್ಲಿ ಅವರ ಮಾತಡಗಿಸಿಬಿಟ್ತಿದ್ರು. ಓದಿನಲ್ಲೂ ಮುಂದಿದ್ದ ಶ್ವೇತಂಗೆ ಕಾಲೇಜಿಗೆ ಬಂದ ಮೊದ್ಲ ಕಂಪೆನಿಯಲ್ಲೇ ಆಯ್ಕೆಯಾಗಿದ್ಲು. ಆದ್ರೂ ತನ್ನ ಆತ್ಮೀಯ ಗೆಳತಿ ಶಾರುಗೆ ಆಗ್ಲೇ ಇಲ್ವಲ್ಲ ಅನ್ನೋ ಬೇಜಾರು. ಶಾರು ಏನೂ ಬೇಜಾರಿಲ್ಲದಂಗೆ ನಗುನಗ್ತಾ ಇದ್ರೂ ಅವಳ ಹೃದಯದಲ್ಲಿ ಎಷ್ಟು ನೋವಿದೆ ಅನ್ನೋದು ಶ್ವೇತಂಗೆ ಮಾತ್ರ ಗೊತ್ತಿತ್ತು. ಕೊನೆಗೂ ಶಾರುಗೊಂದು ಕೆಲಸ ಸಿಕ್ಕಿತೆಂದು ಖುಷಿಯಾಗೋ ಹೊತ್ತಿಗೆ ಶ್ವೇತ ಕೆಲಸಕ್ಕೆ ಹೋಗೋಕೆ ಶುರು ಮಾಡಾಗಿತ್ತು. ಕೆಲಸ ಸಿಕ್ಕಿದ್ದು ತಮ್ಮ ಮನೆಯಿದ್ದ ಪೇಟೆಯಲ್ಲೇ ಆಗಿದ್ದರಿಂದ ಮನೆಯಿಂದ್ಲೇ ಕೆಲ್ಸಕ್ಕೋಗೋಕೆ ಶುರು ಮಾಡಿದ್ಲು ಶ್ವೇತ. ಕಾಲೇಜು ಮುಗಿದು ಕೆಲ ತಿಂಗಳಾಗೋಷ್ಟರಲ್ಲಿ ಗೆಳೆಯರೆಲ್ಲಾ ಕಾಣೆಯಾಗಿದ್ರು. ಅಂದಂಗೆ ಕಾಲೇಜು ಸಮಯದಲ್ಲಿ ತನ್ನ ಲವ್ ಮಾಡ್ತಾ ಇದಾನಾ ಅಂತ ಎಷ್ಟೋ ಸಲ ಡೌಟ್ ಪಟ್ಟೂ ಸುಮ್ನಾಗಿದ್ದ ಶ್ಯಾಮ ಎಲ್ಲೋದ ಅನ್ನೋದು ಗೊತ್ತಾಗಿರ್ಲಿಲ್ಲ. ಅವನ ಗ್ಯಾಂಗಿನ ಕೆಲೋರು ಅಲ್ಲಿ ಇಲ್ಲಿ ಕಂಡ್ರೂ ಅವ್ನ ಬಗ್ಗೆ ಹೆಚ್ಚಿನ ಮಾಹಿತಿಯಿರಲಿಲ್ಲ, ಹಳ್ಳಿಗೋದ ಅಂತ ಒಂದಿಷ್ಟು ಜನ, ಎಲ್ಲೋ ಸಖತ್ ಕೆಲ್ಸದಲ್ಲಿದಾನೆ ಅಂತ ಕೆಲೋರು ಅಂದ್ರೂ ಯಾರಿಗೂ ಗೊತ್ತಿರಲಿಲ್ಲ ಸರಿಯಾಗಿ. ಅವತ್ತು ಪಾನಿಪೂರಿ ಸೆಂಟರಿನಲ್ಲಿ ಶಾರು ಹತ್ರ ಇದನ್ನೇ ಕೇಳಿ ಬಯಸ್ಕಂಡೂ ಆದ ಮೇಲೆ ಸುಮ್ನಾಗಿದ್ಲು ಶ್ವೇತ. ಆದ್ರೆ ಅವತ್ತು ಶಾರು ಆಡಿದ ಮಾತಿನಿಂದ ಶಾರುಗೆ ಶ್ಯಾಮನ ಬಗ್ಗೆ ಗೊತ್ತಿದ್ದೂ ನನ್ನಿಂದ ಏನೋ ಮುಚ್ಚಿಡ್ತಿದ್ದಾಳಾ ಅನ್ನೋ ಡೌಟೂ ಬಂದಿತ್ತು ಶ್ವೇತಂಗೆ.   ಅಂತದ್ರಲ್ಲಿ ಶ್ವೇತಂಗೆ ಮನೇಲಿ ಗಂಡು ನೊಡೋಕೆ ಶುರು ಮಾಡಿದ್ರು.  ಹಿಂಗೇ ಸಂಭ್ರಮದಲ್ಲಿರುವಾಗ ಅವತ್ತು ಆ ಶ್ಯಾಮ ಬೀದಿ ಬದೀಲಿ ಅನಿರೀಕ್ಷಿತವಾಗಿ ಕಂಡು ಬಿಟ್ಟಿದ್ದ. ಆ ಕೊಳೆ ಕೊಳೆ ಪ್ಯಾಂಟಲ್ಲಿದ್ದ ಅವನ್ನ ನೋಡಿ ಇವ ನಮ್ಮ ಕಾಲೇಜು ಶ್ಯಾಮನೇನಾ ಅನಿಸಿಬಿಟ್ಟಿತ್ತು. ಅವನ್ನ ನೋಡಿ ಇವನ್ನೇನಾ ಸಿಕ್ಕಾಪಟ್ಟೆ ಕೆಲಸ ಇದೆ, ಬಿಜಿ ಇದೆ ಅಂತ ಶಾರೂ ಹೇಳ್ತಿದ್ದ ಶ್ಯಾಮ ಅನಿಸಿಬಿಟ್ಟಿತ್ತು. ಅವತ್ತು ಕಂಡ ಹಾಗೇ ಯಾಕೋ ಮರೆಯಾಗಿಬಿಟ್ಟಿದ್ದ. ಹೌದು. ಯಾಕೆ ಮರೆಯಾದ ಶ್ಯಾಮ ಅಷ್ಟು ಬೇಗ ಅವತ್ತು ? ಛೇ. ನಾನು ಅವ್ನ ಕೊಳೆ ಬಟ್ಟೆ ಬಗ್ಗೆ , ಅವಸ್ಥೆ ಬಗ್ಗೆ ಹಂಗೆ ಮಾತನಾಡ್ಬಾರ್ದಿತ್ತೇನೋ. ಎಷ್ಟೋ ಕಾಲದ ನಂತ್ರ ಸಿಕ್ಕಿದ್ದ ಅವನನ್ನೇ ನಿಧಾನವಾಗಿ ಕೇಳಿದ್ರೆ ಅವ ಯಾಕೆ ಎಲ್ಲರಿಂದ್ಲೂ ಮರೆಯಾದ ಅನ್ನೋದ್ರ ಬಗ್ಗೆ ಹೇಳ್ತಿದ್ನೋ ಏನೋ. ಪಾಪ ಎಷ್ಟು ಕಷ್ಟದಲ್ಲಿದ್ನೋ ಏನೋ ? ಸ್ನೇಹಿತೆಯಾಗಿ ಅವನ ಕಷ್ಟಕಾಲದಲ್ಲಿ ನೆರವಾಗೋ ಬದ್ಲು ಅವನ ಮನನೋಯಿಸಿಬಿಟ್ನಲ್ಲಾ. ಛೇ ಅಂತ ಹೆಂಗರುಳು ತುಡಿಯತೊಡಗಿತ್ತು.

ಇತ್ತ ಕಿಟ್ಟಿ ಮನೆಯಲ್ಲಿದ್ದ ಶ್ಯಾಮನ ಕೆಲಸದ ಬೇಟೆ ನಡೆದೇ ಇತ್ತು. ತೀರಾ ದೊಡ್ಡ ಸಂಬಳದ ಕೆಲಸ ಸಿಗಬೇಕೆಂಬ ಮೊದಲ ದಿನಗಳ ಕನಸು ಕರಗಿ ಯಾವ್ದೋ ಒಂದು ಕೆಲ್ಸ ಸಿಕ್ಕಿದ್ರೆ ಸಾಕು ಅನ್ನೋ ಹಾಗಾಗಿತ್ತು. ಆದ್ರೆ ಆ ಪಟ್ಟಣದಲ್ಲಿ ಕೆಲ್ಸ ಸಿಗಬೇಕಂದ್ರೆ ಹಂಗೇ ಸಿಕ್ಕಿಬಿಟ್ತೀತಾ ? ಒಂದಿಷ್ಟು ಕಡೆ ಕೆಲ್ಸಕ್ಕೆ ಹೋಗಬೇಕಂದ್ರೆ ಅಲ್ಲಿರೋರ ಯಾರದ್ದಾದ್ರೂ ರೆಫರೆನ್ಸು ಬೇಕಂತೆ, ಮತ್ತೊಂದಿಷ್ಟು ಕಡೆ ೮೦ ಪ್ರತಿಶತಕ್ಕಿಂತ ಜಾಸ್ತಿ ಇದ್ರೆ  ಮಾತ್ರ ಅನ್ನೋರು. ಇನ್ನು ಕೆಲವು ಕಡೆ ನಿನ್ನ ಟ್ಯಾಲೆಂಟಿಗೆ ಅಲ್ಲ ಬಿಡಪ್ಪ ಇದು. ಹೋಗಿ ಹೋಗಿ ಇಲ್ಲಿಗ್ಯಾಕೆ ಬಂದಿದೀಯ ಅನ್ನೋ ತರ ಮಾತಾಡೋರು. ಹಿಂಗೇ ಎರಡು ತಿಂಗಳು ಕೆಲಸ ಹುಡುಕುಡುಕಿ ಶ್ಯಾಮ ಹೈರಾಣಾಗಿ ಹೋಗಿದ್ದ. ಕೆಲ್ಸ ಹೋಗ್ಲಿ ಮುಂದೆ ಓದಾದ್ರೂ ಓದೋಣ್ವಾ ಅನ್ನೋ ಆಸೆಗಳು ಕಾಡ್ತಿದ್ವು. ಆದ್ರೆ ಓದೋಕೆ ದುಡ್ಡು ? ಡಿಗ್ರಿಗೆ ಅಂತ ಮಾಡಿದ ಸಾಲವನ್ನೇ ಇನ್ನೂ ತೀರಿಸಿಲ್ಲ. ಅದನ್ನ ತೀರಿಸದೇ ನಂಗೆ ಮಾಸ್ಟರ್ ಡಿಗ್ರಿಗೆಂತ ಯಾರು ಸಾಲ ಕೊಡ್ತಾರೆ ? ಹಂಗಾಗಿ ಸದ್ಯಕ್ಕೆಲ್ಲಾರೂ ಒಂದು ಕೆಲ್ಸ ಮಾಡಿ ಮೊದ್ಲು ಈ ಸಾಲವನ್ನೆಲ್ಲಾ ತೀರಿಸಿಬಿಡಬೇಕು ಅಂದ್ಕೋತಿದ್ದ. ಕೂತಲ್ಲಿ ನಿಂತಲ್ಲಿ ಮನೆಗೆ  ಫೋನ್ ಮಾಡಿದಾಗ ಅಪ್ಪ ಕೇಳುತ್ತಿದ್ದ ಸಾಲ ಯಾವಾಗ ತೀರಸ್ತೀಯ ಅನ್ನೋ ಪ್ರಶ್ನೆ ನೆನಪಾಗಿ ಈ ಸಾಲದ ಶೂಲ ಅನ್ನೋದು ಶ್ಯಾಮನನ್ನ ಕಿತ್ತು ತಿನ್ನುತಿತ್ತು.

ಮೊದಮೊದಲು ಶ್ಯಾಮ ಅಂದ್ಕೋತಿದ್ದ ಈ ಕಾಲ್ ಸೆಂಟರ್ಗಳು, ರಾತ್ರಿ ಪಾಳಿಯಲ್ಲಿ ಕೆಲ್ಸ ಮಾಡೋ ಕಂಪೆನಿಗಳಲ್ಲಾ ಎಂತಾ ಕೆಲಸವಪ್ಪಾ , ನಾನು ಉಪವಾಸವಿದ್ರೂ ಇರ್ತೇನೆ. ಅಂತಲ್ಲಿ ಮಾತ್ರ ಕೆಲಸ ಮಾಡೋಲ್ಲ ಅಂತ. ಆದ್ರೆ ಕೆಲ್ಸವಿಲ್ಲದೆ ದಿನಗಳು ಉರುಳುತ್ತಿದ್ದಂತೆ, ಎಲ್ಲಾ ಇಂಟರ್ವೂಗಳಲ್ಲೂ ನಪಾಸಾಗ್ತಾ ಸಾಗಿದಂತೆ ಎಂತ ಕೆಲ್ಸವಾದ್ರೂ ಸರಿಯೇ. ಮಾಡೇನು ಅಂತ ನಿರ್ಧಾರಕ್ಕೆ ಬಂದು ಬಿಟ್ಟಿದ್ದ ಶ್ಯಾಮ. ಹೋದ ಕಡೆಯೆಲ್ಲಾ ಆ ಕೋರ್ಸ್ ಮಾಡಿದೀಯ, ಇದ್ನ ಮಾಡಿದೀಯ, ಎಷ್ಟು ವರ್ಷ ಎಕ್ಸಪೀರಿಯನ್ಸ್ ಇದೆ ಅನ್ನೋರು. ನಮಗೆ ಈ ರಂಗಕ್ಕೆ ಹೊಸತಾಗಿ ಕಾಲಿಡೋ ನಿನ್ನಂತ ಫ್ರೆಷರ್ಸ್ ಬೇಡಪ್ಪಾ ಅನ್ನೋರು. ಕೆಲ್ಸ ಕೊಟ್ರೆ ತಾನೇ ದುಡ್ಡು ? ದುಡ್ಡಿದ್ರೆ ತಾನೆ ಯಾವದಾದ್ರೂ ಕೋರ್ಸ್ ಮಾಡೋದು.ಒಳ್ಳೆ ಕತೆಯಾಯ್ತು ಇದು. ಇನ್ನು ಕೆಲ್ಸ ಕೊಟ್ರೆ ತಾನೇ ಎಕ್ಸಪೀರಿಯನ್ಸ್ ಆಗೋದು ! ಕೆಲ್ಸ ಕೊಡಲ್ಲ ಅಂತಾರೆ. ಎಕ್ಸಪೀರಿಯನ್ಸ್ ಬೇಕಂತಾರೆ. ಎಲ್ಲಿಂದ ಬರತ್ತೆ ಅದು  ಮಣ್ಣು .. ಇದೊಂತರ ಹಾವು ಸಾಯ್ಬೇಕು. ಕೋಲೂ ಮುರಿಬಾರ್ದು ಅಂದಂಗಾಯ್ತು ಅಂತ ಪ್ರತೀ ಸಂದರ್ಶನದ ಅಂತ್ಯದಲ್ಲೂ ಅಂದ್ಕೋತಿದ್ದ. ಆದ್ರೆ ಎಲ್ಲದಕ್ಕೂ ಒಂದು ಕೊನೆಯೆನ್ನೋದು ಇದ್ದೇ ಇದೆ ಮಗಾ. ಧೈರ್ಯ ಕಳ್ಕೋಬೇಡ ಅಂತ ಪ್ರತೀಬಾರಿ ಸಮಾಧಾನ ಮಾಡ್ತಿದ್ದ ಕಿಟ್ಟಿಯ ಮಾತು ಸುಳ್ಲಾಗ್ಲಿಲ್ಲ. ಇವನಿಗೆ ಅಂತನೇ ಕಾಯ್ತಾ ಇತ್ತೇನೋ ಒಂದು ಕೆಲಸ. ತೀರಾ ದೊಡ್ಡದೇನಲ್ಲ. ಶ್ಯಾಮನ ವಿದ್ಯಾರ್ಹತೆಗೆ ತಕ್ಕದ್ದಾಗಿರ್ಲೂ ಇಲ್ಲ. ಆದ್ರೂ ಒಪ್ಕೊಂಡ ಶ್ಯಾಮ.. ಖಾಲಿ ಕೂರೋದಕ್ಕಿಂತ ಏನೋ ಒಂದು ಅಂತ. ಅಷ್ಟಕ್ಕೂ ಕಿಟ್ಟಿ ಹೇಳ್ತಿದ್ದರಲ್ಲಿ ತಪ್ಪಿರಲಿಲ್ಲ. ಅವನ ಬಾಯಲ್ಲೇ ಹೇಳೋದಾದ್ರೆ .. ಏನಾಗಿದ್ಯೋ ನಿಂಗೆ  ? ಜೀವನದಲ್ಲಿ ಎಲ್ಲಾ ಕಳ್ಕೊಂಡ ಹಾಗೆ ಹತಾಶನಾಗಬೇಡ. ಈ ಸಂದರ್ಶನ ಅಲ್ದಿದ್ರೆ ಇನ್ನೊಂದು. ಅದಲ್ದಿದ್ರೆ ಮತ್ತೊಂದು. ಯಾವ್ದೂ ಸಿಗ್ಲಿಲ್ಲ ಅಂದ್ರೆ ನೋಡು. ನಿನ್ನ ಗೆಳೆಯ ಅಂತ ನಾನೊಬ್ಬ ಇದೀನಿ. ನನ್ನ ವರ್ಕ್ ಶಾಪಿಗೇ ಬಂದುಬಿಡು. ಶತದಡ್ಡ ಅಂತ ಕರೆಸಿಕೊಂಡಿದ್ದ ನಾನೇ ಜೀವನದಲ್ಲಿ ನನ್ನ ಕಾಲ ಮೇಲೆ ನಿಂತ್ಕೊಳ್ಳೋ ಪ್ರಯತ್ನದಲ್ಲಿದೀನಿ. ಇನ್ನು ನಿಂಗಾಗಲ್ವೇನೋ ? ಎಲ್ಲಾ ಕಾಲ. ಈಗ ಅದು ನಿಂಗೆ ಸಹಾಯ ಮಾಡ್ತಿಲ್ಲ ಅಷ್ಟೆ. ಆದ್ರೆ ಎಲ್ಲಾ ಸ್ವಲ್ಪ ಸಮಯ ಅಷ್ಟೆ.. ನೋಡು.. ನೀನೇ ಒಂದು ಸ್ವಂತ ಕೆಲ್ಸ ಹಿಡ್ದು. ಒಂದು ಮನೆ ಮಾಡಿ ನನ್ನ ಈ ಸಣ್ಣ ರೂಮಿಂದ ಅಲ್ಲಿಗೆ ಕರ್ಕೊಂಡೋಗ್ತೀಯ ಅನ್ನೋ ನಂಬಿಕೆ ನಂಗಿದೆ .. ಏನು.. ಕರ್ಕೊಂಡೋಗ್ತೀಯ ತಾನೆ.. ನೀನೆಲ್ಲಾ ಕರ್ಕಂಡೋಗ್ತಿಯ.. ಕಂಜೂಸು.. ಕೆಲ್ಸ ಸಿಕ್ಕಿದ ಮೇಲೆ ಪುರ್.. ಅಲ್ವೇನೋ ಅಂತಿದ್ದ.. ಇನ್ನೇನಾದ್ರೂ ಹೊಸದು ಹೇಳಿ ನಗಿಸ್ತಿದ್ದ.. ಒಟ್ನಲ್ಲಿ ಅವನ ಮಾತುಗಳು ಶ್ಯಾಮನ ಜೀವನವೆಂಬ ಎಣ್ನೆ ಖಾಲಿಯಾಗ್ತಿರೋ ದೀಪಕ್ಕೆ ಮತ್ತೆ  ಎಣ್ಣೆ ಹಾಕ್ದಂಗೆ ಆಗ್ತಿತ್ತು.. ಕಿಟ್ಟಿ ತನ್ನ ಗೆಳೆಯನ ಬಗ್ಗೆ ಹೆಮ್ಮೆ ಪಡೋ ದಿನ ಹತ್ರ ಬರ್ತಾ ಇತ್ತು.

ಯಾವುದೋ ಒಂದು ಸಣ್ಣ ಕಂಪನಿ. ಕಂಪೆನಿಯಂದ್ರೆ ಅಂತಸ್ತುಗಳ ಮೇಲಂತಸ್ತಿರತ್ತೆ. ನೂರಿನ್ನೂರು ಜನರಾದ್ರೂ ಇದ್ದೇ ಇರುತ್ತಾರೆ ಅನ್ನೋ ಕಲ್ಪನೆಯಲ್ಲಿದ್ದ ಶ್ಯಾಮನಿಗೆ ಸಂದರ್ಶನಕ್ಕೆ ಹೋದಾಗೊಂದು ಅಚ್ಚರಿ. ಒಂದು ಯಾವುದೋ ಕಂಪ್ಯೂಟರ್ ಕ್ಲಾಸಿಗೆ ಹೋದಂಗೆ ಅನಿಸ್ತಿತ್ತು . ಅಲ್ಲೊಂದು ಐದಾರು ಜನ. ಎಲ್ಲರಿಗೊಂದು ಕಂಪ್ಯೂಟರು. ಅಪ್ಪಿ ತಪ್ಪಿ ಎಲ್ಲಾದ್ರೂ ಬಂದು ಬಿಟ್ನಾ ಅಂತೊಮ್ಮೆ ಗಾಬರಿಗೊಳಗಾಗಿದ್ದ. ಕೇಳಿ ನೋಡಿದ್ರೆ ಅದು ಸರಿಯಾದ ವಿಳಾಸವೇ. ಇವನು ಅಡ್ರೆಸ್ ಸರಿಯಾ ಎಂದು ಕೇಳಿದ ವ್ಯಕ್ತಿಯೇ ಮುಂದೆ ಬಂದು ಇವನ ಸಂದರ್ಶನ ತಗೋಬೇಕೇ ? ಶ್ಯಾಮನಿಗೆ ಆ ಕ್ಷಣಕ್ಕಾದ ಅವಸ್ಥೆ ಹೇಳಲಾಗದು. ಮೊದ್ಲೇ ಜನ ಇಲ್ಲ ಇಲ್ಲಿ. ಇನ್ನು ನನಗೆ ಕೆಲ್ಸ ಬೇರೆ ಕೊಡ್ತಾರಾ ಇವ್ರು ? ಸುಮ್ನೇ ಸಂದರ್ಶನ ಕರ್ಯೋದೊಂದು ಫ್ಯಾಷನ್ ಆಗ್ಬುಟ್ಟಿದೆ ಇಲ್ಲಿ ಅಂತ ಅಂದ್ಕೊಂಡಿದ್ದ ಶ್ಯಾಮನ ಅಭಿಪ್ರಾಯ ಪ್ರತೀ ಪ್ರಶ್ನೆಯೊಂದಿಗೂ ಬದಲಾಗ್ತಾ ಹೋಯ್ತು. ಮೊದಮೊದಲು ಎಲ್ಲೋ ಕಳೆದುಹೋದಂತೆ ಉತ್ತರಿಸುತ್ತಿದ್ದ ಶ್ಯಾಮನನ್ನು ಸಂದರ್ಶಕನೇ ತನ್ನ ಹೊಸ ವರಸೆ ಪ್ರಶ್ನೆಗಳ ಮೂಲಕ ಮತ್ತೆ ವಾಸ್ತವಕ್ಕೆ ಕರೆತರುತ್ತಿದ್ದ. ಸರಿ. ಸಂದರ್ಶನ ಮುಗೀತು. ಎಷ್ಟು ಸಂಬಳದ ನಿರೀಕ್ಷೆಯಲ್ಲಿದ್ದೀರಿ ಎಂದು ಕೇಳಿದ್ದ ಬಾಸು. ಶ್ಯಾಮ ತೋಚಿದ್ದೊಂದು ಹೇಳಿದ್ದ. ಅದು ತನ್ನ ಸ್ನೇಹಿತರಿಗೆ ಹೋಲಿಸಿದ್ರೆ ಏನೇನೂ ಅಲ್ಲವೆಂದು ಅನಿಸಿದ್ರೂ ಈಗ ಸಿಗಬಹುದಾದ ಕೆಲ್ಸವನ್ನೂ ಕಳಕೊಳ್ಳಲು ಇಷ್ಟವಿರಲಿಲ್ಲ ಶ್ಯಾಮಂಗೆ. ಶ್ಯಾಮನ ಪರಿಚಯವನ್ನೆಲ್ಲಾ ಕೇಳಿದದ್ ಬಾಸು ನಸುನಕ್ಕು ಸರಿ ನಾಳೆ ಒಂಭತ್ತು ಗಂಟೆಗೆ ಬಂದುಬಿಡಿ ಅಂದ. ಶ್ಯಾಮಂಗೆ ಮೊದ್ಲು ಬಾಸು ಏನು ಹೇಳ್ತಿದಾರಂತ ಅರ್ಥ ಆಗ್ಲಿಲ್ಲ. ಏನಂದ್ರಿ ಸಾರ್ ಅಂದ. ಅದೇ ಕಣ್ರಿ. ನಾಳೆಯಿಂದ ಕೆಲ್ಸಕ್ಕೆ ಜಾಯಿನ್ ಆಗ್ಬುಡಿ ಅಂದ. ಮತ್ತೆ ಸಂಬಳ ಅಂದ ತನಗೇ ಕೇಳಿತೋ ಇಲ್ಲವೋ ಅನ್ನುವಂತೆ ಶ್ಯಾಮ. ನೀವಂದುಕೊಂಡಿದ್ದಂತೂ ಸಿಕ್ಕೇ ಸಿಗತ್ತೆ. ಆದ್ರೆ ಎಷ್ಟು ಹೆಚ್ಚು ಅನ್ನೋದ್ನ ತಿಂಗಳಾಂತ್ಯದಲ್ಲಿ ನೋಡಿ. ಇನ್ನು ಆರು ತಿಂಗಳಿಗೆ ನಿಮ್ಮ ಕೆಲಸ ನೊಡಿ ಹೆಚ್ಚಳ ಸಿಗುತ್ತೆ ಅಂದ್ರು ಬಾಸು. ಹೂಂ ಅನ್ನೋಕೂ ಆಗದಷ್ಟು ಖುಷಿಯಲ್ಲಿ ಶ್ಯಾಮನ ಬಾಯಿ ಕಟ್ಟಿ ಹೋಗಿತ್ತು.  ತಲೆಯಲ್ಲಾಡಿಸಿದನಷ್ಟೇ. ಮತ್ತೇನಾದ್ರೂ ಡೌಟುಗಳಿದ್ಯ ನನ್ನಿಂದ ಅಂದ್ರು ಬಾಸು. ಇಲ್ಲಾ ಸಾರ್ ಅಂದ ಶ್ಯಾಮನನ್ನು ಬಾಗಿಲವರಿಗೂ ಬೀಳ್ಕೊಟ್ರು ಬಾಸು. ಶ್ಯಾಮನ ನಿರೀಕ್ಷೆಯ ದಿನಗಳು ಮಾರನೇ ದಿನದಿಂದ ಶುರುವಾಗತೊಡಗಿದ್ವು..

*****

(ಮುಂದುವರೆಯಲಿದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x