ಮೂವರ ಕವಿತೆಗಳು: ನಾಗರಾಜ್ ಹರಪನಹಳ್ಳಿ, ವೀಣಾ ರಾಘವೇಂದ್ರ, ಮಂಜು ಹಿಚ್ಕಡ್

 

 

 

 

 

ಕಾವ್ಯ ದಕ್ಕುವತನಕ 

ಬೆಕ್ಕಿನಂತೆ ಹೆಜ್ಜೆ ಇಟ್ಟು ಬಂದವರು

ಚಿಟ್ಟೆಯಂತೆ ಸುಳಿದು ಮಾಯವಾದವರು

ಮನದ ಹಾಳಾದ ಭಾವನೆಗಳಿಗೆ

ಅಕ್ಷರ ರೂಪದಲ್ಲಿ ಸಿಗದವರು

ಹೇಗೆ ಬರೆಯುವುದು

ಇದನೆಲ್ಲಾ ಕವಿತೆಯಲಿ

 

ಇದ್ದು ಇಲ್ಲದಂತೆ

ಸುಳಿದು ಅಳಿದುಹೋಗುವ

ಕನಸುಗಳಿಗೆ ಏನು ಹೇಳುವುದು

ಕಾಡಿಬೇಡಿದ ಹೆಜ್ಜೆ ಗುರುತುಗಳೇ ಇಲ್ಲ

ಅಲ್ಲಿಯ ಆ ಕ್ಷಣಗಳ

ನೇವರಿಕೆಗಳ ಸಲ್ಲಾಪಗಳ 

ಹಿಡಿದು ತಂದು ಬಿತ್ತಬೇಕೆಂದು ಕೊಂಡಿದ್ದೆ

ಅವು ಕವಿತೆಯಾಗಿ ಮೊಳೆಯಲಿ

ಅಂದು ಕೊಂಡಿದ್ದೆ

ಆದರೆ………..

 

ಹಗಲುಗಳು ಜಾರಿ ಹೋಗುತ್ತಿವೆ

ಇರುಳುಗಳು ಕೈಗೆ ದಕ್ಕುವುದೇ ಇಲ್ಲ

ಬದುಕು ಮಗ್ಗಲು ಬದಲಿಸಬೇಕೆಂದರು

ಹರಿವ ನದಿಯ ದಿಕ್ಕು ಬದಲಾಗಬೇಕಷ್ಟೇ

 

ದಾರಿಯಲಿ ಸುಳಿದು ಹೋಗುವ

ಚಿಟ್ಟೆಗಳು ಕಣ್ಣಾವರಿಸುತ್ತವೆ

ಅವುಗಳ ರಂಗುರಂಗಾದ

ಹಾಡುಗಳು ಕೇಳುತ್ತವೆ ಅಷ್ಟೆ ; ದಕ್ಕುವುದಿಲ್ಲ

ಹೇಗೆ ಕಟ್ಟಲಿ ಹೊಸ ಕವಿತೆಯ ?

 

 ಹೊಸದನ್ನು ಕಟ್ಟಲು ಕಣ್ಣು

ಕಾಂತ್ರಿಯ ಕಿಡಿಯಾಗಿದ್ದವು,

ಬೂದಿಯಾಗುತ್ತಿದ್ದ ಸಿಗರೇಟು

ಮಣ್ಣಲ್ಲಿ ಹೊಸಕಿ

ನಡೆದುಬಿಟ್ಟೆ ;

ಕೈಗೆ ಸಿಗದ ಕವಿತೆಯ ನೆನೆದು

 

ನಡುಹಗಲ ಬೀದಿಯಲಿ

ಉದ್ದನೆಯ ಜಡೆ ವೈಯಾರದಿ ನಡೆ

ಹೆಜ್ಜೆಯ ಗೆಜ್ಜೆ ಮತ್ತೆ ತುಂಬಿಕೊಂಡರೂ,

ಈ ಹಗಲೂ ಅರ್ಥಗರ್ಭಿತವಾಗಿ ಕಾಡಿ

ಕವಿತೆಯಾಗದೇ ಹೋದರೂ

 

ಬುದ್ಧ ನೀಡಲಿಲ್ಲ ಖುಷಿಯ

ಅಲ್ಲಮ ಸಂತೈಸಲಿಲ್ಲ

ಮತ್ತೆ ಮತ್ತೆ ಕಾಡುವ ಯಯಾತಿ

ಕಣ್ಮುಂದೆ ಸುಳಿದಾಡಲು

ಕವಿತೆಯಾಗದೆಯೂ ಕಾಡುವ ನೀನು

ಕಾಡಿಸುತ್ತಲೇ ಇರು ಹೀಗೆ

ಕಾವ್ಯ ದಕ್ಕುವತನಕ

ಆಸೆಗಳ ಬಯಕೆಗಳ ಹಂಗಿನಲಿ 

ನಾನು ಸೋಲುವತನಕ

– ನಾಗರಾಜ್ ಹರಪನಹಳ್ಳಿ.

 

 

 

 

 

ಭಾವುಕತೆ 

ಕಡಲ ತೀರದ ಗುಂಟ 

ನಡೆವ ಜೊತೆಯಲಿ ಬಾರೋ 

ನೀರ ಹಾಡಿಗೆ ಮಣಿದು 

ನೀಲ ಗಗನ ಜಾರಿದೆ ನೋಡೊ.

ತೆರೆಯ ತವಕವ ಕಂಡು 

ಸೂರ್ಯ ನಗುತಲಿ ಸರಿದ 

ನಗುತ ಚಂದ್ರಮ ಬಂದ  

ಬಿರಿದ ಹುಣ್ಣಿಮೆ ಚೆಂದ.

ನನ್ನಾಸೆ ಅಲೆಗಳು 

ಹುಚ್ಚಾಗಿ ಎದೆತುಂಬಿ 

ಕುಂಟು ನೆಪಗಳ ಹಿಡಿದು 

ನನ್ನೊಳಗೆ ಬೀಗಿವೆ 

ಬಿಡದಂತೆ ಕಾಡಿವೆ.

ಹೀಗೆಲ್ಲ ತುಮುಲಗಳು ಒಂದಿಷ್ಟು ತವಕಗಳು 

ಬಚ್ಚಿಟ್ಟ ಕನಸುಗಳು ಮುಚ್ಚಿಟ್ಟ ಒಲವು

ದಿಕ್ಕ ತಿಳಿಯದೆ ಸೊರಗಿವೆ 

ನಿನ್ನ ಗೈರಾದ ಹಾಜರಿಯಲ್ಲಿ.

-ವೀಣಾ ರಾಘವೇಂದ್ರ

 

 

 

 

 

ಅವನೂರ ಜಾತ್ರೆಯ ನೆನಪಲ್ಲಿ…

ಇಂದು ನನ್ನವನ ಊರಲ್ಲಿ

ಜಾತ್ರೆಯ ಮೆರುಗಂತೆ

ಬಗೆ ಬಗೆಯ ತಿನಿಸುಗಳ

ಮಳಿಗೆಗಳು ಬಂದಿಹೆವೆಯಂತೆ.

ರಸ್ತೆ ಇಕ್ಕೆಲಗಳಲ್ಲಿ ಬಗೆ ಬಗೆಯ

ಅಂಗಡಿಗಳ ಸಾಲು ಸಾಲಂತೆ

ನಡುವೆ ಬಣ್ಣ ಬಣ್ಣದ ಧಿರಿಸು ದರಿಸಿ

ಹೊರಟವರ ಸಾಲು ಸಾಲಂತೆ.

ಅವನೂರ ಜಾತ್ರೆಯೆಂದರೆ

ನನಗೆ ಅವನದೇ ನೆನಪು

ಆಗ ಅವನಿರಲು ನನ್ನ ಹತ್ರ

ನನಗಾಗ ಜಾತ್ರೆ ನೆಪ ಮಾತ್ರ.

ಅಂದು ನನಗಿಷ್ಟವೆಂದು ಆತ

ಜಿಲೇಬಿ, ಬತ್ತಾಸುಗಳ ಪೊಟ್ಟಣಗಳ

ಕೈಗೆ ತೊಡಿಸಿದ ಆ ಹಸಿರು ಬಳೆಗಳ

ಕಿವಿಗೆ ಧರಿಸಲು ಕೊಟ್ಟ

ಆ ಬಣ್ಣ ಬಣ್ಣದ ಓಲೆಗಳ

ನಾ ಎಂದಿಗಾದರೂ ಮರೆಯುವುದುಂಟೆ.

ಅಂದು ಕರೆಯಲು ಬರುವವನು

ಕಳೆದೆರಡು ಬಾರಿ ಬಂದಿಲ್ಲ

ಆತ ಮರೆತಿರಬಹುದು ನನ್ನ

ನನ್ನ ಪ್ರೀತಿ ಇನ್ನೂ ಆರಿಲ್ಲ

ತನ್ನ ಮದುವೆಗೆ ಕರೆಯಲು

ಆತ ಬಂದಿರಲಿಲ್ಲವಲ್ಲ

ಮದುವೆಯ ಕರೆಯೋಲೆ ಕೊಡಲು

ಆತನ ತಂದೆ ಬಂದಿದ್ದನಲ್ಲ.

ಆತ ಆಕೆಯ ಪ್ರೀತಿಯಲಿ 

ಹಾಯಾಗಿ ನನ್ನ ಮರೆತಿರಬಹುದು

ಹಾಗಂತ ನಾನು ಮರೆತಿಲ್ಲ

ಮರೆಯಲು ಯತ್ನಿಸಿದರೂ

ಸಾದ್ಯವಾಗುತ್ತಿಲ್ಲವಲ್ಲ.

ಅವನಿಗೆ ನಮ್ಮ ಸಂಬಂಧ

ಬರೀಯ ಸ್ನೇಹವಿರಬಹುದು

ನನಗೆ ಹಾಗಲ್ಲವಲ್ಲ

ಬದುಕಿನ ಪಯಣದಲಿ

ಸ್ನೇಹವೂ ಪ್ರೀತಿಯಾಗಬಹುದು

ಎನ್ನುವುದು ನನ್ನ ಕನಸಟ್ಟೇ

ಎಂದು ನನಸಾಗಿಲ್ಲ

ನನಸಾಗುವುದು ಇಲ್ಲ.

-ಮಂಜು ಹಿಚ್ಕಡ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್...
ಹಿಪ್ಪರಗಿ ಸಿದ್ದರಾಮ್...
10 years ago

ಕಾವ್ಯ ದಕ್ಕುವುದು…..ಎಲ್ಲಾ ಕವನಗಳು ಕಾವ್ಯದ ಗುಣಗಳಿಂದಾಗಿವೆ…..

shanthi k a
shanthi k a
10 years ago

good poems …

nagaraaj you rock …

long way to go 

2
0
Would love your thoughts, please comment.x
()
x