ಹೋರಿ ತಂದ ಕಥೆ: ಅಶೋಕ್ ಕುಮಾರ್ ವಳದೂರ್ (ಅಕುವ)


 

"ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದ್ದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ  ಕೈ ಮೀರಿ ಹೋಗಿತ್ತು. ಕೊನೆಯ ಸಲ ನನ್ನ ಭೇಟಿಯಲ್ಲಿ ಅವರ ಮೀಸೆಯಡಿಯ ನಗು ಮಾತ್ರ ನೆನಪಿದೆ. ಅವರೊಂದಿಗಿನ ಒಡನಾಟದ  ಒಂದು ಘಟನೆ ಎಂದಿಗೂ ಮರೆಯುವಂತದ್ದಲ್ಲ.

ಅದಿನ್ನೇನೋ ನಾವು ಹೈಸ್ಕೂಲ್ ನಲ್ಲಿದ್ದ ದಿನ. ಬೇಸಾಯ ಎಂದರೆ ಒಂದು ಥರ ಥ್ರಿಲ್ ಇದ್ದ ದಿನಗಳು. ಊರಿನ ಎಲ್ಲರ ಮನೆಯಲ್ಲೂ ಒಂದು ಜೋಡಿ ಕೋಣ ಇದ್ದಿತ್ತು. ಸಾಗುವಳಿ ಮಾಡಲು ಅವರಿವರ  ಕೋಣದ ಬಾಲ ಹಿಡಿಯಬೇಕಾಗಿತ್ತು. ನಾನು ಮತ್ತು ತಮ್ಮ ಸುಕೇಶ ಆಗಲೇ ನಮ್ಮ ತಂದೆಗೆ ಹೇಳಿ "ಈ ಸಲ ಹೋರಿ ತರೋಣ " ಎಂದು ಹಟಹಿಡಿದೆವು. ಮುಂದಿನ ಮಳೆಗಾಲಕ್ಕೆ ಖಂಡಿತ ಅಂಥ ಹೇಳಿದ ಮೇಲೆ ನಾವು ಸುಮ್ಮನಾದೆವು. ಬೇಸಗೆ ಕಳೆಯಿತು.  ಕೊಟ್ಟಿಗೆ (ಹಟ್ಟಿ) ರೆಡಿಯಾಯಿತು. ತಾಳೆ ಮರದ ತಟ್ಟಿ ಕಟ್ಟಿ ಕೂಡಾ ಆಯಿತು. ಕೊಟ್ಟಿಗೆಯು ಹೋರಿಗಳ ಆಗಮನಕ್ಕೆ  ಸಿದ್ಧವಾಗಿ ನಿಂತಿತು. ಮೇ ತಿಂಗಳ ಕೊನೆ ದಿನಗಳಲ್ಲಿ ಮಳೆ ಕೂಡಾ ಚೆನ್ನಾಗಿ ಬಿತ್ತು. ನೇಜಿಯ ಗದ್ದೆಯನ್ನು ಶೀನ ಮಾವನವರ ಕೋಣಗಳಿಂದ ಹದ ಮಾಡಿದ್ದಾಯಿತು. ನೇಜಿಗೆ ಬಿತ್ತಿದ್ದು ಕೂಡಾ ಆಯಿತು. ಹೋರಿಗಳು ಮಾತ್ರ ಹಟ್ಟಿ ಸೇರಿರಲಿಲ್ಲ. ಹುಡುಕಾಟ ನಡೆದೇ ಇತ್ತು. ವ್ಯವಹಾರ ಕುದುರುತ್ತಿತ್ತು. ಮುರಿಯುತಿತ್ತು. ಆದರೆ ಏನೇನೋ ಕಾರಣ ಒಡ್ಡಿ  ಚಂದ್ರನಗರ ಸೂಫಿ ಸಾಯಿಬ ಮುಂಗಡ ವಾಪಾಸ್ಸು ತಂದು ಕೊಡುತ್ತಿದ್ದ. ಒಟ್ಟಾರೆ ಹೋರಿ ಕಟ್ಟುವ ಕನಸು ಅಣ್ಣ ತಮ್ಮಂದಿರ ಕಣ್ಣಲ್ಲಿ ಕನಸಾಗೇ ಉಳಿದಿತ್ತು.!
 
ಆವಾಗ ಒಂದು ಘಟನೆ ನಡೆಯಿತು. ಅಪರೂಪಕ್ಕೆ ಅತ್ತೆಯ ಮನೆಗೆ ಬರುವ ನಮ್ಮ ದೊಡ್ಡಮ್ಮನ ಮಗಳ ಗಂಡ ಜಯ ಭಾವ ಬಂದಿದ್ದರು. ಅವರಿಗೂ ನಮ್ಮ ಹೋರಿ ಹುಡುಕಾಟದ ಸುದ್ದಿ ಕಿವಿಗೆ ಬಿತ್ತಿತ್ತು. ಸುಧೀರಣ್ಣ (ದೊಡ್ಡಮ್ಮನ ಮಗ) ಆಗಲೇ ತಿಳಿಸಿಯಾಗಿತ್ತು. ಅವರು"ನಮ್ಮ ನಂದಿಕೂರಿನ ಪುಣ್ಕೆದಡಿ ಆನಂದನಲ್ಲಿ  ಒಂದು ಜತೆ ಹೋರಿ ಇದೆ, ನೀನು ಮತ್ತು ಸುಧೀರ ಬನ್ನಿ ಅಂತ" ಹೇಳಿ ಹೋದರು. ಅದೇ ರಾತ್ರಿ ಸುಧೀರಣ್ಣನ ಜೊತೆಯಲ್ಲಿ ನಾವಿಬ್ಬರೂ ನಂದಿಕೂರಿಗೆ ಹೋದೆವು. ಅಂದು ರಾತ್ರಿ ಅಲ್ಲಿಯೇ ಇದ್ದೆವು. ಮುಂಜಾನೆ ಹುಲ್ಲು ಮೇಯಲು ಕಟ್ಟಿದ್ದ ಎರಡು ಹೋರಿಗಳನ್ನು ನಮಗೆ ತೋರಿಸಿದರು. ನನಗೆ ಖುಷಿಯಾಯಿತು. ವ್ಯವಹಾರ ಕುದುರಿಸುವಂತೆ ಹೇಳಿ ಹಿಂತಿರುಗಿದೆವು. ಅಂದು ಅಲ್ಲಿ ಕಂಡ ಹೋರಿಗಳು ನಮ್ಮ ಕಣ್ಣಲ್ಲಿ ಮನೆ ಮಾಡಿದವು. ಒಂದು ಕಪ್ಪು ಕೊಂಬು ಬಾಗಿದ ಹೋರಿ. ಇನ್ನೊಂದು ಕೆಂಪು ಮೈಯ ಸದೃಢ ಹೋರಿ. ಸಂಜೆ ಮನೆಗೆ ಬಂದು ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆವು. ಖುಷಿಯೊಡನೆ ಹಟ್ಟಿ ತುಂಬುವ ಸಂಭ್ರಮ ನಮ್ಮದಾಯಿತು!
 
ನಾವೊಂದು ಎಣಿಸಿದರೆ ವಿಧಿ ಇನ್ನೊಂದು ಬಗೆಯುತ್ತದೆ ಅನ್ನುತ್ತಾರೆ. ಹಣ ಎಲ್ಲಾ ಸೇರಿಸಿಕೊಂಡು ಒಂದು ಎರಡು ದಿನ ಕಳೆದು ತಂದೆ, ನಾನು ಮತ್ತು ತಮ್ಮ ಜಯ ಭಾವನವರ ಮನೆಗೆ ಹೋಗಿದ್ದೆವು. ಅಷ್ಟರಲ್ಲಿ ಒಂದು ನಿರಾಶೆ ನಮಗೆ ಕಾದಿತ್ತು. ಪುಣ್ಕೆದಡಿ ಆನಂದ ಹೋರಿಗಳನ್ನು ಆಗಲೇ ಪಡುಬಿದ್ರಿಯ ಇಮ್ತಿಯಾಜ್ ಬ್ಯಾರಿಗೆ ರೇಟ್ ಮಾಡಿ ಆಗಿತ್ತು. ಇಮ್ತಿಯಾಜ್ ಈಗಾಗಲೇ ಆನಂದನಿಗೆ ಎಲ್ಲಾ ಹಣ ಕೊಟ್ಟಾಗಿತ್ತು. ಭಾಷೆ ಮುರಿಯಲಾಗದೆ ಆನಂದ ನಮ್ಮನ್ನು ನಿರಾಶೆಯಿಂದಲೇ ಬೀಳ್ಕೊಟ್ಟ. ಇನ್ನೂ ಏನೂ ಮಾಡುವ ಹಾಗೆ ಇರಲಿಲ್ಲ. ಆದರೂ ತಮ್ಮ ಮತ್ತು ನನಗೆ ಇನ್ನೊಮ್ಮೆ ಆ ಹೋರಿಗಳನ್ನು ನೋಡಿಕೊಂಡು ಬರುವ ಆಸೆಯಾಯಿತು. ಆನಂದನ ಹಟ್ಟಿಯ ಕಡೆ ಜಯಭಾವ ನಮ್ಮನ್ನು ಕರೆದುಕೊಂಡು ಹೋದರು. ಎರಡು ಹೋರಿಗಳ ತಲೆ ನೇವರಿಸಿ ಬೇಸರದಿಂದ ನಾವು ಅಲ್ಲಿಂದ ಕಾಲ್ಕಿತ್ತೆವು !.
 
ಮುಂಗಾರು ಚುರುಕಾಯಿತು. ಜೂನ್ ಬಿಡದೆ ಮಳೆರಾಯ ಗರ್ಜಿಸಿದ. ನಿಧಾನವಾಗಿ ಸಾಗುವಳಿ ಶುರುವಾಯಿತು. ಶೀನ ಮಾವನ ಕೋಣಗಳು ನಮ್ಮ ಗದ್ದೆಯ ಸಾಗುವಳಿ ಮಾಡಿದವು. ಸುಧೀರಣ್ಣನ ಹಲಗೆ ನಮ್ಮ ಗದ್ದೆಯ ತುಂಬಾ ಓಡಾಡಿದವು. ಅಂತೂ ಕಾರ್ತಿ ಬೆಳೆ ಮುಗಿದಿತ್ತು. ಅಗಸ್ಟ್ ತಿಂಗಳು. ನಾಗರಪಂಚಮಿಯ ದಿನ ಜಯಭಾವನವರು ಮನೆ ಕಡೆ ಬಂದಿದ್ದರು. ಒಂದು ಸುದ್ದಿಯನ್ನು ಮುಟ್ಟಿಸಿದರು. ಇಮ್ತಿಯಾಜನಿಗೆ ಮಾರಿದ್ದ ಹೋರಿಗಳು ಇಮ್ತಿಯಾಜ್ ನ ಕೈಯಿಂದ ಓಡಿ ಹೋಗಿದ್ದವು. ಸುಮಾರು ಒಂದೂವರೆ ತಿಂಗಳು ಎಲ್ಲೂ ಸಿಗದ ಹೋರಿ ಮತ್ತೆ ಜಯಭಾವನವರ ಗದ್ದೆಯಲ್ಲಿ ಹುಲ್ಲು ಮೇಯುತ್ತಿದ್ದವು. ಪಡುಬಿದ್ರಿಯಲ್ಲಿ ಸ್ಕೂಟರ್ ಆಕ್ಸಿಡೆಂಟ್ ನಲ್ಲಿ ಕಾಲಿಗೆ ಪೆಟ್ಟಾದ ಇಮ್ತಿಯಾಜ್ ಉಡುಪಿಯ ಅಜ್ಜೆರಕಾಡ್ ಆಸ್ಪತ್ರೆಯಲ್ಲಿ ಎಡ್ಮಿಟ್ ಇದ್ದಾನೆ. ಅವನ ಮಕ್ಕಳು ಇನ್ನು ಸಣ್ಣವರು ಸದ್ಯಕ್ಕೆ ಇಮ್ತಿಯಾಜ ನ ವ್ಯವಹಾರ ನಿಂತು ಹೋಗಿದೆ.

ಹೋರಿ ಗಳನ್ನು ತಮ್ಮ ಲಚ್ಚಿಲ್ ನಲ್ಲಿ ಹುಲ್ಲು ಮೇಯಿತ್ತಿದ್ದದನ್ನು ಕಂಡ ಜಯ ಭಾವ ಆನಂದನ ಮನೆಗೆ ಹೋಗಿ ಮಾರಿದ್ದನ್ನು  ಮತ್ತೊಮ್ಮೆ ದೃಢ ಮಾಡಿಕೊಂಡರು. ಆನಂದ "  ಹೌದು ಜಯ , ಒಂದೂವರೆ ತಿಂಗಳಾಯಿತು "ಎಂದಾಗ ಒಳಗೊಳಗೆ ಖುಷಿಪಟ್ಟರು. ಒಂದು ದಿನ ಬೆಳಿಗ್ಗೆ ಜಯಭಾವ ಗದ್ದೆಗೆ ನೀರು ಅಡ್ಡ ಹಾಕಲು ಹೋದಾಗ ಕೆಂಪು ಹೋರಿ ಗದ್ದೆಯ ಪಕ್ಕದ ಲಚ್ಚಿನಲ್ಲಿ ಮಲಗಿತ್ತು. ಇವರು ಹತ್ತಿರ ಹೋದಾಗ ಒಂದೇ ನೆಗೆತಕ್ಕೆ ಓಡಿಹೋಯಿತು.
 
ಭಾವ ನಮ್ಮನ್ನು ಕರೆದು ಉಪಾಯ ಮಾಡಿದರು. ಒಂದು ವೇಳೆ ಎರಡು ಹೋರಿಗಳು ಸಿಕ್ಕರೆ ನೀವು ಅವುಗಳನ್ನು ಕೊಂಡು ಹೋಗಬಹುದು. ಆದರೆ ಅವುಗಳನ್ನು ಹಿಡಿಯುವುದು ಹೇಗೆ ಎಂಬುದೇ ಪ್ರಶ್ನೆಯಾಯಿತು.ಕತ್ತಿನಲ್ಲಿ ಒಂದು ಹಗ್ಗ ಕೂಡಾ ಇರಲಿಲ್ಲ. ಒಂದು ಸಿಕ್ಕಿ ಇನ್ನೊಂದು ಸಿಗದಿದ್ದರೆ ಪ್ರಯೋಜನವಿಲ್ಲ!.  ಜಯಭಾವನ ತಲೆ ಓಡತೊಡಗಿತು. ನಮ್ಮನ್ನು ಶಾಲೆಯಿಂದ ನೇರವಾಗಿ ನಂದಿಕೂರಿಗೆ ಕರೆಸಿ ಕೊಂಡರು.ನಾನು, ತಮ್ಮ ಮತ್ತು ಸುಧೀರಣ್ಣ ನಂದಿಕೂರಿಗೆ ಹೋಗುವ ಅಮರ್ಜ್ಯೊತಿ ಬಸ್ಸು ಹಿಡಿದೆವು. ರಾತ್ರಿ ಭಾವನವರ ಮನೆಯಲ್ಲಿ ಎತ್ತುಗಳನ್ನು ಹಿಡಿಯುವ ಬಗೆಗಿನ ನಾನಾ ಚರ್ಚೆಯಾಯಿತು. ಬೆಳ್ಳಗ್ಗೆ ಲಚ್ಚಿಲ್ ನಲ್ಲಿ ಹುಡುಕಾಡಿ ಗುಡ್ಡೆಗಳಲ್ಲಿ, ಗೋಳಿಮರದ ಅಡಿಯಲ್ಲಿ ನೋಡ ತೊಡಗಿದೆವು. ಇದಕ್ಕಿದ್ದಂತೆ ಕೆಂಪು ಹೋರಿ ಕುಂಟುತ್ತಾ ಲಚ್ಚಿಲಲ್ಲಿ ಕಾಣಿಸಿತು. ಬಹುಷ: ಕಾಲಿಗೆ ಮುಳ್ಳು ಚುಚ್ಚಿರಬೇಕು. ನಾವು ನಾಲ್ಕು ಮಂದಿ ಅಡ್ಡಕಟ್ಟಿದಾಗ ಸುಲಭವಾಗಿ ಸಿಕ್ಕಿತ್ತು. ಹಗ್ಗ ಕೊರಳಿಗೆ ಬಿಗಿದು ಎಳೆದು ತಂದು  ಭಾವನ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದೆವು. ಕಾಲಿಗೆ ಶುಶ್ರೂಷೆ ಮಾಡಿ ಬಟ್ಟೆ ಕಟ್ಟಿದ್ದೆವು. ತುಂಬಾ ಸಾಧು ಸ್ವಭಾವದ ಹೋರಿ. ಬೇಗನೆ ಹೊಂದಿ ಕೊಂಡಿತ್ತು.
 
ಇನ್ನೂ ಕೊಂಬು ಬಾಗಿದ ಕಪ್ಪು ಹೋರಿಯ ಹುಡುಕಾಟ ಶುರುವಾಯಿತು. ಸತತ ಎರಡು ದಿನವಾದರೂ ಅದರ ಸುಳಿವು ಇರಲಿಲ್ಲ.ಅಂದು ಶನಿವಾರ ಮಧ್ಯಾಹ್ನ ರಜೆಯಾದರಿಂದ ಬೇಗನೆ ನಾವು ಬಂದಿದ್ದೆವು. ಗುಡ್ಡ ಹುಡುಕಾಡುವಾಗ ಸುಧೀರಣ್ಣನ ಕಣ್ಣಿಗೆ ಕಪ್ಪು ಹೋರಿ ಕಂಡಿತು. ಆಗ ಅದನ್ನು ಹಿಡಿಯುವ ಸಮಯವಲ್ಲವಾದ್ದರಿಂದ ರಾತ್ರಿಗಾಗಿ ಕಾಯಬೇಕಾಯಿತು. ಗೋಳಿ ಮರದಡಿಯಲ್ಲಿ  ಅದು ಮಲಗುವ ಜಾಗದ ಪತ್ತೆ ಹಚ್ಚಿದೆವು. ರಾತ್ರಿ ಊಟ ಮುಗಿದು ಸುಮಾರು ೮ ಗಂಟೆ ರಾತ್ರಿಯ ಹೊತ್ತಿಗೆ ಗುಡ್ಡೆಯ ಕಡೆ ನಮ್ಮ ಸವಾರಿ ನಡೆಯಿತು. ಹೆಚ್ಚು ಸದ್ದಿಲ್ಲದೆ ಹೋದರೂ ಕಪ್ಪು ಹೋರಿ ನಮ್ಮ ವಾಸನೆಗೆ ದಢ್ ಅಂತ ಎದ್ದಿತು. ಇನ್ನೇನೂ ಓಡುವಷ್ಟರಲ್ಲಿ ಸುಧೀರಣ್ಣ ಅದರ ಕೊಂಬಿಗೆ ಹಗ್ಗ ಬೀಸಿದರು. ಅದು ಸಿಕ್ಕಿಹಾಕಿ ಕೊಂಡಿತು. ಸುಲಭವಾಗಿ ಕೈಗೆ ಸಿಕ್ಕಿ ಬಿಟ್ಟಿತು. ಜಯಭಾವನವರು ಇನ್ನೂ ಚುರುಕಾದರು. ಇವತ್ತೆ ರಾತ್ರಿ ನೀವು ಕರೆದುಕೊಂಡು ಹೋಗಿ ಎಂದರು.

ನಾವು ಬೆಳಿಗ್ಗೆ ಬೇಗ ಎದ್ದು ಹೊರಡುವ ಯೋಜನೆ ಮಾಡಿದ್ದೆವು. ಅದು ಆಗಸ್ಟ್ ತಿಂಗಳು ಮಳೆ ಇನ್ನೇನೂ ಇದ್ದೆ ಇತ್ತು. ಬೆಳ್ಳಿಗ್ಗೆ ೩ ಗಂಟೆಗೆ ಎದ್ದ ಭಾವನವರು ನಮ್ಮನ್ನು ಎಬ್ಬಿಸಿದರು. ಕಪ್ಪು ಚಾ ಮಾಡಿಕೊಟ್ಟು ಮೂವರಿಗೂ ಕುಡಿಸಿದರು. ಅಕ್ಕ ಮತ್ತು ಮಕ್ಕಳು ಇನ್ನು ನಿದ್ದೆಯಲ್ಲಿಯೇ ಇದ್ದರು. ಎರಡೂ ಹೋರಿಗಳ ಹಗ್ಗ ಹಿಡಿದು ಕೊಂಡು ನಾವು ನಂದಿಕೂರಿನ ಡಾಮರು ರೋಡಿನಿಂದ ಶಿರ್ವದ ಕಡೆ ನಡೆಯತೊಡಗಿದೆವು. ಮುಂದೆ ಸುಧೀರಣ್ಣ ಕಪ್ಪು ಹೋರಿಯ ಹಗ್ಗ ಹಿಡಿದರೆ, ತಮ್ಮ ಕೆಂಪು ಹೋರಿಯ ಹಗ್ಗ ಹಿಡಿದ. ಹಿಂದಿನಿಂದ  ನಾನು ಹಿಂದಿನಿಂದ ಹೋರಿಗಳನ್ನು ರಭಸವಾಗಿ ಹೆಜ್ಜೆ ಹಾಕುವಂತೆ ಬೆತ್ತ ಬೀಸುತ್ತ ಹುರಿದುಂಬಿಸುತ್ತಿದ್ದೆ. ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಟಾರ್ಚು.  ರಾತ್ರಿಯ ಹೊತ್ತು ನಾಯಿಗಳ ಕೂಗಾಟ ಮತ್ತೊಂದು ಕಡೆ. ಮುದರಂಗಡಿ ದಾಟುತ್ತಾ ಬಂದಂತೆ ನಾಯಿಗಳ ಕೂಗಾಟ ಹೆಚ್ಚಾಯಿತು. ಹೋರಿಗಳ ಗೆರೆಸೆ ಸಪ್ಪಳ್ಳಕ್ಕೆ ನಾಯಿಗಳು ಎಚ್ಚೆತ್ತಿದ್ದವು. ಮಳೆರಾಯ ಮಾತ್ರ ಹೆಚ್ಚಿಗೆ ಉಪದ್ರ ಕೊಡಲಿಲ್ಲ. ಏನೋ ನಮ್ಮೊಡನೆ ಖುಷಿಯಾದಗಲೆಲ್ಲ ದೊಪ್ಪಂತೆ ಬೀಳುತ್ತಾ ನಿಲ್ಲುತ್ತಿದ್ದ.  ಸುಮಾರು ೭ ಗಂಟೆಯ ಹೊತ್ತಿಗೆ  ಇನ್ನೇನೊ ಸೂರ್ಯ ಏರಿರಲಿಲ್ಲ ಎರಡೂ ಹೋರಿಗಳು ನಮ್ಮ ಮನೆಯ ಪಟ್ಟಿ ಸೇರಿ ಆಗಿತ್ತು. ಆದಿತ್ಯನ ಹೊಸ ಕಿರಣಗಳೊಂದಿಗೆ ಹೋರಿಗಳು ಹೊಸ ಜಾಗವನ್ನು ಸೇರಿದವು.
 
ಕಪ್ಪು ಹೋರಿಗೆ ಕೊಂಬು ಬಾಗಿದ್ದರಿಂದ ನಾವು ಪ್ರೀತಿಯಿಂದ ಬಾಚ ಎಂದು ಕರೆದೆವು . ಕೆಂಪು ಹೋರಿಗೆ ಮೈರ ಎಂದು ಹೆಸರಿಟ್ಟೆವು ಈ ಘಟನೆ ನಡೆದುದು ೧೯೯೫ ರ ಹೊತ್ತಿಗೆ ಅನಂತರ ಐದಾರು ವರ್ಷ ಹೋರಿಗಳು ನಮ್ಮ ಸಹಪಾಠಿಯಾಗಿದ್ದೆವು. ಅಂದಿನಿಂದ ನಾವು ಸ್ವತಂತ್ರವಾಗಿ ಬೇಸಾಯಮಾಡಿಕೊಂಡೆವು. ಹೆಚ್ಚುವರಿ ಗದ್ದೆಗಳನ್ನು ಹಿಡುವಳಿಯಾಗಿ ವಹಿಸಿಕೊಂಡೆವು ಕೂಡಾ. ಜಯಭಾವ, ಸುಧೀರಣ್ಣನವರ ಉಪಕಾರ ಮರೆಯುವಂತಿಲ್ಲ. ನಾನು ಮುಂಬೈಗೆ ಬಂದ ನಂತರ ೧೯೯೯ ನಂತರ ಎರಡು ವರ್ಷ ಈ ಹೋರಿಗಳು ಇದ್ದವು. ಅಸೌಖ್ಯದಿಂದ ಭಾಚ ಕೊನೆ ಉಸಿರು ಬಿಟ್ಟಾಗ ೨೦೦೦ ರಲ್ಲಿ ನಾನು ಕಣ್ಣೀರು ಹಾಕಿದ್ದೆ. ನಂತರ ಒಂಟಿಯಾದ ಮೈರ ಬಡಕಲಾದ. ಎಲ್ಲೋ ಬೇರಿನ ಎಡೆಗೆ ಸಿಕ್ಕಿಸಿಕೊಂಡ ನಂತರ ಏಳಲೇ ಇಲ್ಲ. ೨೦೦೧ ರಲ್ಲಿ ಅದನ್ನು ಸಮಾಧಿ ಮಾಡಿದ ತಮ್ಮ ಫೋನು ಮಾಡಿದಾಗ ಕಣ್ಣು ತೇವವಾಗಿತ್ತು. ಎಲ್ಲೋ ಇದ್ದ ಈ ಹೋರಿಗಳು ಯಾವ ಬಂಧನದಿಂದಲೋ ನಮ್ಮನ್ನು ಸೇರಿ ನಮ್ಮ ಸಾಧನೆಯ ಅಂಗವಾಗಿ ದೂರವಾಗಿ ಬಿಟ್ಟಿದ್ದವು.
 
ಈ ಹೋರಿ ತಂದ ಕಥೆ ನೆನಪದಾಗಲೆಲ್ಲಾ ಮತ್ತೆ ಸುಧೀರಣ್ಣ ನೆನಪಾಗುತ್ತಾರೆ. ಸುಧೀರಣ್ಣ ನೆನಪಾದಗಲೆಲ್ಲಾ ಈ ಶ್ರಮಜೀವಿಗಳು ನೆನಪಾಗುತ್ತವೆ. ಶ್ರಮಕ್ಕೆ ಏನೂ ಬಯಸದ ಈ ಮೂವರು ಮತ್ತೆ ಮತ್ತೆ ನೆನಪಾಗುತ್ತಾರೆ.

 
*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x