ಎಡಸೊಕ್ಕು: ಹಿಪ್ಪರಗಿ ಸಿದ್ದರಾಮ್

'ಯೇನಪಾ…ತಮ್ಮಾ, ನಿನ್ನ ಹಂತ್ಯಾಕ ಮೊಬೈಲ್ ಐತೇನು?' ಆ ವಯಸ್ಸಾದ ಹಿರಿಯರು ಕೋರ್ಟ್ ಒಂದರ ಆವರಣದಲ್ಲಿ ನನಗೆ ಕೇಳಿದಾಗ, 'ಯಾಕ್ರಿ ಅಮ್ಮಾರ…ಈಗಿನ ಕಾಲದಾಗ ಮೊಬೈಲ್ ಇಲ್ಲದವರು ಯಾರರ ಇರ್ತಾರೇನ್ರೀ ನೀವ ಹೇಳ್ರೀ?' ಅಂತ ತಮಾಷೆಯೊಂದಿಗೆ ಗೌರವಪೂರ್ವಕವಾಗಿ ನಾನಂದೆ. 'ಹಂಗಲ್ಲೋ ನನ್ನ ಬಾಳಾ, ಮುಂಜಾಲಿಂದ ನಮ್ಮ ವಕೀಲರು ಬರ್ತಾರಂತ ಕಾಯಾಕತ್ತೀನಿ, ಪೋನ್ ಮಾಡಿದರ ರಿಸೀವ ಮಾಡಂಗಿಲ್ಲಾಗ್ಯಾರ…ನಿನ್ನ ಮೊಬೈಲ್ ಪೋನಿನಿಂದ ಅವರಿಗೆ ಹಚ್ಚಿ ಕೊಡು' ಎಂದು ಅರವತ್ತರ ವಯೋಮಾನದ ಆಸುಪಾಸಿನ ಆ ಹಣ್ಣು-ಹಣ್ಣು ಮುದಿಜೀವ ವಿನಂತಿಸಿಕೊಂಡಾಗ ಮನ ಕರಗಿತು. ಆದರೆ ಆ ಕಡೆಯಿಂದ ಆಕೆಯ ವಕೀಲರು ಮತ್ತದೆ ಥರ ಮಾಡಿದರು. ಸ್ಪೀಕರ್ ಆನ್ ಮಾಡಿ ಮುದುಕಿಯ ಕಿವಿಯ ಹತ್ತಿರ ಹಿಡಿದು ಪೋನ್ ರಿಂಗ್ ಆಗುವುದನ್ನು ಕೇಳಿಸಿದೆ. 'ಹೀಂಗ ಮಾಡ್ತಾರ ನೋಡಪ, ನಿನ್ನೆ ಅವರ ಮನೆಗೆ ಹೋಗಿ ನಾಳೆ ಮುದ್ದತ್ ಐತ್ರಿ, ಸಹಿ ಮಾಡಾಕ ಕೋರ್ಟಿಗೆ ಬರ್ರಿ ಅಂದ್ರು, ಅದಕ್ಕ ಮುಂಜಾಲಿಂದ ಬಂದು ಕೂತೇನಿ, ಟಾಯಮ್ ನಾಲ್ಕ ಘಂಟೆ ಆತ ನೋಡು…ಇನ್ನೂ ಬಂದಿಲ್ಲ' ಎನ್ನುತ್ತಾ ಮುಖ ಕಿವಿಚಿ ಬೇಸರ ವ್ಯಕ್ತ ಪಡಿಸಿದಳು. 

ಕೆಲ ಸಮಯ ಸುಮ್ಮನಿದ್ದ ನಾನು ನಂತರ ಕೇಳಿದೆ. 'ಯಾವ ಕೇಸಿನ ಸಲುವಾಗಿ ಕೋರ್ಟಿಗೆ ಬಂದೀರಿ ಹಿರೇರ?' ಎಂದು ಮಾತಿಗೆಳೆದೆ. 'ಅದನ್ನೇನು ಕೇಳತಿ ಬಿಡಪಾ….ನನ್ನ ಕೇಸ ನಡೆದು ಮೂವ್ವತ್ತು ವರ್ಷದ ಮ್ಯಾಲಾತು !' ಎನ್ನುವಾಗ ಮುದಿವಯಸ್ಸಿನ ಅವಳ ಮುಖ ನೋಡಿದೆ ಮುಖದಲ್ಲಿ ಪಶ್ಚಾತ್ತಾಪದ ಗೆರೆ ಢಾಳಾಗಿ ಕಾಣಿಸುತ್ತಿತ್ತು. ಆದರೂ ಕುತೂಹಲದ ಘಟ್ಟದಲ್ಲಿ ಸುಮ್ಮನಿದ್ದರೆ ಮೂರ್ಖತನವಾದಿತೆಂದು 'ಯಾಕಬೇ, ಒಬ್ಬಾಕೀನ ಬಂದಿದಿ ? ಯಾರೂ ಇಲ್ಲೇನು ನಿನಗ? ಒಂದು ಕೇಸು ಮುಗಿಸಿ ಕೋಡಾಕ ಮೂವ್ವತ್ತ ವರ್ಷಗಟ್ಟಲೇ ಹಿಡಿತದೇನು? ಆಯ್ತು, ನಿನ್ನ ಕೇಸಾದರೂ ಎಂಥಾದ್ದು ಅಂತೀನಿ?' ಎಂದೆ. 'ಅಯ್ಯ ನನ್ನ ಕೂಸ ! ನೀ ಕೇಳಾದು ನೋಡಿದರ ನೀ ಇನ್ನೂ ಚಿಗುರುಮಿಡಿ ಇದ್ದಾಂಗದಿಯಲ್ಲೋ ಕಂದಾ…' ಅಂದಳು. 'ಯೇ ಯೇನಾತು ಹೇಳಬೇ…ನಮ್ಮ ಕೈಲಿಂದ ಏನಾದರೂ ಸಹಾಯ ಆಗೂವಂಗಿದ್ರ ಮಾಡೂಣಂತ…' ಅನ್ನುತ್ತಿರುವಾಗಲೇ ಮುದುಕಿ ತನ್ನೊಂದಿಗೆ ತಂದಿರುವ ಚೀಲದೊಳಗಿಂದ ಕಪ್ಪು-ಬಿಳುಪಿನಲ್ಲಿರುವ ದಂಪತಿಗಳ ಪೋಟೋ ತೆಗೆದು ತೋರಿಸಿದಳು. ಮಗಾ-ಸೊಸಿ ಯಾವುದೋ ಅಪಘಾತದಲ್ಲಿ ಮರಣ ಹೊಂದಿದ್ದಕ್ಕೆ ಪರಿಹಾರ ಕೇಳಲು ಕೋರ್ಟಿನಲ್ಲಿ ಕೇಸು ದಾಖಲಿಸಿರಬಹುದೆಂದು ನಾನು ಉಹಿಸಿದೆ. ಆದರೆ ನನ್ನ ಉಹೆಯನ್ನು ನಿರಾಕರಿಸಿದ ಮುದುಕಿ 'ಅಯ್ಯಾ ತಮ್ಮಾ ಸರಿಯಾಗಿ ನೋಡೋ, ಅದರಾಗ ಇದ್ದಾಕಿ ನಾನ, ಅವ್ರು ನಮ್ಮ ಮನೀಯವರು' ಎಂದು ಭಾವಹೀನ ಮುಖಭಾವದ ಇಳಿವಯಸ್ಸಿನ ಮುದುಕಿಯ ಮುಖದಲ್ಲಿ ಯೌವ್ವನದ ಮಿಂಚು ಝಗ್ಗನೆ ಹೊಳೆದು ಮಾಯವಾದಂತೆನಿಸಿತು. 'ಜೋಡಿ ಮಸ್ತ ಐತಿ ಬಿಡು, ಉದಯಕುಮಾರ-ಜಯಂತಿ ಜೋಡಿ ಇದ್ದಾಂಗ ಅದೀರಿ ನೋಡು. ಮುಂದೇನಾಯಿತು, ನಿಮ್ಮ ಮನೀಯವರು ತೀರಿಕೊಂಡಿದ್ದಕ್ಕೇನಾರಾ ಪರಿಹಾರ ಅಂತೇನಾದರೂ ಕೇಸು!, ಯಾವುದರ ಮರ್ಡರ ಕೇಸಿನ್ಯಾಗ ಜೈಲಿಗೇ ಹೋಗ್ಯಾರೇನು? ಅವರನ್ನ ಬಿಡಿಕೊಳ್ಳಾಕೇನಾರ ಕೇಸು ನಡದೈತೆನು? ನಿಮ್ಮ ಹಕೀಕತ್ ಏನು ? ತುಸು ಬಿಡಿಸಿ ಹೇಳಬೇ ?' ಎಂದು ಅವಸರಿಸಿದೆ. 

'ಹೇಳ್ತೀನಿ ಕೇಳೋ ಬಾಳಾ…ಒಂದೇ ಹೊಟ್ಯಾಗ ಹುಟ್ಟಿದ ಅಕ್ಕ-ತಂಗೇರನ್ನ ಅಣ್ಣ-ತಮ್ಮಗ ಮದುವಿ ಮಾಡಿಕೊಟ್ಟಿದ್ದರು. ತಂಗಿ ಬಾಳೇವ ಬಾಳ ಚಂದ ನಡೀತು. ಅಕ್ಕನ ಬಾಳೇವು ಅಕೀನ ಎಡಸೊಕ್ಕಿಗಿ ಮುರದು ಮೂರಾಬಟ್ಟಿ ಆತು. ಅಷ್ಟರಾಗ ಒಂದು ಹೆಣ್ಣು ಕೂಸು ಹುಟ್ಟಿತ್ತು. ಅದನ್ನ ಕಟಗೊಂಡು ಬೆಳಗಾಗುದರಾಗ ಗಂಡನ ಮನ್ಯಾಗಿನ ಯಾರಿಗೂ ಹೇಳದ-ಕೇಳದ ಅಕ್ಕ ಅಂತ ಅನಿಸಿಕೊಂಡಾಕಿ ಸರೀಕದಾಕಿ ಸ್ವಂತ ತಂಗಿಗೂ ಒಂದ ಮಾತ ತಿಳಸದ ತವರ ಮನೀಗಿ ಓಡಿ ಬಂದಳು. ತವರ ಮನ್ಯಾಗ ಎಲ್ಲಾ ಥರದಿಂದಾನೂ ಬುದ್ಧಿ ಹೇಳಿ ಸಂಸಾರ ಶುದ್ಧ ಮಾಡಾಕ ಬಾಳ ಕಟಬಟ ಬಿಟ್ಟರು. ಮೊದಲ ತಿಡ್ಡ ಮಾತಾಡಕೋತ, ಯಾರಿಗೂ ಕಿಮ್ಮತ್ತ ಕೋಡಲಾರದೇ, ಒಳಗಿನವರ್ಯಾರು-ಹೊರಗಿನವರ್ಯಾರು ತಿಳಕೋಲಾರದೇನ ಬುದ್ಧಿ ಹೇಳಾಕ ಬಂದೌರಿಗೆಲ್ಲಾ ಕೆಟ್ಟ ಬೈಗಳ ಬೈದು ಅವರಿಗೆ ಇನಸಲ್ಟ್ ಮಾಡಿ ಕಳಸಿತ್ತದ್ದಳು. ಇದರೊಂದ ಬ್ಯಾಸತ್ತ ತವರು ಮನೀಯವರು ಓಡಿ ಬಂದ ಅಕ್ಕನಿಗೆ ಬುದ್ಧಿ ಮಾತ ಹೇಳೂದ ಬಿಟ್ರು. ಬಗಲಾಗಿನ ಮಗಳು ಬೆಳದು ದೊಡ್ಡಾಕಿ ಆಗಾಕತ್ತಿದ್ಳು. ಅಷ್ಟೋತ್ತಿಗೆ ಯಾರೋ ಉಪದ್ವಾಪಿ ಬಂದಾವ್ನ, ಆಕೀನ ಬಾರೀ ಕಾಳಜಿ ಮಾಡವರಂಗ ಆಕೀಗಿ ಹೇಳಿದ. ನೋಡವಾ ಯಕ್ಕಾ, ಈಗೀಗ ಸರಕಾರದವರು ಹೆಣ್ಮಕ್ಕಳ ಸಲಾಗಿ ಬಾಳಷ್ಟು ಕಾಯದೆ-ಕಾನೂನು ಮಾಡ್ಯಾರಾ, ನೀನು ಕೋರ್ಟಿನ್ಯಾಗ ಒಂದು ಮೆಂಟೆನನ್ಸ್ ಕೇಸ್ ಹಾಕು. ನಿನಗ ಮತ್ತ ನಿನ್ನ ಮಗಳಿಗಿ ನಿನ್ನ ಗಂಡನಿಂದಾ ತಿಂಗಳಾ ಇಂತಿಷ್ಟು ಅಂತ ಕೋರ್ಟಿನವರು ಕೊಡಸ್ತಾರ' ಅಂತ ಒಂದು ಹಂಚಿಕಿ ಹೇಳದ. ಅಷ್ಟೇ ಅಲ್ಲ ಪ್ಯಾಟ್ಯಾಗ ಒಬ್ರು ಇಂಥ ಕೇಸ ನಡಸೋ ಒಬ್ರು ವಕೀಲರು ತನಗ ಬಾಳ ಪರಿಚಯ ಅದಾರ. ನೀ ನಾಳಿಗೆ ಬರ್ತಿನಿ ಅಂದ್ರ ಪ್ಯಾಟಿಗೇ ಹೋಗೂನಂತ ಎಂದು ಹೇಳುತ್ತಾ ಮದವಿ ವ್ಯಾಳ್ಯಾದಾಗಿಂದು ಏನರ ಗುರುತಂತ ಇದ್ದರ ತಗೊಂಡು ಬಾ, ಅದು ಸಾಕ್ಷಿಗೆ ಬೇಕಾಗ್ತದ ಎಂದು ಬಾಳ ಕಾಳಜಿ ತಗೋಳ್ಳೋರ ಥರಾ ಹೇಳಿದ. ಅಕೀಗೂ ಖರೇ ಅನಿಸಿ, ಹೊಟ್ಟಿ ಉಪಜೀವನಕ್ಕರ ಖರ್ಚಿಗಿ ಆಗ್ತದ ಅಂತ ಅನಕೊಂಡು ಮದವಿ ಆದ ಮ್ಯಾಲ ಉಳವಿ ಬಸವೇಶ್ವರ ಜಾತ್ರಯೊಳಗ ತಗಿಸಿಕೊಂಡ ಪೋಟೋ ಹಿಡಕೊಂಡು ವಕೀಲರ ಕಡಿ ಹೋದಳು. ವಕೀಲರು ಸೈತ ಎಲ್ಲಾ ಮಾಹಿತಿ ತಗೊಂಡು ಕೇಸ್ ಹಾಕಿದರು. ಮುಂದ ಒಂದೆರಡ ತಿಂಗಳದಾಗ ಆಗಿನ ಕಾಲದಾಗ ತಿಂಗಳಾ ತಾಯಿ-ಮಗಳಿಗೆ ಸೇರಿ ಮೆಂಟೆನನ್ಸ ಅಂತ ಮುನ್ನೂರು ರೂಪಾಯಿಯನ್ನ ಗಂಡ ಅಂತ ಅನಿಸಿಕೊಂಡ ಮೂಳ ಕೊಡಬೇಕಂತ ಆರ್ಡರ್ ಮಾಡ್ತು. ಮೊದ-ಮೊದಲಿಗೆ ಗಂಡ ಅನ್ನೋ ಬಿಕನಾಶಿ  'ನಾನ್ಯಾಕ ಕೊಡ್ಲಿ, ಆಕೀನ ಗಂಡ ವಲ್ಲೆ ಅಂತ ಮನೀ ಬಿಟ್ಟು ಬೇವರ್ಸಿಯಂಗ ಓಡಿಹೋಗ್ಯಾಳಂದ ಮ್ಯಾಲ ನಾ ಕೊಡಂವಲ್ಲ' ಅಂತ ಎಲ್ಲಾ ಕಡೀ ಹೇಳಿಕೊಂತ ತಿರುಗಾಡಿದ. ಕೊನಿಗೆ ಕೋರ್ಟ ವಾರಂಟ್ ಹೊಂಡಿಸಿ, ಹಿಡಿದು ಜೈಲಿಗಿ ಹಾಕಿದರು. ಕಿಮ್ಮತ್ತ ಹೋಗ್ತದಂತ ಅಲ್ಲೀತನಕ ಕೋಡಬೇಕಾದ ಬಾಕಿನೆಲ್ಲಾ ಕೋರ್ಟಿನಾಗ ಚುಕ್ತಾ ಮಾಡಿ, ಜೈಲಿನಿಂದ ಹೊರಗ ಬಂದವನ ಆಕೀಗೇನು ಮಾಡಲಿಲ್ಲ. ಹಠಕ್ಕ ಬಿದ್ದಾಂವನ ಇನ್ನೊಂದು ಮದವಿ ಮಾಡಿಕೊಂಡ. ತನಗಾದಾಗ ಒಮ್ಮೊಮ್ಮಿ ಕೊರ್ಟಿಗಿ ಬರತಿದ್ದಾ. ಇನ್ನೊಂದು ಮದುವಿ ಆಗಿದ್ದನಲ್ಲ, ಆಕೀಗಿ ಸೈತ ಒಂದು ಗಂಡ ಕೂಸ ಹುಟ್ಟತ್ತು. ಒಂದೊಂದು ಸಲ ತಾಯಿ-ಕೂಸಿನ್ನ ಕರಕೊಂಡು ಕೋರ್ಟಿಗೆ ಬಂದು ಹೋಗ್ತಿದ್ದ. ಹೀಂಗ ನಡೀತು. ಮೂವ್ವತ್ತು ವರ್ಷಗಳು ಆದ್ವು. ಮಗಳಿಗೆ ಮದುವಿ ಮಾಡಿಕೊಟ್ಟಳು. ಮಗಳು ತಾಯಿಯಂಗ ಅಡ್ಡ ಹಾದಿ ಹಿಡಿಯದೇ ಚಲೋ ಹೆಂಡ್ತಿ ಆಗಿ ಏಳು ಮಕ್ಕಳ ತಾಯಿ ಆದಳು. ಇಕಾಡಿ ತಾಯಿ ಮಾತ್ರ ಪ್ಯಾಟಿಗಿ ಕೋರ್ಟ-ಕೇಸ ಅಂತ ತಿರಗಾಡೂದು ತಪ್ಪಸಲಿಲ್ಲ. ಆಕಾಡಿ ಆ ಮುದುಕ ತನ್ನ ಎರಡನೇ ಹೆಂಡತಿ ಹೊಟ್ಟೀಲೇ ಹುಟ್ಟಿದ ಮಕ್ಕಳಿಗೆ ಚಲೋತ್ನ್ಯಾಗ ಓದಿಸಿ, ಸಾಯಬ, ಇಂಜನೇರ, ಮಾಸ್ತರತಿ ಹೀಂಗ ಸರಕಾರದ ನೌಕ್ರಿಗಿ ಹಚ್ಚಿದ' ಎಂದು ಮುದಕಮ್ಮ ಮಾತ ನಿಂದರಿಸಿ ಕೆಮ್ಮಿದಳು. 

'ಹಾಂ ಸಾವಕಾಸ ಹೇಳಬೇ, ಟೆನ್ಸನ್ ಮಾಡಕೋಬ್ಯಾಡ…ಇದರ ನಡುವ ತವರ ಮನೀಯವರು ಏನು ಸಹಾಯ ಮಾಡಲಿಲ್ಲೇನು ? ಇರಲಿ ಈಗ ಹ್ಯಾಂಗಿದ್ದರೂ ಕೋರ್ಟ ಹಾಲಿನ ಹತ್ರಾನ ಕುಂತಿದೀ, ಜಡ್ಜ್ ಸಾಹೇಬರು ಬರೋದು ಇನ್ನೂ ತಡಾ ಆಗ್ತೇತಿ ಅಂತ ಅವರ ಆಪೀಸಿನ ಪಿವನ್ ಯಾರಿಗೋ ಹೇಳೂದನ್ನ ನಾ ಕೇಳಿಸಿಕೊಂಡೇನಿ' ಎಂದೆ.

'ಇನ್ನ ಹೇಳೂದರಾಗ ಏನ ಉಳದೈತೋ ಕಂದಾ, ಮುಂದೇನಾತು ಅಂದರ, ತವರಮನಿ ಅಂದ್ರ ತಾಯಿ-ತಂದಿ ಇರೋತನಕ ಹೆಣ್ಮಕ್ಕಳದು ನಡೀತೈತಿ. ಅವರಿಬ್ಬರೂ ಬಿದ್ದಹೋದ ಮ್ಯಾಲ ಯಾರಿಗಿಯಾರು ಕಾಳಜಿ ಮಾಡಾವರು ಇರಾದಿಲ್ಲ.  ಜೀವನದೊಳಗ ಒಂದ ಸಲ ಈ ಸಂಸಾರ-ಬಾಳ್ವೇದ ಲೆಕ್ಕ ತಪ್ಪಿದರ ಮತ್ತ ಸರೀ ಮಾಡಾಕಾಗೋದಿಲ್ಲೊ…ಹರೆದಾಗ, ಮೈಯಾಗ ಶಕ್ತಿ ಇರೋತನಕ ಏನೂ ಅನಸಂಗಿಲ್ಲ. ಮುದಕರಾದಂಗ ಮೈಯ್ಯಾಗಿನ ಎಣ್ಣಿ ಶಕತಿ ಕಡಿಮಿ ಆದಂಗ ಆವಾಗ ಅರಿವಾಗಾಕ ಶುರುವಾಗ್ತದ. ಆದ್ರೇನು ಮಾಡೂದು ? ಸರೀಕದವರು ಸತ್ತೋಗಿರತಾರ ಇಲ್ಲಂದರ ಅವರವರ ಸಂಸಾರದಾಗ ಅವ್ರು ಮುಳುಗಿಹೋಗಿರತಾರ. 
ಬರ್ರೇಪಾ ಅಂದ್ರ ಮುಲಾಜಿಗಿ ಬಿದ್ದು ಒಂದ್ಸಲಾ ಬರತಾರು ಇಲ್ಲಾಂದ್ರ ಎರಡ ಸಲಾ ಬಂದಾರು ! ಮತ್ತೊಮ್ಮಿ ಕರಿಯಾಕ ಹೋದ್ರ ಏನಾರಾ ನೆಪ ಹೇಳಿಕೊಂಡು ತಪ್ಪಸಗೋತಾರ. ಹೀಂಗಾಗಿ ಮುಪ್ಪಿನ ಕಾಲಕ್ಕ ಬ್ಯಾನಿಗೋಳು ಬಾಳ ಬರ್ತಾವು. ಈಗಿನ ಕಾಳದ ಸಣ್ಣ ಹುಡುಗ್ರು ಅದೇನೋ ಸಂಘ ಅಂತ ಮಾಡಿಕೊಂಡೇವಿ, ಮುಪ್ಪಿನ ಕಾಲಕ್ಕರ ನಿಮ್ಮನ್ನ ನಿಮ್ಮ ಗಂಡನ ಮನೀ ಸೇರಸ್ತೀವಿ ಅಂತ ಬಂದ್ರು, ಲೈಟ್, ಕ್ಯಾಮರಾ ಅಂತ ಬೆಳಕಿನ್ಯಾಗ ಏನೇನೋ ಅಳಕೊಂತ ಹೇಳಬೇ ಅಂತ ಏನೇನೋ ಹೇಳಿಸಿದರು, ಮರುದಿನ ಟಿವ್ಯಾಗ ಬರತೈತಿ ನೋಡಬೇ ಅಂತ ಹೇಳಿ ಹೋದರು. ಮೊನ್ನಿ ಮಗಳ ಮನೀಗಿ ಹೋದಾಗ  ಟಿವಿಯೊಳಗ ನೋಡಿದ್ದನ್ನ ಮಗಳ ಗಂಡ ಅಳ್ಯಾ ಹೇಳ್ತಿದ್ದ' ಎಂದು ಉಗುಳು ನುಂಗಿಕೊಂಡು ಚಾಳಿಸು ತೆಗೆದು ಕಣ್ಣು ಒರೆಸಿಕೊಂಡಳು. 

'ಮುಂದೇನಾತಬೇ, ಆದರೂ ಆ ಮುದುಕಿ ತನ್ನ ಮಂಡತನದಿಂದ ದುಡುಕಿ ತನ್ನ ಬದುಕನ್ನ ಮೂರಾಬಟ್ಟಿ ಮಾಡಿಕೊಂಡಳು ಅಂತ ನನಗ ಸರಳ ಅನಸಾಕತ್ತೈತಿ ನೋಡಬೇ…' ಎಂದೆ. ನನ್ನನ್ನೇ ದಿಟ್ಟಿಸುತ್ತಾ ಮುಂದುವರಿಸಿದಳು. 'ಹೂನೋ ನನ್ನ ಬಾಳಾ, ಇಷ್ಟ ಸಣ್ಣ ವಯಸ್ಸಿಗೆ ನಿನಗ ಆ ದೇವರ ಎಟೋಂದು ತಿಳವಳಿಕಿ ಕೊಟ್ಟಾನಲ್ಲಾ…ನಿನ್ನ ಹಡದ ತಾಯಿ ಹೊಟ್ಟಿ ತಣ್ಣಗಿರಲೆಪ್ಪಾ…ಯಾವ ಜನಮದಾಗ ಏನಿದ್ದೋ ಏನಿಲ್ಲೋ…ಬಾಳ ಕಾಳಜಿಲೇ ಕೇಳಾಕತ್ತಿಯಲ್ಲ…ಖರೇವಂದ್ರೂ ಇಟೋತ್ತು ಹೇಳಿದನೆಲ್ಲಾ ಅಕ್ಕಾ-ತಂಗೇರ ಕಥಿಯೊಳಗಿನ ಅಕ್ಕ ಮತ್ತ  ಗಂಡನ ಮನಿಯಿಂದ ಓಡಿ ಬಂದಾಕಿ, ಸೊಕ್ಕ ಹೆಚ್ಚಾಗಿ ಗಂಡನ ಮ್ಯಾಲ ಕೇಸ ಹಾಕಿದಾಕಿ ಮತ್ತ ಈ ಪೋಟೋದಾಗ ಇರುವಾಕಿ ಅಂದ್ರ ನಿನ್ನ ಮುಂದ ಕುಂತೈತೆಲ್ಲ ನಾನ ಆ ಬುದ್ದೀಗೇಡಿ ಅಷ್ಟ ಅಲ್ಲ ಮಾನಗೇಡಿ ಮುದುಕಿ…' ಎಂದು ಹೇಳುತ್ತಾ  ಕಪಾಳದ ಮೇಲಿನಿಂದ ಹರಿಯುತ್ತಿರುವ ಬಣ್ಣವಿಲ್ಲದ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ದುಃಖಿಸಲಾರಂಭಿಸದಳು. 

'ಯೇ, ಹಂಗ್ಯಾಕ ಬೈಕೋತಿದಿಬೇ ನೀನು. ಸಮಾಧಾನ ಮಾಡಿಕೋ…ಅವರವರ ನಸೀಬದಾಗ ಆ ಶೆಟಿಗೆವ್ವ ತಾಯಿ ಹಣೆಬರಹ ಬರದಿತಾಳ ಅಂದಮ್ಯಾಲ ಯಾರಿಂದಾನೂ ತಪ್ಪಸಾಕ ಆಗೂದಿಲ್ಲ. ಮಿಂಚಿ ಹ್ವಾದ ಮಾತಿಗಿ ಚಿಂತಿಸಿ ಫಲಾ ಯೇನು ಇಲ್ಲ ಹೌದಿಲ್ಲೋ' ಎಂದು ಹೇಳುವುದರೊಂದಿಗೆ 'ಈಗ ಮುಂದ ಏನು ಮಾಬೇಕಂತ ಮಾಡಿಬೇ ಹೇಳು ? ಎಂದೆ. 'ಯೇನು ಮಾಡಬೇಕು ಹೇಳಪಾ, ಜೀವನಪೂರಾ ಸುಖ-ಸಂಭ್ರಮಗೋಳು ಅಂದ್ರರ ಯೇನು ಅನ್ನುವಂಗಾತು ನನ್ನ ಬಾಳೆ. ಈಗ ಬರೂ ಮೆಂಟೆನನ್ಸ್ ಹಳೆ ಆರ್ಡರ ಪ್ರಕಾರ ಕಡಿಮಿ ಅನಸ್ತಾದ. ಅದಕ್ಕ ಈಗಿನ ಕಾಲದಾಗ ಬದುಕೂದು ಕಷ್ಟ ಅದ, ಅದಕ್ಕ ಮೆಂಟೆನನ್ಸ್ ಹೆಚ್ಚ ಮಾಡ್ರಿ ಅಂತ ಮತ್ತೊಂದು ಕೇಸು ಹಾಕಬೇಕಾತದ ಅಂತ ವಕೀಲರು ಎರಡ ತಿಂಗಳ ಹಿಂದನ ಕಾಗದಪತ್ರಕ್ಕ ಸಹಿ ಮಾಡಿಸಿಕೊಂಡಾರ. ಮುದುಕ ಕೋರ್ಟಿಗೆ ಬಂದೇ ಇಲ್ಲಾ. ಜಡ್ಜ್ ಸಾಯೇಬ್ರು ವಾರಂಟ ಮಾಡ್ಯಾರಂತ…ಎಲ್ಲಿ ತಪ್ಪಿಸಿಕೊಂಡಾನ ಯೇನ ಕಥಿಯ…ನಾಕ ತಿಂಗಳ ಹಿಂದ ಬಂದಾಗ ನೋಡಿದ್ದೇ ಮುದುಕನು ಬಾಳ ಇಳದಾನ ಅಂದ್ರೂ ಶರೀರ ಕಾಯಕೊಂಡಾನ. ಅಂವೇನು ಜೈಲಿಗಿ ಹೋಗಾಕು ತಯಾರ ಅದಾನು' ಎಂದು ಮತ್ತೇ ತನ್ನ ಹಳೆಯ ಕಾಲದ ಸೊಕ್ಕಿನ ಮಾತುಗಳನ್ನಾಡತೊಡಗಿದಳು. ಒಮ್ಮೆ ಅತ್ತಂತೆ  ಮತ್ತೊಮ್ಮೆ ದಿಮಾಕಿನಿಂದ ಕಣ್ಣಗಲಿಸಿ ಮಾತಾಡುವ ಈ ಮುದುಕಿಯ ಹಾಲಛಾಲ ತಿಳಿಲಾರದಂಗ ಆಗೂದಕ್ಕ, ಅಷ್ಟರಾಗ ನನ್ನ ಸ್ನೇಹಿತನಿಂದ ಮೊಬೈಲ್ ಕರೆ 'ಬೇಗ ಬಾ' ಎಂದು. ಬೇಗ ನ್ಯಾಯವಂ ಪರಿಹರಿಸಲ್ಕೆ ನ್ಯಾಯದೇವತೆಗೆ ಕೈಮುಗಿದು ಹೊರಟೆ.

ನನಗೂ ಖರೇ ಅನಿಸ್ತು ! ಇಲ್ಲಿ ಹೆಣ್ಣು-ಗಂಡು ಎಂಬ ಪಾತ್ರಗಳು ಜೀವನವೆಂಬ ರಂಗಸ್ಥಳದಲ್ಲಿ ಬಂದಾಗ, ಅವರವರ ಜವಾಬ್ದಾರಿಯನ್ನು ಆತ್ಮಸಾಕ್ಷಿಯಾಗಿ ನಿಭಾಯಿಸುತ್ತಾ ರಂಗಪ್ರಯೋಗಕ್ಕೆ ಬೇಕಾಗುವ ಸಕಲಜ್ಞಾನವನ್ನು ಅಥವಾ ಅರಿವನ್ನು ಹೊಂದಿರಬೇಕಾದುದು ಅವಶ್ಯ. ರಂಗಪ್ರಯೋಗ ವೀಕ್ಷಿಸುವ ಸಮಾಜವೆಂಬ ಪ್ರೇಕ್ಷಕರು ಉತ್ತಮ ಪ್ರದರ್ಶನವಾದರೆ ಖಂಡಿತ ಹೊಗಳುತ್ತಾರೆ. (ಇಲ್ಲದಿದ್ದರೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ !) ಬೆಂಬಲಿಸುತ್ತಾರೆ. ಗೌರವಿಸುತ್ತಾರೆ. ಆ ಗೌರವಾದರಗಳಿಂದ ಖುಷಿಯಾದ ಮನವು ಅರಳಿ, ಆರೋಗ್ಯವೆಂಬ ಸಂಪತ್ತು ವೃದ್ಧಿಯಾಗುತ್ತದೆ. ಆ ಸಂಪತ್ತಿನಿಂದ ಸಮಾಜದಲ್ಲಿ ಸಂತಸದಿಂದ ಮಾದರಿಯಾಗಿ ಅನುಗಾಲವು ಶೋಭಾಯಮಾನವಾಗಿ ಬೆಳಗಬಹುದಲ್ಲವೇ? 

ಪ್ರಜಾಪ್ರಭುತ್ವವೆಂಬ ವ್ಯವಸ್ಥೆಯ ಮಹಾಮಾರ್ಗದಲ್ಲಿ ನಾವು ಆರಿಸಿ ಕಳುಹಿಸಿದ ಪ್ರಜಾಪ್ರತಿನಿಧಿಗಳು ಪ್ರಜೆಗಳ ಒಳಿತಿಗಾಗಿಯೇ ಶಾಸನಗಳನ್ನು ರೂಪಿಸುತ್ತಾರೆ. ಅಂತಹ ಶಾಸನಗಳನ್ನು (ಕಾಯ್ದೆಗಳನ್ನು) ಸಮರ್ಪಕವಾಗಿ ಸದೂಪಯೋಗಪಡಿಸಿಕೊಳ್ಳಬೇಕೆ ಹೊರತು ಯಾರೋ ಹೇಳಿದರು ಅಥವಾ ತಪ್ಪು ಮಾರ್ಗದರ್ಶನ ನೀಡಿದರೆಂದು ಸೇಡಿನಿಂದ ಅಮಾಯಕರ (ಇನ್ನೋಸೆಂಟ್ ವ್ಯಕ್ತಿತ್ವಗಳ) ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುವುದರೊಂದಿಗೆ ವಿನಾಕಾರಣ ವೈರತ್ವ ಸೃಷ್ಟಿಸಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುವುದರಲ್ಲಿ 
ಅರ್ಥವಿಲ್ಲ. ಏನಂತೀರಿ ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Suman
Suman
10 years ago

Khare Khare niv helodu,, yenu madlikkagudillari, vyavasthe na hangada.. chand abrediri

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago
Reply to  Suman

ಹೌದ್ರೀ…..ವ್ಯವಸ್ಥಾನ ಹಂಗೈತಿ ಅಂತ ತಪ್ಪ ದಾರಿ ಹಿಡಿಬಾರದಲ್ರೀ….ಸುಕಾ-ಸುಮ್ಕನ ತನ್ನ ಜೀವನ ಹಾಳ ಮಾಡಿಕೊಂಡ ಮುದಕಿಗಿ ಈಗ ಪಶ್ಚಾತ್ತಾಪ ಬಂದ್ರ ಉಪಯೋಗ ಇಲ್ಲ ನೋಡ್ರೀ….ಇದು ಕೇವಲ ಕಾಲ್ಪನಿಕ ಕಥೆ ಅಲ್ರೀ….ಧಾರವಾಡ ಕೊರ್ಟ ಆವರಣದೊಳಗ ಮುದುಕಿಯೊಬ್ಬಳನ್ನು ಕುತೂಹಲದಿಂದ ಮಾತಾಡಿಸಿದಾಗ ಹೊರ ಬಂದ ಕಥಿ ಐತ್ರಿ ಮೇಡಮ್…ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು….ಶುಭದಿನ…ರೀ….

 

amardeep.p.s.
amardeep.p.s.
10 years ago

ಸುಮ್ಮನೆ ಒಣ ಧಿಮಾಕು ಮಾಡಿ ಸಂಸಾರ ಹಾಳು ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಏನು ಇಲ್ಲ.. ಆದರೆ, "ಹೊಂದಿಕೊಂಡು" ಹೋಗುವ ಸ್ವಭಾವ ಇದ್ದರೆ ನೆಟ್ಟಗೆ ನಡೀತದೆ…. ಇಲ್ಲಾಂದ್ರ ಹೀಗೆ ಆಗೋದು…ಚೆನ್ನಾಗಿ ಬರೆದೀರಿ..

3
0
Would love your thoughts, please comment.x
()
x