ಭೂತಪ್ಪನ ಲೇವಾದೇವಿ: ಅಖಿಲೇಶ್ ಚಿಪ್ಪಳಿ ಅಂಕಣ


ಸಾಗರದಿಂದ ವರದಾಮೂಲಕ್ಕೆ ಹೋಗುವ ದಾರಿಯಲ್ಲಿ ಮಧ್ಯೆ ಓತಿಗೋಡು-ಶೆಡ್ತಿಕೆರೆ ಹೋಗುವ ಒಂದು ದಾರಿಯಿದೆ. ಇಷ್ಟು ವರ್ಷ ಮಣ್ಣು ದಾರಿಯಾಗಿತ್ತು, ಅಭಿವೃದ್ಧಿಯಾಗಿ ಅಲ್ಲಿ ಈಗ ಕಿತ್ತುಹೋದ ಟಾರು ರಸ್ತೆಯ ಅವಶೇಷಗಳನ್ನು ಕಾಣಬಹುದು. ಅಲ್ಲಿದ್ದ ಸುಮಾರು ಮುನ್ನೂರು ಎಕರೆಯಷ್ಟು ಜಾಗಕ್ಕೆ ಧೂಪದ ಸಾಲು ಎನ್ನುವ ಹೆಸರಿದೆ. ನೈಸರ್ಗಿಕವಾಗಿ ವಿಂಗಡನೆಗೊಂಡ ಸಾಲುಧೂಪದ ಮರಗಳು ಎಣಿಕೆಗೆ ನಿಲುಕದಷ್ಟು ಇದ್ದವು. ಈಗೊಂದು ೨೦ ವರ್ಷಗಳ ಹಿಂದೆ ಸರ್ಕಾರದವರು ಪೇಪರ್ ಮಿಲ್‌ಗಳಿಗೆ ಸರಬರಾಜು ಮಾಡಲು ದಟ್ಟವಾದ ನಿತ್ಯಹರಿದ್ವರಣ ಮರಗಳ ನೈಸರ್ಗಿಕ ತೋಪನ್ನು ಹಿಟಾಚಿ-ಬುಲ್ಡೋಜರ್ ಹಚ್ಚಿ ನೆಲಸಮ ಮಾಡಿ ಅಕೇಶಿಯಾ ಗಿಡಗಳನ್ನು ಪರಿಚಯಿಸಿದರು. ಅಲ್ಲಿ ರಸ್ತೆ ಬದಿಯಲ್ಲಿ ಒಂದಿಷ್ಟು ಕೂಲಿ-ಕಾರ್ಮಿಕರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕೋಟ್ಯಾಂತರ ಹೂಗಳು ಬಿಡುತ್ತಿದ್ದ ಕಾಲದಲ್ಲಿ ಸಾಕಷ್ಟು ಜೇನು-ದುಂಬಿಗಳು ಆಹಾರವನ್ನರಸಿ ಅಲ್ಲಿ ಹಾರಾಡುತ್ತಿರುವಾಗ ಇಡೀ ಪ್ರದೇಶ ಝೇಂಕಾರದಿಂದ ಕೂಡಿರುತ್ತಿತ್ತು. ಅಕೇಶಿಯಾ ಬಂದ ಮೇಲೆ ಈಗ ಜೇನುಗಳಿಲ್ಲ. ಇದು ಮುಂದಿನ ಕತೆಗೆ ಪೀಠಿಕೆಯಷ್ಟೆ.

ಶೇಖರಪ್ಪ ಎಂಬುವವನೊಬ್ಬ ಅಲ್ಲಿ ವಾಸಿಸುವ ಕೂಲಿ-ಕಾರ್ಮಿಕ. ಈಗೊಂದು ನಾಲ್ಕು ವರ್ಷದ ಹಿಂದೆ ಹೆಗ್ಗೋಡಿಗೆ ಯಾವುದೋ ಕಾರ್ಯಕ್ರಮಕ್ಕೆ ಹೊರಟಿದ್ದಾಗ, ಮಧ್ಯ ಅಡ್ಡ ಬಂದ. ಏನು ಶೇಖರಪ್ಪ? ಏನು ನಡೆಸಿದ್ದೀಯೆ ಎಂದೆ. ಬಾಯಿತುಂಬ ಎಲೆ-ಅಡಿಕೆ ಹಾಕಿಕೊಂಡಿದ್ದ ಆತ ಕೆಂಪುರಸವನ್ನು ಪಿಚಕ್ಕನೆ ಚರಂಡಿಗೆ ಉಗುಳಿ, ಒಂದು ಇಪ್ಪತು ರೂಪಾಯಿ ಕೊಡಿ ಮಾರಾಯ್ರ ಎಂದ. ಯಾವಾಗಲೂ ೫-೧೦ ಕೇಳುತ್ತಿದ್ದವನು ಇವತು ದರವನ್ನು ಇಪ್ಪತ್ತಕ್ಕೇರಿಸಿದ್ದ. ಕಾರಣ ಹೇಳು ಮಾರಾಯ ಎಂದರೆ, ಬ್ಯಾಡ ಬಿಡಿ ಎಂದವನ ಮುಖ ಚಿಕ್ಕದಾಯಿತು. ನನಗೆ ಕಾರಣ ಬೇಕಿತ್ತು. ಅವ ಕಾರಣ ಹೇಳಲೊಲ್ಲ. ಮತ್ತೆ-ಮತ್ತೆ ಕೇಳಿದಾಗ ಕಾರಣ ಹೇಳಿದ. ಚಿಪ್ಪಳಿ ಕೆರೆ ಏರಿ ದಾಟಿದ ನಂತರದ ತಿರುವಿನಲ್ಲಿ ಒಂದು ಭೂತವಿದೆ. ಆ ಭೂತಕ್ಕೆ ತೊಟ್ಲು ಕಲ್ಲು ಭೂತ ಎಂದು ಕರೆಯುತ್ತಾರೆ. ಜಂಬಿಟ್ಟಿಗೆ ಕಲ್ಲಿನಿಂದ ಮಾಡಿದ ಒಂದು ತೊಟ್ಟಿಲು ಮರದ ಬುಡದಲ್ಲಿದೆ. ಕಲ್ಲಿನ ಪಕ್ಕದಲ್ಲೊಂದು ಬಿಳಿಕಗಣಿಲೆ ಮರ. ಹಾದಿಯಲ್ಲಿ ಹೋಗಿ ಬರುವವರು ಭೂತನಿಗೆ ಮೊದಲೆಲ್ಲಾ ಹತ್ತಿಪ್ಪತ್ತು ಪೈಸೆಗಳನ್ನು ಹಾಕಿ ಕೈಮುಗಿದು ಹೋಗುತ್ತಿದ್ದರು. ೫-೧೦ ಪೈಸೆಗಳ ಕಾಲ ಮುಗಿದ ಮೇಲೆ ನಾಕಾಣೆ-ಎಂಟಾಣೆ ಕಾಲ ಶುರುವಾಯಿತು. ಈಗ ಅವೂ ಇಲ್ಲ. ಹಳ್ಳಿಯ ಮುಗ್ಧರು ತಮ್ಮದ್ಯಾವುದೋ ಕಷ್ಟವನ್ನು ಭೂತಪ್ಪ ಪರಿಹರಿಸಲಿ ಎಂಬ ಧೋರಣೆಯಿಂದ ಈ ತರಹದ ಹಣಕಾಸಿನ ನೆರವನ್ನು ಭೂತಪ್ಪನಿಗೆ ನೀಡುತ್ತಾರೆ. ಈ ಶೇಖರಪ್ಪ ಕೊಂಚ ಕಿಲಾಡಿ ಮನುಷ್ಯ. ಇವನಿಗೆ ಹರಕ್ಕತ್ತಾಗಿ ಹಣದ ಅಡಚಣೆಯಾದಾಗ. ಈ ತೊಟ್ಲು ಕಲ್ಲು ಭೂತಪ್ಪನ ತೊಟ್ಟಿಲಿನಲ್ಲಿರುವ ದುಡ್ಡನ್ನು ತೆಗೆದುಕೊಳ್ಳುತ್ತಾನೆ. ತೆಗೆದುಕೊಳ್ಳುವ ಮುಂಚೆ ಶೇಖರ ಮತ್ತು ಭೂತಪ್ಪನ ಮಧ್ಯೆ ಒಂದು ಮಾತಿನ ಒಡಂಬಡಿಕೆಯಾಗುತ್ತದೆ. ಅಮವಾಸ್ಯೆ ಮುಂಚಿನ ದಿನ ತೆಗೆದುಕೊಂಡಷ್ಟು ದುಡ್ಡನ್ನು ವಾಪಾಸು ಹಾಕುತ್ತೇನೆ ಎಂಬುದೇ ಷರತ್ತು. ಇಲ್ಲಿ ಬಡ್ಡಿ ವ್ಯವಹಾರವಿಲ್ಲ ಮತ್ತು ಹಣ ವಾಪಾಸು ಮಾಡಲು ಕಟ್ಟಕಡೆಯ ದಿನಾಂಕ ಮಾತ್ರ ಅಮಾವಾಸ್ಯೆ. ಇದರಲ್ಲಿ ಹೊಂದಾಣಿಕೆಯಿಲ್ಲ ಎಂಬುದೇ ಗಮ್ಮತ್ತು. ಕೊಡುವ ಭೂತಪ್ಪ ಪ್ರಾಮಾಣಿಕ ಹೌದೋ? ಅಲ್ಲವೋ? ಶೇಖರಪ್ಪ ಮಾತ್ರ ಆಡಿದ ಮಾತಿನಂತೆ, ಒಡಂಬಡಿಕೆಯಂತೆ ವಾಪಾಸು ಮಾಡಲೇಬೇಕು. ಆ ದಿನ ಅಮವಾಸ್ಯೆ ಆದ್ದರಿಂದ ಹೆಗ್ಗೋಡಿಗೆ ಹೋಗುವ ನನ್ನನ್ನು ಅಡ್ಡ ಹಾಕಿ ಇಪ್ಪತ್ತು ಕೊಡಿ ಎಂದು ಕೇಳುತ್ತಿದ್ದ, ನೀನು ಭೂತಪ್ಪ ಏನಾದರೂ ಮಾಡಿಕೊಳ್ಳಿ ಮಾರಾಯ ಎಂದ್ದಿದ್ದಕ್ಕೆ ಇಪ್ಪತ್ತು ರೂಪಾಯಿ ಕೈ ಬಿಟ್ಟಿತು.

ಈ ನಿಜ ಘಟನೆಯನ್ನೇ ಹೋಲಿಕೆಯಿಟ್ಟುಕೊಂಡು ಮುಂದಿನ ಕತೆಗೆ ಹೋಗುವ. ಮೊನ್ನೆ ದಿನಾಂಕ:೧೧/೧೧/೨೦೧೩ರಿಂದ ಪೋಲ್ಯಾಂಡ್‌ನ ಮಾರ್‌ಷಾದಲ್ಲಿ ಯು.ಎನ್. ಕ್ಲೈಮೇಟ್ ಸಮ್ಮಿಟ್ ಶುರುವಾಗಿದೆ. ಹನ್ನೆರೆಡು ದಿನಗಳು ನಡೆಯುವ ಈ ಜಾಗತಿಕ ಸಮಾವೇಶದಲ್ಲಿ ಪ್ರಪಂಚದ ಬಹುಮುಖ್ಯವಾದ ದೇಶಗಳ ಧುರೀಣರು, ತಜ್ಞರು, ವಿಜ್ಞಾನಿಗಳು ಭಾಗವಹಿಸಿ ಭೂಬಿಸಿಯನ್ನು ನಿಯಂತ್ರಿಸುವ ಬಗ್ಗೆ ಮನುಕುಲದ ಜವಾಬ್ದಾರಿಯೆಷ್ಟಿದೆ. ಭೂಬಿಸಿ ಹೆಚ್ಚಲು ಯಾರ್‍ಯಾರ ಪಾಲು ಎಷ್ಟಿದೆ. ಇದನ್ನು ನಿಯಂತ್ರಿಸುವಲ್ಲಿ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಚರ್ಚೆ ಶುರುವಾಗಿದೆ. ಈ ಹಿಂದೆಯೂ ಇಂತಹ ಅನೇಕ ಸಮಾವೇಶಗಳು ಜಾಗತಿಕ ಮಟ್ಟದಲ್ಲಿ ನಡೆದಿವೆ. ಯಾವ ಸಭೆಯಲ್ಲೂ ಸೂಕ್ರವಾದ ಫಲಿತಾಂಶ ಹೊರಬಂದಿಲ್ಲವೆಂಬುದು ಖೇದದ ಸಂಗತಿಯಾಗಿದೆ. ಈ ಹೋಲಿಕೆಯಲ್ಲಿ ಕೊಡುವ ಸ್ಥಾನದಲ್ಲಿ ಭೂಮಿಯನ್ನು ಕಲ್ಪಿಸಿಕೊಳ್ಳೋಣ. ಈ ಭೂಮಿಯು ಭೂತಪ್ಪನ ಹಾಗೆ ಏನೂ ಮಾತನಾಡುವುದಿಲ್ಲ. ನಿಮ್ಮ ಇಷ್ಟದ ಪ್ರಕಾರ ಏನನ್ನು ಬೇಕಾದರೂ ಭೂಮಿಯಿಂದ ಪಡೆದುಕೊಳ್ಳಬಹುದು. ಯಾಕೆ ಇಷ್ಟು ಬಾಚಿಕೊಂಡೆ ಎಂದು ಭೂಮಿ ಕೇಳುವುದಿಲ್ಲ. ಪಡೆಯುವವರನ್ನು ನಮ್ಮ ಶೇಖರಪ್ಪನಿಗೆ ಹೋಲಿಸೋಣ. ಶೇಖರಪ್ಪನಿಗೆ ಅತಿಯಾದ ಅನಿವಾರ್ಯವಿದ್ದಾಗ ಮಾತ್ರ ಭೂತಪ್ಪನಿಂದ ಅದೂ ಹಿಂತಿರುಗಿಸುವ ಆಣೆಯನ್ನು ಹಾಕಿ ಬರೀ ಹತ್ತಿಪ್ಪತು ರೂಪಾಯಿಗಳನ್ನು ಪಡೆದುಕೊಳ್ಳುತ್ತಾನೆ. ಗಡುವಿನ ಒಳಗೆ ಹೇಗಾದರೂ ಮಾಡಿ ಪಡೆದ ದುಡ್ಡನ್ನು ಹೊಂದಿಸಿ ಭೂತಪ್ಪನಿಗೆ ಕಟ್ಟುತ್ತಾನೆ. ಆದರೆ ಜಗತ್ತಿನಲ್ಲಿ ನೂರಾರು ಶೇಖರಪ್ಪಗಳಿದ್ದಾರೆ. ಆದರೆ ಒಬ್ಬರಿಗಾದರೂ ಆ ಬಡ ಕೂಲಿಕಾರ್ಮಿಕ ಶೇಖರಪ್ಪನ ನಿಯತ್ತಿದೆಯೇ?

ಅಮೇರಿಕ ಅತ್ಯಂತ ಮುಂದುವರೆದ ದೇಶ ಎಂಬ ಹೆಗ್ಗಳಿಕೆಯನ್ನು ತನಗೇ ತಾನೇ ಕೊಟ್ಟುಕೊಂಡಿದೆ. ಜಗತ್ತಿನ ಇತರೆ ದೇಶಗಳು ಇದನ್ನು ಹೌದಪ್ಪಗಳಂತೆ ಒಪ್ಪಿಕೊಂಡಿವೆ. ಅತಿಹೆಚ್ಚು ಮಾಲಿನ್ಯ ಮಾಡುವ ದೇಶವೂ ಅಮೇರಿಕಾವೇ ಇದು ಎಲ್ಲರಿಗೂ ಗೊತ್ತು. ಇದನ್ನು ಗಟ್ಟಿಯಾಗಿ ವಿರೋಧಿಸಿ ಹೇಳುವ ಧೈರ್ಯ ಯಾವ ದೇಶಕ್ಕೂ ಇಲ್ಲ. ಎರಡನೇ ಮಾಲಿನ್ಯ ದೇಶವೆಂದರೆ, ಚೀನಾ. ಚೀನಾವಿನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ್ದರಿಂದ, ಇವರಿಗೆ ಹೆಚ್ಚು ಹೇಳಲು ನೈತಿಕತೆ ಇನ್ಯಾರಿಗೂ ಇಲ್ಲ. ಇನ್ನು ನಮ್ಮ ಭವ್ಯ ಭಾರತ. ನಮ್ಮಲ್ಲಿಯ ಬರೀ ಒಂದು ಪೇಟೆಯ ಚರಂಡಿ ಸಾಕು. ನಾವೆಷ್ಟು ಮಾಲಿನ್ಯ ಮಾಡುತ್ತಿದ್ದೇವೆ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ.

ದಿನಾಂಕ:೧೧/೧೧/೨೦೧೩ರಂದು ಹವಾಮಾನ ಬದಲಾವಣೆ ನಿಯಂತ್ರಿಸುವ ಕುರಿತಾದ ಸಮಾವೇಶ ಕಾಪ್-೧೯ ಪೋಲೆಂಡ್‌ನ ಮಾರ್‌ಷ್‌ನಲ್ಲಿ ಶುರುವಾಗಿದೆ. ಜಗತ್ತಿನ ಸುಮಾರು ೧೦ ಸಾವಿರ ಚಿಲ್ಲರೆ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿ ಭೂಜ್ವರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚರ್ಚೆ ಮಾಡುತ್ತಾರೆ. ಈ ಸಮಾವೇಶವನ್ನು ಉದ್ಘಾಟನಾ ಸಮಾರಂಭದಲ್ಲಿ  ಯೆಬ್ ಸಾನೋ (ಫಿಲಿಫೈನ್ಸ್‌ನ ಮುಖ್ಯ ಪ್ರತಿನಿಧಿ) ಮಾತಾನಾಡುತ್ತಿದ್ದ ಹಾಗೆ ಅವರ ಕೆನ್ನೆಯ ಮೇಲೆ ಧಾರಾಕಾರ ನೀರು. ಭೂಜ್ವರದಿಂದಾಗಿ ತನ್ನ ದೇಶದ ಜನ ಹೇಗೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವಿವರಿಸುತ್ತಾ, ಜಗತ್ತಿನ ಎಲ್ಲಾ ದೇಶಗಳು ಒಟ್ಟಾಗಿ ಸೇರಿ ಇಂಗಾಲಾಮ್ಲ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ ಹೇಗೆ ಇಡೀ ಭೂಮಿ ಬದುಕಲು ಯೋಗ್ಯವಿಲ್ಲದಾತಂತಾಗುತ್ತದೆ ಎನ್ನುತ್ತಿದ್ದರು. ಮೊನ್ನೆ ಬೀಸಿದ ಬೀಕರ ಚಂಡಮಾರುತ ಫೈಲಿನ್ ಅದೆಷ್ಟು ಜನರನ್ನು ಬಲಿತೆಗೆದುಕೊಂಡು ಸಾವಿರಾರು ಜನರನ್ನು ನಿರ್ಗತಿಕರನ್ನಾಗಿ ಮಾಡಿತು. ಇಲ್ಲಿರುವ ಎಲ್ಲಾ ಪ್ರತಿನಿಧಿಗಳು ಸೇರಿ ಒಂದು ಒಮ್ಮತದ ತೀರ್ಮಾನ ತೆಗೆದುಕೊಳ್ಳುವವರೆಗೂ ನಾನೂ ಅನ್ನವನ್ನು ಸೇವಿಸುವುದಿಲ್ಲ ಎಂದು ದು:ಖದಿಂದಲೇ ನುಡಿದರು. ಅದೇ ದೇಶದ ಇನ್ನೊಬ್ಬ ಪ್ರತಿನಿಧಿ ಡಾ:ಆಲೀಸಿಯಾ ಇಲ್ಗಾ ಈ ವರ್ಷ ನಮ್ಮಲ್ಲಿಗೆ ಒಟ್ಟು ೨೨ ಚಂಡಮಾರುತಗಳು ಅಪ್ಪಳಿಸಿವೆ. ೧೦೦೦ಕ್ಕೂ ಹೆಚ್ಚು ಜನ ಸತ್ತಿದ್ದಾರೆ ಹಾಗೂ ೧೦೦೦೦ ಸಾವಿರಕ್ಕೂ ಹೆಚ್ಚು ಮನೆ-ಮಠ ಕಳೆದುಕೊಂದು ನಿರ್ಗತಿಕಾಗಿದ್ದಾರೆ. ಇದರಿಂದ ಪಾರಾಗುವ ಬಗೆ ಹೇಗೆ? ನಮ್ಮ ದೇಶದ ಜನ ಸದಾ ಭಯದಿಂದ ಬದುಕುವ ವಾತಾವರಣವಿದೆ. ಇದಕ್ಕೇನು ಪರಿಹಾರ? ಆದ್ದರಿಂದ ಜಗತ್ತಿನ ಇತರ ದೇಶಗಳಲ್ಲಿ ವಿನಂತಿಸುವುದೇನೆಂದರೆ, ಬನ್ನಿ ನಾವೆಲ್ಲಾ ಒಟ್ಟಾಗಿ ಭೂಬಿಸಿಯನ್ನು ತಡೆಗಟ್ಟಬೇಕಿದೆ, ದಯವಿಟ್ಟು ಎಲ್ಲರೂ ಕೈಜೋಡಿಸೋಣ ಎಂದು ಆದ್ರರಾಗಿ ಮನವಿ ಮಾಡುತ್ತಾರೆ. ಇದನ್ನು ಕೇಳುತ್ತಿದ್ದ ೧೯೫ ದೇಶದ ೧೦ ಸಾವಿರ ಪ್ರತಿನಿಧಿಗಳಲ್ಲೂ ಕಂಡೂ ಕಾಣದಂತೆ ನೀರು.

ಹಿಂದಿನ ಎಲ್ಲಾ ಹವಾಮಾನ ಬದಲಾವಣೆಗೆ ಸಂಬಂಧಪಟ್ಟ ಸಮಾವೇಶಗಳಲ್ಲೂ ಅನೇಕ ಭೂಬಿಸಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲೂ ಅತ್ಯಂತ ವ್ಯಾಪಕವಾಗಿ ಪ್ರಚಾರ ಪಡೆದ ೨೦೦೯ರ ಕೋಪೆನ್‌ಹೇಗನ್ ಸಮಾವೇಶದಲ್ಲಿ ಏನಾದರೊಂದು ಗಟ್ಟಿಯಾದ ತೀರ್ಮಾನ ಹೊರಬರುಬಹುದೆಂದು ನಿರೀಕ್ಷಿಸಲಾಗಿತ್ತು. ಕಡೆಯದಾಗಿ ಎಲ್ಲಾ ದೇಶಗಳೂ ತಮ್ಮ ಹಠವನ್ನೇ ಹಿಡಿದು ಕುಳಿತವು. ಯಾರೂ ಕೂಡ ಸಮಷ್ಟಿಯಾಗಿ, ಇಡೀ ಭೂಮಿಯ ಬಗ್ಗೆ ಆಲೋಚನೆ ಮಾಡಲಿಲ್ಲ. ಎಲ್ಲವನ್ನೂ ಅಭಿವೃದ್ಧಿಯ ಮಾನದಂಡವನ್ನು ಮುಂದಿಟ್ಟುಕೊಂಡು ಸ್ವಾರ್ಥಪರ ಯೋಚನೆಯನ್ನು ಮಾಡಿದವು. ಭೂತಾಯಿಯಿಂದ ಪಡೆದ ಸಾಲವನ್ನು ಬಡ್ಡಿರಹಿತವಾಗಿಯಾದರೂ ತೀರಿಸಬೇಕೆಂಬ ನಿರ್ಣಯಕ್ಕೆ ಬೆಲೆ ಬರಲಿಲ್ಲ.

ಈ ಬಾರಿ ಮಾರ್‌ಷಾದಲ್ಲಿ ಚರ್ಚೆಯಾದ ವಿಚಾರದಲ್ಲಿ ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಅಂಕುಶ ಹಾಕಲು ಹುನ್ನಾರ ನಡೆಸಿದ್ದವು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯ ಕೃಷಿ ಕ್ಷೇತ್ರದ ಮಾಲಿನ್ಯದಿಂದಾಗಿ ವಾತಾವರಣದ ಬಿಸಿಯೇರುತ್ತದೆ ಎಂಬುದನ್ನು ಸಮರ್ಥವಾಗಿ ಬಿಂಬಿಸಲು ಪ್ರಯತ್ನಿಸಿದವು. ಆದರೆ ಅದರಲ್ಲಿ ವಿಫಲವಾದವು. ಇದಲ್ಲದೆ ಬಡರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡಿ ಅಲ್ಲಿ ಸಮರ್ಥವಾಗಿ ಅರಣ್ಯ ಬೆಳೆಸುವುದರ ಮೂಲಕ ಭೂಬಿಸಿಯನ್ನು ತಡೆಗಟ್ಟಬಹುದು ಎಂಬುದು ಬರೀ ಲೆಕ್ಕಾಚಾರದ ಹಂತದಲ್ಲೇ ಚರ್ಚೆಯಾಯಿತು. ಅತಿಯಾದ ಭೂಬಿಸಿಯಿಂದಾಗಿ ತೀರ ಪ್ರದೇಶಗಳು, ದ್ವೀಪ ಪ್ರದೇಶಗಳು, ಪರ್‍ಯಾಯ ದ್ವೀಪ ಪ್ರದೇಶಗಳು ಪದೇ ಪದೇ ಹಾನಿಗೀಡಾಗುತ್ತವೆ. ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಲಕ್ಷಾಂತರ ಜನ ನಿರ್ಗತಿಕರಾಗುತ್ತಾರೆ. ಅಲ್ಲದೇ ಅಪಾರವಾದ ಕೃಷಿಭೂಮಿ ಉಪ್ಪುನೀರಿನಿಂದಾಗಿ ಬರಡಾಗುತ್ತದೆ. ಉಪ್ಪುನೀರನ್ನೂ ಸಹಿಸಿ ಬೆಳೆಯಬಹುದಾದ, ಭಾರತದಲ್ಲಿ ಬಾಗಶ: ಅಳಿದುಹೋಗಿದ್ದ ಸುಮಾರು ೬೦೦ ತಳಿಗಳನ್ನು ೨ ವರ್ಷದ ಅವಧಿಯಲ್ಲಿ ಸಂಗ್ರಹಿಸಿ ಬೆಳೆಸಿದ್ದು, ಮತ್ತು ಇದು ಸಂಭಾವ್ಯ ಆಹಾರದ ಅಭಾವವನ್ನು ಸಮರ್ಥವಾಗಿ ನಿರ್ವಹಿಸುವ ಸಾಧ್ಯತೆಯನ್ನು ಎನರ್ಜ್ಯೈಸಿಂಗ್ ಡೆವಲಪ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಎ.ಕೆ.ಘೋಷ್ ಹೇಳುತ್ತಾರೆ.

ಪ್ರಪಂಚದ ೭೦೦ ಕೋಟಿ ಚಿಲ್ಲರೆ ಜನಗಳ ದೈನಂದಿನ ಈಗಿನ ಜೀವನಕ್ರಮವೆ ಭೂಬಿಸಿಗೆ ಕಾರಣವೆಂದು ಎಲ್ಲಾ ದೇಶಗಳ ವಿಜ್ಞಾನಿಗಳಿಗೆ, ತಜ್ಞರಿಗೆ, ರಾಜಕಾರಣಿಗಳಿಗೆ, ಕೆಲವು ಅಂಶ ಸಾಮಾನ್ಯರಿಗೆ ತಿಳಿದಿದೆ. ಆದರೆ ಯಾರೂ ತ್ಯಾಗ ಮಾಡಲು ತಯಾರಿಲ್ಲ. ಬಟ್ಟೆ ತೊಳೆಯುವ ಯಂತ್ರ, ರಾಗಿ ಬೀಸುವ ಯಂತ್ರ, ಫ್ಯಾನ್, ಏಸಿ, ಕಾರುಗಳು ಹೀಗೆ ಎಲ್ಲವೂ ಮಾಲಿನ್ಯಕಾರಕಗಳೆ. ಇದಲ್ಲದೆ ಧಾರ್ಮಿಕವಾಗಿ ಸಂಬಂಧಿಸಿದ ಅದೆಷ್ಟೋ ವಿಷಯಗಳೂ ಭೂಬಿಸಿಗೆ ಕಾರಣವಾಗಿವೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಭಾರತ ಮತ್ತು ನೇಪಾಳ ಸೇರಿ ಸುಮಾರು ೭೦ ಲಕ್ಷ ಹೆಣಗಳನ್ನು ಪ್ರತಿವರ್ಷ ದಹನ ಮಾಡಲಾಗುತ್ತದೆ. ಇದಕ್ಕಾಗಿ ಸುಮಾರು ೬೦-೭೦ ಲಕ್ಷ ಮರಗಳನ್ನು ಕಡಿಯಲಾಗುತ್ತದೆ. ಅಲ್ಲದೆ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಬಳಸುವ ತುಪ್ಪ ಮತ್ತಿತರೆ ವಸ್ತುಗಳು ಕೂಡ ಇಂಗಾಲಾಮ್ಲದ ಜೊತೆಯಲ್ಲಿ ವಾತಾವರಣಕ್ಕೆ ಸೇರಿ ಭೂಬಿಸಿಗೆ ಕಾರಣವಾಗುತ್ತವೆ. ಎಲ್ಲಾ ಧರ್ಮಗಳಲ್ಲೂ ಅಗ್ನಿಗೆ ಮಹತ್ವವಿದೆ. ಹಚ್ಚುವ ಊದುಬತ್ತಿಗಳು, ಲಕ್ಷಾಂತರ ಸಂಖ್ಯೆಯಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ವಿಧಿ-ವಿಧಾನಗಳು ಭೂಬಿಸಿಗೆ ಕೊಡುಗೆಯನ್ನು ನೀಡುತ್ತಿವೆ. ಅತ್ಯಂತ ಸೂಕ್ಷ್ಮವಾದ ಇಂತಹ ಆಚರಣೆಗಳನ್ನು ನಿಲ್ಲಿಸುವುದಾಗಲಿ, ನಿಬಂರ್ಧದಿಸುವುದಾಗಲಿ ಸಾಧ್ಯವಿಲ್ಲ. ಲೆಕ್ಕ ಹಾಕಿ, ೭೦೦ ಕೋಟಿ ಜನರಿಂದ ಕಲುಷಿತವಾಗುತ್ತಿರುವ ಈ ಭೂಮಿಯನ್ನು ಉಳಿಸುವುದು ಸಾಧ್ಯವಿದೆ. ತೀರಾ ಗೌತಮ ಬುದ್ಧ ಮಾಡಿದಷ್ಟು ತ್ಯಾಗ ಮಾಡಬೇಕಿಲ್ಲ. ಮಾಜಿ ಪ್ರಧಾನಿ ದಿ:ಲಾಲ್ ಬಹದ್ದೂರ್ ಶಾಸ್ತ್ರಿಯವರು ಆಹಾರದ ಅಭಾವ ನೀಗಿಸಲು ವಾರಕ್ಕೊಂದು ದಿನ ಉಪವಾಸ ಮಾಡಿ ಎಂದು ಕರೆ ನೀಡಿದ್ದರು. ಹಿರಿಯ ತಲೆಮಾರಿನ ಕೆಲ ಜನರು ಈಗಲೂ ಇದನ್ನು ಪಾಲಿಸುತ್ತಿದ್ದಾರೆ.

ಬರೀ ಆಹಾರದ ಅಭಾವವನ್ನು ತಗ್ಗಿಸಲು ತ್ಯಾಗ ಮಾಡಿದ ದೇಶ ನಮ್ಮದು. ಮಾರ್‌ಷಾನಲ್ಲಿ ನಡೆಯುತ್ತಿರುವ ಕಾಪ್-೧೯ ಉದ್ಘಾಟನಾ ಸಮಾರಂಭದಲ್ಲೂ ಫಿಲಿಫೈನ್ಸಿನ ಪ್ರತಿನಿಧಿ ಉಪವಾಸ ಮಾಡುವುದಾಗಿ ಘೋಷಿಸಿ, ಉಪವಾಸ ವ್ರತವನ್ನು ಕೈಗೊಂಡಿದ್ದಾರೆ. ಹಾಗಾದರೆ ಮಾತೃವಾದ ಇಡೀ ಭೂತಾಯಿಯನ್ನುಳಿಸಲು ತನ್ಮೂಲಕ ನಮ್ಮನ್ನು ನಾವೇ ಉಳಿಸಿಕೊಳ್ಳಲು ಈ ತರಹದ ಸಾಮೂಹಿಕ ಉಪವಾಸದ ಜೊತೆ ಇನ್ನು ಕೆಲವು ಚಿಕ್ಕ-ಪುಟ್ಟ ತ್ಯಾಗಗಳನ್ನು ಮಾಡಬಹುದು. ಧಾರ್ಮಿಕ ನಂಬಿಕೆಯನ್ನು ಉಳಿಸಿಕೊಂಡು ಹತ್ತು ಊದುಬತ್ತಿ ಹಚ್ಚುವಲ್ಲಿ ಸಾಂಕೇತಿಕವಾಗಿ ಒಂದೇ ಊದುಬತ್ತಿಯನ್ನು ಬೆಳಗಬಹುದು. ಸಾಂಕೇತಿಕವಾಗಿ ಶವದ ಉಗುರನ್ನು ಮಾತ್ರ ಸುಟ್ಟು ಇಡೀ ದೇಹವನ್ನು ಆಸ್ಪತ್ರೆಗಳಿಗೆ ದಾನ ಮಾಡಬಹುದು ಅಥವಾ ನೆಲದಲ್ಲಿ ಹುಗಿಯಬಹುದು. ಧಾರ್ಮಿಕ ಕೇಂದ್ರಗಳಲ್ಲಿ ಸೂರ್ಯದೇವನ ಶಕ್ತಿಯಿಂದ ಉರಿಯಲ್ಪಡುವ ದೀಪವನ್ನುರಿಸಬಹುದು. ಹತ್ತೇ ಲೀಟರ್ ನೀರಿನಲ್ಲಿ ಸ್ನಾನ ಮಾಡಿ ಶುಚಿಯಾಗಬಹುದು. ಬಟ್ಟೆಗೆ ಇಸ್ತ್ರಿ ಹೊಡೆಯದೇ ಧರಿಸಬಹುದು. ತಿಂಗಳಿಗೊಮ್ಮೆ ಮಾತ್ರ ಮಾಂಸಹಾರ ಸೇವನೆ ಎಂಬ ಮಿತಿಯನ್ನು ಹಾಕಿಕೊಳ್ಳಬಹುದು. ಹಸಿವಿದ್ದಷ್ಟೇ ಬಡಿಸಿಕೊಂಡು ಉಣ್ಣಬಹುದು ಅಂದರೆ ಆಹಾರವನ್ನು ಚೆಲ್ಲಬಾರದು. ವಾರಕ್ಕೊಂದು ಬಾರಿಯಾದರೂ ಸ್ವಂತ ವಾಹನವನ್ನು ಉಪಯೋಗಿಸುವುದಿಲ್ಲ (ಸಾರ್ವಜನಿಕ ಸಾರಿಗೆಯನ್ನು ಬಳಸುವ ನಿರ್ಧಾರ) ಎಂಬ ನಿಯಮ ಪಾಲಿಸಬಹುದು. ಮದುವೆ-ಮುಂಜಿ, ತಿಥಿ-ಶ್ರಾಧ್ದ, ಮದುವೆಯ ವರ್ಷಾಚರಣೆ, ಹುಟ್ಟುಹಬ್ಬ ಇತ್ಯಾದಿ ನೆನಪಿಗಾಗಿ ಗಿಡ ನೆಡುವ ಸಂಕಲ್ಪ ಮಾಡಬಹುದು. ಸಾವಯವ ಪದಾರ್ಥವನ್ನು ಸೇವಿಸುವುದು. ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನೇ ಉಪಯೋಗಿಸುವುದು. ಐಷರಾಮಿ ಜೀವನಕ್ಕೆ ಕಡಿವಾಣ ಹಾಕಬಹುದು. ಮಳೆ ನೀರು ಸಂಗ್ರಹ ಮಾಡಿ ಉಪಯೋಗಿಸುವುದು ಇತ್ಯಾದಿ ಇತ್ಯಾದಿಗಳು. ಭೂಬಿಸಿಯಿಂದಾಗಿ ಭೂಮಿಯೇನು ತಕ್ಷಣದಲ್ಲಿ ಅಥವಾ ಕ್ಷಣಮಾತ್ರದಲ್ಲಿ ಮುಳುಗಿಹೋಗುವುದಿಲ್ಲ. ನಿಧಾನಕ್ಕೆ ಸಾಯುತ್ತದೆ. ಕಾರಣ ಮಾತ್ರ ಮಕ್ಕಳಾದ ನಾವೇ ಆಗುತ್ತೇವೆ ಎಂಬ ಪ್ರಜ್ಞೆ ಬಂದರೆ ಸಾಕು. ಉಳಿಸಬಹುದು. ಮೇಲೆ ಹೇಳಿದ ಶೇಖರಪ್ಪನಿಂದ ಪಾಠ ಕಲಿಯಬಹುದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x