ನರಭಕ್ಷಕ ವ್ಯಾಘ್ರ ವರ್ಸಸ್ ವ್ಯಾಘ್ರಭಕ್ಷಕ ನರ: ಅಖಿಲೇಶ್ ಚಿಪ್ಪಳಿ ಅಂಕಣ


ದಿನಾಂಕ:02/12/2013ರ ಒಂದು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಮುಖಪುಟದಲ್ಲಿ “ನರಭಕ್ಷಕ ವ್ಯಾಘ್ರಕ್ಕೆ ಗುಂಡಿಕ್ಕಿ: ಉಲ್ಲಾಸ ಕಾರಂತ” ಹೇಳಿಕೆಯಿತ್ತು. ವನ್ಯಜೀವಿ ಮತ್ತು ಹುಲಿಸಂರಕ್ಷಣೆಯ ಕ್ಷೇತ್ರದಲ್ಲಿ ಉಲ್ಲಾಸರದ್ದು ದೊಡ್ಡ ಹೆಸರು. ಕಡಲತೀರದ ಭಾರ್ಗವ ದಿ.ಶಿವರಾಮ ಕಾರಂತರ ಪುತ್ರರೂ ಆದ ಉಲ್ಲಾಸ ಕಾರಂತರ ಈ ಹೇಳಿಕೆ ಒಂದು ಕ್ಷಣ ದಿಗ್ಭ್ರಮೆ ಮೂಡಿಸಿತು. ಗಾಯಗೊಂಡ ಅಥವಾ ವಯಸ್ಸಾದ ಹುಲಿಗಳು ಸಾಮಾನ್ಯವಾಗಿ ನರಭಕ್ಷರವಾಗಿ ರೂಪುಗೊಳ್ಳುವುದು ಸಹಜ. ಇಡೀ ಘಟನೆಯನ್ನು ಮಾನವ ಹಕ್ಕು ಮತ್ತು ಪ್ರಾಣಿಗಳ ಹಕ್ಕು ಎಂಬಡಿಯಲ್ಲಿ ನೋಡಿದಾಗ, ಕಾರಂತರ ಗುಂಡಿಕ್ಕಿ ಹೇಳಿಕೆ ಮಾನವ ಪಕ್ಷಪಾತಿಯಾಗಿ ಕಾಣುತ್ತದೆ. ಈಗೊಂದು 60 ವರ್ಷಗಳ ಹಿಂದೆ ಸಾಗರದಂತಹ ಪೇಟೆ ಭಾಗದಲ್ಲಿ ಹುಲಿಗಳು ಸಂಚರಿಸುತ್ತಿದ್ದವು ಎಂಬ ಮಾತು ಸುಳ್ಳು ಮಾಹಿತಿ ಇರಬಹುದು ಎಂದು ತೋರುತ್ತದೆ. ಇದರ ಇನ್ನೊಂದು ಮಗ್ಗುಲನ್ನು ತೆರೆದುಕೊಳ್ಳುವ ವಿಚಾರವೆಂದರೆ, ದಟ್ಟವಾದ ಮಲೆನಾಡು ವಿವಿಧ ಕಾರಣಗಳಿಂದಾಗಿ ಬರಿದಾಗಿದೆಯಾದ್ದರಿಂದ ಹುಲಿಗಳಿಗೆ ನೆಲೆಯಿಲ್ಲವಾಗಿ, ಈ ಪ್ರದೇಶದಲ್ಲಿ ಸಂಪೂರ್ಣ ನಾಶವಾಗಿವೆ. ಸಾಗರ ತಾಲ್ಲೂಕಿನ ಬೆಳಂದೂರಿನಲ್ಲಿ ನರಭಕ್ಷಕ ರೂಪುಗೊಂಡಿದ್ದು, ಬ್ರಿಟೀಷ್ ಬೇಟೆಗಾರ ಕೆನತ್ ಆಂಡರ್‍ಸನ್ ತನ್ನ ಸ್ಟುಡಿಬೇಕರ್ ಕಾರಿನಲ್ಲಿ ಬಂದು, ಇಲ್ಲಿ ತಂಗಿ ಆ ನರಭಕ್ಷಕನ್ನು ಬೇಟೆಯಾಡಿದ ಮಾಹಿತಿ ದಿ.ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳಲ್ಲಿ ದಾಖಲಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ನಡಹಾಡಿ ಮತ್ತು ಸೀಗೆಹಾಡಿಯಲ್ಲಿ ಕಳೆದ ಒಂದು ವಾರದಲ್ಲಿ 2 ಜನರನ್ನು ಬಲಿತೆಗೆದುಕೊಂಡಿದ್ದು ದುರಂತವೇ ಸರಿ. ನರಭಕ್ಷಕನ್ನು ಹಿಡಿಯವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ತೊಡಗಿಕೊಂಡಿದೆ. ಸಫಲತೆ ಕಂಡಿಲ್ಲ. ಈ ಹೊತ್ತಿನಲ್ಲಿ ಉಪಗ್ರಹದಂತಹ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ, ಯಾವ ಹೊತ್ತಿನಲ್ಲಿ ಹುಲಿ ದಾಳಿ ಮಾಡಿದೆ. ಹಾಗೂ ಶವವನ್ನು ಎಲ್ಲಿಗೆ ಕೊಂಡು ಹೋಗಿದೆ ತಿಂದಿದೆ ಎಂಬ ಮಾಹಿತಿಗಳನ್ನು ಕಲೆಹಾಕುವಲ್ಲಿ ಅರಣ್ಯ ಇಲಾಖೆ ದೃಷ್ಟಿಹರಿಸಬೇಕು. ಅದಕ್ಕೂ ಮೊದಲು ನರಭಕ್ಷಕವಲ್ಲದ ಹುಲಿಗಳ ನಡವಳಿಕೆ ಮತ್ತು ನರಭಕ್ಷಕವಾಗಿ ರೂಪುಗೊಂಡ ಹುಲಿಯ ನಡವಳಿಕೆಯನ್ನು ಅಧ್ಯಯನ ಮಾಡಿದ ತಜ್ಞರ ಸಲಹೆ ತೆಗೆದುಕೊಳ್ಳುವುದು ಸೂಕ್ತ. ಈಗಿನ ಕಾಲದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಸಂಪೂರ್ಣ ತೊಡಗಿಕೊಂಡು ನಿಸ್ವಾರ್ಥ ಸೇವೆ ಮಾಡುವವರ ಸಂಖ್ಯೆ ಕಡಿಮೆಯಿದೆ. 50-60 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಮೃಗಾಲಯ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಮಾತ್ರ ಹುಲಿಗಳಿವೆ. ಆಹಾರ ಸರಪಣಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹುಲಿಗಳು ಬದುಕುಳಿಯಲು ಇಂತಹ ಸುರಕ್ಷತೆಯಿರುವ ಪ್ರದೇಶಗಳು ಮಾತ್ರ ಲಾಯಕ್ಕಾಗಿವೆ. ರಾಷ್ಟ್ರೀಯ ಉದ್ಯಾನವನಗಳಲ್ಲೂ ಬೇಟೆಗಾರರು ಹೊಂಚಿ ಕುಳಿತು ಹುಲಿಬೇಟೆ ಮಾಡುತ್ತಾರೆ. ನಮ್ಮ ದೇಶದ ಕಾನೂನಿನಲ್ಲಿ ಹುಲಿ-ಆನೆ ಕೊಂದ ಕಾರಣಕ್ಕೆ ನೇಣು ಹಾಕಿದ ಪ್ರಸಂಗಗಳು ಸಿಗುವುದಿಲ್ಲ. ಆರೋಪ ಸಾಬೀತಾದರೆ ಹಲವು ವರ್ಷಗಳು ಜೈಲಿನಲ್ಲಿ ಕಳೆಯಬೇಕಾಗಿ ಬರಬಹುದು. ಇಂತಹ ಹುಲಿಭಕ್ಷಕರನ್ನು ಸಾಕಲು ಸರ್ಕಾರಗಳು ವೆಚ್ಚ ಭರಿಸಬೇಕಾಗುತ್ತದೆ. ಎಷ್ಟೋ ಜನ ಹುಲಿಭಕ್ಷಕರು ಜೈಲಿನಿಂದಲೇ ಕಾರ್ಯಚರಣೆ ನಡೆಸಿ ವ್ಯವಹಾರ ಮಾಡಿರುವುದು ಹಲವು ಪತ್ರಿಕೆಗಳಲ್ಲಿ ಈ ಹಿಂದೆ ವರದಿಯಾಗಿದೆ. ವೀರಪ್ಪನ್ ಬರೀ ಆನೆದಂತ ಅಥವಾ ಹುಲಿಚರ್ಮ ಇವುಗಳಿಗಷ್ಟೇ ವ್ಯವಹಾರವನ್ನು ಸೀಮಿತಗೊಳಿಸಿಕೊಂಡಿದ್ದರೆ ಇದುವರೆಗೂ ಕಾಡಿನಲ್ಲಿ ಬದುಕಿರುತ್ತಿದ್ದ ಎಂಬ ಮಾತು ಉತ್ಪ್ರೇಕ್ಷೆಯಾಗಲಾರದು. ಯಾವಾಗ ವೀರಪ್ಪನ್ ನಾಡಿನ ಜನರನ್ನು ಬಡಿದು ಹಾಕಲು ತೊಡಗಿದನೋ, ಜನಪ್ರಿಯ ನಟ ರಾಜ್‍ಕುಮಾರ್‍ನಂತವರನ್ನು ಅಪಹರಿಸಿದನೋ ಆವಾಗಷ್ಟೆ ಸರ್ಕಾರ ನಿದ್ದೆಯಿಂದ್ದೆದಿತು. ಇಂತಹ ಘಟನೆಗಳು ಸರ್ಕಾರದ ಮತ್ತು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನೆ ಮಾಡುವ ಕಾರಣಗಳಾಗಿ ಪರಿಣಮಿಸುತ್ತವೆ. ನಾಡಿನ ನ್ಯಾಯದ ಮುಂದೆ ಕಾಡಿನ ನ್ಯಾಯ ಸದಾ ಸೋಲುತ್ತದೆ.

ಲಕ್ಷಾಂತರ ಹಣ ಖರ್ಚು ಮಾಡಿ ವಿದೇಶಗಳಿಗೆ ನಮ್ಮ ರಾಜ್ಯದ ಅರಣ್ಯ ಇಲಾಖೆಗಳ ಸಿಬ್ಬಂದಿಗಳು ಹೋಗಿ ತರಭೇತಿ ಪಡೆದು ಬರುತ್ತಾರೆ. ಅರಣ್ಯ ರಕ್ಷಣೆಗಾಗಿಯೇ ಇರುವ ಅರಣ್ಯ ಇಲಾಖೆಯ ಎಷ್ಟು ಜನ ತೇಜಸ್ವಿಯವರ ಅತ್ಯಂತ ಸ್ವಾರಸ್ಯಭರಿತ “ಕಾಡಿನ ಕತೆ” ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಕೆನತ್ ಆಂಡರ್‍ಸನ್ ಅನುಭವದ ಮಾತುಗಳು ಎಷ್ಟು ಜನ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ತಿಳುವಳಿಕೆಯಲ್ಲಿದೆ? ಉಲ್ಲಾಸ ಕಾರಂತರೇ ಹೇಳುವ ಹಾಗೆ ಕರ್ನಾಟಕದ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಸಂತೋಷದ ವಿಚಾರ ಹೌದು. ಗಾಯಗೊಂಡ ಅಥವಾ ವಯಸ್ಸಾದ ಹುಲಿಯನ್ನು ಗುರುತಿಸಿ ಅವುಗಳಿಗೆ ರೇಡಿಯೋ ಕಾಲರ್ ತೊಡಿಸುವುದೋ ಅಥವಾ ಜಿ.ಪಿ.ಎಸ್. ತಂತ್ರಜ್ಞಾನದ ನೆರವು ಪಡೆದು 24 ಗಂಟೆಯೂ ಅದರ ಮೇಲೆ ನಿಗಾ ಇಡುವ ಮೂಲಕ ಯಾವುದೇ ಹುಲಿ ಮಾನವ ಸಂWರ್ಷ ನಡೆಯದ ಹಾಗೆ ತಡೆಯಬಹುದಾಗಿದೆ. ಹುಲಿ ಜಾಡು ಹಿಡಿಯುವುದು ಕಂಪ್ಯೂಟರ್ ಕೀಲಿಮಣೆಯನ್ನು ಒತ್ತಿ ಅಕ್ಷರಗಳನ್ನು ಮೂಡಿಸುವಷ್ಟು ಸುಲಭದ ಕೆಲಸವಲ್ಲ. ಈ ವಿಚಾರವನ್ನು ಪ್ರಜ್ಞಾಪೂರ್ವಕವಾಗಿ ಗಮನದಲ್ಲಿಟ್ಟುಕೊಂಡು ಕೆಲವು ಸಲಹೆಗಳನ್ನು ನೀಡುವುದು ತಪ್ಪು ಆಗಲಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಶ್ರೀ ಉಲ್ಲಾಸ್ ಕಾರಂತರ ಹೇಳಿಕೆಗಷ್ಟೇ ಸೀಮಿತವಾಗಿ ಈ ಲೇಖನದ ಭಾಗವನ್ನು ಅರ್ಥೈಸಿಕೊಳ್ಳುವುದು ಸೂಕ್ತವೆಂದು ಹೇಳದಿದ್ದರೆ ಅಪಚಾರವಾದೀತು. ನರಭಕ್ಷಕ ವ್ಯಾಘ್ರವನ್ನು ಹಿಡಿಯಲಾಗದಿದ್ದರೆ ಗುಂಡಿಕ್ಕಿ ಎಂಬ ಕಾರಂತರ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ಅರಣ್ಯ ಇಲಾಖೆ ಅಪಚಾರ ಮಾಡುವ ಸಾಧ್ಯತೆಯಿದೆ. ಅಂದರೆ, ಹುಲಿಯನ್ನು ಹಿಡಿಯುವುದಕ್ಕಿಂತ ಗುಂಡಿಕ್ಕಿ ಸಾಯಿಸುವುದು ಸುಲಭದ ಮಾರ್ಗ. ಹುಲಿಸಂರಕ್ಷಣೆಯೇ ಜೀವನದ ಪರಮೋದ್ಧೇಶ ಎಂಬ ಧ್ಯೇಯವನ್ನಿಟ್ಟುಕೊಂಡ ಕಾರಂತರ ಮಾತು ಎಲ್ಲೆ ಮೀರಿತು ಅನಿಸುವುದಿಲ್ಲವೇ?

ಅದೆಷ್ಟೋ ಜೀವಗಳು ಇಂದಿಗೂ ದಯಾಮರಣಕ್ಕಾಗಿ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತೀರ್ಪಿಗಾಗಿ ಕಾದು ಕುಳಿತಿದ್ದಾರೆ. ವಾಸಿಯಾಗದ ಕಾಯಿಲೆಗಳಿಂದ ಬಳಲುತ್ತಿರುವ ಜೀವಿಗಳಿಗೆ ದಯಾಮರಣವೆಂಬುದು ವರವಾಗಬಲ್ಲದು. ಆದರೂ ಒಂದು ಜೀವವನ್ನು ಮುಗಿಸಿಕೊಳ್ಳಲು ಕಾನೂನುರೀತ್ಯಾ ಅವಕಾಶ ನೀಡುವುದು ಸಾಧ್ಯವಿಲ್ಲ ಎಂಬುದು ಸರ್ವೋಚ್ಛ ನ್ಯಾಯಾಲಯದ ಸ್ಪಷ್ಟವಾದ ಅಭಿಮತ. ಇದೇ ಸಂದರ್ಭದಲ್ಲಿ ಒಂದು ಘಟನೆಯನ್ನು ವಿವರಿಸುವುದು ಲೇಖನಕ್ಕೆ ಪೂರಕ. ಮಲೆನಾಡಿನ ರೈತರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿರುವುದು ಹೈನುಗಾರಿಕೆಯು ಒಂದು. ಮನೆ-ಮಂದಿಗೆ ಸಾಕಷ್ಟು ಹಾಲು-ಬೆಣ್ಣೆ-ಮೊಸರು-ತುಪ್ಪದ ಜೊತೆಗೆ ಜಮೀನುಗಳಿಗೆ ಹೇರಳ ಗೊಬ್ಬರ. ಕೃಷಿ ಮತ್ತು ಹೈನುಗಾರಿಕೆ ಇವು ಪರಸ್ಪರ ಅವಲಂಬಿತ ವೃತ್ತಿಗಳು. ಜಾನುವಾರುಗಳೆಂದರೆ, ಆಗಿನ್ನು ಕೊಡಗಟ್ಟಲೆ ಹಾಲು ನೀಡುವ ಹೆಚ್.ಎಫ್, ತಳಿಗಳು ಪರಿಚಯವಾಗದಿದ್ದ ಕಾಲ. ಮಲೆನಾಡು ಗಿಡ್ಡ ಮತ್ತು ಎಮ್ಮೆ ಹೈನುಗಾರಿಕೆಗೆ ಮೂಲ ದ್ರವ್ಯಗಳು. ಗದ್ದೆ ಬದುವಿನಲ್ಲಿ ಸಿಗುವ ಹಸಿಹುಲ್ಲು, ಭತ್ತದ ಬೆಳೆಯಿಂದ ಬರುವ ಒಣಹುಲ್ಲು, ಬಾಳೆ ಮೂತಿ, ಅಪ್ಪಚ್ಚಿಸೊಪ್ಪು, ಅಡಿಕೆ ಹಾಳೆ ಇತ್ಯಾದಿಗಳು ಜಾನುವಾರುಗಳಿಗೆ ನೀಡುವ ಸಾಮಾನ್ಯ ಆಹಾರ. ಹಾಲು ನೀಡುವ ಎಮ್ಮೆಗಳಿಗೆ ಪೇಟೆಯಿಂದ ತರುವ ಹತ್ತಿಕಾಳು, ಹಿಂಡಿ, ಕ್ಯಾಟಲ್‍ಫೀಡ್ ಎಂದು ಕರೆಸಿಕೊಳ್ಳುವ ಒಂದು ಆಹಾರ ಇತ್ಯಾದಿಗಳು. ನಮ್ಮ ಕೊಟ್ಟಿಗೆಯಲ್ಲಿ ಒಂದು ಕೋಣ ಹುಟ್ಟಿತ್ತು. ಅದೇಗೋ ಬಿದ್ದು, ಅದರ ರುಂಡಿ (ಹಿಪ್ ಜಾಯಿಂಟ್ ಎನ್ನಬಹುದು) ತಪ್ಪಿಹೋಗಿತ್ತು. ಒಂದು ಕಾಲು ಗಿಡ್ಡ, ಕುಂಟುತ್ತಾ ನಡೆಯುತ್ತಿತ್ತು. ಬೆಳಗಿನಿಂದ ಸಂಜೆಯವರೆಗೂ ಆಗ ಲಭ್ಯವಿದ್ದ ಗೋಮಾಳ ಪ್ರದೇಶದಲ್ಲಿ ಮೇಯ್ದು ಬರುತ್ತಿತ್ತು. ಅದೊಂದು ದಿನ ಹಳೆಮಳೆ ಸುರಿಯುವ ಮುನ್ನ ಕೋಣ ವಿಚಿತ್ರವಾಗಿ ವರ್ತಿಸಲು ಶುರುಮಾಡಿತು. ಜಾನುವಾರು ವೈದ್ಯರು ಬಂದು ನೋಡಿ, ಇದಕ್ಕೆ ಹುಚ್ಚು ಹಿಡಿದಿದೆ ಎಂಬು ಅಭಿಪ್ರಾಯಪಟ್ಟರು. ಮುಂದೇನು ಮಾಡುವುದು ಎಂಬುದಕ್ಕೆ ಅವರಲ್ಲೂ ಸರಿಯಾದ ಉತ್ತರವಿಲ್ಲ. ಉಳಿದ ಜಾನುವಾರುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು. ಕೋಣದ ಹುಚ್ಚು ಗಂಟೆ-ಗಂಟೆಗೂ ಏರುತ್ತಲೇ ಹೋಯಿತು. ಜಡಿಮಳೆ ಬೇರೆ. ಎದುರಿಗಿನ ಮಣ್ಣು ಗೋಡೆಗೆ ತಲೆ ಗಟ್ಟಿಸಿಕೊಂಡು ತಲೆಯೊಡೆದು ರಕ್ತ ಸೋರಲು ಶುರುವಾಯಿತು. ಆಗ ನೆನಪಾದದ್ದು “ದಯಾಮರಣ”. ಮನೆಯೆಲ್ಲಾ ಕುಳಿತು ಚರ್ಚೆ ಮಾಡಿ ಪಾಪ-ಪುಣ್ಯ, ಸಾಧಕ-ಭಾದಕ, ಒಳಿತು-ಕೆಡುಕು ಇತ್ಯಾದಿಗಳನ್ನು ವಿಮರ್ಶಿಸಿ, ಕಡೆಗೂ ಒಂದು ತೀರ್ಮಾನಕ್ಕೆ ಬರಲಾಯಿತು. ಮತ್ತೆ ಜಾನುವಾರು ವೈದ್ಯರನ್ನು ಬರಹೇಳಿ ಮರಣ ತರುವ ಇಂಜಕ್ಷನ್ ಚುಚ್ಚಲಾಯಿತು. ಸಿರಿಂಜ್ ತೆಗೆಯುವ ಮೊದಲೇ ಕೋಣದ ಪ್ರಾಣ ಹಾರಿಹೋಯಿತು.

ಕೊಲೆಗೂ ಮತ್ತು ದಯಾಮರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಡೀ ಪ್ರಪಂಚದಲ್ಲಿ ಎಣಿಸಬಹುದಾದಷ್ಟು ಸಂಖ್ಯೆ ಮತ್ತು ಅಳಿವಿನಂಚಿನಲ್ಲಿರುವ ಹುಲಿಯಂತಹ ಒಂದು ಅಮೋಘ ಪ್ರಾಣಿಯನ್ನು ಅದು ನರಭಕ್ಷಣೆ ಮಾಡಿತು ಎಂಬ ಕಾರಣಕ್ಕೆ ಗುಂಡಿಕ್ಕಿ ಕೊಲ್ಲುವುದು ನ್ಯಾಯವಾದ ತೀರ್ಮಾನ ಎಂದೆನಿಸಿಕೊಳ್ಳುವುದಿಲ್ಲ. ಪಾಲ್ ಗೆಟ್ಟಿ ಪ್ರಶಸ್ತಿ ಪಡೆದ ಪ್ರಪ್ರಥಮ ಕನ್ನಡಿಗ, ಮೂಲತ: ಇಂಜಿಯನಿರಿಂಗ್ ಓದಿ, ಆಸಕ್ತಿ ಕೆರಳಿಸದ ಆ ಕ್ಷೇತ್ರವನ್ನು ತೊರೆದು, ತಮ್ಮ ಹುಟ್ಟಿನಿಂದ ಇರುವ ಆಸಕ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಇದರಲ್ಲಿ ಸಫಲತೆ ಮತ್ತು ಸಾರ್ಥಕತೆ ಎರಡನ್ನೂ ಕಂಡ ಹಾಗೂ ದೇಶ ಕಂಡ ಅಪರೂಪದ ವನ್ಯ ವಿಜಾÐನಿ ಶ್ರೀಯುತ ಉಲ್ಲಾಸ್ ಕಾರಂತರ ಮೇಲಿನ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವಾದ್ದರಿಂದ, ಇಷ್ಟೆಲ್ಲಾ ಬರೆಯಬೇಕಾಯಿತು. ನರಭಕ್ಷಕವನ್ನು ಸೆರೆಹಿಡಿದು ಸಾಕುವುದು ಹುಲಿಸಂರಕ್ಷಣೆ ನಿಟ್ಟಿನಲ್ಲಿ ಶ್ರೇಷ್ಠ ಕಾರ್ಯವೆನಿಕೊಳ್ಳುವುದು. ಈ ಪ್ಯಾರಾವನ್ನು ಬರೆಯುವ ಹೊತ್ತಿಗೆ ನರಭಕ್ಷಕ ವ್ಯಾಘ್ರ ಮತ್ತೊಂದು ಬಲಿಯನ್ನು ಪಡೆದಿದೆ. ಚಿಕ್ಕಬರಗಿ ಗ್ರಾಮದ ದನಗಾಹಿಯೊಬ್ಬ ನರಭಕ್ಷಕನಿಗೆ ಬಲಿಯಾಗಿದ್ದಾನೆ. ಇಡೀ ದೇಹವನ್ನು ತಿಂದ ಹುಲಿ ಅವನ ತಲೆಯನ್ನು ಮಾತ್ರ ಬಿಟ್ಟು ಹೋಗಿದೆ. ನವಂಬರ್ 26ರಿಂದ ಪ್ರಾರಂಭವಾದ ನರಬಲಿ ಸರಣಿ ಸಂಖ್ಯೆ ಡಿಸೆಂಬರ್ 3ನೇ ತಾರೀಖಿನವರೆಗೆ 4ಕ್ಕೆ ತಲುಪಿದೆ. ಸಾರ್ವಜನಿಕರ ಆಕ್ರೋಶ ಮೇರೆಮೀರಿದೆ. ಅರಣ್ಯ ಇಲಾಖೆಗೆ ಸೇರಿದ ಜೀಪು ಬೆಂಕಿಗಾಹುತಿಯಾಗಿದೆ. ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು ನರಭಕ್ಷಕನನ್ನು ಸೆರೆಹಿಡಿಯಬೇಕಾದ ಅತಿದೊಡ್ಡ ಸವಾಲು ಅರಣ್ಯ ಇಲಾಖೆ ಮತ್ತು ಸರ್ಕಾರದ ಮೇಲಿದೆ.

ಅಂತೂ ಒಂಬತ್ತು ವರ್ಷದ ಹೆಬ್ಬುಲಿಯ ಆಯುಷ್ಯ ಗಟ್ಟಿಯಾಗಿತ್ತು. ದಿನಾಂಕ:05/12/2013ರಂದು ಬೆಳಗಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೊಂಚಿ ಕುಳಿತಿದ್ದರು. ಚಿಕ್ಕಬರಗಿ ಗ್ರಾಮದ ನತದೃಷ್ಟ ಬಸಪ್ಪನ ದೇಹದ ಅಳಿದುಳಿದ ಭಾಗವನ್ನು ತಿನ್ನಲು ನರಭಕ್ಷಕ ಬರುತ್ತದೆ ಎಂಬ ನಿರೀಕ್ಷೆ ಹುಸಿಯಾಗಲಿಲ್ಲ. ಕಾಡುಕೋಳಿಗಳು ತೆಕ್ ತೆಕ್ ತೆಕೋ ಮತ್ತು ಲಂಗೂರ್‍ಗಳ ಅರಚಾಟದಿಂದ ನರಭಕ್ಷಕ ಬರುತ್ತಿದೆ ಎಂಬ ಸುಳಿವು ಸಿಕ್ಕಿತು. ಆನೆಯ ಮೇಲೆ ಕುಳಿತ ಪಶುವೈದ್ಯ ಡಾ:ಸನತ್  ಅರಿವಳಿಕೆಯನ್ನು ಸಿದ್ಧಮಾಡಿಟ್ಟುಕೊಂಡಿದ್ದರು. ಸರಿಯಾಗಿ ಅರ್ಧದಿನ ಕಳೆಯುವ ಹೊತ್ತಿನಲ್ಲಿ ನಾಲ್ಕೂ ದಿಕ್ಕಿನಿಂದ ಆನೆಗಳು ಬಂದವು. ಹುಲಿಗೆ ಅಡಗಿಕೊಳ್ಳಲಾಗಲಿ, ಓಡಿಹೋಗಲಾಗಲಿ ಸಾಧ್ಯವಿರಲಿಲ್ಲ. ಮೊದಲನೇ ಅರಿವಳಿಕೆ ಸಿರಿಂಜ್ ಗುರಿತಪ್ಪಿತು. ಎರಡನೇ ಅರಿವಳಿಕೆ ನಾಟಿ ಹತ್ತು ನಿಮಿಷದಲ್ಲಿ ವ್ಯಾಘ್ರ ಧರಾಶಾಯಿಯಾಯಿತು. ತಯಾರಿದ್ದ ಸಿಬ್ಬಂದಿಗಳು ಬಲೆ ಬೀಸಿ ಹುಲಿಯನ್ನು ಹಿಡಿದು ಬೋನಿಗೆ ಹಾಕಿದರು. ಸಾರ್ವಜನಿಕರು ಪೆಟ್ರೋಲ್ ಹಾಕಿ ಹುಲಿಯನ್ನು ಸುಟ್ಟುಹಾಕಿ ಎಂದು ಆಕ್ರೋಶದಿಂದ ಒತ್ತಾಯಿಸಿದರೂ, ಅರಣ್ಯ ಇಲಾಖೆ ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಹುಲಿಯ ಪ್ರಾಣ ಉಳಿಯಿತು. ಹುಲಿಯ ಕುತ್ತಿಗೆಯಲ್ಲಿ ಗಾಯವಾದ ವರದಿಯಿದೆ. ಚಿಕಿತ್ಸೆಗೆ ಸ್ಪಂದಿಸಿ ಬದುಕುಳಿಯುತ್ತದೆಯೋ ಅಥವಾ ???

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Utham Danihalli
10 years ago

Olleya lekana estavaythu

prashasti
10 years ago

ಅವತ್ತು ಉಲ್ಲಾಸರ ಲೇಖನವನ್ನು ನಾನೂ ಓದಿದ್ದೆ.
೧)ಹುಲಿಯ ನಾಲಿಗೆಯಲ್ಲಿ ರುಚಿಗ್ರಂಥಿಗಳೆನ್ನುವುದೇ ಇಲ್ಲ. ಹಾಗಾಗಿ ಹುಲಿ ಒಮ್ಮೆ ಮನುಷ್ಯರ ರಕ್ತದ ರುಚಿ ನೋಡಿದರೆ ನರಭಕ್ಷಕನಾಗುತ್ತದೆ ಎಂಬುದೆಲ್ಲಾ ಹುರುಳಿಲ್ಲದ ಮಾತು
೨)ಪ್ರತೀವರ್ಷ ೨೦% ಹುಲಿಗಳು ನೈಸರ್ಗಿಕವಾಗಿ ಸಾಯುತ್ತದೆ. ಹಾಗಾಗಿ ಈ ಹುಲಿಯನ್ನು ಜೀವಂತ ಹಿಡಿದು ಅದನ್ನ ಪಳಗಿಸೋ ಬದಲು ಅದನ್ನು ಅಲ್ಲೇ ಕೊಂದುಬಿಡಬಹುದಿತ್ತು.ಸಾರ್ವಜನಿಕರಿಗಾದರೂ ಅರಣ್ಯ ಇಲಾಖೆಯ ಮೇಲಿನ ನಂಬಿಕೆ ಉಳಿಯುತ್ತಿತ್ತು..
ಹೀಗೇ ಮುಂದುವರೆದಿತ್ತು ಅವರ ಲೇಖನ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ನೋಡೋದಕ್ಕಿಂತ ಅವರ ಒಂದು ಹೇಳಿಕೆಯನ್ನು ಪ್ರತ್ಯೇಕಿಸಿ ಅದಕ್ಕೆ ವಿಪರೀತದ ಅರ್ಥ ಕೊಡೋದು ಸರಿಯಲ್ಲ ಅನಿಸುತ್ತೆ.

ಇನ್ನು ಸಾಗರದ ಹುಲಿ ಬೇಟೆ ಕತೆ ಓದಿರಲಿಲ್ಲ. ತೇಜಸ್ವಿಯವರ ಕೆಲ ಪುಸ್ತಕಗಳನ್ನು ಓದಿದ್ದೇನೆ. ಮುಂದೆ ಓದಬೇಕು ಉಳಿದವುಗಳನ್ನ.

ರೇಡಿಯೋ ಕಾಲರ್ ಬಳಕೆ ಇತ್ತೀಚೆಗೆ ಶುರುವಾಗಿದೆ ಎಂದು ಓದಿದ್ದೇನೆ. ಉಪಗ್ರಹಗಳ ಬಳಕೆ, ತೇಜಸ್ವಿಯವರ ಪುಸ್ತಕಗಲ ಓದುವಿಕೆ, ಆ ನಿಟ್ಟಿನ ಮನೋಭಾವ.. ಇವೆಲ್ಲಾ ಯಾವಾಗ ಜಾರಿಯಾಗುತ್ತೋ…ಸದ್ಯವೇ ಆಗಲಿ ಎಂಬ ಹಾರೈಕೆಯನ್ನಷ್ಟೇ ನಾವಿಲ್ಲಿಂದ ಮಾಡಲು ಸಾಧ್ಯ 🙁

ಆಡುವಳ್ಳಿ
ಆಡುವಳ್ಳಿ
10 years ago
Reply to  prashasti

ಹುಲಿ ಸೇರಿದಂತೆ ಎಲ್ಲ ಕಶೇರುಕಗಳ ನಾಲಿಗೆಯಲ್ಲಿ ರುಚಿಗ್ರಂಥಿಗಳು ಇದ್ದೇ ಇವೆ. ಆದರೆ ನಮ್ಮ ಹಾಗೂ ಅವುಗಳ ರುಚಿಯ ಅನುಭವ ಬೇರೆಬೇರೆ ಇದ್ದೀತು. ಉದಾಹರಣೆಗೆ ಬೆಕ್ಕಿಗೆ, ಹುಲಿಗೆ ಸಿಹಿ ರುಚಿ ಗೊತ್ತಾಗುವುದೇ ಇಲ್ಲ!
ಅವು ರಕ್ತದ ರುಚಿ ನೋಡಿ ನರಭಕ್ಷಕಗಳಾಗುವುದಿಲ್ಲ. ಬದಲಿಗೆ ಮನುಷ್ಯ ಸುಲಭದ ಬೇಟೆ ಎಂದರಿತು ಪದೇಪದೇ ದಾಳಿಮಾಡುತ್ತವಷ್ಟೇ.

prashasti
10 years ago

ಅದು ನನ್ನ ಮಾತುಗಳಲ್ಲ ಪ್ರಸನ್ನ 🙂 ಕಾರಂತರ ಮಾತುಗಳ ಎತ್ತಿ ಹಾಕಿದ್ದೇನೆ ಅಷ್ಟೆ 🙂

ಆಡುವಳ್ಳಿ
ಆಡುವಳ್ಳಿ
10 years ago
Reply to  prashasti

“ಹುಲಿಯ ನಾಲಿಗೆಯಲ್ಲಿ ರುಚಿಗ್ರಂಥಿಗಳೆನ್ನುವುದೇ ಇಲ್ಲ” ಅಂತ ಉಲ್ಲಾಸ ಕಾರಂತರು ಹೇಳಿರಲಿಕ್ಕಿಲ್ಲ ಎಂದು ಭಾವಿಸುವೆ. ಹುಲಿಯ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ!

ಆಡುವಳ್ಳಿ
ಆಡುವಳ್ಳಿ
10 years ago

“ಹಿಡಿಯಲಾಗದಿದ್ದರೆ ಗುಂಡಿಕ್ಕಿ” ಎಂಬ ಕಾರಂತರ ಮಾತಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ವನ್ಯ ಜೀವಿ ಸಂರಕ್ಷಣೆಯ ವಿಚಾರದಲ್ಲಿ ’ಸಿಂಪಥಿ’ಯ ಜೊತೆಗೇ ಅಧ್ಯಯನ ಆಧಾರಿತ ’ಸಂಗತಿ’ಗಳೂ ಮುಖ್ಯವಾಗುತ್ತವೆ, ಅಲ್ಲವೇ?

Akhilesh Chipli
Akhilesh Chipli
10 years ago

ಪ್ರಶಸ್ತಿ, ಆಡುವಳ್ಳಿ – ನಿಮ್ಮ ಅಭಿಪ್ರಾಯಗಳನ್ನು
ಗೌರವಿಸುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು

Mahantesh Yaragatti
Mahantesh Yaragatti
10 years ago

Channagide sir………

8
0
Would love your thoughts, please comment.x
()
x