ಕೋಪಾಗ್ನಿಕುಂಡ: ಪ್ರಶಸ್ತಿ ಬರೆವ ಅಂಕಣ

 

ಓದುಗ ಮಿತ್ರರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನೀವು ಈ ಲೇಖನ ಓದೋ ಹೊತ್ತಿಗೆ ನಿಮ್ಮ ಮನೆಗೆ ಗಣಪತಿ ಬಂದಿರಬಹುದು. ಮನೆಯಲ್ಲಿ ಗಣಪತಿ ತರದಿದ್ದರೂ ನೆಂಟರ ಮನೆಯ, ಬೀದಿಯಲ್ಲಿಟ್ಟ ಗಣಪತಿ ಪೆಂಡಾಲಿನ, ಮೈಕಿನ , ಟೀವಿಗಳ ಕಲರ್ ಕಲರ್ ವಾರ್ತೆ, ಶುಭಾಶಯ, ಸ್ನೇಹಿತರ ಶುಭ ಹಾರೈಕೆಗಳಿಂದ, ಮಕ್ಕಳಿಗೆ ಸಿಕ್ಕಿರೋ ಹಬ್ಬದ ರಜೆಯಿಂದ.. ಹೀಗೆ ತರಹೇವಾರಿ ತರದಿಂದ ಹಬ್ಬದ ಕಳೆ ಮೂಡಿರಬಹುದು.ಹಬ್ಬಕ್ಕೆ ಬಸ್ ಬುಕ್ ಮಾಡಲಾಗದೇ, ಸಿಕ್ಕಾಪಟ್ಟೆ ರಶ್ಷಿನ ಬಸ್ಸು, ಟ್ರೈನುಗಳಲ್ಲಿ ಎದ್ದೂ ಬಿದ್ದು ಬೇರೆ ಊರಿನ ಮನೆ ಮುಟ್ಟಿರೋರು, ಹಬ್ಬದ ದಿನ ಸಂಜೆಯೇ ಮತ್ತೆ ಮರಳಬೇಕಾದ ಬೇಸರದಲ್ಲಿರಬಹುದು. ದೂರದಿಂದ ಹಬ್ಬಕ್ಕೆ ಅಂತಲೇ ಊರಿಗೆ ಬಂದ ಮಕ್ಕಳಿಗೆ ಮತ್ತೆ ಮರಳಿ ಹೋಗೋ ದಿನ ಬಂತೂಂದ್ರೆ ಯಾಕೋ ಬೇಜಾರು. ಹಬ್ಬದ ತಿಂಡಿಗಳು ಹಾಗೇ ಇರ್ತವೆ. ಆ ಪಟಾಕಿ, ರಂಗೋಲಿ , ಹೊಸ ಬಟ್ಟೆಗಳ ಸಂಭ್ರಮದಲ್ಲಿ ತಮ್ಮ ಬಾಲ್ಯ ನೆನಪಾಗುತ್ತಿರುತ್ತದೆ. ಆದ್ರೆ ಹುಟ್ಟೂರಿನಿಂದ ಹೊಟ್ಟೆಪಾಡಿಗಾಗಿ ಸೇರಿಕೊಂಡ ಊರಿಗೆ ಹೋಗ್ಲೇಬೇಕು.  ಹೋಗ್ಬೇಕಲ್ಲ ಅನ್ನೋ ಬೇಜಾರಿಗೆ ಕಂಡ ಕಂಡವರ ಮೇಲೆಲ್ಲಾ ರೇಗಾಡೋದು, ಏನೂ ಹೇಳ್ದೇ ಇದ್ರೂ ಮುಖ ಊದಿಸಿಕೊಳ್ಳೋದು…

ಸಣ್ಣ ಸಣ್ಣದ್ದಕ್ಕೂ ಸಿಟ್ಟು ಮಾಡ್ಕೊಳ್ಳೋದು ಕೆಲ ಹುಡುಗ್ರಿಗೆ/ಹುಡುಗಿಯರಿಗೆ ಸಾಮಾನ್ಯ. ಸ್ವಭಾವತಃ ಕೆಟ್ಟವರಲ್ಲ ಆ ಹುಡುಗ್ರು.ಆದ್ರೂ ಈ ಬೇಸರ, ಅದ್ರಿಂದಾದ ಸಿಟ್ಟು.. ಸುಮ್ಮ ಸುಮ್ನೇ ಒಳ್ಳೇ ಸಂದರ್ಭ ಹಾಳುಮಾಡುತ್ತೆ. ಹಬ್ಬ ಬಂತೂಂದ್ರೆ ಪೀಜಿ,ರೂಂ ಮನೆಯಲ್ಲಿರೋ ಗೆಳೆಯರೆಲ್ಲಾ ಹಬ್ಬ ಆದ ಮೇಲೆ, ಆಗಕ್ಕಿಂತ ಮುಂಚೆಗೆ ಅಂತ ಎರಡೆರಡು ದಿನ ರಜಾ ತಗೊಂಡು , ಹಬ್ಬಕ್ಕಿಂತ ಎರಡು ದಿನ ಮುಂಚೆನೇ ಮನೆಗೆ ಹೋಗಿರ್ತಾರೆ. ಆ ತರ ರಜಾ ಸಿಗದವ್ರೆಲ್ಲಾ ಒಂಟಿ ಬೇತಾಳಗಳಾಗಿ, ಅತೃಪ್ತ ಆತ್ಮಗಳಾಗಿ ಆಫೀಸು ಮುಗಿಸಿ ಮನೆಗೆ ಬಂದು ಮಾರ್ನೇ ದಿನ ಆಫೀಸಿಗೆ ಹೋಗೋ ವರ್ಗೂ ಪರಿತಪಿಸ್ತಾ ಇರ್ತಾರೆ. ಹಬ್ಬ ಅಂತ ಒಂದು ದಿನ ರಜಾ ಸಿಕ್ಕಬಿಟ್ರೆ ಸಾಕಾ ? ಅದಾದ ಮೇಲೆ ಒಂದೋ , ಎರಡೋ ದಿನ ರಜಾ ಇದ್ರೆ ಚೆನ್ನಾಗಿರತ್ತಪ. ಆದ್ರೆ ಹಾಳಾದ ಬಾಸು ರಜಾನೇ ಕೊಡೊಲ್ಲ. ಯಾವಾಗ ರಜಾ ಕೇಳಿದ್ರೂ ಏನಾದ್ರೂ ಒಂದು ಪಿಳ್ಳೆ ನೆವ ಹೇಳ್ತಾನೆ ಅಂತ ಬೈಕೊಳ್ತಿರೋ ಉದ್ಯೋಗಿಗಳೂ ಸ್ವಭಾವತಃ ಕೆಟ್ಟವರಲ್ಲ.  ಆದ್ರೆ ಒಡನಾಡಿಗಳಿಂದ ದೂರ ಉಳಿಯಬೇಕಾದ ನೋವು, ನಾವು ಖುಷಿಯಾಗಿದ್ದ ದಿನವೇ ಹಬ್ಬ ಅಂತ ಎಷ್ಟು ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡೋಕೆ ಹೋದರೂ ಸಾಧ್ಯವಾಗದೇ ಕಾಡುತ್ತಿರೋ ಮನಸುಗಳು ಅವರು ಎಲ್ಲರ ಮೇಲೆ ಸಿಡುಕೋ ತರ ಮಾಡಿರುತ್ತೆ.. ಅಂದ ಹಾಗೆ ಹಬ್ಬ ಅಂತ ಶುರು ಮಾಡಿದೋನು ಏನೇನೋ ಅಸಂಬದ್ದವಾಗಿ ಬರೀತಿದಾನಲಾ ಅಂತ ಕೋಪಿಸಿಕೊಳ್ಳಬೇಡಿ.ಇವತ್ತಿನ ಲೇಖನದ ವಿಷಯವೇ ಅದು.. ಸಿಟ್ಟು.

ಈ ಸಿಟ್ಟು ಅನ್ನೋದು ಯಾರಿಗೂ ಬಿಟ್ಟಿಲ್ಲ. ಪುರಾಣ ಕಾಲದಿಂದಲೂ ಇದರ, ಇದರಿಂದಾಗೋ ಅನಾಹುತಗಳ ಉಲ್ಲೇಖಗಳಿವೆ. ಸಿಟ್ಟು ಅಂದ ತಕ್ಷಣ ನೆನಪಾಗೋದು ಜಮದಗ್ನಿ ಮುನಿ. ಹೆಸರಲ್ಲೇ ಇರೋ ಅಗ್ನಿಯಂತೆ ಸಿಟ್ಟಿತ್ತಂತೆ ಆತನದು. ಸಿಟ್ಟಿನಲ್ಲಿ ಪತ್ನಿ ರೇಣುಕೆಯ ತಲೆಯನ್ನೇ ಕಡಿಯಲು ಆದೇಶಿಸುತ್ತಾನೆ. ನಂತರ ಮಗ ಪರಶುರಾಮನ ಪ್ರಾರ್ಥನೆಯಂತೆ ಸಿಟ್ಟನ್ನೇ ಬಿಟ್ಟ ಜಮದಗ್ನಿಯ ಶಿರಚ್ಚೇಧನವಾಗುತ್ತದೆ. ಪತಿಯ ಮರಣದಿಂದ ನೊಂದ ಪರಶುರಾಮನ ತಾಯಿ ೨೧ ಬಾರಿ ತಲೆ ಚಚ್ಚಿಕೊಳ್ಳುತ್ತಾಳೆ. ತಂದೆಯ ವಧೆಗೈದು ತಾಯಿಗೆ ಅಪಾರ ನೋವು ತಂದಿರೋ ಕಾರ್ತ್ಯವೀರ್ಯಾರ್ಜುನ ಮತ್ತು ಅವನಂತ ಧೂರ್ತ  ಕ್ಷತ್ರಿಯರ ಮೇಲೆ ಸಿಟ್ಟುಗೊಂಡ ಪರಶುರಾಮ ಭೂಮಂಡಲವನ್ನೇ ೨೧ ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲಾ ಕೊಲ್ಲುತ್ತಾನೆ ಅನ್ನೋ ಉಲ್ಲೇಖವಿದೆ.  ಪರಶುರಾಮನ ಉಲ್ಲೇಖ ಮತ್ತೆ ವಾಲ್ಮೀಕಿ ರಾಮಾಯಣದ ಬಾಲಕಾಂಡದ ೭೪-೭೬ರವರೆಗಿನ ಸರ್ಗಗಳಲ್ಲಿ ಮುಂದೆ ವ್ಯಾಸ ಭಾರತದಲ್ಲೂ ಆಗುತ್ತದೆ. ಹಿಮಾಲಯಕ್ಕೆ ತಪಸ್ಸಿಗೆಂದು ತೆರಳಿದ ಪರಶುರಾಮ ಶ್ರೀರಾಮನ ಕಾಲದಲ್ಲಿ ಮತ್ತೆ ಮರಳುತ್ತಾನೆ. ಸೀತಾ ಸ್ವಯಂವರದಲ್ಲಿ ಶ್ರೀರಾಮ ಶಿವನ ಧನುಸ್ಸನ್ನೇ ಮುರಿದನೆಂಬ ಸುದ್ದಿ ಕೇಳಿ ಕೋಪಗೊಂಡು ಅಯೋಧ್ಯೆಗೆ ಮರಳುತ್ತಿದ್ದ ರಾಮನ ರಥವನ್ನು ಅಡ್ಡಗಟ್ಟುತ್ತಾನೆ.

ಪರಶುರಾಮನ ಕೋಪ ಎಂದರೆ ಕ್ಷತ್ರಿಯ, ದೇವಾಸುರರೆಲ್ಲಾ ನಡುಗುತ್ತಿದ್ದರು. ಹಾಗಾಗಿ ಪರಶುರಾಮ ಬಂದ ಅಂದ ತಕ್ಷಣ ದಶರಥ ವಿವಾಹಕ್ಕೂ, ಜನಕ ಯಜ್ನ ಮಾಡುವುದಕ್ಕೂ ಕೂತು ಬಿಡುತ್ತಿದ್ದರು. ಇವೆರಡರಲ್ಲಿರೋ ಕ್ಷತ್ರಿಯರಿಗೆ ಮಾತ್ರ ಪರಶುರಾಮನ ಕೋಪದಿಂದ ವಿನಾಯಿತಿಯಿತ್ತ್ತು ಎಂದೂ ಕತೆಗಳಿವೆ. ತರಗುಟ್ಟುತ್ತಿರೋ ದಶರಥರಾಜ, ಮುನಿಗಳ ಜೊತೆಗಿರೋ ಶ್ರೀರಾಮನಿಗೆ ಪರಶುರಾಮನು ಹೆದೆಯೇರಿಸೆಂದು ತನ್ನ ಬಳಿಯಿದ್ದ ವಿಷ್ಣುವಿನ ಧನುಸ್ಸನ್ನು ಕೊಡುತ್ತಾನೆ. ಅದನ್ನು ಹೆದೆಯೇರಿಸಿ ಬಾಣ ಹೂಡಿದ ಶ್ರೀರಾಮ ಅದನ್ನು ಪರಶುರಾಮನಿಗೇ ಗುರಿಯಿಟ್ಟು ನೀನು ತಪಸ್ವಿಯೆಂಬ ಕಾರಣಕ್ಕೆ ನಿನ್ನನ್ನು ಕೊಲ್ಲದೇ ಬಿಡುತ್ತೇನೆ. ನಿನ್ನ ತಪೋಬಲವನ್ನು ಕೊಲ್ಲಲೋ ಅಥವಾ ಗಾಳಿಯಂತೆ ಎಲ್ಲಿ ಬೇಕಾದರೂ ಸಂಚರಿಸಬಲ್ಲ ಚಲನಶಕ್ತಿಯನ್ನು ಕೊಲ್ಲಲೋ ಎಂದು ಕೇಳುತ್ತಾನೆ. ತಪೋಬಲವನ್ನು ಬಲಿಕೊಟ್ಟು ಪರಶುರಾಮ ಮತ್ತೆ ತಪಸ್ಸಿಗೆ ಮಹೇಂದ್ರಗಿರಿಗೆ ಮರಳುತ್ತಾನೆ. ಮತ್ತೆ ಮಹಾಭಾರತದಲ್ಲಿ ಪರಶುರಾಮನ ಉಲ್ಲೇಖ ಬರುತ್ತದೆ. ಕರ್ಣ ಶಸ್ತ್ರಾಸ್ತ್ರ ವಿದ್ಯೆಗಾಗಿ ದ್ರೋಣಾಚಾರ್ಯರ ಬಳಿ ತೆರಳುತ್ತಾನೆ. ಆದರೆ ಅರ್ಜುನನ ಮೇಲೆ ಅಪಾರ ಒಲವಿರೋ ಅವರು ಕರ್ಣನನ್ನು ನಿರಾಶರಾಗಿಸುತ್ತಾರೆ. ಪರಶುರಾಮನ ಅಪಾರ ಬಲಗಳ ಬಗ್ಗೆ ತಿಳಿದ ಕರ್ಣ ಪರಶುರಾಮನ ಬಳಿ ತೆರಳುತ್ತಾನೆ.

ಆದರೆ ತಾನು ಇನ್ನು ಮುಂದೆ ಕ್ಷತ್ರಿಯರಿಗೆ ಶಸ್ತ್ರಾಸ್ತ್ರಗಳ ಪಾಠ ಹೇಳುವುದಿಲ್ಲ, ಅವರು ಅದನ್ನು ಆತ್ಮರಕ್ಷಣೆಗಲ್ಲ, ಬರೀ ಹಿಂಸೆಗೇ ಉಪಯೋಗಿಸುತ್ತಾರೆ ಎಂದು  ಪರಶುರಾಮ ನಿರ್ಧರಿಸಿ ಆಗಿರುತ್ತದೆ. ಅದನ್ನು ತಿಳಿದ ಕರ್ಣ ನಾನು ಭೃಗುವಂಶದ ಒಬ್ಬ ಮುನಿಯೆಂದು ಹೇಳಿಕೊಂಡು ಪರಶುರಾಮನ ಶಿಷ್ಯನಾಗುತ್ತಾನೆ. ಹೀಗೇ ಒಂದು ದಿನ ಮಧ್ಯಾಹ್ನ ಕರ್ಣನ ತೊಡೆಯ ಮೇಲೆ ಪರಶುರಾಮ ಮಲಗಿರುತ್ತಾನೆ. ಒಂದು ಗುಂಗಿ ಹುಳ ಬಂದು ಕರ್ಣನ ತೊಡೆ ಕೊರೆಯತೊಡಗುತ್ತದೆ. ಎಷ್ಟೇ ನೋವಾದರೂ ತನ್ನ ಗುರುವಿನ ನಿದ್ದೆಗೆ ಭಂಗ ಬರದಿರಲೆಂದು ಕರ್ಣ ತಡೆದುಕೊಳ್ಳುತ್ತಾನೆ. ನಿದ್ದೆಯಿಂದ ಪರಶುರಾಮ ಎದ್ದು ನೋಡುತ್ತಾನೆ, ಕರ್ಣನ ತೊಡೆಯೆಲ್ಲಾ ರಕ್ತ. ಏನಾಯಿತೆಂದು ಕೇಳಿದಾಗ ಕರ್ಣ, ಗುರುವರ್ಯಾ ಒಂದು ಗುಂಗಿ ಹುಳ ಬಂದು ನನ್ನ ತೊಡೆಯ ಕೊರೆಯಹತ್ತಿತ್ತು. ನಿಮ್ಮ ನಿದ್ರೆಗೆ ಭಂಗ ಬರದಿರಲೆಂದು ಎಬ್ಬಿಸಿರಲಿಲ್ಲ ಅನ್ನುತ್ತಾನೆ. ಇಷ್ಟು ಸಹನಾಶಕ್ತಿ ಬ್ರಾಹ್ಮಣನಿಗೆ ಇರಲು ಸಾಧ್ಯವೇ ಇಲ್ಲ.ನಿಜ ಹೇಳು ನೀನು ಯಾರು ಎಂದು ಪರಶುರಾಮ ಮತ್ತೆ ಸಿಟ್ಟಿನಿಂದ ಬುಸುಗುಟ್ಟತೊಡಗುತ್ತಾನೆ. ತಾನು ಕ್ಷತ್ರಿಯನೆಂಬ ವಿಶಯವನ್ನು ಕರ್ಣ ತಿಳಿಸಿದ ತಕ್ಷಣವೇ , ತನ್ನನ್ನು ಮೋಸಗೊಳಿಸಿ ವಿದ್ಯೆ ಕಲಿಯಲು ಬಂದ ಕರ್ಣನ ಮೇಲೆ ಪರಶುರಾಮನ ಸಿಟ್ಟು ಇನ್ನೂ ಹೆಚ್ಚಾಗುತ್ತದೆ. ಆದರೆ ಮುಂಚಿನಂತೆ ಆತನನ್ನು ಕೊಲ್ಲಲು ಹೋಗದೇ, ನನ್ನಿಂದ ಮೋಸದಿಂದ ಕಲಿತ ವಿದ್ಯೆ ನಿನಗೆ ಬೇಕಾದಾಗ ನೆನಪಿಗೆ ಬಾರದಿರಲಿ ಎಂದು ಶಪಿಸುತ್ತಾನೆ.

ಪುರಾಣಗಳ ಬಗ್ಗೆ ವೈಯುಕ್ತಿಕ ಅಭಿಪ್ರಾಯಗಳು ಏನೇ ಇರಲಿ, ಅವುಗಳು ಸಾಂಕೇತಿಕವಾಗಿ ಧ್ವನಿಸೋ ಎಷ್ಟೋ ಮೌಲ್ಯಗಳು ಇಂದಿಗೂ ಪ್ರಸ್ತುತವೆಂದು ಹಲವರ ಅಭಿಪ್ರಾಯ.  ಭೂಮಂಡಲವನ್ನು ೨೧ ಬಾರಿ ಪ್ರದಕ್ಷಿಣೆ ಹಾಕಿ ಕ್ಷತ್ರಿಯರನ್ನೆಲ್ಲಾ ಸಂಹರಿಸೋ ಉಗ್ರ ಪ್ರತಿಜ್ನೆ ಮಾಡಿದ ಪರಶುರಾಮನ ಸಿಟ್ಟು ಕ್ರಮೇಣ ಶಮನವಾದಂತೆ ಚಿತ್ರಿಸಲಾಗಿದೆ. ರಾಮನೊಂದಿಗೆ ಯುದ್ದಕ್ಕೆ ಸಜ್ಜಾದಂತೆ ಬಂದ ಸಂದರ್ಭದಲ್ಲಿ .. ಇದ್ದಕ್ಕಿದ್ದಂತೆ ಗ್ರಹಣವಾದಂತೆ ಕತ್ತಲಾವರಿಸಿತು. ಪಶು ಪಕ್ಷಿಗಳೆಲ್ಲಾ ಭಯದಿಂದ ಚೀತ್ಕರಿಸುತ್ತಾ ಹಾರಿಹೋದವು. ಅಗ್ನಿಯ ಪ್ರತಿರೂಪದಂತೆ ಕೋಪದಿಂದ ಕುದಿಯುತ್ತಿದ್ದ ಪರಶುರಾಮನು ಆಗಮಿಸಿದನು.. ಎಂದು ವರ್ಣಿಸಲಾಗಿದೆ. ಈ ರೀತಿಯ ಪರಶುರಾಮ ನಂತರ ಕರ್ಣನ ಮೋಸದ ಬಗ್ಗೆ ತಿಳಿದಾಗಲೂ ಸಿಟ್ಟಿಗೊಳಗಾಗಿ ಕರ್ಣನನ್ನು ಕೊಲ್ಲಲು ಹೋಗುವುದಿಲ್ಲ. ಆತನ ತಪ್ಪಿಗಾಗಿ ಆತನಿಗೆ ಶಾಪವಿತ್ತು ಸುಮ್ಮನಾಗುತ್ತಾನೆ. ಪರಶುರಾಮನ ಶೌರ್ಯ ಸಾಹಸಗಳೇನೆ ಇರಲಿ, ಜಮದಗ್ನಿಯ ತಪೋಬಲ, ಕೊನೆಗೆ ಸಾವನ್ನಿತ್ತ ತಾಳ್ಮೆಗಳೇನೇ ಇರಲಿ ಅವರ ಹೆಸರು ಕೇಳಿದೊಡನೆಯೇ ನೆನಪಾಗೋದು ಸಿಟ್ಟು. ನಮ್ಮ ಕಡೆ ಸಿಕ್ಕಾಪಟ್ಟೆ ಸಿಟ್ಟು ಮಾಡೋರಿಗೆ ಜಮದಗ್ನಿಯ ಅಪರಾವತಾರ ಎನ್ನೋದುಂಟು. ಅದೇ ರೀತಿ ಹೃದಯದಲ್ಲಿ ಎಷ್ಟೇ ಮಧುರ ಭಾವನೆಗಳಿದ್ದರೂ ಸದಾ ಬೈಯುತ್ತಿರೋ, ಸಿಡುಕುತ್ತಿರೋ ಜನರ ಹೆಸರು ಕೇಳಿದಾಗ ಉಳಿದವರಿಗೆ ಅವರ ಸಿಡುಕು ಮುಖವೇ ನೆನಪಾಗಿ ಮುಖ ಬಾಡಿಹೋಗುತ್ತದೆ. 

ಗಣಪತಿ ಹಬ್ಬದ ದಿನ ಆಗಿ ಗಣೇಶನ ಬಗ್ಗೇನೆ ಹೇಳ್ದೆ ಹೋದ್ರೆ ಹೇಗೆ ? ಗಣೇಶನ ಆನೆ ಮುಖಕ್ಕೂ ಶಿವನ ಸಿಟ್ಟನ್ನ ಕಾರಣವಾಗಿಸೋ ಕತೆಯಿದೆ. ಅದು ನಿಮಗೆಲ್ಲಾ ಗೊತ್ತಿರುವಂತದ್ದೇ. ದೇವಿ ಪಾರ್ವತಿಯ ಬೆವರಿನಿಂದ ಸೃಷ್ಟಿಸಲ್ಪಟ್ಟ ಗಣೇಶ ದೇವಿ ಸ್ನಾನಕ್ಕೆ ಹೋದಾಗ ದ್ವಾರಪಾಲಕನಾಗಿ ಕಾಯುತ್ತಿರುತ್ತಾನೆ. ಶಿವನಿಗೂ ಒಳಬರಲು ಬಿಡದಿದ್ದಾಗ ಸಿಟ್ಟುಗೊಂಡ ಶಿವ ಗಣಪನ ವಿರುದ್ದ ಯುದ್ದಕ್ಕೆ ತೊಡಗಿ ಆತನ ತಲೆ ತುಂಡರಿಸುತ್ತಾನೆ. ಮುಂದೆ ಉತ್ತರ ದಿಕ್ಕಿನಲ್ಲಿರೋ ಆನೆಯ ತಲೆ ತೆಗೆದು ಗಣೇಶನ ಶರೀರಕ್ಕೆ ಜೋಡಿಸಿ ಈಗಿರೋ ಗಣಪನ ಸ್ವರೂಪ ತಯಾರಾಗುತ್ತದೆ. ಗಣಪನ ಸಿಟ್ಟಿನ ಬಗ್ಗೆ ಉಲ್ಲೇಖಗಳಿರದಿದ್ದರೂ ಆತ ಏಕದಂತನಾದ ಬಗ್ಗೆ ಹಲವು ನಿಟ್ಟಿನ ಕತೆಗಳಿವೆ. ಕೆಲವು ಕತೆಗಳ ಪ್ರಕಾರ ಪರಶಿವನ ಪರಮ ಭಕ್ತನಾದ ಪರಶುರಾಮ ಶಿವನನ್ನು ನೋಡಲು ಕೈಲಾಸಕ್ಕೆ ಬರುತ್ತಾನೆ. ಗಣಪ ಆತನಿಗೆ  ಶಿವನನ್ನು ನೋಡಲು ಬಿಡುವುದಿಲ್ಲ. ಇದರಿಂದ ಸಿಟ್ಟಿಗೆದ್ದ ಪರಶುರಾಮನಿಗೂ ಗಣಪನಿಗೂ ಯುದ್ದ ನಡೆದು ಗಣಪನ ಒಂದು ದಂತ ಮುರಿಯುತ್ತದೆ. ಗಣಪ ಮಹಾಭಾರತವನ್ನು ಬರಿಯೋ ಸಲುವಾಗಿ ತನ್ನ ದಂತವನ್ನು ಮುರಿದುಕೊಂಡ ಎಂಬ ಕತೆಗಳೂ ಇವೆ.. ವಿಶ್ವಾಮಿತ್ರ, ಉಗ್ರ ನರಸಿಂಹ,ಮನ್ಮಥನ ದಹಿಸಿದ ಶಿವನ ಮೂರನೇ ಕಣ್ಣು.. ಹೀಗೆ ಸಿಟ್ಟಿನ ಉಲ್ಲೇಖ ಸಾಕಷ್ಟಿವೆ ಪುರಾಣಗಳಲ್ಲಿ. ಎಲ್ಲವನ್ನೂ ಬರೆಯುತ್ತಾ ಹೋದರೆ ಓದುತ್ತಿರುವ ನಿಮಗೇ ಸಿಟ್ಟುಬಂದುಬಿಡಬಹುದು.

ಇನ್ನು ವಾಸ್ತವಕ್ಕೆ ಬಂದರೆ ಸಿಟ್ಟಿಂದ ಎಷ್ಟೆಲ್ಲಾ ಅನಾಹುತವಾಗುತ್ತದೆ ಎಂದು ಕೇಳಿದ್ದೀವಿ. ದಿನನಿತ್ಯ ಕೇಳುತ್ತಲೇ ಇದ್ದೀವಿ. ಆದರೂ ಎಷ್ಟು ಸಿಟ್ಟಲ್ಲ ನಮಗೆ ? ಅಮ್ಮ ಹೊತ್ತಿಗೆ ಸರಿಯಾಗಿ ತಿಂಡಿ ಮಾಡಿಕೊಟ್ಟಿಲ್ಲ ಅಂತ ಸಿಟ್ಟು, ರೂಂ ಮೇಟು ನಾನು ಹೋಗಬೇಕೆಂದಾಗಲೇ ಸ್ನಾನಕ್ಕೆ ಹೋಗುತ್ತಾನೆಂದು ಸಿಟ್ಟು, ಆಫೀಸಲ್ಲಿ ಏನೋ ಕೆಲಸ ಸರಿಯಾಗಿಲ್ಲವೆಂದು ಇಡೀ ದಿನ ಮನೆಯವರ ಮೇಲೆಲ್ಲಾ ಸಿಟ್ಟು,ಅಪ್ಪ ಖರ್ಚಿಗೆ ದುಡ್ಡು ಕೊಟ್ಟಿಲ್ಲವೆಂದು ಸಿಟ್ಟು, ಪಾನಿಪೂರಿ ತಿನ್ನಕ್ಕೆ ಹೊರಗಡೆ ಹೋಗಬೇಕೆಂದಿದ್ದ ಪ್ಲಾನು ಹಾಳು ಮಾಡಿ ಇನ್ನೇನೋ ಕೆಲಸ ಹಚ್ಚಿದ ಅಮ್ಮನ ಮೇಲೆ ಸಿಟ್ಟು,.. ಹೀಗೆ ನೂರೆಂಟು ಸಿಟ್ಟು.ಕಾರಣವಿಲ್ಲದೇ, ಚಿಲ್ಲರೆ ಕಾರಣಗಳಿಂದ ಸಿಟ್ಟಿಗೆ ಯಾವ ರೀತಿಯಲ್ಲಿಯೂ ಕಾರಣರಲ್ಲದವರ ಮೇಲೆ ಸಿಟ್ಟು.ಈ ಸಿಟ್ಯಾಕೆ, ಸಿಡುಕ್ಯಾಕೆ ? ಸ್ವಲ್ಪ ತಣ್ಣಗಿರೋ ತಮ್ಮ ಎಂದು ಬುದ್ದಿ ಹೇಳುವವರ ಮೇಲೂ ಸಿಟ್ಟು. ಒಮ್ಮೆ ಸಿಟ್ಟಿಂದ ಮೂಗು ಕೊಯ್ದು ಕೊಂಡರೆ ಸಿಟ್ಟು ಇಳಿದ ಮೇಲೆ ಮೂಗು ಬರುತ್ತಾ ಅಂತ ಗಾದೆಯೇ ಇದೆ. ಸಿಟ್ಟಿಗೆ ಬುದ್ದಿ, ನಾಲಿಗೆ ಕೊಟ್ಟುಬಿಟ್ವಿ ಅಂದ್ರೆ ಮುಗ್ದೇ ಹೋಯ್ತು.. ವರ್ಷಗಳ ಸಂಬಂಧಗಳು ಕ್ಷಣಮಾತ್ರದಲ್ಲಿ ಮುರಿದುಹೋಗುತ್ತೆ, ಮಧುರ ಸಂಬಂಧಗಳು ನೋಡು ನೋಡುತ್ತಲೇ ಮುದುರಿ ಹೋಗುತ್ತೆ.. ಈ ಸಿಟ್ಟು ಅನ್ನೋದು ನಮಗೇ ಗೊತ್ತಿಲ್ದೇ ನಮ್ಮೊಳಗೆ ಕೂತು ನಮ್ಮ ಸುತ್ತಮುತ್ತ ಇರೋ ಎಲ್ಲರನ್ನೂ ನಾವೇ ದೂರ ಮಾಡಿಕೊಳ್ಳೋತರ ಮಾಡಿ ನಿಧಾನವಾಗಿ ಕೊಲ್ಲೋ ವೈರಿ, ವಿಷ.ಸದಾ ಸಿಟ್ಟು ಮಾಡಿಕೊಳ್ತಾ ಇರೋರ ದೇಹದ ಮೇಲೆ ಎಷ್ಟು ವ್ಯತಿರಿಕ್ತ ಪರಿಣಾಮಗಳಾಗುತ್ತದೆ ಅನ್ನೋದು ಗೊತ್ತಿದ್ದೇ. ಈ ಬಿ.ಪಿ, ಹೃದಯದ ತೊಂದರೆಗಳು, ಮಾನಸಿಕ ಅಶಾಂತಿ, ನಿದ್ರೆ ಬರದೇ ಇರೋದು, ಕೊನೆಗೆ ತನ್ನ ಮೇಲೇ ಅಸಹ್ಯಿಸಿಕೊಳ್ಳೋದು ಎಲ್ಲಾ ಬೇಕೆ ? ಸಿಟ್ಟು ಮಾಡಿಕೊಳ್ಳೋದು, ಕೂಗೋದು ಇದ್ದಿದ್ದೇ.. ಅದರಿಂದ ಸಾಧಿಸಿದ ಹಿಮಾಲಯಗಳೇನಿಲ್ಲ. ಇದ್ದದ್ದರಲ್ಲೇ ಕೊಂಚ ಮನಸ್ಸು ಬಿಚ್ಚಿ ನಗೋಣ. ಹಗುರಾಗಿರೋಣ. ನಮ್ಮ ಸುತ್ತಮುತ್ತಲಿರೋರು ಸದಾ ಸಿಡುಕ್ತಾ ಇದ್ರೆ ಹೇಗಿರುತ್ತೆ ಯೋಚ್ನೆ ಮಾಡಿ. ಅವ್ರೂ ನಮ್ಮ ಬಗ್ಗೆ ಹಾಗೇ ಯೋಚ್ನೆ ಮಾಡ್ತಾ ಇರ್ತಾರೆ ಅಲ್ವಾ ? ಸರಿ, ಫ್ರೆಂಡ್ಸ್, ಇನ್ನೊಮ್ಮೆ ಸಿಗೋಣ. ಶುಭದಿನ. ಮತ್ತೊಮ್ಮೆ ಹಬ್ಬದ ಶುಭಾಶಯಗಳು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

sittu andare tatkalika hucchu!
Chennagai mudi bandide

Ishwara Bhat K
10 years ago

ಒಳ್ಳೆಯ ಲೇಖನ. ಸಮಯೋಚಿತ. ಚೆನ್ನಾಗಿದೆ.

prashasti
10 years ago

ಧನ್ಯವಾದಗಳು ಅಖಿಲೇಶ್ ಅವ್ರೆ ಮತ್ತು ಕಿರಣಣ್ಣ 🙂

3
0
Would love your thoughts, please comment.x
()
x