ಶಾಪ (ಕೊನೆಯ ಭಾಗ):ಪಾರ್ಥಸಾರಥಿ ಎನ್.


ನೋಡಿದರೆ ಖಾಲಿ ಜಾಗ, ಎದುರು ರಾಮಕೃಷ್ಣಯ್ಯ ಹಾಗು  ಅವರ ಪತ್ನಿ ಜಾನಕಿ ನಿಂತಿದ್ದರು, ಅವರ ಎರಡು ವರ್ಷದ ಮಗು  ಅಲ್ಲೆಲ್ಲ ಓಡಿಯಾಡುತ್ತ ಆಡಿಕೊಳ್ಳುತ್ತಿತ್ತು.

“ನೋಡು  ಈ ಸೈಟ್ ನಮ್ಮದಾಗುವ ಹೊತ್ತಿಗೆ ಸಾಕು ಸಾಕಾಯಿತು, ಎಂತ ಕಾಲ ಬಂದಿತು, ನನ್ನಿಂದ ಅಡ್ವಾನ್ಸ್ ಹಣವನ್ನು ಪಡೆದ   ಅ ದಲ್ಲಾಳಿ ನಂತರ ಸೈಟ್ ಬೇರೆ ಯಾರಿಗೊ ಆಗಿದೆ ಅನ್ನುತ್ತಾನಲ್ಲ, ಹಾಗೆಂದು ಇಲ್ಲಿ ಸೈಟ್ಗಳಿಗೆ ಅಂತಾ ಬೆಲೆ ಏನು ಇಲ್ಲ, ನಮ್ಮ ಹತ್ತಿರ ನಾಟಕವಾಡಿ ಸೈಟಿನ ಬೆಲೆ ಏರಿಸಲು ಪ್ರಯತ್ನಿಸಿದ, ಹೇಗೊ ಎಲ್ಲ ಸರಿ ಹೋಯಿತು, ನಮ್ಮ ಹೆಸರಿಗೆ ರಿಜಿಷ್ಟರ್ ಆಯಿತು”

ಜಾನಕಿ ನುಡಿದರು

“ಸರಿ ಸೈಟ್ ಏನೊ ಆಯಿತು ಅಂತ ಇಟ್ಟುಕೊಳ್ಳಿ, ಆದರೆ ಸ್ವಂತ ಮನೆ ಕಟ್ಟುವ ಆಸೆ ಅಂದರೆ ಅಷ್ಟು ಸುಲುಭವೆ, ಈಗ ಮನೆ ಕಟ್ಟಲು ಏನು ಮಾಡುವಿರಿ, ನನಗಂತು ಬಾಡಿಗೆ ಮನೆ ಸಹವಾಸ ಸಾಕಾಗಿದೆ, ಆದಷ್ಟು ಬೇಗ ಮನೆ ಕಟ್ಟಿ ಇಲ್ಲಿ ಬಂದು ತಳ ಊರಿದರೆ ಸಾಕು ಅನ್ನಿಸುತ್ತೆ, ಅಂದ ಹಾಗೆ ಈ ಸೈಟನ ಹಳೆಯ ಓನರ್ ಯಾರು, ನೀವು ಅವನ ಜೊತೆ ಮಾತನಾಡಲೆ ಇಲ್ಲವೆ ?”  ಅಂದರು.

“ಸೈಟಿನ ಓನರ್  ಎಲ್ಲಿ ಬಂತು, ಇಲ್ಲಿ ಯಾವುದೊ ಜಮೀನುಗಳಿದ್ದವು,   ಈ ಊರಿನಲ್ಲಿ ಇದ್ದಾನಲ್ಲ, ನಾಗರಾಜ ಶೆಟ್ಟಿ ಅಂತೆ ಹೆಸರು, ಅವನು ಜಮೀನುಗಳನ್ನು ಖರೀದಿಸಿ, ಅದನ್ನು ಸೈಟುಗಳನ್ನಾಗಿ ಮಾಡಿ, ದಾಖಲೆ ಎಲ್ಲ ಮಾಡಿ, ಹೆಚ್ಚಿನ ಹಣಕ್ಕೆ ಮಾರಿದ, ಅವರಿಗೆ ಈ ದಲ್ಲಾಳಿಗಳ ಸಹಾಯ, ನಮ್ಮಂತವರನ್ನು ಹುಡುಕಿ ಸೈಟ್ ಮಾರುತ್ತಾರೆ, ಹಲವು ಕೈ ದಾಟುವ ಹೊತ್ತಿಗೆ, ರೇಟು ಸಹ ಜಾಸ್ತಿಯೆ ಆಗಿರುತ್ತದೆ ಬಿಡು”

“ಅದೆಲ್ಲ ಆಯಿತು, ಈಗ ಮುಂದಿನ ಕತೆ ಹೇಳಿ, ಯಾವಾಗ ಪ್ರಾರಂಬ ಮಾಡುವುದು, ವಿಜಯದಶಮಿ ಎಂದರೆ ಯಾವ ಮಹೂರ್ತವು ನೋಡಬೇಕಿಲ್ಲ ಅನ್ನುವರಲ್ಲವೆ, ಮುಂದಿನ ತಿಂಗಳು ವಿಜಯದಶಮಿ ಗುದ್ದಲಿ ಪೂಜೆ ಮಾಡಿಬಿಡೋದು, ಮನೆ ಪ್ರಾರಂಬಿಸೋದು” ಆಕೆಯ ದ್ವನಿಯಲ್ಲಿ ಎಂತದೊ ಸಂಭ್ರಮ.

ಆತ ಮಾತ್ರ ಅಷ್ಟು ಹುರುಪಿನಿಂದ ಇರಲಿಲ್ಲ

“ನೋಡಬೇಕಲ್ಲೆ, ನನ್ನ ಹತ್ತಿರ ಇರುವ ಹಣದಲ್ಲಿ ತಳಪಾಯ ಸಹ ಆಗಲ್ಲ, ಬ್ಯಾಂಕಿನಲ್ಲಿ ನನಗೆ ಬರುವ ಸಂಬಳಕ್ಕೆ ಕೊಡುವ ಸಾಲ ಏತಕ್ಕು ಸಾಲಲ್ಲ, ಹೊರಗೆ ಸಹ ಸಾಲ ಮಾಡಬೇಕು, ನನ್ನ ಸ್ನೇಹಿತ ರಮೇಶ ಹೇಳಿದ್ದಾನೆ, ಅದ್ಯಾರೊ ಬಾಲಕೃಷ್ಣಯ್ಯ ಅನ್ನುವರು ಪತ್ರದ ಆಧಾರದಲ್ಲಿ ಸಾಲ ಕೊಡಲು ಒಪ್ಪಿದ್ದಾರಂತೆ , ನೋಡಬೇಕು, ಇದೆ ಸೈಟನ್ನೆ ಅವರಿಗೆ ಅಧಾರವಾಗಿ ಇಡೋದು, ಸಾಲ ಪಡೆಯೋದು, ಆಮೇಲೆ ಸಾಲ ತೀರಿಸೋದು ಇದ್ದೆ ಇದೆ”

ಕಡೆಯಲ್ಲಿ ಅವರ ದ್ವನಿ ಇಳಿದಿತ್ತು….

ರಾಮಕೃಷ್ಣಯ್ಯನವರ ಪ್ರಯತ್ನ ಸಫಲವಾಗಿತ್ತು, ವರ್ಷ ಕಳೆಯುವದರಲ್ಲಿ ಆ ಜಾಗದಲ್ಲಿ ಮನೆ ಎದ್ದು ನಿಂತಿತ್ತು, ಸೈಟಿನಲ್ಲಿ ಪೂರ್ತಿ ಕಟ್ಟದೆ, ಹಿಂಬಾಗದಲ್ಲಿ, ಒಂದು ರೂಮಿನ ಸಣ್ಣ ಮನೆ ಇವತ್ತೆಲ್ಲ ಐದು ಆರು ಚದುರ ಇರಬಹುದೇನೊ. ಅದಕ್ಕೆ ಬ್ಯಾಂಕಿನ, ಬಾಲಕೃಷ್ಣಯ್ಯನವರ ಸಾಲವು ಸೇರಿತ್ತು.

ಮನೆ ಕಟ್ಟಿದ ಸಂಭ್ರಮ ದಂಪತಿಗಳಿಗೆ, ಗೃಹ ಪ್ರವೇಶ ಮಾಡಿ ನೆಂಟರನ್ನೆಲ್ಲ ಕರೆದಿದ್ದರು, ಮನೆಯ ಮುಂದೆ ಪೆಂಡಾಲ್. ಒಳಗೆ ಹೋಮದ ಹೊಗೆ,  ಅಕ್ಕ ಪಕ್ಕ ಇನ್ನು ಮನೆ ಕಡಿಮೆ, ಸುತ್ತಲು ಕಾಂಪೋಂಡ್ ಹಾಕಿಸಿದ್ದರು, ಮನೆ ಪೂರ್ತಿ ಹಿಂದಕ್ಕೆ ಕಟ್ಟಿದ್ದು, ಹಿಂದೆ ಜಾಗ ಬಿಟ್ಟಿರಲಿಲ್ಲ . ಇವರ ಮನೆ ಹಿಂಬಾಗ   ಮತ್ತೊಂದು ಮನೆ ಕಟ್ಟಲು ತಯಾರಿ ನಡೆದಿತ್ತು, ಆಗಲೆ ಗೋಡೆ ಎದ್ದಿದ್ದು,  ಕಬ್ಬಿಣ. ಜಲ್ಲಿ ಎಲ್ಲ ತಂದು ಹರಡಿದ್ದರು. ರಾಮಕೃಷ್ಣರ ಮನೆ ಮೇಲೆ ನಿಂತರೆ ಹಿಂಬಾಗ ಸ್ವಷ್ಟವಾಗಿ ಕಾಣುತ್ತಿತ್ತು.

ಬಂದ ನೆಂಟರೆಲ್ಲರನ್ನು ಮಾತನಾಡಿಸುತ್ತ ಜಾನಕಿ, ರಾಮಕೃಷ್ಣಯ್ಯ ಓಡಾಡುತ್ತಿದ್ದರು, ಜಾನಕಿಗೆ ತಮ್ಮ ಮಗುವಿನ ನೆನಪು ಬಂದಿತು, ಎಲ್ಲಿ ಹೋದ ಇವನು ಎಷ್ಟು ಹೊತ್ತಾದರು ಕಾಣುತ್ತಿಲ್ಲ. ಅಲ್ಲಿ ರಸ್ತೆಗಳು ಇಲ್ಲ ಹಾಗಾಗಿ ವಾಹನಗಳ ಓಡಾಟದ ಭಯವು ಇಲ್ಲ ಹಾಗಾಗಿ ಮಕ್ಕಳೆಲ್ಲ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದರು.

ಎಲ್ಲರು ಊಟಕ್ಕೆ ಕುಳಿತಾಗ ಆಕೆ ಮಗನನ್ನು ಹುಡುಕಿದಳು, ಕಾಣಲೆ ಇಲ್ಲ, ಜೊತೆಯಲ್ಲಿದ್ದ ಹುಡುಗರಿಗು ಅವನು ಎಲ್ಲಿ ಎಂದು ತಿಳಿದಿಲ್ಲ. ಊಟ ಮುಗಿಯುತ್ತ ಬರುತ್ತಿದ್ದಂತೆ ರಾಮಕೃಷ್ಣಯ್ಯ ಹಾಗು ಜಾನಕಿ ಇಬ್ಬರು ತಮ್ಮ ಮಗನನು ಹುಡುಕಿದರು, ಇನ್ನು ನಾಲಕ್ಕು ವರುಷ ಆಗಿಲ್ಲದ ಚಿಕ್ಕ ಮಗು ಅದು ಎಲ್ಲಿ ಹೋದಿತು.

ಮಗುವಿನ ಜೊತೆ ಇದ್ದ ಪುಟ್ಟ ಹುಡುಗನೊಬ್ಬ ನುಡಿದ, “ಆಗಲೆ ಅವನು ಮನೆಯ ಮೇಲೆ ಹೋದ” ಎಂದು. ದಂಪತಿಗಳು ಪಕ್ಕದಲ್ಲಿದ್ದ ಮೆಟ್ಟಲಿನ ಮೂಲಕ ಮೇಲೆ ಬಂದರು, ಅಲ್ಲಿಯು ಮಗನ ಸುಳಿವಿಲ್ಲ, ಸುತ್ತಲಿನ ನೋಟ ಸ್ವಷ್ಟವಾಗಿ ಕಾಣುತ್ತಿದೆ,  ಮನೆಗಳು ಇಲ್ಲ ಹಾಗಾಗಿ ಮಗು ಎಲ್ಲಿಹೋಗಿದ್ದರು ಕಾಣಬೇಕಿತ್ತಲ್ಲ, ಎನ್ನುತ ಹಾಗೆ ರಾಮಕೃಷ್ಣಯ್ಯ ಮನೆಯ ಹಿಂಬಾಗದ ತುದಿಗೆ ಬರುತ್ತ ಅಲ್ಲಿ ಮನೆ ಕಟ್ಟುತ್ತಿದ್ದ ಸೈಟಿನತ್ತ ಬಗ್ಗಿ ನೋಡಿದರು. ಅವರ ಉಸಿರು ನಿಂತಂತೆ ಆಯಿತು, ತಮ್ಮ ಮಗುವೆ ಅದು, ಕೆಳಗೆ ಕಬ್ಬಿಣದ ಮೇಲೆ ಬಿದ್ದಿದ್ದೆ, ಅಲುಗಾಡುವುದು ಕಾಣುತ್ತಿಲ್ಲ. “ಜಾನಕಿ” ಎಂದು ಕೂಗಲು ಹೋದವರು, ಬೇಡ ಅನ್ನುತ್ತ ಕೆಳಗಿಳಿದು ಬಂದರು, ಹಿಂದೆಯೆ ಅವರ ಪತ್ನಿ.

ಮನೆಯ ಹಿಂಬಾಗಕ್ಕೆ ತೆರಳಿದರು, ಕಷ್ಟಪಟ್ಟು ಹತ್ತಿರ ಹೋಗಿ ನೋಡಿದರೆ, ಅವರ ಮಗ ಮೇಲಿನಿಂದ ಕಂಬಿಗಳ ಮೇಲೆ ಬಿದ್ದಿದ್ದ, ಬಗ್ಗಿಸಿದ್ದ ಕಂಬಿಯ ಸರಳು ಮಗುವಿನ ಹೊಟ್ಟೆಯಲ್ಲಿ ತೂರಿ, ಬೆನ್ನಲ್ಲಿ ಹೊರಬಂದಿತ್ತು, ನೋಡುವಾಗಲೆ ತಿಳಿಯಿತು. ಮಗು ಸತ್ತು ಬಹಳ ಕಾಲವಾಗಿತ್ತು.

ಗೃಹ ಪ್ರವೇಶದ ಮನೆ ಮರಣದ ಮನೆಯಾಗಿ ಬದಲಾಯಿತು. ಎಲ್ಲರ ಕಣ್ಣಲ್ಲಿ ನೀರು. ಗಂಡ ಹೆಂಡತಿ ಪೂರ ಇಳಿದುಹೋದರು, ಬಂದವರಿಗು ಏನು ಸಮಾದಾನ ಹೇಳುವದೆಂದು ತಿಳಿಯದು. ಕಡೆಗೆ ಎಲ್ಲರು ಅಸಹಾಯಕರು, ರಾಮಕೃಷ್ಣನ ಜೊತೆ ಕೆಲವರು ಹೋಗಿ, ಮಗುವನ್ನು ಮಣ್ಣು ಮಾಡಿ ಬಂದರು.

ಹೊಸ ಮನೆ ಕಟ್ಟಿದ ಸಂಬ್ರಮ ಇಬ್ಬರಲ್ಲು ಇಳಿದು ಹೋಯಿತು. ಇದ್ದ ಒಬ್ಬನೆ ಮಗನು ಗೃಹಪ್ರವೇಶದ ದಿನವೆ ಸತ್ತಿದ್ದು, ಅವರಿಗೆ ಅದನ್ನು ತಡೆಯುವುದು ಕಷ್ಟವೆನಿಸಿತ್ತು. ರಾಮಕೃಷ್ಣಯ್ಯ ಎಲ್ಲದರಲ್ಲಿ ಆಸಕ್ತಿ ಕಳೆದುಕೊಂಡರು. ಬ್ಯಾಂಕಿನ ನೋಟಿಸಿನ ಜೊತೆ ಜೊತೆಗೆ   ಬಾಲಕೃಷ್ಣಯ್ಯನ ಸಾಲದ ಹೊರೆ. ಜಾನಕಿಯಂತು

“ನಾನು ಈ ಮನೆಯಲ್ಲಿ ಇರಲಾರೆ, ನನಗೆ ಮಗುವಿನ ನೆನಪು ಕಾಡುತ್ತೆ” ಅಂತ ಹಟ ಹಿಡಿದರು.

ವರ್ಷ ಕಳೆಯುವುದೊರಳಗಾಗಿ, ತಾವು ಆಸೆಯಿಂದ ಕಟ್ಟಿಸಿದ ಮನೆಯ ಬಗ್ಗೆ ಆಸೆಯನ್ನೆ ಕಳೆದುಕೊಂಡರು. ಮನೆಯ ಹಂಗೆ ಬೇಡ ಎನ್ನುವಂತೆ, ಬಾಲಕೃಷ್ಣಯ್ಯನವರ ಬಳಿ ಹೋಗಿ, ತಮಗೆ ಸಾಲ ತೀರಿಸಲು ಆಗುತ್ತಿಲ್ಲ, ಹಾಗಾಗಿ , ಸೈಟು ಹಾಗು ಮನೆ ಮಾರುವನಿದ್ದೇನೆ, ಬೇಕಾದಲ್ಲಿ ನೀವೆ ತೆಗೆದುಕೊಳ್ಳಿ ಎಂದರು.

ಬಾಲಕೃಷ್ಣಯ್ಯವರಿಗೆ ವಿಷಯ ತಿಳಿಯದು ಎಂದೇನಿಲ್ಲ, ಆದರೆ ವ್ಯವಹಾರಸ್ಥರು, ಮನೆಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ವ್ಯಾಪಾರ ಮಾಡಿದರು. ತಮ್ಮ ಮನೆ ಮಾರಿ, ಉಳಿದ ಹಣವನ್ನು ಬ್ಯಾಂಕಿಗೆ ಕಟ್ಟಿದ, ರಾಮಕೃಷ್ಣಯ್ಯ, ನಂತರ ಊರನ್ನೆ ಬಿಟ್ಟು ಹೊರಟು ಹೋದರು……….

ಅಬ್ಬ ಒಂದು ಮನೆಯ ಹಿಂದೆ ಇಂತ ಕತೆಯೆ , ಏಕೊ ನನಗೆ ವೇದನೆ ಅನಿಸಿತು. ಪ್ರತಿ ಸುಖದ ಹಿಂದೆ ಕಷ್ಟವಿರುತ್ತೆ ಅನ್ನುತ್ತಾರೆ, ಆದರೆ ಸರಳ ಮನುಷ್ಯನೊಬ್ಬನ, ಆಸೆಯ ಹಿಂದೆ ಇಂತ ದುಃಖವೆ. ಆಸೆಯೆ ದುಃಖಕ್ಕೆ ಮೂಲ ಅನ್ನುವರು . ಇಲ್ಲಿ ಸ್ವಂತ ಮನೆ ಕಟ್ಟುವ ಅವರ ಆಸೆ ದೊಡ್ಡದೊ, ಅಥವ ಅದಕ್ಕಾಗಿ ಅವರು ತಮ್ಮ ಮಗನನ್ನು ಕಳೆದುಕೊಂಡು, ಮನೆಯನ್ನು ತೊರೆದು ಹೋದ ಅವರ ಕಷ್ಟ ದೊಡ್ಡದೊ.

ನಾನು ಹೇಳಿದ ಕತೆ ಕೇಳುತ್ತ, ಶ್ರೀನಿವಾಸನ ಕಣ್ಣಲ್ಲಿ ನೀರು ತುಂಬಿತು. ದುಗುಡ ತುಂಬಿ

“ಅಂತಹ ಮನುಷ್ಯರ ಸಂದರ್ಭ ಬಳಸಿ ನಮ್ಮ ಅಪ್ಪ ಈ ಮನೆ ಪಡೆದಿದ್ದು ತಪ್ಪಲ್ಲವೆ ಸ್ವಾಮಿ”

ನಾನು ತುಸು ಚಿಂತಿಸಿ ಅಂದೆ

“ಶ್ರೀನಿವಾಸ, ಮನುಷ್ಯನ ದುಃಖ ಸಂತೋಷವೆ ಬೇರೆ, ಅವನ ವ್ಯವಹಾರವೆ ಬೇರೆ ಅಲ್ಲವೆ, ಅವರು ಕಷ್ಟದಲ್ಲಿದ್ದರು ಅನ್ನುವುದು ನಿಜ, ಆದರೆ ನಿಮ್ಮ ತಂದೆಯವರ ಸಾಲ ತೀರಿಸಲು ಅವರು ಮನೆಯನ್ನು ಮಾರಿ ಹೋದರು. ಮಾಡಿದ ಸಾಲ ತೀರಿಸುವುದು ಮನುಷ್ಯನ ಕರ್ತವ್ಯ ಅಲ್ಲವೆ”

ಶ್ರೀನಿವಾಸ  ಹೇಳಿದ

“ಇರಬಹುದು ಸ್ವಾಮಿ, ಆದರೆ ಅಂತಹ ಸಮಯದಲ್ಲಿ ನಮ್ಮ ತಂದೆ ವ್ಯವಹಾರ ಕುಶಲತೆ ತೋರಿದ್ದಾರೆ ಅಲ್ಲವೆ, ನ್ಯಾಯವಾದ ಬೆಲೆಗೆ ಪಡೆಯದೆ, ಕಡಿಮೆ ಬೆಲೆಗೆ ಪಡೆದಿದ್ದಾರೆ, ಅಲ್ಲದೆ ಬೇಕು ಅಂದಿದ್ದರೆ, ಸಾಲವನ್ನು ನಿಧಾನವಾಗಿ ತೀರಿಸಿ ಆನ್ನಬಹುದಿತ್ತಲ್ಲವೆ?”

ನಾನು ಹೇಳಿದೆ

“ಅದು ವ್ಯವಹಾರ ಏನು ಹೇಳಲಾದಿತು, ಅವರ ಸ್ವಭಾವ ಬಿಡಿ. ಆದರೆ ನನಗೆ ಆಶ್ಚರ್ಯ ಅನಿಸುವುದು, ಪ್ರತಿ ಜಾಗಕ್ಕು ಇಂತಹ ಎಷ್ಟೋ ಇತಿಹಾಸಗಳಿರುತ್ತವೆ, ಕನಸುಗಳಿರುತ್ತವೆ, ಕತೆಗಳಿರುತ್ತವೆ. ಬಹುಷಃ ನಿಮಗೆ ಈ ಜಾಗದ ಋಣವಿತ್ತೇನೊ ರಾಮಕೃಷ್ಣಯ್ಯ ಕಟ್ಟಿದ ಮನೆ ನಿಮಗೆ ಸೇರಿತು ಅನ್ನಿಸುತ್ತೆ”

ಶ್ರೀನಿವಾಸರ ತಾಯಿ ನುಡಿದರು,

“ನನಗೆ ನಮ್ಮವರ ವ್ಯವಹಾರಗಳು ತಿಳಿಯದು, ಆದರೆ ಕೊಂಡಾಗ ಮನೆ ಹೀಗಿರಲಿಲ್ಲ, ಹಿಂದಿನ ಅಡುಗೆಮನೆ, ಊಟದ ಮನೆ, ಬಾತ್ ರೂಮ್ ಇದೆಯಲ್ಲ ಅಷ್ಟೆ ಇದ್ದದ್ದು, ಆಮೇಲೆ ಇವರು, ಖಾಲಿ ಇದ್ದ ಜಾಗವನ್ನು ಸೇರಿಸಿ ದೊಡ್ಡ ಮನೆ ಮಾಡಿದರು. ಮೇಲೆ ಒಂದು ರೂಮು ಹಾಕಿಸಿದರು. ಈ ಮನೆಯಲ್ಲಿ ಬಂದು ನಿಂತೆವು. ಅವರಿಗು ಈ ಮನೆಯ ಋಣ ಇದ್ದದ್ದು ಅಷ್ಟರಲ್ಲೆ ಇದೆ. ಐವತೈದು ವರ್ಷ ಸಾಯುವ ವಯಸ್ಸೇನು ಅಲ್ಲ, ಈ ಮನೆಗೆ ಬಂದು ಐದಾರು ವರುಷಗಳಾಗಿತ್ತು ಅಷ್ಟೆ ಅನ್ನಿಸುತ್ತೆ, ಹಾರ್ಟ್ ಅಟ್ಯಾಕ್ ಹೆಸರಲ್ಲಿ ದೇವರು ಅವರನ್ನು ಕರೆಸಿಕೊಂಡ. ಶ್ರೀನಿವಾಸನಿಗೆ ಮದುವೆ ಆಯಿತು, ಇಪ್ಪತ್ತು ವರ್ಷಗಳು ದಾಟಿದವು, ನಾನು ಮಾತ್ರ ಇಲ್ಲಿಯೆ ಇದ್ದೇನೆ”

ಬೇಸರದ ಸ್ವರ  ಆಕೆಯದು.

“ಎಲ್ಲ ಪ್ರಕೃತಿಯ ಇಚ್ಚೆ ಅಲ್ಲವೆ ಅಮ್ಮ , ಯಾರ ಹಿಡಿತಕ್ಕು ಸಿಗದೆ ನಡೆಯುತ್ತ ಇರುತ್ತೆ ಅಷ್ಟೆ” ಎಂದೆ

ಮತ್ತೆ ಎಂತದೋ ಮೌನ .

ಶ್ರೀನಿವಾಸ ಮತ್ತೆ ಕುತೂಹಲದ ದ್ವನಿಯಲ್ಲಿ ನುಡಿದ

“ಹಾಗಾದರೆ ಸ್ವಾಮಿ, ರಾಮಕೃಷ್ಣಯ್ಯನವರು ಈ ಮನೆ ಕಟ್ಟುವ ಮೊದಲು ಈ ಜಾಗದಲ್ಲಿ ಯಾರಿದ್ದರು ತಿಳಿಯಬಹುದು ಅಲ್ಲವೆ, ಅಂದರೆ ಮೂವತ್ತು , ನಲವತ್ತು ವರುಷ ಹಿಂದಕ್ಕೆ ಹೋಗಬೇಕೆನೊ”

“ಯಾರಿರಲು ಸಾದ್ಯ, ಆಗೆಲೆ ಹೇಳಿದ್ದರಲ್ಲ, ಯಾರದೊ ಜಮೀನು, ಸೈಟು ಮಾಡಿದ್ದಾರೆ ಅಂತ” ಬಾಗ್ಯಮ್ಮ ನುಡಿದರು.

ನನ್ನ ಮನ ಮತ್ತೆ ಎಂತದೋ ಭಾವಾವೇಶಕ್ಕೆ ಒಳಗಾಗುತ್ತಿತ್ತು………

ಕಣ್ಣೆದುರು ಏನೇನೊ ಚಿತ್ರಗಳು..

ನಡು ಮದ್ಯಾನ್ಹ  ರೈತ ವೆಂಕಟ ಮರದ ಕೆಳಗೆ ಕುಳಿತಿದ್ದ, ಅವನ ತಾಯಿ ತರುವ ಊಟಕ್ಕೆ ಕಾಯುತ್ತಿದ್ದ. ಬೆಳಗ್ಗೆ ಬೆಳಗ್ಗೆ ಎದ್ದು ಮನೆ ಬಿಟ್ಟಿದ್ದು, ಬೆಳಗಿನಿಂದ ಹೊಲವನ್ನು ಹಸನು ಮಾಡಿದ್ದು, ನೆತ್ತಿಯ ಮೇಲಿನ ಬಿಸಿಲು ಎಲ್ಲವು ಸೇರಿ ಯುವಕನಾದರು ಆಯಾಸ ಅನ್ನಿಸುತ್ತಿತ್ತು ಅವನಿಗೆ. ಹಾಗೆ ಮರದ ಬುಡಕ್ಕೆ ಒರಗಿ ಕಣ್ಣು ಮುಚ್ಚಿದ. ದೂರದಿಂದ ಯಾರೊ ಬರುತ್ತಿರುವ ಹೆಜ್ಜೆ ಸಪ್ಪಳ ಕೇಳಿಸಿತು. ನೋಡಿದರೆ ಅವನ ತಾಯಿ, ಜೊತೆಯಲ್ಲಿ ಅವನ ಅಕ್ಕನ ಮಗಳು ದೇವಕಿ. ಎದ್ದು ಕುಳಿತ.

“ಇವಳು ಯಾವಾಗ ಬಂದಳಮ್ಮ”  ನಗುಮುಖದಿಂದ ಪ್ರಶ್ನಿಸಿದ.

“ಬೆಳಗ್ಗೆ ಬಸ್ಸಿಗೆ ಬಂದಳಪ್ಪ, ಬಿಸಿಲು ಬೇಡ ಬಿಡು ಅಂದರೆ ಕೇಳದೆ ನನ್ನ ಜೊತೆ ಬಂದಿದ್ದಾಳೆ, ನಿನಗೆ ಊಟ ಕೊಡಲು” ತಾಯಿ ನುಡಿದಳು.

ದೇವಕಿಯ ಮುಖದಲ್ಲಿ ನಾಚಿಕೆ. ಬಿಸಿಲಿನಲ್ಲಿ ನಡೆದು ಬಂದು ಬಳಲಿದ ಅವಳ ಮುಖದಲ್ಲಿ ನಾಚಿಕೆ ನೋಡುವಾಗ ವೆಂಕಟನಿಗೆ ಮನದೊಳಗೆ ಖುಷಿ. ಅವನ ಮನದಲ್ಲಿ ಸದಾ ಮಂಡಿಗೆ ತಿನ್ನುತ್ತಿದ್ದ. ಹೇಗಿದ್ದರು ಅಕ್ಕನ ಮಗಳೆ , ಹೊರಗಿನವರಲ್ಲ,  ಅವ್ವನಿಗೆ ತಿಳಿಸಿ, ಕೇಳಿ ಇವಳನ್ನೆ ಮದುವೆ ಆಗಬೇಕು, ಆದರೆ ಮನೆ ಕಡೆ ಎಲ್ಲವು ಒಂದು ಸುಸ್ಥಿಥಿಗೆ ಬರಬೇಕು, ನಂತರವೆ ಮದುವೆ ಎಲ್ಲ ಮಾತು ಎಂದು ಮನದಲ್ಲೆ ಅಂದುಕೊಂಡ.

“ಏಕೊ ಸುಮ್ಮನೆ ಕುಳಿತೆ, ದಿನಾ ಅರಳು ಹುರಿದಂತೆ ಮಾತನಾಡುತ್ತಿದ್ದೆ, ಈದಿನ ಇವಳಿದ್ದಾಳೆ ಎನ್ನುವ ಸಂಕೋಚವ ಸರಿ ಹೋಯಿತು, ಗಂಡುಮಗ ನೀನೆ ನಾಚಿದರೆ ಅವಳಾದರು ಏನು ಬಾಯಿ ಬಿಟ್ಟಾಳು. ನಾಳೆ ಇವಳನ್ನು ಮದುವೆ ಆದಲ್ಲಿ ಇಬ್ಬರು ಏನು ಮಾಡುವಿರಿ, ಹೀಗೆ ಮೌನವಾಗಿ ಕುಳಿತಿರುವಿರ”

ತನ್ನ ಆಸೆಯೆ ಅಮ್ಮನ ಬಾಯಲ್ಲಿ ಬರುತ್ತಲೆ, ವೆಂಕಟ ಸಂತಸ ಪಟ್ಟ, ನನ್ನ ಮನದಲ್ಲಿ ಯೋಚನೆ ಮೂಡಿದ್ದು ಒಳ್ಳೆ ಗಳಿಗೆ ಇರಬೇಕು ಅದಕ್ಕೆ ಅವ್ವನ ಬಾಯಲ್ಲು ಅದೆ ಮಾತು ದೇವರು ಬರಸವ್ನೆ ಅಂದು ಕೊಂಡರು , ಹೊರಗೆ ಮಾತ್ರ,

“ಹೋಗವ್ವ ನೀನು ಏನೇನೊ ಮಾತಾಡ್ತಿಯ, ಸದ್ಯಕ್ಕೆ ಮನೆಕಡೆ ಎಲ್ಲ ಒಂದು ಹದಕ್ಕೆ ಬಂದರೆ ಸಾಕಾಗಿದೆ, ಈಗ ಮದುವೆ ಅಂದರೆ ಅಷ್ಟೆ ಅಂದ. ದೇವಕಿಗು ತನ್ನ ಅಜ್ಜಿ ಹಾಗು ಅತ್ತೆಯಾಗುವ ಅವಳ ಮಾತು ಹಿತ ತಂದಿತು. ಮೌನವಾಗಿದ್ದಳು.

“ದೇವಕಿ ನೀನು ವೆಂಕಟನಿಗೆ ಊಟ ಬಡಸುತ್ತ ಇರು, ನಾನು ಅಲ್ಲಿ ಕಾಣಿಸುತ್ತಿದೆಯಲ್ಲ, ಕರಿಹೆಂಚಿನ ಮನೆ ಅಲ್ಲಿ  ಸುಶೀಲ ಇರುತ್ತಾಳೆ, ಒಂದು ಕ್ಷಣ ಮಾತನಾಡಿಸಿ ಬಂದುಬಿಡುವೆ, ಆಮೇಲೆ ನಾವಿಬ್ಬರು ಮತ್ತೆ ಮನೆಗೆ ಹೋಗೋಣ, ಅಲ್ಲಿ ನಿಮ್ಮಮ್ಮ ಕಾಯುತ್ತಿರುತ್ತಾಳೆ ಊಟಕ್ಕೆ” ಎನ್ನುತ್ತ ಹೊರಟಳು.

ತನ್ನ ತಾಯಿ ದೇವಕಿಯನ್ನು ತನ್ನ ಜೊತೆ ಬಿಟ್ಟು ಹೊರಟಿದ್ದು ವೆಂಕಟನಿಗೆ ಆಶ್ಚರ್ಯವೆನಿಸಿತು. ಅವಳು ಅತ್ತ ಹೋಗುತ್ತಲೆ ಕೇಳಿದ

“ಅಮ್ಮ ಹೇಳಿದ್ದು ಕೇಳಿಸ್ತ, ನೀನೆ ಊಟ ಬಡಿಸ್ ಬೇಕಂತೆ” ಎಂದ ಖುಷಿಯಾಗಿ,

“ಬಡಿಸ್ಬೇಕು ಅಂದ್ರೆ, ನೀವು ಕೂತ್ಕೊಬೇಕಪ್ಪ, ನಿಂತೋರಿಗೆ ಊಟ ಹಾಕೊ ಪದ್ದತಿ ನಮ್ಮೂರಾಗಿಲ್ಲ” ಎಂದಳು ಅವಳು ತುಂಟತನದಿಂದ.

ವೆಂಕಟ ನಗುತ್ತ ಊಟಕ್ಕೆ ಕುಳಿತ, ಅವಳು ತಟ್ಟೆ ಇಟ್ಟು, ತಂದಿದ್ದ  ಮುದ್ದೆ, ಸಾರು ಎಲ್ಲ ಬಡಿಸುತ್ತಿರುವಾಗ ಕೇಳಿದ

“ನಿಮ್ಮ ಅಜ್ಜಿ ಅಂದಿದ್ದು ಕೇಳಸ್ತ,  ನಾವಿಬ್ಬರು ಗಂಡ ಹೆಂಡ್ತಿ ಆದ್ರೆ ಹೆಂಗೆ ಅಂದ್ಳು. ನೀನೇನು  ಹೇಳ್ಳೆ ಇಲ್ಲ” ಎಂದ

“ನಾನೆಂತದು ಹೇಳೋದು, ಎಲ್ರು ಆಯ್ತು ಅಂದ್ರೆ ಆಯ್ತು” ಅಂದಳು ಕೆಂಪು ಕೆಂಪಾಗುತ್ತ

“ಅಂದ್ರೆ ನಿಂಗೆ ಇಷ್ಟ ಇಲ್ವ” ವೆಂಕಟ ಮತ್ತೆ ಕೇಳಿದ

“ಇಷ್ಟ ಇರೋ ಹೊತ್ಗೆ, ನಿಮ್ಮೂರ್ಗೆ ಬಂದಿರಾದು, ಇಲ್ಲಿ ನಿಮ್ಮ ಜೊತೆ ಕೂತಿರೋದು” ಅಂದಳು

ವೆಂಕಟನಿಗೆ ಸಂತಸದಿಂದ ಮನ ತುಂಬಿ ಬಂತು,

“ದೇವಕಿ, ಮುಂದೆ ನಾನು ನಿನ್ನ ಚೆನ್ನಾಗಿ ನೋಡ್ಕೋತಿನಿ ಅಂತ ನಂಬ್ಕೆ ಇದ್ಯಾ?” ಅವನು ಕೇಳಿದ

“ನಮ್ಮ ಅಮ್ಮನ ಬೆನ್ನಾಗ್ ಬಿದ್ದಿರೋ ಸೋದರಮಾವ ನೀನು, ಮದುವೆ ಆಗ್ತೀನಿ ಅಂತಾ ಕೇಳ್ತಾ ಇದ್ದಿ, ನಿನ್ನ ನಂಬದೆ ಇನ್ಯಾರನ್ನ ನಂಬಲಿ, ನಿನ್ನೆ ನಂಬ್ಕಂಡು ನಿನ್ನ ಮನೆಗೆ ಬರ್ತೀನಿ,  ಆಕಡೆ ಅತ್ತೆ ಅವ್ಳೆ, ಅಜ್ಜೀನು ಅವ್ಳೆ, ನಂಗೇ ಇನ್ನೇನು ಭಯ”

ದೇವಕಿ ಮುಗ್ದವಾಗಿ ನುಡಿದಳು.

ಊಟ ಮುಗಿಸುತ್ತಿರಬೇಕಾದರೆ, ಅತ್ತ ಹೋಗಿದ್ದ ವೆಂಕಟನ ಅಮ್ಮನು ಬಂದಳು, ಅದು ಇದು ಮಾತಾಡಿ ಅವರಿಬ್ಬರು , ವೆಂಕಟನಿಗೆ ಬೇಗ ಮನೆಗೆ ಬರುವಂತೆ ತಿಳಿಸಿ ಹೊರಟರು.

“ಸ್ವಲ್ಪ ಕೆಲಸ ಉಳ್ಕಂಡಿದೆ, ಒಂದೆರಡು ತಾಸು ಅಷ್ಟೆಯ, ನಿಮ್ಮ ಹಿಂದೆನೆ ಬರ್ತೀನಿ ನಡೀರಿ” ಅಂತ ಅಮ್ಮನನ್ನು ದೇವಕಿಯನ್ನು ಕಳಿಸಿದ ವೆಂಕಟ. ಮರದ ನೆಳ್ಳು ತಂಪಾಗಿದೆ, ಐದು ನಿಮಿಷ ಕಣ್ಣು ಮುಚ್ಚಿ, ಮತ್ತೆ ಕೆಲಸಕ್ಕೆ ತೊಡಗುವುದು, ಅಂದುಕೊಂಡು, ದೇವಕಿಯ ಕನಸು ಕಾಣುತ್ತ ಕಣ್ಣು ಮುಚ್ಚಿದ.

ಊಟದ ಮೈಬಾರ ಸ್ವಲ್ಪ ಇಳಿಯಿತು, ಅರ್ಧಗಂಟೆ ಆಗಿರಬಹುದೇನೊ, ಇನ್ನು ತಡವಾಗುತ್ತೆ ಎಂದು ಎದ್ದು, ಹೊಲದ ಕಡೆ   ಹೆಜ್ಜೆ ಹಾಕಿದ, ದೂರದಲ್ಲಿ ಯಾರೊ ಓಡಿ ಬರುವುದು ಕಾಣಿಸಿತು. ನೋಡುವಾಗಲೆ ತಿಳಿಯಿತು, ಪಕ್ಕದ ಗೌಡ್ರ ಮನೆ ಆಳು, ಸಿದ್ದ , ಇಲ್ಲಿಗೇಕೆ ಬರುತ್ತಿದ್ದಾನೆ ಅಂದುಕೊಳ್ಳುತ್ತಿರಬೇಕಾದರೆ,

“ವೆಂಕಟ, ಬೇಗ ಮನೆಗೆ ಬರ ಬೇಕಂತೆ, ಊರಿಂದ ಬಂದ ನಿಮ್ಮ ಅಕ್ಕ ಕರೀತವ್ಳೆ” ಅಂದ ಓಡುತ್ತ ಬಂದ ಸಿದ್ದ,

“ಅದ್ಯಾಕೋ, ಈಗಿನ್ನು ಅಮ್ಮ , ದೇವಕಿ ಬಂದು ಹೋದ್ರಲ್ಲ, ಸ್ವಲ್ಪ ಕೆಲಸ ಉಳಿದಿದೆ, ಮುಗಿಸಿ ಬರುತ್ತೇನೆ ಬಿಡು” ಎಂದ ವೆಂಕಟ.

“ಹಾಗಲ್ಲಪ್ಪೋ, ಅದ್ಯಾರೋ ಬ್ಯಾಂಕಿನೋರು ಬಂದಿದ್ದಾರೆ, ಜೀಪಿನಲ್ಲಿ, ಜೊತೆಗೆ ಪೋಲಿಸು ಇದೆ, ನಿನ್ನ ಸಾಲ ಇದೆಯಂತಲ್ಲ, ಜಪ್ತಿಗೆ ಅಂತೆ, ನಿಮ್ಮ ಮನೆ ಸಾಮಾನೆಲ್ಲ ಹೊರಗೆ ಎಸೆದು ಬೀಗ ಹಾಕ್ಕೊಂಡು ಹೋಗ್ತಿದ್ದಾರೆ, ಸಾಲಕ್ಕೆ ನೀನು ಮನೆ, ಜಮೀನು ಇಟ್ಟಿದ್ದೀಯಲ್ಲ, ಅದ್ಕೆ, ನಿಮ್ಮಕ್ಕ ಅಳ್ತ ಕೂತವ್ಳೆ, ನಿನ್ನ ಕರಕೊಂಡು ಬಾ ಅಂದಳು” ಎಂದ ಸಿದ್ದ.

ವೆಂಕಟನಿಗೆ ಒಮ್ಮೆಲೆ ನಿದ್ದೆ, ದೇವಕಿಯ ಪ್ರೀತಿಯ ಭ್ರಮೆ ಎಲ್ಲವು ಇಳಿದುಹೋಯಿತು, ಏನು ಬ್ಯಾಂಕೋರು ಬಂದಿದ್ದಾರೆ, ಜೊತೆಗೆ ಪೋಲಿಸು ಬೇರೆ, ದೇವ್ರೆ ಎಂತ ಕೆಲಸ ಆಗೋಯ್ತು, ಇವ್ರು ದೇವಕಿ ಬಂದಾಗಲೆ ಬರಬೇಕ. ನಮ್ಮ ಮನೆ ಬೀಗ ಹಾಕಿದ್ರು ಅಂದ್ರೆ ಅಷ್ಟೇಯ, ಇನ್ನು ಮನೆ ಹರಾಜಿಗೆ ಇಡ್ತಾರೆ , ದುಡ್ಡು ಕಟ್ಟ ಬೇಕು ಆದ್ರೆ, ನನ್ನ ಹತ್ರ ದುಡ್ಡಾದ್ರು ಎಲ್ಲಿದೆ ಅಂದುಕೊಳ್ಳುತ್ತ ನಿಂತ.

“ಬೇಗ ಹೊರಡಪ್ಪೊ, ನಿನ್ನ ಕಾಯ್ತಾವ್ರೆ” ಎಂದ ಸಿದ್ದ,

ವೆಂಕಟನಿಗೆ ರೇಗಿ ಹೋಗಿತ್ತು

“ತಡ್ಕಳಲ , ಹೋಗಿವಿಂತಿ, ನಾನು ಅಲ್ಲಿ ಬಂದು ಏನು ಮಾಡಲಿ ನಂಗೆ ಗೊತ್ತಾಯ್ತ ಇಲ್ಲ, ನಿಂದು ಬೇರೆ ಇಲ್ಲಿ, ಅಮ್ಮ ದೇವಕಿ ಮನೆಗೆ ಬಂದ್ರ ” ಅಂತ ಕೇಳಿದ

“ಇಲ್ಲ, ನಿಂಗೆ ಊಟ ಕೊಟ್ಟು ಬರ್ತೀನಿ, ಅಂತ ಅವರಿಬ್ಬರು ಬಂದ್ರಂತಲ್ಲ, ಇನ್ನು ಮನೆಗೆ ಬಂದಿರಲಿಲ್ಲ, ಅಷ್ಟರಲ್ಲಿ ಇಷ್ಟೆಲ್ಲ ರಾಮಾಯಣ ಆಗೋಯ್ತು, ನಿಮ್ಮ ಅಕ್ಕ ಒಬ್ಳೆ ಅಳ್ತಾವ್ಳೆ, ಶುಭ ಕಾರ್ಯಕ್ಕೆ ಬಂದೆ ಹೀಗಾಯ್ತು ಅಂತ ಗೋಳಾಡ್ತ  ಅವ್ಳೆ” ಸಿದ್ದ ನುಡಿದ

ವೆಂಕಟನ ಮನಸು ಮುದುರಿ ಹೋಯ್ತು, ಅಕ್ಕನು ಪಾಪ ನಂಗೆ ಹೆಣ್ಣು ಕೇಳ್ಬೇಕು ಅಂತಾನೆ ಬಂದಾವ್ಳೆ ಅನ್ಸುತ್ತೆ, ಈಗ ನನ್ನ ಗಾಚಾರ ಹೀಗಾಯ್ತು ಅಂದುಕೊಂಡ. ಏಕೊ ಅವನಿಗೆ ಮನೆ ಹತ್ತಿರ ಹೋಗಲು, ಮನವೆ ಒಪ್ಪಲಿಲ್ಲ ಈಗ ಅಲ್ಲಿ ಹೋಗಿ, ಹೇಗೆ ದೇವಕಿಯ ಕಣ್ಣನ್ನು ಎದುರಿಸುವುದು, ಅನ್ನಿಸಿ

“ಲೋ ಸಿದ್ದ ನೀನು ಹೋಗ್ಲ, ನಾನು ಸ್ವಲ್ಪ ಹೊತ್ತು ಬಿಟ್ಟು ಬರ್ತೀನಿ, ಏಕೊ ತಲೆ ಕೆಟ್ಟು ಮೊಸರಾಯ್ತು” ಎನ್ನುತ್ತ ಕುಸಿದು ಕುಳಿತ

“ನಿನ್ನ ಇಷ್ಟ ಕಣ್ಲ, ಅಕ್ಕ ನಿನ್ನ  ಬೇಗ ಕರಕಂಡು ಬಾ ಅಂದ್ಳು, ನಾ ಹೋಗಿ ಹೇಳ್ತೀನಿ” ಎನ್ನುತ್ತ  ಉಪಾಯವಿಲ್ಲದೆ ಹೊರಟ ಸಿದ್ದ.

ಸಿದ್ದ ಹೋಗುತ್ತಲೆ, ವೆಂಕಟ ತಲೆ ಹಿಡಿದು ಕುಳಿತ, ದೇವ್ರೆ ಇದೇನು ಕೆಲ್ಸ ಮಾಡಿದೆ, ಬೆಳಗ್ಗೆ ಇಂದ ರಾತ್ರಿ ಗಂಟ ದುಡಿತೀನಿ ಆದ್ರು ಸಾಲ ಅನ್ನೋದು ತೀರಲ್ಲ, ಬೆಳೆ ಮೇಲೆ ಹಾಕಿದ ದುಡ್ಡು ಹಾಕಿದಂಗೆ ಕರಗಿ ಹೋಗ್ಬುಡುತ್ತೆ, ನಾನು ಏನ್ ಮಾಡಲಿ? . ಮನೇಲಿ ಇರೋರೆ ಇಬ್ರು ನಾನು ಅಮ್ಮ, ಈಗಲೆ ಈ ಪಾಡು, ಇನ್ನು ಮದುವೆ ಮಕ್ಕಳು ಅಂತ ಆದ್ರೆ ನಂಗೆ ತೂಗ್ಸಕ್ಕೆ ಆಗುತ್ತ ಅನ್ನಿಸಿ ಅಳು ಬಂದಿತು.

ಕಣ್ಣಲ್ಲಿ ನೀರು ಸುರಿಯುತ್ತ ಇತ್ತು ಅವನಿಗೆ, ಅಲ್ಲ ಈಗ ದೇವಕಿಗೆ, ಅಕ್ಕನಿಗೆ ಹೇಗೆ ಮುಖ ತೋರಿಸೋದು, ಸ್ವಂತ ಅಕ್ಕನೆ ಇರಬಹುದು ಆದರೆ ಅವಳಿಗೆ ಮಗಳು ಸುಖ ಮುಖ್ಯ ಅಲ್ವ, ಕಂಡು ಕಂಡು ನನಗೆ ಹೇಗೆ ಹೆಣ್ಣು ಕೊಡ್ತಾಳೆ, ದೇವಕಿ ಆದ್ರು ನನ್ನ ಏಕೆ ಒಪ್ತಾಳೆ.

ಆಗಿನ್ನು ದೇವಕಿ ಅಂದಿದ್ದ ಮಾತು ನಿಜವಾಯಿತು, ನೀನು ಸುಖವಾಗಿ ನೋಡ್ಕೋತಿಯ ಅಂತ ನಂಬಿ ನಿನ್ನ ಮನೆಗೆ ಬರ್ತೀನಿ ಅಂದ್ಳು, ಈಗ ಅವಳ ಕಣ್ಣೆದುರೆ ಎಲ್ಲ ನಂಬಿಕೇನೊ ತೀರಿ ಹೋಯ್ತು. ಈಗ ಏನಮಾಡದು, ಹೋಗಿ  ಕಾಲು ಹಿಡಿದರು, ಬ್ಯಾಂಕಿನೋರು ಬಿಡಲ್ಲ, ಪೋಲಿಸರು ಬೇರೆ ಇದ್ದಾರೆ ಒದ್ದು ಒಳಗೆ ಹಾಕ್ತಾರೆ ಹೀಗೆ ಏನೇನೊ ಯೋಚನೆ, ಕಡೆಗೊಮ್ಮೆ ಯೋಚಿಸಿದ ಇಂತ ಜೀವನ ಬೇಕಾ ನನಗೆ.  ತಲೆ ಹಿಡಿದು ಕುಳಿತ, ಹತ್ತು ನಿಮಷದಲ್ಲಿ ತೀರ್ಮಾನ ಮಾಡಿಬಿಟ್ಟ, ಇನ್ನು ಅವರ್ಯಾರಿಗು ಮುಖ ತೋರಿಸಲ್ಲ ಎಂದು. ದನವನ್ನು ಮೇವಿಗೆ ಬಿಟ್ಟು , ದನಕ್ಕೆ ಕಟ್ಟಿದ್ದ ಹಗ್ಗ ಅಲ್ಲೆ, ಮರದ ಕೆಳಗೆ ಇತ್ತು. ಸುತ್ತಲು ನೋಡಿದ, ಎಲ್ಲಿ ಯಾವ ಮುನುಷ್ಯರ ಸುಳಿವು ಇಲ್ಲ. ತಲೆ ಎತ್ತಿ ನೋಡಿದ ಮರದ ಕೊಂಬೆ ಕಾಣುತ್ತಿತ್ತು.

ಅಲ್ಲಿ ಬಿದ್ದಿದ್ದ ಹಗ್ಗವನ್ನು ಹಿಡಿದ, ಅದಕ್ಕೆ ಕುಣಿಕೆ ಸರಿಯಾಗಿ ಹಾಕಿದ, ಮರ ಹತ್ತಿ ಮೇಲೆ ಹೋದವನೆ ಮರದ ಕೆಳಗಿನ ಕೊಂಬೆಗೆ ಹಗ್ಗದ ತುದಿ ಕಟ್ಟಿ ಎಳೆದು ನೋಡಿದ, ಕುಣಿಕೆಯನ್ನು ಕುತ್ತಿಗೆಗೆ ಸಿಕ್ಕಿಸಿ, ಬಿಗಿದುಕೊಂಡು ಕಣ್ಣುಮುಚ್ಚಿ ಕೆಳಗೆ ಹಾರಿದ. ಬರಿ ಮೂರು ನಾಲಕ್ಕು ನಿಮಿಷವಷ್ಟೆ ವೆಂಕಟನ ಜೀವ ಹಾರಿ ಹೋಗಿತ್ತು, ಅವನ ದೇಹ ಮರದ ಕೊಂಬೆಗೆ ನೇತಾಡುತ್ತಿತ್ತು.

ಸುತ್ತ ಮೇಯುತ್ತಿದ್ದ ದನಗಳು, ಹತ್ತಿರ ಓಡಿಬಂದವು, ವೆಂಕಟ ನೇತಾಡುತ್ತಿರುವದು ಕಂಡು ಅಂಬ ಅಂಬಾ ಎಂದು ಕಿರುಚಿ, ಕಡೆಗೆ ಏನು ತೋಚದೆ, ಸುಮ್ಮನೆ ನಿಂತವು.

ಮತ್ತೆ ಅರ್ಧ ಗಂಟೆ ಕಳೆಯಿತೇನೊ,  ವೆಂಕಟನ ತಾಯಿ, ದೇವಕಿ, ಮತ್ತೊಬ್ಬಾಕೆ, ಅಕ್ಕ ಇರಬೇಕು, ಎಲ್ಲರೂ ಓಡಿಬಂದರು, ಜೊತೆಗೆ ಪೋಲಿಸರು ಇಬ್ಬರು ಇದ್ದರು, ಊರಿನ ಜನ ಸುತ್ತಲು ನೆರೆದಿದ್ದರು. ಆಳುಗಳು ಸೇರಿ ಪೋಲಿಸರ ಹೇಳಿದ ನಂತರ ಹೆಣ ಕೆಳಗಿಳಿಸಿದರು.

ವೆಂಕಟನ ಅಮ್ಮ ಗೋಳಾಡುತ್ತಿದ್ದಳು, ಸುತ್ತಲಿದ್ದವರಿಗೆ ವರದಿ ಒಪ್ಪಿಸುತ್ತಿದ್ದಳು, ಅಳುತ್ತಲೆ

“ಅಯ್ಯೋ, ಇದೆಂತದಪ್ಪ, ಜಮೀನು ಹೋಯ್ತು, ಮನೆ ಹೋಯ್ತು ಅಂತ ಎದೆ ಒಡೆದು ಮಗ ನೇಣು ಹಾಕಿಕೊಂಡಿದ್ದಾನಲ್ಲ, ಮುದುಕಿ ನಾನೆ ಬದುಕಿರುವೆ. ನಮ್ಮ ಯಜಮಾನರ ತಾತನ ಕಾಲದಲ್ಲಿ ಬಂದ ಜಮೀನು,  ಅವರು ಸೈನ್ಯದಲ್ಲಿ ಕೆಲಸ ಮಾಡಿ ಜೀವ ಕೊಟ್ಟರು ಅಂತ ಮಹಾರಾಜರು ಬರೆದುಕೊಟ್ಟಿದ್ದಂತೆ, ಮನೆಗೆ ಅದೆ ಆದಾರವಾಗಿತ್ತು, ಈಗ ಸಾಲ ಮಾಡಿದ ಮೊಮ್ಮಗ ಅದನ್ನು ತೀರಿಸಲಾರದೆ, ಜೀವ ತೆತ್ತ” ಎಂದು ಗೋಳಾಡುತ್ತಿದ್ದಳು

ಅವನ ಜೀವ ಹೋದದ್ದುಕ್ಕೆ ಕಾರಣರಾಗಿದ್ದ ಪೋಲಿಸರು, ಬ್ಯಾಂಕಿನವರು ನಿರ್ಭಾವುಕರಾಗಿ ನಿಂತಿದ್ದರು. ವೆಂಕಟನ ಅಕ್ಕನು ಹೆಣದ ಪಕ್ಕ ಕುಳಿತು ಗೋಳಾಡುತ್ತಿದ್ದಳು.

ದೇವಕಿ , ತಾನು ಈಗಿನ್ನು ಮಾತನಾಡಸಿ ಹೋದ, ತನ್ನೊಡನೆ ಪ್ರೀತಿಯಿಂದ ವರ್ತಿಸಿದ ಮಾವ ಈಗಿಲ್ಲ ಎಂದು ನಂಭಿಕೆ ಬಾರದೆ ಅವನ ಹೆಣದ ಮೇಲೆ ಬಿದ್ದು ಅಳುತ್ತಿದ್ದಳು. ಪಕ್ಕದಲ್ಲಿದ ಪೋಲಿಸರು

“ಪಂಚನಾಮೆ ಆಗುತ ತನಕ ದೇಹ ಮುಟ್ಟುವ ಹಾಗಿಲ್ಲ, ಏಳಮ್ಮ ” ಎನ್ನುತ್ತ ದೇವಕಿಯನ್ನು ಎಬ್ಬಿಸುತ್ತಿದ್ದರು………………

ನನಗೆ ಅರಿವಿಲ್ಲದೆ ಕಣ್ಣಲ್ಲಿ ನೀರು ತುಂಬಿ ಕೊಂಡಿತು, ಇದೆಂತಹ ಕತೆ, ಇದೆಂತಹ ವ್ಯಥೆ. ನನ್ನ ಕಣ್ಣಲ್ಲಿ ನೀರು ನೋಡುತ್ತ ಶ್ರೀನಿವಾಸ ಗಾಭರಿಯಾದ,

“ಏಕೆ ಸ್ವಾಮಿಗಳೆ, ನಿಮ್ಮ ಕಣ್ಣಿಗೆ ಏನು ಕಾಣುತ್ತಿದೆ” ಎಂದು ಕೇಳಿದ

ನಾನು ಅವನಿಗೆ ಮೊದಲಿನಿಂದ ಎಲ್ಲ ಕತೆ ವಿವರಿಸಿದೆ, ಅವನ ಹಾಗು ಅವನ ತಾಯಿ ಬಾಗ್ಯಮ್ಮ ಇಬ್ಬರ ಕಣ್ಣಲ್ಲಿಯು ನೀರೆ.

“ಇದೇನು ಸ್ವಾಮಿ,  ಈ ನೆಲದ ಹಿಂದೆ ಬರಿ ದುಃಖವೆ ತುಂಬಿದೆ, ಸಾವಿನ ಕತೆಗಳೆ ತುಂಬಿದೆಯಲ್ಲ, ಏಕೆ ಗುರುಗಳೆ” ಎಂದ.

ನಾನದರು ಏನು ಉತ್ತರ ಹೇಳಲಿ ಪ್ರಕೃತಿಯಲ್ಲಿ ನಡೆಯುವ ಘಟನೆಗಳೆಲ್ಲ ನಿಗೂಡವೆ ಅಲ್ಲವೆ.

ಅಲ್ಲದೆ ನನಗೆ ಮತ್ತೊಂದು ಸಮಸ್ಯೆ ಕಾಡುತ್ತಿತ್ತು, ವೆಂಕಟನ ಸಾವಿನ ನಂತರ ಅವನ ಸಂಸಾರ ಅಮ್ಮ ಎಲ್ಲ ಏನಾದರು , ಎಷ್ಟು ಪ್ರಯತ್ನಿಸಿದರು ತಿಳಿಯಲು ಆಗಲೆ ಇಲ್ಲ. ಎಷ್ಟು ಹೊತ್ತು ಕಣ್ಣು ಮುಚ್ಚಿ ಕುಳಿತರು ಹೊಳೆಯುತ್ತಿಲ್ಲ …

ಶ್ರೀನಿವಾಸನು ಕುಳಿತ್ತಿದ್ದವನು ಎದ್ದನು.

“ಅಮ್ಮ ತುಂಬಾ ಹೊತ್ತಾಯಿತು ಅನ್ನಿಸುತ್ತೆ, ಆಗಲೆ ನಡುರಾತ್ರಿ ದಾಟಿ ಆಯಿತು ಅನ್ನಿಸುತ್ತೆ   ಬೇಕಿದ್ದರೆ ಹೋಗಿ ಮಲಗಮ್ಮ ” ಎನ್ನುತ್ತ , ನನ್ನ ಕಡೆ ತಿರುಗಿ

“ಸ್ವಾಮಿ, ಬರಿ ಮಾತನ್ನೆ ಆಡಿಸುತ್ತ, ನೀವು ಊಟವನ್ನು ಸರಿಯಾಗಿ ಮಾಡಲಿಲ್ಲ ಅನ್ನಿಸುತ್ತೆ, ಈಗ ರಾತ್ರಿ ಹೊತ್ತಾಯಿತು, ನಿಮಗೆ ಒಂದು ಲೋಟ ಹಾಲು ತರುವೆ, ಕುಡಿದು, ರೂಮಿನಲ್ಲಿ ಮಲಗಿಬಿಡಿ” ಎಂದನು

ಅದಕ್ಕೆ ನಾನು

“ಶ್ರೀನಿವಾಸ, ಹಾಲು ತರಬೇಡ, ನಾನು ರಾತ್ರಿ ಊಟ ಮಾಡುವುದೆ ಅಪರೂಪ, ನಿನ್ನ ಅತಿಥ್ಯ ಎಂದು ಸ್ವೀಕರಿಸಬೇಕಾಯಿತು. ಸ್ವಲ್ಪ ಜಾಸ್ತಿಯೆ ತಿಂದೆ. ಅಲ್ಲದೆ ನನಗೆ ಏಕೊ ನಿದ್ದೆ ಬರುವಂತೆ  ಕಾಣುತ್ತಿಲ್ಲ. ಇರಲಿ ನನ್ನಿಂದಾಗಿ ನಿಮ್ಮಿಬ್ಬರ ನಿದ್ದೆ ಹಾಳಾಗುವುದು ಬೇಡ, ಈಗ ನಾನು ಮಲಗಬೇಕಾದ ಜಾಗ ತೋರಿಸಿ ನೀನು ಹೋಗಿ ಮಲಗಿಬಿಡು” ಎನ್ನುತ್ತ ಎದ್ದು ನಿಂತೆ.

“ಇಲ್ಲ ಗುರುಗಳೆ, ನನಗೂ ನಿದ್ದೆ ಏನು ಬರುತ್ತಿಲ್ಲ, ಏತಕ್ಕೊ ಹಿಂದಿನ ಕತೆಗಳು ಕೇಳುತ್ತ ಮನ ವ್ಯಗ್ರವಾಗಿದೆ ಅನ್ನಿಸುತ್ತೆ, ಆದರೆ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬೇಕೆ ಬೇಕಲ್ಲವೆ ಬನ್ನಿ ನಿಮಗೆ ರೂಮು ತೋರಿಸುವೆ, ಮಲಗಿ ಬಿಡಿ, ಬೆಳಗ್ಗೆ ನೋಡೋಣ” ಎನ್ನುತ್ತ ಹೊರಟ.

ನಾನು ಅವನ ಹಿಂದೆ ಹೊರಟವನು, ರೂಮಿನಲ್ಲಿ ಮಂಚ, ಹಾಸಿಗೆ ಎಲ್ಲ ನೋಡುತ್ತ.

“ಇವೆಲ್ಲ ಬೇಕಿರಲಿಲ್ಲ, ನನಗೆ ಒಂದು ಚಾಪೆ ಸಾಕಿತ್ತು ನೆಲದ ಮೇಲೆ ಮಲಗುತ್ತಿದ್ದೆ, ಆದರೆ ಈಗ ನಿಮ್ಮ ಮನೆ ನಿಮ್ಮ ಇಚ್ಚೆಯಂತೆ” ಆಗಲಿ, ಎನ್ನುತ್ತ ಮಂಚದ ಮೇಲೆ ಕುಳಿತೆ

ಶ್ರೀನಿವಾಸನು

“ನೋಡಿ ಇಲ್ಲಿ ಪಕ್ಕದಲ್ಲಿ ಕುಡಿಯಲು ನೀರಿನ ಪಾತ್ರೆ ಲೋಟ ಇಟ್ಟಿರುವೆ ಗುರುಗಳೆ, ಮಲಗಿ” ಎನ್ನುತ್ತ ಹೊರಟ.

ಎಲ್ಲ ದೀಪಗಳು ಆರಿ, ಬರಿ ರಾತ್ರಿಯ ಕಡಿಮೆ ಬೆಳಕು ಬೀರುವ , ದೀಪ ಮಾತ್ರ ಬೆಳಗುತ್ತಿತ್ತು, ರೂಮೆಲ್ಲ ಅದೇನೊ ಕೆಂಪು ಬಣ್ಣ ತುಂಬಿದಂತೆ ಇತ್ತು. ಹಾಸಿಗೆ ಮೇಲೆ ಕಣ್ಣು ಮುಚ್ಚಿ ಕುಳಿತೆ, ಏಕೊ ಅಸೌಖ್ಯ ಅನ್ನಿಸಿತು, ಹಾಗಾಗಿ ದ್ಯಾನಕ್ಕೆ ಕುಳಿತುಕೊಳ್ಳುವ ನಂತೆ ಹಾಸಿಗೆಮೇಲೆ ಚಕ್ಕಮಟ್ಟಳ ಹಾಕಿ ಕಾಲು ಮಡಚಿ ಕುಳಿತೆ. ಕಣ್ಣು ಮುಚ್ಚಿದರೆ, ಕಿವಿಯಲ್ಲ ಎಂತದೊ ಶಬ್ದಗಳಿಂದ ತುಂಬುತ್ತಿತ್ತು………………

****

ಹೌದು ಅದು ನೂರಾರು, ಸಾವಿರಾರು ಪಕ್ಷಿಗಳು ಒಟ್ಟಿಗೆ ಚಿಲಿಪಿಲಿ ಗುಟ್ಟುವ ಶಬ್ದ. ಹಲವಾರು ಜಾತಿಯ, ಹಲವು ರೀತಿಯ ದ್ವನಿಯ ಶಬ್ದ ಕಿವಿಯನ್ನೆಲ್ಲ ತುಂಬುತ್ತಿತ್ತು. ನಡುವೆ ಅದೇನೊ ಪಕ್ಷಿಗಳ ಆಕ್ರಂದನದಂತೆ ಶಬ್ದಗಳು.ಅವುಗಳ ದ್ವನಿಯಲ್ಲಿ ಗಾಭರಿ, ಹೆದರಿಕೆ ಇನ್ನೇನೊ. ನನಗೆ ಅರ್ಥವಾಗಲಿಲ್ಲ ಇದೇನು ಈ ರೂಮಿನಲ್ಲಿ ಇಂತಹ ಶಬ್ದ, ಯಾರಾದರು ಟಿ.ವಿಯನ್ನೊ, ರೇಡಿಯೋ ಅಥವ ಇನ್ನೇನಾದರು ಹಾಕಿದ್ದಾರ ಎನ್ನುತ್ತ ತಕ್ಷಣ ಕಣ್ಣು ತೆರೆದೆ. ಎಲ್ಲ ದ್ವನಿಯು ಒಟ್ಟಿಗೆ ನಿಂತು ನಿಶ್ಯಬ್ದ ಆವರಿಸಿತು. ಹಾಲಿನಲ್ಲಿ ನಡೆಯುತ್ತಿದ್ದ ಗಡಿಯಾರದ ಟಿಕ್ ಟಿಕ್ ಹೊರತು ಬೇರೆ ಯಾವ ಶಬ್ದವು ಇಲ್ಲ.

ನನಗೆ ಆಶ್ಚರ್ಯವೆನಿಸಿತು, ಇನ್ನು ನಿದ್ದೆಯಂತು ಬಂದಿಲ್ಲ, ಅಂದರೆ ನನ್ನ ಅನುಭವ ಏನು. ಈಗ ಅರ್ಥವಾಯಿತು, ಈ ಸ್ಥಳದ ಬಗ್ಗೆ ಮತ್ತೇನೊ ನನಗೆ ಗೋಚರಿಸುತ್ತಿದೆ. ನಿದಾನವಾಗಿ ಕಣ್ಣು ಮುಚ್ಚಿ ಮನಸನ್ನು ಕೇಂದ್ರಿಕರಿಸಿದೆ. …..

ಮುಸುಕು ಬೆಳಕಿನಲ್ಲಿ ಗೋಚರಿಸುತ್ತಿತ್ತು, ಅದು ಬಾರಿ ದೊಡ್ಡ ಮರ, ಕಾಡಿನಲ್ಲಿ ಬೆಳೆಯುವಂತದ್ದು, ಗೋಣಿಯದೊ ಅಥವ ಭೂರುಗದ ಮರವೊ. ಅದರ ಬುಡದ ದಪ್ಪ ನೋಡುವಾಗಲೆ ಅನ್ನಿಸಿತು ಮರ ಕಡಿಮೆ ಎಂದರು ಮುನ್ನೂರಾ ಐವತ್ತು ವರುಷ ಅಥವ ನಾಲಕ್ಕು ನೂರು ವರುಷಗಳ ಮರವಿರಬಹುದು ಎಂದು.

ಕತ್ತೆತ್ತಿ ನೋಡಿದರೆ , ಹರಡಿ ನಿಂತ ಕೊಂಬೆಗಳು ಆಕಾಶ ಮುಟ್ಟುವೆನು ಎನ್ನುವಂತೆ ಬೆಳೆದ ಎತ್ತರ. ಸಣ್ಣ ಸಣ್ಣ ಹಣ್ಣುಗಳು, ಮರದ ಇಂಚಿಂಚು ತುಂಬಿ ನಿಂತ ಗಿಣಿ, ಪಾರಿವಾಳ, ಗೊರವಂಕ, ಗುಬ್ಬಚ್ಚಿಯಂತ ವಿವಿದ ಜಾತಿಗೆ ಸೇರಿದ ಪಕ್ಷಿಗಳು ಕೊಂಬೆ ಕೊಂಬೆಗು ಗೂಡು ಕಟ್ಟಿ ಆಶ್ರಯ ಪಡೆದಿದ್ದವು. ಅಲ್ಲದೆ ಕೊಂಬೆಗಳ ತುದಿಯಲ್ಲಿ ನೇತಾಡುತ್ತಿರುವ ಗಿಜಗನ ಗೂಡುಗಳು. ಒಟ್ಟಾರೆ ಎಷ್ಟು ಪಕ್ಷಿಯೊ, ಗೂಡುಗಳೊ ಲೆಕ್ಕ ಮಾಡಲಾಗದು ಅನ್ನುವಂತೆ ಇತ್ತು.

ಸುತ್ತಲು ನೋಡಿದರೆ , ಬಹುಷಃ ಕಾಡು ಇರಬಹುದೆ ಅನ್ನಿಸಿತು. ಅಥವ ಊರ ಹೊರಗಿನ ಬಾಗವು ಆಗಿರಬಹುದು. ಮನಸಿಗೆ ಹೊಳೆಯಿತು, ಅಲ್ಲ ಅಲ್ಲ , ಈ ಮರವು ಹಿಂದೆ ಈಗ ಮನೆ ಇರುವ ಜಾಗದಲ್ಲಿ ಇದ್ದಿದ್ದು, ಅಂದರೆ ವೆಂಕಟ ಅಲ್ಲಿ ಹೊಲಮಾಡುವ ಎಷ್ಟೋ ವರುಷಗಳ ಹಿಂದೆ, ಅಲ್ಲಿ ಇರಬಹುದಾಗಿದ್ದ ಮರವಿರಬಹುದು ಅದು. ಆದರೆ ಆ ಪಕ್ಷಿಗಳು ಅದೇಕೆ ಹಾಗೆ ಕೊರಗುತ್ತಿವೆ, ಅದ್ಯಾವ ಅಪತ್ತಿನ ನಿರೀಕ್ಷೆ ಅವುಗಳ ಮನದಲ್ಲಿದೆ ನನಗೆ ಅರ್ಥವಾಗಲಿಲ್ಲ. ಅವುಗಳ ಬಾಷೆ ಅರಿಯುವ ಶಕ್ತಿಯು ನನಗಿಲ್ಲ.

ಹಾಗೆ ನೋಡುತ್ತಿರುವಂತೆ ಸೂರ್ಯ ಉದಯಿಸಿದ, ಬೆಳಗಿನ ಕಿರಣಗಳು, ಮರದ ಮೇಲೆ ಬಿದ್ದು ಮರ ಆಕರ್ಷಕವಾಗಿ ಕಾಣುತ್ತಿತ್ತು. ಸೂರ್ಯ ಉದಯಿಸಿದಂತೆ ಎಲ್ಲ ಪಕ್ಷಿಗಳು ಎಚ್ಚೆತ್ತವು. ಕೊಂಬೆ ಕೂಂಬೆಗೆ, ಹಾರುತ ಕುಶಲ ನಡೆಸಿದವು, ಸಂಸಾರದ ಹೊಣೆಹೊತ್ತ ಪಕ್ಷಿಗಳೆಲ್ಲ ಗೂಡಿನಿಂದ ಅಗಸದತ್ತ ಹಾರಿಹೊರಟವು. ಗೂಡಿನಲ್ಲಿ ತಮಗಾಗಿ ಕಾದು ಕುಳಿತಿರುವ ಮರಿಗಳಿಗೆ ಅಹಾರ ಹೊತ್ತು ತರುವುದು ಅವುಗಳ ಕೆಲಸವಲ್ಲವೆ. ಮರದಲ್ಲಿ ಮೊಟ್ಟೆ ಇಟ್ಟು ಕಾದು ಕುಳಿತ ಹೆಣ್ಣು  ಪಕ್ಷಿಗಳಿದ್ದವು,  ಅಮ್ಮ ತರುವ ಪ್ರೀತಿಯ ತುತ್ತು ತಿನ್ನಲು ಕಾದಿದ್ದ ಪುಟ್ಟ ಪುಟ್ಟ ಮರಿಗಳಿದ್ದವು, ಇನ್ನು ಹೊರಗಿನ ಪ್ರಪಂಚಕ್ಕೆ ಬರದೆ ಮೊಟ್ಟೆಯೊಳಗೆ ಇರುವ ಪಕ್ಷಿಗಳಿದ್ದವು

ಸ್ವಲ್ಪ ಕಾಲ ಕಳೆಯಿತೇನೊ, ದೂರದಿಂದ ಯಾರೊ ನಾಲ್ವರು ಬರುತ್ತಿರುವುದು ಕಾಣಿಸಿತು. ಅವರು ಏಕೆ ಬರುತ್ತಿರುವರು ಅಂದುಕೊಳ್ಳುವದರಲ್ಲಿ, ಮರದ ಕೆಳಗೆ ನಿಂತು ತಲೆಯಿತ್ತಿ ನೋಡಿದರು, ಅವರವರಲ್ಲೆ ಮಾತು

“ಒಳ್ಳೆ ಐನಾತಿ ಮರ ಕಣ್ಲ, ಇವತ್ತು ಕಡಿದು ಮುಗಿಸಿಬಿಡಬೇಕು, ಕಾಲ ಕಳೆಯೋ ಹಾಗಿಲ್ಲ ಇನ್ನು ಒಡೆಯರ ಕೈಲಿ ಅನ್ನಿಸಿಕೊಳ್ಳಬೇಕಾಗುತ್ತೆ ಅಷ್ಟೆ,”

ತಮ್ಮ ಮೇಲಂಗಿ ತೆಗೆದರು, ಕೈಯಲ್ಲಿದ್ದ ಕೊಡಲಿಯನ್ನೊಮ್ಮೆ ಸರಿ ಪಡಿಸಿಕೊಂಡು ತಮ್ಮ ಕೆಲಸ ಪ್ರಾರಂಬಿಸಿದರು.

ನನಗೆ ಭಯ ಹಾಗು ದುಃಖ ತುಂಬಿತು ಎಂತ ಮರುಕವಿಲ್ಲದ ಕೆಲಸಕ್ಕೆ ಕೈ ಹಚ್ಚಿದ್ದಾರೆ, ಇವರನ್ನು ತಡೆಯಬೇಕು ಅನ್ನಿಸಿ ಕೂಗಿದೆ

“ಬೇಡ ಆ ಮರ ಕಡಿಯಬೇಡಿ ಸಾವಿರಾರು ಪಕ್ಷಿಗಳಿಗೆ ಆಶ್ರಯವಾಗಿದೆ, ಅವುಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ”

ಆದರೆ ನಂತರ ಅರಿವಾಯಿತು, ನನ್ನ ಕೂಗು ಅವರನ್ನು ಮುಟ್ಟಲಾರದು, ಇದು ಹಿಂದೆ ಯಾವುದೊ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ನಡೆದ ಘಟನೆ ನನಗೆ ಗೋಚರಿಸುತ್ತಿದೆ, ನಾನು ಅವರನ್ನು ತಡೆಯಲಾರೆ

ಇಷ್ಟು ದೈತ್ಯ ಮರವನ್ನು ಮನುಷ್ಯ ಕೈಯಲ್ಲಿ ಕಡಿಯುವದುಂಟೆ ಅನ್ನಿಸಿತು ನನಗೆ, ಮರದ ಮೇಲಿದ್ದ ಪಕ್ಷಿಗಳಲ್ಲಿ ಕೆಲವು ಇವರು ಏನು ಮಾಡುತ್ತಿರುವರು ಎನ್ನುವದನ್ನು ಅರಿಯದೆ ಮರದ ಕೊಂಬೆಗಳಲ್ಲಿ ಹಾರಾಟ ಮಾಡುತ್ತಿದ್ದವು, ಗಿಜಗಿನ ಗೂಡಿನ ಸಂದಿಯಿಂದ ಕೆಲವು ಪುಟ್ಟ ಪುಟ್ಟ ಮರಿಗಳು ಭಯದಿಂದ ಹೊರಗೆ ಇಣುಕುತ್ತಿದ್ದವು.

ಮನುಷ್ಯ ಪ್ರಕೃತಿಯಲ್ಲಿ ಶಕ್ತಿ ಹೀನ ಅನ್ನುವ ನನ್ನ ನಿರೀಕ್ಷೆ ಸುಳ್ಳಾಯಿತು, ನೋಡು ನೋಡುತ್ತಿರುವಂತೆ, ಸೂರ್ಯ ಇನ್ನು ನಡುನೆತ್ತಿ ದಾಟುತ್ತಿರುವಂತೆ ಮರ ತನ್ನ ಹೋರಾಟ ಬಿಟ್ಟುಕೊಟ್ಟಂತೆ ಅನ್ನಿಸಿತು,  ಶಕ್ತಿ ಹೀನವಾಯಿತೇನೊ, ಬಾರಿ ಶಬ್ದದೊಂದಿಗೆ ತನ್ನೆಲ್ಲ  ಕೊಂಬೆಗಳನ್ನು ಒಂದಕ್ಕೊಂದು ಉಜ್ಜಿ ಶಬ್ದ ಮಾಡುತ್ತ, ಮರದ ಕೊಂಬೆಗಳಲ್ಲಿರುವ ಪಕ್ಷಿಗಳೆಲ್ಲ ಹೆದರಿ ಕೂಗುತ್ತಿರುವಂತೆ ಅಷ್ಟು ದೊಡ್ದ ಮರ ನೆಲಕ್ಕೆ ಒರಗಿತು. ನಾಲ್ವರು ಮನುಷ್ಯರು ತೃಪ್ತಿಯಿಂದ ಬಿದ್ದ ಮರದ ಕಡೆ ನೋಡುತ್ತ,

“ಸಂಜೆ ಆಗುತ್ತೆ ಅಂತಿದ್ದೆ, ಅಂತು ಬೇಗ್ನೆ ಕೆಲಸ ಮೂಗಿತು, ನಡಿ ನಾಳೆ ಬಂದು ಒಪ್ಪ ಮಾಡುವ, ನಮಗು ಬೇಕಾದಷ್ಟು ಸೌದೆ ಸಿಗ್ತದೆ, ಒಡೆಯರಿಗಂತು ಹಬ್ಬ ದಿಮ್ಮಿಗಳು, ಹಲಗೆ , ತೊಲೆ ಏನೆಲ್ಲ ಆಗುತ್ತೋ ಅವರಿಗೆ ಗೊತ್ತು” ಎನ್ನುತ್ತ ಒಬ್ಬರಿಗೊಬ್ಬರು ತಮಾಷಿ ಮಾಡುತ್ತ ಹೊರಟರು.

ನನ್ನ ದೃಷ್ಟಿಗೆ ಮರವೊಂದು , ಸತ್ತು ಬಿದ್ದಿದ್ದ ಬಾರಿ ಜೀವಿಯಂತೆ ಕಾಣಿಸಿತು, ಅದರ ಸುತ್ತಲು ನೂರಾರು ಪಕ್ಷಿಗಳು ಸುತ್ತು ಬರುತ್ತಿದ್ದವು, ಅವುಗಳು ಅಸಹಾಯಕವಾಗಿದ್ದು ಏನು ಮಾಡಲು ತೋಚದೆ, ‘ಚೀವ್ ಚೀವ್ ” ಎಂದು ಗೋಳಾಡುತ್ತಿದ್ದವು. ಅವುಗಳ ದ್ವನಿಯಲ್ಲಿ ದುಃಖ ಹತಾಷೆ ಭಯ ದಿಘ್ಭ್ರಮೆ ತುಂಬಿದೆ ಎಂದು ನನಗೆ ಅನ್ನಿಸಲು ಶುರುವಾಯಿತು, ನೋಡುತ್ತಿರುವೆ, ಸಾವಿರಾರು ಪಕ್ಷಿಗಳ ಮೊಟ್ಟೆ ನೆಲಕ್ಕೆ ಬಿದ್ದು, ಒಡೆದು ಹೋಗಿದೆ, ಅವುಗಳಿಗೆ ಕೆಂಪಿರುವೆ ಮುತ್ತಿದೆ. ಆಗಿನ್ನು ಕಣ್ಣು ಬಿಡುತ್ತಿದ್ದ ಪುಟ್ಟ ಪುಟ್ಟ ಮರಿಗಳು, ನೆಲಕ್ಕೆ ಬಿದ್ದು ಹಾರಲು ಆಗದೆ ಮುಂದೆ ತೆವಳಲು ಆಗದೆ ಅರ್ಧ ಜೀವವಾದರೆ ಕೆಂಪಿರುವೆಗಳು ಅವುಗಳನ್ನು ಮುತ್ತಿ ತಿನ್ನುತ್ತಿವೆ. ಕೊಂಬೆಗಳ ಕೆಳಗೆ ಸಿಕ್ಕಿಬಿದ್ದು ಸಾವನ್ನಪ್ಪಿರುವ ಪಕ್ಷಿಗಳು  ಎಷ್ಟೋ. ಎಲ್ಲವನ್ನು ನೋಡುತ್ತ     ನೋಡುತ್ತ ಅವುಗಳ ಚೀರಾಟ ಕೇಳುತ್ತ ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ತುಂಬುತ್ತಿದೆ.

ಸಂಜೆಯಾಗುತ್ತ ಬಂದಿತು, ದೂರ ದೂರ ಹೋಗಿದ್ದ ಪಕ್ಷಿಗಳೆಲ್ಲ ತಮ್ಮ ನಿವಾಸ ಹುಡುಕುತ್ತ ಬಂದು  ಗಾಭರಿಗೊಂಡಿವೆ, ಅವುಗಳ ಕೂಗು ಸುತ್ತಲ ಕಾಡನ್ನೆಲ್ಲ ತುಂಬುತ್ತಿದೆ , ನನ್ನ ಕಣ್ಣಿಗೆ ಒಂದು ಪಕ್ಷಿಯ ಗೋಳಾಟ ಕಂಡಿತು, ಏನು ಎಂದು ನೋಡಿದೆ, ಕೆಳಗೆ ಅದರ ಮರಿ ಇರಬೇಕು, ಅದು ಮರ ಬೀಳುವಾಗ ಹೇಗೆ ಕೆಳಗೆ ಬಿತ್ತೊ ಗೊತ್ತಿಲ್ಲ, ಮುರಿದ ಕೊಂಬೆಯ ಚೂಪಾದ ತುದಿ, ಅದರ ಎದೆಯ ಬಾಗದಿಂದ ನುಗ್ಗಿ , ಬೆನ್ನಿನ ಮೇಲ್ಬಾಗದಿಂದ ಹೊರಬಂದಿದೆ, ನನಗೆ ನೋಡುತ್ತಿರುವಂತೆ , ಗೃಹಪ್ರವೇಶದ ದಿನವೆ ರಾಮಕೃಷ್ಣ ಮಾಸ್ತರರ ಮಗನ ಸಾವು ನೆನಪಿಗೆ ಬಂದು ಕಣ್ಣಮುಂದೆ ನಿಂತಿತು, ಆ ಮಗುವು ಹಾಗೆ ಕಣ್ಣಿಣದ ಸಲಾಕೆ ಎದೆಯಿಂದ ಬೆನ್ನಿನವರೆಗು ಚುಚ್ಚಿ ಪ್ರಾಣ ಹೋಗಿತ್ತು.

ನನಗೆ ಗೊತ್ತಿಲ್ಲದೆ ಅಳು ಪ್ರಾರಂಬವಾಯಿತು ಬಿಕ್ಕಿ ಬಿಕ್ಕಿ ಅಳುತ್ತಿದೆ …………

“ಗುರುಗಳೆ ಏನಾಯಿತು, ಏಕೆ ”  ಶ್ರೀನಿವಾಸನ ದ್ವನಿ ನನ್ನನ್ನು ಎಚ್ಚರಿಸಿತು,

ನನಗೆ ಗೊತ್ತಿಲ್ಲದೆ ನಾನು ಅಳುತ್ತಿರುವೆ, ನನ್ನ ಕಣ್ಣಲ್ಲಿ ನೀರು ತುಂಬಿ ಹರಿಯುತ್ತಿತ್ತು, ಆದರೆ ಅವನಿಗೆ ಏನು ಹೇಳಲಿ, ಕುಳಿತುಕೋ ಎಂಬಂತೆ ಸನ್ನೆ ಮಾಡಿದೆ. ಹಾಗೆ ದುಃಖದ ಭಾವವನ್ನು ನನ್ನೊಳಗೆ ನುಂಗಿದೆ. ನನ್ನ ಮನಸಿಗೆ ಈಗ ಏನೇನೊ ಭಾವಗಳು ತುಂಬಿಬರುತ್ತಿದ್ದವು. ಪ್ರಕೃತಿ ಮರ ಜಲ ನದಿ ಇವೆಲ್ಲ ದೇವರ ಸೃಷ್ಟಿ , ಮನುಷ್ಯ ಇವುಗಳನ್ನೆಲ್ಲ ನಾಶ ಮಾಡುತ್ತ ಪಾಪಕ್ಕೆಒಳಗಾಗುತ್ತಿದ್ದಾನೆ,  ಇಂತಹ ಪಾಪ ಮಾಡುತ್ತ, ಮತ್ತೆ ದೇವರ ಎದುರಿಗೆ ನಿಂತು ಪೂಜೆ ಸಲ್ಲಿಸುತ್ತಿದ್ದರೆ ಏನು ಲಾಭ.

ನನಗೇಕೊ ಆ ಪಕ್ಷಿಗಳ ಚೀರಾಟದ ದ್ವನಿಗೆ ಕಿವಿ ತುಂಬಿತ್ತು. ಅವುಗಳ ಚೀರಾಟದ ಚೀವ್ ಚೀವ್ ಬರಿ ದುಃಖದ ಕೂಗಾಗಿ ಕೇಳಲಿಲ್ಲ, ಅವುಗಳು ಮನುಜನನ್ನು ಕೋಪದಿಂದ ಶಪಿಸುತ್ತಿರುವಂತೆ ಅನ್ನಿಸಿತು. ಮಾಸ್ತರರ ಮಗನು ಪಕ್ಷಿಯ ಮರಿಯ ರೀತಿಯಲ್ಲೆ ಏಕೆ ಸಾಯಬೇಕಿತ್ತು.  ಅವನಾವನೊ ವೆಂಕಟ ಅದೇಕೊ ಮರಕ್ಕೆ ನೇಣು ಹಾಕಿಕೊಂಡು ಸಾಯಬೇಕಿತ್ತು?. ನಿಜ ಮನುಷ್ಯ ಭೂಮಿಯಲ್ಲಿ ಅನುಭವಿಸುತ್ತಿರುವ ನೋವು ದುಃಖ ಗಳಿಗೆಲ್ಲ ಅವನ ಪ್ರಕೃತಿಯ ಮೇಲಿನ ಅತ್ಯಾಚಾರವೆ ಕಾರಣ. ಪ್ರಕೃತಿಯ ಉಳಿದ ಜೀವಿಗಳು ಮನುಷ್ಯನಿಗೆ ಹಾಕುತ್ತಿರುವ ಶಾಪವೆ ಕಾರಣ ಅನ್ನಿಸಿತು.

ಕತ್ತಲಲ್ಲಿ ನನ್ನ ಕಣ್ಣೀರು ಎದುರು ಕುಳಿತ ಶ್ರೀನಿವಾಸನಿಗೆ ಕಾಣಲಿಲ್ಲ. ಆದರು ನಾನು ಅಳುತ್ತಿರುವೆ ಎಂದು ಅವನಿಗೆ ತಿಳಿಯುತ್ತಿತ್ತು.

ಅವನು ಮತ್ತೆ ಕೇಳಿದ ,”ಗುರುಗಳೆ ನೀವು ಏಕೆ ಅಳುತ್ತಿದ್ದೀರಿ, ಮತ್ತೇನಾದರು ತಮ್ಮ ಮನಸಿಗೆ ಗೋಚರಿಸಿತ, ನನಗೂ ಹೇಳಬಹುದ ” ಎಂದೆಲ್ಲ ಕೇಳುತ್ತಿದ್ದ

ನಾನು ನಿಧಾನವಾಗಿ “ಹೌದು ಶ್ರೀನಿವಾಸ ನೀನು ಇದನ್ನು ಕೇಳಲೆ ಬೇಕು, ನಾನು ನೋಡಿದ ವ್ಯಥೆಯ ಕತೆ” ಎನ್ನುತ್ತ ನನ್ನ ಕಣ್ಣಿಗೆ ಕಂಡ ಕತೆಯನ್ನು ಅವನಿಗೆ ವರ್ಣಿಸಿದೆ, ಅವನ ಕಣ್ಣಲ್ಲು ನೀರು ಬರುತ್ತಿತ್ತು. ಅವನಿಗಾಗಲಿ ನನಗಾಗಲಿ ಏನು ಮಾತನಾಡಬೇಕೆಂದು ತೋಚಲಿಲ್ಲ. ನಾನೆ ನುಡಿದೆ , ಆಗಲೆ ಬೆಳಗಾಗುತ್ತ ಬಂದಿತು ಎನ್ನಿಸುತ್ತಿದೆ , ನೀನು ಸ್ವಲ್ಪ ಕಾಲ ಹೋಗಿ ಮಲಗು, ಅವನು ನಿಧಾನವಾಗಿ ಎದ್ದು ಹೋದ

ಶ್ರೀನಿವಾಸ ಹೋದ ನಂತರ ನನ್ನ ಮನ ದುಗುಡದಿಂದ ತುಂಬಿತ್ತು, ಹಾಸಿಗೆ ಮೇಲೆ ನಿದ್ದೆ ಮಾಡಲಾರೆ ಅನ್ನಿಸಿತು. ಕೆಳಗೆ ಇಳಿದೆ, ಮಂಚದಮೇಲಿದ್ದ ರಗ್ಗನ್ನು ತೆಗೆದು ಅಗಲಕ್ಕೆ ನೆಲದ ಮೇಲೆ ಹಾಸಿದೆ. ದಿಂಬನ್ನು ಇಟ್ಟು ನೆಲದ ಮೇಲೆ ಮಲಗಿದೆ. ಅಂಗತಾ ಮಲಗಿ ಕಣ್ಣು ಮುಚ್ಚಿದೆ.

ಕಣ್ಣಿಗೆ ಕಂಡ ಪಕ್ಷಿಗಳ ಆಕ್ರಂದನದ ಘಟನೆಯ ಬಗ್ಗೆ ಯೋಚಿಸುತ್ತಿದೆ.

ಇದು ಹೇಗೆ ಆಗುತ್ತಿದೆ, ಗುರುಗಳು ನನಗೆ ದಯಪಾಲಿಸಿರುವ ವರದ ಮೇಲೆ ನನಗೆ ಯಾವುದೆ ಹಿಡಿತ ಇರುವಂತೆ ಕಾಣಲಿಲ್ಲ. ಅದು ತನಗೆ ತಾನೆ ನನಗೆ ಇತಿಹಾಸದ ಘಟನೆಗಳನ್ನು ತೋರಿಸುತ್ತಿದೆ. ನನಗೆ ಗುರುಗಳು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ನನಗೆ ಅರ್ಥವಾಗಲಿಲ್ಲ. ಪ್ರಕೃತಿಯು ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳುವುದು ಎಂದೆ, ಅಥವ ಮರ , ಜಲ, ಗಾಳಿಯನ್ನು ನಾಶಗೊಳಿಸುತ್ತಿರುವ ನಮ್ಮ ನಡತೆಯಿಂದ ಅವುಗಳು ಹಾಕುವ ಶಾಪ ನಮ್ಮನ್ನು ಕಾಡುತ್ತಿದೆ ಎಂದೆ. ಅದ್ಯಾವುದು ಅಲ್ಲವೇನೊ.

ಗುರುಗಳು ಮುಖ ಕಂಡಂತೆ ಆಯಿತು. ಒಮ್ಮೆಲೆ ಹೊಳೆದುಬಿಟ್ಟಿತು, ಇಲ್ಲ ಅದಲ್ಲ, ನನಗೆ ಗುರುಗಳು ಕೊಟ್ಟಿರುವ ಸಿದ್ದಿಶಕ್ತಿಯ ಸ್ವರೂಪವೆ ಬೇರೆ, ಅದಕ್ಕು ಮನುಷ್ಯನ ಇತಿಹಾಸಕ್ಕು ಯಾವುದೆ ಸಂಭಂದವಿಲ್ಲ. ನಾನು ಯಾವುದೆ ಮನುಷ್ಯನ ಇತಿಹಾಸವನ್ನು ತಿಳಿಯಲಾರೆ. ಆದರೆ ನಾನು ಯಾವುದಾದರು ಮನೆ ಅಥವ ದೇವಾಲಯ ಅಥವ ಅಂತ ಸ್ಥಳದಲ್ಲಿದ್ದಾಗ ಆ ಜಾಗದಲ್ಲಿ  ಹಿಂದೆ ಘಟಿಸಿರುವ ಘಟನೆಗಳನ್ನು ನಾನು ಅರಿಯಬಹುದು. ಆ ಸ್ಥಳದ ಯಾವುದೊ ವೈಬ್ರೇಷನ್ ಅಂದರೆ ಕಂಪನ ಶಕ್ತಿ ನನ್ನ ಮನಸಿನ ಕಂಪನದೊಂದಿಗೆ ಸರಿಸಮಾನವಾಗಿ ಸೇರಿ ಹೋದಾಗ ಅಲ್ಲಿಯ ಕತೆ ದೃಷ್ಯ ರೂಪದಲ್ಲಿ ನನಗೆ ಕಾಣುತ್ತದೆ ಹೊರತಾಗಿ ಅಲ್ಲಿರುವ ಮನುಷ್ಯರ ಇತಿಹಾಸ ನಾನು ಅರಿಯಲಾರೆ, ಅದಕ್ಕಾಗಿಯೆ ನನಗೆ ಮನೆಯನ್ನು ಮಾರಿ ಹೋದ ಆ ರಾಮಕೃಷ್ಣ ಮಾಸ್ತರರು ಮುಂದೆ ಏನಾದರು ಎಂದು ತಿಳಿಯಲಾಗುತ್ತಿಲ್ಲ. ಹಾಗೆ ಹೊಲಮಾಡಿಕೊಂಡಿದ್ದ ವೆಂಕಟ ಆತ್ಮಹತ್ಯೆ ಮಾಡಿಕೊಂಡ ನಂತರ ಅವನ ಸಂಸಾರ ಅವರ ಅಮ್ಮ ದೇವಕಿ ಎಲ್ಲ ಏನಾದರು ಗೊತ್ತಾಗುತ್ತಿಲ್ಲ. ರಾಜರಿಂದ ಹೊಲವನ್ನು ಕಾಣಿಕೆ ಪಡೆದ ವೆಂಕಟನ ತಾತನೊ ಮುತ್ತಾತನೊ ಯಾರು ಅದು ಸಹ ನನಗೆ ಗೊತ್ತಿಲ್ಲ, ಈ ನೆಲದೊಂದಿಗೆ ಸಂಬಂದವಿಲ್ಲದ ಯಾವುದೆ ಘಟನೆಯನ್ನು ನಾನು ನೋಡಲಾರೆ, ತಿಳಿಯಲಾರೆ. ಯಾವುದೆ ಮನುಷ್ಯನ ಚರಿತ್ರೆಯನ್ನು ನಾನು ಅರಿಯಲಾರೆ.

ಎದುರಿಗೆ ಗುರುಗಳ ಮುಖ ಕಾಣುತ್ತಿತ್ತು, ನಾನು ಕೈ ಮುಗಿದು ಹೇಳಿದೆ

“ಪೂಜ್ಯರೆ ನನಗೆ ಈ ಸಿದ್ದಿಯನ್ನು ಏಕೆ ದಯಪಾಲಿಸಿದಿರಿ ನನಗೆ ತಿಳಿಯುತ್ತಿಲ್ಲ. ಹನ್ನೆರಡು ವರುಷಕ್ಕಿಂತ ಹೆಚ್ಚು ಕಾಲ ಅದನ್ನು ನಾನು ಉಪಯೋಗಿಸಿಯೆ ಇರಲಿಲ್ಲ, ಆದರೆ ಈ ಮನೆಗೆ ಬಂದು ಅನಿರೀಕ್ಷಿತವಾಗಿ ನಿಮ್ಮ ವರದ ಪ್ರಭಾವ ಕಂಡೆ. ಆದರೆ ನನಗೆ ಇದರ ಸದುಪಯೋಗ ಹೇಗೆ ಮಾಡುವದೆಂದು ತಿಳಿಯುತ್ತಿಲ್ಲ. ಈ ಪ್ರಪಂಚಕ್ಕೆ ಉಪಯೋಗವಾಗುವ ರೀತಿ ಈ ಸಿದ್ದಿಯನ್ನು ಉಪಯೋಗಿಸಲು ಕಲಿತ ನಂತರ ಇದರ ಸಹಾಯ ಪಡೆಯುವೆ, ಗುರುಗಳೆ ನನಗೆ ಆ ಸದುಪಯೋಗದ ದಾರಿ ತೋರಿಸಿ ಅಲ್ಲಿಯವರೆಗು ಈ ಸಿದ್ದಿಯನ್ನು ನಾನು ಉಪಯೋಗಿಸಲಾರೆ” ಎಂದು ಕೊಂಡೆ.  ಸ್ವಲ್ಪ ಜಂಪು ಹತ್ತಿದಂತಾಯ್ತು.

ಒಂದು ಅಥವ ಎರಡು ಘಂಟೆ ನಿದ್ದೆ ಮಾಡಿದೆನೇನೊ, ಯಾರೊ ರೂಮಿನ ಬಾಗಿಲಲ್ಲಿ ನಿಂತಂತೆ ಅನ್ನಿಸಿತು. ತಕ್ಷಣ ಎದ್ದು ಕುಳಿತೆ. ದೃಷ್ಟಿ ಇಟ್ಟು ನೋಡಿದರೆ ಶ್ರೀನಿವಾಸ ನಿಂತಿದ್ದು ಕಾಣಿಸಿತು.

“ಏಕೆ ನಿದ್ದೆ ಬರಲಿಲ್ಲವೆ” ಎಂದು ಕೇಳಿದೆ

“ಇಲ್ಲ ಗುರುಗಳೆ, ಏಕೆ ಎದ್ದಿರಿ, ಮಂಚದ ಮೇಲಿಂದ ಇಳಿದು ಕೆಳಗೆ ಮಲಗಿಬಿಟ್ಟಿದ್ದೀರಿ ” ಎಂದ ಆಶ್ಚರ್ಯದಿಂದ

“ಇಲ್ಲ ನನ್ನ ಅಭ್ಯಾಸ ಅದು, ರಾತ್ರಿ ಯಾವಗಲೆ ಮಲಗಲಿ ಬೆಳಗ್ಗೆ ಐದಕ್ಕೆ ಎಚ್ಚರವಾಗಿಬಿಡುತ್ತದೆ. ಶ್ರೀನಿವಾಸ, ನನ್ನ ನಿದ್ದೆ ಆಯಿತು ಅನ್ನಿಸುತ್ತೆ. ಇನ್ನು ಸ್ನಾನಕ್ಕೆ ಏನು ಅನುಕೂಲವಿದೆ, ನೀರಿಗೆ ತೊಂದರೆ ಇಲ್ಲವಲ್ಲ ” ಎಂದೆ

“ನೀರಿಗೇನು ಬರವಿಲ್ಲ ಗುರುಗಳೆ, ನಾನು ಅದಕ್ಕೆ ಎದ್ದೆ, ನೀರು ಒಲೆಗೆ ಎರಡು ಸೌದೆ ಹಾಕಿಬಿಡುವೆ, ಬಿಸಿಯಾಗಿ ಕಾಯುತ್ತದೆ, ನಂತರ ಸ್ನಾನ ಮಾಡುವಿರಂತೆ, ಅಲ್ಲಿಯವರೆಗು ಒಂದು ಬಿಸಿ ಬಿಸಿ ಕಾಫಿ ಮಾಡಲೆ ” ಎಂದ

“ಬೇಡ, ನನಗೆ ಬಿಸಿ ನೀರಿನ ಅಭ್ಯಾಸವಿಲ್ಲ, ಯಾವ ಕಾಲಕ್ಕು ತಣ್ಣೀರೆ, ಹಾಗಿದ್ದರೆ ನಾನು ಸ್ನಾನ ಮುಗಿಸಿಬಿಡುವೆ” ಎನ್ನುತ್ತ ಎದ್ದೆ, ನನ್ನ ಹಿಂದೆ ಬಂದ ಶ್ರೀನಿವಾಸ ಸ್ನಾನದ ಮನೆಯನ್ನು ತೋರಿಸಿದ. ಅವನು ಹೊರಹೋದ ನಂತರ, ನಾನು ಎಲ್ಲ ಕರ್ಮಗಳನ್ನು ಮುಗಿಸಿ ಸ್ನಾನ ಮುಗಿಸಿ ಹೊರಬರುವಾಗ ಅರ್ಧ ಒಂದು ತಾಸು ಕಳೆದಿತ್ತೇನೊ.

ಒಳಗೆ ಅಡುಗೆ ಮನೆಯಲ್ಲಿ ಶ್ರೀನಿವಾಸ ಅವನ ಪತ್ನಿ ಮಾತನಾಡುವುದು ಕೇಳಿಸಿತು

“ಅವರು ಬಂದರು ಅನ್ನಿಸುತ್ತೆ, ಒಂದು ಕಾಫಿ ಕೊಡು, ನಂತರ ಎಂಟು ಗಂಟೆ ಹೊತ್ತಿಗೆ ಇಡ್ಲಿನೊ ಏನಾದರು ಒಂದು ತಿಂಡಿ ಮಾಡಿಬಿಡು ಅವರು ಒಪ್ಪಿದರೆ, ಒಂದು ನಾಲಕ್ಕು ಜನರನ್ನು ಕರೆದು ಪಾದ ತೊಳೆದು ಬಿಡೋಣ, ಮಧ್ಯಾನ್ಹದ ಊಟಕ್ಕೆ ಏನಾದರು ಸಿಹಿ ಅಡುಗೆ ಮಾಡು”

ನನಗೆ ಅರಿವಿಲ್ಲದೆ ನಗು ನನ್ನ ಮನದಲ್ಲಿ ತುಂಬಿತು, ನಾನು ಮೃದುವಾಗಿ ಕೂಗಿದೆ

“ಶ್ರೀನಿವಾಸ ಇಲ್ಲಿ ಬಾಪ್ಪ” , ಅವನು ಹೊರಬಂದ

” ಇಲ್ಲಿ ನೋಡು, ನಾನು ಬಂದ ಕೆಲಸವಾಯಿತು, ಇನ್ನು ಹೊರಡಲೆ ” ಎಂದೆ . ಅವನು ಗಾಭರಿ ಆಶ್ಚರ್ಯದಿಂದ,

“ಅದೇಕೆ ಗುರುಗಳೆ, ಅಷ್ಟು  ಆತುರ, ತಿಂಡಿ , ಮದ್ಯಾನ್ಹದ ಊಟ ಮುಗಿಸಿ ಹೊರಟರಾಯಿತು, ನಿಮ್ಮ ಜೊತೆ ಸ್ವಲ್ಪ ಕಾಲ ಕಳೆಯುವ ಅವಕಾಶ ಮಾಡಿಕೊಡಿ” ಎಂದ ವಿನೀತನಾಗಿ

“ನಿನ್ನೆ ಸಂಜೆಯಿಂದ ನಿನ್ನ ಜೊತೆಯೆ ಇದ್ದೆನಲ್ಲ ಶ್ರೀನಿವಾಸ, ಅಲ್ಲದೆ ನಾನು ಬರುವಾಗ ನೀನು ಹೇಳಿದ್ದೆ , ಈದಿನದ ರಾತ್ರಿ ಊಟ ಹಾಗು ರಾತ್ರಿ ಕಳೆಯಲು ನಮ್ಮ ಮನೆಗೆ ಬನ್ನಿ ಎಂದು ಅಲ್ಲವೆ ನೀನು ಕರೆದಿದ್ದು, ನಿನ್ನ ಜೊತೆ ಒಪ್ಪಿಕೊಂಡಂತೆ ಬಂದಿರುವೆ, ಅದೆ ರೀತಿ ರಾತ್ರಿ ಇಲ್ಲಿ ಕಳೆದಿರುವೆ, ಅದಕ್ಕಿಂತ ಹೆಚ್ಚು ಕಾಲ ನಾವು ಸನ್ಯಾಸಿಗಳು ಒಂದು ಕಡೆ ನಿಲ್ಲ ಬಾರದು. ನಾನೀಗ ಹೊರಡುವೆ ನನ್ನನ್ನು ತಡೆಯಬೇಡ” ಎಂದೆ. ಅವನು ಉತ್ತರ ತೋಚದೆ ನಿಂತ. ಒಳಗಿನಿಂದ ಅವನ ಪತ್ನಿ ಕಾಫಿ ಹಿಡಿದು ತಂದಳು

“ಅಮ್ಮ, ನಾನು ಬೆಳಗಿನ ಕಾಫಿ ಅಂತ ಏನು ಕುಡಿಯುವುದಿಲ್ಲ, ಆದರೆ ನೀನು ಮಾಡಿ ಅಡುಗೆ ಮನೆಯಿಂದ ಹಿಡಿದು ತಂದಿರುವೆ, ಬೇಡ ಅಂತ ಹಿಂದೆ ಕಳಿಸಿದರೆ, ನಿನ್ನ ಮನ ನೊಂದೀತು, ಅದಕ್ಕಾಗಿ ಕೊಡು ಕುಡಿಯುವೆ, ಮತ್ತೆ ನನಗಾಗಿ ಏನು ಮಾಡಲು ಹೋಗಬೇಡಿ” ಎನ್ನುತ್ತ ಕಾಫಿ ತೆಗೆದುಕೊಂಡು ಅಲ್ಲೆ ಇದ್ದ ಕುರ್ಚಿಯ ಮೇಲೆ ಕುಳಿತೆ.

ಮನ ಅದೇನೊ ಪ್ರಪುಲ್ಲವಾಗಿತ್ತು, ಸಂತಸದಿಂದಿತ್ತು, ರಾತ್ರಿಯ ದುಗುಡ ದುಃಖಗಳೆಲ್ಲ ನನ್ನನ್ನು ಬಿಟ್ಟು ಹೋಗಿದ್ದವು.

“ಶ್ರೀನಿವಾಸ ಮನೆಯ ಮುಂದೆ ಸಾಕಷ್ಟು ಜಾಗ ಇದೆ ಅಲ್ಲವೆ?” ಅವನು ನನ್ನ ಪ್ರಶ್ನೆ ಅರ್ಥವಾಗದೆ,

“ಹೌದು ಸ್ವಾಮಿ ಸಾಕಷ್ಟು ಸ್ಥಳವಿದೆ, ಸೈಟು ಪೂರ್ತಿ ಮನೆ ಕಟ್ಟಿಸಿಲ್ಲ” ಎಂದ

“ಆಯಿತು, ಮನೆಯ ಹೊರಗೆ, ಸೈಟಿನ ಎರಡು ಮೂಲೆಗಳಲ್ಲಿ ಯಾವುದಾದರು ದೊಡ್ಡದಾಗಿ ಬೆಳೆಯುವ ಹಣ್ಣಿನ ಮರವನ್ನು ಹಾಕಿಸು, ಆದರೆ ಆ ಮರ ಪಕ್ಷಿಗಳಿಗೆ ಆಶ್ರಯ ಕೊಡುವಂತ ಮರವಾಗಿರಬೇಕು, ಯಾವುದೊ ಕೆಲಸಕ್ಕೆ ಬಾರದ ಮರವಾಗಬಾರದು, ಒಪ್ಪಿಗೆಯೆ ” ಎಂದೆ

ಶ್ರೀನಿವಾಸನು ತುಸು ಅಚ್ಚರಿಯಿಂದ

“ಆಗಲಿ ಗುರುಗಳೆ ನಿಮ್ಮ ಮಾತು ಪಾಲಿಸುವೆ, ಮನೆಯ ಮುಂದೆ ಎರಡು ಮಾವಿನ ಮರ ಹಾಕಿಸುವೆ, ಮುಂದೆ ನೆರಳು ಇರುತ್ತದಲ್ಲವೆ” ಎಂದ.

“ಸರಿ ಆಯಿತು, ಎಲ್ಲವು ಸರಿ ಇದೆ ಯೋಚಿಸಬೇಡ, ನಿನ್ನ ಮಗನು ಅಷ್ಟೆ,  ಒಳ್ಳೆಯ ಸ್ವಭಾವ ಆದರೆ ವಯಸಿನ ಪ್ರಭಾವ ಅಷ್ಟೆ, ಹಾಗಾಗಿ ಮಾತು ಅವನ ಹಿಡಿತದಲ್ಲಿಲ್ಲ, ಮುಂದೆ ಎಲ್ಲವು ಒಳ್ಳೆಯದೆ ಆಗುತ್ತೆ, ಅವನು ನಿನ್ನನ್ನು , ಅವರ ಅಮ್ಮ, ಅಜ್ಜಿಯನ್ನು ಚೆನ್ನಾಗಿಯೆ ನೋಡಿಕೊಳ್ಳುವ ಯೋಚಿಸಬೇಡ ” ಎಂದೆ

ಶ್ರೀನಿವಾಸ, ಸಂತಸದಿಂದ ತಲೆ ಆಡಿಸಿದ. ನನ್ನ ಕಾಫಿ ಮುಗಿದಿತ್ತು.  ಶ್ರೀನಿವಾಸನ ತಾಯಿ ಬಾಗ್ಯಮ್ಮನು ಎದ್ದು ಈಚೆಗೆ ಬಂದು ನಾನು ಹೊರಟಿರುವುದು ಕಂಡು ಅಚ್ಚರಿಯಿಂದ ನಿಂತರು. ನಾನು ಅವರಿಗೆ ಮತ್ತು ಶ್ರೀನಿವಾಸನ ಪತ್ನಿಗೆ ವಂದಿಸಿ ಹೊರಬಂದೆ. ನನ್ನ ಹಿಂದೆ ಶ್ರೀನಿವಾಸನು ಹೊರಬಂದ . ನಾನು ಗೇಟಿನ ಹತ್ತಿರ ನಡೆಯುತ್ತಿರಬೇಕಾದರೆ, ಶ್ರೀನಿವಾಸನ ಮಗ ಲಕ್ಷ್ಮೀಶ ಹೊರಬಂದ,ನಾನು ಅವನತ್ತ ನೋಡಿ ಮುಗುಳ್ನಗು ನಕ್ಕೆ, ನಾನು ಬೆಳಗ್ಗೆಯೆ ಹೊರಟಿರುವುದು ಕಂಡು ಅವನು ಅಚ್ಚರಿಯಿಂದ ಎನ್ನುವಂತೆ ನಿಂತ ಆಗ ನಾನು ಅವನನ್ನು ಕುರಿತು ಹೇಳಿದೆ

“ಮಗು ನಿನಗೊಂದು ಕೆಲಸಕೊಡುವೆ, ದಿನಾ ಮಾಡುವೆಯ?”

“ಏನು ಮಾಡಬೇಕು”

ಅವನು ಸ್ವಲ್ಪ ಅನುಮಾನದಿಂದ ಪ್ರಶ್ನಿಸಿದ, ಇನ್ನು ಯಾವ ದೇವಾಲಯಕ್ಕೆ ಹೋಗು ಎನ್ನುವನೊ ಎನ್ನುವ ಅನುಮಾನ ಅನ್ನಿಸುತ್ತೆ, ನಾನು ಹೇಳಿದೆ

“ಇನ್ನೇನಿಲ್ಲ ಮಗು, ಪ್ರತಿ ದಿನ ಬೆಳಗ್ಗೆ, ಮನೆಯ ಮೇಲೆ, ಸ್ವಲ್ಪ ಜಾಗದಲ್ಲಿ,, ಕಾಳುಗಳನ್ನು , ಅಕ್ಕಿಯನ್ನು, ಸ್ವಲ್ಪ ನೀರನ್ನು ಇಟ್ಟು ಪಕ್ಷಿಗಳನ್ನು ಕರೆಯುವ ಅಭ್ಯಾಸ ಮಾಡು, ಸ್ವಲ್ಪ ದಿನ ಕಳೆದರೆ ಅಭ್ಯಾಸವಾಗಿ ನೀನು ಬೆಳಗ್ಗೆ ಕಾಳು ಇಡುವಾಗಲೆ ಪಕ್ಷಿಗಳೆಲ್ಲ ಬರುತ್ತವೆ, ಇದನ್ನು ಅಜೀವ ಪರ್ಯಂತ ಮುಂದುವರೆಸು, ಒಂದು ದಿನವು ತಪ್ಪದೆ ಪಕ್ಷಿಗಳಿಗೆ, ಕಾಳು ನೀರು ಇಡು,  ಈ ಕೆಲಸ ಮಾಡ್ತೀಯ”

ಅವನು  ಸಮಾದಾನದಿಂದ ನುಡಿದ,

“ಖಂಡೀತ ಮಾಡ್ತೀನಿ , ಹಾಗೆ ಆಗಲಿ ಇಂತಹವು ಮಾಡಿದರೆ ತಪ್ಪೇನಿಲ್ಲ ಒಳ್ಳೆಯದೆ”

ನಾನು ನಗುತ್ತ ನುಡಿದ

“ಮಾಡು ಮಾಡು, ಆದರೆ ಒಂದೆ ಒಂದು ನಿಯಮ ಅಥವ ನಿನ್ನ ಬಾಷೆಯಲ್ಲಿ ಕಂಡೀಶನ್ ಇದೆ ಮಗು”

“ಕಂಡೀಶನ್ ಇದೆಯ ಏನದು ” ಅವನು ಮತ್ತೆ ಅಚ್ಚರಿಯಿಂದ ಕೇಳಿದ

“ಇನ್ನೇನಿಲ್ಲ,  ಪಕ್ಷಿಗಳಿಗೆ ಹಾಕುವ ಕಾಳು ಅಥವ ಅಕ್ಕಿ ಏನಾದರು ಆಗಲಿ , ಅದು ನಿನ್ನ ಅಪ್ಪನದೊ ತಾತನದೊ ಹಣದಿಂದ ತರಬಾರದು, ನಿನ್ನದೆ ಸ್ವಂತ ದುಡಿಮೆಯಿಂದ ತರಬೇಕು, ಆಗುವುದೆ? ಅದು ಇಂದಿನಿಂದಲೆ ಪಾರಂಬಿಸಬೇಕು, ನೆನಪಿಡು ಅದು ನಿನ್ನ ದುಡಿಮೆಯ ಹಣದಿಂದಲೆ ತಂದದ್ದು ಆಗಿರಬೇಕು”

ನಾನು ನಗುತ್ತ ನುಡಿದೆ. ಅವನು ಒಮ್ಮೆಲೆ ಮೌನತಳೆದು ನಿಂತ, ಸ್ವಲ್ಪ ಕಾಲ ಕಳೆದು

“ಆಗಲಿ ಸ್ವಾಮಿ, ನಿಮ್ಮ ಮಾತಿನಂತೆ ನಡೆಯುತ್ತೇನೆ, ನನ್ನ ದುಡಿಮೆಯಿಂದ ದಿನ ಮನೆಯ ಮೇಲೆ ಪಕ್ಷಿಗಳಿಗೆ ಕಾಳು, ಅಕ್ಕಿ ತಂದು ಹಾಕುತ್ತೇನೆ, ಅದು ಇಂದಿನಿಂದಲೆ , ನನ್ನನ್ನು ಆಶೀರ್ವದಿಸಿ, ಎನ್ನುತ್ತ ಕಾಲು ಮುಟ್ಟಲು ಬಂದ, ನಾನು ಜೋರಾಗಿ ನಕ್ಕು ಬಿಟ್ಟೆ.

“ಇದೆಲ್ಲ ಏನು ಬೇಡ ಬಿಡು, ನಮಸ್ಕಾರವೆಲ್ಲ ಬೇಡ, ಶುದ್ದ ಜೀವನನಾಗಿ ಬಾಳು ಸಾಕು” ಎನ್ನುತ್ತ, ಶ್ರೀನಿವಾಸನತ್ತ ತಿರುಗಿ ನಕ್ಕು ಹೊರಟುಬಿಟ್ಟೆ.

ಗೇಟು ದಾಟಿದವನು ರಸ್ತೆಯಲ್ಲಿ ಮುಂದೆ ಹೊರಟೆ. ಮತ್ತೆ ಮನೆಯತ್ತ ತಿರುಗಿ ನೋಡಲಿಲ್ಲ. ಸ್ವಲ್ಪ ದೂರ ನಡೆದೆ. ಮನವೇಕೊ ಸಮಾದಾನದಿಂದ ತುಂಬಿರುವಂತೆ ಅನ್ನಿಸಿತು.

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಜೋಡಿಯನ್ನು ನೋಡುತ್ತಿದ್ದಾಗ,ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ,ಕರುಣೆ,ದುಃಖ,ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ನುಡಿದ ಮಾತುಗಳು ಪದೆ ಪದೆ ನೆನಪಿಗೆ ಬರುತ್ತಿತ್ತು.

“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ”

(ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||)

– ಮುಗಿಯಿತು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nice big story

parthasarathyn
10 years ago
Reply to  sharada.m

thanks 🙂

Utham Danihalli
10 years ago

Kathe estavaythu katheya shyli hagu katheya vishaya chenagidhe prakruthiya shapa

parthasarathyn
10 years ago

thanks for your good remarks 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಪ್ರತಿಯೊಬ್ಬರೂ ತಿಳಿಯಬೇಕಾದ ನೀತಿ.
ಮನಮುಟ್ಟುವಂತಹ ಕಥಾ ನಿರೂಪಣೆ; ತುಂಬಾ ಚೆನ್ನಾಗಿ ಮೂಡಿದೆ.
ಧನ್ಯವಾದಗಳು ಸರ್

parthasarathyn
10 years ago

ಬಹುಷಃ ಕತೆ ಬರೆದುದ್ದು ಸಾರ್ಥಕವಾಯಿತು ಅನ್ನಿಸುತ್ತಿದೆ !

6
0
Would love your thoughts, please comment.x
()
x