ಚಿಟ್ಟು ಕುಟುರದ ಮರಿಗಳ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ


ಮಲೆನಾಡು ಈಗ ಅಕ್ಷರಶಃ: ಮಳೆನಾಡು. ಹಾಗೆಯೇ ಪ್ರಕೃತಿಯ ಅಚ್ಚರಿಗಳ ಗೂಡು. ಲಕ್ಷಗಟ್ಟಲೆ-ಕೋಟಿಗಟ್ಟಲೆ ಖರ್ಚು ಮಾಡಿ, ಪರಿಸರದಿಂದ ಬಗೆದು ತಂದ ಕಲ್ಲು-ಮರಳು-ಕಬ್ಬಿಣದ ಮಾನವ ನಿರ್ಮಿತ ತಾರಸಿ ಮನೆಗಳು ಧಾರಾಳವಾಗಿ ಸೋರುತ್ತಿವೆ. ಮನೆಯೆಲ್ಲಾ ಥಂಡಿ-ಥಂಡಿ. ಇಂತಹ ಮಳೆಗಾಲದಲ್ಲೂ ಹಕ್ಕಿಗಳು ಒಣ ಎಲೆಯನ್ನು, ಹುಲ್ಲನ್ನು ಎಲ್ಲಿಂದ ಸಂಪಾದಿಸಿ ತರುತ್ತವೆ ಎಂಬುದು ಚಿದಂಬರ ರಹಸ್ಯವೇ ಸೈ. ಸಾಗರ ತಾಲ್ಲೂಕಿನ ಹೊಸೂರಿನಲ್ಲಿ ಒಬ್ಬರ ಮನೆಯ ಹಿತ್ತಲಲ್ಲಿ 3 ಇಂಚು ಅಗಲದ ಪಿ.ವಿ.ಸಿ ಪೈಪೊಂದನ್ನು ಹಿತ್ತಿಲಿನ ಧರೆಗೆ ಆನಿಸಿ ನಿಲ್ಲಿಸಿದ್ದರು. ಅದನ್ನು ಉಪಯೋಗಿಸದೇ ವರ್ಷಗಳೇ ಆಗಿತ್ತು. ಚಿಕ್ಕ ಪಕ್ಷಿಗಳು ಗೂಡು ಕಟ್ಟಲು ಸುರಕ್ಷಿತ ಜಾಗವನ್ನು ಹುಡುಕುತ್ತಿರುತ್ತವೆ. ಮನುಷ್ಯರ ಸಂಚಾರ ಇರುವಲ್ಲಿ ಇವುಗಳಿಗೆ ಶತ್ರುಗಳ ಕಾಟ ಇರುವುದಿಲ್ಲ. ಚಿಟ್ಟು ಕುಟುರವೊಂದು ಅದೇಗೋ ಈ ಪೈಪನ್ನು ನೋಡಿತು. ಗಮನಿಸಿತು. ಯಾವುದೇ ಅಪಾಯವಿಲ್ಲ ಎಂದು ಮನಗಂಡು ಗೂಡು ಕಟ್ಟಿತು. ಸುಮಾರು ಮನೆಗುಬ್ಬಿಯಷ್ಟೇ ದೊಡ್ಡದಿರುವ ಜೋಡಿ ಹಕ್ಕಿಗಳು ಎಲ್ಲೆಲ್ಲಿಂದಲೋ ಒಣ ಎಲೆ, ಹುಲ್ಲು ಇತ್ಯಾದಿಗಳನ್ನು ತಂದು ಪೈಪಿನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟವು. ಮೊಟ್ಟೆಯೊಡೆದು ಮರಿಗಳು ಹೊರಬಂದವು. ಕಾಳು-ಕಡಿ, ಹುಳ-ಹಪ್ಪಟೆಗಳನ್ನು ಸರತಿ ಪ್ರಕಾರ ತಂದು ಹಾಕುತ್ತಿದ್ದವು. ಆ ಮನೆಯ ಯಜಮಾನನಿಗೊಂದು ಸಮಸ್ಯೆಯಾಯಿತು. ಮಳೆ ಹೆಚ್ಚು ಬಂದಾಗ ಹಂಚಿನ ನೀರು ಅಷ್ಟು ದೂರ ಹಾರಿ ಪಕ್ಕದ ಮನೆಯ ಗೋಡೆಗೆ ಸಿಡಿಯುತ್ತಿತ್ತು. ಇದಕ್ಕೊಂದು ಉಪಾಯ ಮಾಡಬೇಕೆಂದುಕೊಂಡವನಿಗೆ, ಧರೆಗೆ ಆನಿಸಿ ನಿಲ್ಲಿಸಿದ ಪೈಪು ಕಂಡಿತು. ಸರಿ ತಡವೇಕೆ? ಎತ್ತಿಕೊಂಡು ತಂದ. ನೋಡಿದರೆ ಮಧ್ಯದಲ್ಲಿ ಎನೋ ಕಟ್ಟಿಕೊಂಡಿದೆ. ಜೋರಾಗಿ ಕೊಡವಿದ. ಉಹೂಂ ಮಧ್ಯದಲ್ಲಿರುವ ಸೇರಿಕೊಂಡ ವಸ್ತು ಬೀಳಲಿಲ್ಲ. ಸರಿ ಸ್ವಲ್ಪ ಉದ್ದದ ಕೋಲು ತಂದು ಪೈಪಿನಲ್ಲಿ ತೂರಿಸಿದ. ಗೂಡು ನೆಲಕ್ಕೆ ಬಿತ್ತು, ಮರಿಗಳ ಸಮೇತ. ಒಟ್ಟು ಆರು ಹಕ್ಕಿ ಮರಿಗಳು. ಹತ್ತಿಯಂತಹ ಪುಕ್ಕಗಳು ಮೂಡುತ್ತಿದ್ದವು. 

ವಿಪರೀತ ಮಳೆ ಎಂದು ಶಾಲೆಗೆ ರಜ ನೀಡಿದ್ದರು. ಪಕ್ಕದ ಮನೆಯ ಪ್ರಣವ ಇದನ್ನೆಲ್ಲಾ ನೋಡುತ್ತಿದ್ದ. ಹಕ್ಕಿ ಮರಿ ಎಂದು ಓಡಿದ. 10ನೇ ತರಗತಿಯಲ್ಲಿ ಓದುತ್ತಿರುವ ಪ್ರಣವನಿಗೆ ಮರಿಗಳನ್ನು ನೋಡಿ ಅಯ್ಯೋ ಪಾಪ ಎನಿಸಿತು. ಅಸಹಾಯಕ ಮರಿಗಳು ಸತ್ತೇ ಹೋಗುತ್ತವೆ ಎಂದು ಅವನಿಗೆ ಅನಿಸಿತು. ಮನೆಯ ಯಜಮಾನ ಪೈಪು ತೆಗೆದುಕೊಂಡು ಹೋಗಿ ನೀರು ಬೀಳುವ ಸೂರಿಗೆ ಸಿಕ್ಕಿಸಿ ನಿರಾಳವಾಗಿ ಮನೆಗೆ ಹೋದ. ಮುಂದೇನು ಮಾಡುವುದೆಂದು ತಿಳಿಯದ ಕಿರಿಯ ಸ್ವಲ್ಪ ಹೊತ್ತು ಯೋಚನೆ ಮಾಡಿದ, ಅದೇನೋ ಹೊಳೆದಂತೆ ಆಯಿತು. ತನ್ನ ಮನೆಯಿಂದ ರೊಟ್ಟಿನ ಪೆಟ್ಟಿಗೆಯನ್ನು ತಂದು ಬಿದ್ದ ಗೂಡು ಮತ್ತು ಮರಿಗಳ ಸಮೇತ ಅದರೊಳಗಿಟ್ಟ. ಇವನ ಈ ಕೆಲಸಕ್ಕೆ ತಂದೆಯ ಉತ್ತೇಜನವೂ ಸಿಕ್ಕಿತು. ಸಮಸ್ಯೆ ಶುರುವಾಗಿದ್ದು ಈಗ. ಮರಿಗಳ ಹೊಟ್ಟೆಗೇನು ಹಾಕುವುದು? ಸರಿ ಬಾಳೆ ಹಣ್ಣು ತಂದು ಮರಿಗಳ ಮುಂದಿಟ್ಟರು. ತಿನ್ನಲಿಲ್ಲ. ಅದ್ಯಾರೋ ಹೇಳಿದರೆಂದು, ಗೋಧಿ ಕಾಳು ಹಾಕಿದರು. ಅಡುಗೆಮನೆಯಲ್ಲಿರುವ ಕಾಳು-ಕಡಿ ಸಾಮಾನುಗಳೆಲ್ಲವು ರೊಟ್ಟಿನ ಪೆಟ್ಟೆಗೆಗೆ ಬಂತು. ಮರಿಗಳು ಮೂಸಿಯೂ ನೋಡಲಿಲ್ಲ. ನಿತ್ರಾಣಗೊಂಡು ಮಲಗಿದವು.

ಹೊಸೂರಿನ ಸುತ್ತ ಗುಡ್ಡಗಳಿವೆ. ಈ ಊರಿಗೆ ತಾಗಿದಂತೆ ಇರುವ ಊರಿನ ಹೆಸರು ಕೊಡ್ಲುತೋಟ. ಹೆಸರಿಗಷ್ಟೆ ಊರು, ಇರುವುದು ಒಂದೇ ಮನೆ. ಕೊಡ್ಲುತೋಟ ರಮೇಶ್ ಎಂದರೆ ರಾಜ್ಯಮಟ್ಟದಲ್ಲಿ ಹೆಸರಿದ್ದವರು. ನಾಡಿನ ಎಲ್ಲಾ ರಾಜ್ಯ ಮಟ್ಟದ ಪತ್ರಿಕೆಗಳಲ್ಲೂ ಅವರ ಬಗ್ಗೆ ಲೇಖನಗಳು ಬಂದಿವೆ. ಹುಟ್ಟಿನಿಂದ ದಟ್ಟ ಕಾಡ ನೋಡಿದ ರಮೇಶ್ ಮನೆಯಲ್ಲಿಯೇ ಸಂಗ್ರಹಾಲಯ ಮಾಡಿದ್ದಾರೆ. ಸಂಗ್ರಹಾಲಯವೆಂದರೆ, ಸಾವಿರಾರು ತರಹದ ಬೀಜಗಳು, ಬೇರುಗಳು, ಬಳ್ಳಿಗಳು, ವಿಶಿಷ್ಟರೀತಿಯ ಕಲ್ಲುಗಳು, ಬಿದ್ದ ಹಕ್ಕಿಗೂಡುಗಳು, ಜೇನು ತತ್ತಿ, ತರಹೇವಾರಿ ಎಲೆಗಳು ಹೀಗೆ ಮಲೆನಾಡಿನ ಸಾವಿರಾರು ವೈವಿಧ್ಯಗಳು ಅವರ ಸಂಗ್ರಹಾಲಯದಲ್ಲಿ ಲಭ್ಯ. ಸಂಗ್ರಹಿಸಿ ಎಲ್ಲವಕ್ಕೂ ಹೆಸರಿಟ್ಟಿದ್ದಾರೆ. ಕನ್ನಡದಲ್ಲಿ ಏನು ಹೇಳುತ್ತಾರೆ, ಸಂಸ್ಕೃತದಲ್ಲಿ ಅದರ ಹೆಸರೇನು? ಕೆಲವಕ್ಕೆ ಸಸ್ಯಶಾಸ್ತ್ರೀಯ ಹೆಸರನ್ನು ಬರೆಸಿದ್ದಾರೆ. ಯಾವ ಸಸ್ಯ ಯಾವ ಸಮಯದಲ್ಲಿ ಹೂ ಕಚ್ಚುತ್ತದೆ, ಕಾಯಿ ಬಿಡುತ್ತದೆ, ಯಾವ ಹಣ್ಣನ್ನು ಯಾವ ಹಕ್ಕಿ ತಿನ್ನುತ್ತದೆ ಹೀಗೆ ಅಸಂಖ್ಯ ಪರಿಸರದ ವಿಚಾರಗಳು ಅವರಿಗೆ ಜನ್ಮಜಾತವಾಗಿಯೇ ಬಂದಿದೆ. ಕಾಯಿಲೆಗಳಿಗೆ ಔಷಧವನ್ನೂ ನೀಡುತ್ತಾರೆ. ಅವರೊಂದು ತಿರುಗಾಡುವ ಪರಿಸರ ವಿಶ್ವವಿದ್ಯಾನಿಲಯವಿದ್ದಂತೆ. ಅವರ ಅನುಭವದ ಮಾತು ಹಬ್ಬದ ಹೋಳಿಗೆ ಊಟವಿದ್ದಂತೆ, ಕಾಲಿಗೆ ಚಕ್ರ ಕಟ್ಟಿಕೊಂಡೇ ಬದುಕುತ್ತಾರೆ. ಸಾಗರ-ಸಿದ್ಧಾಪುರ-ಸೊರಬ-ಹೊಸನಗರಗಳ ಯಾವ್ಯಾವ ಕಾಡಿನಲ್ಲಿ ಏನೇನು ವಿಶೇಷವಿದೆ, ಯಾವ ಮರದಲ್ಲಿ ಯಾವ ಹಕ್ಕಿ ಗೂಡು ಕಟ್ಟುತ್ತದೆ. ಆ ಹಕ್ಕಿಗಳ ಆಹಾರ ಕ್ರಮವೇನು? ಎಂಬ ವಿಚಾರಗಳು ಇವರ ತಲೆಯಲ್ಲೇ ಇದೆ. ಜೊತೆಗೆ ಸ್ಕೂಲಿನ ಮಕ್ಕಳಿಗೆ ಪರಿಸರದ ಪಾಠ ಹೇಳುವ ಪ್ರವೃತ್ತಿಯೂ ಸೇರಿಕೊಂಡಿದೆ. ತುಂಬಾ ತರ್ಕಬದ್ಧವಾಗಿ ಮಾತನಾಡುವ ಈ ಜೀವಿ ಒಬ್ಬ ಅಪ್ಪಟ ಭೂಮಿಪುತ್ರ. ದಿನದ ಇಪ್ಪತ್ತನಾಲ್ಕು ಗಂಟೆಯೂ ವರ್ಷದ 365 ದಿನವೂ ಭೂಮಿಯ, ಕಾಡಿನ, ವನ್ಯಜೀವಿಗಳ ರಕ್ಷಣೆಗಾಗಿ ಸಮರ್ಪಿಸಿಕೊಂಡ ಸಂಬಳರಹಿತ ಯೋಧ.

ಪ್ರಣವ ಮತ್ತು ಅವರ ತಂದೆಗೆ ಸಮಯ ಕಳೆದಂತೆಲ್ಲಾ ಆತಂಕ ಹೆಚ್ಚುತ್ತಲೇ ಇತ್ತು. ಮರಿಗಳೆಲ್ಲವೂ ಸತ್ತು ಹೋದರೇನು ಮಾಡುವುದು? ಸರಿ, ರಾತ್ರಿ 9.30ಗೆ ಕೊಡ್ಲುತೋಟದ ರಮೇಶ್‍ಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಕೋ-ಇಕೋ ಹೇಳುವಷ್ಟರಲ್ಲಿ ಪುತ್ರನೊಂದಿಗೆ ರಮೇಶ್ ಹಾಜರಾದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರು. ಅದೇನೋ ನಿರ್ಧಾರ ತೆಗೆದುಕೊಂಡವರಂತೆ ರಟ್ಟಿನ ಪೆಟ್ಟಿಗೆಯ ಬಳಿ ಕುಳಿತರು. ಸೂಕ್ಷ್ಮವಾಗಿ ಅತಿ ಜತನದಿಂದ ಮರಿಯೊಂದನ್ನು ಎತ್ತಿಕೊಂಡರು. ಪುಣ್ಯ ಸತ್ತಿರಲಿಲ್ಲ. ಸ್ಪರ್ಶವಾದ ಕೂಡಲೇ ಮರಿ ಬಾಯಿ ಕಳೆಯಿತು. ಚೀವ್‍ಂ ಎನ್ನಲು ತ್ರಾಣವಿಲ್ಲ. ರಟ್ಟಿನ ಬಾಕ್ಸಿನಲ್ಲಿದ್ದ ಆಹಾರದ ಪಟ್ಟಿಯೊನ್ನೊಮ್ಮೆ ನೋಡಿದರು. ಯಾವ ಜಾತಿಯ ಹಕ್ಕಿಯ ಮರಿ ಎಂದು ಗೊತ್ತಾಗುವಂತಿರಲಿಲ್ಲ. ನಿಧಾನವಾಗಿ ಹಕ್ಕಿ ಮರಿಯ ತಲೆಯನ್ನು ಸವರಿದರು. ಇವರ ಕೈ ಶಾಖಕ್ಕೆ ಸ್ವಲ್ಪ ಚೇತರಿಸಿಕೊಂಡ ಹಕ್ಕಿ ಆಹಾರಕ್ಕಾಗಿ ದೊಡ್ಡದಾಗಿ ಬಾಯಿ ತೆರೆಯಿತು. ಒಂದು ಅಕ್ಕಿಕಾಳನ್ನು ಸೀದಾ ಗಂಟಲಿಗೆ ಹೋಗುವಂತೆ ಹಾಕಿದರು. ಮರಿಯ ಹೊಟ್ಟೆಯೊಳಗೆ ಅಕ್ಕಿಕಾಳು ಹೋಯಿತು. ಹೀಗೆ ಪ್ರತಿ ಮರಿಯ ಬಾಯಿಗೂ ಹತ್ತತ್ತು ಅಕ್ಕಿ ಕಾಳನ್ನು ಹಾಕಿ ಮುಗಿಸುವಷ್ಟರಲ್ಲಿ ಗಡಿಯಾರ ತಿರುಗಿ ಸರಿರಾತ್ರಿ ಕಳೆದು ಮುಂದಿನ ದಿನ ಬಂದಿತ್ತು. ಹೊಟ್ಟೆ ತುಂಬಿದ ಮರಿಗಳು ಒಂದರ ಮೇಲೊಂದರಂತೆ ಮಲಗಿ ಬೆಚ್ಚಗಾದವು. ಮತ್ತೆ ಬೆಳಗಾಗುವಷ್ಟರಲ್ಲಿ ಎಲ್ಲಾ ಮರಿಗಳು ಚೇತರಿಸಿಕೊಂಡಿದ್ದವು. ನೋಡಲು ಹಿಂದಿನ ದಿನಕ್ಕಿಂತ ಕೊಂಚ ದೊಡ್ಡಗಾದಂತೆ ಕಾಣುತ್ತಿದ್ದವು. ಬೆಳಗ್ಗೆ ರಟ್ಟಿನ ಬಾಕ್ಸನ್ನು ಹೊರಗಿಟ್ಟು ಕಾದರೆ ತಾಯಿ ಹಕ್ಕಿಗಳು ಬಂದೇ ಬಂದವು. ಚೀವ್‍ಂ ಚೀವ್‍ಂ ಎನ್ನುತಾ ಬಾಕ್ಸಿನ ಹತ್ತಿರದಲ್ಲಿ ಕುಳಿತವು. ಕಚ್ಚಿಕೊಂಡು ಬಂದ ಆಹಾರವನ್ನು ನೀಡಿದವು.

ಇಷ್ಟರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಛಾಯಾಗ್ರಾಹಕ ಶ್ರೀ ಸತೀಶ್‍ಗೆ ಕರೆ ಹೋಗಿತ್ತು. ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ, ಬೆಳಗ್ಗೆ ಅಷ್ಟೊತ್ತಿಗೆ ಸತೀಶ್ ಹಾಜರಾದರು. ರಮೇಶ್‍ರವರ ಶುಶ್ರೂಷೆಗೆ ಹೊಂದಿಕೊಂಡ ಮರಿಗಳು ಇವರ ಮೈ ಮೇಲೆ ಕುಳಿತಿದ್ದವು. ಪಕ್ಕದಲ್ಲಿರುವ ಇಷ್ಟುದ್ದ ಕೋಲಿನ ಮೇಲೆ ಸಾಲು ಹಕ್ಕಿ ಮರಿಗಳು. ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪ್ಪೆಗಳ ಮಿಲನದ ದೃಶ್ಯಕ್ಕೆ ಸತೀಶ್ ಅವರಿಗೆ ಚಿನ್ನದ ಪದಕ ಲಭಿಸಿದೆ. ಇವರು ನೂರಾರು ಪೋಟೊಗಳನ್ನು ತೆಗೆದರು.

ಮಾನವ ಹಸ್ತಕ್ಷೇಪವಾದಲೆಲ್ಲಾ ಪರಿಸರ ಹಾಳಾಗುತ್ತದೆ. ಪುಟ್ಟ ಪಕ್ಷಿಗಳಿಗೆ ಗೂಡು ಕಟ್ಟಲು ಸರಿಯಾದ ನೆಲೆ ಸಿಗುವುದಿಲ್ಲ. ಸರಿ ವಂಶಾಭಿವೃದ್ದಿಗಾಗಿ ಈ ಪುಟ್ಟ ಹಕ್ಕಿಗಳು ನಮ್ಮ ಮನೆಯಲ್ಲೋ ಅಥವಾ ಮನೆಯ ಹತ್ತಿರದಲ್ಲೋ ಜಾಗ ಅರಸಿ ಬರುತ್ತವೆ. ಈ ಪಕ್ಷಿಗಳೇನು ನಮಗೆ ತೊಂದರೆ ನೀಡುವುದಿಲ್ಲ. ಬದಲಿಗೆ ಹಲವು ಜಾತಿಯ ಕೀಟಗಳನ್ನು ತಿಂದು, ಬೀಜ ಪ್ರಸರಣೆ ಮಾಡಿ ಉಪಕಾರವನ್ನೇ ಮಾಡುತ್ತವೆ. ಎಲ್ಲವನ್ನೂ ದುಡ್ಡಿನಿಂದ ಅಳೆಯುವ ನಮಗೆ ಪಕ್ಷಿಗಳ ಸೇವೆಗೆ ಬೆಲೆ ಕಟ್ಟುವುದು ಗೊತ್ತಿಲ್ಲ. ಒಂದೊಮ್ಮೆ ಜೀವಿ ವೈವಿಧ್ಯಗಳ ಸೇವೆಗೆ ನಾವು ಹಣವನ್ನು ತೆರಬೇಕಾಗಿ ಬಂದರೆ ಜೀವಮಾನವಿಡೀ ಅವುಗಳ ಜೀತ ಮಾಡಿಕೊಂಡಿರಬೇಕಾಗುತ್ತದೆ.

ಮೊದಲು ಹೇಳಿದಂತೆ ಪ್ರಕೃತಿ ಅಚ್ಚರಿಯ ಮೂಟೆ. ಹಿಂದಿನ ರಾತ್ರಿ ಹೊಟ್ಟೆಗಿಲ್ಲದೆ ಸಾಯುವ ಹಂತದಲ್ಲಿದ್ದ ಹಕ್ಕಿಮರಿಗಳು ಮರುದಿನ ಮಧ್ಯಾಹ್ನದ ಹೊತ್ತಿಗೆ ಹಾರಲು ಕಲಿತಿದ್ದವು. ತಾಯಿ ಹಕ್ಕಿಗಳಿಗೂ ಈ ಮನುಷ್ಯರು ಅಪಾಯಕಾರಿಗಳು ಅಲ್ಲವೆಂದು ಅನಿಸಿರಬೇಕು. ಐದು ಮರಿಗಳ ರಾಕ್ಷಸ ಹಸಿವನ್ನು ಇಂಗಿಸಿದವು. ಕ್ಷಣ-ಕ್ಷಣಕ್ಕೂ ಗಾತ್ರ ಹೆಚ್ಚಿಸಿಕೊಳ್ಳುತ್ತಾ ಹೋದ ಮರಿಗಳು ಸಂಜೆಯ ಹೊತ್ತಿಗೆ ಪೋಷಕರಷ್ಟು ದೊಡ್ಡದಾಗಿದ್ದವು. ಖುದ್ದು ಜನರೇ ಪುಟ್ಟ ಪಕ್ಷಿಗಳ ಸೇವೆ ಮಾಡುತ್ತಿದ್ದರಿಂದ ಹಿಂಸ್ರ ಪಕ್ಷಿಗಳು ಆ ಕಡೆ ತಲೆಹಾಕಲಿಲ್ಲ. ಸಂಜೆಯಾಗುತ್ತಿದ್ದಂತೆ ಅಷ್ಟೂ ಮರಿಗಳು ತಾಯಿಹಕ್ಕಿಗಳ ಜೊತೆ ಹಾರಿಹೋದವು ಎಂಬಲ್ಲಿಗೆ ಕತೆ ಸುಖಾಂತ್ಯವಾಯಿತು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Utham Danihalli
10 years ago

Mallenadu vismayagalla bidu
Nimma lekana estavaythu

prashasti
10 years ago

ಸೂಪರ್ 🙂 ಹಿಂಗೆ ಹಿಡಿದು ಬಂದ ಹಕ್ಕಿಮರಿಗಳು ಸತ್ತೇ ಹೋಗುತ್ತೆ ಹಲವು ಬಾರಿ.. ಬುಡದಿಂದ ಕೊನೆವರೆಗೂ ಇದು ಕತೆಯಲ್ಲ ವಾಸ್ತವ ಅನಿಸ್ತಾನೆ ಇತ್ತು. ಆದರೆ ಕೊನೆಗೆ ಒಂದೇ ದಿನದಲ್ಲಿ ತಂದೆ ತಾಯಿಯಂತೆ ದೊಡ್ಡದಾಗಿ ಹಾರಿ ಹೋಯ್ತು ಅಂತಿದ್ದುದ್ದು ನೋಡಿ ಮತ್ತೆ ಇದು ಕತೆನಾ ಅನಿಸೋಕೆ ಶುರುವಾಯ್ತು 🙂

Akhilesh Chipli
Akhilesh Chipli
10 years ago
Reply to  prashasti

Dear Prashasti,
Chikka hakkigala jivana tumba risky. adakkagi prakruti ivugal belavanigeyannu bega aguvante maduttade. nimage kateyenisiddaralli asharyavilla. adare idu nijavaada ghatane

Rajendra B. Shetty
10 years ago

ನಿಮ್ಮ ಲೇಖನಗಳು ಬಹಳ ಆತ್ಮೀಯವಾಗುತ್ತವೆ. ಪಕ್ಷಿಗಳ, ಪ್ರಾಣಿಗಳ ಬಗೆಗೆ ನಿಮಗೆ ಇರುವ ಕಳಕಳಿಗೆ ಹ್ಯಾಟ್ಸ್ ಆಫ್.

Akhilesh Chipli
Akhilesh Chipli
10 years ago

Dear All,
Lekhana mecchida ellarigu dhanyavaadagalu.

5
0
Would love your thoughts, please comment.x
()
x