ಮೈಸೂರ್ ಸ್ಯಾಂಡಲ್ ಸೋಪು ಮತ್ತು ಬೆನ್ನುಜ್ಜೋ ಕಲ್ಲು:ನಟರಾಜು ಎಸ್. ಎಂ.


ಮೊನ್ನೆ ಮೈ ಸೋಪು ತೆಗೆದುಕೊಳ್ಳಲೆಂದು ಗೆಳೆಯನೊಬ್ಬನ ಜೊತೆ ಅಂಗಡಿಯೊಂದಕ್ಕೆ ಹೋಗಿದ್ದೆ. ಅಂಗಡಿಯ ಒಳಗೆ ಎರಡೂ ಕಡೆಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಲು ಒಂದಷ್ಟು ಹುಡುಗಿಯರು ಕುಳಿತ್ತಿದ್ದರು. ವಿಧ ವಿಧದ ಕಂಪನಿಗಳ ಲಿಪ್ ಸ್ಟಿಕ್, ನೈಲ್ ಪಾಲಿಶ್, ಡಿಯೋಡರೆಂಟ್, ಶಾಂಪೂ, ಐ ಲೈನರ್ ಇತ್ಯಾದಿ ರಾಶಿ ರಾಶಿ ಸೌಂದರ್ಯವರ್ಧಕಗಳು ಅವರು ಕುಳಿತ್ತಿದ್ದ ಜಾಗದಲ್ಲಿ ಗಾಜಿನ ಕಪಾಟಿನೊಳಗೆ ಅಲಂಕೃತಗೊಂಡಿದ್ದವು. ಅವರೂ ಸಹ ಅದೇ ಕಂಪನಿಗಳ ಸೌಂಧರ್ಯವರ್ಧಕಗಳನ್ನು ಉಪಯೋಗಿಸಿ ವಿಧವಿಧವಾಗಿ ಅಲಂಕೃತಗೊಂಡಿದ್ದರು. ಸುಮ್ಮನಾದರು ಅವರು ಹಚ್ಚಿಕೊಂಡ ಲಿಪ್ ಸ್ಟಿಕ್, ಹಾಕಿಕೊಂಡಿರುವ ಪೌಡರ್ ನೋಡಿದಾಗ ಅವರು ತುಂಬಾನೆ ಮೇಕಪ್ ಮಾಡಿಕೊಂಡಿದ್ದಾರೆ ಅನಿಸಿತ್ತು. ಆಕಸ್ಮಾತ್ ಏನಾದರು ಅವರ ಕ್ಯಾಬಿನ್ ಎದುರು ಒಂದು ಕ್ಷಣ ನಿಂತರೆ "ಸರ್, ಏನ್ ತೆಗೆದುಕೊಳ್ತೀರ? ಶ್ಯಾಂಪೂನ? ಡಿಯೋಟರೆಂಟಾ?" ಎಂದು ಹೇಳಿ ವಿಧ ವಿಧದ ಕಂಪನಿಗಳ ಬ್ರಾಂಡ್ ಗಳನ್ನು ಮುಂದಿಡುತ್ತಾರೆ. ಡಿಯೋಟರೆಂಟ್ ಒಂದನ್ನು ಕೊಳ್ಳಬೇಕಿತ್ತು ಎಂದರೆ ಡಿಯೊಡರೆಂಟ್ ನ ಮುಚ್ಚಳ ತೆಗೆದು ಆ ಮುಚ್ಚಳಕ್ಕೆ ಒಂಚೂರು ಡಿಯೋಟರೆಂಟ್ ಸ್ಪ್ರೇ ಮಾಡಿ "ನೋಡಿ ಸರ್, ಒಳ್ಳೆ ಸ್ಮೆಲ್?" ಎಂದು ಸುವಾಸನಭರಿತ ಡಿಯೋಟರೆಂಟ್ ನ ಸುಗಂಧಕ್ಕೆ ಮಾರು ಹೋಗುವಂತೆ ಪ್ರಾತ್ಯಕ್ಷತೆ ತೋರಿಸುತ್ತಾರೆ. ಆ ಪ್ರಾತ್ಯಕ್ಷತೆಗಳು ಯಾವುದಾದರು ಐಟಮ್ ಅನ್ನು ಕೊಳ್ಳುವುದರ ಜೊತೆ ಕೊನೆಯಾಗುತ್ತವೆ.
 
ಈ ಸೌಂದರ್ಯವರ್ಧಕಗಳು ನಮ್ಮ ಡಿಪಾರ್ಟ್ ಮೆಂಟ್ ಅಲ್ಲವೆಂದು ತಿಳಿದು ಒಂದು ಸೋಪನ್ನಷ್ಟೇ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿ ಅಂಗಡಿಯ ಒಳ ಹೊಕ್ಕಿ "ಸರ್ ಒಂದು ಡವ್ ಸೋಪ್ ಕೊಡಿ." ಎಂದು ಕೇಳಲು ಹೋದವನು ನಮ್ಮ ಮೈಸೂರ್ ಸ್ಯಾಂಡಲ್ ಸೋಪನ್ನು ಆ ಅಂಗಡಿಯ ಕಪಾಟಿನೊಳಗೆ ಕಂಡು "ಮೈಸೂರ್ ಸ್ಯಾಂಡಲ್ ಗೋಲ್ಡ್ ಇದೆಯಾ ಸರ್?" ಎಂದಿದ್ದೆ. ಗಂಧದ ಬಣ್ಣದ ಮೈಸೂರ್ ಸ್ಯಾಂಡಲ್ ಅನ್ನಷ್ಟೇ ನೋಡಿದ್ದ ನನಗೆ ಅಂತಹುದೇ ಅಂಗಡಿಯೊಂದರಲ್ಲಿ ಮೈಸೂರ್ ಸ್ಯಾಂಡಲ್ ಗೋಲ್ಡ್ ಎಂಬ ಸಾಬೂನು ಸಹ ದೊರೆಯುತ್ತೆ ಎಂದು ಹಿಂದೊಮ್ಮೆ ತಿಳಿದಿತ್ತು. ಅದರ ಬೆಲೆ ಆ ದಿನಗಳಲ್ಲಿ 50 ರೂಪಾಯಿ ಆದುದರಿಂದ ಅದಕ್ಕಿಂತ ಅರ್ಧ ಬೆಲೆಯ ಮೈಸೂರ್ ಸ್ಯಾಂಡಲ್ ಅನ್ನಷ್ಟೇ ತೆಗೆದುಕೊಂಡು ಗೋಲ್ಡ್ ಅನ್ನು ಗೆಳತಿಯೊಬ್ಬಳಿಗೆ ತೆಗೆದುಕೊಡುತ್ತಿದ್ದೆ. :)) ಆ ಗೆಳೆತನದ ವಿಷಯಗಳು ಈಗ ಬೇಡ ಬಿಡಿ. ಟಾಪಿಕ್ ಎಲ್ಲೆಲ್ಲಿಗೋ ಹೋಗಿಬಿಡುತ್ತೆ. 🙂 ಮೈಸೂರ್ ಸ್ಯಾಂಡಲ್ ಗೋಲ್ಡ್ ಕೇಳಿದ್ದಕ್ಕೆ ಮೈಸೂರು ಸ್ಯಾಂಡಲ್ ಮಿಲೇನಿಯಮ್ ಸಹ ಇದೆ ಸರ್ ಎನ್ನುತ್ತಾ ಪುಟ್ಟ ಇಟ್ಟಿಗೆ ಗಾತ್ರದ ಬಾಕ್ಸ್ ಒಂದನ್ನು ಅಂಗಡಿಯವನು ಎದುರಿಗಿಟ್ಟಿದ್ದ. ನನ್ನ ಗೆಳೆಯನಿಗೆ ನೋಡಪ್ಪ "ನಮ್ಮ ರಾಜ್ಯದ ಪ್ರೊಡಕ್ಟ್" ಎಂದು ಖುಷಿಯಿಂದ ಆ ಸೋಪಿನ ಬಾಕ್ಸ್ ಕೈಗೆತ್ತುಕೊಂಡು ತೋರಿಸಿದೆ.
 
ನನ್ನ ಕೈಯಿಂದ ಆ ಬಾಕ್ಸ್ ಅನ್ನು ನನ್ನ ಗೆಳೆಯ ತೆಗೆದುಕೊಂಡು ಆ ಬಾಕ್ಸ್ ನ ಮೇಲೆ ಬರೆದಿರುವ ರೇಟ್ ನೋಡಿ ಆಶ್ಚರ್ಯಚಕಿತನಾಗಿ ಅಂಗಡಿಯವನಿಗೆ "ಎಷ್ಟು ಸೋಪಿವೆ ಒಳಗೆ?" ಎಂದ. ಅಂಗಡಿಯವನು ನಗುತ್ತಾ "ಒಂದೇ ಸರ್" ಎಂದು ಆ ಬಾಕ್ಸ್ ಅನ್ನು ಓಪನ್ ಮಾಡಿದ. ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಲೈಟ್ ಆಗಿ ಆ ಅಂಗಡಿಯ ಒಳಗೆ ಗಂಧದ ಘಮಲು ತುಂಬಿಕೊಂಡಿತು. ಪುಟ್ಟ ಇಟ್ಟಿಗೆ ಗಾತ್ರದ ಬಾಕ್ಸ್ ನಲ್ಲಿ ಪ್ಯಾಕಿಂಕ್ ಮೇಲೆ ಪ್ಯಾಕಿಂಕ್ ಇರುವುದ ಕಂಡು ನನ್ನ ಗೆಳೆಯ "ಇದರ ಪ್ಯಾಕಿಂಕ್ ಗೆ ಇನ್ನೂರು ರೂಪಾಯಿ ಖರ್ಚಾಗಿರುತ್ತೆ" ಎಂದ. ನಾನು ಕುತೂಹಲದಿಂದ ಅಂಗಡಿಯವನನ್ನು "720ರೂಪಾಯಿ ಕೊಟ್ಟು ಜನ ಈ ಸೋಪು ಕೊಂಡು ಕೊಳ್ತಾರ ಸರ್" ಎಂದೆ. ಅಂಗಡಿಯವನು ನಗುತ್ತಾ "ಹೂಂ ಕೊಂಡುಕೊಳ್ತಾರೆ" ಎಂದ. ಮನಸ್ಸಿನಲ್ಲಿ "ಇವೆಲ್ಲಾ ನಮಗಲ್ಲ ಬಿಡಿ" ಎಂದುಕೊಳ್ಳುತ್ತಾ ಮೈಸೂರ್ ಸ್ಯಾಂಡಲ್ ಗೋಲ್ಡ್ ಅನ್ನು ತೆಗೆದುಕೊಂಡು ಇನ್ನೇನು ಬೇಕು ಎಂದು ಯೋಚಿಸುವ ಹೊತ್ತಿಗೆ ಕಣ್ಣಿಗೆ ಕಂಡ ಬೆನ್ನು ಉಜ್ಜುವ ಬ್ರಶ್ ಅನ್ನು ನೂರ ತೊಂಬತ್ತು ರೂಪಾಯಿ ಕೊಟ್ಟು ಕೊಂಡುಕೊಂಡು ಗೆಳೆಯನ ಜೊತೆ ಮನೆಯತ್ತ ಹೆಜ್ಜೆ ಹಾಕಿದ್ದೆ.
 
ಯಾಕೋ ಆ ಮೈಸೂರು ಸ್ಯಾಂಡಲ್ ಮಿಲೇನಿಯಮ್ ಸೋಪು ನೋಡಿದಾಗಿನಿಂದ ಮತ್ತು ಒಂದು ಬೆನ್ನುಜ್ಜುವ ಬ್ರಶ್ ಕೊಂಡುಕೊಂಡಾಗಿನಿಂದ ಏನೇನೋ ನೆನಪುಗಳು ಸುಮ್ಮನೆ ನನ್ನನ್ನು ಕಾಡಲು ಶುರುಮಾಡಿಬಿಟ್ಟಿವೆ. ಮನಸ್ಸು ಚಿಕ್ಕ ಹುಡುಗನಾಗಿದ್ದಾಗಲಿಂದ ಹಿಡಿದು ಇಲ್ಲಿಯವರೆಗೆ ಕಂಡ ಅಷ್ಟು ದೇಹವನ್ನು ಶುಚಿಯಾಗಿಡಲು ಬಳಸಿದ ದಿನ ಬಳಕೆಯ ವಸ್ತುಗಳ ಲಿಸ್ಟ್ ತಯಾರಿಸುತ್ತಲೇ ಇದೆ. ಆ ವಸ್ತುಗಳನ್ನು ಬಾಲ್ಯದಿಂದಲೇ ಶುರು ಮಾಡುವೆ ಕೇಳಿ. ಚಿಕ್ಕ ಹುಡುಗರಿದ್ದಾಗ ನಮ್ಮ ಊರಿನಲ್ಲಿ ಹಲ್ಲುಜ್ಜಲು ಅಂಗಡಿಯಲ್ಲಿ ದೊರೆಯುತ್ತಿದ್ದುದು ಕೋಲ್ಗೇಟ್ ಟೂತ್ ಪೌಡರ್ ಮತ್ತು ನಂಜನಗೂಡು ಹಲ್ಲುಪುಡಿ, ಆ ದಿನಗಳಲ್ಲಿ ಅಪ್ಪ ಹೊಚ್ಚ ಹೊಸ ಕೋಲ್ಗೇಟ್ ಟೂತ್ ಪೌಡರ್ ತಂದು ಸಣ್ಣ ಮೊಳೆಯಿಂದ ಆ ಟೂತ್ ಪೌಡರ್ ನ ಡಬ್ಬಕ್ಕೆ ತೂತು ಮಾಡಿದರೆ ಆಸೆಯಂದ ಆ ಪೌಡರ್ ಗಾಗಿ ಎಡಗೈ ಒಡ್ಡಿದ್ದರೆ ಬಲಗೈ ಒಂಚೂರು ಎಂಜಲು ಮಾಡಿಕೊಂಡು ಆ ಪೌಂಡರ್ ಒಳಗೆ ಕೈ ಅದ್ದಿ ಹಲ್ಲುಜ್ಜಲು ರೆಡಿಯಾಗಿರುತ್ತಿತ್ತು. ಒಂತರಾ ಸಿಹಿ ಇರುವ ಆ ಪೌಡರ್ ಅನ್ನು ಮೃದು ಬೆರಳುಗಳಿಂದ ಹಲ್ಲುಗಳಿಗೆ ಉಜ್ಜಿಕೊಂಡರೆ ಒಂತರಾ ಮಜಾ ಇರುತ್ತಿತ್ತು.
 
ಹಲ್ಲುಗಳು ಕ್ಲೀನಾದ ನಂತರ ಬರಿಗೈಲಿ ಹಲ್ಲುಜ್ಜಿದ್ದರೆ ಹಲ್ಲು ಮತ್ತು ಬೆರಳಿನ ನಡುವಿನ ಘರ್ಷಣೆಯಿಂದ ಹಿತವಾದ ಶಬ್ದ ಹೊರಡುತ್ತಿತ್ತು. ಒಂದು ಸಾರಿ ಕೊಟ್ಟ ಪೌಡರ್ ಅನ್ನು ಖಾಲಿ ಮಾಡಿ ಮತ್ತೊಮ್ಮೆ ನೀಡುವಂತೆ ಕೈ ಒಡ್ಡುವಾಗ "ಸಾಕು ಕಾಣಪ್ಪ. ಹೋಗಿ ಮೊಕ ತೊಳಕ್ಕೋ" ಎಂದು ಅಪ್ಪ ಹೇಳಿದರೆ "ನಂಗೆ ಇನ್ನೂ ಬೇಕು" ಎಂದು ಹಠ ಹಿಡಿಯುತ್ತಿದ್ದ ದಿನಗಳು ಮಧುರ. ನಮ್ಮೂರಿನಲ್ಲೇನೋ ಟೂತ್ ಪೌಡರ್ ಸಿಗುತ್ತಿತ್ತು. ಆದರೆ ಅಜ್ಜಿ ಊರಿಗೆ ಹೋದರೆ ಇದ್ದಿಲು ಮತ್ತು ಉಪ್ಪನ್ನು ಉಪಯೋಗಿಸಬೇಕಿತ್ತು. ಒಂದಷ್ಟು ಇದ್ದಿಲನ್ನು ನುಣ್ಣಗೆ ಅರೆದು ಪುಡಿ ಮಾಡಿ ಉಪ್ಪು ಬೆರೆಸಿ ಟೂತ್ ಪೌಡರ್ ತರಹ ಅಜ್ಜಿ ಉಪಯೋಗಿಸುತ್ತಿದ್ದದ್ದನ್ನೇ ನಾವು ಸಹ ಫೋಲೋ ಮಾಡುತ್ತಿದ್ದೆವು. 🙂 ಇನ್ನೊಂಚೂರು ದೊಡ್ಡವರಾಗುವ ವೇಳೆಗೆ ಇದ್ದಿಲಿನ ಪುಡಿ ಮತ್ತು ಟೂತ್ ಪೌಡರ್ ಜಾಗಗಳಲ್ಲಿ ಟೂತ್ ಪೇಸ್ಟ್ ಮತ್ತು ಟೂತ್ ಬ್ರಶ್ ಗಳು ಬಂದಿದ್ದವು. ಟೂತ್ ಬ್ರಶ್ ಗಳು ಬರುವುದಕ್ಕಿಂತ ಮುಂಚೆ ನಿಮಗೆಲ್ಲಾ ತಿಳಿದಿರುವಂತೆ ಬೇವಿನ ಕಡ್ಡಿಗಳು ನಮ್ಮ ಹಲ್ಲುಜ್ಜುವ ಬ್ರಶ್ ಗಳಾಗಿರುತ್ತಿದ್ದವು. ಯಾವುದಾದರು ನೆಂಟರ ಮನೆಗೆ ಹೋದರೆ ಬ್ರಶ್ ಜೊತೆಯಲ್ಲಿಲ್ಲದ ಕಾರಣ ಬೇವಿನ ಕಡ್ಡಿಯನ್ನೇ ಬ್ರಶ್ ತರಹ ಮಾಡಿಕೊಂಡು ಒಂದಷ್ಟು ಹೊತ್ತು ಬೇವಿನಕಡ್ಡಿಯಲ್ಲಿ ಹಲ್ಲುಜ್ಜಿ ಆಮೇಲೆ ಅದೇ ಬೇವಿನ ಕಡ್ಡಿಗೆ ಪೇಸ್ಟ್ ಹಾಕಿ ಹಲ್ಲುಜ್ಜಿಕೊಂಡ ದಿನಗಳ ನೆನೆಸಿಕೊಂಡರೆ ನಗು ಬರುತ್ತದೆ.
 
ಹಲ್ಲುಜ್ಜುವ ಕಾರ್ಯಕ್ರಮ ಆಯಿತು ಈಗ ಮುಖ ತೊಳೆಯುವ ಸ್ನಾನ ಮಾಡುವ ವಸ್ತುಗಳ ಬಗ್ಗೆ ಒಂಚೂರು ಮಾತು. "ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿಗೆ ಆರೋಗ್ಯ" ಎಂಬ ಸಾಲನ್ನು ನಮ್ಮ ಕಾಲದ ಯಾರು ಸಹ ಮರೆತಿರಲಾರರು. ಆ ದಿನಗಳಲ್ಲಿ ನಮ್ಮೂರಿನ ಅಂಗಡಿಗಳಲ್ಲಿ ಸಿಗುತ್ತಿದ್ದ ಸಾಬೂನುಗಳೆಂದರೆ ಲೈಫ್ ಬಾಯ್, ಹಮಾಮ್, ನಿಂಬೆ ಸ್ವಾದದ ಲಿರಿಲ್, ರೆಕ್ಸೋನ, ಆಮೇಲಾಮೇಲೆ ಬಂದ ಸೋಪುಗಳೆಂದರೆ ಮೆಡಿಮಿಕ್ಸ್, ಮಾರ್ಗೋ, ಲಕ್ಸ್, ಮೈಸೂರ್ ಸ್ಯಾಂಡಲ್, ಪಿಯರ್ಸ್ ಎನ್ನಬಹುದು. ನಮ್ಮಪ್ಪ ರೆಕ್ಸೋನ ಸೋಪನ್ನು ತರುತ್ತಿತ್ತು. ಒಂತರಾ ಅದರ ಸುವಾಸನೆ ಚೆನ್ನಾಗಿತ್ತು. ಆದರೆ ಅಜ್ಜಿ ಊರಿಗೆ ಹೋದರೆ ಲೈಫ್ ಬಾಯ್ ನ ಮೊರೆ ಹೋಗಬೇಕಿತ್ತು. ನಾವು ತುಂಬಾ ಚಿಕ್ಕ ಹುಡುಗರಾಗಿದ್ದಾಗ ನಮ್ಮ ಮನೆಯ ಬಚ್ಚಲು ಮನೆಯ ಒಳಗೆ ಬಟ್ಟೆ ಸೋಪಿನ ಬಾಕ್ಸ್, ಮೈ ಸೋಪಿನ ಬಾಕ್ಸ್ ಜೊತೆ ಇನ್ನೊಂದು ವಿಶೇಷವಾದ ವಸ್ತು ಕಾಣಸಿಗುತ್ತಿತ್ತು. ಅದುವೇ ಬೆನ್ನುಜ್ಜೋ ಕಲ್ಲು. ಆ ಕಲ್ಲಿನಿಂದ ಸ್ನಾನ ಮಾಡುವಾಗ ಮೈಯನ್ನೆಲ್ಲಾ ಉಜ್ಜಿಕೊಂಡು ಕೊಳೆ ತೆಗೆದರೂ ಅದಕ್ಕೆ ಬೆನ್ನುಜ್ಜೋ ಕಲ್ಲು ಅಂತ ಯಾಕೆ ಹೆಸರು ಬಂದಿದೆಯೋ ತಿಳಿಯದು. ಚೌಕಾಕಾರದ ಅಥವಾ ವೃತ್ತಾಕಾರದ ಸಣ್ಣ ಅಂಗೈ ಅಗಲದ ಕಲ್ಲುಗಳು ಮೈ ಮೇಲಿನ ಕೊಳೆ ತೆಗೆಯಲು ಉಪಯೋಗಿಸುತ್ತಿದ್ದ ದಿನಗಳಲ್ಲಿ ಸೋಪನ್ನು ಯಾರು ಹೆಚ್ಚು ಉಪಯೋಗಿಸುತ್ತಿರಲಿಲ್ಲ.
 
ಒಮ್ಮೆ ಎಷ್ಟೋ ದಿನ ಹಾಸ್ಟೆಲ್ ನಲ್ಲಿದ್ದು  ಊರಿಗೆ ಹೋದಾಗ ನೀರು ಕಾಯಿಸಿ ಸ್ನಾನ ಮಾಡುವಾಗ ಬೆನ್ನುಜ್ಜಿಕೊಡಲೆಂದು ಬಂದ ದೊಡ್ಡಮ್ಮ. ಬೆನ್ನಿನ ಮೇಲಿನ ಕೊಳೆ ನೋಡಿ "ಹೆಣ್ ಚಂದ ಕಣ್ ಕುರುಡು ಅಂತಾರಲ್ಲ ಹಾಗಾಯಿತು ಮಗ ನಿನ್ನ ಕತೆ. ಅಲ್ಲ ಯಾರ್ ಕೈಲಾದರು ಬೆನ್ನು ಉಜ್ಜಿಸಿಕೊಳ್ಳೋದಲ್ಲವೇ? ಕೊಳೆ ನೋಡು ಎಷ್ಟದೆ" ಎಂದು ಬೈದ ದಿನ ಮರೆಯಲಾರೆ. ಅವತ್ತು ನನ್ನ ಬೆನ್ನ ಮೇಲಿನ ಕೊಳೆ ತೆಗೆಯಲು ದೊಡ್ಡಮ್ಮ ಉಪಯೋಗಿಸಿದ್ದು ಅದೇ ಬೆನ್ನುಜ್ಜುವ ಕಲ್ಲು. ಕಲ್ಲಿನ ಜಾಗದಲ್ಲಿ ಆಗಾಗ ಮೈ ಉಜ್ಜಲೆಂದು ಹೀರೇಕಾಯಿ ಬ್ರಶ್ ಉಪಯೋಗಿಸಿದ್ದೂ ಇದೆ. ಕ್ರಮೇಣ ಕಾಲ ಬದಲಾದಂತೆ ಬೆನ್ನುಜ್ಜುವ ಕಲ್ಲಿನ ಬದಲಿಗೆ ವಿಧ ವಿಧದ ಮೈ ಉಜ್ಜುವ ಬ್ರಶ್ ಗಳು ಬಂದಿವೆ. ಈಗಿನ ಕಾಲದಲ್ಲಿ ಬೆನ್ನುಜ್ಜುವ ಬ್ರಶ್ ಸಹ ಸಿಗುತ್ತವೆ. ಯಾವ ಬ್ರಶ್ ಗಳೇ ಬಂದರೂ ಕೊಳೆ ಹೋಗಲೆಂದು ಒರಟು ಒರಟಾಗಿ ಬೆನ್ನುಜ್ಜುವಾಗ "ಅವ್ವೋ ಮೆತ್ತಗೆ ಕಣವ್ವೋ" ಎಂದರೆ "ಮೆತ್ತಗೆ ಬೆನ್ನುಜ್ಜುದ್ರೆ ಕೊಳೆ ಹೋದದೆ ಮಗ. ಸುಮ್ನಿರು ಏನು ಆಗಲ್ದು" ಎಂಬ ಅವ್ವನ ಮಾತುಗಳು ಈಗ ಕೇಳಲು ಸಿಗುವುದಿಲ್ಲ. ಜೊತೆಗೆ "ನೀನು ಬೆನ್ನುಜ್ಜೋದು ಬೇಡ, ನನ್ನ ಕೊಳೆ ಹೋಗೋದು ಬೇಡ. ಹೋಗು" ಎಂಬ ಸಿಡುಕು ಸಹ ಮರೆಯಾಗಿ ಹೋಗಿದೆ.
 
ಮುಖ ತೊಳೆದಿದ್ದಾಯಿತು, ಸ್ನಾನ ಮಾಡಿದ್ದೂ ಆಯಿತು. ಬನ್ನಿ ತಲೆಗೆ ಎಣ್ಣೆ ಹಚ್ಚಿ ಒಂದೇ ಒಂಚೂರು ಪೌಡರ್ ಬಳಿದುಕೊಳ್ಳುವ ಕತೆ ಹೇಳ್ತೀನಿ. ಆಗಿನ ಕಾಲದಲ್ಲಿ ತಲೆಗೆ ಹಚ್ಚೋಕೆ ಹರಳೆಣ್ಣೆ ಸಿಗ್ತಾ ಇತ್ತು. ಈಗಲೂ ಸಿಗುತ್ತೆ. ಆದರೆ ಆ ಕ್ವಾಲಿಟಿ ಎಣ್ಣೆ ಸಿಗಲ್ಲ ಬಿಡಿ. ಎಣ್ಣೆಯಲ್ಲ ಸರ್ ಹರಳೆಣ್ಣೆ 😛 ನಮ್ಮ ಪಕ್ಕದ ಮನೆಯ ನಿಂಗಮ್ಮ ಮತ್ತು ಚಿಕ್ಕಣ್ಣ ದಂಪತಿಗಳು ಹರಳಿನ ಬೀಜಗಳನ್ನು ಚಚ್ಚಿ ದೊಡ್ಡ ಒಲೆಯ ಮೇಲೆ ಪಾತ್ರೆಯೊಂದರಲ್ಲಿ ಆ ಚಚ್ಚಿದ ಬೀಜಗಳನ್ನು ನೀರು ಹಾಕಿ (?) ಬೇಯಿಸಿ ಬಿಸಿ ಬಿಸಿ ನೀರಿನಲ್ಲಿ ತೇಲುವ ಎಣ್ಣೆಯನ್ನು ಸೌಟ್ ಒಂದರಲ್ಲಿ ತೆಗೆದು ಒಂದೆಡೆ ಕ್ರೋಢೀಕರಿಸುವಾಗ ಬರುತ್ತಿದ್ದ ಹರಳೆಣ್ಣೆಯ ಘಮ ಈಗ ಖಂಡಿತಾ ಸಿಗಲಾರದು. ಹರಳೆಣ್ಣೆ ಬಿಟ್ಟರೆ ಹಸಿರು ಬಣ್ಣದ ಟಿನ್ನಿನ ಸಣ್ಣ ಡಬ್ಬಿಯಲ್ಲಿ ಅಥವಾ ಪ್ಲಾಸ್ಟಿಕ್ ನ ಬಾಟಲುಗಳಲ್ಲಿ ಸಿಗುತ್ತಿದ್ದ ಪ್ಯಾರಾಚೂಟ್ ನ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಲು ಗಟ್ಟಿಗಟ್ಟಿದ ತೆಂಗಿನ ಎಣ್ಣೆಯನ್ನು ಬಿಸಿನಲ್ಲಿಟ್ಟು ಕರಗಿಸಿ ತಲೆಗೆ ಹಚ್ಚಿಕೊಳ್ಳಬೇಕಾಗಿತ್ತು. ಇನ್ನು ಮುಖಕ್ಕೆ ಕೆಲವರು ಫೇರ್ ಅಂಡ್ ಲವ್ಲೀ ಮತ್ತು ಪಾಂಡ್ಸ್ ಪೌಡರ್ ಗಳನ್ನು ಹಚ್ಚಿಕೊಳ್ಳುತ್ತಿದ್ದರಾದರೂ ಅದು ಹುಡುಗಿಯರ ಡಿಪಾರ್ಟ್ ಮೆಂಟ್ ಎಂದು ಅವುಗಳ ಸಹವಾಸಕ್ಕೆ ನಾನು ಹೋಗಿರಲಿಲ್ಲ. ಹೆಚ್ಚೆಂದರೆ ಚಳಿಗಾಲದಲ್ಲಿ ಬಿರಿದ ತುಟಿಗಳಿಗೆ ಹಾಗು ಮುಖಕ್ಕೆ ವ್ಯಾಸಲಿನ್ ಹಚ್ಚಿಕೊಂಡ ದಿನಗಳಿದ್ದವು ಎನ್ನಬಹುದು. ಹೈಸ್ಕೂಲು ಮುಗಿಸಿ ಕಾಲೇಜಿಗೆ ಹೋದ ಮೇಲೆ "ಫೇರ್ ಅಂಡ್ ಲವ್ಲೀ ಕಂಪನಿ ಶುರು ಆದಾಗಿಂದ ಹಚ್ಚಿಕೊಳ್ತಾ ಇದ್ದೀನಿ. ಬರೀ ಮೂಗು ಕೆಂಪಾಗಿದೆಯಾ ಹೊರತು ಮುಖ ಒರಿಜಿನಲ್ ಕಲರ್ ಹೇಗಿತ್ತೋ ಈಗಲೂ ಹಾಗೆಯೋ ಇದೆ." ಎಂದು ನಗುತ್ತಾ ಪಾಠ ಮಾಡುತ್ತಿದ್ದ ಗುರುಗಳೊಬ್ಬರ ಮಾತು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತದೆ.
 
ಕೊನೆಯದಾಗಿ ಶ್ಯಾಂಪೂಗಳ ಬಗ್ಗೆ ಏನನ್ನೂ ಹೇಳಲಿಲ್ಲ ಅಂದರೆ ಕತೆ ಪೂರ್ಣ ಆಗಲ್ಲ. ಚಿಕ್ಕ ಹುಡುಗರಾಗಿದ್ದಾಗ ಕೆಲವರು ಮೊಟ್ಟೆಗಳನ್ನು ಒಡೆದು ತಲೆಗೆ ಶ್ಯಾಂಪುಗಳ ರೀತಿ ಹಚ್ಚಿಕೊಂಡಿದ್ದನ್ನು ನೋಡಿದ್ದೇನೆ. ತಿನ್ನೋಕೆ ಮೊಟ್ಟೆ ಸಿಗ್ತಾ ಇರಲಿಲ್ಲ ಇನ್ನು ತಲೆಗೆ ಹಚ್ಚಿಕೊಳ್ಳಲು ಸಿಗುತ್ತಿತ್ತಾ ಅಂದುಕೊಳ್ಳಬೇಡಿ. 🙂 ಕೆಲವರು ಆ ರೀತಿ ಕ್ರೇಜಿತನ ಮಾಡ್ತಾ ಇದ್ರು. ಇನ್ನೂ ಕೆಲವರು ದಂಟಿನ ಸೊಪ್ಪನ್ನು ಅರೆದೋ ಇಲ್ಲ ಬಿಲ್ವ ಹಣ್ಣಿನ ತಿರುಳನ್ನೋ ತಲೆಗೆ ಶ್ಯಾಂಪೂ ತರಹ ಹಚ್ಚಿಕೊಂಡಿದ್ದನ್ನೂ ಸಹ ನೋಡಿದ್ದೇನೆ. ಮೈ ಸೋಪನ್ನೇನಾದರು ತಲೆಗೆ ಹಚ್ಚಿಕೊಂಡರೆ ಕೂದಲು ಒಂತರಾ ಒರಟು ಒರಟಾಗೋದನ್ನು ತಪ್ಪಿಸಲು ಬಟ್ಟೆ ಒಗೆಯೋ ಸೋಪನ್ನು ಅಪರೂಪಕ್ಕೆ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದ ದಿನಗಳೂ ಸಹ ನೆನಪಿವೆ! ನಂತರದ ದಿನಗಳಲ್ಲಿ ಮೈ ಸೋಪನ್ನು ಬಟ್ಟೆ ಸೋಪನ್ನು ತಲೆಗೆ ಹಚ್ಚುವುದನ್ನು ತಪ್ಪಿಸಲು ಸಣ್ಣ ಸಣ್ಣ ಪಾಕೆಟ್ ಗಳಲ್ಲಿ ಶ್ಯಾಂಪು ಗಳು ಹಳ್ಳಿಗಳ ಸಣ್ಣ ಅಂಗಡಿಗಳಲ್ಲೂ ಐವತ್ತು ಪೈಸೆಗೆ ಸಿಗುವಂತಾದದ್ದು ಮಾರ್ಕೆಟಿಂಗ್ ವಲಯದಲ್ಲಿ ಒಂದು ಇತಿಹಾಸ. ಇತಿಹಾಸ ಯಾಕೆಂದರೆ ಸಣ್ಣ ಸ್ಯಾಚೆಟ್ ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಹೆಚ್ಚು ಕಡೆ ಸಿಗುವಂತೆ ಮಾಡುವುದರಿಂದ ಆ ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ ಕಂಪನಿಯ ಮಾಲೀಕರಿಗೆ ಹೆಚ್ಚು ಹೆಚ್ಚು ಲಾಭ ತಂದುಕೊಡುತ್ತವೆ.
 
ಇದೇ ರೀತಿಯ ಮಾರ್ಕೆಟಿಂಗ್ ಪ್ಲಾನ್ ಗಳನ್ನು ಇತರ ವಸ್ತುಗಳ ಮಾರಾಟಕ್ಕೂ ಉಪಯೋಗಿಸಿದ ಕಾರಣ ಇವತ್ತು ಸಣ್ಣ ಹಳ್ಳಿಗಳಲ್ಲೂ ಏನೆಲ್ಲಾ ದೊರೆಯುತ್ತವೆ ಅಲ್ಲವೇ? ಸಣ್ಣ ಸಣ್ಣ ಸೋಪು ಶ್ಯಾಂಪುವಿನಂತಹ ವಸ್ತುಗಳು ಸಣ್ಣ ಹಳ್ಳಿಗಳಲ್ಲೂ ಈ ದಿನಗಳಲ್ಲಿ ದೊರೆಯುತ್ತಿರುವಾಗ 720 ರೂಪಾಯಿಯ ನಮ್ಮಂತವರ ಕೈಗೆಟುಕದ ಮೈಸೂರ್ ಸ್ಯಾಂಡಲ್ ಮಿಲೇನಿಯಮ್ ಸೋಪಿನ ದೆಸೆಯಿಂದ ಮನಸ್ಸು ಎಲ್ಲೆಲ್ಲಿಗೋ ಹೊರಳಿ ಹೀಗೆಲ್ಲಾ ಬರೆಸಿಬಿಟ್ಟಿತು. ಇವತ್ತು ಬರೆದ ಹಾಗೆ ಬಾಲ್ಯದ ದಿನಗಳನ್ನೆಲ್ಲಾ ಕುರಿತು ಬರೆಯುತ್ತಾ ಹೋದರೆ ಏನೆಲ್ಲಾ ಬರೆಯಬಹುದು ಅನಿಸುತ್ತೆ. ಹೀಗೆ ನಾನು ಹಳೆಯ ದಿನಗಳನ್ನೆಲ್ಲಾ ನೆನಪಿಸುತ್ತಾ ಹೋದರೆ ನೀವು ಸಿಕ್ಕಾಪಟ್ಟೆ ಎಮೋಷನಲ್ ಆಗಿ ಬಿಡ್ತೀರಿ 😛 ನೀವು ಎಮೋಷನಲ್ ಆಗಿ ಆ ಕಾಲವೇ ಬೇರೆ ಬಿಡಿ ಎನ್ನುಕೊಳ್ಳುತ್ತಾ ಒಂದು ನಿಟ್ಟುಸಿರು ಬಿಡುವ ಮೊದಲು ನಿಮ್ಮ ಅನುಮತಿ ಪಡೆದು ನನ್ನ ಈ ವಾರದ ಬರಹವನ್ನು ಇಲ್ಲಿಗೆ ನಿಲ್ಲಿಸುತ್ತೇನೆ.
 
ಮತ್ತೆ ಸಿಗೋಣ.. ಅಲ್ಲಿಯವರೆಗೂ..
"ನಿರ್ಮಾ ನಿರ್ಮಾ ಹಾಲಿನಂತ ಬಿಳಿಪು, ಬಟ್ಟೆಗಳಿಗೆ ಹೊಳಪು, ಎಲ್ಲಾರ ಮೆಚ್ಚಿನ ನಿರ್ಮಾ" ಜಾಹೀರಾತು.. 🙂
ನಿಮ್ಮ ಪ್ರೀತಿಯ
ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

16 Comments
Oldest
Newest Most Voted
Inline Feedbacks
View all comments
kamalabelagur
kamalabelagur
10 years ago

 ಬಾಲ್ಯದ ದಿನಗಳನ್ನೆಲ್ಲಾ ಕುರಿತು ಬರೆಯುತ್ತಾ ಹೋದರೆ ಏನೆಲ್ಲಾ ಬರೆಯಬಹುದು ಅನಿಸುತ್ತೆ. ಹೀಗೆ ನಾನು ಹಳೆಯ ದಿನಗಳನ್ನೆಲ್ಲಾ ನೆನಪಿಸುತ್ತಾ ಹೋದರೆ ನೀವು ಸಿಕ್ಕಾಪಟ್ಟೆ ಎಮೋಷನಲ್ ಆಗಿ ಬಿಡ್ತೀರಿ .
"ನಿರ್ಮಾ ನಿರ್ಮಾ ಹಾಲಿನಂತ ಬಿಳಿಪು, ಬಟ್ಟೆಗಳಿಗೆ ಹೊಳಪು, ಎಲ್ಲಾರ ಮೆಚ್ಚಿನ ನಿರ್ಮಾ" ಜಾಹೀರಾತು..
"ಗಟ್ಟಿಯಾದ ಹಲ್ಲುಗಳಿಗಾಗಿ ಕೊಳ್ಳಿ ವಜ್ರದಂತಿ ವಜ್ರದಂತಿ ವಿಕೋ ವಜ್ರದಂತಿ ಟೂತ್ ಪೌಡರ್.
"ಥ್ಯಾಂಕ್ಸ್ ಬಾಲ್ಯದಾ ದಿನಗಳ ಪುಳಕಗಳಿಗಾಗಿ. 

sunitha.a
sunitha.a
10 years ago

nataraju, belive or nt was thinking of writing abt mysore sandel soap yesterday wen kriti said amma sanje aadruu u wil be fresh alva and ಆ ವಾಸನೆ ಬಂದ್ರೆ ಎಲ್ಲೇ ಇದ್ರೂ ನೀನು ಬಂದ್ಯೇನೋ ಅಂತ ನೋಡ್ತೀನಿ ಅಮ್ಮ andlu…………ene helu namma kaalaane chenda !!!!!!!!!!!!!and ur write up nijakku chenda…Loved it…

Prajwal Kumar
10 years ago

ಬೆಂಕಿ ಚೆಂಡು ಗುರುಗಳೇ !
ನಂದೆಲ್ಲಿಡ್ಲಿ ನಾರಾಯಣ ಅಂತ ಮಧ್ಯದಲ್ಲಿ ಒಂದು ಅಡ್ವಟೈಸ್ಮೆಂಟ್ 
 
'ವಜ್ರದಂತಿ ವಜ್ರದಂತಿ ವೀಕೋ ವಜ್ರದಂತಿ, ವೀಕೋ ಪೌಡರ್, ವೀಕೋ ಕ್ರೀಮ್;
ಆಯುರ್ವೇದಿಕ್ ನ ನ ನ….. ನ ನ ನ ಸಂಪೂರ್ಣ್ ಸ್ವದೇಸಿ;
ವೀಕೋ ಪೌಡರ್, ವೀಕೋ ಕ್ರೀಮ್;
ವೀಕೋ… ವಜ್ರದಂತಿ !
 
ಅದರ ರಾಗದಲ್ಲೇ ಹೇಳಿಕೊಳ್ಳಿ 🙂

sachin naik
sachin naik
10 years ago

Namma baalyavannu matte nenesikolluvante madidiri…

ಸುಮನ್
ಸುಮನ್
10 years ago

ಭಾಳ ಛಂದ ಬರೇದಿರಿ.. ಜೀವನದಾಗ ಕೇಲವೊಂದಿಷ್ಟು  ಸಂಗತಿಗಳಿರತಾವ  ಅವುಗಳ ಅನುಭವಗಳು ಭಾಳ ವಿಶೇಷ ಇರತಾವ. ಅಂಥಾ ಅನುಭೂತಿ ಮತ್ತ ಹೊಳ್ಳಿ ಸಿಗಂಗಿಲ್ಲಾ.  ಆದರ ಅವುಗಳ ನೆನಪುಗೊಳು ಭಾಳ ಹಿತಾ ತರತಾವ.. ಧನ್ಯವಾದಗಳು…

Rukmini Nagannavar
Rukmini Nagannavar
10 years ago

ನಮಗೆ ವಾರಕ್ಕೊಮ್ಮೆ ಬೇವಿನ ತಪ್ಪಲು ಕುದಿಸಿ ಅದರ ರಸವನ್ನು ಒಂದು ಗ್ಲಾಸ್ ತುಂಬಾ ಕುಡಿಯೋಕೆ ಕೊಡ್ತಿದ್ರು
ಕುಡಿಯುದಿಲ್ಲ ಅಂದಾಗ ಮೂಗು ಮುಚ್ಚಿ ಬಾಯೊಳಗೆ ಹಾಕ್ತಿದ್ರು… ಇದೊಂದು ಕಹಿ ನೆನಪು…

ಉಳಿದಂತೆ ಎಲ್ಲವೂ ನಮ್ಮವೇ ನೆನಪುಗಳು…

ಬಾಲ್ಯವನ್ನು ಮರುಕಳಿಸಿತು ಅಣ್ಣಾ

prashasti
10 years ago

ಚೆಂದ ಇದೆ ನಟ್ಟು ಭಾಯ್..
ನೀವು ಬರೆದಿದ್ದೆಲ್ಲಾ ನಮ್ಮ ಬಾಲ್ಯದಲ್ಲೂ ಬಂದಿದ್ದೆ.. ಆದ್ರೆ ತಲೆಗೆ ಬಟ್ಟೆ ಸೋಪಿನ ಕತೆ.. ಹೆ ಹೆ.. ಸಖತ್ತಾಗಿತ್ತು.
ನಮ್ಮ ಕಡೆ ಮತ್ತಿ ಸೊಪ್ಪಿನ ಗಂಪು ಅಂತ ಮಾಡ್ತಿದ್ರು. ಅದಿಲ್ಲ ಅಂದ್ರೆ ದಾಸವಾಳದ ಸೊಪ್ಪನ್ನು ನೆನೆಸಿ ಅದೇ ಶಾಂಪೂ.
ಸೀಗೆಕಾಯಿ, ಅಂಟವಾಳಕಾಯಿಗಳೂ ಇದ್ದವು..

ಒಟ್ಟಿನಲ್ಲಿ ಆ ಕಾಲವೇ ಒಂತರಾ ಚಂದ ಅಲ್ಲವೇ ?

parthasarathy
10 years ago

ನಾನು ಚಿಕ್ಕ ಹುಡುಗನಾಗಿದ್ದಾಗ ನಂಜನಗೂಡು ಹಲ್ಲುಪುಡಿಯೆ ಜಾಸ್ತಿ ಇದ್ದದ್ದು,  ಕೆಲವು ಸಾರಿ ಹಲ್ಲುಪುಡಿಯ ಪೊಟ್ಟಣ ತ್ರಿಬುಜಾಕಾರದಲ್ಲಿದ್ದದ್ದು ನೆನಪಿದೆ (ಕುದುರೆ ಪಟಾಕಿಯ ತರ 🙂 )  ಅದರ ಹೆಸರು ಥೈಮೋನಿಯಮ್ ಎಂದು ಇದ್ದಂತೆ ನೆನಪು , ಮರೆತಿದೆ ಮತ್ತೆ ಯಾರಿಗಾದರು ನೆನಪಿದ್ದರೆ ತಿಳಿಸಿ.
ಹಾಗೆ ಚಿಕ್ಕ ವಯಸಿನಲ್ಲಿ ನೋಡುತ್ತಿದ್ದ ಬೆಂಕಿ ಪೊಟ್ಟಣಗಳು ಕೆಲವು ಸಿಗರೇಟು ಪ್ಯಾಕ್ ಗಳು ಈಗೆಲ್ಲ ಕಾಣಿಸಲ್ಲ. 
ಬೆಂಕಿ ಪೊಟ್ಟಣ ಸಂಗ್ರಹಿಸಿ ಅದರಲ್ಲಿ  ಮನೆ ರಚಿಸಿ ಕಿಟಕಿ ಬಾಗಿಲು ಎಲ್ಲ ಇಟ್ಟು ಅದರೊಳಗೆ ತೊಟ್ಟಿಲು ಎಲ್ಲವನ್ನು ನೋಡಿದ್ದು ನೆನಪಿದೆ
ಹಾಗೆ  ಹತ್ತಿಪ್ಪತ್ತು ಸಿಗರೇಟ್ / ಬೆಂಕಿಪೊಟ್ಟಣದ ಖಾಲಿ ಪ್ಯಾಕ್ ಗಳನ್ನು ಸಾಲಿನಲ್ಲಿ,   ವೃತ್ತಾಕಾರವಾಗಿ ಜೋಡಿಸಿ ಒಂದು ತುದಿಯಲ್ಲಿ ’ಉಫ್ ’ ಎಂದು ಊದಿ ಅದನ್ನು ಬೀಳುಸುತ್ತಿದ್ದ ನೆನಪು ಹೀಗೆ ಸಾಗುತ್ತದೆ…..
ಸೋಪ್ ಎನ್ನುವಾಗ ನೆನಪಾಯಿತು ’ಜಯ್ ’ ಎನ್ನುವ ಸೋಪು  ಕೆಂಪು ಬಣ್ಣದ ಆಕರ್ಷಕ ಪೇಪರಿನಲ್ಲಿ ಪ್ಯಾಕ್ ಆಗಿ ಬರುತ್ತಿದ್ದು ಆ ಪ್ಯಾಕಿಂಗ್ ಪೇಪರಿಗಾಗಿ ಕೊಂಡುಕೊಳ್ಳುತ್ತಿದ್ದೆವು ………..
ಬರೆಯುತ್ತ ಹೋದರೆ ಪ್ರತಿಕ್ರಿಯೆ ನಿಮ್ಮ ಬರಹಕ್ಕಿಂತ ದೊಡ್ಡದಾಗಿ ಅಪಹಾಸ್ಯವಾದೀತು 🙂

ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
10 years ago

 
 
 
 
 
ನಟರಾಜು ಅವರೇ – ಮೈಸೂರು ಸ್ಯಾಂಡಲ್ ನಮ್  ಸರ್ಕಾರಿ  ಕಾರ್ಖಾನೆ ಉತ್ಪಾದನೆ -ನಮ್ ರೈತರ ಗಂಧದ ಗಿಡಗಳಿಂದ  ತಯಾರಾಗಿದ್ದು -ಮತ್ತು  ನಸ್ಟ ದಲ್ಲಿರುವ ಸಂಸ್ಥೆ ಉಳಿಸಬೇಕು  ಎಂದು  ಮೈಸೂರು ಸ್ಯಾಂಡಲ್ ಸೋಪನ್ನು  ೨೫ ರುಪಾಯೀ ಕೊಟ್ಟು ಉಪಯೋಗಿಸುತ್ತಿದ್ದೆ , ಆದರೆ  ಅದೊಮ್ಮೆ  ಯಾವದೇ ಸೋಪು ಹಾಕಿ ಉಜ್ಜಿದರೂ ಕಪ್ಪು ಕಪ್ಪೇ -ಬೆಳ್ಳಗಂತೂ  ಆಗೋಲ್ಲ ,ಇದರ ಬೆಲೆ ಜಾಸ್ತಿ ಆಯ್ತು ಅಂತ  ಮತ್ತು ( ಅದೇ ಬೆಲೆಯಲ್ಲಿ ಖಾಸಗಿ ಕಂಪೆನಿಗಳ  ೨- ೩ ಸುವಾಸಿತ ಸೋಪು ಕೊಳ್ಳಬಹದು ) ಉಳಿತಾಯ ಮನೋಭಾವ ಬಂದು ಈಗ ೧೦ ರೂಪಾಯೀಗಳ  ಸೋಪುಗಳನ್ನು ಉಪಯೋಗಿಸುತ್ತಿರುವೆ. ಬಹುತೇಕ ಜನರು ಲೈಫ್ ಬಾಯ್  ಉಪಯೋಗಿಸಿರುವರು ಅನ್ನಿಸುತ್ತಿದೆ. ..ಇನ್  ನಾವ್ ಹಳ್ಲ್ಲಕ್ಕೆ  ಸ್ನಾನ ಮಾಡಲು ಹೋಗುತ್ತಿದ್ದದು -ಅಲ್ಲಿಯೇ  ಸಿಗುವ ಯಾವ್ದೋ ಕಲ್ಲು  ಚೂರು ಉಪಯೋಗಿಸಿ ಬೆನ್ನು ಕೈ ಕಾಲು  ಉಜ್ಜುತ್ತಿದ್ದೆವು..  ನಮ್ಮ ಹಳ್ಳಿಯಲ್ಲಿ  ಶೌಚಕ್ಕೆ ಹೋದಾಗ -ಬರುವಾಗ  ಬೇವಿನ ಗಿಡದ ಎಲೆ ಕೊಂಬೆಯಿಂದ ಬ್ರಷ್ ತರಹ ಮಾಡಿ  ಹಲ್ಲು ಉಜ್ಜುತ್ತಿದ್ದೆವು , ಮನೆಗೆ ಬಂದ  ಮೇಲೆ  ಮಾಮೂಲಿ ಪೇಸ್ಟ್  ಆಮೇಲೆ – ದಾಬರ್ ದಂತ ಮಂಜನ್  ಪೌಡರ್ – ಅದಕ್ಕೂ ಮೊದಲು ಉಪ್ಪು ಬೆರೆಸಿದ ಇದ್ದಿಲ ಪುಡಿ … . 
ಯಾವ್ಯಾವ್ದೋ ಲೋಕಲ್  ಪೌಡರ್ ನ ಮುಖಕ್ಕೆ ಹಾಕುತ್ತಿದ್ದೆವು ..!
 
ಕೊಬ್ಬರಿ ಎಣ್ಣೆ ಮಾತ್ರ ಆಗಲೂ ಈಗಲೂ  ದಿನ ನಿತ್ಯ ತಲೆಗೆ  ಖಾಯಂ .. !!
ನಿಮ್ಮ ಈ ಬರಹ ಮತ್ತ  ಆ ಅನುಭವಗಳು ಬಹುತೇಕ ಎಲ್ಲರ ಜೀವನದಲ್ಲಿ ಆಗುವಂತವೆ ..
ಇದೊಂತರ ನಮ್ಮದೇ ಮನದಾಳದ ಬರಹ .. 
ಶುಭವಾಗಲಿ 
 
\।/ 
 
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು 

ಮಾಲತಿ ಎಸ್.
ಮಾಲತಿ ಎಸ್.
10 years ago

🙂 ಹಳೆ ನೆನಪುಗಳೆಲ್ಲ ಮಕ್ಕಳ ಜತೆ ಶೇರ್ ಮಾಡಲಿಕ್ಕೆ ,ನಾವು ಒಂದು ಕ್ಶಣ ಹಿಂದಕ್ಕೆ flashback mode ಗೆ ಹೋಗಿ ಒಂದು ಸಣ್ನ ಗೆ ನಕ್ಕು ಬಿಡೋದರಲ್ಲಿ ಮಜ ಆದರೆ we have to live with the times ಅಲ್ವಾ. ನನ್ನ ತಂಗಿ ಯು ಎಸ್ ಗೆ ಹೋಗೋ ಮುಂಚೆ ನನ್ನ ಬಳಿಯಲ್ಲಿರುವ 20 ಮೈಸುರು ಸ್ಯಾಂಡಲ್ ಸೋಪ್ ಒಯ್ದಿದಾಳೆ. ಮತ್ತೆ ನಿನ್ನೆ ಅಷ್ಟೆ  ದೂರದರ್ಶನದ ಹಳೇ ಸಿರಿಯಲ್ ಬಗ್ಗೆ ಮಕ್ಕಳ ಜತೆ ಶೇರ್ ಮಾಡಿದ್ದೆ.
Nicely written ಪುಟ್ಟಣ್ಣ. enjoyed
ಮಾಲತಿ ಎಸ್

Utham Danihalli
10 years ago

Natanna chenagidhe nimma lekana
Lekana odhi nan balyagallu nenapadavu

GAVISWAMY
10 years ago

nice recollection of sweet memories..enjoyed reading it..
thank you..

sharada.m
sharada.m
10 years ago

Nice article about soap,  tooth  cleaners , shampoo  etc written in a readable and enthusiastic way..
All the best Nataraju .s.m…

ಗಂಗಾಧರ ದಿವಟರ

ಮಿತ್ರ ನಟರಾಜ್
ಮತ್ತೊಮ್ಮೆ ಬಾಲ್ಯದಂಗಳಕೆ ಮನಸು ತೂರಿಸುವಂತೆ….

ಮೂಕ-ವಿಸ್ಮಿತನಾಗಿ ಅಲ್ಲಿಯೇ ಕಳೆದುಹೋಗಿದ್ದೆ….
ಮನಸಿಗೆ ಮುದ ನೀಡಿದೆ ನಿಮ್ಮ ಲೇಖನಿ…
ಅಭಿನಂದನೆಗಳು

Jim
10 years ago

ಚೆನ್ನಾಗಿದೆ..

mamatha keelar
mamatha keelar
10 years ago

ತುಂಬಾ ಚಂದದ ಬರಹ..ಹಾಗೆ ಸ್ಯಾಂಡಲ್ ಮಿಲೆನಿರ್ ಸೋಪ್ ಕೂಡ ಸಣ್ಣ ಪ್ಯಾಕೆಟ್ ಅಲ್ಲಿ ಬಂದು ಎಲ್ಲರ ಕೈಗೆಟಕುವಂತೆ ಆದ್ರೆ ಇನ್ನು ಚಂದ..:)

16
0
Would love your thoughts, please comment.x
()
x