ಹೆಂಡತಿಯೊಬ್ಬಳು ಮನೆಯೊಳಗಿದ್ದರೆ: ಉಪೇಂದ್ರ ಪ್ರಭು



’ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಅನ್ನೋ ರಾಜರತ್ನಂ ಅವರ ಸಾಲು ಭಾಗಶಃ ನನಗೂ ಅನ್ವಯಿಸುತ್ತದೆ. ಯಾಕೆ ಭಾಗಶಃ ಅಂತೀರಾ? ಆ ಸಾಲಿನ ’ಹೆಂಡ್ತಿ’ ಅನ್ನೋ ಪದ ರತ್ನಂ ಅವರಿಗೆ ಪ್ರಾಣ ಆಗಿರಬಹುದು ಆದ್ರೆ ನನಗಲ್ಲ. ಇರಲಿ ಬಿಡಿ. ಅವಕಾಶ ಸಿಕ್ಕಾಗೆಲ್ಲ (ಹೆಂಡತಿಯ ಗೈರು ಹಾಜರಿಯಲ್ಲಿ) ವಿದೇಶಿ ಹೆಂಡದ ಜತೆ ಕನ್ನಡ ಪದಗಳು ನನ್ನ ಸಂಗಾತಿಗಳಾಗುತ್ತವೆ. ಇಂದೂ ಆಗಿದ್ದು ಅದೇ. ಹೆಂಡತಿ ಮುಖ ಉಬ್ಬಿಸಿಕೊಂಡು ತವರುಮನೆ ಸೇರಿದ್ದ ಕಾರಣ ವ್ಹಿಸ್ಕಿ ಜತೆ ಮೈಸೂರು ಅನಂತಸ್ವಾಮಿಯವರ ’ಭಾವಸಂಗಮ’ ಆಸ್ವಾದಿಸುತ್ತಿದ್ದೆ. 

’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ

ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’

ಕವಿಯ (ಕೆ ಎಸ್ ನರಸಿಂಹಸ್ವಾಮಿ) ಮನದಾಳದ ಮಾತುಗಳು ಮೈಸೂರು ಅನಂತಸ್ವಾಮಿಯವರ ಹೃದಯದಾಳದಿಂದ ನವಿರಾಗಿ ಹೊರಹೊಮ್ಮಿವೆ.

ವ್ಹಾ! ಎಂಥಾ ಅರ್ಥಗರ್ಭಿತ ಸಾಲುಗಳು! ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು. ಬರೆದವರ ಭಾವನೆಗಳು ಏನಿದ್ದವೋ ನನಗೆ ಗೊತ್ತಿಲ್ಲ. ನನ್ನ ಪ್ರಕಾರ ನನ್ನ ನಿಜಜೀವನಕ್ಕೆ ತುಂಬಾ ಹತ್ತಿರವಾದ ಸಾಲುಗಳಿವು. 

ಈಗ ಮೊದಲನೆ ಪಂಕ್ತಿಯನ್ನೇ ತೆಗೆದುಕೊಳ್ಳೋಣ. ’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’.  ಮದುವೆ ಬೇಡ ಬೇಡ ಎಂದುಕೊಂಡರೂ ಮೂವತ್ತು ತುಂಬಿದಾಗ ’ಎಲ್ಲರೂ ಆಗಿದ್ದಾರೆ, ನಾನೂ ಯಾಕಾಗಬಾರದು’ ಎಂಬಲ್ಲಿಂದ ಪ್ರಾರಂಭವಾಗಿ ’ನಾನೂ ಆಗಲೇಬೇಕು’ ಎಂಬ ಪರಮಾವಧಿಯನ್ನು ತಲುಪಿ, ಹೆತ್ತವರು ’ಏನೋ ಅವಸರ, ನಿನ್ನ ತಂಗಿ ಬೆಳೆದು ನಿಂತಿದ್ದಾಳೆ, ಅವಳದ್ದು ಮುಗಿಯಲಿ, ಆಮೇಲೆ ಆಗುವೆಯಂತೆ’ ಅಂದಾಗ ಎರಡು ದಿನ ಮಾತು ಬಿಟ್ಟು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದ ಫಲವಾಗಿ ಒಂದು ತಿಂಗಳಲ್ಲಿ ಚಂದುಳ್ಳಿ ಚೆಲುವೆಗೆ ತಾಳಿ ಕಟ್ಟುವಲ್ಲಿ ಮುಕ್ತಾಯಗೊಂಡಿತ್ತು. ಆಗ ನಾನು ಈ ಹಾಡು ಕೇಳಿದ್ದಲ್ಲಿ  ಯಾವ ಅರ್ಥ ಹುಡುಕುತ್ತಿದ್ದೆನೋ ಗೊತ್ತಿಲ್ಲ. ಹುಡುಕುವ ಪ್ರಯತ್ನ ಮಾಡುತ್ತಿದ್ದೆನೋ ಇಲ್ಲವೋ ಅದೂ ಗೊತ್ತಿಲ್ಲ. ’ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ, ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ’ ಅನ್ನೋ ಥರ ಇತ್ತು. ನಮ್ಮ ವಿನೂತನ ದಾಂಪತ್ಯದ ನವ ಮಾಸ ಹೇಗೆ ಕಳೆಯಿತೋ ಗೊತ್ತಾಗಲಿಲ್ಲ(’ನವ ಮಾಸ’ಕ್ಕೆ ಒಂಭತ್ತು ತಿಂಗಳು ಎಂದು ತಪ್ಪರ್ಥ ಕಲ್ಪಿಸಬೇಡಿ. ಹೊಸ ತಿಂಗಳು ಅಷ್ಟೆ) ಹೀಗೇ ಎರಡನೆ ತಿಂಗಳಲ್ಲಿ ಯಾರದೋ ಮದುವೆಯಲ್ಲಿ ಯಾರೋ ಹಾಕಿದ ನೆಕ್ಲೆಸ್ ನೋಡಿ ’ನನಗೂ ಅಂಥದ್ದೇ ಒಂದು ಬೇಕೂ ರೀ…’ ಎಂದು ರಾಗ ಎಳೆದ ನನ್ನ ಶಾರದೆಗೆ ’ಈಗಾಗ್ಲೇ ನಿನ್ನ ಹತ್ತಿರ ಆ ಮಣ ಭಾರದ ನೆಕ್ಲೆಸ್ ಇದೆಯಲ್ಲೇ..’ ಅಂದದ್ದೇ ಅವಳ ಪ್ರಕಾರ ನಾನು ಎಸಗಿದ ಮೊದಲ ತಪ್ಪು. ನಾನು ಮದುವೆಯಾಗಬೇಕೆಂದು ನಡೆಸಿದ ಅಸಹಕಾರ ಚಳುವಳಿಗಿಂತ ಉಗ್ರವಾದ ’ಮಾಡು ಇಲ್ಲವೇ ಮಡಿ’ ಚಳುವಳಿ ಅವಳು ಆರಂಭಿಸಿದಾಗ ಭಯಭೀತನಾಗಿದ್ದು ನಿಜ.

ಕಾರಣ – ಅವಳು ಉಪವಾಸವಿದ್ದಳೋ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ಬೇಯಿಸಿ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಳು. ಮನೆಯಿಂದ ದೂರವಿದ್ದುದರಿಂದ ಅಮ್ಮನಿಂದ ಅಡುಗೆ ಮಾಡಿಸಿಕೊಳ್ಳುವ ಭಾಗ್ಯವೂ ಇಲ್ಲ. ಎರಡು ದಿನಗಳೊಳಗೆ ದಂಪತಿಗಳಲ್ಲಿ ’ದಂ’ ಕಳೆದುಕೊಂಡ ’ಪತಿ’ ನಾನಾಗಿದ್ದೆ. ಅವಳು ಗೆದ್ದಳು.  ನಾನು ಸೋಲಲ್ಲಿ ಗೆಲುವನ್ನು ಹುಡುಕತೊಡಗಿದೆ. ಹೀಗೆ ಶುರುವಾದ ’ಮಾಡು ಇಲ್ಲವೇ ಮಡಿ’ ಒಂದು ವರ್ಷದೊಳಗೆ ನಾನು ಮದುವೆಗೆ ಮುಂಚೆ ಕೂಡಿಟ್ಟಿದ್ದ ಹಣದಲ್ಲಿ ಸಾಕಷ್ಟನ್ನು ನುಂಗಿ ಹಾಕಿದೆ. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ’ಕೋಟಿ’ ರೂಪಾಯಿ ಆಗಿರದೇ ಇದ್ದರೂ ಸುಮಾರು ಒಂದೂವರೆ ಲಕ್ಷದಷ್ಟು ಈಗಾಗಲೇ ಕೈ ಬಿಟ್ಟಿದೆ. ಸಧ್ಯಕ್ಕೆ ಇನ್ನೊಂದು ಹತ್ತು ಹೊಂದಿಸಬೇಕಾದ ಅತ್ಯಮೂಲ್ಯ ಸಂದರ್ಭ  ಒದಗಿ ಬಂದಿದೆ.  ಕಾರಣ ಇಷ್ಟೆ. ನನ್ನ ಹಳೆಯ ಮಾರುತಿ ವ್ಯಾನ್ ಅವಳ ಘನತೆಗೆ ಕುಂದಾಗಿ, ಹೋಂಡಾ ಸಿಟಿಯ ಮೇಲೆ ಅವಳ ಕಣ್ಣು ಬಿದ್ದು, ಒಂದು ತಿಂಗಳ ನೋಟೀಸು ಕೊಟ್ಟು ’ಅಲ್ಲಿಹುದೆನ್ನ ತವರೂರು’ ಎಂದು ಒಂದು ವಾರದ ಹಿಂದೆ ತನ್ನ ತವರೂರಿಗೆ ನಡೆದುಬಿಟ್ಟಿದ್ದಾಳೆ, ಯಾವ ಬಳೆಗಾರನನ್ನೂ ಕಾಯದೆ. (ಇತ್ತೀಚೆಗೆ ಇದನ್ನೇ ತನ್ನ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದ್ದಾಳೆ. ಅದಕ್ಕೇ ’ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿಲ್ಲದ ಕೋಪ’ ಎಂಬ ಸಾಲುಗಳು ನನಗಾಗಿಯೇ ಅಥವಾ ನನ್ನಂಥಾ ಅದೆಷ್ಟೋ ಬಡಪಾಯಿಗಳಿಗಾಗಿಯೇ ಬರೆದಿರಬೇಕು. ಇದರ ಬಗ್ಗೆ ಹೆಚ್ಚಿನ ಸಮಜಾಯಿಷಿ ಇನ್ನೊಮ್ಮೆ ಕೊಡುತ್ತೇನೆ). ಇದೇ ರೀತಿ ಮುಂದುವರಿದರೆ ’ನನಗದು ಕೋಟಿ ರೂಪಾಯಿ’ ಆಗುವ ದಿನ ದೂರವಿಲ್ಲವೆಂಬುದು’ ಸುಳ್ಳಾಗಲಿ ಎಂದು ನಾನು ಹಾರೈಸಿಕೊಳ್ಳುತ್ತಿರುವುದು ನಿತ್ಯ, ಸತ್ಯ. 

’ಭಾರ್ಯಾ ರೂಪವತೀ ಶತ್ರು’ ಅಂತಾರೆ. ನಾನೂ ಎಲ್ಲರಂತೆ ಮದುವೆಗೆ ಮುಂಚೆ ಆದರ್ಶಪ್ರಾಯನಾಗಿದ್ದೆ. ’ಹಣಕ್ಕಿಂತ ಗುಣ ಮೇಲು’, ’ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಮೇಲು’, ’ಬಿಳಿಗಿಂತ ಕಪ್ಪು ಮೇಲು’ ಇಂಥಾ ಅವೆಷ್ಟೋ ಭಾಷಣ ಸ್ಪರ್ಧೆಗಳಲ್ಲಿ ಬಾಗವಹಿಸಿ ಬಹುಮಾನ ಗಿಟ್ಟಿಸಿದ್ದು ಅದೆಷ್ಟು ಸಲವೋ! ಮದುವೆಯ ಮಾತು ಬಂದಾಗ ನನ್ನ ಆದರ್ಶಗಳನ್ನು ಬಿರುಗಾಳಿಗೆ ತೂರಿ ’ಹುಡುಗಿ ಶ್ರೀಮಂತ ಮನೆತನದವಳಾಗಿರಬೇಕು, ನನ್ನ ಹಾಗೆ ಕಪ್ಪು ಬಣ್ಣದವಳು ಬೇಡ, ಎಣ್ಣೆಗಪ್ಪು ಊಹೂಂ, (ನಾಲ್ಕು ಜನ ಅಸೂಯೆ ಪಡೋ ಹಾಗೆ) ಸುಂದರಿಯಾಗಿರಬೇಕು. ಇವಿಷ್ಟು ಕಂಡಿಶನ್ಸ್ ಫುಲ್‌ಫಿಲ್ ಮಾಡುವ ನೀವು ಹೇಳುವ ಯಾವುದೇ ಹುಡುಗಿಯಾದರೂ ನನಗೆ ಒಪ್ಪಿಗೆ’ ಎಂದು ಅಪ್ಪನಿಗೆ ಕಂಡಿಶನ್ ಹಾಕಿದ್ದೆ. ಅಪ್ಪ ನನ್ನ ಮಾತನ್ನು ಚಾಚೂ ತಪ್ಪದೆ (ಶಿರಸಾವಹಿಸಿ) ಪಾಲಿಸಿದ್ದರು. ಮೇಲೆ ಹೇಳಿದಂತೆ ನನ್ನವಳು ’ಚಂದುಳ್ಳಿ ಚೆಲುವೆ’ಯೆ. ಮೊದಮೊದಲು ನನ್ನ ಸುಂದರ ಹೆಂಡತಿಯ ಬಗ್ಗೆ ನನಗಿದ್ದ ಹೆಮ್ಮೆ, ಕ್ರಮೇಣ ನಾನು ಅವಳೊಡನೆ ಓಡಾಡುತಿದ್ದಾಗ ವಯೋಮಿತಿಯಿಲ್ಲದ ಮಂದಿ ಅವಳ ಸೌಂದರ್ಯಾಸ್ವಾದನೆ ಮಾಡುವುದು ಕಂಡು, ಅನುಭವಿಸಿದ ಮೇಲೆ ಅಸೂಯೆಗೆ ತಿರುಗಿ, ಅಷ್ಟೊಂದು ಸುಂದರನಲ್ಲದ, ಕೃಷ್ಣವರ್ಣದ ನನಗೆ ಸ್ವಾಭಾವಿಕವಾಗಿ ಇನ್ಫೀರಿಯಾರಿಟಿ ಕಾಂಪ್ಲೆ಼ಕ್ಸ್ ಎಂದರೆ ಏನು ಎಂಬುದರ ಅರಿವು ಮೂಡಿಸತೊಡಗಿದೆ. ವೈಪರೀತ್ಯವೆಂದರೆ ಗಂಡಸರು ಅವಳನ್ನು ನೋಡುವುದು ಸ್ವಾಭಾವಿಕ  ಎಂದುಕೊಂಡರೆ ಹೆಂಗಸರೂ ಅವಳ ಪಕ್ಕದಲ್ಲಿರುವ ನನ್ನನ್ನು ಕಡೆಗಣಿಸಿ ಅವಳನ್ನೇ ನೋಡುತ್ತಿರುವುದು.

ಇದು ನನಗೆ ನುಂಗಲಾರದ ತುತ್ತು (ಇದು ನನಗೆ ತಿಳಿದಂತೆ ನನ್ನನ್ನೂ ಸೇರಿಸಿ, ಕೆಲವೊಬ್ಬರನ್ನು ಕಳೆದರೆ ಉಳಿದೆಲ್ಲಾ ಗಂಡಸರ ವೀಕ್‌ನೆಸ್!). ಮೊದಲೇ ಮಾತಿನ ಮಲ್ಲಿ. ಕಾಲ್ಕೆರೆದು ಜಗಳವಾಡುವ ಸ್ವಭಾವದವಳಲ್ಲವಾದರೂ ಕೈಬೀಸಿ ಕರೆದು ಮಾತನಾಡಿಸುವ ಜಾಯಮಾನದವಳು. ಇದರಿಂದಾಗಿ ನಮ್ಮ ಕಾಲೊನಿಯಲ್ಲಿ ಲಿಂಗಬೇಧವಿಲ್ಲದೇ ಎಲ್ಲರೂ ಇವಳನ್ನು ನೋಡಿದಾಗ ಹಾಯ್, ಹಲೋ, ಚೆನ್ನಾಗಿದ್ದೀರಾ ಎನ್ನುವವರೇ ಹೊರತು ನನ್ನ ಕಡೆ ನೋಡುವ ಪ್ರಯತ್ನ ಮಾಡುವವರಿಲ್ಲ.  ಅಪ್ಪಿತಪ್ಪಿ ನನ್ನ ಕಡೆ ನೋಡಿದರೂ ಅವಳನ್ನು ನೋಡುವಾಗ ಅವರ ಕಣ್ಣಿನಲ್ಲಿದ್ದ ಹೊಳಪು, ಮುಖದ ಕಾಂತಿ, ಆ ಮುಗುಳ್ನಗು ಎಲ್ಲಾ ಮಾಯವಾಗಿರುತ್ತದೆ. ಅವಳಲ್ಲಿ ಅದೇನು ಚುಂಬಕ ಶಕ್ತಿ ಅಡಗಿದೆಯೋ ಕಾಣೆ (ಕಾಣೆ ಎಂದರೆ ತಪ್ಪಾದೀತು. ಮದುವೆಯಾದ ಹೊಸತರಲ್ಲಿ ನಾನೂ ಅದನ್ನು ಗುರುತಿಸಿದ್ದೆ, ಅನುಭವಿಸಿದ್ದೆ. ಆದರೆ ಈಗ ನನ್ನಲ್ಲಿ ಆ ಚುಂಬಕ ಶಕ್ತಿಗೆ ಆಕರ್ಷಿತವಾಗುವ ಗುಣ ನಶಿಸಿಹೋಗಿದೆ). ಅವಳೊಡನೆ ಹೊರಗೆ ಹೋಗುವುದೆಂದರೆ ನನಗೆ ಯಾರೆಲ್ಲ ಇವಳನ್ನು ಯಾವ್ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಅಳೆಯುವುದು ಒಂದು ಕೆಲಸವಾದರೆ ಇವಳ ಕಣ್ಣು ಎಲ್ಲಿ ನೆಟ್ಟಿದೆ ಎಂದು ಪರೀಕ್ಷಿಸುವುದು ಇನ್ನೊಂದು ಕೆಲಸ. ಕಣ್ಣು ರೆಪ್ಪೆ ಮುಚ್ಚುವಷ್ಟೂ ಪುರ್ಸೊತ್ತು ಇರುವುದಿಲ್ಲ. ನಮ್ಮ ಗಡಿ ಪ್ರದೇಶದ ಸಿಪಾಯಿಗಳ ಹಾಗೆ (ಕಣ್ಣಲ್ಲಿ ಎಣ್ಣೆಯಿಟ್ಟು ರಾತ್ರಿ ಹಗಲೆನ್ನದೆ ನಮ್ಮ ಗಡಿಯನ್ನು ಕಾಯುತ್ತಿರುತ್ತಾರೆ ಎನ್ನುವುದು ಕೇಳಿದ್ದೇನೆ, ನೋಡಿಲ್ಲ). ಎರಡನೇ ಸಾಲು ’ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’ ನನಗೆ ಅನ್ವಯಿಸುವುದು ಹೀಗೆ. ನಿಮ್ಮಲ್ಲೂ ನನ್ನಂಥವರಿದ್ದರೆ ನನಗೆ ತಿಳಿಸಿ. ಸುಖ ದುಖಃ ಹಂಚಿಕೊಳ್ಳೋದು ಆರೋಗ್ಯಕರ ಆಲ್ಲವೇ? (ಇಲ್ಲಿ ’ಸುಖ’ವೆನ್ನೋ ಅರ್ಥವಿಲ್ಲದ ಪದವನ್ನು ಬರೇ ಪ್ರಾಸಕ್ಕಾಗಿ ಉಪಯೋಗಿಸಿದ್ದೇನೆ, ಅನ್ಯಥಾ ಭಾವಿಸದಿರಿ).


(ಮಾನ್ಯ  ಮಹಿಳಾ ಓದುಗರ ಕ್ಷಮೆ ಇರಲಿ)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Rajendra B. Shetty
10 years ago

ಹೆಂಡತಿ ಊರಿಂದ ಹಿಂದೆ ಬರುವ ಮೊದಲು ಒಂದು ಹೆಲ್ಮೆಟ್ ಕೊಂಡುಕೊಳ್ಳಿ. ಈ ಲೇಖನ ಓದಲಿಲ್ಲ, ಆದರೆ ಓದಿಸಿಕೊಂಡು ಹೋಯಿತು ಪ್ರಭುಗಳೆ.

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
10 years ago

"ಮೂವತ್ತು ತುಂಬಿದಾಗ ’ಎಲ್ಲರೂ ಆಗಿದ್ದಾರೆ, ನಾನೂ ಯಾಕಾಗಬಾರದು’ ಎಂಬಲ್ಲಿಂದ ಪ್ರಾರಂಭವಾಗಿ ’ನಾನೂ ಆಗಲೇಬೇಕು’ ಎಂಬ ಪರಮಾವಧಿಯನ್ನು ತಲುಪಿ"..
 
ಈ ಮೇಲಿನ ಸಾಲುಗಳು ಎಲ್ಲರ [ಪಾಲಿಗೆ ನಿಜ .. ನಗೆಯ ಬಗೆ ಬಗೆ  ಬುಗ್ಗೆ  ಉಕ್ಕಿಸಿದವು .. 
 
ಪುಟ್ಟ-ಧಿಟ್ಟ  ಬರಹ . ಆದರೆ ;(೦ )  ನಗೆಯ ಬುಗ್ಗೆ ಉಕ್ಕಿಸಿತು . 
ಅದೇನೋ ಗೊತ್ತಿಲ್ಲ ಹೆಂಡತಿ ಬಗ್ಗೆ ಬರೆವ ಕಥೆ ಕವನ ಹಾಸ್ಯ ಬರಹಗಳು ಜಾಸ್ತಿ …!!
ನಿಮದು ಎಲ್ಲಕ್ಕಿಂತ ವಿಭಿನ್ನ ವಿಶಿಸ್ತ .. 
ನಮ್ಮಿಂದ ಮತ್ತಸ್ತು ಹಾಸ್ಯ ಬರಹಗಳನ್ನು  ನಿರೀಕ್ಷಿಸುವೆ 
 
ಶುಭವಾಗಲಿ 
 
\।/

Jayaprakash Abbigeri
Jayaprakash Abbigeri
10 years ago

chennagide…

shreeprakash
shreeprakash
10 years ago

super…..ಓದಿಸಿಕೊ೦ಡು ಹೋಯಿತು

Rukmini Nagannavar
Rukmini Nagannavar
10 years ago

ಬರಹದ ಪ್ರತಿ ಸಾಲಿನಲ್ಲೂ ಹಾಸ್ಯ ಇದೆ ಗುರುಗಳೇ..
ನಕ್ಕು ನಕ್ಕು ಹೊಟ್ಟೆ ಹುಣ್ಣಾಯಿತು..

ಗಂಗಾಧರ ದಿವಟರ

ಹೆಂಡತೀ…….
ಜೀವ
ಹಿಂಡುತೀ…….

ಅನ್ನೋ ಹಾಡೊಂದು ನೆನಪಾಗಲಿಲ್ವೇ…..

Santhoshkumar LM
Santhoshkumar LM
10 years ago

Super Uppi sir!! 🙂

Utham Danihalli
10 years ago

Chenagidhe uppi sir madve agorge yecharke kotta hagidhe

8
0
Would love your thoughts, please comment.x
()
x