ನಾಟಕಕಾರರಾಗಿ ಕುವೆಂಪು (ಭಾಗ-8): ಹಿಪ್ಪರಗಿ ಸಿದ್ದರಾಮ್


ಕಾಡಿನ ಸಂಸ್ಕೃತಿಯಲ್ಲಿ ತನ್ನ ಸೃಜಶೀಲತೆಯನ್ನು ಬೆಳೆಸಿಕೊಂಡ, ವಿದ್ಯೆಯನ್ನು ಅರ್ಜಿಸಿಕೊಂಡ ಏಕಲವ್ಯನು ದ್ರೋಣನನ್ನು ಕಲ್ಪಿತ ಗುರುವನ್ನಾಗಿ ಇಟ್ಟುಕೊಂಡು ಏಕಾಗ್ರತೆಯಿಂದ ವಿದ್ಯೆಯನ್ನು ಗಳಿಸಿದರೂ, ವ್ಯವಸ್ಥೆ ಅದಕ್ಕೆ ಪ್ರತಿಫಲವನ್ನು ಕೇಳುವುದರೊಂದಿಗೆ ಬಲಿ ತೆಗೆದುಕೊಳ್ಳ್ಳುತ್ತದೆ. ಆದರೆ ಇಂತಹ ಅಮಾನುಷ ದೌರ್ಜನ್ಯಗಳಿಗೆ ಮುಂದೊಂದು ದಿನ ತನ್ನ ಪ್ರತಿಕಾರವೊಂದು ಕಾದಿದೆ ಎನ್ನುವ ಧ್ವನಿ/ವಿಚಾರ ತುಂಬ ಶಕ್ತಿಶಾಲಿಯಾದದ್ದು. ಹೀಗಾಗಿ ‘ಶೂದ್ರ ತಪಸ್ವಿ’ ರಂಗಕೃತಿಗಿಂತಲೂ ಭಿನ್ನವಾಗಿ ಕೆಳವರ್ಗದ ಪ್ರತಿಭಟನೆಯ ಇನ್ನೊಂದು ಮಾದರಿ ‘ಬೆರಳ್-ಗೆ-ಕೊರಳ್’ ರಂಗಕೃತಿಯ ಸಂದರ್ಭದಲ್ಲಿ ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ.

ಈ ರಂಗಕೃತಿಯು ಆಗಿನ ಸಂದರ್ಭದಲ್ಲಿ ಆಧುನಿಕ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿದ ಸಾಂಸ್ಕೃತಿಕ ದಾಖಲೆಯಾಗಿದೆ. ಈ ಕೃತಿಯ ಮೂಲಕ ಮಹಾಕವಿ ಕುವೆಂಪುರವರು ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ವಿಮರ್ಶಿಸುತ್ತಾ, ವಿಡಂಭನೆ ಮತ್ತು ಹೊಸ ವಾಖ್ಯಾನಗಳ ಮೂಲಕ ಪ್ರಾಯೋಗಿಕ ಪರೀಕ್ಷೆಗೊಳಪಡಿಸುತ್ತಾರೆ. ಏಕಲವ್ಯ ಮತ್ತು ಶಂಭೂಕನಂತಹ ಶೂದ್ರ ಪಾತ್ರಗಳ ಸುತ್ತ ನವಪುರಾಣ ಕಥಾನಕಗಳನ್ನು ಕಟ್ಟಿ, ಅಂತ ಪುರಾಣ ಕಥಾನಕಗಳಲ್ಲಿ ಪುರೋಹಿತಶಾಹಿ, ಸಾಮ್ರಾಜ್ಯಶಾಹಿ ಇತ್ತೀಚೆಗಿನ ಪೇಟೆಂಟ್‍ಶಾಹಿ ಎಂಬ ಜಾಗತೀಕರಣೋತ್ತರ ಸಂದರ್ಭದ ಮನೋಧರ್ಮಗಳನ್ನು ಅವರ ಕೃತಿಗಳು ಪ್ರಶ್ನಿಸುತ್ತವೆ. ಸಮಕಾಲೀನ ಪ್ರಜ್ಞೆಯ ಹುಡುಕಾಟಗಳಿಂದ ಈ ಕೃತಿಗಳಿಗೆ ಹೊಸಕಾಣ್ಕೆಯನ್ನು ಶತಮಾನಗಳ ನಂತರವೂ ಎದುರಾಗಿಸುವ ನಿಷ್ಟುರತೆಯನ್ನು ಸತ್ವಯುತವಾಗಿ ತುಂಬಿರುವುದನ್ನು ನಾವು ಕಾಣಬಹುದು.

ಈಗ ಮಹಾಕವಿಗಳ ಉಳಿದೆಲ್ಲಾ ರಂಗಕೃತಿಗಳಿಗಿಂತ ದೀರ್ಘವಾಗಿರುವ, ಭಾರತೀಯ ಪೌರಾಣಿಕ ಜಗತ್ತಿನಲ್ಲಿ ಪ್ರಸಿದ್ಧವಾಗಿರುವ ಮತ್ತು ಕನ್ನಡದ ಪ್ರಾಚೀನ ಕವಿ ಲಕ್ಷ್ಮೀಶನ ‘ಜೈಮಿನಿಭಾರತ’ದಲ್ಲಿಯ ಕಥಾಪ್ರಸಂಗವಾದ ‘ಚಂದ್ರಹಾಸೋಪಾಖ್ಯಾನ’ವನ್ನು ಇಲ್ಲಿ ‘ಚಂದ್ರಹಾಸ’ ಎಂದು ವಿಶಿಷ್ಟ ರಂಗಕೃತಿಯನ್ನಾಗಿ ಅಳವಡಿಸಿರುವುದರಲ್ಲಿ ಮತ್ತು ಪ್ರತಿಮಾ ರೂಪವಾಗಿ ಧ್ವನಿಸಿರುವ ತತ್ವದರ್ಶನದಲ್ಲಿ ಎಂಬುದನ್ನು ನಾವು ಗಮನಿಸಬೇಕಾದ ಸಂಗತಿಯಾಗಿದೆ.

ಚಂದ್ರಹಾಸ (1963) :

ಮಹಾಕವಿಗಳು ಈ ರಂಗಕೃತಿಯ ಮುನ್ನುಡಿಯಲ್ಲಿ (27-06-1963) ಹೇಳಿಕೊಂಡಿರುವಂತೆ ಅವರ ಈ ಕೃತಿಯು 1929ರಲ್ಲಿ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ರಂಗಭೂಮಿ’ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತಂತೆ. ಆಗ ಅವರಿಗೆ ಕರಡು ಪ್ರತಿಯನ್ನು ತಿದ್ದುವ ಸಮಯವಕಾಶವೂ ಆಗಿರಲಿಲ್ಲವಂತೆ. ತಮ್ಮ ಸೇವಾನಿವೃತ್ತಿಯ ನಂತರ (1960) ದೊರೆತ ಈ ರಂಗಕೃತಿಯನ್ನು ತಿದ್ದುವ ಗೋಜಿಗೆ ಹೋಗದೆ ಅಂದರೆ ಒಡವೆಯನ್ನು ತೇಪೆಹಾಕಿದಂತೆ ರಿಪೇರಿ ಮಾಡುವ ವೃಥಾ ಶ್ರಮವನ್ನು ತೊರೆದು ಈಗಿನ ಒಪ್ಪುವ ಹೊಸ ಕೃತಿಯನ್ನಾಗಿ ಮಾಡಿದ್ದೇನೆ ಎಂದು ಹೇಳುತ್ತಾರೆ. ಲಕ್ಷ್ಮೀಶನ ‘ಜೈಮಿನಿಭಾರತ’ ಕೃತಿಯ ‘ಚಂದ್ರಹಾಸೋಪಾಖ್ಯಾನ’ದ ಭಾಗವನ್ನು ಆಧರಿಸಿ ಈ ಕೃತಿಯನ್ನು ರಚಿಸಿರುವುದಾಗಿ ಕವಿಗಳು ಹೇಳಿಕೊಳ್ಳುವುದು ಮತ್ತು ಆಕರ ಕೃತಿಯನ್ನು ಸ್ಮರಿಸಿಕೊಳ್ಳುವುದು ಅವರ ಉದಾರತೆಯನ್ನು ತೋರಿಸುತ್ತದೆ. ಎಲ್ಲ ಸಾರಗಳನ್ನೊಳಗೊಂಡು ಪ್ರಕಟಗೊಳ್ಳುತ್ತಿರುವ ಈ ಕೃತಿಯು ಪುನರ್ಜನ್ಮೋಪಮ ಕೃತಿಯಾಗಿದೆ ಎಂದು ಆತ್ಮೀಯವಾಗಿ ವಿವರಿಸುತ್ತಾರೆ. ಇಪ್ಪತ್ತೊಂದು ದೃಶ್ಯಗಳೊಂದಿಗೆ ಆದಿರಂಗಂ, ಮಧ್ಯರಂಗಂ ಮತ್ತು ಅಂತ್ಯರಂಗಂ ಎಂಬ ಮೂರು ಭಾಗಗಳಲ್ಲಿ ಕಥಾನಕವನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ನಮಗೆ ದೊರಕಿರುವುದು ಈ ರಂಗಕೃತಿಯ 5ನೇಯ ಆವೃತ್ತಿಯ, ಉದಯರವಿ ಪ್ರಕಾಶನದಿಂದ 2005ರಲ್ಲಿ ಪ್ರಕಟಗೊಂಡಿದೆ.

ಈ ಹಿಂದೆ ನೋಡಿದ ಮಹಾಕವಿಗಳ ಕೃತಿಯಾದ ‘ಯಮನ ಸೋಲು’ ರಂಗಕೃತಿಯಲ್ಲಿ ಪೀಠಿಕಾ ದೃಶ್ಯವನ್ನು ಅಳವಡಿಸಿದ್ದ ಮಹಾಕವಿಗಳು ಇಲ್ಲಿ ಆದಿರಂಗದ ಮೊದಲನೇಯ ದೃಶ್ಯವನ್ನಾಗಿ ಮಾಡಿದ್ದಾರೆ ಮತ್ತು ಆ ಕೃತಿಯ ಪೀಠಿಕಾ ದೃಶ್ಯದಲ್ಲಿಯ ಯಮದೂತ, ಗಂಧರ್ವ ಮತ್ತು ಕಿನ್ನರ ಪಾತ್ರಗಳು ಇಲ್ಲಿಯ ಕಥೆಗೆ ತಕ್ಕಂತೆ ಭಕ್ತಿದೇವಿ, ಪ್ರಾರ್ಥನಾದೇವಿ ಮತ್ತು ಕೃಪಾದೇವಿ ಎಂಬ ಮೂರು ಪಾತ್ರಗಳಾಗಿ ಬದಲಾವಣೆಗೊಂಡು ಪರಿಚಯಿಸಿದ್ದಾರೆ. ಆರಂಭದ ಸನ್ನಿವೇಶಕ್ಕೆ ಮೂವರು ದೇವತೆಗಳು ಅಂತರಿಕ್ಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರೇಕ್ಷಕರೆದುರಿಗೆ ಒಂದೊಂದು ಚರಣಗಳ ಮೂಲಕ ತಮ್ಮನ್ನು ತಾವೇ ಪರಿಚಯಿಸಿಕೊಳ್ಳುತ್ತಾರೆ. ಮೂವರು ಕೈಹಿಡಿದುಕೊಂಡು ನರ್ತಿಸುತ್ತಾರೆ. ಇದೊಂದು ಶಕ್ತಿದೇವತೆಗಳು ಒಂದೆಡೆ ಸೇರಿರುವುದು ಮಹಾಶಕ್ತಿಯಾಗಿ ಗೋಚರಿಸುವ ಪ್ರತಿಮೆಯನ್ನಾಗಿ ಮಹಾಕವಿಗಳು ಸೃಷ್ಟಿಸಿದ್ದಾರೆ. ವಿಭೂತಿ ಪುರುಷನೋರ್ವನ ಉದಯವಾಗಿದ್ದು ಆತನಿಂದು ಮಹಾಸಂಕಟಕ್ಕೆ ಕಾರಣವನ್ನು ತಿಳಿದುಕೊಂಡು ಆತನಿಗೆ ಕೃಪೆಮಾಡಲು ಮತ್ತು ಇವೆಲ್ಲದರಿಂದ ಪಾರಾಗಲು ಅಗತ್ಯವಿರುವ ಭಕ್ತಿಯನ್ನು ತುಂಬಲು ದೇವತೆಗಳು ಅನುಕ್ರಮವಾಗಿ ಪ್ರಾರ್ಥನಾದೇವಿ, ಕೃಪಾದೇವಿಯರು ಆಗಮಿಸುವರು. ಅವರಿಬ್ಬರಿಗೂ ಮುಂದಿನ ದಾರಿಯನ್ನು ತೋರಿಸಲು ಭಕ್ತಿದೇವಿಯ ಮಾತುಗಳು ರಂಗಕೃತಿಯ ಸಂಪೂರ್ಣಸಾರವನ್ನು ಚಿಕ್ಕದಾಗಿ ಹೇಳಿಸುವ ಮೂಲಕ ಕವಿಗಳು ಆರಂಭದಲ್ಲಿಯೇ ಕಥನಕುತೂಹಲವನ್ನುಂಟು ಮಾಡುತ್ತಾರೆ.

ಕೇರಳದವನಿಪನ ಸಿರಿವಸಿರಿನಲಿ ಬಂದು,
ತಂದೆ ತಾಯ್ ನೆಲ ಸಿರಿಗಳೆಲ್ಲ ಮಂ ಕಳೆದುಕೊಂಡು,
ದಾದಿಯೋರ್ವಳ ಅಕ್ಕರೆಯ ಸಾಹಸದಿ ರಕೆವೆತ್ತು,
ಅರಿನೃಪರ ಖಡ್ಗದಿಂ ಪಾರಾಗಿ,
ಕಡೆಗೆ ಕುಂತಳನಗರ ವೀಥಿಯಲಿ ಮುಗಿಯುವುದೆ
ಅವನ ಬಾಳ್? ವಿಧಿಲೀಲೆಯಯಂ ಕಾಣ್.
ಅವನನೆಂತು, ಎಲ್ಲಿಂದಮೆಲ್ಲಿಗೆ, ಒಯ್ಯುವ
ಉಪಾಯಮಂ ತಂದೊಡ್ಡುತಿರ್ಪುದಪಾಯದೊಲ್?

ಹೀಗೆ ಮೂರು ಶಕ್ತಿದೇವತೆಗಳು ಆ ವಿಭೂತಿ ಪುರುಷನಿಗೆ ಸಹಾಯ ಮಾಡಲು ಸಿದ್ದವಾಗಿರುವಂತಹ ಆರಂಭದ ದೃಶ್ಯದೊಂದಿಗೆ ಆರಂಭಗೊಳ್ಳುವಿಕೆಯು ದೇವಿಯ ಆರಾಧನೆಯಂತೆ ಅಂದರೆ ಅಂದಿನಿಂದ ಇಂದಿಗೂ ವೃತ್ತಿರಂಗಭೂಮಿಯ ನಾಟಕ ಕಂಪನಿಯವರು ತಮ್ಮ ಆರಾಧ್ಯ ದೇವರ ಕುರಿತಾದ ನಾಂದಿಗೀತೆಯೊಂದಿಗೆ ರಂಗಪ್ರಯೋಗವನ್ನು ಆರಂಭಿಸುವಂತೆ ಇಲ್ಲಿ ಮಹಾಕವಿಗಳು ಆಧುನಿಕ ಕಾಲಮಾನಕ್ಕೆ ತಕ್ಕಂತೆ ದೇವಿಯರನ್ನು ರಂಗದಲ್ಲಿ ಸೃಷ್ಟಿಸಿ ಅಳವಡಿಸಿರುವುದು ಅವರ ರಂಗಭೂಮಿಯ ಕುರಿತಾದ ಹೊಸ ಆಲೋಚನೆಗಳ ಪ್ರಸ್ತುತಪಡಿಸುವಿಕೆಯನ್ನು ತೋರಿಸುತ್ತದೆ.

ಮುಂದಿನ ದೃಶ್ಯಾವಳಿಯು ಕೇರಳದ ಕುಂತಲ ನಗರದ ಉದ್ಯಾವನದ ಬೀದಿಯಲ್ಲಿ ನಡೆಯುತ್ತದೆ. ಮರದ ನೆರಳಿನ ಉಸುಕಿನಲ್ಲಿ ಕೆಲವು ಬಲಕರು ಬೇರೆ ಬೇರೆ ಗುಂಪುಗಳಲ್ಲಿ ಆಟ-ಪಾಠಗಳಲ್ಲಿ ಮಗ್ನರಾಗಿದ್ದಾರೆ. ಅವರಲ್ಲೊಬ್ಬ ಹೊಸ ಹುಡುಗ ಬಂದು ಸೇರಿಕೊಂಡಿರುವುದರಿಂದ ಆತ ಅವರೆಲ್ಲರಿಗೂ ಹೊಸತಮ್ಮನಾಗಿದ್ದಾನೆ. ಆತನಲ್ಲಿ ಅವರು ಅಲೌಕಿಸ ಶಕ್ತಿಯನ್ನು ಗುರುತಿಸಿದ್ದಾರೆ. ಆತನ ಬಾಯಿಯಲ್ಲಿ ದೇವಲೋಕವಿದೆಯೆಂದು ಮಾತಾಡಿಕೊಳ್ಳುತ್ತಾರೆ ಆ ಮುಗ್ದ ಬಾಲಕರು. ಹೀಗೆ ನಲಿದಾಡುತ್ತಿರುವಾಗಲೇ ಹೊಸತಮ್ಮನೆಂಬ ಚಂದ್ರಹಾಸನು ‘ಗೋವಿಂದ ಶ್ರೀಹರಿ ಮುಕುಂದ ಮುರಾರಿ’ ಎಂದು ಕುಣಿಯುತ್ತಾ ಚಪ್ಪಾಳೆ ತಟ್ಟುತ್ತಾ ಆಗಮಿಸುತ್ತಾನೆ. ಆತನ ಆಗಮನದಿಂದ ಖುಷಿಯಾಗಿ ಎಲ್ಲಾ ಬಾಲಕರು ಆತನಂತೆಯೇ ಖುಷಿಯಾಗಿ ಗುಂಪು ಸೇರಿ ಹಾಡುತ್ತಿರುವಾಗ ಒಮ್ಮೇಲೆ ಸ್ತಬ್ದರಾಗಿ ಬೀದಿಯ ಕಡೆ ನೋಡುತ್ತಾರೆ. ಆ ರಾಜ್ಯದ ಮಂತ್ರಿಯಾದ ದುಷ್ಟಬುದ್ಧಿಯು ತನ್ನ ಮಕ್ಕಳಾದ ಮದನ ಮತ್ತು ವಿಷಯೆ ಹಾಗೂ ಪುರೋಹಿತ ಗಾಲವ ಮುಂತಾದವರೊಡನೆ ಬರುತ್ತಿದ್ದಾನೆ. ಬಾಲಕರಲ್ಲೊಬ್ಬನ ತಂದೆಯು ಆ ದುಷ್ಟಬುದ್ಧಿಯ ಬಳಿಯಲ್ಲಿ ಕೆಲಸಕ್ಕಿರುವುದರಿಂದ ಅವೆಲ್ಲಾ ವಿಷಯಗಳು ತನಗೆ ತಿಳಿದಿದೆ ಮತ್ತು ದುಷ್ಟಬುದ್ಧಿಯು ಹೆಸರಿಗೆ ತಕ್ಕಂತೆ ದುಷ್ಟನೇ ಆಗಿದ್ದಾನೆ. ಅದಕ್ಕಾಗಿ ಅವನ ಪರಿವಾರವೆಲ್ಲಾ ಹೋಗುವ ತನಕ ಹೆಚ್ಚಿಗೆ ಉಸಿರೆತ್ತಬಾರದೆನ್ನುವ ಮಾಹಿತಿಯನ್ನು ಹೇಳುತ್ತಿರುವಾಗಲೇ ಪುರೋಹಿತ ಗಾಲವನು ಕಾಂತಿಯುಕ್ತ ಮುಖಾರವಿಂದದ ಬಾಲಕ ಚಂದ್ರಹಾಸನನ್ನು ನೋಡುತ್ತಾ ನಿಂತಿರುವುದನ್ನು ಗಮನಿಸಿದ ದುಷ್ಟಬುದ್ಧಿಯು ‘ನಿಂತೇನ ನೋಡುತಿರುವಿರಿ, ಪುರೋಹಿತರೆ?’ ಎಂದು ಕೇಳುತ್ತಾನೆ. ಅದಕ್ಕೆ ಪುರೋಹಿತ ಗಾಲವ :

ಅನಾಥ ಮಾತ್ರನೆಂದಣಿಸದಿರು ನೀನಾತನಂ. ಕಾಣ್,
ರಾಜಚಿಹ್ನೆಗಳೆಂತು ಶೋಭಿಪುವು ಮೆಯ್ಯಲ್ಲಿ?
ಮೊಗದ ತೇಜವ ನೋಡು. ಪಾರ್ವನಾಂ ಪಾರ್ದು ಪೇಳ್ವೆನ್:
ಎಂದಿರ್ದೊಡಂ ಈ ಪೊಳಲ್ಗೆ, ಈ ಕುಂತಳಾಧೀಶನ್
ಆಳ್ವ ನಮ್ಮಿ ಪೊಡವಿಗೆ, ಒಡೆಯನಹನ್ ಈತನ್.
ಚಾರುತ ಲಕ್ಷಣಗಳಿಂ ಮೆರೆಯುತಿಪ್ರ್ಪೀತನಂ
ನೀನಿರಿಸಿಕೊಂಡು ರಕ್ಷಿಪುದು ; ಧರೆಗೊಳ್ಳಿತಕ್ಕುಂ.

ಎಂದು ಮುಂದೆ ನಡೆಯಲಿರುವ ಭವಿಷ್ಯದ ಘಟನಾವಳಿಯ ಕುರಿತು ಹೇಳುತ್ತಾ ಅವನಿಗೆ ರಕ್ಷಣೆ ಕೊಡಬೇಕಾದುದು ಮಂತ್ರಿಯಾದ ದುಷ್ಟಬುದ್ಧಿಯ ಕೆಲಸವೆಂದು ಹೇಳುತ್ತಾನೆ. ಕೋಪಗೊಂಡ ದುಷ್ಟಬುದ್ಧಿಯು ಸಹನೆಯಿಂದ, ಗಾಲವನ ಮೂಲಕ ಆತನ ಪೂರ್ವಾಪರಗಳನ್ನು ಕೇಳುತ್ತಾನೆ. ತಾನೊರ್ವ ಅನಾಥ ಬಾಲಕನಾಗಿದ್ದು ತನ್ನನ್ನು ಅಜ್ಜಿಯೊಬ್ಬಳು ನೋಡಿಕೊಳ್ಳುತ್ತಾಳೆಂದು ಹೇಳುತ್ತಾನೆ. ಅನಾಥನಾಗಿದ್ದರೆ ತಮ್ಮೊಡನೆ ಬರಲಿ ಎಂದು ಮಂತ್ರಿಯ ಮಗಳು ವಿಷಯೇ ತನ್ನ ತಂದೆಗೆ ಕೇಳಿಸದಂತೆ ತನ್ನಣ್ಣನಲ್ಲಿ ಹೇಳುತ್ತಾಳೆ. ‘ಸುಮ್ಮನಿರೆ, ಅಪ್ಪಯ್ಯನಿಗೆ ಕೇಳಿಸೀತು’ ಎಂದು ಹೇಳಿ ಸುಮ್ಮನಾಗಿಸುತ್ತಾನೆ. ಮುಂದೆ ನಡೆದ ತಂದೆಗೆ ಗೊತ್ತಾಗದಂತೆ ವಿಷಯೆ ತನ್ನಲಿದ್ದ ರತ್ನದ ಹೂವನ್ನು ಚಂದ್ರಹಾಸನ ಕೈಲಿಟ್ಟು ತನ್ನ ಅಣ್ಣನ ಹಿಂದೆ ಓಡುತ್ತಾಳೆ. ಅವರು ಹೋದೊಡನೆ ಬಾಲಕರೆಲ್ಲಾ ಚಂದ್ರಹಾಸನಿಗೆ ಮುಗಿಬೀಳುತ್ತಾರೆ. ಆಗ ಆಕಾಶದಲ್ಲಿ ಮೂರು ದೇವಿಯರು ಕಾಣಿಸಿಕೊಂಡು ದುಷ್ಟಬುದ್ಧಿಯ ಕ್ರೂರದೃಷ್ಟಿಯಿಂದ ಚಂದ್ರಹಾಸನಿಗೆ ಏನೂ ಆಗದಂತೆ ಆಶೀರ್ವದಿಸುವುದು ಚಂದ್ರಹಾಸನಿಗೆ ಕಾಣಿಸುತ್ತದೆ.

ಆದಿರಂಗದ ಎರಡನೇಯ ದೃಶ್ಯದಲ್ಲಿ ದುಷ್ಟಬುದ್ಧಿಯು ತನ್ನ ಅರಮನೆಯಲ್ಲಿ ಚಿಂತಾಕ್ರಾಂತನಾಗಿ ಕುಳಿತು ತನ್ನ ದುಷ್ಟ ಆಲೋಚನೆಯನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಮಗ್ನನಾಗಿದ್ದಾನೆ. ಕುಂತಳದ ಈಗಿನ ರಾಜನಿಗೆ ಉತ್ತರಾಧಿಕಾರಿಯಾಗಲು ಗಂಡು ಸಂತಾನವಿಲ್ಲದಿರುವುದರಿಂದ ತನ್ನ ಮಗನಿಗೆ ರಾಜನ ಮಗಳನ್ನು ಮದುವೆ ಮಾಡಿಸಿ, ರಾಜ್ಯಭಾರವನ್ನೇಲ್ಲಾ ತನ್ನ ಅಂಕಿತಕ್ಕೆ ತೆಗೆದುಕೊಳ್ಳುವ ದುಷ್ಟಾಲೋಚನೆಯಲ್ಲಿದ್ದಾನೆ. ಈ ವಿಚಾರಕ್ಕೆ ಚಂದ್ರಹಾಸನೆಂಬ ಅನಾಥ ಬಾಲಕನು ಅಡ್ಡಿಬರುವ ಸಂಗತಿಯನ್ನು ಪುರೋಹಿತ ಗಾಲವ ಭವಿಷ್ಯ ಹೇಳಿರುವುದನ್ನು ನೆನಪಿಸಿಕೊಂಡು ಆ ಬಾಲಕನನ್ನು ಮುಗಿಸಲು ಕೊಲೆಗಡುಕರಿಗೆ ಹೇಳಿಕಳಿಸಿದ್ದಾನೆ. ಆಗ ಮಕ್ಕಳಾದ ಮದನ ಮತ್ತು ವಿಷಯೆ ಆಗಮಿಸುತ್ತಾರೆ. ಇಲ್ಲಿ ಎರಡೂ ಮಕ್ಕಳ ನಡುವೆ ಮುಗ್ದತೆ, ಸೋದರ-ಸೋದರಿ ವಾತ್ಸಲ್ಯವನ್ನು ಮಹಾಕವಿಗಳು ಚೆನ್ನಾಗಿ ನಿರೂಪಿಸಿದ್ದಾರೆ. ಮಕ್ಕಳ ಮೇಲಿನ ಅತಿಯಾದ ಮಮಕಾರವು ದುಷ್ಟಬುದ್ಧಿಗೆ ಇಂತಹ ದುಷ್ಟ ಆಲೋಚನೆಗಳಿಗೆ ದೂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪುರೋಹಿತ ಗಾಲವನ ಭವಿಷ್ಯದ ನುಡಿಯನ್ನು ಕೇಳಿದ ದುಷ್ಟಬುದ್ಧಿಯ ಹೆಂಡತಿ ತಾರಕಾಕ್ಷಿ ಬಂದು ಹೇಳುವ ಮಾತು ಮನಮಿಡಿಯುವಂತಿದೆ.

ಅವರವರ ಹಣೆಬರೆಹದಂತಾದರೇನೆಮಗೆ?
ಬಿದಿಯ ತಿದ್ದಲು ನಾವು ಗೆಯ್ವಾ ಪ್ರಯತ್ನವೇ
ತಳ್ಳುವುದು ನಮ್ಮನಾ ಬಿದಿಯ ಒಡ್ಡಿದ ಬಲೆಗೆ!

ಈ ಮಾತಿಗೆ ಗಮನಕೊಡಲು ದುಷ್ಟಬುದ್ಧಿಯ ಮನಸ್ಥಿತಿಯು ಇಲ್ಲದಿರುವುದರಿಂದ ತಾನು ಯೋಚಿಸಿದಂತೆ ಮುಂದಿನ ಕೆಲಸದಲ್ಲಿ ತೊಡಗುತ್ತಾನೆ. ಕೊಲೆಗಡುಕರಿಗೆ ಹಣದ ಆಶೆಯನ್ನು ತೋರಿಸಿ ಚಂದ್ರಹಾಸನನ್ನು ಕೊಲೆ ಮಾಡಿ, ಶವದ ಒಂದು ಗುರುತನ್ನು ತರಲು ಹೇಳಿ ಕಳುಹಿಸುತ್ತಾನೆ.

ಮುಂದಿನ ದೃಶ್ಯದಲ್ಲಿ ಚಂದ್ರಹಾಸನನ್ನು ಸಲುಹುತ್ತಿರುವ ಮುದುಕಿಯೊರ್ವಳು ಚಂದ್ರಹಾಸ ಇಂದಿನ ಪರಿಸ್ಥಿತಿಯ ಕುರಿತು ಹೆಂಗಸೊರ್ವಳ ಹತ್ತಿರ ಹೇಳುತ್ತಿರುವ ದೃಶ್ಯವು ಕುಂತಳ ನಗರದ ಬೀದಿಯ ಮೂಲೆಯೊಂದರಲ್ಲಿ ನಡೆಯುತ್ತಿದೆ. ಕೇರಳ ದೇಶದ ಅರಿನೃಪರು ಯುದ್ಧದಲ್ಲಿ ವೀರಸ್ವರ್ಗವನಪ್ಪಿದಾಗ, ಮಹಾರಾಣಿ ಸಹಗಮನಗೈದಿದ್ದು, ಅರಸುಕುಮಾರನನ್ನು ಕೊಲ್ಲಲು ವೈರಿಗಳು ಪ್ರಯತ್ನಿಸಿದ್ದು, ಅರಮನೆಯ ದಾಸಿಯಾಗಿದ್ದ ತಾನು ಆ ಬಾಲಕನನ್ನು ಎಲ್ಲರ ಕಣ್ಣು ತಪ್ಪಿಸಿ ಇಲ್ಲಿಗೆ ತಂದು ಕಡು ಕಷ್ಟದಿಂದ ಆತನನ್ನು ಇಲ್ಲಿಯವರೆಗೆ ಸಾಕಿದ್ದು, ಇನ್ನು ತನಗೆ ವಯಸ್ಸಾಗಿದ್ದು, ಯಾವಾಗ ಕಣ್ಣು ಮುಚ್ಚುವೆನೊ ಎಂದು ಬಿಕ್ಕಳಿಸಿ ಅಳುವುದರೊಂದಿಗೆ ಚಂದ್ರಹಾಸನೆಂಬ ಪಾತ್ರದ ಪ್ಲ್ಯಾಶ್ ಬ್ಯಾಕ್‍ನ್ನು ಮಹಾಕವಿಗಳು ಇನ್ನೊಂದು ಪಾತ್ರದ ಮೂಲಕ ಹೇಳಿಸುವುದು ರಂಗತಂತ್ರದಿಂದ ತಾಜಾನವೆನಿಸುತ್ತದೆ. ಅಲ್ಲಿಗೆ ಆಗಮಿಸುವ ಚಂದ್ರಹಾಸನು ರತ್ನದ ಹೂವನ್ನು ಮಂತ್ರಿಗಳ ಮಕ್ಕಳು ತನಗೆ ನೀಡಿರುವುದನ್ನು ತೋರಿಸಿದಾಗ, ಆ ಮುದುಕಿಯು ಇಂತಹ ರತ್ನಖಚಿತ ರತ್ನದ ಹೂವುಗಳ ರಾಜವೈಭೋಗದಲ್ಲಿ ಬೆಳೆಯಬೇಕಿದ್ದವನು ಇಂದು ತನ್ನೊಂದಿಗೆ ಬಡತನದಲ್ಲಿ ಬೇಯುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳುತ್ತಾ ಮುದುಕಿಯ ಪ್ರಾಣಪಕ್ಷಿ ಹಾರಿ ಹೋಗುವ ಸಂದರ್ಭದಲ್ಲಿಯೇ ದುಷ್ಟಬುದ್ಧಿ ಕಳುಹಿಸಿರುವ ಕೊಲೆಗಡುಕರು ಬಂದು ಚಂದ್ರಹಾಸನನ್ನು ಮುಗಿಸಲು ಕಾಡಿನ ಕಡೆಗೆ ಹೊತ್ತೊಯ್ಯುತ್ತಾರೆ. ಆತನನ್ನು ಕೊಂದು ಕತ್ತರಿಸಬೇಕೆನ್ನುವಷ್ಟರಲ್ಲಿ ಕೃಪಾದೇವಿಯು ತಡೆದು ಬಾಲಕನನ್ನು ರಕ್ಷಿಸುತ್ತಾಳೆ. ಕೊಲೆಗಡುಕರು ಬಾಲಕನಿಗಿರುವ ಆರನೆಯ ಕಿರುಬೆರಳನ್ನು ಕತ್ತರಿಸಿಕೊಂಡು ದುಷ್ಟಬುದ್ಧಿಗೆ ತೋರಿಸಲು ಹೊರಡುತ್ತಾರೆ. ಕಿರುಬೆರಳನ್ನು ಕತ್ತರಿಸಿದ್ದಕ್ಕೆ ಬಾಲಕನು ಮೂರ್ಛೆ ಹೋಗುತ್ತಾನೆ.

ಮೂರ್ಛೆ ಹೋದ ಬಾಲಕನು ಬೇಡರ ಪಡೆಯವರಿಗೆ ದೊರೆತು, ರಾಜತೇಜವುಳ್ಳ ಈ ಬಾಲಕನು ಶ್ರೀಹರಿಯ ದಿವ್ಯಪುತ್ರನೇ ಇರಬೇಕೆಂದು ಭಾವಿಸಿ, ಮಕ್ಕಳಿಲ್ಲದ ಬೇಡರ ನಾಯಕ ಪುಳಿಂದಕರಾಜ ತನ್ನ ಬಾಳಿಗೆ ಬೆಳಕು ದೊರೆತಂತಾಯಿತೆಂದು ಸಂತಸಗೊಂಡು ಸಂತೋಷಕೂಟ ಏರ್ಪಡಿಸುತ್ತಾ ‘ಚಂದ್ರಹಾಸ’ನೆಂದು ಹೆಸರಿಡುತ್ತಾ ‘ಮಂಜು ಮಹಿಮಾಸ್ಪದ’ ಎಂದು ಸ್ತುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾನೆ. ಚಂದ್ರಹಾಸ ಬೇಡರ ರಾಜ್ಯವಾದ ಚಂದನಾವತಿಯನ್ನು ಸೇರಿದ ನಂತರ ಆ ರಾಜ್ಯದಲ್ಲಿ ಹಲವಾರು ಬದಲಾವಣೆಗಳಾಗಿವೆ. ಚಂದ್ರಹಾಸನು ಯುವಕನಾಗಿದ್ದಾನೆ. ಈ ಸುದ್ಧಿಯು ದುಷ್ಟಬುದ್ಧಿಗೆ ತಿಳಿದು ರಾಜ್ಯಭಾರವನ್ನೆಲ್ಲಾ ಮದನನಿಗೆ ಒಪ್ಪಿಸಿ, ಚಂದನಾವತಿಗೆ ಬರುತ್ತಾನೆ. ಚಂದ್ರಹಾಸನನ್ನು ನೋಡಿ ಆಶ್ಚರ್ಯಗೊಂಡು ‘ಏಂ ಭದ್ರರೂಪಂ ಆ ತರುಣನಿಗೆ? ಪುಣ್ಯವಂತನೇ ದಿಟಂ ಕುಳಿಂದಕಂ’ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಆತನ ಕಾಲು ಬೆರಳು ನೋಡಿ ತಾನು ನಿಶ್ಚಯಿಸಿದ ಸಂಶಯ ನಿಜವಾಗಿ ತೋರಿ, ಮುಂದಿನ ಸಂಚನ್ನು ರೂಪಿಸಲು ಪುಳಿಂಧಕನಲ್ಲಿ ಹೇಳುತ್ತಾನೆ. ‘ಮಗ ಮದನಂಗೆ ಪತ್ರವೊಂದನ್ನು ಕೊಡುವೆ ಈಗಳೆಯೆ ಚಂದ್ರಹಾಸನೆಯೆ ಅದನು ಕೊಂಡೊಯ್ಯ ಲಾ ಎಡೆಗೆ’ ಎಂದು ಹೇಳಿದಾಗ ದುಷ್ಟಬುದ್ಧಿಯ ಒಳವಿಚಾರವನ್ನು ಅರಿಯದ ಪುಳಿಂದಕ ಒಪ್ಪುತ್ತಾನೆ.

ಮುಂದಿನ ದೃಶ್ಯದಲ್ಲಿ ಕುಂತಳ ನಗರದ ಬಾಹ್ಯೋಪವನ. ಅಲ್ಲಿಗೆ ಚಂದ್ರಹಾಸನು ವೀರಸೇನ ಮತ್ತು ರಣಸಿಂಹರೊಂದಿಗೆ ಪತ್ರವನ್ನು ತೆಗೆದುಕೊಂಡು ಬರುತ್ತಿರಲು ಆಯಾಸವಾದಂತೆನಿಸಿ ಉಪವನದಲ್ಲಿ ವಿಶ್ರಮಿಸಿದ  ವೇಳೆಯಲ್ಲಿ ವಿಷಯೆ ಸಖಿಯರೊಡಗೂಡಿ ಅದೇ ಉಪವನಕ್ಕೆ ಬಂದು ಏನೋ ಮನದಾಳದಲ್ಲಿ ಯೋಚಿಸುತ್ತಾ ತಿರುಗಾಡುತ್ತಿರುವಾಗ, ‘ಮಾಮರದ ಬಳಿಯ ಮಲ್ಲಿಗೆಯ ಕೊಯ್ಯುವೆನು’ ಎಂದು ಮುಂದೆ ಬರುತ್ತಿರುವಷ್ಟರಲ್ಲಿಯೇ ಮಲಗಿರುವ ಚಂದ್ರಹಾಸನನ್ನು ಕಂಡು ಬೆರಗಾಗಿ, ನೆಟ್ಟ ನೋಟವಾಗಿ ನಿಲ್ಲುತ್ತಾಳೆ. ಯೌವನದಲ್ಲಿ ಕಾಣುತ್ತಿರುವ ಕನಸೊಂದು ನನಸಿನಂತಾಯ್ತೆನೋ ಅವಳಿಗೆ. ಇಲ್ಲಿ ಮಹಾಕವಿಗಳು ಈ ದೃಶ್ಯವನ್ನು ಚೆನ್ನಾಗಿಯೇ ಚಿತ್ರಿಸಿದ್ದಾರೆ. ಅವಳ ಮಾತು ವಯಸ್ಸಿಗೆ ತಕ್ಕಂತೆ ಹೊರಹೊಮ್ಮಿದೆ. ‘ಆರಿವನು? ಇಳೆಗಿಳಿದು ಪವಡಿಸಿದ ಚಂದ್ರನೇನೊ, ನಿದ್ರೆಯೊಳು ನಗುತಿಹನೆ? ನಟಿಸಿ ನಿದ್ರಿಸುತಿಹನೊ? ಇಲ್ಲ, ಇಲ್ಲ ಕೈತವವನರಿಯದೀ ಮುಗ್ದಮುಖ!’ ಎಂದು ಮನದಲ್ಲಿ ಅಂದುಕೊಳ್ಲುತ್ತಿರುವಾಗಲೇ ಆತನ ಕಂಚುಕದ ಸೆರಗಿನಲ್ಲಿದ್ದ ಪತ್ರವನ್ನು ನೋಡಿ ಓದುವುದರಲಿ ಅಳುಕಿದರೂ, ಆ ಕಾರ್ಯಕ್ಕೆ ಕೈ ಹಾಕುವುದು ತನ್ನೊಳಿತಕ್ಕೆ ನೆರವಾಗಿದೆ. ಇಲ್ಲಿ ಒಮ್ಮೊಮ್ಮೆ ತಪ್ಪು ಮಾಡುವುದೂ ಮುಂದಿನ ಒಳ್ಳೆಯದಕ್ಕೆ ಎನ್ನುವಂತಾಗಿದೆ.

ಓಲೆ ತಂದೆಯದು, ಈತ ಚಂದ್ರಹಾಸ, ಓಲೆಯ ಒಕ್ಕಣಿಕೆಯನ್ನು ಓದುತ್ತಾಳೆ:

ಶ್ರೀಮತ್ ಸಚಿವ ಶಿರೋಮಣಿ ದುಷ್ಟಬುದ್ಧಿ
ಸುಪ್ರೇಮದಿ ತನ್ನ ಮಗ ಮದನಂಗೆ ಮಿಗೆ ಪರಸಿ
ನೇಮಿಸಿದ ಕಾರ್ಯಮ್:
ಈ ಚಂದ್ರಹಾಸಂ ಮಹಾಹಿತನೆಮಗೆ,
ಮೇಲೆ ನಮ್ಮ ಸೀಮೆಗರಸಾದಪಂ;
ಸಂದೇಹಮಿಲ್ಲಿದಕೆ. ಸಾಮಾನ್ಯದವನಲ್ಲ ;
ಎಮದೀತನಂ ಕಳುಹಿದೆವು ನಿನ್ನ ಬಳಿಗೆ;
ಇದನರಿವುದು ! ಹೊತ್ತುಗಳೆಯದೆ,
ಬಂದ ಬಳಿಕಿವನ ಕುಲ ಶೀಲ ವಿತ್ತ ವಿದ್ಯಾ
ವಯೋ ವಿಕ್ರಮಂಗಳನೀಕ್ಷಿಸುತ್ತಿರದೆ
ವಿಷಯ ಮೋಹಿಸುವಂತೆ ಕಂಡುವುದೀತಂಗೆ ನೀನ್!
ಇದರೊಳೇಮಗೆ ಉತ್ತರೋತ್ತರಮಪ್ಪುದು.
ಆಂ ಬೇಗ ಚಂದನಾವತಿಯಿಂದ ರಾಜಕಾರ್ಯವ ಮುಗಿಸಿ
ಬರ್ಪೆನ್, ಎನ್ನ ಚಿತ್ತಮಂ ನೀನರಿತು
ಹಿಂಜರಿಯದೆಲ್ಲಮಂ ಪೂರೈಸು ಯುಕ್ತಿಯಿಂದ!

ಈ ಮಾತುಗಳನ್ನೆಲ್ಲ ತನಗುಣವಾದ ರೀತಿಯಲ್ಲಿ ಗ್ರಹಿಸಿ ‘ವಿಷವ ಮೋಹಿಸುವಂತೆ’ ಎನ್ನುವ ತನ್ನ ತಂದೆ ದುಷ್ಟಬುದ್ಧಿಯ ಅಚಾತುರ್ಯದಿಂದ ಆಗಿದೆಯೆಂದು ಉಹಿಸಿ, ಇಂಥಾ ಮಿತ್ರನಿಗೆ ಕೊಡಬೇಕಾದುದು ವಿಷವನ್ನಲ್ಲ, ವಿಷಯೆಯನ್ನು ಎಂದು ಮಾವಿನಮರದ ರಸದಿಂದ ಕಿರುಬೆರಳಿನಿಂದ ‘ವ’ದ ಬದಲಾಗಿ ‘ಯೆ’ ಅಕ್ಷರವನ್ನು ಬರೆಯುತ್ತಾಳೆ. (ಮುಂದೆ ಈ ರಂಗಕೃತಿಯು ಚಲನಚಿತ್ರವಾದಾಗ ಅಲ್ಲಿ ವಿಷಯೆ ತನ್ನ ಕಣ್ಣಂಚಿನ ಕಾಡಿಗೆಯ ಮಸಿಯಿಂದ ಅಕ್ಷರ ಬದಲಾಯಿಸುವುದನ್ನು ತೋರಿಸಲಾಗಿತ್ತು) ಅದನ್ನೋದಿ ಮದನನು ಮದುವೆ ಕಾರ್ಯವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾನೆ.

ಮುಂದಿನ ದೃಶ್ಯದಲ್ಲಿ ಮದುವೆಯಾದ ನಂತರ ವಿಷಯೆ ಲಜ್ಜೆಯಿಂದ ತಂದೆಯ ಕಾಲಿಗೆ ನಮಸ್ಕರಿಸಲು ಬಂದಾಗ ‘ಮುಟ್ಟದಿರು ನೀನಿಂದು ವಿಷಯೆಯಲ್ಲ. ವಿಷಕನ್ಯೆ, ತೊಲಗಾಚೆ ನಿಲ್ಲದಿರ್’ ಎನ್ನುವ ಮಾತಿನ ಅರ್ಭಟಕೆ ಮದನ ಪತ್ರ ತಂದು ತೋರಿಸಿದಾಗ, ಅದನ್ನೋದಿದ ದುಷ್ಟಬುದ್ಧಿಯ ಸಂಕಟ, ಕ್ರೋಧ, ಆಶ್ಚರ್ಯಗಳಾದಿ ಭಾವಗಳ ಸುಳಿದಾಟದಿಂದ ತತ್ತರಿಸಿ ಹೋಗುತ್ತಾನೆ. ಮುಂದಿನ ಹಂಚಿಕೆ ಹೂಡಿ ‘ಎಲೈ ದುರ್ವಿಧಿಯೆ, ನಿನ್ನ ವ್ಯೂಹಕೆ ಪ್ರತಿವ್ಯೂಹಮಂ ಒಡ್ಡಿದರೆ ನಾ ದುಷ್ಟಬುದ್ಧಿಯೆ ನಾಂ, ದಿಟಂ ದುಷ್ಟಬುದ್ಧಿಯಲ್ತು’ ಎಂದು ಚಂದ್ರಹಾಸನನ್ನು ಕೊಲ್ಲುವ ಉಪಾಯವನ್ನು ಆಲೋಚಿಸಿ, ವಂಶಪಾರಂಪರ್ಯವಾಗಿ ಬಂದ ಕುಲಾಚಾರದಂತೆ ಚಂಡಿಕಾಲಯಕೆ ಹೋಗಿ ಸರ್ವಮಂಗಳೆಯನ್ನು ಪೂಜಿಸಬೇಕೆಂದು ಹೇಳಿದ ಮಾತಿಗೆ ಸಂಶಯವಿಲ್ಲದೆ ಚಂದ್ರಹಾಸ ಒಪ್ಪಿಕೊಳ್ಳುತ್ತಾನೆ.

ಕೃಪಾದೇವಿ ನಾಟಕದುದ್ದಕೂ ಕೃಪೆಗೈಯ್ಯುತ್ತಲೇ ನಡೆದಿದ್ದಾಳೆ. ಪೂಜೆಗೆ ಹೊರಟಿರುವ ಚಂದ್ರಹಾಸನನ್ನು ಕರೆದು ಮದನ ‘ಚಂದ್ರಹಾಸ ಪ್ರಭುವಿಗೆ ಜಯವಾಗಲಿ’ ಎಂದು ಘೋಷಣೆ ಕೂಗುತ್ತಾ, ‘ಇಂದೇ ಪ್ರಭುವಾಗಲಿರುವಿ’ ಎಂದು ಆತನಿಗೆ ಹೇಳಿ, ತಾನು ಸಾಮಗ್ರಿಗಳನ್ನು ತೆಗೆದುಕೊಂಡು ಪೂಜೆಗೆ ಹೊರಡುತ್ತಾನೆ. ಚಂದ್ರಹಾಸನ ಮೇಲೆ ಎಷ್ಟೇ ಕೆಟ್ಟಬುದ್ಧಿ ತೋರಿಸಿದರೂ ದೈವಕೃಪೆ ಈ ಜಾಲದಿಂದ ಆತನನ್ನು ಪಾರು ಮಾಡುವುದು. ಅಷ್ಟೇ ಅಲ್ಲ, ಇನ್ನೂ ಮೇಲೆ ಮೇಲೆ ಏರುವಂತಹ ಅವಕಾಶವನ್ನು ನಿರ್ಮಿಸುತ್ತಿದೆ. ಕುಂತಳದ ರಾಜನಿಗೆ ಅಶುಭ ಸೂಚಕವಾದ ಶಕುನ ಸಂಭವಿಸಿದ್ದರಿಂದ ರಾಜ್ಯವನ್ನು ತೊರೆದು ಹೋಗಲು ನಿರ್ಧರಿಸಿ, ಅದಕ್ಕೆ ಮುಂಚೆ ತನ್ನ ಮಗಳನ್ನು ಚಂದ್ರಹಾಸನಿಗೆ ಗಾಂಧರ್ವ ವಿಧಿಯಿಂದ ವಿವಾಹ ಮಾಡಿಕೊಟ್ಟು, ರಾಜ್ಯಬಾರವನ್ನು ಈತನಿಗೊಪ್ಪಿಸಿ, ತಪೋವನಕ್ಕೆ ಹೋಗಲು ನಿರ್ಧರಿಸಿದ್ದಾನೆ. ಕುಲಾಚಾರವನ್ನು ನಾನೇ ಮಾಡುವೆನೆಂದು ಹೇಳಿ ಮದನ, ಚಂದ್ರಹಾಸನನ್ನು ವೀರಸಿಂಹ, ರಣಸಿಂಹರೊಡನೆ ಅರಮನೆಗೆ ಕಳುಹಿಸುತ್ತಾನೆ.

ಮುಂದಿನ ದೃಶ್ಯದಲ್ಲಿ ಕೊಲೆಗಡುಕರ ಬಲೆಗೆ ಮದನ ಸಿಲುಕಿ ಉರುಳುತ್ತಾನೆ. ಕೊಲೆಗಡುಕರು ಓಡಿ ಹೋಗುತ್ತಾರೆ. ಮದನ ಕ್ರಮೇಣ ಎಚ್ಚರಗೊಳ್ಳುತ್ತಾನೆ. ನಡೆದ ಘಟನೆಯ ರಹಸ್ಯದ ಅರಿವಾಗುತ್ತದೆ. ಆತನಲ್ಲಿ ಒಂದು ಬಗೆಯ ತೃಪ್ತಿ ಮೂಡಿದೆ ಏಕೆಂದರೆ ಚಂದ್ರಹಾಸ ಆತನನ್ನು ಉಳಿಸಿದ್ದಾನೆ.

ಅಯ್ಯೋ ಇರಿಯುತ್ತಿದ್ದರು ನಿನ್ನನಿವರು!
ನೀನುಳಿದೆ, ಶ್ರೀಹರಿಯ ಕೃಪೆಯಿಂದೆ:
ತಂಗಿ, ನಿನ್ನ ಓಲೆಯ ಭಾಗ್ಯ ಚಿರವಾಗಲಿ!
ಓ ಚಂದ್ರಹಾಸ, ನಿನ್ನ ಭಕ್ತಿಯೆ ನಿನ್ನ ರಕ್ಷಿಸಿತು!
ಅದಕಾಗಿ ನಾ ಧನ್ಯ. ನನ್ ನಸಾವೂ ಧನ್ಯ!
ಶ್ರೀಹರಿ ! ಶ್ರೀಹರಿ ! ಶ್ರೀಹರಿ ! ಶ್ರೀಹರಿ !

ಎಂದು ಹೇಳುತ್ತಿರುವಾಗ, ಮಗನು ಬಲಿಯಾದ ಸುದ್ಧಿ ದುಷ್ಟಬುದ್ಧಿಗೆ ಮುಟ್ಟಿ, ಮಳೆಯಲ್ಲಿ ತೋಯಿಸಿಕೊಂಡು ಆವೇಶದಲ್ಲಿ ಬಂದು ಮಗನ ಸ್ಥಿತಿಕಂಡು ಪಿತೃಹೃದಯದಳಲು ಉಕ್ಕಿ, ‘ಓ ಮದನಾ ಮೇಲೇಳು ನಿನಗಾಗಿ ಬಾಳಿದೆನ್, ನಿನಗಾಗಿ ಆಳಿದೆನ್, ನಿನಗಾಗಿ ರಕ್ತದೀ ನರಕದಲಿ ಮುಳುಗಿಹೆನ್’ ಎನ್ನುತ್ತಾ ಮಾಡಿದ ತಪ್ಪಿಗೆ ಪಶ್ಚಾತ್ತಾಪದ ಕಂಬಿ ಸುರಿಸುತ್ತಾನೆ. ಆತ್ಮ ತಿರಸ್ಕೃತಿ ದೇಹದಾದ್ಯಂತ ತುಂಬಿ ಬಂದು ಮದನನ ಪಕ್ಕದಲ್ಲಿ ಬಿದ್ದಿದ್ದ ಖಡ್ಗವನ್ನೆತ್ತಿಕೊಂಡು

ಓ ನರಕ, ಬಾಯಿ ತೆರೆ, ಹಿಂದೆಂದೂ ನಿನ್ನೆಡೆಗೆ
ಬಂದಿರದ ನರನೊಬ್ಬನಿಂದು ಬರುತಿಹನು!
ಬೆದರದಿರು !

ಎಂದು ಇರಿದುಕೊಂಡು ಸಾಯುತ್ತಾನೆ. ಕೊನೆಯಲ್ಲಿ ತನ್ನ ಗುಣದರಿವು ತನಗಾಗುತ್ತದೆ, ಎನ್ನುವುದಕ್ಕಿಂತ ಮಕ್ಕಳ ಮೇಲಿನ ಮೋಹ ಈ ಸ್ಥಿತಿಗೂ ಎಳಸುತ್ತದೆ ಎನ್ನುವಂತಿದೆ.

ಈ ವಿಷಯ ಗೊತ್ತಾದಾಗ ಚಂದ್ರಹಾಸ ವಿಷಯೆಯೊಮದಿಗೆ ಧಾವಿಸಿ ಬರುತ್ತಾನೆ. ಚಾಂಡಾಲರಿಂದ ಅಲ್ಲಿರುವವರಿಗೆಲ್ಲ ವಿಷಯ ತಿಳಿದಾಗ ಪುರೋಹಿತ ಗಾಲವ ಹೇಳುತ್ತಾನೆ :

ಶಶಿಹಾಸ, ಶ್ರೀಹರಿಯೆ ಕಾಪಾಡಿದನು ನಿನ್ನ !…
ಕರ್ಮಫಲ ತಪ್ಪುವುದೆ?…ದೈವವನು ಮಿರುವರೆ?…ದೇವರಿಗಿದಿರ್ವೋಗೆ
ವಂಚಕರೆ ವಂಚಿತರ್!

ಆದರೆ, ಇಲ್ಲಿ ಮದನ ಮಾಡಿದ ತಪ್ಪು ಏನೂ ಇಲ್ಲ. ಭಾವಾವೇಶಕ್ಕೊಳಗಾಗಿ ದೈವೀ ಆರಾಧನೆಯಲ್ಲಿ ತೊಡಗಿ ಮದನನ್ನು ಬದುಕಿಸಿಕೊಳ್ಳುತ್ತಾನೆ. ಅವನ ಪ್ರಾಣ ಹೋಗಿರದೇ ಮೂರ್ಛೆ ಹೋಗಿರುತ್ತಾನೆ. ಎಚ್ಚರಾದಾಗ ಭಗವತ್ ಕೃಪೆಯೇ ಈ ಸನ್ನಿವೇಶ ಎಂದು ತಿಳಿಯುತ್ತದೆ. ಗಾಲವನು ನಿಷ್ಪಾಪಿಯ ಬಲಿ ತಪ್ಪಿಸುತ್ತಾನೆ.

ಇಲ್ಲಿಗೆ ಈ ರಂಗನಾಟಕ ಮುಗಿಯಿತು ಎಂದು ನಾವು ಅಂದುಕೊಳ್ಳುತ್ತಿರುವಾಗ ಮಹಾಕವಿಗಳು ಇನ್ನೊಂದು ಕೊನೆಯ ದೃಶ್ಯವನ್ನು ಸೇರಿಸಿದ್ದಾರೆ. ಅದು ರಂಗಕೃತಿಗೆ ಪ್ರತಿಮಾಪೂರ್ಣವಾದ ದೃಶ್ಯವಾಗಿ ಹೊಹೊಮ್ಮಿದೆ. ಆರಂಭದಲ್ಲಿ ಕಾಣಿಸಿಕೊಂಡ ಮೂವರು ದೇವಿಯರು ಕಾಣಿಸಿಕೊಂಡು, ಈಗಿನ ಕಾಲದ ಕಂಪನಿ ನಾಟಕ ಪ್ರದರ್ಶನದ ಕೊನೆಗೆ ಹೇಳುವಂತಹ, ಹುಯಿಲಗೋಳ ನಾರಾಯಣರಾಯರ ‘ಜಯ ಜಯ ಗುರುವರ ಕರುಣ ಸಾಗರ’ ಎಂಬ ಮಂಗಳಾರತಿಯ ಮುಕ್ತಾಯದ ಹಾಡಿನಂತೆ, ಮೂವರು ದೇವಿಯರು ನರ್ತಿಸುತ್ತಾ,

ಮೋದಂತೇ ಪಿರೋ ನೃತ್ಯಂತಿ ದೇವತಾಃ
ಸನಾಥಾ ಛಿಯಂ ಭೂರ್ಭವತಿ!

ಹಾಡುತ್ತಿರುವಾಗ ಪರದೆ ಬೀಳುತ್ತದೆ.

ಇಲ್ಲಿ ಮಹಾಕವಿಗಳು ಚಂದ್ರಹಾಸನ ಕಥೆಯನ್ನು ಕಲಾತ್ಮಕವಾಗಿ, ದರ್ಶನಾತ್ಮವಾಗಿ ರಂಗಕೃತಿಯಾಗಿ, ಅವರ ನಾಟ್ಯಪ್ರತಿಭೆಯಿಂದ ಹೊರಹೊಮ್ಮಿದೆ ಎಂಬುದು ಸತ್ಯದ ಮಾತು. ಕಥಾನಕ ಪ್ರಸ್ತುತ ಪಡಿಸುವಿಕೆಯಿಂದ ಆರಂಭಿಸಿ, ಪಾತ್ರಗಳ ಪೋಷಣೆಯಲ್ಲಿಯೂ ಹೆಚ್ಚಾಗಿ ಪ್ರಾಚೀನ ಕವಿ ಲಕ್ಷ್ಮೀಶನನ್ನು ಅನುಸರಿಸಿರುವುದನ್ನು ಅವರು ನೇರವಾಗಿ ಹೇಳಿಕೊಂಡಿರುವುದರಿಂದ ಇದರಲ್ಲಿ ಮುಚ್ಚುಮರೆಯೆಂಬುದಿಲ್ಲ. ಹಂಗಂತ ಯಥಾವತ್ ಅನುಕರಣೆಯೂ ಅಲ್ಲವಾಗಿದೆ ಮತ್ತು ಪ್ರಾಚೀನ ಕವಿಯ ಪ್ರೇರಣೆಯೂ ಆಗಿದೆಯೆಂದರೆ ಅತಿಶಯೋಕ್ತಿಯೇನಲ್ಲ. ಕುತೂಹಲಕಾರಿಯಾದ ನಾಟಕದ ಅಂತ್ಯ, ದುಷ್ಟನಿರ್ನಾಮ, ಶಿಷ್ಟಪರಿಪಾಲನೆ ಎನ್ನುವಂತೆ ಮರುನಿರ್ಮಿಸಿದ್ದಾರೆ. ಏಕೈಕ ನಿಷ್ಟೆಯಿಂದ ಲಭಿಸುವ ಆತ್ಮದ ಅತೀಂದ್ರಿಯ ಶಕ್ತಿಯ ಸಂಕೇತಕ್ಕೂ ಸಾಕ್ಷಿಯಾಗುವಂತಹ ಸಂಗತಿಗಳನ್ನು ಅಳವಡಿಸಿರುವುದು, ಕರ್ಮ ಸಿದ್ಧಾಂತದ ತಾರ್ಕಿಕ ಮಟ್ಟ ಮೆಚ್ಚುಗೆಯಾಗುತ್ತವೆ. ಮಹಾಕವಿ ಕುವೆಂಪುರವರ ಲೇಖನಿಯಲ್ಲಿ ಅತ್ಯುತ್ತಮ ಸುಧೀರ್ಘ ರಂಗನಾಟಕವಾಗಿ ಹೊರಹೊಮ್ಮಿದೆ.

*****

 

 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಆತ್ಮೀಯ ಸಿದ್ದರಾಮ್, ಇನ್ನೂ ಆಳಕ್ಕೆ ಇಳಿಬೇಕ್ರಿ…ನಿಮ್ಮ ರಂಗಭೂಮಿಯ ಪ್ರ್ಯಾಕ್ಟಿಕಲ್  ಅನುಭವವನ್ನು ಮಹಾಕವಿಗಳ ನಾಟಕದ ಮರುಓದು/ಮರುಪರಿಚಯದ ಸಂದರ್ಭದಲ್ಲಿ, ಕಳೆದ ಶತಮಾನದಲ್ಲಿ ರಚನೆಗೊಂಡು ಇಂದಿಗೂ ತಮ್ಮ ಪ್ರಸ್ತುತತೆಯಿಂದ ತಾಜಾತನದೊಂದಿಗೆ ಹೊಳೆಯುತ್ತಿರುವ ಕೃತಿಗಳನ್ನು ಇಂದಿನ ಪೀಳಿಗೆಗೆ ತಕ್ಕನಾಗಿ ಹೇಳಬೇಕು. ನಿಮ್ಮ ಪ್ರಯತ್ನಕ್ಕೆ ಶುಭಹಾರೈಕೆಗಳು.

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಧನ್ಯವಾದಗಳು ಸರ್…

Santhoshkumar LM
10 years ago

Good one!

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಧನ್ಯವಾದಗಳು….

cheemanahalli
cheemanahalli
10 years ago

olle prayatna ri. good one

Jayaprakash Abbigeri
Jayaprakash Abbigeri
10 years ago
Reply to  cheemanahalli

ಧನ್ಯವಾದಗಳು…

Gaviswamy
10 years ago

ಚಂದ್ರಹಾಸನ ಕತೆಯೇ ರೋಚಕವಾಗಿದೆ.
ಈಗಿನ ತಲೆಮಾರಿನ ಓದುಗರಿಗೆ ಮಹಾಕವಿಗಳ 
ನಾಟಕಗಳನ್ನು ತುಂಬಾ ಸರಳವಾಗಿ , ಆಪ್ತ ರೀತಿಯಲ್ಲಿ 
ಪರಿಚಯಿಸುತ್ತಿದ್ದೀರಿ. ಧನ್ಯವಾದಗಳು ಸರ್. 

 

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago
Reply to  Gaviswamy

ಡಾ.ಗವಿಸ್ವಾಮಿಯವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು…

8
0
Would love your thoughts, please comment.x
()
x