ಜಾತಿ! :ಡಾ. ಗವಿ ಸ್ವಾಮಿ

 


ನಾಗರಹೊಳೆ ಮತ್ತು ಬಂಡಿಪುರ ರಾಷ್ಟ್ರೀಯ ಉದ್ಯಾನವನಗಳ ನಡುವೆ ಓಂಕಾರ್ ರೇಂಜ್ ಎಂಬ ಅರಣ್ಯ ಇದೆ. ಅದರ ಸೆರಗಿನಲ್ಲಿ ಶಿವಕುಮಾರಪುರ ಎಂಬ ಗ್ರಾಮ ಇದೆ. ಆ ಗ್ರಾಮದ ಜನರಿಗೆ ನಿತ್ಯವೂ ಕಾಡುಪ್ರಾಣಿಗಳೊಂದಿಗೆ ಸಂಘರ್ಷ ನಡೆಸಬೇಕಾದ ಪರಿಸ್ಥಿತಿ . ಇಂಡೋ-ಪಾಕ್ ಗಡಿಗಿಂತ ಒಂದು ಕೈ ಹೆಚ್ಚು ಉದ್ವಿಗ್ನತೆಯನ್ನು ಇಲ್ಲಿ ಕಾಣಬಹುದು. ಕಾಡು ಪ್ರಾಣಿಗಳೇ ಇಲ್ಲಿ ರೈತರ ಪಾಲಿನ terrorist ಗಳು! ರೈತರಿಗೂ ಫಾರೆಸ್ಟಿನವರಿಗೂ ಇಲ್ಲಿ ನಿರಂತರ ತಿಕ್ಕಾಟ.

ನಮ್ಮ ದನಗಳನ್ನು ಫಾರೆಸ್ಟಿನ  ಬೌಂಡರಿ ದಾಟಲು ಬಿಡುವುದಿಲ್ಲ; ಹಿಂದೆಲ್ಲಾ ಸಣ್ಣ ಪುಟ್ಟ ಕಟ್ಟಿಗೆ ಆಯ್ದುಕೊಳ್ಳಲು ಒಳ ಹೋಗುತ್ತಿದೆವು, ಈಗ ಅದಕ್ಕೂ ನಿರ್ಬಂಧ. ನಮ್ಮನ್ನು ಎಷ್ಟು ಕಟ್ಟುನಿಟ್ಟಾಗಿ ಹೊರಗಿಟ್ಟಿದ್ದಾರೋ, ಹಾಗೇ ಅವರ ಆನೆಗಳನ್ನೂ ಹದ್ದುಬಸ್ತಿನೊಳಗೆ ಇಟ್ಟುಕೊಳ್ಳಲಿ ಎಂಬುದು ರೈತರ ವಾದ. ‘ಜಾತಿ’ ಎಂಬ ಪದಕ್ಕೆ ಈ ರೀತಿಯದ್ದೂ ಒಂದು ಅರ್ಥ ಇದೆ ಅಂತ ನನಗೆ ತಿಳಿದದ್ದು  ಆವಾಗಲೇ.

ನಾಲ್ಕು  ವರ್ಷಗಳ ಹಿಂದಿನ ಮಾತು. ಒಬ್ಬ ರೈತ ಬಂದಿದ್ದ. ಬೆಳಿಗ್ಗೆ 9ರ ಸಮಯ.

” ಒಂದ್ ಸರ್ಟಪಿಟ್ ಕೊಡಿ ಸಾ…  ನಮ್ದೊಂದ್ ಹಸುವ ಜಾತಿ ಹೊಡ್ದಾಕ್ಬುಟ್ಟದ’ ಅಂದ.

ಅರೆ! ಜಾತಿ ಮನುಷ್ಯರನ್ನು ಹೊ(ಒ)ಡೆಯುತ್ತದೆ ಅಂತ ಗೊತ್ತು ; ಪ್ರಾಣಿಗಳನ್ನೂ ಬಿಡುವುದಿಲ್ಲವಾ ?

”ಜಾತಿ ಅಂದ್ರೆ ? ”

”ಹುಲಿ ಸಾ”

”ಸರಿ ನಡೆಯಪ್ಪ ಹೋಗೋಣ” ಎಂದು ಅವನ ಜೊತೆ ಹೊರಟೆ.

ಅದು ಕಾಡಿಗೂ ಊರಿಗೂ ನಡುವೆ ಇರುವ ವಿಶಾಲ ಗೋಮಾಳ. ಹುಲಿಯ ಹೆಜ್ಜೆ ಗುರುತುಗಳ ಜಾಡನ್ನು ತೋರಿಸುತ್ತಾ, ಹಸು ಸತ್ತು ಬಿದ್ದಿರುವ ಜಾಗಕ್ಕೆ ಕರೆದುಕೊಂಡು ಹೋದ. ಹಸುವಿನ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಂಡಿತ್ತು ಹುಲಿ. ಒಂದು ತೊಡೆಯ ಖಂಡವನ್ನು ಪೂರ್ತಿ ಬಗೆದು ತಿಂದಿತ್ತು.

”ಜಿನಕ್ಕ ಏಳೆಂಟ್ ಲೀಟ್ರು ಕರತಿತ್ತು ಸಾ…ಇದೇ ಜೀವ್ಣ ಆಗಿತ್ತು ನಮ್ಗ” ಪಂಚೆಯ ಸೆರಗಿನಿಂದ  ಕಣ್ಣೊರೆಸಿಕೊಂಡ.

”ಫಾರೆಸ್ಟಿನವರು ಎಷ್ಟು ಕೊಡ್ತಾರೆ ? ”

”ಒಂದಾ ಏಡಾ ಕೊಡ್ತಾರ ಸಾ ಅಷ್ಟಿಯಾ…ಅದರ್ಲಿ ನಮ್ಗ ಹಸು ಬಂದದ ಸಾ …ಕಾಪಿ  ಕಳ್ಳಪುರಿಗಾಯ್ತದ ಅಷ್ಟಿಯಾ ”

ಇದೊಂದು ಉದಾಹರಣೆಯಷ್ಟೇ .

ಹೀಗೆ ಹುಲಿ ಚಿರತೆಗಳಬಾಯಿಗೆ ಹತ್ತಾರು ರಾಸುಗಳು ಆಹಾರವಾಗಿವೆ.

ಇಲ್ಲಿನ ರೈತರು ವರ್ಷಪೂರ್ತಿ ಬೆವರಿಸಿಳಿ ಬೆಳೆದ ಕಬ್ಬು , ಬಾಳೆ ಜೋಳ ಮುಂತಾದ  ಬೆಳೆಗಳನ್ನು ಒಂದೇ ರಾತ್ರಿಯಲ್ಲಿ ಧ್ವಂಸ ಮಾಡಿಬಿಡುತ್ತವೆ ಆನೆಗಳು. ಈಗಂತೂ solar fencing ಗಳನ್ನೂ ಮುರಿದು ಒಳಬರಲು ಶುರು ಮಾಡಿವೆ.ಇದರ ಜೊತೆ ಕಾಡು ಹಂದಿಗಳ ಹಾವಳಿ ಬೇರೆ. ಪಕ್ಕದ ಗ್ರಾಮದ ರೈತನೊಬ್ಬ ಎರಡು ತಿಂಗಳ ಹಿಂದೆಯಷ್ಟೇ ಕಾಡು ಹಂದಿಯಿಂದ ತಿವಿತಕ್ಕೊಳಗಾಗಿ ಸತ್ತು ಹೋದ.

ಇಲ್ಲಿನ ಜನ ತಮ್ಮ ಹೊಲಗಳನ್ನು ನಿದ್ದೆಗೆಟ್ಟು ಕಾಯುತ್ತಾರೆ. ಆನೆಗಳಿಗೆ ಹೆದರುವುದಿಲ್ಲ. ಪಟಾಕಿಗಳನ್ನು ಹೊಡೆದು ತಮಟೆಯ ಸದ್ದು ಮಾಡಿಕೊಂಡು ಆನೆಗಳನ್ನು ಹಿಮ್ಮೆಟ್ಟಿಸುತ್ತಾರೆ. ಕೆಲವರು ಟ್ರ್ಯಾಕ್ಟರುಗಳನ್ನು start ಮಾಡಿಕೊಂಡು, ಜೋರಾಗಿ horn ಮಾಡುತ್ತಾ ಆನೆಗಳ ಗುಂಪಿನೆಡೆಗೆ ನುಗ್ಗಿಸುತ್ತಾರೆ. ಇದರಿಂದ ಬೆದರಿದ ಆನೆಗಳು ಹಿಮ್ಮೆಟ್ಟುತ್ತವೆ.

ಅದೇ ಊರಿನಲ್ಲಿ  ex-serviceman ಒಬ್ಬರು ತೋಟ ಮಾಡಿಕೊಂಡಿದ್ದಾರೆ. ಆ ಮನುಷ್ಯನ ಧೈರ್ಯವನ್ನು ಊರವರಿಗೆಲ್ಲಾ ಹಂಚಬಹುದು. ಭಯಂಕರ ಸಿಟ್ಟಿನ ಮನುಷ್ಯ.  ಅವರ ಬಂದೂಕಿಗೆ ಇನ್ನೂ
ಒಂದೂ ಆನೆಯೂ ಬಲಿಯಾಗಿಲ್ಲ ಎಂಬುದೇ ಎಂಬುದೇ ಆಶ್ಚರ್ಯದ ಮತ್ತು ನೆಮ್ಮದಿಯ   ವಿಷಯ. ಅದು ಅಮಾವಾಸ್ಯೆ ಅಪರಾತ್ರಿಯೇ ಇರಲಿ, ಪ್ರತಿ ರಾತ್ರಿ ತಪ್ಪದೇ rounds ಹೋಗುತ್ತಾರೆ. ಅಕ್ಕಪಕ್ಕದ ಜಮೀನಿನವರಿಗೆ ಇವರೇ ಆಸರೆ. ನಾನು ಅವರ ತೋಟಕ್ಕೆ ಹೋದಾಗಲೆಲ್ಲ ಹೊಸದೊಂದು story ಕಾದಿರುತ್ತದೆ. ಅವರು ಹೇಳಿದ ಅಂಥದ್ದೊಂದು interesting ಘಟನೆ.

”ರಾತ್ರಿ ಹನ್ನೆರಡಾಗಿತ್ತು. ಎರಡು ಪೆಗ್ ಹಾಕಿ ಕುರ್ಚಿಗೆ ಒರಗಿಕೊಂಡಿದ್ದೆ. ಮೆಲ್ಲಗೆ ನಿದ್ರೆ ಆವರಿಸುತ್ತಿತ್ತು. ದಡಬಡ ಬಾಗಿಲು ಬಡಿದ ಸದ್ದು. ಮೇಲೆ ಎದ್ದವನೇ ಬಂದೂಕಿನಲ್ಲಿ ಎಷ್ಟು ರೌಂಡ್ಸ್ ಗಳಿದ್ದಾವೆಂದು ಚೆಕ್ ಮಾಡಿದೆ. ಐದು ರೌಂಡ್ಸ್ ಇತ್ತು. ತಲೆ ಬ್ಯಾಟರಿ ಹಾಕಿಕೊಂಡೆ. ಬಾಗಿಲು ತೆರೆದು ನೋಡಿದೆ. ಪಕ್ಕದ ಜಮೀನಿನ ಮೂವರು ಮಂದಿ ನಿಂತಿದ್ದರು. ಭಯಭೀತರಾಗಿದ್ದರು. ಏನಾಯ್ತೆಂದು ಕೇಳಿದೆ. ಉಸಿರೇ ಹೊರಡುತ್ತಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದಾರೆ. ತಲೆ ಬ್ಯಾಟರಿಯನ್ನು ಸರಿಮಾಡಿಕೊಂಡು ಒಮ್ಮೆ ನೋಡಿದೆ. ಮನೆ ಮುಂದಿರುವ ಕಬ್ಬಿನ ತೋಟದಲ್ಲಿ – ನಾಮ ಹಾಕಿದಂತೆ – ಒತ್ತಾಗಿ ಮೇಯುತ್ತಾ ನಿಂತಿವೆ ಮೂರು ಭರ್ಜರಿ ಆನೆಗಳು. ಅದೂ ಕೇವಲ ಮೂವತ್ತು ಮೂವತ್ತೈದು  ಮೀಟರುಗಳಷ್ಟು ದೂರದಲ್ಲಿ. ಮೂರು ರೌಂಡ್ random fire ಮಾಡಿದೆ.  ಅಷ್ಟರಲ್ಲಿ ಎರಡು ಆನೆಗಳು ಪೇರಿ ಕಿತ್ತಿದ್ದವು. ಒಂದು ಮಾತ್ರ
ಹೋಗಲೋ ಬೇಡವೋ ಎಂಬಂತೆ ತಿರುಗಿ ತಿರುಗಿ ನೋಡಿಕೊಂಡು ಹೋಗುತ್ತಿತ್ತು. ನನಗೆ ತಲೆ ಕೆಟ್ಟು ಹೋಯ್ತು. ಓಡಿ ಹೋಗಿ ಬಂದೂಕಿನ knife ನಿಂದ ಐದಾರು ಬಾರಿ ತೊಡೆಗೆ ತಿವಿದೆ. ಆಗ ಓಡಿ ಹೋಯ್ತು ” .

ಹದಿನೈದು ದಿನಗಳ ಹಿಂದೆ ಅವರ ಪ್ರೀತಿಯ labrador  ನಾಯಿ ನಾಪತ್ತೆಯಾಗಿತ್ತು. ಮೊನ್ನೆ ನಾನು ಅವರ ತೋಟಕ್ಕೆ ಹೋದಾಗ ಕಬ್ಬಿನ  ಗದ್ದೆಯೊಳಕ್ಕೆ ಕರೆದೊಯ್ದರು. ಅವರ ಪ್ರೀತಿಯ ನಾಯಿ ಏನಾಯ್ತೆಂಬುದಕ್ಕೆ ಅಲ್ಲಿ ಉತ್ತರ ಸಿಕ್ಕಿತು. ಕಬ್ಬಿನ ತರಗಿನೊಳಗೆ ಬಿಳಿ  ತುಪ್ಪಳದ ಉಂಡೆಗಳು ಚೆದುರಿಕೊಂಡು ಬಿದ್ದಿದ್ದವು. ಅದು ಚಿರತೆಯದ್ದೇ ಕೆಲಸ, ಹಿಂದೊಮ್ಮೆ ಮಧ್ಯರಾತ್ರಿಯಲ್ಲಿ ಚಿರತೆಯೊಂದು attempt ಮಾಡಿದ್ದನ್ನು ನಾನು ನೋಡಿದ್ದೆ ಎಂದರು.

ಅವರೊಂದು ಹುಲಿಯ ಬಗ್ಗೆ ಹೇಳುತ್ತಾರೆ. ಪ್ರತಿ ಅಮಾವಾಸ್ಯೆಯೆಂದು ತಪ್ಪದೇ ಕಾಣಿಸಿಕೊಳ್ಳುತ್ತದಂತೆ. ಏಕೆ ಹಾಗೆ ಎಂದು ಕೇಳಿದೆ. ಅದಕ್ಕವರು ಬೆಟ್ಟದ ಕಡೆಗೆ ಕೈ ತೋರಿಸಿದರು. ಆ ಬೆಟ್ಟದ ಮೇಲೊಂದು
ದೇವಸ್ಥಾನವಿದೆಯಲ್ಲಾ ಅಲ್ಲಿಗೇನಾದರೂ ಹೋಗುತ್ತದಾ ಎಂದು ಕೇಳಿದೆ. ಅದಕ್ಕವರು, ಇದ್ದರೂ ಇರಬಹುದು i am not sure ಎಂದರು.

ದೇವಸ್ಥಾನ ಎಂದೊಡನೆ ನೆನಪಾಗುತ್ತಿದೆ.ಬಂಡಿಪುರದ ಕಾಡಿನ ಸೆರಗಿನಲ್ಲಿ ಚಿಕ್ಕ ಎಲಚಟ್ಟಿ ಎಂಬ ಸಣ್ಣ ಹಳ್ಳಿಯಿದೆ. ಅಲ್ಲೊಂದು ಮಾದೇಶ್ವರನ ದೇವಾಲಯವಿದೆ. ಸಂಜೆಯಾಯಿತೆಂದರೆ ಭರ್ಜರಿ ಗಾತ್ರದ
ಹುಲಿಯೊಂದು ದೇಗುಲದ ಮುಂದೆ ಧ್ಯಾನಿಸುತ್ತಾ ಕುಳಿತಿರುತ್ತಿತ್ತಂತೆ.ಈ ಮಾತನ್ನು ನಾನು ಹಲವರ ಬಾಯಲ್ಲಿ ಕೇಳಿದ್ದೇನೆ. ಮುಂದೊಂದು ದಿನ ಆ ಹುಲಿ ಬೇಟೆಗಾರರಿಗೆ ಬಲಿಯಾಯಿತು, ಆ ಬೇಟೆಗಾರರು
ಸ್ಥಳೀಕರೇ ಎಂಬುದನ್ನು ಕೇಳಿದ್ದೇನೆ. ಈಗಲೂ ಬಂಡಿಪುರದಲ್ಲಿ ಹುಲಿ ಬೇಟೆ ನಿಂತಿಲ್ಲ. poachingನ ಒಂದು ದೊಡ್ಡ ಜಾಲವೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಾಫಿಯಾ ನಡೆಯುತ್ತಿದೆ. ಹುಲಿ ಉಗುರು, ಚರ್ಮ ಮತ್ತು ಮೂಳೆಗಳಿಗೆ ಚೀನಾದಲ್ಲಿ ಭಾರೀ ಬೇಡಿಕೆಯಿದೆ.

ನಮ್ಮ ರೈತರಲ್ಲಿ  ಕೆಲವರು – ಅಸಹಾಯಕತೆಯಿಂದ, last resort ಎಂಬಂತೆ-ಆನೆ ಮತ್ತು ಕಾಡು ಹಂದಿಗಳನ್ನು ದೂರವಿಡಲು ರಾತ್ರಿಯಾಯ್ತೆಂದರೆ ಹೊಲದ ಸುತ್ತಾ ಕರೆಂಟು ಹಾಯಿಸುತ್ತಾರೆ. ಇದು
ಅತ್ಯಂತ dangerous. ಹತ್ತಾರು ಆನೆಗಳು ಜೀವ ಕಳೆದುಕೊಂಡಿವೆ.  ರೈತರ ಜೀವಕ್ಕೂ ಕುತ್ತು ಬಂದಿದೆ. ಅಂಥ ಒಂದು ದಾರುಣ ಘಟನೆಯನ್ನು ನಮ್ಮ ಕಡೆ ಈಗಲೂ ಸ್ಮರಿಸಿಕೊಳ್ಳುತ್ತಾರೆ.

ಮೂರು ವರ್ಷಗಳ ಹಿಂದೆ, ನಮ್ಮೂರಿಗೆ ಎರಡು ಮೈಲು ದೂರವಿರುವ ಪಕ್ಕದ ಊರಿನ ಜಮೀನಿನಲ್ಲಿ ಆನೆಯೊಂದು ಕರೆಂಟಿಗೆ ಸಿಲುಕಿ ಸತ್ತು ಹೋಗಿತ್ತು. ಪಾಪ ಅದರ ಮರಿಯ ರೋದನವನ್ನು ನೋಡಲು
ಆಗುತ್ತಿರಲಿಲ್ಲ.  ಒಮ್ಮೆ ಅದರ ಅಮ್ಮನ ಸುತ್ತಾ ಪ್ರದಕ್ಷಿಣೆ ಹಾಕಿದರೆ, ಮತ್ತೊಮ್ಮೆ ತನ್ನ ಪುಟ್ಟ ಸೊಂಡಿಲಿನಿಂದ ಅಮ್ಮನ ಕೆನ್ನೆಯನ್ನು ಸವುರುತ್ತಿತ್ತು. ಆ ದೃಶ್ಯವನ್ನು ನೋಡುತ್ತಿದ್ದ  ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕಣ್ಣೀರಿಡುತ್ತಿದ್ದರು.

ರೈತ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಒಂದು ಸೂಕ್ಷ್ಮ ಘಟ್ಟಕ್ಕೆ ಬಂದು ನಿಂತಿದೆ. ದೂರದಲ್ಲಿ ನಿಂತು ನೋಡುವವರಿಗೆ, ಕಾನೂನನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವವರಿಗೆ ಮತ್ತು ಪ್ರಾಣಿ ಪ್ರಿಯರಿಗೆ ರೈತ ಅಪರಾಧಿಯಂತೆ ಕಾಣುತ್ತಾನೆ. ಆದರೆ, ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೇರವಾಗಿ battle field ಗೇ ಬರಬೇಕು. ಇವರೀರ್ವರ ಸಂಘರ್ಷವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಸಹೃದಯದಿಂದ ನೋಡಬೇಕು. ಆಗ ಅರ್ಥವಾಗುತ್ತದೆ; ಪಾಪ ಇವರೀರ್ವರೂ ಪರಸ್ಪರ ಅಳಿವು ಉಳಿವಿಗಾಗಿ ಹೋರಾಡುತ್ತಿರುವ ನತದೃಷ್ಟರು ಎಂದು. ಆಗ ಅರ್ಥವಾಗುತ್ತದೆ; ಈರ್ವರ ಭವಿಷ್ಯವೂ ಕಾಲ ಕಳೆದಂತೆ ಮಂಕಾಗುತ್ತಿದೆಯೆಂದು. ಆಗ ಅನಿಸುತ್ತದೆ; are they fighting the losing battle? ಈ ಸಂಘರ್ಷ ಕೊನೆಯಾಗುವುದೆಂದು? ಮುಂದೆ ಇನ್ನೂ ಭೀಕರ ಸನ್ನಿವೇಶಗಳು ಕಾದಿವೆಯಾ?ನೆನೆಸಿಕೊಂಡರೆ ಭಯವಾವಾಗುತ್ತದೆ.

ಒಬ್ಬ ವೃದ್ಧ ಹೇಳುತ್ತಿದ್ದರು, ‘ನಮ್ ಕಾಲದಲ್ಲಿ ಮಳೆಬೆಳೆ ಚೆಂದಾಗಾಯ್ತಿತ್ತು…ಆಗ ಆನೆವು ಗಿಡು ಬುಟ್ಟು ಈಚ್ಗ ಬತ್ತಿತ್ತಿಲ್ಲ .. ಅಪ್ಪಿತಪ್ಪಿ ಬಂದ್ರೂ ಈ ತರ ರೂಟಿ ಮಾಡ್ತಿರ್ನಿಲ್ಲ…ಕಾಡ್ ಮೇವೆ ಸಾಕಾಯ್ತಿತ್ತು ಅವ್ಕ.. ಈಗ ಅವ್ಕ ಅಲ್ಲ್ಯಾನಿದ್ದು ಅಂತ್ಯಾ… ಎಲ್ಲ ಒಣಗಿ ಬೂದಿಯಾಗದ …ಅದಕ್ಕೇ ಇತ್ಲಾಗ್ ತಿರಿಕಂಡವ ”

ಈಗ ಬಂಡೀಪುರದ ಕಾಡಿನಲ್ಲಿ ಪ್ರಾಣಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಮೇವು ನೀರಿಲ್ಲದೇ  35-40ವರ್ಷದ ಆನೆಗಳೂ ಸಾಯುತ್ತಿವೆ. ಟ್ಯಾಂಕರುಗಳಲ್ಲಿ ಕಾಡಿಗೆ ನೀರು ಪೂರೈಸಲಾಗುತ್ತಿದೆ. ಈ ದಾರುಣ ಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಗಬೇಕಾದರೆ ಒಂದಲ್ಲಾ ಎರಡಲ್ಲಾ ಐದಾರು ದೊಡ್ಡ ಮಳೆ ಹುಯ್ಯಬೇಕು.

ಅಜ್ಜ ಒಂದು ಸ್ವಾರಸ್ಯಕರ ಮಾತು ಹೇಳಿದರು,”ನಮ್ಮ ಕಾಲ್ದಲ್ಲಿ ನಾನು ಹೊಲ ಕಾಯ್ತಿದ್ದಾಗ, ಒಂದು ಅಟ್ಟಣಿ ಮಾಡಿ ಅದರ ಮ್ಯಾಲೊಂದು ಗುಳ್ ಹಾಕಂಡು ಮನಿಕತಿದ್ದಿ.. ಸಂದ ವತ್ಗ ತರ್ಗು ಪರ್ಗು ಗುಡ್ಡ ಹಾಕಿ ಬಿಂಕಿ ಹಾಕ್ತಿದ್ದಿ…ಆ ಟೇಮ್ಗ ಸರಿಯಾಗಿ ಒಂದು  ಹುಲಿ ಬಂದ್ಬುಡ್ತಿತ್ತು… ಬಂದದಿಯಾ ಮುಂಗಾಲೇಡ್ನು ಮುಂದ್ಕ ಚಾಚ್ಗಂಡು ಆಕಳಸ್ಕಂಡು ಬಿಂಕಿ ಮುಂದ ಕೂತ್ಗತಿತ್ತು..ಬಿಂಕಿ ಕಾವಾರಗಂಟ ಕೂತಿದ್ದು ಅದ್ರ ಪಾಡ್ಗ ಒಂಟೋಯ್ತಿತ್ತು…” imagine ಮಾಡಿಕೊಳ್ಳಿ,ಆ ದೃಶ್ಯ ಹೇಗಿರಬಹುದೆಂದು!

ಕೊನೆ ಮಾತು: ಹುಲಿ ಎಂದಾಕ್ಷಣ ಒಂದು ಪದ ನೆನಪಿಗೆ ಬರುತ್ತದೆ. ”ಮಡ್ಕ ಹುಲಿ” ! ಹಿಂದೆಯಲ್ಲಾ ನಮ್ಮ ಕಡೆ ಮಡಿಕೆಯಲ್ಲೇ ಅಡುಗೆ ಮಾಡುತ್ತಿದ್ದರು. ಸಿಟಿಗಳ ಕಡೆ , ‘ಅವನ್ ಬಿಡು ಗುರು ಒಳ್ಳೇ batsman ‘ಅನ್ನುವ ಹಾಗೆ ನಮ್ಮ ಕಡೆ big eater ಗಳನ್ನು ಮಡ್ಕ ಹುಲಿ ಅಂತ ಕರೆಯುತ್ತಾರೆ !

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
prashasti
10 years ago

ಸಖತ್ತಾಗಿದೆ ಸರ್ 🙂
ಕೆಲವೊಮ್ಮೆ ಕಣ್ಣಂಚಿಗೆ ನೀರು ಬಂತು ನಿಂತಿತ್ತು.. "ಮಡ್ಕ ಹುಲಿ" 🙂 🙂 ಸೂಪರ್ 🙂

Hipparagi Siddaram
Hipparagi Siddaram
10 years ago

ಕಾಡಿನ ನೆನಪುಗಳು…ಲೇಖನದಲ್ಲಿಯ ನಿರೂಪಣೆ ಚೆನ್ನಾಗಿದೆ….ಶುಭದಿನ !

Venkatesh
Venkatesh
10 years ago

Very nice….

gaviswamy
10 years ago

thank u so much ಎಲ್ಲರಿಗೂ ಓದಿದಕ್ಕ ಮತ್ತು ಅಭಿಪ್ರಾಯಗಳನ್ನು ಬರೆದದಕ್ಕೆ.

4
0
Would love your thoughts, please comment.x
()
x