ಇದು‌ ಮುಗಿಯದ ಕತೆ; ಮನ- ಮನೆಗಳ ವ್ಯಥೆ!: ಡಾ.ಗೀತಾ ಪಾಟೀಲ

ಇಂದಿನ ದಿನಗಳ ಅನೇಕ ಗಂಭೀರವಾದ ಸಾಮಾಜಿಕ ಸಮಸ್ಯೆಗಳಲ್ಲಿ ಹಿರಿಯರ ಆರೈಕೆ ಹಾಗೂ ನಿರ್ವಹಣೆಯೂ ಒಂದು. ಜೀವನೋಪಾಯ, ಅವಕಾಶಗಳಿಗಾಗಿ ಬೇರೆಯಾಗುತ್ತಿರುವ ಕುಟುಂಬದ ಸದಸ್ಯರು, ಹಬ್ಬ, ಹರಿದಿನ, ಮದುವೆ, ಶವಸಂಸ್ಕಾರ ಮೊದಲಾದ ಕೌಟುಂಬಿಕ ಪರಿಸ್ಥಿತಿಗಳಿಗೂ ಸಹ ಜೊತೆ ಸೇರಲಾಗದಷ್ಟು ಸಾವಿರಾರು ಮೈಲು ದೂರ ನೆಲೆಸಿರುವ ಕುಟುಂಬಗಳು, ಬಡತನ, ಆರ್ಥಿಕ ಸಮಸ್ಯೆಗಳು, ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿತ್ವ ಹಾಗೂ ಮಾನಸಿಕ ಸಂಘರ್ಷಗಳು, ಒಂಟಿ ಜೀವಿಗಳ ಕಳವಳವನ್ನಿರಿಯದ ಕರುಳ ಬಳ್ಳಿಗಳು, ! ಇವೆಲ್ಲವುಗಳ ನಡುವೆ ಸಿಲುಕಿರುವ ಈ ವಿಷಯ ನಿಜಕ್ಕೂ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಅತೀ ಗಂಭೀರ ಸಮಸ್ಯೆಯೇ ಹೌದು!

ಹಿರಿಯ ತಲೆಮಾರು ನಡೆದುಕೊಂಡು ಬಂದ ದಾರಿ, ಅವರು ತಮ್ಮ ಸಂಸಾರ, ಮಕ್ಕಳು- ಮರಿ ಅಂತೆಲ್ಲ ಶ್ರಮಪಟ್ಟ ಪರಿಯನ್ನು ನೋಡದವರು, ಅರಿಯದವರು ಈಗಿನ ತಲೆಮಾರಿನ ಬಹುಪಾಲು ಜನರು! ಇವರು ತ್ಯಾಗ, ಸಹನೆ, ಹೊಂದಾಣಿಕೆ ಎಂಬೆಲ್ಲ ಮೌಲ್ಯಗಳಿಂದ ಸ್ವಲ್ಪಮಟ್ಟಿಗೆ ದೂರವೇ ಇದ್ದಾರೆ ಅಂದ್ರೆ ತಪ್ಪಾಗಲಾರದು. ಜೊತೆಗೆ ಜೀವನೋಪಾಯ, ಸಂಬಂಧ, ಬಾಂಧವ್ಯ, ಜೀವನ ಮೌಲ್ಯಗಳ ನಡುವೆ ಸಂದಿಗ್ಧ ಸ್ಥಿತಿಯಲ್ಲಿ ತೊಳಲಾಟ, ಒದ್ದಾಟ! ಹಾಗಾಗಿ ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಂದಾಣಿಕೆ, ಸಹನೆ, ತ್ಯಾಗ ಮನೋಭಾವ ಎಂಬೆಲ್ಲ ಉನ್ನತ ಗುಣಗಳು ಯುವಜನರಲ್ಲಿ ತೀರಾ ಕಡಿಮೆಯಾಗಿವೆ. ಇನ್ನು ಹಿರಿಯರ ವಿಷಯಕ್ಕೆ ಬಂದರೆ…ಅವರಿಗೆ ಅವರದ್ದೇ ಆದ ವಿಚಾರಗಳು, ಅಪೇಕ್ಷೆಗಳು!! ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ‌ ಮೆರೆದ, ಸಣ್ಣಪುಟ್ಟ ವಿಷಯಗಳಿಗೂ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ಹಿರಿಯರಿಗೆ ಕಿರಿಯರ ಧೋರಣೆ, ನಿಲುವು ಬಹುತೇಕ ಇಷ್ಟವಾಗದೇ ಇರುವುದನ್ನ ನಾವು ಕಾಣುತ್ತೇವೆ. ಇಂದಿನ ಜನಾಂಗಕ್ಕೂ, ವಯಸ್ಸಾದವರಿಗೂ ಇರುವ ಹೊಂದಾಣಿಕೆಯ ಕೊರತೆಯಿಂದಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿ, ಯಾರು ಸರಿ, ಯಾರು ತಪ್ಪು!? ಎಂದು ವಿವೇಚನೆ ಮಾಡಲಾರದ ಸ್ಥಿತಿಯನ್ನು ತಲುಪುತ್ತವೆ. ಸಮಯ, ಸಂದರ್ಭಗಳಿಗೆ ತಕ್ಕಂತೆ ಎಲ್ಲರ ವಿಚಾರಗಳು, ನಿರೀಕ್ಷೆಗಳು ಬದಲಾಗುತ್ತಿರುವಾಗ ಯಾರೂ ಯಾರನ್ನೂ ತಪ್ಪಿತಸ್ಥರೆಂದು ಹೇಳಲಾಗದು! ಇಂದೊಂದು ಮುಗಿಯದ ಕತೆ; ಈ ಕತೆ ಇಂದು ಬಹುತೇಕ ಮನೆಗಳ ಕತೆ ಹಾಗೂ ವ್ಯಥೆಯೂ ಹೌದು! ಬಹಳ ವರ್ಷಗಳ ಹಿಂದೆ ಕನ್ನಡದಲ್ಲಿ ‘ಸ್ಕೂಲ್ ಮಾಸ್ಟರ್’, ಕೆಲವು ವರ್ಷಗಳ ಹಿಂದೆ ಹಿಂದಿಯಲ್ಲಿ‌ ‘ಬಾಗ್ ಬಾನ್’, ಇನ್ನೂ ಅನೇಕ ಚಲನಚಿತ್ರಗಳು ತೆರೆಕಂಡಿದ್ದವು. ಮಕ್ಕಳು ತಮ್ಮ ಜನ್ಮದಾತರನ್ನು ಆಗಲೇ ಹಂಚಿಕೊಂಡು ಸಾಕುತ್ತಿದ್ದರು. ವಯಸ್ಸಾದವರ ವಿರಹ, ನೋವು, ವೇದನೆ ಎಲ್ಲವೂ ಮನಮುಟ್ಟುವಂತಿದ್ದವು. ಅಂದಿಗೂ ಇಂದಿಗೂ ಪರಿಸ್ಥಿತಿಯಲ್ಲಿ ಅಂಥ ಸುಧಾರಣೆಯಾಗಿಲ್ಲ! ಏಕೆಂದರೆ ಸಹಾನುಭೂತಿಯ ಭಾವನೆಗಳು, ಮಾನವೀಯತೆ ಸತ್ತು ಅನೇಕ ವರ್ಷಗಳೇ ಕಳೆದಿವೆ. ಹಾಗಾಗಿ ಇನ್ನೂ ಇಂತಹ ಅನೇಕ ಚಲನಚಿತ್ರಗಳು ಬರುತ್ತಲೇ ಇರುತ್ತವೆ!

ಈಗ ವಯಸ್ಸಾದವರ ಅಳಲು, ಬವಣೆಗಳೆಡೆ ಒಂದಿಷ್ಟು ಕಣ್ಣು ಹಾಯಿಸೋಣ! ವಯಸ್ಸಾಗುವುದು ಜೀವನದ ಸಹಜ ಕ್ರಿಯೆ, ಯಾರಿಗೂ ತಪ್ಪಿದ್ದಲ್ಲ! ಅದರೊಡನೆ ದೈಹಿಕ, ಮಾನಸಿಕ, ಆರ್ಥಿಕ ಸಮಸ್ಯೆಗಳಿದ್ದರಂತೂ ಅವರ ಕತೆ, ವ್ಯಥೆ ಬಲು ದಾರುಣವಾಗಿರುತ್ತವೆ! ಎಲ್ಲೋ ಆಗುವ ಎಡವಟ್ಟು ಇಡೀ ಬದುಕನ್ನೇ ಅಂಧಕಾರವಾಗಿಸುತ್ತದೆ. ಕೃಶವಾಗುವ ದೇಹ, ಒಂಟಿತನದ ಅನುಭವ, ಹೊಂದಾಣಿಕೆಯ ಸಂಕಷ್ಟಗಳು ನಮ್ಮ‌ ಹಿರಿಯರನ್ನು ಇನ್ನಷ್ಟು ಘಾಸಿಗೊಳಿಸುತ್ತವೆ! ಹಾಗಾಗಿ ಹಿರಿಯರಿಗೆ ವೃದ್ಧಾಪ್ಯವೆನ್ನುವುದು ಭಾರವಾಗುತ್ತದೆ, ಪ್ರೀತಿಗಾಗಿ ಹಂಬಲಿಸುವುದೇ ಅವರ ನಿತ್ಯ ಕರ್ಮವಾಗುತ್ತದೆ. ‘ಮಕ್ಕಳಾದವರು ನಮ್ಮನ್ನು ಪೋಷಿಸಬೇಕು’ ಎನ್ನುವ ನಿರೀಕ್ಷೆಗಳು ಅವರ ಸಂಕಷ್ಟಗಳನ್ನು ಹೆಚ್ಚಿಸುತ್ತವೆ. ಇಂದಿನ ದಿನಗಳಲ್ಲಿ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಕೂಡು ಕುಟುಂಬದಲ್ಲಿ ಶಾಂತಿ ಸಮಾಧಾನದಿಂದ ಜೀವನ ನಡೆಸುತ್ತಿರಬಹುದು, ಅದು ಅವರ ಅದೃಷ್ಟವೇ ಸರಿ!‌ ಆದರೆ ಹೊಸ ತಲೆಮಾರಿನ ಬಹುತೇಕ ಕೃತಘ್ನ, ಅವಿವೇಕಿ, ಸಂಸ್ಕಾರಹೀನ ಹಾಗೂ ಮಾನವೀಯ ಸಂಬಂಧಗಳನ್ನು ಗಂಟು ಕಟ್ಟಿಟ್ಟ ಮಕ್ಕಳು ‘ಈ ವಯಸ್ಸಾದವರು ಯಾವಾಗ ಸಾಯ್ತಾರೋ?’’ ಎಂದು ಕಾಯುವುದೇ ಹೆಚ್ಚು !! ಹಿರಿಯರು ಆರ್ಥಿಕವಾಗಿ ಸಬಲರಿಲ್ಲದೇ ಇದ್ದರೆ ‘ಇವೆಲ್ಲ ನಮ್ಮ ಕರ್ಮಫಲ’ವೆಂದು ಮೌನವಾಗಿ ವೇದನೆಪಡುತ್ತ, ಸ್ವಲ್ಪವಾದರೂ ನಮ್ಮ ಭವಿಷ್ಯದ ಕುರಿತು ಯೋಚನಾಶಕ್ತಿ, ಲೆಕ್ಕಾಚಾರಗಳಿದ್ದರೆ ನಮ್ಮ ಜೀವನ ಸುಗಮವಾಗಿರುತ್ತಿತ್ತೇನೋ ಎಂದು ಚಿಂತಿಸುವುದು ಸರ್ವೇಸಾಮಾನ್ಯವಾಗಿದೆ. ಪ್ರೀತಿ, ವಾತ್ಸಲ್ಯದಿಂದ ತಮ್ಮ ಮಕ್ಕಳನ್ನು ಬೆಳೆಸಿ, ಅವರ ಉತ್ತಮ ಭವಿಷ್ಯಕ್ಕೆ ಜೀವ ತೇಯ್ದರೂ ಕೊನೆಗಾಲದಲ್ಲಿ ಜೀವದಾತರೇ ಭಾರವಾಗಿದ್ದಾರೆಂದು ಉಪೇಕ್ಷೆ ಮಾಡುವವರಿಂದ ಹಿರಿವರ್ಗದವರು ನಿರೀಕ್ಷೆ ,ಅಪೇಕ್ಷೆ ಮಾಡುವುದಾದರೂ ಏನನ್ನ !? ಹಾಗಾಗಿ ಕೈಲಿ ಒಂದಿಷ್ಟು ದುಡ್ಡು, ಒಳ್ಳೆಯ ಚಟುವಟಿಕೆ, ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಕಲ್ಲು ಹೃದಯ, ಮುಚ್ಚಿದ ಕಿವಿ, ಬಾಯಿಗಳೊಂದಿಗೆ ಇರಲೇಬೇಕಾದ್ದು ಈಗಿನ ಹಿರಿಯರ ಅನಿವಾರ್ಯ ಕರ್ಮವಾಗಿದೆ ಎಂದರೆ ತಪ್ಪಿಲ್ಲ!

ನಮ್ಮ ದೇಶ ‘ಯುವ ಭಾರತ’ ಎನ್ನುವ ಹೆಮ್ಮೆ ನಮ್ಮದಾಗಿದ್ದರೂ ಸಹ ಇನ್ನೊಂದು ಬದಿಯಲ್ಲಿನ ‘ಮುದಿ ಭಾರತ’ದ ಸ್ಥಿತಿಗತಿಗಳು ಘೋರವಾಗಿವೆ! ವೃದ್ಧಾಪ್ಯವೆಂದರೆ ದಿಗಿಲುಕೊಳ್ಳಬೇಕಾದ ಪರಿಸ್ಥಿತಿ ಏಕೆ ಎಂಬ ಪ್ರಶ್ನೆಗೆ ನಮ್ಮ ಸಮಾಜದ ಅನೇಕ ಹಿರಿಯರ ಸ್ಥಿತಿಗತಿಗಳೇ ಜೀವಂತ ಸಾಕ್ಷಿಯಾಗಿವೆ! ಎಲ್ಲರು ಇದ್ದೂ ಅನಾಥರಾದವರು ಅಂದ್ರೆ; ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರ ಜೊತೆಗಿನ ಹೊಂದಾಣಿಕೆ ಕೊರತೆಯಿಂದ ನಲುಗುತ್ತ, ತಮ್ಮ ನಾಳೆಗಳು ಹಿತವಾಗಿರಲಿ’ ಎಂದು ಉಳಿತಾಯ ಮಾಡದೇ ಬಹುತೇಕ ಸಲ ಮಕ್ಕಳ ಪಾಲಿಗೆ ಕಾಲಕಸವಾಗುವ ನಮ್ಮ ಹಿರಿಯರನೇಕರ ಬದುಕು ದಾರುಣವಾಗಿದೆ! ಇತ್ತೀಚಿನ ಒಂದು ವರದಿಯ ಪ್ರಕಾರ, ನಮ್ಮ ದೇಶದ ಶೇ.೪೮ರಷ್ಟು ಉದ್ಯೋಗಿಗಳು (ಸಂಘಟಿತ ವಲಯದ ನೌಕರರು) ನಿವೃತ್ತಿ ನಂತರದ ಜೀವನಕ್ಕಾಗಿ, ಕಷ್ಟದ ದಿನಗಳಿಗಾಗಿ ಉಳಿತಾಯವನ್ನೇ ಆರಂಭಿಸಿಲ್ಲ ಎಂಬುದು ಕಳವಳಕಾರಿಯಾದ ಸಂಗತಿ! ಸುಮಾರು ಪ್ರಸಂಗಗಳಲ್ಲಿ ಇವರ ಪಿಂಚಣಿ ಹಣ ಅವರ ಆಸ್ಪತ್ರೆ ಖರ್ಚಿಗೂ ಸಾಲದೇ ಹೋಗಬಹುದು! ಇನ್ನು ಅಸಂಘಟಿತ ವಲಯದವರು ಎಂದರೆ ದಿನಗೂಲಿ ನೌಕರರು, ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಕಡು ಬಡವ ವೃದ್ಧ/ವೃದ್ಧೆಯರಿಗೆ ವೃದ್ಧಾಪ್ಯವೆನ್ನವುದು ಬಲು ಭಾರ. ಸತ್ತರೂ, ಕೇಳುವವರಿಲ್ಲದ ಇವರು ಬೀದಿ ಶವವಾಗುವ ಪ್ರಸಂಗಗಳೇ ಅಧಿಕ! ಇನ್ನು ಉದ್ಯೋಗದ ನಿಮಿತ್ತ ದೂರದ ದೇಶಗಳಲ್ಲಿ ನೆಲೆಸಿದ ಮಕ್ಕಳ ಆಸರೆಯಿಲ್ಲದ ಹಿರಿಯರ ಪರಿಸ್ಥಿತಿಗಳು ಇನ್ನೂ ಕಳವಳವನ್ನು ಹುಟ್ಟಿಸುತ್ತವೆ. ದೂರದೂರಿನ, ದೂರದ ದೇಶದ ಮಕ್ಕಳು ಕೈತುಂಬ ಹಣ ಕಳುಹಿಸಿದರೂ ಒಂಟಿತನದ ಬಾಧೆಯಿಂದ, ಅನಾರೋಗ್ಯದಿಂದ ನರಳಿದರೂ ಸಹಾನುಭೂತಿ ತೋರುವವರೇ ಇಲ್ಲದ ಅನಾಥರಿವರು!

ಒಂದು ಮಾತಂತೂ ನಿಜ, ಬೇಕೆಂದರೂ ಬೇಡವೆಂದರೂ ನಾವೆಲ್ಲರೂ ಹರೆಯದ ವಯಸ್ಸು ಕಳೆದು ವೃದ್ಧಾಪ್ಯವನ್ನು ಹೊರಲೇ ಬೇಕು, ಏಕೆಂದರೆ ವೃದ್ಧಾಪ್ಯವನ್ನ ಬೇಡ ಎನ್ನಲು ಬದಲಿ ಆಯ್ಕೆಗಳಾದರೂ ಎಲ್ಲಿವೆ? ಹಿಸ್ಟರಿ ರಿಪೀಟ್ಸ್ ! ಹಾಗಾಗಿ ಇಂದಿನ ಯುವಕ / ಯುವತಿಯರು ತಾವು ಪಾಲಕರಾದಾಗ ಖಂಡಿತಾ ಹಿರಿಯರ ಸಂಕಟ ಏನೆಂದು ಅರ್ಥೈಸಿಕೊಳ್ಳುತ್ತಾರಷ್ಟೇ !! ಆದರೆ ಕೇವಲ ಅರ್ಥೈಸಿಕೊಂಡರಷ್ಟೇ ಸಾಕೇ!? ವೃದ್ಧಾಪ್ಯವನ್ನು ಸಹನೀಯವಾಗಿಸುವ ನಿಟ್ಟಿನಲ್ಲಿ ವ್ಯಕ್ತಿ ಹಾಗೂ ಸಮಾಜ ಇಬ್ಬರೂ ವೃದ್ಧಾಪ್ಯಕ್ಕೆ ಮಾನಸಿಕವಾಗಿ ಸಜ್ಜಾಗುವ ವಾತಾವರಣವನ್ನ ಸೃಷ್ಟಿಸಲೇಬೇಕಿದೆ! ಹಾಗಾಗಿ ಭವ್ಯ ಭಾರತದ ಸುಸಂಸ್ಕೃತ ಬಾಂಧವರೇ ಬನ್ನಿ… ನಾವೆಲ್ಲರೂ ಸೇರಿ ಈ ದಿಸೆಯಲ್ಲಿ ನಮ್ಮ ಮಾನವೀಯತೆ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುವತ್ತ ಚಿತ್ತ ಹರಿಸೋಣ!
ಅಸಹಾಯಕ ಹಿರಿಯರ ಕುರಿತು ನನ್ನೊಳಗಿನ ತುಡಿತ, ಸ್ಪಂದನೆಯನ್ನ ನನ್ನ‌ ಸ್ವರಚಿತ ಕವನದ ಮೂಲಕವೂ ಕೇಳಬಹುದು, ಅದಕ್ಕಾಗಿ ಇಲ್ಲಿ ಒತ್ತಿ.

-ಡಾ.ಗೀತಾ ಪಾಟೀಲ



ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x