ಪ್ರೇಮ ಪತ್ರಗಳು

ನನ್ನೀ ಆತ್ಮದಲ್ಲಿ ಬೆರೆತವರು ತಾವು: ಅಂಬಿಕಾ ಪ್ರಸಾದ್

ಶೃಂಗಬೀಡು ಸಂಸ್ಥಾನದ ಘನತೆವೆತ್ತ ದೊರೆಯಾದ ಶ್ರೀ ಶ್ರೀ ಶ್ರೀ ಹಯವದನ ನಾಯಕರಲ್ಲಿ ಒಂದು ಗೌಪ್ಯವಾದ ವಿಷಯವನ್ನು ಹಲವು ಬಾರಿ ಯೋಚಿಸಿ ತಿಳಿಸಲು ಇಚ್ಛಿಸುತ್ತಿದ್ದೇನೆ. ಮೊನ್ನೆ ಸೂರ್ಯಾಸ್ತದ ಸಮಯದಲ್ಲಿ ತಂದೆಯವರ ಬಳಿ ನನ್ನ ಹೃದಯದಲ್ಲಿ ನೀವು ಹಿತವಾಗಿ ಬಂದು, ಬಲವಾಗಿ ಅಪ್ಪಿ ಕುಳಿತಿರುವುದರ ಬಗ್ಗೆ ತಿಳಿಸಬೇಕೆಂದು ಬಹಳ ಆತಂಕದಿಂದ, ಸಂಕೋಚದಿಂದ ಒಂದೊಂದೇ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿರಬೇಕಾದರೆ, ನನ್ನ ನೂಪುರದ ಘಲ್ ಘಲ್ ಎಂಬ ನಿನಾದವೇ ಭಯ ಬೀಳಿಸುವಂತೆ ನಿಶ್ಶಬ್ದವಾದ ರಂಗೇರಿದ ಅರಮನೆಯಲ್ಲೆಲ್ಲಾ ಮಾರ್ದನಿಸುತ್ತಿತ್ತು. ಅಂದು ತಾವು ನನಗೆ ಪ್ರೀತಿಯಿಂದ ತೊಡಿಸಿದ್ದ ರತ್ನಮಾಲೆಯನ್ನೊಮ್ಮೆ ಮೆತ್ತಗೆ ಸ್ಪರ್ಶಿಸಿದೆ. ನೀವೇ ಜೊತೆಯಲ್ಲಿದಷ್ಟು ನೆಮ್ಮದಿಯಾಯಿತು. ಹಾಗೆಯೇ ತಂದೆಯವರ ಶಯ್ಯಾಗೃಹದತ್ತ ಬಂದು, ಕಾವಲುಭಟನತ್ತ ಸನ್ನೆಯಿಂದಲೇ ನೀನೇನು ತಂದೆಯವರಿಗೆ ವಿಷಯ ಅರಿಕೆ ಮಾಡುವ ಅಗತ್ಯವಿಲ್ಲವೆಂದು, ಒಳಗಡೆ ಗಂಭೀರವಾಗಿ ಹೆಜ್ಜೆಯಿಟ್ಟು ಬಂದು ನೋಡಿದಾಗ ತಂದೆಯವರ ಸುಳಿವು ದೊರಕದೆಯು, ಹಾಗೆಯೇ ಸ್ವಲ್ಪ ಮುಂದೆ ಹೋಗಿ ದೂರದಲ್ಲಿ ವಾಯುವ್ಯದಿಕ್ಕಿನತ್ತ ನೋಡಿದಾಗ, ತಂದೆಯವರು ರಾಜ್ಯದ ಮಂತ್ರಿಗಳೊಂದಿಗೆ ಯಾವುದೋ ಗಹನವಾದ ರಾಜಕೀಯದಲ್ಲಿ ತೊಡಗಿರುವಂತೆ ಕಂಡುಬಂದಿತು. ಇನ್ನೇನು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈ ವೇಳೆಯಲ್ಲಿ ನಾನು ನಡುವೆ ಹೋದರೆ ಅನುಪಚಿತ ಎಂದರಿತು, ಹಿಂತಿರುಗುವ ವೇಳೆಯಲ್ಲಿ ಶೃಂಗಬೀಡು ಎಂಬ ನಿಮ್ಮ ರಾಜ್ಯದ ಹೆಸರು ಕೇಳಿ, ನನಗರಿವಿಲ್ಲದೆಯೇ ಅವರ ಮಾತುಗಳನ್ನು ಆಲಿಸುವಂತೆ ಯಾವುದೋ ಕಾಣದ ಶಕ್ತಿ ಪ್ರೇರೇಪಿಸಿತು. ಇಂತಿಪ್ಪ ರಾಜರಹಸ್ಯ ಮಾತುಕತೆಯೊಂದನ್ನು ಅಲ್ಲಿಯೇ ನಿಂತು ಕೇಳಿದ ನನಗೆ ಅಸ್ಪಷ್ಟವಾಗಿ ನಿಮ್ಮ ಮೇಲೆ ಯಾವುದೋ ಪಿತೂರಿ ನಡೆಯುತ್ತಿವೆಯೆಂದು ಕಂಡುಬಂದಿತು.

ತಂದೆಯವರು ಅಮಾತ್ಯರಲ್ಲಿ ಸ್ನೇಹಸಂಪಾದನೆಯ ರೀತಿಯಲ್ಲಿ ಹಯವದನ ನಾಯಕರಿಗೆ ಒಂದು ಪತ್ರ ಬರೆದು ಆ ಪತ್ರದಲ್ಲಿ ಅವರೊಬ್ಬರೇ ನಮ್ಮ ನಾಡಿಗೆ ಬಂದು ವಿಶೇಷ ಅತಿಥಿಯಾಗಿ ತಂಗಬೇಕೆಂಬುದಾಗಿಯೂ ಹಾಗೂ ನಂತರ ನಿಮ್ಮನ್ನು ಬಂಧಿಸುವ ಬಗ್ಗೆಯೂ ಚರ್ಚೆ ನಡೆಯುತ್ತಲಿತ್ತು. ಒಂದು ಕ್ಷಣ ನನ್ನ ಕಾಲಡಿಯ ನೆಲವೆ ಕುಸಿದಂತಾಗಿ, ನಾನು ಅಪಾರವಾದ ದುಃಖದಿಂದ ಆತಂಕದಿಂದಿರುವಾಗ ಕೈಯಲ್ಲಿ ಜತನವಾಗಿ ಹಿಡಿದು ತಂದಿದ್ದ ನಿಮ್ಮ ಭಾವಚಿತ್ರವು ಕೈಜಾರಿಹೋಯಿತು. ಇನ್ನು ಆ ಸದ್ದಿಗೆ ಎಚ್ಚೆತ್ತ ನಾನು ಪ್ರಮಾದವಾಗಿ ಹೋಯಿತಲ್ಲಾ ಎಂದು ಬೇಗಬೇಗನೆ ಚಿತ್ರಪಟವನ್ನು ಅಲ್ಲಿಯೇ ಬಳಿ ಇದ್ದ ಹೂಕುಂಡದ ಹಿಂದೆ ಅಡಗಿಸಿಟ್ಟೆ. ಅದೇ ವೇಳೆಯಲ್ಲಿ ತಂದೆಯವರು ಮತ್ತು ಅಮಾತ್ಯರು ನನ್ನೆಡೆಗೆ ಬಂದರು. ನನ್ನ ತಂದೆಯವರು ”ಏನಿದು… ನೀನು ಇಷ್ಟು ಹೊತ್ತಿನಲ್ಲಿ ಒಬ್ಬಳೇ ಇಲ್ಲಿ ಬಂದಿರುವೆ, ಏನಾದರೂ ಮಾತನಾಡುವುದಿತ್ತೇ ಮಗಳೇ?”, ಎಂದು ಕಾಳಜಿಯಿಂದ ಕೇಳಿದಾಗ ”ಅಪ್ಪಾಜಿ… ಹೀಗೆಯೇ ನಿಮ್ಮನ್ನು ನೋಡಿಹೋಗಬೇಕೆಂದು ಬಂದಿದ್ದೆ. ನೀವು ಅಮಾತ್ಯರೊಂದಿಗೆ ಇದ್ದಿದ್ದನ್ನು ಕಂಡು ಏನು ಮಾಡುವುದೆಂದು ತೋಚದೆ ಇಲ್ಲೇ ನಿಂತುಬಿಟ್ಟೆ. ಅಂತಹ ಗಹನವಾದ ವಿಷಯವೇನಿಲ್ಲ ಅಪ್ಪಾಜಿ. ನಿಮಗೆ ನಾನು ಇಲ್ಲಿ ಬಂದು ಅಡಚಣೆಯಾಯಿತೇನೋ; ನನ್ನನ್ನು ಕ್ಷಮಿಸಿ” ಎಂದು, ಮತ್ತೊಮ್ಮೆ ಬಂದು ಮಾತನಾಡುವೆ ಎಂತಲೂ ಹೇಳಿ ಅಲ್ಲಿಂದ ಹೊರಟುಬಂದೆ.

ಆ ದಿನ ರಾತ್ರಿಯಿಡೀ ಯೋಚಿಸಿದಾಗ ಇದೇನಾಯಿತು… ನಾನು ಪ್ರೇಮಿಸುತ್ತಿರುವ ದೊರೆಯ ಬಗ್ಗೆ, ಅಪ್ಪಾಜಿಯವರಿಗೇಕಿಂತ ದ್ವೇಷವೆಂದು ಅರಿಯದೆ, ಈ ವಿಷಯವನ್ನು ನಾನು ನಿಮಗೆ ತಿಳಿಸಲೇ ಬೇಡವೇ ಎಂದು ಅದೆಷ್ಟು ಬಾರಿ ಆಲೋಚಿಸಿದರೂ, ಉತ್ತರವೇ ಸಿಕ್ಕದೆ ದಿಕ್ಕುತೋಚದೆ ಕುಳಿತುಬಿಟ್ಟಿರುವಾಗ. ಒಂದು ವರ್ಷದ ಹಿಂದೆ ನನ್ನ ಗೆಳತಿಯ ಪಾಣಿಗ್ರಹಣಕ್ಕೆಂದು ನಿಮ್ಮ ಶೃಂಗಬೀಡು ರಾಜ್ಯಕ್ಕೆ ನಾನು ಬಂದಿದ್ದು, ಅಂದು ನಿಮ್ಮನ್ನು ನೋಡಿ ಮನಸೋತಿದ್ದು, ನಮ್ಮಿಬ್ಬರ ನಡುವೆ ಅದ್ಯಾವುದೋ ಬಣ್ಣಿಸಲಾಗದಂತಹ ಸೆಳೆತ, ಎಷ್ಟೋ ಹಿಂದಿನಿಂದಲೂ ಪರಿಚಯವಿದ್ದಂತಹ ಆಪ್ತತೆ ಎಲ್ಲವೂ ಪ್ರೇಮಾಂಕುರಕ್ಕೆ ನಾಂದಿಹಾಡಿತ್ತು. ನಂತರ ನಾವಿಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದುದು ಹಾಗೂ ಇತ್ತೀಚಿಗಷ್ಟೇ ನಾವು ಮದುವೆಯಾಗುವ ನಿರ್ಧಾರಕ್ಕೆ ಬಂದಿರುವಾಗ. ನಿಮ್ಮ ಮೇಲಿನ ಈ ಒಳಸಂಚನ್ನು ಕೇಳಿ ನಾನು ದಂಗಾಗಿ ಹೋಗಿರುವೆ. ಕೋಟಿನಾಡಿನ ರಾಜಕುಮಾರಿಯಾದ ನಾನು ಈಗ ನಮ್ಮ ರಾಜ್ಯದ ಶತ್ರುವಾಗಿರುವ ನಿಮ್ಮಲ್ಲಿ ಈ ರಾಜ್ಯದ ರಾಜತಾಂತ್ರಿಕ ವಿಷಯವನ್ನು ಅರುಹುವುದು ಅದೆಂತಹ ಸ್ವಾಮಿದ್ರೋಹವೆಂದು ತಿಳಿದಿದ್ದರೂ, ರಾಜದ್ರೋಹಿಯೆಂಬ ಹಣೆಪಟ್ಟಿ ಬಂದರೂ ಚಿಂತೆಯಿಲ್ಲವೆಂದು ಖಾತ್ರಿ ಮಾಡಿಕೊಳ್ಳುತ್ತಿದ್ದೇನೆ.
ಇದೆಂಥಾ ಪ್ರೇಮವಿದು. ನನ್ನೀ ಆತ್ಮದಲ್ಲಿ ಬೆರೆತವರು ತಾವು. ಪ್ರತೀಕ್ಷಣವೂ ನನ್ನೀ ಹೃದಯ ನಿಮಗಾಗಿಯೇ ಮಿಡಿಯುತ್ತಿರುತ್ತದೆ. ನನ್ನೀ ಜೀವನದ ಅತ್ಯಂತ ಅಮೂಲ್ಯವಾದ ವ್ಯಕ್ತಿ ನೀವು. ನಿಮ್ಮ ಕೈಹಿಡಿದು ಸಹಧರ್ಮಿಣಿಯಾಗಿ ಬಾಳಬೇಕೆಂದು ಅದೆಷ್ಟೆಲ್ಲಾ ಕನಸು ಕಟ್ಟಿರುವೆ. ಇದಕ್ಕಾಗಿ ನಮ್ಮ ಕುಲದೇವತೆಯಾದ ಕೋಟೇಶ್ವರಿ ಅಮ್ಮನವರಲ್ಲಿ ಅದೆಷ್ಟೆಲ್ಲಾ ಪರಿಪರಿಯಾಗಿ ಪ್ರಾರ್ಥಿಸಿದೆ. ನಿಷ್ಠೆಯಿಂದ ವ್ರತಗಳನ್ನೆಲ್ಲಾ ಆಚರಿಸಿದೆ. ನಿಮ್ಮನ್ನಗಲಿ ಬದುಕುವ ಇಚ್ಛೆ ನನಗಿಲ್ಲ. ಈ ರಾಜ್ಯ ನನ್ನ ಉಸಿರಾಗಿದ್ದರೂ ನನ್ನೀ ಉಸಿರನ್ನು ನಿಮಗಾಗಿ ಮುಡಿಪಾಗಿಟ್ಟಿರುವೆ.

ಬುದ್ಧಿಯು ಎಷ್ಟು ಬಾರಿ ನಾನು ಮಾಡುತ್ತಿರುವುದು ಅಕ್ಷಮ್ಯ ಅಪರಾಧ, ಈ ರಾಜ್ಯಕ್ಕೆ ಕಂಟಕವನ್ನು ತರುವಂಥಾ ಕೆಲಸವೆಂದು ಸಾರಿ ಸಾರಿ ಹೇಳಿದರೂ, ನನ್ನ ಮನಸ್ಸು ಅದನ್ನೆಲ್ಲಾ ಮೀರಿ ನನ್ನ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿರುವ ಈ ನನ್ನ ಹಯವದನ ನಾಯಕರಿಗೆ ಎಲ್ಲಿ ಯಾವ ತೊಡಕಾಗುವುದೋ ಎಂದು ಚಿಂತಿಸುತ್ತಿದೆ, ಮಮ್ಮಲ ಮರುಗುತ್ತಿದೆ. ಶಕ್ತಿಯಿಂದ ಗೆಲ್ಲಲು ಅಸಾಧ್ಯವಾದುದನ್ನು ಯುಕ್ತಿಯಿಂದ ಗೆಲ್ಲಬೇಕೆಂಬುದು ರಾಜಕುಮಾರಿಯಾದ ನನಗೆ ಗುರುಗಳು ಪಠಿಸಿದ್ದು ನಿಜವೇ ಹೌದಾದರೂ, ಯುಕ್ತಿಯು ಕುತಂತ್ರವಾಗುವುದು ಸರಿಯಲ್ಲ. ನಮ್ಮ ರಾಜ್ಯವು ಧರ್ಮದ ಬೀಡಾಗಿರಬೇಕೇ ಹೊರತು, ಅಧರ್ಮ ಅರಾಜಕತೆಗಳ ನಾಡಾಗಬಾರದು. ದೊರೆಗಳು ರಾಜ್ಯಕ್ಕೆ ತಂದೆತಾಯಿಯಂತಿರುವವರು. ಹಾಗಿರುವಾಗ ದೊರೆಗಳು ತಮ್ಮ ಒಂದು ಅವಿವೇಕತನದ ನಿರ್ಧಾರದಿಂದ ಪ್ರಜೆಗಳನ್ನು ಅನೈತಿಕತೆಯೆಡೆಗೆ ಪ್ರೇರೇಪಿಸಬಾರದು. ನಮ್ಮ ತಂದೆಯವರು ಈಗ ತಪ್ಪು ಮಾರ್ಗದಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಆದುದರಿಂದ ತಾವು ಈ ಕೃತ್ಯಕ್ಕೆ ಯಥಾ ದಾಳದಂತಾಗಬಾರದು.

ಬದಲಾಗಿ ಅವರ ಸ್ನೇಹಕೋರಿಕೆಯ ಪತ್ರಕ್ಕೆ, ಪ್ರತಿಯಾಗಿ ತಾವೊಂದು ಸಮ್ಮತಿಯ ಪತ್ರವನ್ನು ಬರೆದು ಕಳುಹಿಸಿ. ಅದರಲ್ಲಿ ಕೋಟಿನಾಡಿನ ದೊರೆಗಳ ಸ್ನೇಹ ಪ್ರಸ್ತಾಪಕ್ಕೆ ನಮ್ಮ ಸಂಪೂರ್ಣ ಸಮ್ಮತವಿದ್ದು, ನಿಮ್ಮ ಪುತ್ರಿಯಾದ ರಾಜಕುಮಾರಿ ಕಾರುಣ್ಯದೇವಿಯವರನ್ನು ನಾವು ವಿವಾಹವಾಗಲು ಇಚ್ಛಿಸಿದ್ದು, ಇದರಿಂದ ನಮ್ಮ ಸ್ನೇಹವು ಸಂಬಂಧವಾಗಿ ಮಾರ್ಪಾಡಾದರೆ ಎರಡು ಬಲಿಷ್ಠವಾದ ರಾಜ್ಯಗಳು ಒಂದಾದ ಹಾಗಾಗುತ್ತವೆ. ಜೊತೆಗೇ ತಮ್ಮ ಜಾತಕವನ್ನು ಈ ಪತ್ರದೊಂದಿಗೆ ಕಳುಹಿಸುತ್ತಿದ್ದೇವೆ ಎಂದೂ ಬರೆಯಿರಿ. ಹಾಗೆಯೇ ಹೇಳುವುದು ಮರೆತೆ. ನಾನು ಈ ಗೌಪ್ಯ ವಿಚಾರವನ್ನು ತಿಳಿದಿರುವುದರ ಬಗ್ಗೆ ತಂದೆಯವರಿಗೆ ಅನುಮಾನವಿದ್ದು, ನಾನು ಕುಡಿಯುವ ಹಾಲಿನಲ್ಲಿ ಯಾವುದೋ ಗಿಡಮೂಲಿಕೆಯ ಬೇರನ್ನು ಸೇರಿಸಿದ್ದರಿಂದ, ಎರಡು ದಿನಗಳವರೆಗೆ ನಾನು ಎಚ್ಚರ ತಪ್ಪಿದ್ದು ಇಂದೇ ಏಳುತ್ತಿದ್ದೇನೆ. ನಮ್ಮ ಬಳಿ ಹೆಚ್ಚು ಸಮಯವಿಲ್ಲ. ನೀವು ಆದಷ್ಟು ಜಾಗರೂಕತೆಯಿಂದ ಬಂದೊದಗಿರುವ ಈ ಸಂದಿಗ್ಧ ಪರಿಸ್ಥಿತಿಯನ್ನು ತಮಗೆ ಅನುಕೂಲಕರವಾಗುವಂತೆ ಉಪಯೋಗಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ಕನಸಿನಲ್ಲಿ ಕೋಟೇಶ್ವರಿ ಅಮ್ಮನವರು ನನಗೆ ಮಂಗಳಸೂತ್ರವನ್ನು ನೀಡಿದ್ದು ಇದನ್ನು ಶುಭಸೂಚನೆಯೆಂದೇ ಭಾವಿಸುತ್ತಿದ್ದೇನೆ. ಆದಷ್ಟು ಬೇಗ ಈ ನಿಮ್ಮ ಮನದರಸಿಯು, ಪಟ್ಟದರಸಿಯಾಗಿ ಭಡ್ತಿಯಾಗಲೆಂದು ಬಯಸುತ್ತಿದ್ದೇನೆ. ಈ ನನ್ನ ಓಲೆಯನ್ನು ನಮ್ಮ ರಾಜ್ಯದ ಅತಿ ವೇಗವಾಗಿ ಕುದುರೆ ಸವಾರಿ ಮಾಡಬಲ್ಲ ನಂಬಿಗಸ್ತ ದೂತನಲ್ಲಿ, ನನ್ನ ಮುದ್ರೆಯುಂಗುರದ ಜೊತೆಯಲ್ಲಿ ನೀಡಿ ಕಳುಹಿಸುತ್ತಿದ್ದೇನೆ.

ರಾಜಕುಮಾರಿ ಕಾರುಣ್ಯಾದೇವಿ
ಕೋಟಿನಾಡು