ಪಂಜು-ವಿಶೇಷ

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ

  ಆದಿಯಲ್ಲಿ ಶ್ರೀವ್ಯಾಸಮಹರ್ಷಿಯು ರಚಿಸಿದ ಭಾರತಕಥೆಯನ್ನು
  ಸಂಸ್ಕೃತ ಭಾಷೆಯ ಬಲ್ಲಂತಹವರು ಮೆಚ್ಚಲು ಆ ಕಥೆ ಸೊಗಸನ್ನು
  ಪಂಪ ಮಹಾಕವಿ, ವೀರಯುಗದಲ್ಲಿ ಮುತ್ತಿನ ಕನ್ನಡ ನುಡಿಯಲ್ಲಿ
  ಮತ್ತೆ ಬರೆದ ಆ ಭಾರತವನ್ನು ಎಲ್ಲರು ಮೆಚ್ಚುವ ರೀತಿಯಲಿ
  ರಾಷ್ಟ್ರಕೂಟ ದೊರೆ ಅರಿಕೇಸರಿಯನು ಅರ್ಜುನನೊಂದಿಗೆ ಹೋಲಿಸುತ
  ಮಹಾಭಾರತದ ಆ ಕಥೆಯನ್ನು ಸಂಗ್ರಹ ರೂಪದಿ ವಿರಚಿಸಿದ!

  ರನ್ನ ಮಹಾಕವಿ, ಚಾಲುಕ್ಯರ ದೊರೆ ಸತ್ಯಾಶ್ರಯನ ಸಮೀಕರಿಸಿ
  ಸಾಹಸಭೀಮನ ವಿಜಯವ ಸಾರುವ ‘ಗದಾಯುದ್ಧ’ವನು ರಚಿಸಿದನು!
  ಕುಮಾರವ್ಯಾಸನು ಭಾರತಕಥೆಯನು ಮಾಡುತ ಶ್ರೀಕೃಷ್ಣನ ಚರಿತೆ
  ಕಾವ್ಯದ ಒಡಲಲಿ ತುಂಬುತ ಹಾಡಿದ ಶ್ರೀಹರಿ ಭಕ್ತಿಯ ಭಾವುಕತೆ!

  ಪಂಪ, ರನ್ನ, ಕವಿ ಕುಮಾರವ್ಯಾಸರ ಕಾವ್ಯದ ಸಾರವ ಸಂಗ್ರಹಿಸಿ
  ಮಹಾಕವಿಗಳಾ ಮಹದಾಶಯಕ್ಕೆ ನನ್ನೆದೆಯನ್ನು ಶ್ರುತಿಗೊಳಿಸಿ
  ಕೃಷ್ಣಶಾಸ್ತ್ರಿ ಭೈರಪ್ಪನವರ ಕೃತಿ ಸಾರಸಂಗ್ರಹವ ಕಸಿಗೊಳಿಸಿ
  ಗದ್ಯ-ಪದ್ಯಗಳ ಮಿಶ್ರಣಗೊಳಿಸಿ ಲಯವೈವಿಧ್ಯತೆ ಮೃದುಗೊಳಿಸಿ
  ಹಿಂದಿನ ಕತೆಯನು ಇಂದಿಗೆ ಹೊಂದಿಸಿ ಸುಮಧುರ ಕನ್ನಡದಲ್ಲಿಂದು
  ಅಂದದ ಚೆಂದದ ಸುಂದರ ಬಂಧದಿ ಹೇಳುತ ಸಾಗುವೆ ನಾನಿಂದು
  ಆದಿಯಿಂದಲೂ ಅಂತ್ಯದವರೆಗೂ ಸಮಗ್ರ ಭಾರತಕಥೆಯನ್ನು
  ಕನ್ನಡ ಬಂಧುಗಳೆಲ್ಲರು ಹರಸಿರಿ ಗೋವಿಂದನ ಈ ಕೃತಿಯನ್ನು!

ಹಸ್ತಿನಾವತಿ

 1. ಶಂತನು ಸತ್ಯವತಿಯರ ಪ್ರೇಮ ಪ್ರಸಂಗ

-ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ-

  ಜಂಬೂದ್ವೀಪದ ಕುರುಜಾಂಗಣಕೆ ರಾಜಧಾನಿ ಹಸ್ತಿನಪುರವು
  ಪುರದಲಿ ಎಂದೂ ತುಂಬಿ ತುಳುಕುವುದು ಸಿರಿಸಂತಸಗಳ ಸಡಗರವು
  ಶಂತನು ಎಂಬುವ ರಾಜನು ನಾಡಿಗೆ, ಭರತನ ವಂಶದಿ ಬಂದವನು
  ಸುಂದರ, ಸುಧೀರ, ಗುಣಪರಿಪಾಲಕ ಎನ್ನುವ ಕೀರ್ತಿಯ ಪಡೆದವನು
  ಗಂಗೆಯ ಕಂಡು ಮೋಹವಗೊಂಡು ಅವಳ ಚೆಲುವಿಕೆಗೆ ಮನಸೋತು
  ಏನು ಮಾಡಿದರೂ ಪ್ರಶ್ನಿಸೆನೆನ್ನುತ ಅವಳಿಗೆ ವಚನವನವನಿತ್ತು
  ಸಂಗಾತಿಯೆನ್ನುತ ಸಡಗರದಿಂದಲಿ ಗಂಗಾದೇವಿಯ ಕೈ ಹಿಡಿದ
  ಹುಟ್ಟಿದ ಮಕ್ಕಳು ಸಾಯುತಲಿದ್ದರೂ ಮರುಮಾತಾಡದೆ ತಾನುಳಿದ!

  ಏಳು ಮಕ್ಕಳೂ ಹೀಗೆಯೆ ಸಾಯಲು ರಾಯನು ಮನದಲಿ ಬಲುನೊಂದು
  ಎಂಟನೆ ಪುತ್ರನು ಜನಿಸಿದ ಸಮಯದಿ ಒಲವಿನ ಮಡದಿಯ ಬಳಿಬಂದು
  ‘ಏತಕೆ ಮಕ್ಕಳು ಸಾಯುತಲಿರುವುವು?’ ಎನ್ನುತ ಅವಳನು ಕೇಳಿದನು
  ವಸಿಷ್ಠ ಶಾಪವು ಕಾರಣವೆಂದಿರೆ ಮಗನನು ಉಳಿಸಲು ಬೇಡಿದನು
  ಅರಸನ ಬೇಡಿಕೆ ಮನ್ನಿಸಿ ಮಡದಿಯು ಮಗನನು ಅವನಿಗೆ ಉಳಿಸಿದಳು
  ‘ಮಾತಿಗೆ ತಪ್ಪಿದ’ ಎನ್ನುವ ನೆಪದಲಿ ಗಂಗೆಯು ಗಂಡನ ತ್ಯಜಿಸಿದಳು!
  ಅಗಲಿದ ಮಡದಿಯ ಅನುದಿನ ನೆನೆಯುತ ಉಳಿದನು ರಾಜನು ಕೊರಗುತ್ತ
  ದಿನದಿನ ಕಳೆಯಲು ಎಲ್ಲವ ಮರೆತನು ವಂಶದ ಕುಡಿಯನು ಸಲುಹುತ್ತ
  ವರುಷ ಹನ್ನೆರಡಾದರೂ ರಾಜ ಮರುಮದುವೆಯ ತಾನಾಗಿಲ್ಲ
  ಎರಡನೆ ಮದುವೆಯ ಯೋಚನೆಯೆಂಬುದು ಕನಸಲ್ಲೂ ಎದುರಾಗಿಲ್ಲ!
  ಅರಸನು ಪ್ರೀತಿಯ ಸುತನನು ಬೆಳೆಸುತ ಕರೆದನು ‘ದೇವವ್ರತ’ನೆಂದು
  ಲೋಕದ ಜನಗಳು ದೇವವ್ರತನನು ಕರೆದರು ‘ಗಂಗಾಸುತ’ನೆಂದು
  ಗಂಗಾಪುತ್ರನು ಎಲ್ಲಾ ವಿದ್ಯೆಯ ಕಲಿತನು ಭಾರ್ಗವರಾಮನಲಿ
  ಮಹಾಪರಾಕ್ರಮಿ ಎನ್ನುವ ಕೀರ್ತಿಯ ಶಾಶ್ವತ ಪಡೆದನು ಲೋಕದಲಿ!

  ಒಂದಿನ ಶಂತನು ಬೇಟೆಯನಾಡುತ ಬಂದನು ಯಮುನಾ ನದಿ ಬಳಿಗೆ
  ಕಂಡನು ನದಿಯಲಿ ದೋಣಿಯ ನಡೆಸುವ ಸುಂದರ ತರುಣಿಯ ಆ ಘಳಿಗೆ
  ಚೆಲುವೆಯು ಅರಸನ ಮನವನು ಸೆಳೆದಿರೆ ನೋಡಿದನವಳನು ಮೈಮರೆತು
  ಒಲವಿನ ಬಲೆಯನು ಚೆಲುವೆಯು ಬೀಸಲು ಶಂತನು ಸಿಲುಕಿದ ಸವಿಬೆರೆತು
  ಮೆಲ್ಲಗೆ ಬೀಸುವ ತಣ್ಣನೆ ಗಾಳಿಗೆ ತೇಲುವ ಅಲೆಗಳ ಸಿರಿಲಯಕೆ
  ಇಂಪಿನ ಕೊರಳಲಿ ಹಾಡುತಲಿದ್ದಳು ಸಾಗುತಲಿರುತಿರೆ ಸಿರಿನೌಕೆ

    ಐಲೇಸೊ ಐಸಾ ಓಹೋ! ಸಾಗಲಿ ಐಸಾ ಓಹೋ!
    ನೀರಿನ ಮೇಲ್ಗಡೆ ಓಹೋ! ದೋಣಿಯು ತೇಲಿದೆ ಓಹೋ! 
    ಅಲೆಗಳ ಕುಣಿತದ ಮೋಡಿ! ಮೀನಿನ ಜಿಗಿತವ ನೋಡಿ!
    ಬಲೆಯನು ಬೀಸುವ ಹಾಡಿ! ಹರಿಯಲಿ ಮೀನಿನ ಕೋಡಿ!

  ಹಾಡನು ಹಾಡುತ ಮೋಡಿಯ ಮಾಡುತ ಸೆಳೆಯುತಲಿದ್ದಳು ಮನವನ್ನು
  ನೋಡಿದ ಕೂಡಲೆ ಅರ್ಪಿಸಲೆಳಸಿದ ಅರಸನು ತನುಮನಧನವನ್ನು   
  ಅರಸನು ಆ ದಿನ ಸೋತನು ಚೆಲುವೆಯ ಬಳಕುವ ದೇಹದ ಮೈ ಸಿರಿಗೆ
  ಕೇಳಿದನವಳನು- “ರಾಣಿಯ ಮಾಡುವೆ ಬರುವೆಯ ನನ್ನಯ ಅರಮನೆಗೆ?”
  ಸುಂದರಿ ನಾಚುತ ನುಡಿದಳು- “ಪ್ರಭುವೇ, ಕೇಳಿರಿ ಸಲುಹಿದ ತಂದೆಯನು
  ತಂದೆಯ ಮಾತನು ಮೀರೆನು ಎಂದಿಗು, ಬನ್ನಿರಿ ತೋರುವೆ ಅವನನ್ನು”
  ಶಂತನುರಾಜನ ಕರೆತಂದಿದ್ದಳು ತನ್ನಯ ವಾಸಸ್ಥಾನಕ್ಕೆ
  ಎಳೆತನದಿಂದಲಿ ತನ್ನನು ಸಾಕಿದ ನೆಚ್ಚಿನ ತಂದೆಯ ಸನಿಹಕ್ಕೆ!
  ಬೆಸ್ತರ ಒಡೆಯನು ದಾಶರಾಜನೋ ಶಂತನು ಮಾತನು ಆಲಿಸಿದ
  ಮಗಳ ಭವಿಷ್ಯವು ಎದುರಿಗೆ ಬಂದಿರೆ ಮನದಲಿ ತುಂಬಾ ಯೋಚಿಸಿದ!
  ವಯಸಿನ ಅಂತರ ಬಹಳಷ್ಟಿರುವುದು, ಆಗುವನೇ ಇವ ಒಳ್ಳೆ ಸಖ?
  ಮಗಳನು ಮುದುಕನಿಗಿತ್ತರೆ ಅವಳಿಗೆ ಸಿಗುವುದು ತಾನೆ ಎಂಥ ಸುಖ?
  ಗಂಧವತಿಯ ಸೌಂದರ್ಯವ ನೋಡಿದ ಮುದುಕನ ಮನ ಹಾತೊರೆದಿಹುದು 
  ಬೆಸ್ತರ ಹುಡುಗಿಗೆ ಪಟ್ಟದರಾಣಿಯ ಪಟ್ಟವು ಏನೋ ದೊರೆಯುವುದು
  ಆದರೆ ರಾಜ್ಯದ ಒಡೆತನವೆಂದೂ ಹಿರಿಯ ಮಗನಿಗೇ ದಕ್ಕುವುದು 
  ಮುದ್ದಿನ ಮಗಳಿಗೆ ಮಕ್ಕಳು ಹುಟ್ಟಲು ದಾಸ್ಯವೆ ಅವರಿಗೆ ಸಿಕ್ಕುವುದು
  ಎಂದಾಲೋಚಿಸಿ ಬೆಸ್ತರ ಒಡೆಯನು ನೋಡುತ ಶಂತನು ರಾಜನನು
  ಕಡ್ಡಿಯ ಮುರಿಯುವ ರೀತಿಯಲಂದೇ ಒಡ್ಡಿದನೊಂದು ಷರತ್ತನ್ನು!
  “ರಾಜನೆ ಆಲಿಸು ರಾಜ್ಯದ ಒಡೆತನ ದೊರೆಯಲಿ ಮುಂದಿನ ದಿನಗಳಿಗೆ
  ನನ್ನಯ ಮುದ್ದಿನ ಮಗಳಲಿ, ನಾಳೆಗೆ ಹುಟ್ಟುವ ನಿನ್ನಯ ಮಕ್ಕಳಿಗೆ!”

  ಪ್ರೀತಿಯ ಪುತ್ರನು ಗಂಗಾತನಯನು ದೇವವ್ರತ ತಾನಿರುವಾಗ
  ಆಗಲಿ ಎನ್ನುತ ಅವನಿಗೆ ವಚನವ ನೀಡಲು ಸಾಧ್ಯವೆ ತನಗಾಗ?
  ಮನಸಿಗೆ ಒಪ್ಪದೆ ರಾಜನು ನಡೆದನು ಹಸ್ತಿನಾಪುರಕೆ ಮುಖಮಾಡಿ
  ಮನದಲಿ ತಾನು ಕೊರಗುತ ಕುಳಿತನು, ಹಗಲಿರುಳೂ ಸುಂದರಿ ಕಾಡಿ
  ಅವಳನು ಪಡೆಯುವ ದಾರಿಯ ಕಾಣದೆ ಶಂತನು ಹಿಡಿದನು ಹಾಸಿಗೆಯ
  ದಿನಗಳು ಉರುಳುತಲಿರೆ ಕೃಶÀನಾದನು ಸಹಿಸದೆ ವಿರಹದ ಬೇಸಿಗೆಯ!
  ತಂದೆಯ ಚಿಂತೆಗೆ ಕಾರಣವರಿಯದೆ ದೇವವ್ರತ ತಾ ಮಿಡುಕಿದನು
  ಸಾರಥಿ ಮೂಲಕ ಸಂಗತಿ ಅರಿಯುತ ಪರಿಹಾರವ ತಾ ಹುಡುಕಿದನು
  ದಶರಥ ನೀಡಿದ ವಚನವ ಉಳಿಸಲು ರಾಮನು ನಡೆದನು ಕಾನನಕೆ
  ತಂದೆಯ ಮನಸಿನ ಆಸೆಯ ನೀಗಿಸೆ ಪುತ್ರನು ಬೆಸ್ತರ ಪಾಳೆಯಕೆ!

  ತಂದೆಯ ಋಣವನು ತೀರಿಸಬೇಕಿದೆ ಮಕ್ಕಳು ತಮ್ಮಯ ಬದುಕಿನಲಿ
  ನಿಂದೆಯ ಮಾಡದೆ ತಂದೆತಾಯಿಯರ ಸಂಗಡವಿರುವುದು ಹಿತದಲ್ಲಿ
  ಸುಂದರ ಬದುಕದು ಚೆಂದವಾಗಿರಲು ಬಂಧುಬಳಗವೂ ಜೊತೆಗಿರಲಿ
  ತಂದೆತಾಯಿಯರು ಸಂಗಡವಿರುವುದು, ಭಾಗ್ಯವು ಎಂಬುದು ತಿಳಿದಿರಲಿ 

  ಮರುದಿನ ಬಂದನು ಯಮುನಾತೀರದ ಬೆಸ್ತರ ಒಡೆಯನ ಬಳಿಯಲ್ಲಿ
  ದಾಶರಾಜನಿಗೆ ಕೈಗಳ ಮುಗಿಯುತ ನುಡಿದನು ದೃಢತೆಯ ನುಡಿಯಲ್ಲಿ-
  “ಬಂಧುವೆ, ಒಪ್ಪುವೆ ನಿನ್ನ ಷರತ್ತನು ರಾಜ್ಯದ ತ್ಯಾಗವ ಮಾಡುವೆನು
  ರಾಜ್ಯದ ಮೋಹವ ಇಂದೇ ಈಗಲೆ ನಿನ್ನೆದುರಲ್ಲೇ ತ್ಯಜಿಸುವೆನು
  ತಂದೆಯ ನಂತರ ರಾಜ್ಯದ ಒಡೆತನ ಹುಟ್ಟುವವರಿಗೆ ನಾ ನೀಡುವೆನು
  ತಂದೆಯ ಸುಖವೇ ನನ್ನಯ ಸುಖವು ಎನ್ನುತ ನಿನ್ನಲಿ ಬೇಡುವೆನು
  ನನ್ನ ಮಾತಿನಲಿ ನಂಬಿಕೆ ಇಟ್ಟುಕೊ, ಇಲ್ಲವೆ ತಂದೆಯು ಅಳಿಯುವನು
  ನನ್ನಯ ತಂದೆಗೆ ನಿನ್ನ ಮಗಳನ್ನು ಕೊಟ್ಟರೆ ತಪ್ಪದೆ ಉಳಿಯುವನು”

  ಎನ್ನಲು ಬೆಸ್ತರ ಒಡೆಯನು ನುಡಿದನು- “ನಿನ್ನ ಮಾತನ್ನು ಒಪ್ಪಿದೆನು
  ತಂದೆಯ ಆಸೆಯ ತೀರಿಸಲೋಸುಗ ಬಂದಿಹೆ, ನಿನ್ನನು ಮೆಚ್ಚಿದೆನು
  ಆದರೆ ಮುಂದಿನ ದಿನದಲಿ ನಿನ್ನಯ ಮಕ್ಕಳು ಇದನ್ನು ಒಪ್ಪುವರೆ
  ಅವರವರವರಲಿ ಜಗಳವು ಬಂದರೆ ನೆಮ್ಮದಿಯಿಂದಲಿ ಬದುಕುವರೆ?”
  ತನ್ನ ಮನಸಿನಲ್ಲಿದ್ದ ದುಗುಡವನು ತಿಳಿಸಿದ ದೇವವ್ರತನಲ್ಲಿ
  ಕೆಲಕ್ಷಣ ಮೌನವು ಮನೆ ಮಾಡುತ್ತ ನೆಲೆಸಿತು ಅವರುಗಳೆಡೆಯಲ್ಲಿ!


  ಮುಂದಿನ ನಿಮಿಷದಿ ಮೂಡಿತು ನಿಶ್ಚಯ ಸದೃಢ ದೇವವ್ರತನಲ್ಲಿ
  ದಾಶರಾಜನನು ಒಪ್ಪಿಸಲೊಂದೇ ಮಾರ್ಗವು ಉಳಿದಿತ್ತವನಲ್ಲಿ
  ನುಡಿದನು- “ಅಯ್ಯಾ ಬಂಧುವೆ, ಆಲಿಸು ಎಂದೂ ಸಂಶಯಪಡಬೇಡ
  ಗಂಗಾಪುತ್ರನು ನೀಡಿದ ಮಾತನು ಎಂದೂ ತಪ್ಪನು ಇದು ನೋಡ 
  ತಂದೆಯ ಹಿತವನು ಕೋರುವೆನೆಂದೂ ಹಿಂದಿಡೆನೆಂದೂ ಹೆಜ್ಜೆಯನು 
  ನಿನ್ನ ಸಂಶಯವ ತೀರಿಸಲೋಸುಗ ಮಾಡುವೆ ಈಗಲೆ ಶಪಥವನು
  ಸೂರ್ಯ ಚಂದ್ರ ನಕ್ಷತ್ರಲೋಕಗಳು ಸಾಕ್ಷಿಯಾಗಿ ಇರುವುವು ಇಲ್ಲಿ
  ಪಂಚಭೂತಗಳು ಎಲ್ಲ ಲೋಕಗಳು ವೀಕ್ಷಿಸುತ್ತ ನಿಂತಿರುವಲ್ಲಿ
  ಭೂಮಿಯಲೆಂದೂ ತಪ್ಪದೆ ಉಳಿವೆನು ಬ್ರಹ್ಮಚಾರಿಯೇ ನಾನಾಗಿ
  ನೀಡಿದ ಮಾತನು ಉಳಿಸಿಕೊಳ್ಳುವೆನು ತಾಯಿಯಾಣೆಗೂ ದಿವಿನಾಗಿ”
  ಶಂತನುಪುತ್ರನ ಭೀಷ್ಮಪ್ರತಿಜ್ಞೆಯ ಆಲಿಸಿ ಜಗವೇ ಬೆರಗಾಯ್ತು
  ದೇವವ್ರತನಿಗೆ ಭೀಷ್ಮನೆಂಬ ಅಭಿದಾನದÀ ಖ್ಯಾತಿಯ ಬೆಳಕಾಯ್ತು
  ದೇವಪುಷ್ಪಗಳು ಉದುರುವ ತೆರದಲಿ ಹನಿ ಹನಿ ಹೂಮಳೆ ಉದುರಿತ್ತು
  ದಾಶರಾಜ ಬಯಸಿದ್ದು ದೊರಕಿತ್ತು ಮನಸಿನ ಶಂಕೆಯು ಚದುರಿತ್ತು
  ಬೆಸ್ತರ ಹುಡುಗಿಗೆ ಹಸ್ತಿನಾಪುರದ ಪಟ್ಟದರಾಣಿಯ ಸೌಭಾಗ್ಯ
  ಭೀಷ್ಮನ ಮನದಲಿ ಜಾಗವ ಪಡೆಯಿತು ಭೋಗಭಾಗ್ಯಗಳ ವೈರಾಗ್ಯ!
  ಯುವರಾಜನ ಆ ದೃಢನಿಶ್ಚಯಕ್ಕೆ ಲೋಕವೆಲ್ಲ ತಲೆದೂಗಿತ್ತು
  ತ್ಯಾಗವ ಮಾಡುವ ವ್ಯಕ್ತಿಗೆ ತಿಳಿವುದು ಅದರಲ್ಲಿನ ಸುಖ ಯಾವೊತೂ!್ತ

  ಬೆಸ್ತರ ಒಡೆಯನು ದಾಶರಾಜನೋ ನಾಚಿದ ತನ್ನಯ ಕೃತ್ಯಕ್ಕೆ
  ಉತ್ತಮ ವ್ಯಕ್ತಿಯ ಬಾಳನು ಕೊಂದೆನು ಎನ್ನುತ ನೊಂದನು ಆ ಕ್ಷಣಕೆ
  ಹೇಳಿದ- “ಕಂದಾ, ಹಿಂದಕೆ ಪಡೆದುಕೋ ನಿನ್ನ ಮನಸ್ಸಿನ ನಿರ್ಧಾರ
  ತಂದೆಯ ನಂತರ ನೀನೇ ವಹಿಸಿಕೊ ನಾಡಿನ ಸಾಮ್ರಾಜ್ಯದ ಭಾರ
  ನನ್ನ ದುರಾಸೆಗೆ ನಿನ್ನ ಸುಖವನ್ನು ಬಲಿಯಾಗಿಸದಿರು ನನಗಾಗಿ
  ನಿನ್ನ ಜೊತೆಯಲ್ಲಿ ಮಗಳನು ಕಳುಹುವೆ, ತಂದೆಗೆ ಒಪ್ಪಿಸು ನೀನಾಗಿ”

  ಪರಿಪರಿ ವಿಧದಲಿ ಬೇಡಿದನಾದರೂ ದೇವವ್ರತ ಅದನೊಪ್ಪಿಲ್ಲ
  ತನ್ನ ಪ್ರತಿಜ್ಞೆಗೆ ಬದ್ಧನಾದ ಅವನೆಂದೂ ಮಾತಿಗೆ ತಪ್ಪಿಲ್ಲ
  ಭೀಷ್ಮಪ್ರತಿಜ್ಞೆಯ ಮಾಡಿದ ಕಾರಣ ‘ಭೀಷ್ಮ’ನೆಂಬ ಹೆಸರನು ಪಡೆದ
  ಮಾನವಲೋಕಕೆ ಮಾದರಿಯಾಗುತ ಮಾನವರೆದೆಯಲಿ ತಾನುಳಿದ!
  ಭೀಷ್ಮನು ತಂದೆಯ ಬಯಕೆಯ ತೀರಿಸೆ ಸತ್ಯವತಿಯನ್ನು ಕರೆತಂದ
  ಕುಂದದ ಕೀರ್ತಿಯ ಲೋಕದಿ ಪಡೆಯುತ ತಂದೆಯ ಮದುವೆಗೆ ಮುಂದಾದ!

  ತಂದಾನ ತಂದಾನ ತಂದಾನಾನ ತಂದೆಗೆ ತಂದನು ಹೆಣ್ಣೊಂದನ
  ಎಂದಿಗೂ ಬಂಧನ ಬೇಡೆಂದನ ಮುಂದಿನ ಕಂದಗೆ ನಾಡೆಂದನ 
  ತಂದೆಯು ಮನದಲಿ ದಂಗಾದನ ಚೆಂದದ ಚೆಲುವನು ಹಿಂಗಾದನ ?
  ಕುಂದದ ಕೀರ್ತಿಯು ಬೇಕೆಂದನ ಸುಂದರ ಬದುಕನ್ನು ತಾ ಕೊಂದನ !

  ಶಂತನು ಭೀಷ್ಮನ ತ್ಯಾಗವನಾಲಿಸಿ ಮುಮ್ಮಲ ಮರುಗಿದ ನೋವಿನಲಿ
  ಎಂತಹ ಪಾಪದ ಕೆಲಸವ ಮಾಡಿದೆನೆನ್ನುತ ಬಳಲಿದ ಮನಸಿನಲಿ
  ಭೀಷ್ಮನ ಅಪ್ಪುತ ನುಡಿದನು ಶಂತನು- “ಕಂದಾ, ನನ್ನಲಿ ಕರುಣೆಯಿಡು
  ದುರ್ಬಲ ಮನಸಿನ ನನ್ನ ಕಾರ್ಯವನು ಮನ್ನಿಸಿ, ನೋವಿಗೆ ಮುಕ್ತಿ ಕೊಡು
  ನನ್ನ ಬಾಳಿನಲಿ ಸರ್ವವೂ ನೀನೆ, ನೀನಿಲ್ಲೆಂದರೆ ನಾನಿಲ್ಲ
  ನಿನ್ನಯ ಸುಖವೇ ನನ್ನಯ ಸುಖವು ನಿನಗೇತಕೆ ಇದು ತಿಳಿದಿಲ್ಲ?
  ದಶರಥ ಹೆಂಡತಿ ಮೋಹಕೆ ಬೀಳಲು ರಾಮನು ಕಾಡಿನ ಪಾಲಾದ
  ಶಂತನು ಹೆಣ್ಣಿನ ಆಸೆಗೆ ಬೀಳುತ ಪುತ್ರನ ಬದುಕಿಗೆ ಮುಳ್ಳಾದ
  ಎನ್ನುವ ನಿಂದೆಯು ಎಂದಿಗು ಉಳಿವುದು, ಬೇಡಪ್ಪಾ ನನಗೀ ಮದುವೆ
  ನಿನ್ನ ಪ್ರತಿಜ್ಞೆಯ ಹಿಂದಕೆ ಪಡೆದುಕೊ, ಸಂತಸ ತರುವುದು ನನಗದುವೆ”
  ಶಂತನು ಪರಿ ಪರಿ ಬೇಡಿದನಾದರೂ ಭೀಷ್ಮನು ಒಪ್ಪಿಗೆ ಕೊಡಲಿಲ್ಲ
  ಕೊಟ್ಟಭಾಷೆಯನು ಹಿಂದಕೆ ಪಡೆಯಲು ಅವನ ಮನಸ್ಸನು ಬಿಡಲಿಲ್ಲ
  ಭೀಷ್ಮನು ಮಾತಿಗೆ ತಪ್ಪುವುದುಂಟೇ? ಲೋಕದ ಮೆಚ್ಚುಗೆ ಇರುವಾಗ
  ಶಂತನು ಮಗನು ಅದೆಂತಹ ಉತ್ತಮ ಎನ್ನುವ ಕೀರ್ತಿಯು ಸಿಗುವಾಗ!
  ಬೇರೆಯ ದಾರಿಯು ಕಾಣದೆ ಶಂತನು ಸತ್ಯವತಿಯನ್ನು ಸ್ವೀಕರಿಸಿ
  ಮಗನ ಭವಿಷ್ಯವ ಬಲಿಪಡೆದಂತಹ ತನ್ನಯ ಕೃತ್ಯಕೆ ಕಳವಳಿಸಿ
  ತ್ಯಾಗವ ಮಾಡಿದ ಪ್ರೀತಿಯ ಪುತ್ರನ ಭೀಷ್ಮಪ್ರತಿಜ್ಞೆಗೆ ಪ್ರತಿಯಾಗಿ
  ಶಂತನು ನೀಡಿದ ತುಂಬಿದ ಮನದಲಿ ಇಚ್ಛಾಮರಣವ ವರವಾಗಿ!

  ಶಂತನು ಮದುವೆಯು ಅಂತೂ ಆಯಿತು ದಾಶರಾಜ ಸುತೆ ಜೊತೆಯಲ್ಲಿ
  ಕುಂಟುತ ತೆವಳುತ ಎಂತೋ ಸಾಗಿತು ಸುಖದಾಂಪತ್ಯದ ರಥವಲ್ಲಿ
  ಮುದುಕನಿಗಾದರು ಇಬ್ಬರು ಮಕ್ಕಳು ಮುಂದಿನ ಎರಡೇ ವರುಷದಲಿ
  ರಾಜನ ವಂಶವು ಬೆಳೆಯಿತು ಎನ್ನುತ ರಾಜ್ಯವು ಮುಳುಗಿತು ಹರುಷದಲಿ!
  ‘ಚಿತ್ರಾಂಗದ’ ಎನ್ನುವ ಹಿರಿಯವನು ‘ವಿಚಿತ್ರವೀರ್ಯ’ನು ಕಿರಿಯವನು
  ಆದರೆ ಮಕ್ಕಳ ಲಾಲನೆ ಪಾಲನೆ ಮಾಡದೆ ಶಂತನು ಗತಿಸಿದನು
  ಮಕ್ಕಳ ಪಡೆದರೂ ಚಿಕ್ಕವಯಸಿನಲಿ ಶಂತನು ಪತ್ನಿಗೆ ವೈಧವ್ಯ
  ಭೀಷ್ಮನು, ಮಕ್ಕಳ ಹೆಸರಲಿ ಹೊತ್ತನು ಕುರುಸಾಮ್ರಾಜ್ಯದ ಕರ್ತವ್ಯ! 

-ಡಾ.ಸಿ.ಎಂ.ಗೋವಿಂದರೆಡ್ಡಿ


ಮುಂದುವರೆಯುವುದು..

ಲೇಖಕರ ಪರಿಚಯ:

ಡಾ.ಸಿ.ಎಂ.ಗೋವಿಂದರೆಡ್ಡಿಯವರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಹೋಬಳಿ ಚೆನ್ನಿಗರಾಯಪುರ ಗ್ರಾಮದ ಸುಬ್ಬಮ್ಮ, ಮುನಿಸ್ವಾಮಿರೆಡ್ಡಿ ದಂಪತಿಗಳ ನಾಲ್ಕನೆಯ ಮಗನಾಗಿ 11-08-1958ರಂದು ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರು ಇಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿ ಮತ್ತು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ‘ಕೋಲಾರ ಜಿಲ್ಲೆಯ ಜಾತ್ರೆಗಳು :ಒಂದು ಅಧ್ಯಯನ’ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಶ್ರೀಯುತರು ಕೋಲಾರಜಿಲ್ಲೆಯ ಚಿಂತಾಮಣಿ ಹಾಗೂ ಮಾಲೂರು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಬೆಂಗಳೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕಾಡುಗುಡಿ ಇಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.