ಅಂತರ್ಜಾಲ ಪತ್ರಿಕೆ ನಡೆಸುವವರ ಕಷ್ಟಸುಖಗಳು: ನಟರಾಜು ಎಸ್.‌ ಎಂ.

ಪಂಜುವಿಗೆ ಎಂಟು ವರ್ಷಗಳು ತುಂಬಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು. ಇಷ್ಟು ಸುದೀರ್ಘ ಕಾಲ ಕನ್ನಡದಲ್ಲಿ ನೆಲೆ ನಿಂತ ಅಂತರ್ಜಾಲ ಪತ್ರಿಕೆಗಳು ಬೆರಳೆಣಿಕೆಯಷ್ಟು ಮಾತ್ರ.. ಒಮ್ಮೊಮ್ಮೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸೋದು ಒಂದು ರೀತಿಯಲ್ಲಿ ಸುಲಭ ಮತ್ತೊಂದು ರೀತಿಯಲ್ಲಿ ಬಲು ಕಠಿಣ. ಸುಲಭ ಯಾಕೆಂದರೆ ಇವತ್ತು ಒಂದಷ್ಟು ದುಡ್ಡು ಖರ್ಚು ಮಾಡಿದರೆ ಚಂದದ ವೆಬ್‌ ಸೈಟ್‌ ಗಳನ್ನು ಒಂದಷ್ಟು ಗಂಟೆಗಳಲ್ಲಿ ತಯಾರು ಮಾಡಿಬಿಡಬಹುದು. ಆದರೆ ವೆಬ್ ತಯಾರು ಮಾಡಿದ ಮೇಲೆ ಅದನ್ನು ನಡೆಸೋದು ಕಠಿಣ.

ಯಾಕೆಂದರೆ ಮೊದಲಿಗೆ ವೆಬ್‌ ಸೈಟ್‌ ಗೆ ಬೇಕಾಗಿರೋ ಕಂಟೆಂಟ್‌ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸಿಕ್ಕರೂ ಬೇರೆ ಎಲ್ಲೂ ಪ್ರಕಟ ಆಗಿರದ ಬರಹ ಸಿಗೋದು ತುಂಬಾನೆ ಕಷ್ಟ. ಉದಾಹರಣೆಗೆ ಎಂಟು ವರ್ಷದ ಹಿಂದೆ ಪಂಜುವಿನಲ್ಲಿ ಪ್ರತೀ ವಾರ ಬರಹಗಳು ಜೀ ಮೇಲ್‌ ನ ಇನ್‌ ಬಾಕ್ಸ್‌ ತುಂಬಿದಾಗ ಒಂದಷ್ಟು ಫೋಲ್ಡರ್‌ ಗಳನ್ನು ಮಾಡಿದರೆ ಮುಂದಿನ ಮೂರ್ನಾಲ್ಕು ವಾರಗಳಿಗಳಾಗುವಷ್ಟು ಚಂದದ ಲೇಖನಗಳಿರುತ್ತಿದ್ದವು. ಲೇಖಕರಿಗೆ ಒಂದು ಮಾತು ತಿಳಸಿ ಇಂತಹ ದಿನ ಪ್ರಕಟವಾಗುತ್ತೆ ಎಂದರೆ ಅವರು ಖುಷಿಯಿಂದ ಆಗಲಿ ಎಂದು ಪ್ರಕಟವಾಗುವವರೆಗೂ ಕಾಯುತ್ತಿದ್ದರು. ಈಗ ಆ ರೀತಿ ಕಾಯುವ ತಾಳ್ಮೆಯನ್ನು ಲೇಖಕರು ಕಳೆದುಕೊಂಡಿದ್ದಾರೆ. ಒಂದೇ ಒಂದು ಕ್ಲಿಕ್‌ ಮಾಡಿ ಫೇಸ್‌ ಬುಕ್‌, ವಾಟ್ಸ್‌ ಅಪ್‌, ಟೆಲಿಗ್ರಾಮ್‌ ಗಳಲ್ಲಿ ಲೇಖನಗಳನ್ನು ಹರಿದುಬಿಡೋದು ತುಂಬಾ ಸುಲಭವಾಗಿದೆ. ಆ ಸುಲಭದ ಕಾರಣಕ್ಕೆ ಇವತ್ತು ಲೇಖನಗಳ acute shortage ಅನ್ನು ಬರೀ ಅಂತರ್ಜಾಲ ಪತ್ರಿಕೆಗಳಷ್ಟೇ ಅಲ್ಲ ಮುದ್ರಣ ಮಾಧ್ಯಮಗಳು ಸಹ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಗಳನ್ನು ನಡೆಸೋದು ನಿಜಕ್ಕೂ ಕಷ್ಟಸಾಧ್ಯ.

ಅಂತರ್ಜಾಲ ಪತ್ರಿಕೆ ನಡೆಸುವವರಿಗೆ ಎದುರಾಗುವ ಮತ್ತೊಂದು ಕಷ್ಟ ಎಂದರೆ ಹಣ. ಒಂದು ವೆಬ್‌ ಸೈಟ್‌ ತಯಾರಾದ ಮೇಲೆ ಡೊಮೈನ್‌ ಫೀ, ಹೋಸ್ಟಿಂಗ್‌ ಫೀ ಅಂತ ಪ್ರತಿ ವರ್ಷ ಒಂದಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ವೆಬ್ ಡೆವಲಪರ್‌, ಕಂಟೆಂಟ್‌ ಎಡಿಟರ್ಸ ಇದ್ದರೆ ಅವರಿಗೂ ಸಹ ಹಣ ಹೊಂದಿಸಬೇಕಾಗುತ್ತದೆ. ಆಯಿತು ಎಲ್ಲದಕ್ಕೂ ಹಣ ಹೊಂದಿಸಿದೆವು ಅಂದುಕೊಳ್ಳಿ. ಆದರೆ ಈ ಅಂತರ್ಜಾಲ ಪತ್ರಿಕೆಗಳಿಂದ ಹಣ ಸಂಪಾದಿಸಬಹುದಾ? ಎಂದರೆ ಬಹುಶಃ ನನ್ನ ಉತ್ತರ ಖಂಡಿತಾ ಇಲ್ಲ ಅಂತಲೇ ಅನ್ನಬಹುದು. ಅಥವಾ ಹಣವನ್ನು ಜಾಹೀರಾತುಗಳ ಮೂಲಕ ಪಡೆಯುವ ಕಲೆ ನಮಗಂತೂ ತಿಳಿದಿಲ್ಲ. ಇಂಗ್ಲೀಷ್‌ ಪತ್ರಿಕೆಗಳಿಗಾದರೆ ಗೂಗಲ್‌ ಜಾಹೀರಾತನ್ನು ತುಂಬಾ ಸಲೀಸಾಗಿ ಹಾಕಿಕೊಳ್ಳಬಹುದು. ಆದರೆ ಪಂಜುವಿಗಾಗಿ ಗೂಗಲ್‌ ಜಾಹೀರಾತನ್ನು ಹಾಕಲು ಹೋದಾಗ ನಿಮ್ಮ ಭಾಷೆಗೆ ಇನ್ನೂ ನಾವು ಗೂಗಲ್‌ ಆಡ್‌ ನೀಡಲು ಅನುಮತಿಸಿಲ್ಲ ಅನ್ನುವಂತಹ ಮೇಲ್‌ ಗಳು ಬಂದಿದ್ದವು. ಇನ್ನೊಂದಷ್ಟು ಜಾಹೀರಾತಿನ ಆಯ್ಕೆಗಳಿದ್ದರೂ ಅವು ತಂದು ಕೊಡುವ ಲಾಭದ ಪ್ರಮಾಣ ತಿಳಿದಿಲ್ಲ.

ನಮ್ಮ ಜೊತೆಗಿನ ಅಂತರ್ಜಾಲ ಪತ್ರಿಕೆಗಳು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಒಂದಷ್ಟು ಕಾರ್ಪೊರೇಟ್‌ಸಂಸ್ಥೆಗಳ ಜೊತೆ ಟೈ ಅಪ್‌ ಮಾಡಿಕೊಂಡು ಕೆಲವರಂತೂ ಕೋಟ್ಯಾಂತರ ರೂಪಾಯಿಗಳನ್ನು ಅಂತರ್ಜಾಲ ಪತ್ರಿಕೆಗಳಿಗೆ ತೊಡಗಿಸಿರುವ ಉದಾಹರಣೆಗಳಿವೆ. ಕೆಲವು ಪತ್ರಿಕೆಗಳು ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಟಿಲಿಟಿಯ ಅಡಿಯಲ್ಲಿ ಒಂದು ಸಂಪಾದಕ ತಂಡವನ್ನು ಮಾಡಿಕೊಂಡು ಕಾರ್ಯನಿರ್ವಹಿಸುತ್ತಿವೆ. ಕೆಲವು ಬೆರಳೆಣಿಕೆಷ್ಟು ಪತ್ರಿಕೆಗಳು ತಮ್ಮ ಅಂತರ್ಜಾಲ ಪತ್ರಿಕೆಯ ಹೆಸರಲ್ಲಿ ಟ್ರಸ್ಟ್‌ ಮಾಡಿ ದೇಣಿಗೆ ಸಂಗ್ರಹದ ಬಟನ್‌ ಗಳನ್ನು ತಮ್ಮ ವೆಬ್‌ ಸೈಟ್‌ ಗಳಿಗೆ ನೀಡಿದ್ದಾರೆ. ಮತ್ತೊಂದಷ್ಟು ಅಂತರ್ಜಾಲ ಪತ್ರಿಕೆಗಳು ತಮ್ಮ ಅಂತರ್ಜಾಲ ಪತ್ರಿಕೆಯ ಜೊತೆಗೆ ಪ್ರಕಾಶನ ಸಂಸ್ಥೆಗಳನ್ನು ಸಹ ಶುರು ಮಾಡಿ ಪುಸ್ತಕವನ್ನು ಮುದ್ರಿಸಿ ಮಾರಾಟ ಮಾಡುವ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಅಂತರ್ಜಾಲ ತಾಣದಲ್ಲಿ ಕನ್ನಡವನ್ನು ಗಟ್ಟಿಯಾಗಿ ನೆಲೆಯೂರಿಸುವ ಪ್ರಯತ್ನಗಳು ಸತತವಾಗಿ ನಡೆಯುತ್ತಲೇ ಬಂದಿವೆ. ಅಂತಹ ಪ್ರಯತ್ನಕ್ಕೆ ಹೊಸ ಸೇರ್ಪಡೆ ಎಂದರೆ ಇ ಪುಸ್ತಕಗಳು. ಒಂದಷ್ಟು ವರ್ಷಗಳ ಹಿಂದೆ ಪಿಡಿಎಫ್‌ ರೂಪದಲ್ಲಿ ಇ ಪುಸ್ತಕ ನೀಡಲು ಒಂದಷ್ಟು ಜನ ಪ್ರಯತ್ನಿಸಿದರಾದರೂ ಯಾಕೋ ಅದು ಅಷ್ಟು ಯಶಸ್ವಿಯಾಗಲಿಲ್ಲ. ಇತ್ತೀಚೆಗೆ ಕನ್ನಡದಲ್ಲಿ ಅಮೇಜಾನ್‌ ನ ಕಿಂಡಲ್‌ ಇ ಪುಸ್ತಕಗಳ ತರಹ ಸದ್ದು ಮಾಡುತ್ತಿರುವ ಮೈಲ್ಯಾಂಗ್‌ ಎಂಬ ತಾಣದಲ್ಲಿ ಇ ಪುಸ್ತಕಗಳಿವೆ. ಮೈಲ್ಯಾಂಗ್‌ ತಾಣದಲ್ಲಿ ಇ ಪುಸ್ತಕಗಳ ಬೆಲೆ ಒಂಚೂರು ಜಾಸ್ತಿ ಅನಿಸಿದರೂ ಕನ್ನಡದ ಮಟ್ಟಿಗೆ ಇದೊಂದು ಉತ್ತಮ ಪ್ರಯತ್ನ. ಆದರೆ ಇಂತಹ ತಾಣಗಳನ್ನು ಉಳಿಸುವುದು ಬೆಳೆಸುವುದು ಓದುಗರ ಕೈಯಲ್ಲೇ ಇದೆ. ಒಟ್ಟಿನಲ್ಲಿ ಕನ್ನಡದ ಇರುವಿಕೆಯನ್ನು ಅಂತರ್ಜಾಲದಲ್ಲಿ ಸೃಷ್ಟಿಸಲು ನಡೆಸುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ.

ಅಂತರ್ಜಾಲದಲ್ಲಿ ಕನ್ನಡದ ಇರುವಿಕೆಯನ್ನು ಸೃಷ್ಟಿಸಿದ ಮೇಲೆ ಅದನ್ನು ಓದುಗರಿಗೆ ತಲುಪಿಸುವುದು ಮತ್ತೊಂದು ದೊಡ್ಡ ಕಷ್ಟದ ಕೆಲಸ. ಇವತ್ತು ಮೊದಲಿನ ಹಾಗೆ ಜೀ಼ ಮೇಲ್‌ ನ ಬಲ್ಕ್‌ ಮೇಲ್‌ ಗಳಾಗಲಿ, ಫೇಸ್‌ ಬುಕ್‌ ಪೇಜ್‌ ಗಳ ಪ್ರಮೋಷನ್‌ ಆಗಲಿ ಉಚಿತವಾಗಿಲ್ಲ. ರಾಶಿ ಮೇಲ್‌ ಗಳನ್ನು ಮಾಡಲು ಬೇರೆ ಉಪಾಯಗಳನ್ನು ಕಂಡುಕೊಳ್ಳಬೇಕು. ಒಂದು ಮಟ್ಟಿಗೆ ಆಪ್‌ ಗಳ ಅಭಿವೃದ್ದಿ ಹೆಚ್ಚು ಜನರನ್ನು ತಲುಪಲು ನೆರವಾಗಬಹುದು. ಸದ್ಯಕ್ಕೆ ಚಾಲ್ತಿಯಲ್ಲಿರುವ ಫೇಸ್‌ಬುಕ್‌ ಪೇಜ್‌ ಗಳ ಪ್ರಮೋಷನ್‌ ಗಳಿಗೆ ಹಣ ತೆರಬೇಕಾಗುತ್ತದೆ. ಟ್ವಿಟ್ಟರ್‌, ಇನ್‌ ಸ್ಟಾಗ್ರಾಮ್‌ ಮತ್ತು ನಮ್ಮ ಕನ್ನಡದವರೇ ಸಿದ್ದಪಡಿಸುವ ಕೂ ಎಂಬ ಆಪ್‌ ಗಳಲ್ಲಿ ಒಬ್ಬ ಸಾಮಾನ್ಯ ಪ್ರಜೆ ಅಪ್‌ ಡೇಟ್‌ ಮಾಡೋದಕ್ಕಿಂತ ಸೆಲೆಬ್ರಿಟಿಗಳ ಅಪ್‌ಡೇಟ್‌ ಗಳಿಗೆ ಹೆಚ್ಚು ತೂಕವಿದೆ. “ನೋಡಿ ಇಲ್ಲೊಂದು ಕನ್ನಡದ ಅಂತರ್ಜಾಲ ಪತ್ರಿಕೆ ಚೆನ್ನಾಗಿದೆ” “ಈ ಪತ್ರಿಕೆಯಲ್ಲಿ ಈ ಬರಹ ಇಷ್ಟವಾಯಿತು” ಅಂತ ಒಂದು ಪೋಸ್ಟ್‌ ಅನ್ನು ಒಬ್ಬರು ಸೆಲೆಬ್ರಿಟಿ ಅಪ್‌ ಲೋಡ್‌ ಮಾಡಿದರೆ ಸಾಕು ಸಾವಿರಾರು ಕನ್ನಡ ಓದುಗರಿಗೆ ಆ ಪತ್ರಿಕೆ ತಲುಪಿಬಿಡುತ್ತದೆ. ಅಂತರ್ಜಾಲ ಪತ್ರಿಕೆಗಳನ್ನು ಅದರಲ್ಲೂ ಕನ್ನಡ ಸಾಹಿತ್ಯವನ್ನು ಓದುವ ಸೆಲೆಬ್ರಿಟಿಗಳು ನಮ್ಮ ನಡುವೆ ಬಹುಶಃ ಕಡಿಮೆ ಇರಬಹುದೇನೋ ಗೊತ್ತಿಲ್ಲ. ಆದರೂ ಸೆಲೆಬ್ರಿಟಿಗಳು ಸಹ ಕನ್ನಡವನ್ನು ಪಸರಿಸುವ ಕೆಲಸಕ್ಕೆ ಕೈಜೋಡಿಸಬೇಕಾದ ಅವಶ್ಯಕತೆ ತುಂಬಾ ಇದೆ.

ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದೇ ಇಲ್ಲ ಎನ್ನಲಾಗುವುದಿಲ್ಲ. ಕೆಲವು ಸೆಲೆಬ್ರಿಟಿಗಳಿಂದ ಕತೆಗಳ ಓದು, ಕಾವ್ಯ ವಾಚನಗಳನ್ನು ಫೇಸ್‌ ಬುಕ್‌ ನಲ್ಲಿ ಮಾಡಿಸಲಾಗಿದೆ. ಕನ್ನಡದ ಓದುಗರನ್ನು ಹೆಚ್ಚು ತಲುಪುವ ದೃಷ್ಟಿಯಿಂದ ಇವತ್ತಿನ ದಿನಗಳಲ್ಲಿ ಆನ್‌ ಲೈನ್‌ ಕವಿಗೋಷ್ಟಿಗಳು ಫೇಸ್‌ ಬುಕ್‌ ಲೈವ್‌ ನಲ್ಲೂ, ಝೂಮ಼್ ಆಪ್‌ ನಲ್ಲೂ ಸಹ ನಡೆಸಲಾಗುತ್ತಿದೆ. ನೂರು ಜನರು ಭಾಗವಹಿಸಬಹುದಾದ ಝೂ಼ಮ್‌ ಮೀಟಿಂಗ್‌ ಫ್ರೀ ಇದೆಯಾದರೂ ಅದನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಆಯ್ಕೆ ಇರುವುದಿಲ್ಲ. ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಆಯ್ಕೆ ಬೇಕಾದರೆ ಅಥವಾ ಇನ್ನೂ ಹೆಚ್ಚು ಜನರು ಝೂ಼ಮ್‌ ಮೀಟಿಂಗ್‌ ನಲ್ಲಿ ಭಾಗವಹಿಸಬೇಕು ಎಂದರೆ ಹಣ ತೆರಬೇಕಾಗುತ್ತದೆ. ಆದರೂ ಕೆಲವರು ಹಣ ತೆತ್ತು ಝೂ಼ಮ್‌ ಮೀಟಿಂಗ್‌ ಗಳಲ್ಲಿ ಕವಿಗೋಷ್ಟಿ ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ನೆನಪಿರಲಿ ಇಂತಹ ಯಾವುದೇ ಕಾರ್ಯವೂ ಕೂಡ ಕನ್ನಡವನ್ನು ಕಟ್ಟುವ ಕೆಲಸವೇ ಆಗಿರುತ್ತದೆ. ಆ ಕೆಲಸಗಳಿಗೆ ಕನ್ನಡ ಮನಸ್ಸುಗಳ ಬೆಂಬಲ ತುಂಬಾ ಅತ್ಯಗತ್ಯ. ನನಗೆ ಗೊತ್ತು ಕನ್ನಡದ ಮೇಲಿನ ನಿಮ್ಮ ಪ್ರೀತಿ ಅಗಾಧವಾದುದು ಎಂದು ಆ ಕಾರಣಕ್ಕೆ ಪಂಜುವಿನಂತಹ ಎಷ್ಟೋ ಅಂತರ್ಜಾಲ ಪತ್ರಿಕೆಗಳು ಇವತ್ತಿಗೂ ಕನ್ನಡದ ಸೇವೆಯಲ್ಲಿ ನಿರಂತರವಾಗಿ ನಿರತರಾಗಿವೆ. ನಾವು ಈ ಪತ್ರಿಕೆಯನ್ನಷ್ಟೇ ಓದೋದು, ಆ ಪತ್ರಿಕೆಗಳಿಗಷ್ಟೇ ಬರೆಯೋದು ಎನ್ನುವ ಮನಸ್ಥಿತಿಗಳಿಂದ ಹೊರಬಂದು ಒಟ್ಟು ಕನ್ನಡದ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ತಾವುಗಳು ಸಹ ಹೊರಬೇಕಿದೆ.

ತಂತ್ರಜ್ಞಾನ ಮುಂದುವರೆದಂತೆ ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ನಾವು ಹಿಂದೆಯೇ ಉಳಿಯುವ ಅಪಾಯವಿರುತ್ತದೆ. ಆ ಕಾರಣಕ್ಕೆ ಹೊಸ ಹೊಸ ಸಾಧ್ಯತೆಗಳ ಕುರಿತ ನಿಮ್ಮ ಅಭಿಪ್ರಾಯ ಸಲಹೆಗಳಿಗೆ ಸದಾ ಸ್ವಾಗತ. ಇಷ್ಟು ವರ್ಷ ನೀವು ನೀಡುರುವ ಪ್ರೋತ್ಸಾಹದ ಕಾರಣಕ್ಕೆ ಅದೆಷ್ಟೋ ಲೇಖಕರು ಇವತ್ತು ಪುಸ್ತಕಗಳನ್ನು ಬರೆಯುವ ಮಟ್ಟಿಗೆ ಬೇರೆ ಬೇರೆ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಯಾವುದೇ ಹಿಂಜರಿಕೆಗಳಿಲ್ಲದೆ ಪ್ರಕಟಿಸುತ್ತಾರೆಂದರೆ ಅದು ನೀವು ತೋರಿದ ಪ್ರೀತಿ ಅಲ್ಲದೇ ಬೇರೇನು ಅಲ್ಲ. ಕಳೆದ ವರ್ಷ ಅದೆಷ್ಟೋ ಪಂಜುವಿನ ಲೇಖಕರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಶಸ್ತಿಗಳನ್ನು ಪಡೆದಿದ್ದಾರೆ ಅವರೆಲ್ಲರಿಗೂ ಪಂಜು ಬಳಗ ಪರವಾಗಿ ಅಭಿನಂದನೆಗಳು. ಪಂಜು ಇವತ್ತು ಹೊಸ ವಿನ್ಯಾಸದೊಂದಿಗೆ ನಿಮ್ಮ ಮುಂದಿದೆ. ಎಂದಿನಂತೆ ಕನ್ನಡದ ಸೇವೆಯಲ್ಲಿ ತೊಡಗಲು ಪಂಜು ಕಂಕಣಬದ್ಧವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿಯೂ ಸಹ ಹೀಗೆಯೇ ಇರುತ್ತದೆ ಎಂಬ ನಂಬಿಕೆ ನಮ್ಮದು. ಪಂಜುವಿನ ಈ ಹುಟ್ಟುಹಬ್ಬಕ್ಕೆ ಹಾರೈಸಿರುವ ಹಾರೈಸುವ ಎಲ್ಲಾ ಕನ್ನಡ ಮನಸ್ಸುಗಳಿಗೂ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳೊಂದಿಗೆ

ನಿಮ್ಮ ಪ್ರೀತಿಯ

ನಟರಾಜು ಎಸ್.‌ ಎಂ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Santhoshkumar LM
Santhoshkumar LM
3 years ago

ಪತ್ರಿಕೆ ‌ನಡೆಸುವುದೆಂದರೆ ಹುಡುಗಾಟದ ಮಾತಲ್ಲ. ಅದೂ ಒಂಬತ್ತು ವರ್ಷ ಸತತವಾಗಿ ನಡೆಸುವುದೆಂದರೆ ನಿಜಕ್ಕೂ ಅದೊಂದು ತಪಸ್ಸು. ಇಂತಹ ಸಾಧನೆಯನ್ನು ಪಂಜು ಬಳಗ ಮಾಡಿಕೊಂಡು ಬಂದಿದೆ . ಅದಕ್ಕಾಗಿ ಪಂಜುವಿಗೆ & ಅದರ ಸಂಪಾದಕ ನಟರಾಜು ಅವರಿಗೆ ಅಭಿನಂದನೆಗಳು!!

Ashfaq Peerzade
Ashfaq Peerzade
3 years ago

ಹತ್ತನೇಯ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ನನ್ನ ಅಚ್ಚು ಮೆಚ್ಚಿನ ಪಂಜುವಿಗೆ ಅನಂತ ಅಭಿನಂದನೆಗಳು. ನನ್ನ ಸಾಹಿತ್ಯಕ ಸಾಧನೆಯಲ್ಲಿ ತಮ್ಮ ಪಾತ್ರ ಬಹುದೊಡ್ಡದು ಎನ್ನುವುದು ಮರೆಯುವಂತಿಲ್ಲ. ಅಂತರ್ಜಾಲ ಪತ್ರಿಕೆಗಳ ರೂವಾರಿಗಳ ಶ್ರಮ ಮತ್ತು ದರ್ದು ತುಂಬ ಹೃದಯಂಗಮವಾಗಿ ತಮ್ಮ ಪುಟ್ಟ ಲೇಖನದಲ್ಲಿ ಅನಾವರಣಗೊಳಿಸಿದ ಪಂಜು ಪತ್ರಿಕೆಯ ಸಾರಥಿ ನಟರಾಜ ಅವರಿಗೆ ನನ್ನ ತುಂಬ ಹೃದಯದ ಧನ್ಯವಾದಗಳು.

ಅಮರದೀಪ್ ಪಿ.ಎಸ್.
ಅಮರದೀಪ್ ಪಿ.ಎಸ್.
3 years ago

ನಟ್ಟುಜೀ…. ತಮ್ಮ ಅತೀವ ಕಾಳಜಿಗೆ ಧನ್ಯವಾದಗಳು… ಪಂಜುಗೆ ಮತ್ತೊಮ್ಮೆ ಶುಭಾಶಯಗಳು ‌‌…… ಬಹುಶಃ ನನ್ನ ಮೊದಲ ಆನ್ ಲೈನ್ ಬರಹ ಪಂಜರ ನಿಂದ ಶುರುವಾಗಿದ್ದೆಂದು ಹೇಳಲು ಖುಷಿಯಿದೆ…. ನನ್ನಿಂದ ಇಲ್ಲಿಗೆ ಎಪ್ಪತ್ತು ಅಂಕಣ ಬರಹ ಒಂದೆರಡು ಕಥಾ ಲೇಖನದಲ್ಲಿ ಬರೆಯಲು ನಿಮ್ಮ ಸ್ನೇಹ ಪ್ರೀತಿ ಮತ್ತು ನಾನು ಬರೆಯಲು ಆಸಕ್ತಿ ಹುಟ್ಟಿಸಿದ್ದು ಇವತ್ತಿಗಲ್ಲ, ಯಾವತ್ತೂ ಸಾರ್ಥಕವೆನಿಸಿದೆ.‌‌‌

Aravind Chandrakant Shanbhag
Aravind Chandrakant Shanbhag
3 years ago

ವಿಚಾರ ನಿಜ. ಬರಹಗಾರರು ತಮ್ಮ ಬ್ಲಾಗ್ ಗಳಲ್ಲಿ ಭಾವನೆಗಳ ಅಭಿವ್ಯಕ್ತಿ ನಡೆಸಿದ್ದಾರೆ.

4
0
Would love your thoughts, please comment.x
()
x