ಅಸ್ಪೃಶ್ಯತೆಯ ಅನಾವರಣ- ಮುಲ್ಕ ರಾಜ ಆನಂದರ-Untouchable: ನಾಗರೇಖಾ ಗಾಂವಕರ

ಆತ ಭಾಕಾ. ಹದಿನೆಂಟರ ದಲಿತ ಯುವಕ. ಆತನ ಬಹುದಿನದ ಆಸೆ ಹಾಕಿ ಆಡುವುದು. ಅದಕ್ಕಾಗಿ ಹಾಕಿ ಕೋಲು ಅನಿವಾರ್ಯ. ಬಡವ ಭಾಕಾನಿಗೆ ಅದು ಕಷ್ಟಸಾಧ್ಯ. ಆದರೆ ಅದನ್ನು ಕರುಣಿಸುವ ಹವಾಲ್ದಾರ ಚರತ್‍ಸಿಂಗ್ ಆತನಿಗೆ ದೇವರಂತೆ ಕಾಣುತ್ತಾನೆ. ಸಾವಿರಾರು ವರ್ಷಗಳ ಕೋಟಲೆಗಳು ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತದೆ.

ಬುಲಂದಶಹರನ ಹೊರವಲಯದಲ್ಲಿರುವ ಬಾವಿ. ಸವರ್ಣಿಯರಿಗೆ ಮಾತ್ರ ನೀರು ಸೇದುವ ಹಕ್ಕು. ಕೆಳಜಾತಿ ದಲಿತ ಹೆಣ್ಣುಮಕ್ಕಳು ಅವರು ನೀಡುವ ನೀರಿಗಾಗಿ ದಿನಗಟ್ಟಲೆ ಕಾಯಬೇಕು.ಸೋಹಿನಿ ಆಗಷ್ಟೇ ಪ್ರಾಯಕ್ಕೆ ಬಂದ ತರುಣಿ. ಭಾಕಾನ ಮುದ್ದಿನ ತಂಗಿ. ತನ್ನ ನಿತ್ಯಕರ್ಮದ ಪ್ರಕ್ಷಾಳನಕ್ಕಾಗಿ ಬಾವಿಯ ಹತ್ತಿರ ಬರುವ ದೇವಾಲಯದ ಪೂಜಾರಿ ಕಾಲಿನಾಥನ ಕಣ್ಣು ಆಗಷ್ಟೇ ತಾರುಣ್ಯದಿಂದ ಅರಳುತ್ತಿದ್ದ ಸೋಹಿನಿಯ ಮೇಲೆ ಬೀಳುತ್ತದೆ. ಅವಳಿಗೆ ಕರೆದು ನೀರು ನೀಡುವ ಆತ ದುರುದ್ದೇಶಪೂರಿತನಾಗಿ ಆಕೆಯನ್ನು ದೇವಾಲಯ ಪ್ರಾಂಗಣ ಗುಡಿಸಲು ಬರುವಂತೆ ಕರೆಯುತ್ತಾನೆ.

ದುರ್ನಾತ ಬೀರುವ ತನ್ನ ಕೆಳಜಾತಿಯ ಕಾಲನಿ ದಾಟಿ ಪಟ್ಟಣಕ್ಕೆ ಬರುವ ಭಾಕಾನಿಗೆ ಜಿಲೇಬಿ ತಿನ್ನುವ ಆಸೆ. ನಾಲ್ಕಾಣೆ ನೀಡಿ ಖರೀದಿಸಿದರೆ, ಅಂಗಡಿಯಾತ ಹಣ ಪಡೆದು ಮುಖ ಸೊಟ್ಟಗೆ ಮಾಡಿ ನಾಯಿಗೆ ಎಸೆಯುವಂತೆ ಜಿಲೇಬಿ ಎಸೆಯುತ್ತಾನೆ. ಭಾಕಾ ಅದನ್ನು ಕಷ್ಟಪಟ್ಟು ಹಿಡಿದುಕೊಳ್ಳುತ್ತಾನೆ.ಅಂಗಡಿ ಮಾಲೀಕ ಭಾಕಾ ಕೊಟ್ಟ ನಾಣ್ಯಗಳನ್ನು ನೀರಿನಿಂದ ಶುದ್ಧಗೊಳಿಸಿ ಇಟ್ಟುಕೊಳ್ಳುತ್ತಾನೆ. ಯಾಕೆಂದರೆ ದಲಿತ ಕೊಟ್ಟ ನಾಣ್ಯ ಮೈಲಿಗೆ ಎಂಬ ಕಾರಣಕ್ಕೆ.

ಅಕಸ್ಮಾತ್ತಾಗಿ ಗಡಿಬಿಡಿಯಲ್ಲಿ ಭಾಕಾ ಮೇಲ್ಜಾತಿಯ ಹಿಂದೂವ್ಯಕ್ತಿಗೆ ಮುಟ್ಟಿಬಿಡುತ್ತಾನೆ. ಕ್ಷಮೆ ಕೇಳಿದರೂ ಆತ ಭಾಕಾನನ್ನು ಮನಬಂದಂತೆ ಬೈದು ಉಗುಳಿ ನಿಂದಿಸುತ್ತಾನೆ. ಭಾಕಾನಿಗೆ ಅಸ್ಥಿಪಂಜರದಂತೆ ಕಾಣುವ ಆ ಹಿಂದು ವ್ಯಾಪಾರಿಯನ್ನು ತಳಿಸಬೇಕೆನಿಸಿದರೂ ತನ್ನ ಮಿತಿಯಲ್ಲೆ ಪರಿಪರಿಯಾಗಿ ಪ್ರಾರ್ಥಿಸುತ್ತಾನೆ. ಮುಸ್ಲಿಂ ಟಾಂಗಾವಾಲಾ ಲಲ್ಲಾ ಆ ಮುಜುಗರದಿಂದ ಭಾಕಾನನ್ನು ಪಾರುಮಾಡುತ್ತಾನೆ.

ಕಾಲಿನಾಥನ ಕರೆಯ ಮೇರೆಗೆ ದೇವಾಲಯ ಪ್ರಾಂಗಣ ಗುಡಿಸಲು ಹೋದ ಸೋಹಿನಿ ಮೇಲೆ ಮುದುಕ ಪೂಜಾರಿ ಕಾಳಿನಾಥ ಅತ್ಯಾಚಾರಕ್ಕೆ ಯತ್ನಿಸುತ್ತಾನೆ. ಆಕೆ ಕೂಗಿಕೊಂಡಾಗ ಆಕೆಯ ರಕ್ಷಣೆಗೆ ಧಾವಿಸಿಬರುವ ಭಾಕಾನನ್ನು ಕಂಡೊಡನೆ ಕಾಲಿನಾಥ “ಮೈಲಿಗೆ, ಮೈಲಿಗೆ” ಎಂದು ಬೊಬ್ಬೆ ಹಾಕುತ್ತಾನೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇವರನ್ನು ಅಪರಾಧಿಗಳನ್ನಾಗಿ ಮಾಡುತ್ತಾನೆ.ಆದರೆ ಭಾಕಾನ ಭಾತೃಪ್ರೇಮ ಪುಟಿದೇಳುತ್ತದೆ.

ಈ ಘಟನೆಯಿಂದ ಮನನೊಂದ ಭಾಕಾ ಭಾರವಾದ ಹೆಜ್ಜೆಗಳೊಂದಿಗೆ ತಾನು ಕೆಲಸ ಮಾಡುವ ಒಡತಿಯಲ್ಲಿ ರೊಟ್ಟಿ ಬೇಡಿದರೆ ಆಕೆ ಆತನಿಗೆ ಹೀಯಾಳಿಸಿ ಬೈದು ರೊಟ್ಟಿಯನ್ನು ತೂರಿನೀಡುತ್ತಾಳೆ. ಆದನ್ನಾತ ಕ್ರಿಕೆಟರ್ ಚೆಂಡು ಹಿಡಿಯುವಂತೆ ಹಿಡಿದುಕೊಳ್ಳುತ್ತಾನೆ. ಅದೇ ಆಕೆ ಸಾಧು ಮಹನೀಯನಿಗೆ ಆದರಿಸಿ ಉಪಚರಿಸುತ್ತಾಳೆ.

ಅಪಮಾನಗಳ ಸರಮಾಲೆಯನ್ನೆ ಅನುಭವಿಸುವ ಭಾಕಾ ಸಾಮಾನ್ಯ ಅಸ್ಪøಶ್ಯನ ಒಳಬದುಕನ್ನು ಪ್ರತಿನಿಧಿಸುತ್ತಾನೆ.ಎಲ್ಲ್ಲ ಘಟನೆಗಳು ಭಾಕಾನ ಒಂದು ದಿನದ ಅನುಭವಗಳು.ಮುಲ್ಕ ರಾಜ್ ಆನಂದರ “untouchable”ಕಾದಂಬರಿಯ ಕಥಾನಕ. ಜಾತಿ ವ್ಯವಸ್ಥೆಯ ಕರಾಳ ಚರಿತ್ರೆಯ ತುಣುಕುಗಳನ್ನೊಳಗೊಂಡ ನಿಷ್ಠುರ ವಿಡಂಬನೆ ಈ ಕಾದಂಬರಿ. ಜಾತಿ ಪದ್ಧತಿಯ ಘೋರ ಅಮಾನವೀಯ ಅಸ್ಪøಶ್ಯತೆಯಂತಹ ಆಚರಣೆಗಳು ಭಾರತೀಯ ಸಮಾಜದ ಕಪ್ಪುಚುಕ್ಕೆಗಳು ಮಾತ್ರವಲ್ಲ, ತೀರ ಕೆಳಸ್ತರದ ಸಾಮಾಜಿಕ ವ್ಯವಸ್ಥೆ ಎಂಬುದನ್ನು ವಿಶದ ಪಡಿಸುತ್ತವೆ. ಹಿಂದೂ ಸಮಾಜದ ವಿಘಟನೆಗೆ ಅವನತಿಗೆ ಮೂಲ ಕಾರಣ ಈ ಪದ್ಧತಿ. ಇಂದಿಗೂ ಭಾರತೀಯ ಸಮಾಜದಿಂದ ಅಮೂಲಾಗ್ರವಾಗಿ ಕಿತ್ತೆಸೆಯಲಾಗದ ಗಂಭೀರ ಜ್ವಲಂತ ಸಮಸ್ಯೆ.

ತಮ್ಮ ಸೇವೆಯಿಂದ ಊರನ್ನು ಸ್ವಚ್ಛವಾಗಿಡುವ ಭಂಗಿಯನ್ನು ಕಂಡೊಡನೆ ಮುಖ ಸೊಟ್ಟಗೆ ಮಾಡುವ ವ್ಯಾಪಾರಿ, ಭಾಕಾನನ್ನು ಹಂಗಿಸಿ ರೊಟ್ಟಿಯನ್ನು ನಾಯಿಗೆ ಎಸೆಯುವಂತೆ ಎಸೆಯುವ ಒಡತಿ ಹೀಗೆ ಹಲವಾರು ಸನ್ನಿವೇಷಗಳು ಭಾಕಾ ಧರ್ಮಕ್ಕೆ ವಿರುದ್ಧ ರೊಚ್ಚಿಗೇಳುವಂತೆ ಮಾಡುತ್ತದೆ.ಶ್ರೀಮಂತ ಬಡವ ಎಂಬ ವರ್ಗ ವ್ಯವಸ್ಥೆಯಿಂದ ಮುಕ್ತಿ ಬಯಸುತ್ತದೆ ಪ್ರಾಯದ ಭಾಕಾನ ಮನಸ್ಸು.ಭಾರತ ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅದರ ಧ್ಯೇಯ ಮಂತ್ರ ಮುಕ್ತತೆ.ಆದರೆ ದುರಾದೃಷ್ಟವೆಂದರೆ ಸಾಮಾಜಿಕ ಆರ್ಥಿಕ ಧಾರ್ಮಿಕ ಅಸಮಾನತೆಗಳೆಂಬ ಬ್ರಹ್ಮರಾಕ್ಷಸರು ಪ್ರಜಾಪ್ರಭುತ್ವದ ತೇರನ್ನು ಎಳೆಯುತ್ತಿರುವುದು.

ಕಾದಂಬರಿ ಮುಖ್ಯ ಖಳನಾಯಕ ಪಂಡಿತ್ ಕಾಳಿನಾಥ.ಆನಂದರು ಅವನನ್ನು ಗುರುತಿಸುವುದು ಬಹಳ ಗೂಡಾರ್ಥಭರಿತವಾಗಿ.“Ill homoured old devil, with a moral weakness” ಮುದಿ ವಯಸ್ಸಿನ ಈ ಪಂಡಿತ ಪೂಜಾರಿ.ಪುರೋಹಿತ ವರ್ಗದ ಇನ್ನೊಂದು ವಿಕೃತ ಬಿಂಬ ಅನಾವರಣಗೊಳ್ಳುತ್ತದೆ ಈ ಪಾತ್ರದಿಂದ. ಕಾದಂಬರಿಯಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಧರ್ಮ, ಶಿಕ್ಷಣ, ಮಹಿಳಾ ಸ್ಥಾನಮಾನ ಹೀಗೆ ಹಲವಾರು ಸಂಗತಿಗಳು ಭಾರತೀಯ ಸಮಾಜವನ್ನು ಕೇಂದ್ರವಾಗಿರಿಸಿಕೊಂಡು ಮೂಡಿಬಂದಿವೆ. ಅವುಗಳ ಕಟು ವಿಮರ್ಶೆಯಿದೆ..

ಕರ್ನಲ್ ಹಟ್ಚಿನ್‍ಸನ್ ಭಾಕಾನನ್ನು ಕ್ರೈಸ್ತಧರ್ಮಕ್ಕೆ ಪ್ರೇರೇಪಿಸುತ್ತಾನೆ. ಆದರೆ ಸ್ವಂತ ಹೆಂಡತಿಗೆ ಹೆದರುವ ಅವನನ್ನು ನೋಡಿ ಭಾಕಾನಿಗೆ ಅವನ ಪುರಾಣಗಳೆಲ್ಲ ಬೊಗಳೆ ಎನ್ನಿಸುತ್ತವೆ..ಕೊನೆಯಲ್ಲಿ ಮಹಾತ್ಮಗಾಂಧಿಯ ಭಾಷಣ. ಹಾಗೆ ಯುವ ಕವಿಯೊಬ್ಬನ ಸಂದೇಶದಿಂದ ಉತ್ತೇಜಿತನಾಗುತ್ತಾನೆ.ಗಾಂಧಿಜೀಯ ನುಡಿ”The fault does not lie in the hindu religion, but in those who profess it….”ಹಿಂದೂ ಧರ್ಮವೆಂದೂ ಅಸ್ಪøಶ್ಯತೆಯನ್ನು ಹುಟ್ಟುಹಾಕಿಲ್ಲ. ತಪ್ಪು ಧರ್ಮದಲ್ಲ, ಅದನ್ನು ಕಸುಬಾಗಿ ಮಾಡಿಕೊಂಡವರು ವೃಥಾ ಹುಟ್ಟುಹಾಕಿದ ಆಚರಣೆಗಳು ಎಂಬ ಗಾಂಧಿ ನುಡಿ ಆತನ ಮನದಾಳಕ್ಕಿಳೀಯುತ್ತದೆ.ಗಾಂಧಿ ಕೆಳವರ್ಗದವರನ್ನು ಹರಿಜನರೆಂದು ಕರೆದಾಗ ರೋಮಾಂಚನಗೊಳ್ಳುತ್ತಾನೆ ಭಾಕಾ. ಅಪಮಾನಗಳ ಹೊಗೆಯನ್ನೆ ಉಸಿರಾಡಿದರೂ ಮತಾಂತರಗೊಳ್ಳದೆ ಆಶಾವಾದಿಯಾಗಿ ಕಾಣುತ್ತಾನೆ.

1905 ಡಿಸೆಂಬರ 12ರಂದು ಪೇಶಾವರದಲ್ಲಿ [ಈಗ ಪಾಕಿಸ್ತಾನದಲ್ಲಿದೆ]ಕಮ್ಮಾರನ ಮಗನಾಗಿ ಜನಿಸಿದ ಆನಂದರು ಭಾರತದ ಅತಿಶ್ರೇಷ್ಠ ಇಂಗ್ಲೀಷ ಬರಹಗಾರ. ತುಳಿತಕ್ಕೊಳಗಾದ ಬಡಜನರ ದನಿಯಾಗಿ ಕೇಳಿಬರುವ ಇವರ ಹಲವಾರು ಕೃತಿಗಳು ಕೆಳವರ್ಗದ ಜನರ ಕರುಣಾಜನಕ ಬದುಕನ್ನು ತೆರೆದಿಡುತ್ತವೆ.ಅವುಗಳಲ್ಲಿ ಅತಿ ಹೆಚ್ಚು ಪ್ರಸಿದ್ದಿಯನ್ನು ತಂದುಕೊಟ್ಟ ಕೃತಿಗಳು untouchable [1935] ಹಾಗೂ coolie [1936] ಎರಡು ಭಾರತದ ಬಡತನದ ದರ್ಶನ ಮಾಡಿಸುತ್ತವೆ. ಇಂಡೋ ಆಂಗ್ಲೀಯನ್ ಕಾದಂಬರಿಗಳಿಗೆ ಒಂದು ಐಡೆಂಟಿಟಿ ಒದಗಿಸುವಲ್ಲಿ ಅಪಾರ ಕೊಡುಗೆ ನೀಡಿದ ಆನಂದರು 2004ರ ಸಪ್ಟೆಂಬರ 28ರಂದು ಪುಣಾದಲ್ಲಿ ತಮ್ಮ ಕೊನೆಯುಸಿರೆಳೆದರು.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x