ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು ಹೊರಬಿದ್ದವು. ಇಂತಹ ಅದೆಷ್ಟು ಘಟನೆಗಳನ್ನು ಅವನು ನೋಡಿದ್ದನೋ , ಕಲ್ಲು ಹೃದಯಕ್ಕೆ ಯಾವುದೂ ಲೆಕ್ಕಕ್ಕೆಬಾರದೇ ಒಂದೇ ಮುಷ್ಟಿಯಲ್ಲಿ ಮೂರೂ ಮರಿಗಳನ್ನು ಹೆಕ್ಕಿ ಲಂಟಾನದ ಬುಡಕ್ಕೆ ಎಸೆದು ತನ್ನ ಕೆಲಸ ಮುಂದುವರೆಸಿದನು. ನರಮಾನವನ ಸ್ಪರ್ಷಕ್ಕೆ ಬೆದರಿದ ಮರಿಯೊಂದು ಹೃದಯಾಘಾತವಾಗಿ ಕ್ಷಣಾರ್ಧದಲ್ಲಿ ಪ್ರಾಣಬಿಟ್ಟಿತು. ಉಳಿದೆರಡು ಮರಿಗಳಿಗೆ ಕೆಂಪಿರುವೆಗಳು ಮುತ್ತುತ್ತಿರುವಾಗ ಶಾಲೆ ಮುಗಿಸಿ ಮನೆಗೆ ಹೊರಟಿದ್ದ ಬಾಲಕನ ಕಣ್ಣಿಗೆ ಬಿದ್ದವು. ಮಾನವನ ದೃಷ್ಟಿ ತಾಗುವುದನ್ನು ಇಷ್ಟಪಡದ ಜೀವಿಗಳು ಆತನ ಸ್ಪರ್ಷವನ್ನು ಸಹಿಸಲು ಸಾಧ್ಯವೇ? ಎರಡು ದಿನಗಳ ಆರೈಕೆಯಲ್ಲಿಯೇ ಅವುಗಳು ನಿತ್ರಾಣವಾಗಿರುವುದನ್ನು ಅರಿತ ಬಾಲಕ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಪ್ರಾಣಿಪ್ರಿಯೆ ಅಶ್ವಿನಿಯವರ ಕೈಗಿಟ್ಟನು.

ಹಲವಾರು ಜಾಲತಾಣಗಳನ್ನು ಕೆದಕಿದ ಅಶ್ವಿನಿ ಕೃತಕವಾಗಿ ಗೂಡು ನಿರ್ಮಿಸಿ ಹಣ್ಣನ್ನು ಅರೆದು ಡ್ರಾಪರ್ ಗಳ ಸಹಾಯದಿಂದ ಗುಟುಕಿಸಿ, ಇರುವೆ ಕಚ್ಚಿದ ಗಾಯಗಳಿಗೆ ಮುಲಾಮು ಲೇಪಿಸಿದರು. ಅನಿರೀಕ್ಷಿತ ಆಘಾತದಿಂದ ಕೊಂಚ ಚೇತರಿಕೆ ಕಂಡ ಗಿಳಿ ಮರಿಗಳು ಅಶ್ವಿನಿಯವರ ಪ್ರೀತಿಯ ಆರೈಕೆಯ ಪರಿಣಾಮ ದಿನದಿಂದ ದಿನಕ್ಕೆ ಚೇತರಿಸಿಕೊಂಡು ಪುಕ್ಕಗಳ ಹೊದಿಕೆ ಬೆಳೆಯುತ್ತಿದ್ದಂತೆ ರಾಮ ಲಕ್ಷ್ಮಣ ಎಂದು ನಾಮಕರಣ ಮಾಡಿ ಮನೆಮಂದಿಯೆಲ್ಲಾ ಸಂಭ್ರಮಿಸಿದರು. ಮಾಹಿತಿ ಪಡೆಯಲು ಪಶುವೈದ್ಯರನ್ನು ಸಂಪರ್ಕಿಸಿದಾಗ “ಕಾಡುಹಕ್ಕಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ, ಅರಣ್ಯ ಇಲಾಖೆಯವರಿಗೆ ಒಪ್ಪಿಸಿ “ ಎಂದಾಗ ಮನೆಮಂದಿಗೆಲ್ಲ ದಿಗ್ಭ್ರಮೆ. ಮನೆಯ ಸದಸ್ಯರನ್ನು ಕಳೆದು ಕೊಳ್ಳುವ ಆತಂಕದಲ್ಲಿ ಚಡಪಡಿಸತೊಡಗಿದರು. ಅಂಜಿಕೆಯಲ್ಲಿಯೇ ಅರಣ್ಯ ಇಲಾಖೆಯವರ ಮುಂದೆ ವಿಷಯ ಪ್ರಸ್ತಾವಿಸಿ ಸ್ವತಂತ್ರ ಬದುಕು ನಡೆಸುವ ಸಾಮರ್ಥ್ಯ ಪಡೆಯುವವರೆಗೂ ಆರೈಕೆ ಮಾಡಿಕೊಡುವುದಾಗಿ ಒಪ್ಪಿಸಿ ನಿಟ್ಟುಸಿರುಬಿಟ್ಟರು.

ದಿನಗಳೆದಂತೆ ರಾಮ ಬಹಳ ಚುರುಕಾಗಿ ರೆಕ್ಕೆ ಬಲಿಯಲಾರಂಭಿಸಿತು. ಮನೆಯ ಹಿಂಭಾಗದ ಪೇರಲ ಗಿಡಕ್ಕೆ ಗಿಳಿಗಳ ಹಿಂಡು ಬಂದಾಗ ರಾಮನಲ್ಲಿ ಆಂತರಿಕವಾಗಿ ಅಡಗಿದ್ದ ಪ್ರಕೃತಿ ಸಹಜ ಹುಟ್ಟುಗುಣ ಪ್ರಚೋದನೆಗಳಿಗಾಗಿ ಬಲಿತ ರೆಕ್ಕೆಯನ್ನು ಬಡಿಯುತ್ತಾ ತನ್ನ ವಂಶಸ್ತರನ್ನು ಸೇರಿಕೊಂಡೇ ಬಿಟ್ಟನು. ಮಾನಸಿಕವಾಗಿ ಕುಂದಿದ್ದ ಲಕ್ಷ್ಮಣ ಏಕಾಂಗಿಯಾಗಿ ಮಾನಸಿಕವಾಗಿ ಮತ್ತಷ್ಟು ಜರ್ಜರಿತನಾಗಿ ಬಳಲಾರಂಭಿಸಿದನು. ಆದರೂ ಮನೆಮುಂದಿಯೆಲ್ಲಾ ಸೇರಿ ಹಾರುವುದನ್ನು ಕಲಿಸುವ ಪ್ರಯತ್ನ ಮಾತ್ರ ಜಾರಿಯಲ್ಲಿಟ್ಟಿರುವಾಗ ಪ್ರತಿದಿನವೂ ಸಹೋದರ ರಾಮನೊಳಗೊಂಡ ಗಿಳಿಗಳ ಹಿಂಡು ಮನೆಯ ಸಮೀಪದ ಮರದಲ್ಲಿ ಕುಳಿತು ಆತ್ಮವಿಶ್ವಾಸ ತುಂಬುವ ಸಂದೇಶವನ್ನೂ ರವಾನೆ ಮಾಡಲಾರಂಭಿಸಿದವು.

ಪ್ರತಿ ಬಾರಿಯೂ ಅವುಗಳ ನಡುವೆ ಸಂವಹನೆ ಏರ್ಪಟ್ಟಾಗಲೂ ಹೊಸ ಉತ್ಸಾಹದಿಂದ ತನ್ನ ಕೃಷಕವಾದ ರೆಕ್ಕೆಗಳ ಬಡಿಯುತ್ತಾ ಭಾನೆತ್ತರಕ್ಕೆ ಹಾರಲೆತ್ನಿಸಿ, ಸಾಧ್ಯವಾಗದೆ ತಗ್ಗಿದ ಆತ್ಮವಿಶ್ವಾಸದಿಂದ ಮುದುಡಿ ಗೂಡೊಳಗೆ ಕೂರುತ್ತಿದ್ದ. ಹಾಗೆಯೇ ತಿಂಗಳುಗಳೇ ಕಳೆದರೂ ರಾಮನೊಳಗೊಂಡ ಗಿಳಿಗಳ ಹಿಂಡು ಸಹೋದರನ ಸ್ವಾತಂತ್ರ್ಯಕ್ಕೆ , ಸ್ವಚ್ಛಂದದ ಹಾರಾಟಕ್ಕೆ ಪ್ರಯತ್ನ ಪಡುತ್ತಲೇ ಇದ್ದವು. ಅದೊಂದು ದಿನ ಬೆಳಿಗ್ಗೆ 8.30 ರ ಸುಮಾರಿಗೆ ಮನೆಯ ಸುತ್ತಲೂ ಗಿಳಿಗಳ ಭಾರೀ ಸದ್ದು, ಹಿಂದೆಂದೂ ಕಂಡಿರದಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಅವುಗಳಲ್ಲಿ ಯಾವುದೋ ಕಾರ್ಯವನ್ನು ಯಶಸ್ವಿಗೊಳಿಸಲು ದೃಢ ವಿಶ್ವಾಸದಿಂದಲೇ ಬಂದಂತಿತ್ತು. ಗಂಟೆಗಟ್ಟಲೆ ನಡೆದ ಸಂವಹನದಲ್ಲಿ ಲಕ್ಷ್ಮಣನಲ್ಲಿ ಆಂತರಿಕವಾಗಿ ಅಡಗಿದ್ದ ಶಕ್ತಿಯನ್ನು ಹೊರಗೆಡವುದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದವು. ಕೆಲವು ಗಿಳಿಗಳು ಆಗಾಗ್ಗೆ ಹಾರಿಬಂದು ಪಂಜರದ ಬಳಿಕೂತು ವಿಶಿಷ್ಟ ರೀತಿಯಲ್ಲಿ ಸದ್ದು ಮಾಡುತ್ತಿದ್ದವು.

ಯಾವ ಲಕ್ಷ್ಮಣ ಅದುವರೆಗೂ ತನ್ನ ರೆಕ್ಕೆಗಳು ಕೃಷಕವೆಂದು ಭಾವಿಸಿ ಮುದುಡಿ ಕೂರುತ್ತಿದ್ದನೋ, ಅಂದು ಅವುಗಳ ಸಂವಹನದಲ್ಲಿ ಪಡೆದ ಆತ್ಮವಿಶ್ವಾಸವು ಆತನ ರೆಕ್ಕೆಗಳಿಗೆ ಬಲ ನೀಡಿತು. ಅಂದಿನ ಪ್ರಯತ್ನದಲ್ಲಿ ಯಶಸ್ವಿಯಾದ ಲಕ್ಷ್ಮಣ ಬಾನೆತ್ತರಕ್ಕೆ ಹಾರುತ್ತಾ ಸಹೋದರನೊಂದಿಗೆ ಸೇರಿ ತನ್ನ ಬಂಧುಗಳೊಡಗೂಡಿ ಸ್ವತಂತ್ರ ಬದುಕು ಕಟ್ಟಿಕೊಂಡ. ಇತ್ತ ಅಶ್ವಿನಿಯವರ ಕುಟುಂಬದ ಹರ್ಷೋದ್ಗಾರ ಮುಗಿಲು ಮುಟ್ಟಿ ಸಂಭ್ರಮದಲ್ಲಿ ಮಿಂದು ಹೋದರು. ನಂತರದ ದಿನಗಳಲ್ಲಿ ಇಂದಿಗೂ ಆಗಾಗ ರಾಮ ಲಕ್ಷ್ಮಣರು ಬಂದು ಮನೆಯ ಸಮೀಪದ ಗಿಡಗಳಲ್ಲಿ ಕೂತು ತಮ್ಮನ್ನು ಸಲುಹಿದ ಅಶ್ವಿನಿ ಕುಟುಂಬದವರನ್ನು ಕೂಗಿ ಕರೆಯುತ್ತಾರೆ. ಅವರೊಡನೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸುತ್ತಾ ತಮ್ಮ ಆತ್ಮೀಯ ಸಂಬಂಧಗಳನ್ನು ಮುಂದುವರೆಸಿದ್ದಾರೆ.

ನಮ್ಮ ದಿನನಿತ್ಯದ ಬದುಕಿನಲ್ಲಿ , ನಮ್ಮ ಸುತ್ತಮುತ್ತಲೇ ನಡೆಯುತ್ತಿರುವ ಇಂತಹ ಹಲವಾರು ನೈಜ ಘಟನೆಗಳನ್ನು ಕಂಡಿರುತ್ತೇವಾದರೂ ಈಗಿನ ಒತ್ತಡದ ಬದುಕಿನ ನಡುವೆ ಅವುಗಳ ಕುರಿತು ವಿಶ್ಲೇಷಣೆ ಮಾಡುವುದು ತೀರ ಕಡಿಮೆ ಎನ್ನಬಹುದು. ಪ್ರಾಣಿ ಪಕ್ಷಿಗಳಲ್ಲಿ ತನ್ನ ಸಂಗಡಿಗರಿಗೆ ಅನಾಹುತ-ಅಪಾಯಗಳು ಸಂಭವಿಸಿದಾಗ , ವೈರಿಗಳಿಂದ ದಾಳಿಗೊಳಗುವ ಸನ್ನಿವೇಶ ಎದುರಾದಾಗ, ಆಹಾರ ದೊರಕುವ ಸಂದರ್ಭಗಳಲ್ಲಿ, ದಾಳಿಗೊಳಗಾದ ಸಂಗಡಿಗನಿಗೆ ಸಾಂತ್ವನ ತೋರಬೇಕಾದಾಗ, ಧೃತಿಗೆಟ್ಟಾಗ ಆತ್ಮವಿಶ್ವಾಸ ತುಂಬುವಂತಹ ಹಲವಾರು ಉದಾಹರಣೆಗಳನ್ನು ಕಾಣಬಹುದು. ವಿಕಾಸವಾದವನ್ನು ಗಮನಿಸಿದಾಗ ಮಾನವನಿಗೆ ಶಾರೀರಿಕ ಮತ್ತು ಬೌದ್ಧಿಕ ವಿಕಸನವಾಗಿ ಸಂಬಂಧಗಳನ್ನು ಅಗತ್ಯಕ್ಕೆ ತಕ್ಕಂತೆ ವಿಂಗಡಿಸಿ, ಅವುಗಳಿಗೆ ಪಾವಿತ್ರತೆ ನೀಡಿದ. ಪ್ರಾಣಿಗಳಲ್ಲಿ ಆ ಮಟ್ಟದ ವಿಕಾಸ ಕ್ರಿಯೆ ನಡೆಯದಿದ್ದರೂ ತಮ್ಮ ಬಳಗದ ಸದಸ್ಯರನ್ನು ಗುರುತಿಸುವ ,ಅವು ಸಮಸ್ಯೆಗೊಳಗಾದಾಗ ರಕ್ಷಿಸುವ ಮತ್ತು ಆತ್ಮವಿಶ್ವಾಸ ತುಂಬುವ ಪ್ರಯತ್ನಗಳು ಅವುಗಳದ್ದೇ ಆದ ವಿಶಿಷ್ಟ ಸಂವಹನಗಳ ಮುಖಾಂತರ ನಡೆಯಲ್ಪಡುತ್ತದೆ.

ಡಾ. ಯುವರಾಜ ಹೆಗಡೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x