ಚಿಮಮಾಂದ ಅಧಿಚೀಯ Americanah: ನಾಗರೇಖಾ ಗಾಂವಕರ

“A white boy and a black girl who grow up in the same working class town in England can get together and race is secondary, but in America even if the white boy and black girl grow up in the same neighbourhood , race would be primary”

ಇದು ಆಫ್ರಿಕಾದ ಸಮಕಾಲೀನ ಸಾಹಿತ್ಯ ಲೋಕದ ಶ್ರೇಷ್ಠ ಪ್ರತಿಭೆ ಚಿಮಮಾಂದ ಅಧಿಚೀಯ ಇತ್ತೀಚಿನ ಕಾದಂಬರಿ ‘Americanah’ದಲ್ಲಿ ಬರುವ ಸಾಲುಗಳು. ಕಾದಂಬರಿಯ 29 ನೇ ಅಧ್ಯಾಯದಲ್ಲಿ ಮುಖ್ಯ ಪಾತ್ರ ಒಬಿಂಜೆ ಉಲ್ಲೇಖಿಸುವ ಈ ಮಾತುಗಳು ಆ ಎರಡು ದೇಶಗಳಲ್ಲಿ ಜನಾಂಗೀಯ ಧೋರಣೆಯು ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪ್ರಖರ ವ್ಯಾಖ್ಯಾನವಾಗಿವೆ.
ಏಳು ಭಾಗಗಳಲ್ಲಿ 55 ಅಧ್ಯಾಯಗಳನ್ನು ಒಳಗೊಂಡಿರುವ ಕಾದಂಬರಿ ಜಗತ್ತಿನಾದ್ಯಂತ ಅಮೇರಿಕಾ ಎಂಬ ದೊಡ್ಡಣ್ಣ ದೇಶದ ಕುರಿತ ಇರುವ ಭ್ರಮೆಭರಿತ ಕಲ್ಪನೆಗಳು, ಈ ದೇಶಗಳ ಅತೀ ಸುಸಂಸ್ಕøತ ಜಗತ್ತಿನ ಒಳತೋಟಿ, ಬಹುತೇಕರನ್ನು ಕಾಡುವ ಡಿಪ್ರೆಶನ್ ಎಂಬ ಸಾಮಾನ್ಯ ಕಾಯಿಲೆ, ತನ್ನವರೆನ್ನುವರಿಲ್ಲದ ಜೀವನ ಪಯಣ ಇವೆಲ್ಲದರ ನಡುವೆ ಎಲ್ಲಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ನಿಯಮ ಸಿದ್ಧಾಂತಗಳಲ್ಲಿ ಕಟ್ಟಲ್ಪಡುವ ವ್ಯವಸ್ಥೆ, ಸಂಬಂಧಗಳನ್ನು ವಿಚಿತ್ರ ಚೌಕಟ್ಟಿನಲ್ಲಿ ಕೊಂಡುಕೊಳ್ಳುವ ಪರಮಾವಧಿಯ ಶಿಸ್ತು ಇವೆಲ್ಲಕ್ಕೂ ಒಂದು ದೃಷ್ಟಾಂತವಾಗಿ ನಿಲ್ಲುತ್ತದೆ.

ಜಗತ್ತಿನ ಚರಿತ್ರೆಯ ಪುಟಗಳಲ್ಲಿ ವರ್ಣಬೇಧದ ನೂರಾರು ಕ್ರೌರ್ಯದ ಗಾಥೆಗಳು, ಸ್ತ್ರೀದೌರ್ಜನ್ಯ, ಲೈಂಗಿಕ ದಬ್ಬಾಳಿಕೆಗಳು ಸೇರಿದ್ದರೂ ಇಂದಿನ ಮೂರನೇ ಜಗತ್ತಿನಲ್ಲಿ ಮುಂದುವರೆದ ಮನಸ್ಥಿತಿಯಲ್ಲಿ ಅದು ಬದಲಾವಣೆಯಾಗಿದೆ ಎಂದರೆ ಅದು ಶುದ್ಧ ಸುಳ್ಳು. ಅದರ ಉಪಸ್ಥಿತಿ ವಿಭಿನ್ನವಾಗಿ, ಹೊಸ ಪರಿವೇಷದಲ್ಲಿ ಮೊದಲಿಗಿಂತಲೂ ಹೆಚ್ಚೆ ಆಗಿದ್ದು, ಆಖ್ಯಾನ, ವಾಖ್ಯಾನಗಳು, ವಿರೋಧಗಳು, ಹೋರಾಟಗಳು ಮುಂಚೂಣಿಯಲ್ಲಿದ್ದರೂ ಅವುಗಳನ್ನು ನಾಶಮಾಡಲಾಗುತ್ತಿಲ್ಲ. ಅದು ಬಹುರೂಪಿಯಾಗಿ ಪುಟೀದೇಳುತ್ತ ತನ್ನ ಕರಾಳತೆಯನ್ನು ಉಳಿಸಿಕೊಂಡಿರುವುದು ಇಂದಿಗೂ ಸತ್ಯ.

ಉಕ್ರೇನ್ ಮೂಲದ ಜೋಸೆಫ್ ಕಾನ್ರಾಡ್ ತನ್ನ “ಹಾರ್ಟ ಆಫ್ ಡಾರ್ಕನೆಸ್” ಕೃತಿಯಲ್ಲಿ ಆಫ್ರ್ರಿಕಾದಲ್ಲಿ ಬ್ರಿಟಿಷರ ವಸಾಹತು ನೆಲೆಗಳಲ್ಲಿ, ಕಾಂಗೋದ ಕಾಡಿನಲ್ಲಿ ಬಿಳಿಯರ ದಬ್ಬಾಳಿಕೆ, ಕರಿಯರ ನರಕ ಯಾತನೆಯನ್ನು ಚಿತ್ರಿಸಿಯೂ ಬಿಳಿಯರ ಸಾರ್ವಭೌಮತೆಯನ್ನು ಜಗತ್ತಿಗೆ ಪ್ರಚುರಪಡಿಸಲೆಂಬಂತೆ ದಾಖಲಿಸಿದ್ದಾರೆ. ಕರಿಯರನ್ನು “ನಿಗ್ಗರ್”ಗಳೆಂದು ಕರೆದು ಅವಮಾನಿಸಿದ್ದಲ್ಲದೇ ಅಲ್ಲಿಯ ಉಚ್ಛ ಸಂಸ್ಕøತಿಯನ್ನು ಕಡೆಗಣಿಸಿ ತಿರುಚಲಾಗಿದೆ.ಇದನ್ನು ಚಿನುಅ ಅಚಿಬೆ ತಮ್ಮ “ಥಿಂಗ್ಸ ಪಾಲ್ ಅಪಾರ್ಟ” ಕಾದಂಬರಿಯಲ್ಲಿ ಪ್ರತಿಭಟಿಸಿದ್ದಾರೆ. ಹೊರ ದೇಶದ ವ್ಯಕ್ತಿಯೊಬ್ಬನಿಗೆ ಆಫ್ರಿಕಾದಂತಹ ಶ್ರೀಮಂತ ಸಂಸ್ಕøತಿಯನ್ನು ಹೊಂದಿದ ನಾಡಿನ ಬಣ್ಣ ತಿಳಿಯುವುದಾದರೂ ಹೇಗೆ?

ಇನ್ನು ರಾಲ್ಫ ವಾಲ್ಡೋ ಎಮರಸನ್ ತನ್ನ “ದಿ ಅಮೇರಿಕನ್ ಸ್ಕಾಲರ” ಪ್ರಬಂಧದಲ್ಲಿ ಅಮೇರಿಕನ್ ಪಂಡಿತನೊಬ್ಬನ ಸಾಮಥ್ರ್ಯಗಳ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಹಾಗಾಗೆ ಅವರ ಕೃತಿಗಳ ಅಧ್ಯಯನಗೈದ ಮನಸ್ಸುಗಳೆಲ್ಲ ಅಮೇರಿಕಾವನ್ನು ಅದ್ಭುತಗಳ ತೊಲೆಗಳ ಹೊಂದಿದ ನಾಡೆಂದು ಭ್ರಮಾಧೀನರಾಗಿದ್ದಾರೆ. ನಿಜಕ್ಕೂ ಅಲ್ಲಿಯ ವ್ಯವಸ್ಥೆ ಹಾಗೂ ಹೊರ ದೇಶದವರ ನಡೆಸಿಕೊಳ್ಳುವ ಅವರ ರೀತಿಗಳನ್ನು ಅಧಿಚೀ ಸಾರ್ವತ್ರಿಕ ಜ್ಞಾನ ಹಾಗೂ ಜನಾಂಗ ಜಾತಿ, ಬಣ್ಣ, ಇತ್ಯಾದಿಗಳ ಒಳನೋಟಗಳೊಂದಿಗೆ ಸಮೀಕರಿಸಿ ಚಿತ್ರಿಸುತ್ತಾರೆ. ಭಾರತದಂತಹ ದೇಶದ ಜಾತಿ ವ್ಯವಸ್ಥೆಯನ್ನು ವಿಚಿತ್ರವಾಗಿ ನೋಡುವ ಅದನ್ನು ಹೀಗಳೆಯುವ ಅಮೇರಿಕಾ ತನ್ನ “ರೇಸಿಸಂ” ಎನ್ನುವ ಕರಾಳ ವ್ಯವಸ್ಥೆಯನ್ನು ಹುಲ್ಲು ಸೊಪ್ಪು ಹಾಕುತ್ತ ಬೆಳೆಸಿಕೊಂಡು ಬರುತ್ತಿದೆ. ಇದನ್ನು ಅಧಿಚೀ ಹೀಗೆ ಉಲ್ಲೇಖಿಸುತ್ತಾರೆ. “Sometimes in America race is class”

ಅಮೇರಿಕಾದ ಗುಂಪುಗಾರಿಕೆ ವ್ಯವಸ್ಥಿತವಾಗಿದೆ. ಅದು ಕ್ಲಾಸ್, ಐಡಿಯೋಲಾಜಿ, ಪ್ರಾದೇಶಿಕತೆ, ಮತ್ತು ರೇಸ್ ಈ ನಾಲ್ಕು ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಬಡವ ಹಾಗೂ ಶ್ರೀಮಂತ ಎಂಬ ಆರ್ಥಿಕ ಶ್ರೇಣಿ, ಲಿಬರಲ್ಸ್ ಮತ್ತು ಕನ್ಸರ್ವೇಟಿವ್ಸ್ ಎಂಬ ವಿಚಾರಶ್ರೇಣಿ, ಉತ್ತರದವ ಹಾಗೂ ದಕ್ಷಿಣದವ ಎಂಬ ಪ್ರಾದೇಶಿಕ ಶ್ರೇಣಿ, ಬಿಳಿಯ ಮತ್ತು ಕರಿಯ ಎಂಬ ವರ್ಣಶ್ರೇಣಿಗಳಲ್ಲಿ ಕಟ್ಟಲ್ಪಟ್ಟಿದೆ. ಅಲ್ಲಿ ಬಿಳಿಯರು ಮೇಲ್ವರ್ಗದಲ್ಲಿದ್ದರೆ ಕರಿಯರು ಕೆಳವರ್ಗ. ಹಾಗಾಗೇ ಅಲ್ಲಿ “If you are white, you’re all right: If you are brown, stick around: If you are black, get back”ಎಂಬ ಮಾತು ಪ್ರಸಿದ್ಧವಾಗಿದೆ. ಅಧಿಚೀ ಕಾದಂಬರಿಯಲ್ಲಿ ಈ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.

ನೈಜೀರಿಯಾದ ಲಾಗೋಸನ ಇಫೆಮೇಲು ಮಧ್ಯಮ ಕುಟುಂಬದ ಹುಡುಗಿ. ಪೆಡರಲ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಕೆಲಸ ಕಳೆದುಕೊಂಡಿದ್ದಾರೆ. ತಾಯಿ ಶಾಲಾಶಿಕ್ಷಕಿ. ಅವರ ಕುಟುಂಬದ ಆದಾಯ ತೀರಾ ಕಡಿಮೆ. ಅವರ ಸಂಕಟಗಳಿಗೆಲ್ಲಾ ಆಗಾಗ ಹೆಗಲು ಕೊಡುವ ತಂದೆಯ ಸಹೋದರಿ ಆಂಟಿ ಉಜು ಎಂದರೆ ಇಫೆಮೇಲು ಮತ್ತಾಕೆಯ ತಾಯಿಗೆ ಬಹು ಹೆಮ್ಮೆ. ಮೆಡಿಕಲ್ ಓದಿರುವ ಆಂಟಿ ಉಜೂ ವಿವಾಹಿತನಾಗಿರುವ ಆರ್ಮಿ ಜನರಲ್‍ನೊಂದಿಗೆ ಸಂಬಂಧವಿದೆ. ಮನೆ ಬಾಡಿಗೆ ಕಟ್ಟಲಾಗದ ಇಫೆಮೇಲಾಳ ತಂದೆ ನಿಷ್ಪ್ರಯೋಜಕನಂತೆ ಕುಳಿತಾಗ ಆತನಿಗೆ ಹಣಕಾಸಿನ ಸಹಾಯ ನೀಡುವ, ಇವರ ಕಷ್ಟಕ್ಕೆಲ್ಲಾ ಸ್ಪಂದಿಸುವ ಆಕೆ ಜನರಲ್‍ನ ಪ್ರಭಾವದಿಂದಲೇ ವಿಕ್ಟೋರಿಯಾ ಐಲೆಂಡಿನ ಮಿಲಿಟರಿ ಆಸ್ಪತ್ರೆಯಲ್ಲಿ ಕೆಲಸಗಿಟ್ಟಿಸಿಕೊಂಡಿದ್ದಾಳೆ. ಶ್ರೀಮಂತರೇ ಇರುವ ಡಾಲ್ಪಿನ್ ಎಸ್ಟೇಟನಲ್ಲಿರುವ ಆತನ ಮನೆಯಲ್ಲಿ ಜನರಲ್‍ನಿಂದ ಪಡೆದ ತನ್ನ ಮಗ ಡೈಕ್‍ನೊಂದಿಗೆ ಇದ್ದಾಳೆ. ಆದರೆ ಕೆಲವೇ ದಿನಗಳಲ್ಲಿ ಜನರಲ್ ಮರಣಹೊಂದುತ್ತಲೂ ಆತನ ಮೊದಲ ಪತ್ನಿಯ ಕಡೆಯವರ ಬೆದರಿಕೆಗೆ ಮಣಿದು ಅಮೇರಿಕಾಕ್ಕೆ ವಲಸೆ ಹೋಗುತ್ತಾಳೆ. ನೈಜೀರಿಯಾದಲ್ಲಿ ಕುಲೀನ ಜೀವನ ನಡೆಸಿದ ಆಕೆ ಅಮೇರಿಕಾದಲ್ಲಿ ಕೆಲಸ ಸಿಗದೇ ಪರದಾಡುತ್ತಾಳೆ. ಅಮೇರಿಕನ್‍ರು ವಿದೇಶಿಗರನ್ನು ಅದರಲ್ಲೂ ಕರಿಯರನ್ನು ತುಚ್ಛವಾಗಿ ನಡೆಸಿಕೊಳ್ಳುವ ಸಂಗತಿಗಳನ್ನು ಅಧಿಚಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ಮಗು ಡೈಕ್ ತನ್ನ ಬಿಳಿಯ ಸಹಪಾಟಿಗಳ ಜೊತೆ ಬೆರೆಯಲಾಗದೆ ಮಾನಸಿಕವಾಗಿ ಕುಗ್ಗುತ್ತಾನೆ. ಆಂಟಿ ಉಜೂ ಕೂಡಾ ಅಲ್ಲಿ ಬಿಳಿಯನೊಬ್ಬನೊಂದಿಗೆ ಏರ್ಪಡುವ ಸಂಬಂಧದಲ್ಲೂ ಸುಖಕಾಣದೇ ತೊಳಲಾಡುತ್ತಾಳೆ. ಸ್ತ್ರೀ ಬದುಕಿನ ದುರಂತಗಳ ಹಲವು ಆಯಾಮಗಳನ್ನು ಬಿಡಿಸುತ್ತಾ, ಜೀವನದ ಸತ್ಯಗಳನ್ನು ಗಂಡು ಹೆಣ್ಣು ಸೇರಿಯೇ ಮಾಡಿದ ಅನೇಕ ಎಡವಟ್ಟುಗಳಲ್ಲಿ ಹೆಣ್ಣೆ ಹೇಗೆ ನರಳಬೇಕಾಗುತ್ತದೆ ಎಂಬುದನ್ನು ಹಾಗೂ ನೈಜೀರಿಯಾದಂತಹ ದೇಶಗಳಲ್ಲಿ ವ್ಯಾಪಕವಾಗಿರುವ ಅತಂತ್ರ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ ಆಂಟಿ ಊಜೂ ಪಾತ್ರ.

ಇಫೇಮೇಲು ತನ್ನ ವಯಸ್ಸಿಗಿಂತ ಕೊಂಚ ಹೆಚ್ಚೆ ಎನ್ನುವಷ್ಟು ಮಾನಸಿಕ ಪ್ರಬುದ್ಧೆ. ತನ್ನ ಆಕಾಂಕ್ಷೆಗಳನ್ನು ಮುಚ್ಚುಮರೆಯಿಲ್ಲದೇ ವ್ಯಕ್ತಪಡಿಸುವ ಆಕೆ ಮಾನವ ಸಹಜ ಹೆಣ್ಣು. ಲಾಗೋಸ್‍ನಲ್ಲಿ ಕಲಿಯುತ್ತಿರುವ ಆಕೆ ತನ್ನ ಸ್ಕೂಲಿನ ಇತರ ವಿದ್ಯಾರ್ಥಿಗಳಿಗಿಂತ ಸ್ವಲ್ಪ ಭಿನ್ನ. ಎನ್‍ಸುಕ್ಕಾದಿಂದ ಆ ವರ್ಷವೇ ಲಾಗೋಸಗೆ ವರ್ಗಾವಣೆಗೊಂಡು ಬಂದಿರುವ ಸಹಪಾಠಿ ಒಬಿಂಜೆ ತನ್ನ ಗೆಳೆಯರೆಲ್ಲ ಆತನಿಗೆ ಜೋಡಿ ಎಂದು ಕಾಡುತ್ತಿದ್ದ ಗಿನಿಕಾಳತ್ತ ಆಕರ್ಷಿತನಾಗದೇ ಇಫೆಮೇಲುಳಲ್ಲಿ ವಿಚಿತ್ರವಾಗಿ ಸೆಳೆತಕ್ಕೊಳಗಾಗುತ್ತಾನೆ. ಆಕೆಯು ಆತನತ್ತ ಆಕರ್ಷಿತಳಾಗುತ್ತಾಳೆ. ಅವರಿಬ್ಬರ ವಿಚಾರಗಳಲ್ಲಿ ಆಸಕ್ತಿಗಳಲ್ಲಿ ಸಾಮ್ಯತೆ ಇದೆ. ಈ ಸಂಗತಿಯನ್ನಾಕೆ ಆಂಟಿ ಉಜೂನಲ್ಲಿ ಬಿಚ್ಚಿಡುತ್ತಾಳೆ. ಆಕೆ ನೀಡುವ ಸಲಹೆ ಅಲ್ಲಿಯ ಸಂಸ್ಕøತಿಯ ಒಂದು ಚಿತ್ರಣ ನೀಡುತ್ತದೆ. “Let him to kiss and touch , but don’t let him to put it inside” ಇದನ್ನು ಅವರು ತಮ್ಮಿಬ್ಬರ ನಡುವೆ ಸ್ವಲ್ಪ ಸಮಯ ಕಾಯ್ದುಕೊಂಡರೂ ಮುಂದೆ ಸಾಧ್ಯವಾಗುವುದಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪಗಳ ಬಣ್ಣಿಸುವಲ್ಲಿ ರಮ್ಯತೆಯ ಹಾದಿಯನ್ನು ಸಂಪನ್ನಗೊಳಿಸುತ್ತಾರೆ ಅಧೀಚೀ.

ಅದು ಅವರಿಬ್ಬರ ಮೊದಲ ಮಿಲನ. ಗೆಳೆಯ ಕೀಯ್ಯೋಡೇ ಲಾಗೋಸ್‍ನ ಗೆಸ್ಟ ಹೌಸ ಒಂದರಲ್ಲಿ ಏರ್ಪಡಿಸಿದ ಪಾರ್ಟಿಯೊಂದರಲ್ಲಿ ಗೆಳೆಯರೆಲ್ಲ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ನೃತ್ಯಗೈಯುತ್ತಿದ್ದಾರೆ. ಒಬಿಂಜೆ ಧರಿಸಿದ ಜಾಕೆಟ್ ಆತನ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತಿದೆ. ಅವರಿಬ್ಬರ ದೃಷ್ಟಿ ಸಂಧಿಸಿದಾಗಲೆಲ್ಲಾ ಪಲ್ಲಟಿಸದೇ ಪರಸ್ಪರ ಸೆರೆಯಾಗುತ್ತಿದೆ. ನಿಧಾನಕ್ಕೆ ಇಫೆಮೇಲು ಮತ್ತು ಒಬಿಂಜೆ ಎಲ್ಲರಿಂದ ಸ್ವಲ್ಪ ದೂರ ಬಂದು ಪರಸ್ಪರ ಆತುಕೊಂಡಿದ್ದಾರೆ. ಅವರಿಬ್ಬರ ನಡುವಿನ ಪರದೆ ನಿಧಾನವಾಗಿ ಸರಿಯುತ್ತಿದೆ.
“ನಾವು ಚುಂಬಿಸೋಣವೇ? ಇಫೇಮೇಲು ಕೇಳಿದಳು.
ಗೊಂದಲಗೊಂಡಂತೆ ಕಂಡ ಆತ ಕೇಳಿದ “ಈ ವಿಚಾರ ಎಲ್ಲಿಂದ ಬಂತು?”
“ಸುಮ್ಮನೇ ಕೇಳಿದೆ. ನಾವು ಬಹಳ ಹೊತ್ತಿನಿಂದ ಹೀಗೆ ಹತ್ತಿರದಲ್ಲಿದ್ದೇವಲ್ಲಾ? ಆಕೆಯೆಂದಳು.
“ನಾ ಬಯಸಿದ್ದನ್ನೇ ನೀ ಬಯಸಬೇಕೆಂಬ ಇರಾದೆ ನನಗಿಲ್ಲ”
ಅದೇನದು ನಾ ಬಯಸಿದ್ದು? ಆಕೆಯೆಂದಳು.
ನಿನಗೇನು ಬೇಕು?
ನೀನೇನು ಅಂದುಕೊಂಡಿರುವೆ?
ನನ್ನ ಜಾಕೆಟ್!
ಆಕೆ ನಕ್ಕು ಹೇಳಿದಳು. “ ಹೌದು ನಿನ್ನ ಜಾಕೆಟ್”
“ನನಗೆ ನಾಚಿಕೆಯಾಗುತ್ತಿದೆ” ಆತನೆಂದ.
“ನಿಜವೇ? ಯಾಕೆಂದರೆ ನನಗೂ ನಾಚಿಕೆಯಾಗುತ್ತಿದೆ” ಇಫೆಮೇಲು ಹೇಳಿದಳು.
“ನಿನಗೂ ಸಹ ನಾಚಿಕೆಯಿದೆಂದು ನನಗನ್ನಿಸುತ್ತಿಲ್ಲ” ಆತನೆಂದ.
ಅವರಿಬ್ಬರ ಕೈ ಬೆಸೆದುಕೊಂಡಿತು. ಹಣೆಗಳು ತಾಕಿಕೊಂಡವು. ಗಾಢವಾದ ಚುಂಬಸಿಕೊಂಡರು. .ಆತನ ಚುಂಬನ ಮೈನವಿರೇಳಿಸುವಂತಿತ್ತು. ಅಮಲುಗೊಳಿಸುವಂತಿತ್ತು. ಆಕೆಯ ಹಳೆಯ ಗೆಳೆಯ ಮೋಫ್‍ನ ಎಂಜಲುಭರಿತ ಚುಂಬನದಂತಿರಲಿಲ್ಲ. ಈ ರೀತಿಯ ಹೆಣಿಗೆಗಳು ರೋಮ್ಯಾಂಟಿಕ್ ಕಲ್ಪನೆಯನ್ನು ರೋಚಕಗೊಳಿಸುತ್ತವೆ.

ಇಫೆಮೇಲು ಪ್ರಖರ ಮನಸ್ಥಿತಿಯ ಗಟ್ಟಿಗಾತಿ. ಸ್ನೇಹ ಪ್ರೇಮ ಕಾಮದ ಎಲ್ಲ ಆಯಾಮಗಳಲ್ಲೂ ಆಕೆ ಬರಿಯ ಹೆಣ್ಣಾಗಿಯೇ ಕಾಣುತ್ತಾಳೆ. ಯಾವ ಆದರ್ಶಗಳಿಗೂ ಪಕ್ಕಾಗದೆ ಬದುಕನ್ನು ಗಮಿಸುವ ಆಕೆ ಹಲವು ಸಂಬಂಧಗಳನ್ನು ಕಟ್ಟುತ್ತಾ ಅದರಿಂದ ಬಿಡುಗಡೆ ಹೊಂದುತ್ತ ಹೋಗುತ್ತಾಳೆ. ನಿರಂತರ ಶೋಧನೆಯ ಸಂಘರ್ಷದಲ್ಲಿ ಬಳಲುತ್ತಾಳೆ. ಮತ್ತೆ ಪುಟಿದೇಳುತ್ತಾಳೆ. ಆ ಮೂಲಕ ಸ್ವಯಂಸಬಲ ಹೆಣ್ಣೊಬ್ಬಳ ಚಿತ್ರಣವನ್ನು ಸ್ಪುಟಗೊಳಿಸುತ್ತಾರೆ ಅಧಿಚಿ.

ಶಾಲಾ ದಿನಗಳು ಮುಗಿದು ಇಫೆಮೇಲು ಹಾಗೂ ಒಬಿಂಜೆ ಯುನಿವರ್ಸಿಟಿ ಸೇರುತ್ತಾರೆ. ಪ್ರಾಯದ ದೈಹಿಕ ಬಯಕೆಗಳ ಹುಚ್ಚು ಕುತೂಹಲದಿಂದ ಅವರಿಬ್ಬರ ಗೆಳೆತನ ವಯೋಸಹಜವಾದ ಹಾಗೂ ಬಹುತೇಕ ಆಧುನಿಕ ನೈಜೀರಿಯಾದಲ್ಲಿ ಟೀನೇಜಿನ ಗಂಡು ಹೆಣ್ಣು ಬಯಸುವ ದೇಹಸಂಬಂಧದವರೆಗೂ ಮುಂದುವರೆಯುತ್ತದೆ. ಆದರೆ ಪ್ರೊಫೆಸರ ಆದ ಒಬಿಂಜೆಯ ತಾಯಿ ಸುಸಂಸ್ಕøತ ಹೆಣ್ಣು. ತನ್ನ ಬದುಕಿನಲ್ಲಿ ತನ್ನದೇ ಆದ ತತ್ವ ಸಿದ್ಧಾಂತಗಳಿಗೆ ಪಕ್ಕಾದವಳು .ಪ್ರತಿಯೊಂದು ವಿಷಯದಲ್ಲೂ ರೀಸನಿಂಗ್ ಆಗಿಯೇ ಪ್ರತಿಕ್ರಿಯಿಸುವ ಆಕೆ ಇಫಾಮೇಲಾ ಮತ್ತು ಒಬಿಂಜೆ ನಡುವೆ ಪ್ರಾಯದ ಕುತೂಹಲದಿಂದ ದೇಹ ಸಂಬಂಧ ಉಂಟಾಗಿ ಆಕೆ ಗರ್ಭವತಿ ಎಂಬ ಭ್ರಮೆಯಲ್ಲಿ ತೊಳಲುತ್ತಿದ್ದಾಗ ಆಕೆಗೆ ಧೈರ್ಯ ಹೇಳಿ ಗಂಡಿನ ಮತ್ತು ಹೆಣ್ಣಿನ ದೇಹ ಪ್ರಕೃತಿ ,ಹೆಣ್ಣು ಹೊರಬೇಕಾದ ಜವಾಬ್ದಾರಿಗಳ ಕುರಿತು ತಿಳಿಹೇಳುತ್ತಾಳೆ. ಸನ್ನಿವೇಷದ ಅರಿವು ಮೂಡಿಸುತ್ತಾಳೆ. ಅಲ್ಲದೇ ಸುರಕ್ಷಿತ ವಿಧಾನಗಳ ಕುರಿತು ಮಾಹಿತಿ ನೀಡುತ್ತಾಳೆ. ಆಕೆ ನೀಡುವ ಸಲಹೆ ಸ್ತ್ರೀ ಮೂಲಭೂತತ್ವದ ಹಾಗೂ ಇರಲೇಬೇಕಾದ ಸ್ತ್ರೀ ಪ್ರಜ್ಞೆಯ ಕುರಿತು ಮಾಹಿತಿ ನೀಡುತ್ತದೆ. ಎಳೆಯ ಪ್ರಾಯದ ಗಂಡು ಒಬಿಂಜೆ ಅದನ್ನು ಹಗುರವಾಗಿ ಪರಿಗಣಿಸಿದರೆ ಇಫೆಮೇಲು ಸ್ತ್ರೀಯಾಗಿ ಸ್ಪಂದಿಸುವ ಜಾಣ್ಮೆ ತೋರುತ್ತಾಳೆ. ಲೈಂಗಿಕ ಸಂಬಂಧದ ಆನಂದ ಗಂಡು ಹೆಣ್ಣಿನ ಇಬ್ಬರ ಸಮ್ಮತಿ ಪೂರ್ವಕ ನಡೆದಿದ್ದರೂ ಮುಂದಿನ ಅದರ ಫಲವನ್ನು ಹೊರವ ಭಾರ ಹೆಣ್ಣಿನದು , ಗಂಡಿಗಿಂತ ಆಕೆಯ ಬದುಕು ಹೇಗೆ ಭಿನ್ನ ಎಂಬುದನ್ನು ಸಾಂದರ್ಭಿಕವಾಗಿ ಸೂಕ್ಷ್ಮವಾಗಿ ಅಧಿಚಿ ವ್ಯಕ್ತಗೊಳಿಸಿದ್ದಾರೆ.

ಭಾರತದಂತೆಯೇ ನೈಜೀರಿಯಾ ಕೂಡಾ ಸ್ತ್ರೀ ಪುರುಷ ಸಂಬಂಧಗಳ ನಾಜೂಕುತನಗಳ ನಡುವೆಯೇ ಸುಳಿವ ಪುರುಷ ಶ್ರೇಷ್ಟತೆಯನ್ನು ಸಮಾಜ ಒಪ್ಪಿಕೊಂಡಂತಿದೆ. ಇದಕ್ಕೆ ಉದಾಹರಣೆ ಎನ್‍ಸುಕ್ಕಾದ ಯುನಿವರ್ಸಿಟಿ ಪ್ರಾದ್ಯಾಪಕಿಯಾಗಿರುವ ಒಬಿಂಜೆಯ ತಾಯಿಗೆ ಕಾಲೇಜಿನ ಇನ್ನೊಬ್ಬ ಪುರುಷ ಸಿಬ್ಬಂದಿಯೊಡನೆ ಉಂಟಾದ ಕಲಹದಲ್ಲಿ ಆತ ಆಕೆಯ ಕಪಾಳಮೋಕ್ಷ ಮಾಡುತ್ತಾನೆ. ಇದು ಸಮಾನತೆಯ ಸಾರುವ ಜ್ಞಾನ ಕೇಂದ್ರದಲ್ಲೂ ಸಂಭವಿಸುವ ಅಲ್ಲಿಯೂ ನಿಲ್ಲದ ಮಹಿಳಾ ದೌರ್ಜನ್ಯದ ಉದಾಹರಣೆ. ಅಷ್ಟೇ ಅಲ್ಲದೇ ಗಂಡನಿಲ್ಲದ ಆಕೆಯನ್ನು ಇತರರು ಕನಿಕರದಿಂದ ನೋಡುವ ವಿಧವೆ ಎಂದು ಕರೆದು ಸಂತಾಪ ಸೂಚಿಸುವ ಸಂಗತಿಯೂ ಸಮಾಜದ ಆಷಾಢಭೂತಿತನದ ಪರಮಾವಧಿ. ಹಾಗಾಗಿ ಎನ್‍ಸುಕ್ಕಾದಿಂದ ಲಾಗೋಸ್ ಬರುವ ಒಬಿಂಜೆ ಕುಟುಂಬಕ್ಕೆ ಕ್ರಮೇಣ ಇಫೆಮೇಲು ಹತ್ತಿರವಾಗುತ್ತಾಳೆ. ಇವೆಲ್ಲವೂ ನೈಜೀರಿಯಾದ ಸಂಗತಿಗಳು.

ಅಧ್ಯಯನದ ದಿನಗಳು ಸಂತಸಮಯವಾಗಿ ಕಳೆಯುತ್ತಿರುವಾಗಲೇ ಮುಷ್ಕರದ ಹಿನ್ನಲೆಯಲ್ಲಿ ನೈಜೀರಿಯಾದ ಯುನಿವರ್ಸಿಟಿಗಳು ಮುಚ್ಚಲ್ಪಡುತ್ತವೆ. ವಿದ್ಯಾರ್ಥಿಗಳು ಹೊರದೇಶಗಳತ್ತ ಮುಖಮಾಡುತ್ತಾರೆ. ಆ ಕಾರಣ ಅಮೇರಿಕಾಕ್ಕೆ ಬರುವ ಇಫೆಮೇಲು ಫಿಲಡೆಲ್ಫಿಯಾ ವಿಶ್ವವಿದ್ಯಾಲಯದ ಸ್ಕಾಲರಶಿಫ್ ಪಡೆಯುತ್ತಾಳೆ. ಬೇಸಿಗೆಯ ಕೆಲದಿನಗಳನ್ನು ಆಂಟಿ ಉಜೂ ಮತ್ತು ಡೈಕನೊಂದಿಗೆ ಬ್ರೂಕ್ಲೀನ್‍ನಲ್ಲಿ ಕಳೆಯಲು ಬರುವ ಇಫೆಮೇಲುಗೆ ಕೆಲಸ ಹುಡುಕುವ ಸಲುವಾಗಿ ಆಂಟಿ ಉಜೂ ನಕಲಿ ಐಡೆಂಟಿಟಿ ಕಾರ್ಡನ್ನು ನೀಡುತ್ತಾಳೆ. ಅದನ್ನು ಹಿಡಿದು ಇಫೆಮೇಲು ತನ್ನ ದೈನಂದಿನ ಜೀವನದ ಆದಾಯಕ್ಕಾಗಿ ಕೆಲಸಕ್ಕೋಸ್ಕರ ಪರದಾಡುತ್ತಾಳೆ. ಹಳೆಯ ಗೆಳತಿ ಗಿನಿಕಾ ಅಮೇರಿಕಾದ ಸಂಸ್ಕøತಿ, ಅಲ್ಲಿಯ ಜನಾಂಗೀಯ ರಾಜಕಾರಣ ಪರಿಚಯಿಸುತ್ತಾಳೆ. ಸಭ್ಯತೆಯ ಹಿಂದಿನ ಬರ್ಭರತೆ ಕ್ರಮೇಣ ಅರಿವಾಗತೊಡಗುತ್ತದೆ. ಇದನ್ನು ಕಾದಂಬರಿ ಭಾಗ ಎರಡರಲ್ಲಿ ಆಕೆ ಹೀಗೆ ಉದ್ಗರಿಸುತ್ತಾಳೆ. “I didn’t think of myself as black and I only became black when I came to America” ಆಕೆ ಹೋದಲ್ಲೆಲ್ಲಾ ಆಕೆಯ ಬಣ್ಣವೇ ಪ್ರಮುಖ ನ್ಯೂನ್ಯತೆಯಾಗಿ ಸಂದರ್ಶನಗಳಲ್ಲಿ ನಿರಾಕರಣೆಯೇ ಉತ್ತರವಾಗುತ್ತ ಆಕೆ ಹತಾಶೆಗೊಳಗಾಗುತ್ತಾಳೆ. ಕೈಯಲ್ಲಿದ್ದ ಕಾಸೆಲ್ಲ ಮುಗಿದು ಉಪಾಯಗಾಣದೇ ಟೆನಿಸ್ ಕೋಚ್ ಒಬ್ಬನಿಗೆ “ರಿಲಾಕ್ಸ” ಆಗಿ ಕೆಲಸಮಾಡಲು ದಿನವೊಂದಕ್ಕೆ ನೂರು ಡಾಲರಗಳ ಆಮಿಷಕ್ಕೆ ಒಳಗಾಗಿ ಒಪ್ಪಿಕೊಳ್ಳುತ್ತಾಳೆ.ಆದರೆ ಆತ ಆಕೆಯನ್ನು ಅಸಭ್ಯವಾಗಿ ಮುಟ್ಟುತ್ತ ತಡವುತ್ತ ತನ್ನ ಆಯಾಸವನ್ನು ಬಗೆಹರಿಸಿಕೊಳ್ಳುತ್ತಲೂ ಆಕೆ ಅಸಹ್ಯವಾದ ಕೀಳಿರಿಮೆಗೆ ಒಳಗಾಗುತ್ತಾಳೆ. ಮತ್ತೆಂದೂ ಆ ಕೆಲಸಕ್ಕೆ ಹೋಗದಿದ್ದರೂ ಆಕೆ ತಪ್ಪಿತಸ್ಥಭಾವದಿಂದ ತತ್ತರಿಸುತ್ತಾಳೆ. ಊಟ ನಿದ್ದೆಗಳು ಕಾಣೆಯಾಗುತ್ತವೆ. ಅಸಹಾಯಕತೆ, ಹತಾಶೆಗಳು ಹೆಚ್ಚುತ್ತಾ ಕ್ರಮೇಣ ಒಬಿಂಜೆಯ ಯಾವ ಸಂದೇಶಗಳಿಗೂ ಉತ್ತರಿಸದೇ ಆತನಿಂದ ದೂರವಾಗುತ್ತಾಳೆ.

ಕೊನೆಗೂ ಗೆಳತಿ ಗಿನಿಕಾಳ ನೆರವಿನಿಂದ ಕಿಂಬರ್ಲೆ ಎಂಬ ಅಮೇರಿಕನ್ ಹೆಂಗಸಿನ ಮಕ್ಕಳನ್ನು ನೋಡಿಕೊಳ್ಳುವ ಬೇಬಿಸಿಟ್ಟರ್ ಕೆಲಸವನ್ನು ಇಫೆಮೇಲು ಒಪ್ಪಿಕೊಳ್ಳುತ್ತಾಳೆ. ದಿನಕಳೆದಂತೆ ಒಬಿಂಜೆ ಆಕೆಯ ಮನಸ್ಸಿನಿಂದ ಮಸುಕಾಗುತ್ತಾ ಕಿಂಬರ್ಲೆಯ ಸೋದರ ಸಂಬಂಧಿಯಾದ ಕರ್ಟ ಎಂಬ ಶ್ರೀಮಂತ ವೈಟ್‍ಮ್ಯಾನ್‍ನೊಂದಿಗೆ ಆಕೆಯ ಸಂಬಂಧ ಬೆಸೆದುಕೊಳ್ಳುತ್ತದೆ. ಆತ ಆಕೆಗೆ ಯೋಗ್ಯ ಕೆಲಸ ಹಾಗೂ ಅಲ್ಲಿಯ ಗ್ರೀನ್ ಕಾರ್ಡ ಸಿಗುವಂತೆ ಮಾಡುತ್ತಾನೆ. ಆದರೆ ಆ ಜೋಡಿ ಹೋದ ಕಡೆಗೆಲ್ಲಾ ಬಿಳಿಯ ಬಣ್ಣವೇ ಪ್ರಧಾನ ವಿಚಾರವಾಗಿ ಕರ್ಟ ಮಾತ್ರವೇ ಎಲ್ಲರ ಗಮನದ ಕೇಂದ್ರವಾಗುತ್ತ ಇಫೆಮೇಲು ಉಪಸ್ಥಿತಿ ನಿರ್ಲಕ್ಷಿಸಲ್ಪಡುತ್ತ ಆಕೆಗೆ ಕೀಳಿರಿಮೆ ಉಂಟಾಗುವ ಅನೇಕ ಸನ್ನಿವೇಷಗಳು ಎದುರಾಗುತ್ತವೆ. ಕರ್ಟನ ತಾಯಿ ಇಫೆಮೇಲುಳ ಬಗ್ಗೆ ತೋರುವ ಉಪೇಕ್ಷೆ,ಉದಾಸೀನತೆ ಎಲ್ಲವೂ ಆಕೆಗೆ ಕಿರಿಕಿರಿಯುಂಟುಮಾಡಿದರೂ ಕರ್ಟ ತೋರುವ ಪ್ರೀತಿ ಆದರಗಳಿಗೆ ಆಕೆ ಮರುಳಾಗುತ್ತಾಳೆ. ಆದರೆ ತಮ್ಮಿಬ್ಬರ ಸ್ನೇಹ ಸಂಬಂಧಗಳು ಆದ ಮೇಲೂ ಕರ್ಟ ಇನ್ನೊಬ್ಬ ಬಿಳಿಯ ಹೆಣ್ಣಿನೊಂದಿಗೆ ಮುಂದುವರೆಸುವ ಸಂಬಂಧವನ್ನು ಉಪೇಕ್ಷಿಸುವ ಆಕೆ ಆತನ ಮಾತು ನಂಬುತ್ತಾಳೆ. ಆದರಾತ ಆಕೆ ಆಕಸ್ಮಿಕವಾಗಿ ಯಾವುದೋ ಆಕರ್ಷಣೆ ಒಳಗಾಗಿ ತನ್ನ ಅಪಾರ್ಟಮೆಂಟಿನ ಪಕ್ಕದಲ್ಲಿ ವಾಸಿಸುವ ಯುವಕನೊಬ್ಬನೊಂದಿಗೆ ಆಕಸ್ಮಿಕವಾಗಿ ದೈಹಿಕ ಸಂಬಂಧವಾದ ಸಂಗತಿಯನ್ನು ಪ್ರಾಮಾಣಿಕವಾಗಿ ಹೇಳುತ್ತಲೇ ಕರ್ಟ ಕ್ಷುದ್ರನಾಗುತ್ತಾನೆ. ಶೀಲವೆಂದರೆ ಹೆಣ್ಣಿಗಾಗಿಯೇ ಹೆಣೆಯಲ್ಪಟ್ಟ ನಿರ್ಣಯವೆಂಬುದು ಆ ದೇಶದ ನೆಲದಲ್ಲಿಯೂ ವಿಜೃಂಬಿಸುತ್ತಿರುವುದು ಸತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗುತ್ತದೆ. ಕರ್ಟ ದೂರವಾಗುವುದನ್ನು ಸಹಿಸದ ಇಫೆಮೇಲು ಆ ವಿಘಟನೆಯಿಂದ ಮಾನಸಿಕ ಜರ್ಜರಿತಳಾಗುತ್ತಾಳೆ. ನೈಜೀರಿಯಾದಂತಹ ದೇಶದಲ್ಲಿ ಮಾತ್ರವಲ್ಲದೇ ಅಮೇರಿಕಾ ಎಂಬ ಪ್ರತಿಭಾವಂತರ, ಸಮಾನತೆಯ ಸಾರುವ ವ್ಯವಸ್ಥಿತ ಜಗತ್ತಿನಲ್ಲೂ ಇರುವ ಮಹಿಳಾ ದೌರ್ಜನ್ಯವನ್ನು ನಾವಿಲ್ಲಿ ಕಾಣಬಹುದು. ಜಗತ್ತಿನ ಚರಿತ್ರೆಯ ಪುಟಗಳಲ್ಲಿ ವರ್ಣಬೇಧದ ಕರಾಳತೆಯ ಜೊತೆಗೆ ಹೆಣ್ಣಿನ ಮೇಲಿನ ಹಿಡಿತ, ಆಕೆ ತನ್ನ ಬದುಕನ್ನು ಅನುಭವಿಸಬೇಕಾದಲ್ಲೂ ಇರುವ ಗಂಡಿನ ಅಪ್ಪಣೆಯ ಅನಿವಾರ್ಯತೆ ಬರಿಯ ಭಾರತದ ಸಂಗತಿ ಮಾತ್ರವಲ್ಲ. ಸ್ವೇಚ್ಛೆಯ ಜಗತ್ತು ಎಂದುಕೊಂಡಿರುವ ಅಮೇರಿಕಾದಲ್ಲೂ ಇರುವ ಶೀಲದ ಪರಿಕಲ್ಪನೆಗಳು ಹೆಣ್ಣಿಗೆ ಮಾತ್ರ ಎಂಬುದನ್ನು ಕರ್ಟ ಆಕೆಯನ್ನು “Bitch“ಎಂದು ಕರೆದು ಹಂಗಿಸುವ ಸನ್ನಿವೇಷ ದೃಷ್ಟಾಂತವಾಗುತ್ತದೆ.

ಇತ್ತ ನೈಜೀರಿಯಾದಲ್ಲಿ ಗ್ರಾಜುಯೇಷನ್ ಮುಗಿಸಿದ ಒಬಿಂಜೆ ಕೆಲಸ ಹುಡುಕಿ ಇಂಗ್ಲೆಂಡಿನತ್ತ ಪಯಣಿಸುತ್ತಾನೆ. ಇಫೆಮೇಲುಳಿಂದ ಸಂದೇಶಗಳು ಬರದೆ ನೋಯುತ್ತಾನೆ. ನೈಜೀರಿಯಾದಲ್ಲಿ ಸಹಪಾಠಿಯಾಗಿದ್ದ ಗೆಳೆಯ ನಿಕೋಲಾಸ್‍ನ ಮನೆಯಲ್ಲಿ ತಂಗುವ ಒಬಿಂಜೆ ಆತನ ಮಕ್ಕಳ ನೋಡಿಕೊಳ್ಳುತ್ತ ಆತನ ಪತ್ನಿಗೆ ಮನೆಗೆಲಸದಲ್ಲಿ ಸಹಕರಿಸುತ್ತ ಉಳಿಯಬೇಕಾಗುತ್ತದೆ. ಕೆಲಸಕ್ಕಾಗಿ ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಆತನ ವೀಸಾ ಅವಧಿ ಮುಗಿದು ಹೋಗುತ್ತದೆ. ಆ ಕಾರಣ ಆತ ಕೂಡಾ ನಕಲಿ ಗುರುತಿನ ಚೀಟಿಯನ್ನು ಹಣಕೊಟ್ಟು ಬಾಡಿಗೆಗೆ ಪಡೆಯುತ್ತಾನೆ. ಕಷ್ಟಪಟ್ಟು ಹಿಡಿದ ಕೆಲಸವೂ ಒಬ್ಬ ಕೂಲಿಯಾಳಿನದು. ವಲಸಿಗರನ್ನು ಕರಿಯರನ್ನು ಎರಡನೇ ದರ್ಜೆಯಾಗಿಯೇ ಪರಿಗಣಿಸುವ ಅಲ್ಲಿಯ ವ್ಯವಸ್ಥೆಯಲ್ಲಿ ಗ್ರಾಜುವೇಟಾಗಿದ್ದು ಗುಲಾಮನಾಗಿ ದುಡಿಯುವ ದುರವಸ್ಥೆಯನ್ನು ಸಹಿಸುತ್ತಾನೆ. ಇವೆಲ್ಲವೂ ಅಮೇರಿಕಾ ಇಂಗ್ಲೆಂಡಗಳಂತಹ ದೇಶಗಳಿಗೆ ವಲಸೆ ಹೋಗುವ ಇತರ ದೇಶದ ವಲಸಿಗರ ದುಸ್ಥಿತಿ. ನೈಜೀರಿಯಾದ ಹಳೆಯ ಗೆಳೆಯ ಎಮನೈಕ್ ಆತನಿಗೆ ಹಣ ಸಹಾಯ ಮಾಡುತ್ತಾನೆ. ಒಬಿಂಜೆಯ ಗೆಳೆಯರೆಲ್ಲ ಆತನಿಗೆ ಒಂದಿಲ್ಲೊಂದು ಸಹಾಯ ನೀಡುತ್ತಾರೆ. ಇಂಗ್ಲೆಂಡಿನ ಗ್ರೀನ್ ಕಾರ್ಡ ಹೊಂದಲು ಕ್ಲೀಯೋಟಿಲ್ಡೆ ಎಂಬ ಸುಂದರ ತರುಣಿಯೊಂದಿಗೆ ನಕಲಿ ವಿವಾಹ ಏರ್ಪಡಿಸುತ್ತಾರೆ. ಆದರೆ ದುರಾದೃಷ್ಟಕ್ಕೆ ವಿವಾಹದ ದಿನವೇ ಅನಧಿಕೃತ ವಲಸಿಗನೆಂಬ ಸಂಗತಿ ಗೊತ್ತಾಗಿ ಒಬಿಂಜೆ ಅರೆಸ್ಟ್ ಆಗಿ ಪುನಃ ನೈಜೀರಿಯಾಕ್ಕೆ ಕಳಿಸಲ್ಪಡುತ್ತಾನೆ. ಕಾದಂಬರಿ ಅಪ್ಪಟ ಮಾನವ ಮತ್ತು ಮಾನವೀಯತೆಯ ನೆಲೆಯ ಹಿನ್ನೆಲೆಯಲ್ಲಿಯೇ ರಚಿಸಲ್ಪಟ್ಟಿದೆ. ಕಾದಂಬರಿಯ ಎರಡನೇ ಭಾಗದಲ್ಲಿ ಬರುವ “In America black and whites work together, but don’t play together and in Britain black and whites play together but don’t work together” ಎಂಬ ಒಬಿಂಜೆಯ ಗೆಳೆಯ ಎಮನೈಕ್‍ನ ಮಾತು ಈ ದೇಶಗಳಲ್ಲಿ ಕರಿಯರ ಸ್ಥಾನಮಾನದ ಸತ್ಯದರ್ಶನ ನೀಡುತ್ತದೆ. ಅದರೊಂದಿಗೆ ಹೊರಜಗತ್ತಿನಲ್ಲಿ ವ್ಯವಸ್ಥಿತ ದೇಶಗಳೆಂಬ ಹೆಗ್ಗಳಿಕೆಗೆ ಪಾತ್ರವಾದ ಇಂಗ್ಲೆಂಡ ಅಮೇರಿಕಾದಂತಹ ದೇಶಗಳಲ್ಲೂ ನಕಲಿ ವಿವಾಹಗಳು, ವೀಸಾ ದಂಧೆಗಳು, ನಕಲಿ ಗುರುತಿನ ಕಾರ್ಡಗಳು ಇವುಗಳ ವ್ಯವಸ್ಥಿತ ಜಾಲ ವ್ಯಾಪಕವಾಗಿರುವುದು ಅಲ್ಲಿಯ ಅವ್ಯವಸ್ಥೆಯ ಇನ್ನೊಂದು ಮುಖ ತೆರೆದಿಡುತ್ತದೆ. ತಾಯ್ನಾಡಿಗೆ ಹಿಂದಿರುಗಿದ ಒಬಿಂಜೆ ಪ್ರಯತ್ನ ಪಟ್ಟು ನೈಜೀರಿಯಾದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬದಲಾಗುತ್ತಾನೆ. ಆದರ್ಶತೆಯನ್ನೆ ಉಸಿರಾಡುತ್ತಿದ್ದ ಪತ್ನಿ ಕೋಸಿ ಹಾಗೂ ಮಗಳೊಂದಿಗೆ ಸುಂದರ ಸಂಸಾರ ಹೂಡುತ್ತಾನೆ. ಅವರದು ಆತನ ಮಟ್ಟಿಗೆ ಸುಂದರ ಸಂಸಾರ ಆದರೆ ಸುಖಿಸಂಸಾರವಲ್ಲ. ಆದರೆ ಕೋಸಿಗೆ ಅದು ದೇವರೆ ಬೆಸೆದ ಬಂಧ.

ಆದರೆ ಇತ್ತ ಕರ್ಟನಿಂದ ನಿರಾಕರಿಸಲ್ಪಟ್ಟ ಇಫೆಮೇಲು ತನ್ನೊಳಗಿನ ಬೇಗುದಿ ಹೊರಹಾಕಲು “ರೇಸ್ ಬ್ಲಾಗ್” ಒಂದನ್ನು ನಿರ್ವಹಿಸತೊಡಗುತ್ತಾಳೆ. ತನ್ನ ಬದುಕಿನ ಅನುಭವಗಳ ಬ್ಲಾಗ್ ನಿರ್ವಹಿಸುವ ಮೂಲಕ ಜನರತ್ತ ತಲುಪಿಸುತ್ತ ಬಂದ ಕಮೆಂಟುಗಳನ್ನು ಸ್ವೀಕರಿಸಿ ತನ್ನ ಅನುಭವ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಕ್ರಮಿಸುವ ಇಫೆಮೇಲು ತೃತೀಯ ಜಗತ್ತಿನ ಹೆಣ್ಣು ಎಂಬುದು ವೇದ್ಯವಾಗುತ್ತದೆ. ಆಕೆಯ ಬದುಕಿನಲ್ಲಿ ಗಂಡುಗಳ ಆಗಮನ ನಿರ್ಗಮನ ಆಕೆಯನ್ನು ಅಷ್ಟೇನೂ ವಿಚಲಿತಗೊಳಿಸುವುದಿಲ್ಲ. ಬ್ಲಾಗ್ ಆಕೆಗೆ ಹೆಸರನ್ನು ತಂದುಕೊಂಡುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ಆಕೆಯ ವಾಗ್ಝರಿಗಳಿಗೆ ಮಹತ್ವ ಸಿಗುತ್ತದೆ. ಈ ಹಂತದಲ್ಲೇ ಆಕೆಗೆ ಯಾಲೇ ಯುನಿವರ್ಸುಟಿಯ ಪ್ರೋಫೆಸರ್ ಆಗಿರುವ ವಿಶಿಷ್ಟ ಭೌದ್ಧಿಕ ಸಾಮಥ್ರ್ಯದ ಬ್ಲೇನ್ ಎಂಬ ಆಫ್ರಿಕನ್ ಅಮೇರಿಕನ್ ಪರಿಚಯವಾಗಿ ಅದು ಪ್ರೇಮ ಪ್ರಣಯದವರೆಗೂ ಸಾಗುತ್ತದೆ. ಆ ಸಂಬಂಧ ವಿವಾಹದ ಆಕಾಂಕ್ಷೆ ಹೊಂದಿದ್ದರೂ, ಆವರಿಬ್ಬರ ನಡುವೆ ಬರಾಕ್ ಒಬಾಮ್ ಪರ ಇರುವ ಒಂದೇ ಸಾಮ್ಯತೆ ಬಿಟ್ಟರೆ ಇತರ ಸಂಗತಿಗಳಲ್ಲಿ ವೈರುಧ್ಯಗೋಚರಿಸುತ್ತದೆ.

ಆ ಬಂಧವನ್ನು ಬಿಟ್ಟು, ಅಮೇರಿಕಾದ ಕುಲೀನರೇ ವಾಸಿಸುವ ಪ್ರಿನ್ಸಟನ್‍ನ ಫೆಲೋಶಿಫನ್ನು ತ್ಯಜಿಸಿ ನೈಜೀರಿಯಾಕ್ಕೆ ಹಿಂದಿರುಗುವ ನಿರ್ಧಾರಮಾಡುತ್ತಾಳೆ. ತನ್ನ ಅಲ್ಲಿಯ ಬ್ಲಾಗ್‍ನ್ನು ಮುಚ್ಚುತ್ತಾಳೆ. ಅಲ್ಲಿಗೆ ಬರುವ ಮುನ್ನ ತನ್ನ ತಲೆಗೂದಲಿಗೆ ಬ್ರೇಡ್ ಮಾಡಿಸಿಕೊಳ್ಳಲು ಪಾರ್ಲರಿಗೆ ಬರುವ ಆಕೆಗೆ ಆ ಪಾರ್ಲರಿನ ಹೆಂಗಳೆಯರ ಒಂದೊಂದು ಕಥೆಯೂ ಅಲ್ಲಿಯ ಜೀವನದ ಒಂದೊಂದು ಚಿತ್ರಣ ತೆರೆದಿಡುತ್ತವೆ. ಅಮೇರಿಕಾ ಉಸಿರುಗಟ್ಟಿಸತೊಡಗುತ್ತದೆ. ಒಬ್ಬನ ಬದುಕಿನ ಅನುಭವಗಳು ಇನ್ನೊಬ್ಬನದಲ್ಲ. ತನ್ನ ನೆಲದೊಂದಿಗೆ ಮಿಳಿತಗೊಂಡ ಆತ್ಮೀಯತೆಯ ಅನುಭವ ಇನ್ನೊಂದು ದೇಶದ ಅನುಭವಗಳೊಂದಿಗೆ ತುಲನೆ ಮಾಡಿದಾಗ ಅಪ್ತವಾಗುವುದು ತಾಯ್ನಾಡು. ತನ್ನ ಹೆತ್ತಮ್ಮನ ಒಡಲಂತೆ ತಾನು ಬೆಳೆದ ಬದುಕಿದ ಪರಿಸರ, ಭಾಷೆ, ಆಂಗಿಕ ಹಾವಭಾವಗಳು ಎಲ್ಲವೂ ಹೃನ್ಮನಗಳ ಗೆದ್ದಂತೆ ವೃತ್ತಿ ಉದ್ಯೋಗ, ಆಕರ್ಷಣೆಗಳಿಂದ ಸೆಳೆದ ಇನ್ನೊಂದು ದೇಶ ಪ್ರಭಾವಿಸಲಾರದು. ಅನಿವಾರ್ಯತೆಗಳ ಕಾರಣ ವಿದೇಶಗಳಲ್ಲಿ ಪೌರತ್ವ ಪಡೆದರೂ ತನ್ನ ನೆಲದ ಪರಿಮಳವೇ ಆಪ್ತ. ಹೀಗಾಗಿ ತಾಯ್ನಾಡಿನ ಹಂಬಲ ಹೆಚ್ಚುತ್ತ ಈಗಾಕೆಗೆ ಒಬಿಂಜೆ ನೆನಪಾಗುತ್ತಾನೆ. ಆತನಿಗೆ ಇಮೇಲು ಮಾಡಿ ತಾನು ಬರುವ ಸಂಗತಿ ಅರಹುತ್ತಾಳೆ. ನೈಜೀರಿಯಾದಲ್ಲಿ ಹೊಸ ಬದುಕು ಹೂಡುವ ಇಫೆಮೇಲು ಲಾಗೋಸ ಜೀವನದ ಕುರಿತ ಹೊಸದೊಂದು ಬ್ಲಾಗ್ ತೆರೆಯುತ್ತಾಳೆ. ಆ ಬದುಕಿಗೆ ಹೊಂದಿಕೊಳ್ಳುತ್ತಾಳೆ. ಒಬಿಂಜೆಯೊಂದಿಗೆ ಪುನಃ ಹಳೆಯ ಬಂಧ ಎರ್ಪಡುತ್ತ, ಒಬಿಂಜೆ ತನ್ನ ಪತ್ನಿಗೆ ವಿಚ್ಛೇದನ ನೀಡಿ ಇಫೆಮೇಲುಳನ್ನು ಸ್ವೀಕರಿಸುತ್ತಾನೆ. ತಮ್ಮ ಬದುಕಿನ ನೈಜ ಪ್ರೇಮವನ್ನು ಕೊನೆಗೂ ಪಡೆಯುವಲ್ಲಿ ಅವರಿಬ್ಬರೂ ಯಶಸ್ವಿಯಾಗುತ್ತಾರೆ.

ಇಫೆಮೇಲು ಜೀವನದಲ್ಲಿ ಬರುವ ಮೂರು ಪ್ರಮುಖ ಗಂಡುಗಳು ಅವರ ಹೊರತಾಗಿಯೂ ಆಕೆ ಇನ್ನೊಬ್ಬಾತನಲ್ಲಿ ಹೊಂದುವ ದೈಹಿಕ ಸಂಬಂಧ ಎಲ್ಲವೂ ಆಕೆಯ ಅಸಂತುಲಿತ ಮನಸ್ಸಿನ ಕಾರಣ ಎನ್ನಲಾಗದು. ಪ್ರತಿಸಂಬಂಧಗಳು ಜೋಡಿಯಾದಾಗಲೂ, ಮುರಿದು ಬಿದ್ದಾಗಲೂ ಅಲ್ಲೊಂದು ಕಾರಣಗಳು ಸಿಗುತ್ತವೆ. ಆಕೆ ಸಹಜವಾಗಿ ತನ್ನ ಬದುಕನ್ನು ಗೃಹಿಸುತ್ತಾಳೆ. ಈ ಮೂಲಕ ದೇಹ ಮತ್ತು ಭೋಗದ ಕಲ್ಪನೆಗಳು ಬರಿಯ ಗಂಡು ಮಾತ್ರ ಅನುಭವಿಸತಕ್ಕ ಸಂಗತಿಯಲ್ಲವೆಂಬುದಕ್ಕೆ ಇಫೆಮೇಲುವಿನ ಪಾತ್ರ ಸಾಕ್ಷಿ. .ಅದರೊಂದಿಗೆ . ಹಿಂದುಳಿದ ಏಶಿಯಾ ಆಫ್ರಿಕನ್ ದೇಶಗಳ ಮೌಢ್ಯಾಚರಣೆಗಳಿಗಿಂತಲೂ ನಿಕೃಷ್ಟವಾದ ತಾರತಮ್ಯದ ಆಚರಣೆಗಳನ್ನು ಮಾಡುವ ಅಮೇರಿಕ ಹಾಗೂ ಇಂಗ್ಲೆಂಡಗಳಂತಹ ದೇಶದ ಡಂಭಾಚಾರಗಳನ್ನು ಕಾದಂಬರಿ ಅದ್ಭುತವಾಗಿ ಮನಗಾಣಿಸಿದೆ.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x