ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 55 & 56): ಎಂ. ಜವರಾಜ್

-೫೫-
ಓಟಾಗಿ ಎಂಟೊಂಬತ್ದಿನ ಆಗಿತ್ತು
ಇವತ್ತು ಎಣ್ಕ ಅದ
ನಾಳಿದ್ದು ಕಳ್ದು ಆಚ ನಾಳ
ನೀಲವ್ವೋರ್ ತಿಥಿ ಅದ

ಈ ಅಯ್ನೋರು ಆಳ್ಗಳ್ ಬುಟ್ಕಂಡು
ಸುಣ್ಣನುವ ಗೋಪಿ ಬಣ್ಣನುವ
ಮನಗ್ವಾಡ್ಗ ತುಂಬುಸ್ತಿದ್ರು

ಈಗ ಈ ದೊಡ್ಡವ್ವ ಬುಟ್ರ ಯಾರಿದ್ದರು..
ಈ ಅಯ್ನೋರ್ಗ ಈ ದೊಡ್ಡವ್ವನೇ ಗತ್ಯಾದ್ಲು
ಈ ದೊಡ್ಡವ್ವ ಹೇಳ್ದಾಗೇ ಕೇಳ್ಬೇಕು
ಈ ದೊಡ್ಡವ್ವನ ಮಾತ್ನಂತೆ
ಸತ್ತೋದ ನೀಲವ್ವೋರ ಅವ್ವ ಅಪ್ಪ
ಬಂದು
ಮಗಳ ನೆನ್ಕಂಡು ಮನ ಕೆಲ್ಸ ಮಾಡ್ತಿದ್ರು

ಈಗ ಈ ಅಯ್ನೋರು ದೊಡ್ಡವ್ವನ್ಗ ಹೇಳಿ
ತಾಲ್ಲೊಕ್ಕಚೇರಿ ಕಡ ನಡುದ್ರು
ಹಿಂಗ ತಾಲ್ಲೊಕ್ಕಚೇರಿ ಕಡ ನಡ್ದಾಗ
ಆ ಆಳು ದಾರಿಲಿ ಸಿಕ್ಕಿ
ಗುಸುಗುಸು ಮಾತಾಡ್ತ ನಡ್ದ
ಹಂಗೆ ಇನ್ನಿಬ್ರು ಬಂದ್ರು
ತಾಲ್ಲೊಕ್ಕಚೇರಿ ಕಡ ನಡಿತಾ ನಡಿತಾ
ಈ ಅಯ್ನೋರ್ ಸುತ್ತ ದಂಡಿ ನೆರ್ದಂಗಿತ್ತು

ತಾಲ್ಲೊಕ್ಕಚೇರಿ ಪಕ್ದಲಿ
ಎಕುರ್ಗಟ್ಲ ಇರ ಶರ್ಮುರ್ ಸ್ಕೂಲ್ಲಿ
ಎಣ್ಕ ಕಾರ್ಯ ಆಯ್ತಿತ್ತು
ಜನ ಜಾತ್ರ್ಯಾಗಿ ನೆರ್ದಿತ್ತು
ಯಾರ್ಯಾರು ಎಸ್ಟೆಸ್ಟ್ ಓಟ್ ತಕ್ಕಂಡರ
ಯಾರ್ ಮುಂದವ್ರ ಯಾರ್ ಹಿಂದವ್ರ
ಅನ್ನ ಲೆಕ್ಕಚಾರ ಮೈಕ್ಲಿ ಮೊಳುಗ್ತಿತ್ತು

ಎಣ್ಕ ಜಾಗುಕ್ಕ ಹೋಗಾಕ
ಯಾರೋ ಬಂದು ಕರುದ್ರು
ಈ ಅಯ್ನೋರು,
‘ಬ್ಯಾಡ ನಾ ಬರಲ್ಲ
ಒಳ್ಗ ಸ್ಯಕ ಕಣ
ನಾ ಇಲ್ಲೆ ಇರ್ತಿನಿ’ ಅಂದ್ರು

ಗೆದ್ದೋರಾ ಅವ್ರ್ ಕಡೆವ್ರು
ಹೂನಾರ ಹಾಕಂಡು
ಜೈಕಾರ ಹಾಕಂಡು
ಕುಣ್ಕಂಡು ಮೆರ್ಕಂಡು ಹೊಯ್ತಿದ್ರು

ಈ ಅಯ್ನೋರು
ಆ ಆಳು
ಆ ಆಳ್ಜೊತ ಬಂದಿರ ಆ ಐಕ
ಎಲ್ಲ
ಕುಣ್ಕ ಮೆರ್ಕ ಹೋಗೋರ ನೋಡ್ತ
ಹಂಗೆ ತಮ್ ಸರದಿ
ಯಾವಾಗ್ ಬತ್ತದೋ ಅನ್ತ
ಮೈಕುನ್ ಕಡ ನೋಡ್ತ ಕುಂತ್ರು.


ಬಿಸ್ಲು ಏರಿ ಇಳಿತಾ ಇತ್ತು

ಆ ಆಳು
ಆಗ್ಲೆ ಹೋದಂವ ಈಗ ಬಂದು
“ಅಯ್ನೋರಾ ನಮ್ ಬೂತ್ನೇ ಮುಟ್ಟಿಲ್ಲ
ಸುದ್ದಿ ಬಂತು ಕಿಟ್ಕಿಲಿ ಕೇಲ್ದಿ
ಇನ್ನು ಹೊತ್ತಾಯ್ತುದ ಅಯ್ನೋರಾ”
ಅಂದ್ನ.

ಈ ಅಯ್ನೋರು ಎದ್ದು ಪಂಚ ಕಟ್ಕಂಡು
ಆ ಆಳ್ಗ ಏನಾ ಹೇಳುದ್ರು
ಆ ಆಳು ಓಡ್ದ
ಈ ಅಯ್ನೋರು
ಜನ್ಗಳಿರ ಸಂದಿಲಿ ದಾರಿ ಮಾಡ್ಕಂಡು
ಅಂಗ್ಡಿ ದಾರಿಗ ಬಂದ್ರು…
ಆ ಆಳು ಬಾಡ್ಗ ಸೈಕಲ್ನ ಏರ್ಕ ಬಂದ್ನ
ಈ ಅಯ್ನೋರು ಆ ಸೈಕಲ್ನ ಈಸ್ಕಂಡು
ಹಂಗೆ ಗುಸುಗುಸು ಮಾತಾಡುದ್ರು
ಆ ಮಾತ ಕೇಳಿ
ಆ ಆಳು ಜನ್ಗಳ್ ಗುಂಪ್ಲಿ ಸೇರ್ದ
ಈ ಅಯ್ನೋರು ಆ ಆಳ್ನ ನೋಡ್ತ ನೋಡ್ತ
ತಲಮ್ಯಾಲ ಟರ್ಕಿ ಟವಲ್ಲ ಹೊದ್ಕಂಡು
ಸೈಕಲ್ ಪೆಟ್ಲ ಲಟಕ್ ಲಟಕ್ ಅನ್ನುಸ್ತ
ಎಡಗಾಲ ಭದ್ರಗೂರಿ ಬಲಗಾಲೆತ್ತಿ ಸೈಕಲ್ಲೇರಿ
ಭರ್ಗುಟ್ಕಂಡು ತುಳಿತಾ ತುಳಿತಾ
ತಾಯೂರೋಣಿ ಕೆಮ್ಮಣ್ಮಾರ್ಗುಂಟ
ಕಲ್ಬುಟ್ರ ಓಣಿ ಕಡ ತುಳುದ್ರು…


ಸಂದ ಆರ್ಗಂಟ ಆದ್ರು
ಆ ಆಳು ಸುದ್ದಿ ತರ್ನಿಲ್ಲ ಅನ್ತ
ಈ ಅಯ್ನೋರು ಚಿಂತಾಕ್ರಾಂತ ಆದ್ರು

ಅದೆ ಅಂವ್ನೆ ಅಂವ ಬಂದಿದ್ನ
ಮದ್ಯಾನ್ದಿದ್ದ ಏನೇನ ಮಾತು
ಅಂವ ಆಗ್ಲೇ ಹೋದ್ನ
ಅತ್ತಗ ಸೈಕಲು
ಬಿಸುಲ್ಲಿ ಒಣ್ಗಿ ಒಣ್ಗಿ ಸಾಕಾಗಿ
ಸುಂಡೋಗಿರತರ ಇತ್ತು.


ಸೂರ್ಯ ಮುಳ್ಗಿ
ಚಿಂತಾಕ್ರಾಂತರಾದ ಅಯ್ನೋರು
ಕ್ವಾಪತ್ಕಂಡು ಬಿದ್ದಿರ ಸೈಕಲ್ಲೇರಿ
ಅದೆ ದಾರಿಲಿ ತುಳುದ್ರು
ತುಳ್ದು ತುಳ್ದು ಸಾಕಾಗಿ
ಎಣ್ಕ ಜಾಗುಕ್ಕ ಬಂದ್ರು
ಕತ್ಲೊಳ್ಗ ಯಾರನ್ತ ಕಾಣದು
ಕೊನ್ಗ ಆ ಆಳ್ ಸಿಕ್ಕುದ್ನ
ಈ ಅಯ್ನೋರ್ ಕ್ವಾಪ ಅವುನ್ನ ಬಲಿ ಹಾಕ್ತು
ಆ ಆಳು ಕೈಕಟ್ಕಂಡು ವರದಿ ಒಪ್ಪುಸ್ದ

ಆ ವರದಿ-
ಬನ್ನೂರ್ ಕಡ ಬೂತೆಲ್ಲ
ಓಟುನ್ ಲೆಕ್ಕಾಚಾರ ತಪ್ಪಾಯ್ತು
ರಂಪ ರಾದ್ದಾಂತ ಆಯ್ತು
ಏಟುಪಾಟು ಎಲ್ಲ ಆಯ್ತು
ಕರೆಂಟು ಹೋಗಿ ತಡವಾಯ್ತು
ಈಗ ನಮ್ದು ನಡಿತಾ ಅದ


ಅರೆ ಈ ಕತ್ಲೊಳ್ಗ ಯಾರಪ್ಪಾ..
ಹಂಗೆ ಅಯ್ನೋರಾ ಅನಾಮತ್ತು ಎತ್ಕಂಡು ‘ಅಯ್ನೋರ್ಗೆ ಜೈ’ ಅನ್ನದು..


ದಾರಿಲಿ ಜನ್ವೊ ಜನ
ಈ ಅಯ್ನೋರು ಅದೆಂತ ಜನ ಇಟ್ಟಿದ್ರು
ಹಾರ ತುರಾಯಿ ಲೆಕ್ಕನೆ ಇಲ್ಲ
ದಾರಿ ಸಾಗ್ತಿತ್ತು
ಕುಣ್ತ ಮೆರ್ತ ಇದ್ದದ್ದೆ

ಈಗ್ಲೆ ಟೇಮು ಹತ್ತತ್ರ ಹತ್ತಾಗಿ
ಇನ್ನೇನ ಊರ್ ಗಡಿ ಮುಟ್ಬೇಕು
ಅಸ್ಟೊತ್ಗ ಆ ಆಳು ಅಯ್ನೋರ್ ಕಿಮಿಲಿ
“ಅಯ್ನೋರಾ
ಕಾಲುನ್ ಮನ್ಗ ಬೆಂಕಿ ಬಿದ್ದುದ
ಅದೇನ ಗೊತ್ತಿಲ್ಲ
ಅದ್ಯಾರ ಅನ್ತ ಗೊತ್ತಿಲ್ಲ
ಕಾಲ್ನು ಚೆಲ್ವಿನು ಒಳ್ಗೆ ಬೆಂದೊಗಿದ್ದರನ್ತ”
ಅನ್ತ ಗುಸುಗುಟ್ದ
ಈ ಅಯ್ನೋರು ಆ ಆಳ್ ಮಾತ್ನ ಕೇಳ್ತ
ಏನೂ ಮಾತಾಡ್ದೆ ತಲದೂಗ್ತ
ಜೈಕಾರ ಹಾಕುಸ್ಕತಾ ನಡುದ್ರು…

-೫೬-
ಮೊಬ್ಬು
ಕಣ್ಣು ಕವ್ರಿ ಕವ್ರಿ ಉರಿತಾ ಅದ
ಬೆಂಕಿ ಬಿದ್ದಿರ ಸುದ್ದಿ ತಿಳ್ದು
ರಾತ್ರ ನನ್ಗ ನಿದ್ರನೆ ಇಲ್ಲ
ಹೋದ…
ನನ್ ಒಡಿಯ ಹೊಂಟೇ ಹೋದ
ಜೀವ ತೇದು ತೇದು ಜೀವ ಕೊಟ್ಟು
ನನ್ನ ರೂಪುಸ್ದ ಆ ಮಾನ್ಬಾವ
ನನ್ ಕಾಲಯ್ಯ ಹೋದನಲ್ಲೊ
ನೀ ಯಾಕ ಹೋದ್ಯೋ
ನಿನ್ ಮನ್ಗ ಬೆಂಕಿ ಕೊಟ್ಟೋರ್ಯಾರೋ
ಆ ಬೆಂಕಿ ಜೊತ್ಗ ನಿನ್ನು ಸುಟ್ಟೋರ್ಯಾರೋ
ಆ ಸುಟ್ಟೋರ್ಗ ಆ ಸುಟ್ಟೋರ್ ಮನ್ಗ
ನೀ ಏನ ಮಾಡಿ ಅವ್ರ್ ಕೆಂಗಣ್ಗ ಗುರಿಯಾದ್ಯೊ
ಇಲ್ಲಿ ನನ್ ಗೋಳು ಕೇಳೋರ್ಯಾರೋ
ಕಾಲಯ್ಯೋ ನನ್ ಒಡಿಯ ಕಾಲಯ್ಯೋ…

ಯಾರ ಬಂದಂಗಾಯ್ತು
ಇನ್ನು ಕತ್ ಕತ್ಲು
ಏನೂ ಕಾಣ್ದು
“ಅಯ್ನೋರಾ..”
ಕುಲೊಸ್ತರ ದನಿ ಇದ್ದಂಗದ
ನನ್ ಕಾಲಯ್ನ ಸುದ್ದಿನೆ ಅನ್ಸುತ್ತ
“ಅಯ್ನೋರಾ..”

ಈ ಅಯ್ನೋರು ರಾತ್ರ
ಕುಣ್ಕ ಮೆರ್ಕ ಬಂದು ಮನ ಸೇರ್ದೆ
ಬೆಂಕಿ ಬಿದ್ದಿರ ಸುದ್ದಿ ಕೇಳಿ
ಪೋಲಿಸ್ರುಗ ಸುದ್ದಿ ಮುಟ್ಸಿ
ಅಲ್ಲೆ ಸರೊತ್ಗಂಟ ಇದ್ದು ಬಂದೋರು
ನನ್ನ ಮೂಲುಗ್ಬಟ್ಟು
ಒಳಕ್ಕೋದವ್ರು ಇನ್ನು ಎದ್ರಿಲ್ಲ
ಆದ್ರ ಕುಲೊಸ್ತರು ಕೂಗದ ಬುಡ್ನಿಲ್ಲ


ಊರು ಗಕುಂ ಅನ್ತಿತ್ತು
ಟೇಮು ಹನ್ನೇಡ್ ಗಂಟ ಆಗದ
ವಾರಸ್ದಾರು ಯಾರಿದ್ದರು..
ಈಗ ಪೋಲಿಸ್ ಜೀಪು ಬಂತು
ಮನ ಬೆಂದು
ಅದರೊಳಗ
ಕಾಲಯ್ಯ ಚೆಲ್ವಿ ಹೆಣ್ಗಳು
ಬೆಂದು ಬಿರ್ಕಂಡು ಬಿದ್ದವ

ಆ ಜೀಪು
ಈ ಅಯ್ನೋರು ನಿಂತಿತವ್ಕೆ ಬಂತು
ಆ ಜೀಪಿಂದ ಇಳ್ದ ಪೋಲಿಸ್ರು
ಈ ಅಯ್ನೋರ್ ಜೊತ್ಗ ಏನಾ ಮಾತಾಡುದ್ರು
ಅಯ್ನೋರು ಹೇಳುದ್ದ ಕೇಳುದ್ರು
“ಮಗ ಪರಶುರಾಮ ಜೈಲಲವ್ನ
ನಮ್ಮೂರ್ಲಿ ಚೆಂಗುಲಿ ಅಂತಿದ್ನ
ಅಗುಸ್ರವ್ನು
ಅಂವ ಏಳೆಂಟ್ ತಿಗ್ಳಿಂದ ಕಾಳ್ತಿಲ್ಲ
ಆ ಟೇಮ್ಲೆ
ಈ ಕಾಲಯ್ನ ಮಗ್ಳೂ ಸವ್ವಿ ಕಾಣ್ತ ಇರ್ನಿಲ್ಲ
ಆ ಕೇಸು ಏನ ಎತ್ತ ಗೊತ್ತಿಲ್ಲ
ಶಿವ್ಲಿಂಗುನ ಕೇಳುದ್ರ ತಿಳಿತುದ ಬುದ್ಯವ್ರ..
ಆದ್ರ ಈ ಮನ್ಗ ಬೆಂಕಿ ಕೊಟ್ಟವ್ರು
ಯಾರಂತ ಗೊತ್ತಿಲ್ಲ ಬುದ್ಯವ್ರ..
ನಾವು ನ್ಯನ್ನೆಲ್ಲ ಓಟ್ ಎಣ್ಕದಲ್ಲಿದ್ದು
ನಾವು ಊರ್ ಮುಟ್ತ ಇರ್ಬೇಕಾದ್ರ
ಬೆಂಕಿ ಬಿದ್ದಿರ ಸುದ್ದಿ ತಿಳಿತು”
ಅನ್ತ ಈ ಅಯ್ನೋರು ಮಾತ್ ಮುಗಿಸುದ್ರು.

ಈ ಅಯ್ನೋರು ಸವ್ವಿ ಕಾಣ್ತ ಇಲ್ಲ ಅನ್ತರ
ಚೆಂಗುಲಿ ಜೊತ್ಗ ಕಳಿಸ್ದವ್ರು ಇವ್ರೆ ಅಲ್ವ
ಚೆಲ್ವಿಗ ಹೇಳಿ ಹೇಳಿ ಕಳಿಸ್ದವ್ರು ಇವ್ರೆ ಅಲ್ವ..
ಇದೇನಾ..
ಅಯ್ನೋರ್ ಲೆಕ್ವೆ ಗೊತ್ತಾಯ್ತಿಲ್ಲ…


ಟೇಮು ಮೂರಾಗಿತ್ತೇನೋ
ಬಿಸ್ಲು ಹಂಗೆ ಉರಿತಿತ್ತು
ಏಳೆಂಟ್ ಜನ ಪೋಲಿಸ್ರು ಇದ್ರು
ನಾಕೈದ್ ಜೀಪು ನಿಂತಿದ್ದು
ಮನ ಮುಂದ ಪರ್ಶು ಗೋಳಾಡ್ತಿತ್ತು
ಈ ಅಯ್ನೋರು
ಆ ಪರ್ಶು ತಲ ಮ್ಯಾಲ ಕೈಯಿಟ್ಟು
“ಸುಮ್ನಿರು ಸುಮ್ನಿರು” ಅನ್ತಿದ್ರು
ಆಗ ಪರ್ಶು,
“ಅಯ್ನೋರಾ ನಾ ಬುಡದಿಲ್ಲ ಅಯ್ನೋರಾ
ನಿಮ್ ಪಾದ್ದಾಣು ಬುಡದಿಲ್ಲ ಅಯ್ನೋರಾ..”
“ಏಯ್ ಸುಮ್ನಿರೋ ಬಂಚೊತ್
ಏನ್ನ ಬುಡದಿಲ್ಲ..
ಕೋರ್ಟು ಕಚೇರಿ ಅನ್ತ ಯಾತಿಕ್ಕಾಯ್ತು..”
ಅನ್ತ ರೇಗುದ್ರು.
ಪೋಲಿಸ್ರು ಮಾಜರ್ ಮಾಡಿ
ಪರ್ಶುತವು ರುಜು ಹಾಕುಸ್ಕಂಡು
ಹೆಣ್ಗಳ ಹೊಳಕಡ ತಕ್ಕ ಹೋದ್ರು


ಹೊಳಕಡ ಹೋಗಿ
ಒಂದ್ಗಂಡ ಟೇಮಾಗಿ
ಐದು ಆರು ಕಳಿತಾ
ಸೂರ್ಯ ಮುಳುಗ್ತಾ
ಕೆಂಧೂಳೇಳ್ತ ಇತ್ತು.

ಈ ಅಯ್ನೋರು ನಿಂತವ್ವೆ ನಿಂತಿದ್ರು
ಪರ್ಶುನ ಹೊಳಕಡ ಕರ್ಕ ಹೋದ್ರು
ಹೊತ್ತು ಮೀರಿ ಕತ್ಲು ಕವುಸ್ತ
ಹೊಳಕರ ಸಮಾಧಿ ಮಾಳ್ದಲಿ
ಬೆಂಕಿ ಧಗಧಗ ಅನ್ತ ಉರಿತಾ
ಮೇಲೇಳ್ತಿತ್ತು.

ಈ ಅಯ್ನೋರು ಬೀಡಿ ಕಚ್ಕಂಡು
ದಮ್ಮೆಳಿತಾ ಹೊಗ ಬುಡ್ತಾ
ನಿಧಾನುಕ್ಕು ಮನಕಡಿಕ
ನಡಿತಾ ಹೋದ್ರು..


ಈ ದೊಡ್ಡವ್ವ
ಜಗುಲಿ ಮ್ಯಾಲ ಕುಂತಿದ್ದವ
ಸುಮ್ನ ಕುಂತ್ಕ ಬ್ಯಾಡ್ವ
“ಕುಸೈ ನಿಂಗೊಂಚೂರು ಬುದ್ದಿ ಬ್ಯಾಡ್ವ
ನಾಳ ಹೆಡ್ತಿ ತಿಥಿ ಮಡಿಕಂಡು
ಜಲ್ಗಾರ್ ಹೆಣ ಬೇಯ್ಸಕ್ಕೊಗಿದಯಲ್ಲ
ಮನ್ಗ ಕಂಟ್ಗ ಆಗದಿಲ್ವ..
ನಿಂತ್ಗ ವಸಿ
ಹಂಗೆ ಮನ ಒಳಕ ಹೋದಯ..”
ಅನ್ತ ತೊಪ್ಪ ಕಲ್ಸಿ ಇಟ್ಕಂಡಿದ್ ನೀರ
ಈ ಅಯ್ನೋರ್ ಮೈಮ್ಯಾಲ ಊದ.

ಈ ಅಯ್ನೋರು,
“ದೊಡ್ಡವ್ವ ಹೆಣ ಬೇಯ್ಸಕ
ನಾ ಎಲ್ಯ ಹೋಗಿದ್ದು
ನಾ ಈಗ ಮೆಂಬರು
ನಾ ಇಲ್ದೆ ಆದ್ದಾ ಎಲ್ಲ
ನಾನು ನಾಳ ಚೇರ್ಮನಾಗಂವ
ಎಲ್ಲ ನನ್ ಸುಪರ್ದಿಲೆ ಆಗ್ಬೇಕು
ಹೆಣನ ಬೇಯ್ಸವ್ರು ಬೇಯ್ಸುದ್ರು
ನಂದು ಮದಾಳ್ತನ..”
ತೊಪ್ಪ ನೀರ ಒರುಸ್ತ
ತೊಟ್ಟಿಲಿ ನೀರ ತಗ್ದು ತಲ್ಗ ಬುಟ್ಕಂಡು
ನನ್ನೂ ತೊಳ್ದು ಮೂಲುಗ್ಬುಟ್ಟು
ಒಳಕ ನಡ್ದಾಗ ಈ ದೊಡ್ಡವ್ವನು ನಡುದ್ಲು.

-ಎಂ. ಜವರಾಜ್


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x