ಕಥಾಲೋಕ

ಬಯಲಾಗದ ಬಣ್ಣ: ಅನುರವಿಮಂಜು


ಶೋಭಿತಾಳ ಗಂಡ ತೀರಿಕೊಂಡು ವರ್ಷ ಕಳೆದಿದೆ, ಅವಳೀಗ ಒಂಟಿ ಜೀವನ ನಡೆಸುತ್ತಿದ್ದಾಳೆ. ನಿನ್ನ ಅಂದಿನ ಪ್ರೀತಿ ಇನ್ನು ಜೀವಂತ ಇರುವುದಾದರೆ ಅವಳನ್ನು ಮದುವೆಯಾಗಿ ಹೊಸ ಬದುಕನ್ನು ನೀಡು. ಆಕಸ್ಮಿಕವಾಗಿ ಭೇಟಿಯಾದ ಆತ್ಮೀಯ ಗೆಳೆಯ ಗೌತಮ್ ಆಚ್ಚರಿಯ ಸಂಗತಿ ತಿಳಿಸಿ ಸಲಹೆ ನೀಡಿದ. ಆತನ ಮಾತು ಕೇಳಿ ನನ್ನೊಳಗಿದ ಸೂಕ್ತ ಬಯಕೆಗಳು ಗರಿಗೆದರಿದವು. ಒಂದು ನಿರ್ಧಾರಕ್ಕೆ ಸಿದ್ದನಾದೆ, ಶೋಭಿತಾಳೊಂದಿಗೆ ಉತ್ತಮ ಸ್ನೇಹ ಸಂಬಂಧ ವಿರಿಸಿದ್ದರಿಂದ ನನ್ನ ಮಾತನ್ನು ತಿರಸ್ಕರಿಸಲಾರಳೆಂಬ ನಂಬಿಕೆ ಇತ್ತು. ಒಂಟಿ ಜೀವನ ಅವಳಿಗೂ ಬೇಸರ ತಂದಿರಬಹುದು. ತಲೆಯೊಳಗೆ ನೂರಾರು ಆಲೋಚನೆಗಳು ಓಡಾಡುತ್ತಿರುವಂತೆ, ಅವಳ ಮನೆಯತ್ತ ಸಾಗಿದೆ. ಶೋಭಿತಾಳನ್ನು ನೋಡದೆ 2 ವರ್ಷಗಳೆ ಕಳೆದಿರಬಹುದು.

ಕಾಲ್ ಬೆಲ್ ಸದ್ದು ಗೈಯ್ಯಲು ಶೋಭಿತಾಳೆ ಬಂದು ಬಾಗಿಲು ತೆರೆದಳು. ಅವಳನ್ನೊಮ್ಮೆ ಆಪಾದ ಮಸ್ತಕವಾಗಿ ದಿಟ್ಟಿಸಿದೆ. ಮುಂಚೆಗಿಂತ ಕೊಂಚ ಸೊರಗಿದರು ಸೌಂದರ್ಯ ಬಾಡಿರಲಿಲ್ಲ. ಏನ್ ಶೋಭಿತ ನನ್ನ ಬರುವಿಕೆಯ ಅಚ್ಚರಿಯನ್ನುಂಟು ಮಾಡಿತೆ. ಅಪರೂಪದ ಆತ್ಮೀಯರ ಭೇಟಿ ಎಂದು ನನ್ನ ದಿನ ಭವಿಷ್ಯ ಓದಿದೆ. ಅದು ನಿಜವಾಯ್ತು ಎಂದು ನಸು ನಕ್ಕಳು, ನಗು ಮೋಹಕವಾಗಿತ್ತು. ಹೊರಗೆ ನಿಂತ್ತಿದ್ದಿರಲ್ಲ ಒಳಗೆ ಬನ್ನಿ ಎಂದು ಅಕ್ಕರೆಯಿಂದ ಸ್ವಾಗತಿಸಿದಳು. 3 ವರ್ಷಗಳಿಗೆ ಹಿರಿಯನಾದುದರಿಂದ, ನನ್ನನ್ನು ಬಹುವಚನದಲ್ಲಿ ಸಂಭೋದಿಸುತ್ತಿದ್ದಳು. ಮನೆ ಚಿಕ್ಕದಾಗಿದ್ದರು. ಅಚ್ಚು ಕಟ್ಟಾಗಿ ಇರಿಸಿದ್ದಳು. ಕೊಠಡಿಯೊಳಗಿದ್ದ ಮಗು ಅಳುವ ಧ್ವನಿ ಕೇಳಿಸಿತ್ತು. ದೀಕ್ಷಿತ್ ಎತ್ತೆಚ್ಚ ಎಂದು ಅವಸರವಾಗಿ ಕೋಣೆಯತ್ತ ಧಾವಿಸಿದ್ದಳು. ನಾನು ಹಾಲಿನಲ್ಲಿ ಟಿವಿ ಎದುರಿನಲ್ಲಿ ಕುಳಿತಿದ್ದುದ್ದಾದರು ನನ್ನ ಚಿಂತನೆ ಶರವೇಗದಿಂದ ಭೂತಕಾಲದತ್ತ ಲಗ್ಗೆ ಇರಿಸಿತ್ತು. ಕಾಲೇಜಿನ ದಿನಗಳಲ್ಲಿ ಪ್ರತಿಭೆ ಮೆರೆಯುತ್ತಿದ್ದ ಶೋಭಿತಳನ್ನ ಸಹಜವಾಗಿಯೇ ಮೆಚ್ಚಿ ಸ್ನೇಹ ಬಯಸಿದೆ, ಸ್ನೇಹ ಗಾಢವಾಗಿ ನನ್ನೊಳಗೆ. ಪ್ರೀತಿಯನ್ನ ಹುಟ್ಟು ಹಾಕಿತ್ತು ಅವಳನ್ನು ಹೃದಯಮಂಟಪದೊಳಗಿರಿಸಿ ಪೂಜಿಸತೊಡಗಿದೆ.

ಆ ಪ್ರೀತಿಯ ಮುಂದೆ ಮಿಕ್ಕಿದೆಲ್ಲವು ಗೌಣವಾಗಿ ಆ ಪ್ರಭಾವ ವಲಯದಿಂದ ಹೊರಬರಲಾಗದೆ ಸಂಧಿಗ್ನತೆಯಲ್ಲಿ ಸಿಲುಕಿದೆ. ಯಾರನ್ನಾದರು ಪ್ರೀತಿಸಿ ಅವರು ಪ್ರೀತಿಸ್ಪಡದಿದ್ದಾಗ ಆಗುವ ನೋವಿಗಿಂತಲೂ, ಆ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂದು ಹೇಳಲು ಧೈರ್ಯ ಸಾಲದಿರುವುದು ಬಹಳ ದುಂಖದಾಯಕವಾಗಿರುತ್ತದೆ. ಪ್ರತಿ ಬಾರಿ ಮಾತನಾಡುವಾಗಲು ಶೋಭಿತಾಳ ಕಣ್ಣುಗಳಲ್ಲಿ ಪ್ರೀತಿಯ ಸೆಳೆ ಹುಡುಕುತ್ತಿದ್ದೆ ಮುಖದ ಭಾವನೆಗಳನ್ನು ಅರಿಯಲಾರದೆ ಸೋತು ಹೋಗಿದ್ದೆ. ಅವಳೆ ಬಾಳ ಸಂಗಾತಿಯಾಗುತ್ತಾಳೆ ಎಂಬ ಆಶಯಕ್ಕೆ ನೂರಾರು ಭಾವನೆಗಳಿಗೆ ಬಣ್ಣ ಕಟ್ಟಿ ಆನಂದಿಸಿದೆ. ನಾವಾಡಿದ ಸಲುಗೆಯ ಮಾತು ನಗೆ ಚಟಾಕಿಗಳಿಗೆ ಲೆಕ್ಕವಿರಲಿಲ್ಲ. ನಂತರ ನನಗೆ ಮದುವೆ ನಿಶ್ಚಯವಾಗಿದೆ. ಮದುವೆಗೆ ನೀವು ಬರಬೇಕು ಎಂದು ಶೋಭಿತ ಸಲೀಸಾಗಿ ನುಡಿದಾಗ ನನಗೆ ಆಘಾತವಾಗಿತ್ತು ಮನತಲ್ಲಣಿಸಿತ್ತು. ನಾನು ತೇಲುವ ನಗೆ ಹೊಂದಿಗೆ ಹರ್ಷ ವ್ಯಕ್ತ ಪಡಿಸಿದ್ದೆ. ಆಗಲು ಆಕೆ ನನ್ನ ಮೊಖದ ದುಗುಡ ಗುರುತಿಸದೆ ಹೋದಳು, ಆ ಅನಿರೀಕ್ಷಿತ ಸುದ್ಧಿ ಜೀರ್ಣಿಸಲಾಗದೆ ಕೆಲವು ದಿನ ಖಿನ್ನತೆಗೊಳಗಾಗಿದೆ. ನೋವು ತುಡಿತಗಳನ್ನು ಹತ್ತಿಕ್ಕಲಾರದೆ ಪೇಪರ್ ಪೆನ್ನು ಹಿಡಿದು ಕತೆ ಕವನಗಳನ್ನು ಕೀಚಿದೆ. ಬರೆವ ಕತೆ ಕವನಗಳಲ್ಲಿ ಒಂದು ಪಾತ್ರ ಶೋಭಿತಾಳಿಗೆ ಮೀಸಲಾಗಿತ್ತು.

ಇದೀಗ ವಿಧವೆಯಾಗಿ ಕುಳಿತ್ತಿರುವ ಶೋಭಿತ ನನ್ನವಳಾಗುವ ಕಾಲ ಕೂಡಿ ಬಂದಿದೆ. ಊರಿಗೆ ಯಾವತ್ತು ಬಂದಿದ್ದು ಎನ್ನುತ್ತ ಶೋಭಿತ ಕೋಣೆಯಿಂದ ಹೊರ ಬಂದಿದ್ದಳು. ನಾನು ವಾಸ್ತವಕ್ಕೆ ಮರಳಿದೆ. ಬಂದು ಒಂದೆರಡು ವಾರಗಳಾಯಿತು ಎಂದು ಉತ್ತರಿಸಿದೆ. ಅವಳ ಕಂಕುಳಲ್ಲಿ ಮಗು ಇತ್ತು. ಮಗು ಪೂರ್ಣ ಅವಳದೆ ಪಡಿಎಚ್ಚು, ಮಗುವನ್ನು ಕೈಗೆತ್ತಿ ಸಂಭ್ರಮಿಸಿದೆ, ಶೋಭಿತಳನ್ನು ನೆನೆ ನೆನೆದು ಮಗುವನ್ನು ಮುದ್ದಿಸಿದೆ. ದೀಕ್ಷಿತ್ ಯಾರ ಕೈಯ್ಯಲು ಹೋಗಲ್ಲ ಅದೇನೋ ನಿಮ್ಮ ಕೈಯಲ್ಲಿ ನಗುತ್ತಿದ್ದಾನೆ. ಅವಳ ಮಾತು ಮಾರ್ಮಿಕವಾಗಿತ್ತು. ಮನಸ್ಸು ತನ್ನದೇ ಅರ್ಥ ಕಲ್ಪಸಿತ್ತು. ಮಗುವಿನ ಸಾಮಿತ್ಯ, ಮೃದು, ಹಸ್ತಗಳ ಹಿಡಿತ ಋಣಾನು ಬಂಧವಾಗಿರಲಿಕ್ಕು, ಸಾಕು ಎಂದೆನಿಸಿತ್ತು. ನಿನ್ನವರು ವಿಧಿವಶವಾದರೆಂದು ತಿಳಿಯಿತ್ತು ಖೇಧವಾಯಿತು. ಸಿಕ್ಕಿದ ಅವಕಾಸಕ್ಕಾಗಿ ಸಂತೋಷವಿದ್ದರು ಮಾತಿನ ಅನುಕಂಪ ಪ್ರದರ್ಶಿಸಿದೆ. ಆಕೆ ತನ್ನ ಜೀವನದ ಎಳೆ ಬಿಡಿಸತೊಡಗಿದಳು. ನಮ್ಮ ಸಂಸಾರ ಹಾಲು ಜೇನಿನಂತಿದು, ದಾಂಪತ್ಯ ಜೀವನ ಕ್ಷಣಿಕದಾದ್ದರು, ಅವರ ಸವಿಯನ್ನು ಜೀವನ ಪೂರ್ತಿ ಬಿತ್ತಿ ಹೋಗಿದ್ದಾರೆ. ಅವರು ಮೃದು ಹೃದಯ ಅವರ ಸ್ಮರಣೆಗೋಸ್ಕರ ಮಗುವಿಗೆ ದೀಕ್ಷಿತ್ ಅಂತ ಅವರದೇ ಹೆಸರಿಟ್ಟಿದ್ದೇನೆ. ಒಳ್ಳೆಯವರನ್ನು ದೇವರು ಬೇಗ ಕರೆಸಿಕೊಳ್ಳುತ್ತಾನೆ ಎನ್ನುವುದು ಸುಳ್ಳಲ್ಲ ಎಂದು ದುಃಖ ಭಾರದಿಂದ ಅವಳ ಕಣ್ಣುಗಳು ತೇವಗೊಂಡವು.

ಚಿಂತಿಸಬೇಡ, ಇನ್ನು ಮುಂದಿನ ಜೀವನದ ಬಗ್ಗೆ ಯೋಚಿಸು ನನ್ನ ಆಸೆಯ ತಿಳಿಸುವ ಇಚ್ಛೆಯಿಂದ ಪೀಠಿಕೆ ಹಾಕಿದೆ. ಹೌದು ದೀಕ್ಷಿತ್ ನನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವ ಹಂಬಲವಿದೆ ನನ್ನ ಮಾತಿನ ಗುಟ್ಟನ್ನು ಅರಿಯದೆ ನುಡಿದಳು. ಅವಳ ಯೋಚನೆ ಬೇರೊಂದು ದಿಕ್ಕಿನಲ್ಲಿ ಸಾಗುತ್ತಿತ್ತು. ನಿನ್ನ ಬಾಳಗೆ ಆಸರೆಯಾಗುತ್ತೇನೆ. ಎಂಬ ಚಿಕ್ಕ ವಾಕ್ಯ ಹೇಳಲು ಸಾಧ್ಯವಾಗದೆ. ತಲೆಯೊಳಗೆ ಒಳ್ಳೆ ಉಪಾಯವನ್ನು ಕಾರ್ಯ ರೂಪಕ್ಕೆ ಇಳಿಸಿದೆ ಕಾಲೇಜಿನ ದಿನಗಳಲ್ಲಿ ನಿನ್ನನ್ನ ಯಾರು ಪ್ರೀತಿಸಲಿಲ್ಲವೇ ? ಎಂಬ ಪ್ರಶ್ನೆಗೆ ಆಕರ್ಷಕವಾಗಿ ನಕ್ಕಳು, ಹೌದು ತಮ್ಮ ಪ್ರೀತಿಯನ್ನು ಚಿಕ್ಕ ಚೀಟಿಯಲ್ಲಿ, ತುಂಬಿ ಕಳುಹಿಸುತ್ತಿದ್ದರು. ನಲವತ್ತರ ಆಸುಪಾಸಿನ ಕನ್ನಡ ಲೆಚ್ಚರರ್ I Love u ಎಂದು ಇಂಗ್ಲೀಷ್ ನ್ನಲ್ಲಿ ಟಾಕುಟೀಕು ಹೇಳಿದರು. ಅವರ ಬೆವರಿಳಿಸಿದ್ದೆ ನಾನು. ಸ್ನೇಹ ಸಲುಗೆಯಿಂದ ಮಾತು ಆಡಿಸಿದರೆ ಅವರು ತಪ್ಪು ಭಾವಿಸಬಹುದೆಂಬ ಮಾತು ಅರಿತವಾಗಿತ್ತು. ಅವಳು ಮುಂದುವರಿಸಿದಳು, ಪರಿಶುದ್ಧವಾದ ಸ್ನೇಹ ನೀಡಿ, ಸ್ನೇಹಕ್ಕೆ ಪ್ರೇಮದ ಲೇಪ ಬೆರಸದೆ, ಸ್ನೇಹದ ಪವಿತ್ರತೆಯನ್ನು ಉಳಿಸಿ ಬೆಳೆಸಿದುದ್ದು ನೀವೊಬ್ಬರೆ, ಅದಕ್ಕೆ ನನಗೆ ಎಲ್ಲರಿಗಿಂತಲೂ ಹೆಚ್ಚಿನ ಗೌರವ ನಿಮ್ಮಲ್ಲಿ. ಕಣ್ಣುಗಳಲ್ಲಿ ಅಭಿಮಾನ ಸ್ಪಷ್ಟವಾಗಿತ್ತು. ತಾಸಿಗೆ ಮುನ್ನ ನಾನೇನಾದರು ಭಾವೊದ್ವೇಗದಲ್ಲಿ ಮದುವೆ ಬಗ್ಗೆ ಪ್ರಸ್ತಾಪವೆತ್ತಿದ್ದರು, ನಾಮಾವಶೇಷವಾಗಿರುತ್ತಿತ್ತು. ಅದನ್ನು ಊಹಿಸಿ ನನ್ನ ಮೈ ಜುಮ್ ಎನಿಸಿತ್ತು. ಒಣಗಿದ ತುಟಿಗಳನ್ನು ನಾಲಿಗೆಯಿಂದ ಸಾವರಿಕೊಂಡೆ ನನ್ನ ದೂರ್ತತೆಯ ಅರಿವಿಲ್ಲದೆ ಆಕೆ ಪೂರ್ಣ ನಂಬಿಕೆ ಇರಿಸಿದಳು. ಆಕೆಗೆ ಅಸಹ್ಯ ತರಿಸಿದ ಗಂಡುಗಳ ಸರದಿ ಸಾಲಿಗೆ ಸೇರಿದ ಕೊನೆಯ ವ್ಯಕ್ತಿ ನಾನಾಗಿದ್ದೆ. ಕಪಟತನವಿಲ್ಲದ ಪರಿಶುದ್ಧ ಸ್ನೇಹ ಆಕೆ ಬಯಸಿದ್ದಳು. ಆ ಮನೆಯಲ್ಲಿ ಅರೆಕ್ಷಣ ನಿಲ್ಲುವ ಯೋಗ್ಯತೆ ನನಗಿಲ್ಲವೆನಿಸಿತ್ತು. ಏನೋ ಅವಸರದ ಕೆಲಸವಿದೆ ಎಂದು ಬಡ ಬಡಿಸಿ ನಿರ್ಗಮಿಸಿದೆ. ಮನೆಯ ಆವರಣ ದಾಟುವಾಗ ಶೋಭಿತ ಹಾಕಿದ ಮುಂಭಾಗಲಿನ ಸದ್ದು ನನ್ನ ಕೆಟ್ಟ ಮನಸ್ಸಿಗೆ ನೀಡಿದ ಚಡಿ ಏಟಿನಂತಿತ್ತು.

-ಅನುರವಿಮಂಜು