ಸಾರ್ಥಕ್ಯ: ಡಾ. ಅಜಿತ್ ಹರೀಶಿ


ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ ಎಚ್ಚರ ತಪ್ಪಿದ ನೆನಪು. ಕಣ್ಣು ಬಿಟ್ಟಾಗ ಅವರು ದೇವಸ್ಥಾನದ ಅಂಗಳದಲ್ಲಿದ್ದರು. ಮಗ ಮನೆಯಲ್ಲಿರಲಿಲ್ಲ. ಅವನು ಇಷ್ಟು ಬೇಗ  ಬರುವುದೂ ಇಲ್ಲ. ಜನಾರ್ದನ ಭಟ್ಟರ ಬಲಗೈ ಮತ್ತು ಬಲಗಾಲು ಎರಡೂ ಸ್ವಾಧೀನ ಕಳೆದುಕೊಂಡಿದ್ದವು. ಯಾರನ್ನಾದರೂ ಕರೆಯೋಣವೆಂದು ಪ್ರಯತ್ನಿಸಿದರೆ ಧ್ವನಿ ಸರಿಯಾಗಿ ಹೊರಡಲಿಲ್ಲ, ತೆವಳುತ್ತಲೇ ಮನೆ ತಲುಪಿದರು.

ಸುಮಾರು ಐವತ್ತರ ಆಸುಪಾಸಿನ ಭಟ್ಟರಿಗೆ ಇರುವ ಕುಟುಂಬವೆಂದರೆ ಮಗ ಸುಧೀರನೊಬ್ಬನೇ. ಭಟ್ಟರ ಹೆಂಡತಿ ಸುಧೀರನಿಗೆ ಹತ್ತು ತುಂಬುವುದರೊಳಗೆ ತೀರಿಕೊಂಡಿದ್ದಳು. ಒಂದು ಮಧ್ಯಾಹ್ನ ದೇವಸ್ಥಾನದಿಂದ ಪೂಜೆ ಮುಗಿಸಿ ಜನಾರ್ದನರು ಮನೆಗೆ ಬರುವಾಗ ಪತ್ನಿ ಪಾರ್ವತಿ ಹೊರಗೇ ಮಲಗಿದ್ದಳು. ಇವಳು ಮುಟ್ಟಾಗಿ ಮಲಗಿದ್ದಾಳೆ ಎಂದು ಭಟ್ಟರು ಹೆಚ್ಚು ತಲೆ ಕೆಡಿಸಿಕೊಳ್ಳದೇ, ತುರ್ತು ಕೆಲಸದ ನಿಮಿತ್ತ ಪೇಟೆಗೆ ನಡೆದಿದ್ದರು. ವಾಪಸು ಬರುವಷ್ಟರಲ್ಲಿ ಸುಧೀರ, ಪಾರ್ವತಿಯ ಪಕ್ಕ ಕುಳಿತು ‘ಅಮ್ಮ ಮಾತಾಡುತ್ತಿಲ್ಲ’ ಅಂತ ಅಳುತ್ತಿದ್ದ. ವೈದ್ಯರು ಬಂದು ಡೆತ್ ಡಿಕ್ಲೇರ್ ಮಾಡಿ, ಸಾವಿಗೆ ಹೃದಯಾಘಾತ ಕಾರಣವೆಂದಿದ್ದರು . ಆದರೆ ಭಟ್ಟರಿಗೆ ಮಾತ್ರ ಹೆಂಡತಿಯ ಸಾವಿಗೆ ಪರೋಕ್ಷವಾಗಿ ತಾನೇ ಕಾರಣ ಎಂಬ ಪಾಪಪ್ರಜ್ಞೆ  ಕಾಡುತ್ತಿತ್ತು. ಪಾರ್ವತಿ ತೀರಿಕೊಂಡಂದಿನಿಂದ ಭಟ್ಟರೇ ಸುಧೀರನಿಗೆ ತಾಯಿಯೂ ಆದರು. ಮಗನ ಮೇಲಿನ ಪ್ರೀತಿಯಿಂದಾಗಿ ಅವರು ಮರುಮದುವೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಲಿಲ್ಲ. ಮಲತಾಯಿ ಮಗನನ್ನು ಕಡೆಗಣಿಸುವುದಷ್ಟೇ ಅಲ್ಲ, ತಂದೆಯಿಂದಲೂ ಮಗನನ್ನು ದೂರ ಮಾಡಿಯಾಳೆಂಬ ಅಳುಕು, ಜೊತೆಗೆ ಪಾರ್ವತಿಯ ಸಾವಿಗೆ ತಾನೇ ಕಾರಣ ಎಂಬ  ಅಪರಾಧಿಭಾವ ಅವರ ಬದುಕಿನಲ್ಲಿ ಇನ್ನೊಂದು ಹೆಣ್ಣಿನ ಪ್ರವೇಶವಾಗಲು ಬಿಡಲಿಲ್ಲ. 
ಪಾರ್ವತಿ ರಜೆಯಾದಾಗ, ದೇವರ ನೈವೇದ್ಯಕ್ಕೆ ಅನ್ನವನ್ನು ಮಾಡಿಕೊಳ್ಳುತ್ತಿದ್ದ ಭಟ್ಟರಿಗೆ, ಅಡುಗೆ ಕೆಲಸ ಕಷ್ಟವೆನಿಸಲಿಲ್ಲ. ರಾತ್ರಿ ಮಗನಿಗೆ ಪುರಾಣ ಪುಣ್ಯಕಥೆಗಳನ್ನು ಹೇಳಿ ತಟ್ಟಿ ಮಲಗಿಸುತ್ತಿದ್ದರು. ಬೆಳಗ್ಗೆ ಎದ್ದು ಬಚ್ಚಲಲ್ಲಿ ನೀರು ಕಾಯಿಸಿ, ಮಗನ ಬಟ್ಟೆ ತೊಳೆದು, ಅವನ ಪ್ರತಿಯೊಂದು ಬೇಕು ಬೇಡಗಳನ್ನು ಪೂರೈಸುತ್ತ, ಮಗನನ್ನು ಮಮಕಾರದಿಂದ ಬೆಳೆಸಿದ್ದರು.  

ದೇವಸ್ಥಾನದ ಪೌರೋಹಿತ್ಯದ ಜೊತೆಗೆ ಭಟ್ಟರಿಗೆ ಉಂಬಳಿಯಾಗಿ ಬಂದ ಒಂದಷ್ಟು ಭತ್ತದ ಗದ್ದೆ ಇದೆ. ಭಟ್ಟರಿಗೆ ಭೂಮಿಗಿಂತ ದೇವರ ಮೇಲೆ ವಿಶೇಷ ಪ್ರೀತಿ, ಭಕ್ತಿ. ಆದರೆ ಸುಧೀರನಿಗೆ ದೇವರ ಮೇಲಿಲ್ಲದ ಪ್ರೀತಿ ಭತ್ತದ ಗದ್ದೆಯ ಮೇಲೆ ಮತ್ತು ಅದನ್ನು ತೋಟ ಮಾಡುವಾಸೆ. ಆ ಭೂಮಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಸರಿ ಮಾಡಿಸಿಕೊಳ್ಳುವ ಬಗ್ಗೆ ತಂದೆಯೊಡನೆ ಆಗಾಗ ಮಾತು, ಜಗಳ ನಡೆಯುತ್ತಿತ್ತು. 
ತಂದೆಯಿಂದ ಒಂದು ಮಾತನ್ನೂ ಅನ್ನಿಸಿಕೊಳ್ಳದೇ, ಅತಿಯಾದ ಪ್ರೀತಿಯಿಂದ ಬೆಳೆದ ಸುಧೀರ ದೊಡ್ಡವನಾದಂತೆ ಪುಂಡನಾಗತೊಡಗಿದ. ಊರೆಲ್ಲ ಅಲೆದಾಡುತ್ತ ಜೂಜು, ಕುಡಿತ, ಸಿಗರೇಟು ಎಂದು ಸಮಯ ಕಳೆಯುತ್ತ ಉದ್ಯೋಗವಿಲ್ಲದ ಉಂಡಾಡಿಯಾಗಿ ತಿರುಗುತ್ತಿದ್ದ. ಮನೆಯಲ್ಲಿ ಇರುತ್ತಿದ್ದುದೇ ಕಮ್ಮಿ, ಹೊತ್ತುಗೊತ್ತಿಲ್ಲದೇ ಮನೆಗೆ ಬಂದು ಉಣ್ಣುತ್ತಿದ್ದ. ಎಂಥಾ ಸಂಸ್ಕಾರವಂತ ಸಜ್ಜನ ಜನಾರ್ದನ ಭಟ್ಟರಿಗೆ ಇದೆಂಥಾ ಮಗನಪ್ಪಾ ಎಂದು ಊರೆಲ್ಲ ಮಾತಾಡಿಕೊಳ್ಳುವಂತೆ ಆಗಿತ್ತು. ಮಗ ದಾರಿ ತಪ್ಪಿದ ಕಾರಣಕ್ಕೋ, ಅಥವಾ ವಾನಪ್ರಸ್ಥದ ದಿನಗಳು ಬಂದವೆಂದೋ, ಭಟ್ಟರು ಊರಲ್ಲಿ ಯಾರೊಟ್ಟಿಗೂ ಬೆರೆಯುವುದೇ ಕಮ್ಮಿಯಾಗತೊಡಗಿತ್ತು.

***

ಎಂದೂ ಮಗನ ಮೇಲೆ ಬೇಸರಿಸಿಕೊಳ್ಳದ ಜನಾರ್ದನ ಭಟ್ಟರು  ಪಾರ್ಶ್ವವಾಯುವಾಗಿ ಬಿದ್ದಾಗ ತೀರಾ ನೊಂದರು. ಎಂದೂ ತನ್ನ ವಿಧಿಯನ್ನು ಹಳಿಯದ ಪುರೋಹಿತರು ಅವತ್ತು ತನ್ನ ಹಣೆಬರಹವನ್ನು ಶಪಿಸಿಕೊಂಡರು. ಒಂದು ಪಕ್ಕದ ಸ್ವಾಧೀನ ಕಳೆದುಕೊಂಡ ಭಟ್ಟರು ಬಂದು ಮನೆಯ ಜಗುಲಿಯ ಮೇಲೆ ಮಲಗಿದ್ದರು. ಹಾಗೇ ಎಷ್ಟು ಹೊತ್ತು ಕಳೆದಿತ್ತೋ, ದೂರದಲ್ಲಿ ಸುಧೀರ ಬರುವುದು ಕಾಣಿಸಿತು. ಅವತ್ತು ಮಗನನ್ನು ನೋಡಿದ್ದೇ, ಭಟ್ಟರ ಸಹನೆಯ ಸೀಮೆ ಮೀರಿತು. ಜೀವನದಲ್ಲಿ ಮೊಟ್ಟ ಮೊದಲ ಬಾರಿ ಮಗನ ಮೇಲೆ ಕೋಪವುಕ್ಕಿತು. ದುಃಖಪಡುತ್ತ ಮಗನನ್ನು ನೋಡುತ್ತ ಒಂದು ಕೈ, ಒಂದು ಕಾಲಿನಿಂದ ನೆಲವನ್ನು  ಬಡಿದರು. ಅವರ ಆ ನೋಟದಲ್ಲಿ ‘ಅಯ್ಯೋ, ಎಂಥಾ ಮಗನನ್ನು ಪಡೆದೆ’ ಎನ್ನುವ ಹತಾಶೆ, ಕ್ರೋಧ, ಆರ್ದ್ರತೆ, ದೈನ್ಯ, ಅಸಹಾಯಕತೆ ಎಲ್ಲವೂ ಇತ್ತು. ಇದನ್ನು ಕಂಡ ಸುಧೀರನಿಗೆ ಕುಡಿದ ಅಮಲೆಲ್ಲ ಒಮ್ಮೆಲೇ ಇಳಿದು, ಅಪ್ಪನ ಬಳಿ ಓಡೋಡಿ ಬಂದು ಕೂತ. ತಂದೆಯ ಸ್ಥಿತಿ ನೋಡಿ ವಿಪರೀತ ಸಂಕಟವಾಯಿತು . ತಾಯಿ ತೀರಿಕೊಂಡಾಗ ಅತ್ತವನು ಇವತ್ತೇ ಮತ್ತೆ ಬಿಕ್ಕಿದ್ದ.

ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ‘ಇವರಿಗೆ ಪಾರ್ಶ್ವವಾಯು ಆಗಿರುವುದು ಗುಣವಾಗಲು, ಔಷಧಿ ಮತ್ತು ಚಿಕಿತ್ಸೆಯ ಅವಶ್ಯಕತೆ ಎಷ್ಟಿದೆಯೋ, ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಅವರ ಅಂಗಾಂಗಗಳಿಗೆ ವ್ಯಾಯಾಮ ಮಾಡಿಸಿ, ಮಾತಾಡಿಸಲು ಪ್ರಯತ್ನಿಸಿ. ಅವರ ಹತ್ತಿರವೇ ಇದ್ದು ಅವರ ಸ್ವಾಧೀನವಿಲ್ಲದ ಅಂಗಗಳಿಗೆ ಪ್ರೀತಿಯಿಂದ ಜೀವ ತುಂಬುವ ಕೆಲಸ ನಿಮ್ಮಿಂದಾಗಬೇಕು. ಚಿಕ್ಕ ಮಗುವಿಗೆ ಹೇಗೆ ಪ್ರೀತಿಯಿಂದ ಮಾತು ಕಲಿಸಿ, ಉಣಿಸಿ, ನಡೆಯಲು ಕಲಿಸುತ್ತೇವೆಯೋ ಹಾಗೆ’ ಎಂದರು.
ಕೆಲವು ಕಷ್ಟಗಳು ಒಳ್ಳೆಯದಕ್ಕಾಗಿಯೇ ಬರುತ್ತವೆ ಎನ್ನುವಂತೆ, ತಂದೆಯ ಅನಾರೋಗ್ಯದಿಂದಾಗಿ ಸುಧೀರ ಇದ್ದಕ್ಕಿದ್ದಂತೆ ಬದಲಾದ. ತಂದೆಯ ಶುಶ್ರೂಷೆಯೇ ಅವನ ದಿನಚರಿಯಾಯಿತು. ಸ್ನಾನ, ಪಾನ, ವಿಸರ್ಜನೆ, ಸ್ವಚ್ಛತೆ, ಅಡುಗೆ, ತಂದೆಯ ಪಾಲನೆ ಮಾಡುತ್ತ ಜವಾಬ್ದಾರಿಯುತವಾಗಿ ನಡೆದುಕೊಳ್ಳತೊಡಗಿದ. ಭಟ್ಟರು ಮಗುವಾದರು, ಸುಧೀರ ಅಪ್ಪನಾದ.  ಕೆಲವೇ ತಿಂಗಳುಗಳಲ್ಲಿ ಜನಾರ್ದನ ಭಟ್ಟರು ಸಂಪೂರ್ಣ ಗುಣಮುಖರಾಗಿ ಮೊದಲಿನಂತೆಯೇ ಗಟ್ಟಿಮುಟ್ಟಾಗಿ ಎದ್ದು ನಿಂತರು. ಸುಧೀರನ ಪ್ರೀತಿಯ ಆರೈಕೆಯಿಂದ ಅವರಿಗೆ ಪಾರ್ಶ್ವವಾಯು ಆಗಿತ್ತು ಎಂಬುದನ್ನೇ ಮರೆಸುವಷ್ಟರ ಮಟ್ಟಿಗೆ ತಯಾರಾದರು. ಸುಧೀರ ಅಪ್ಪನ ಜೊತೆ ಸಮಯ ಕಳೆಯುತ್ತ ಅಪ್ಪನನ್ನು ಪ್ರೀತಿಸತೊಡಗಿದ್ದ. ನಿಧಾನವಾಗಿ ತನ್ನನ್ನೂ ತಾನು ಪ್ರೀತಿಸಿಕೊಳ್ಳುತ್ತ, ಅವನಿಗೇ ಅರಿವಿಲ್ಲದೇ ಹೊಸ ಜೀವನಪ್ರೀತಿ ಅವನಲ್ಲಿ ಮೈದಳೆದಿತ್ತು. ಜನಾರ್ದನ ಭಟ್ಟರು ದಿನವೂ ವ್ಯಾಯಾಮ, ಯೋಗ, ಧ್ಯಾನ ಮಾಡುತ್ತ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಸಫಲರಾಗಿ ಗಟ್ಟಿಮುಟ್ಟಾಗಿ ಹೊಸದೊಂದು ಲವಲವಿಕೆಯಿಂದ ಇರತೊಡಗಿದರು. 

ಆದರೆ ಬದುಕಿನ ಸಮತಟ್ಟಿನ ವಿಸ್ತಾರ ಸಣ್ಣದೇ! ಈ ಪ್ರಯಾಣದಲ್ಲಿ ಪರ್ವತವೋ, ಪ್ರಪಾತವೋ ಮತ್ತೆ ಇದಿರುಗೊಳ್ಳುತ್ತದೆ ಎಂಬುದು ಯಾವಾಗಲೂ ಭಟ್ಟರ ಅನಿಸಿಕೆ. ಅದೇ ಸಮಯಕ್ಕೆ ಕೊರೊನಾ ಎಂಬ ರೋಗವೊಂದು ಜಗತ್ತಿನೆಲ್ಲೆಡೆ ಹಬ್ಬಲು ಪ್ರಾರಂಭವಾಗಿತ್ತು. ಮಹಾಮಾರಿಯಂತೆ ಲಕ್ಷಾನುಗಟ್ಟಲೇ ಜನರನ್ನು ಬಲಿ ತೆಗೆದುಕೊಳ್ಳಹತ್ತಿತ್ತು. ಈ ರೋಗಕ್ಕೆ ಸರಿಯಾದ ಮದ್ದು, ಚಿಕಿತ್ಸೆ ಇನ್ನೂ ಇಲ್ಲದ ಕಾರಣ, ಕಾಳ್ಗಿಚ್ಚಿನಂತೆ ಹರಡುತ್ತಿದ್ದ ಈ ರೋಗಕ್ಕೆ ಜಗತ್ತೇ ಸ್ಮಶಾನವಾಗತೊಡಗಿತ್ತು. ಎಲ್ಲೆಲ್ಲಿಯೂ ಸಾವಿನ ಮೆರವಣಿಗೆ. ನೋಡ ನೋಡುತ್ತಲೇ ಕೊರೊನ ದೇವನೂರಿಗೂ ಕಾಲಿಟ್ಟಿತು. ಎಲ್ಲವೂ ಅಲ್ಲೋಲ ಕಲ್ಲೋಲವಾಗತೊಡಗಿತು. ಸೋಂಕಿತರು, ಶಂಕಿತರು, ಪೊಲೀಸ್, ಕರ್ಫ್ಯೂ, ಲಾಕ್ಡೌನ್. ಎಲ್ಲಿ ನೋಡಿದರೂ ಈ ಮಹಾಮಾರಿಯ ಮರಣ ಮೃದಂಗ! ಜನಜೀವನ  ಅಸ್ತವ್ಯಸ್ತವಾಗಿ ಹೋಯಿತು. ಊರಿನ ಎಲ್ಲ ದಿಕ್ಕುಗಳಲ್ಲೂ ಬೇಲಿ, ದಿನಸಿ ಅಂಗಡಿಗಳೂ ಖಾಲಿ. ದುಡಿಮೆಯಿಲ್ಲದ ಜನ ಹಸಿವಿನಿಂದ ತತ್ತರಿಸಿ ಹೋದರು. ದಿನದಿನವೂ ರೋಗಿಗಳು ಹೆಚ್ಚಾದರು. ತಾನು ಹುಟ್ಟಿ, ಬೆಳೆದು, ಬಾಳಿದ ಊರಿನ ಈ ಸ್ಥಿತಿಯನ್ನು ನೋಡಿ ಜನಾರ್ದನ ಭಟ್ಟರು ನೊಂದರು.  ಅವರಿಗೆ ಗೇಣಿಯವರು ಕೊಡುತ್ತಿದ್ದ ಭತ್ತದಿಂದಾಗಿ ಹಸಿವು ನೀಗುತ್ತಿತ್ತು. ಆದರೆ ಕೊರೊನಾ ಕೊನೆಯ ಹಂತ ತಲುಪಿದ ಊರಿನ ಸ್ಥಿತಿ ಜನಾರ್ದನ ಭಟ್ಟರ ಹೊಟ್ಟೆಯಲ್ಲಿ ಸಂಕಟವೆಬ್ಬಿಸುತ್ತಿತ್ತು. ದಿನದಿಂದ ದಿನಕ್ಕೆ ರೋಗದ ಭೀಕರತೆ ಹೆಚ್ಚಾಗುತ್ತ, ಪರಿಸ್ಥಿತಿ ಮತ್ತಷ್ಟು ವಿಷಮಗೊಳ್ಳುತ್ತಲೇ ಸಾಗಿತು. ಮಕ್ಕಳು, ಮುದುಕರ ಶೋಚನೀಯ ಸ್ಥಿತಿ, ಜನರ ಪರದಾಟ, ಹೆಣಗಾಟವನ್ನು ಕಂಡು ಜನಾರ್ದನ ಭಟ್ಟರು ಮರುಗಿದರು. ಕೊರೊನಾ ತಾಂಡವವಾಡತೊಡಗಿತ್ತು. 
ಏನೋ ನಿರ್ಧರಿಸಿದವರಂತೆ ಭಟ್ಟರು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡರು. ಸುಧೀರನನ್ನು ಕರೆದರು. ತಮ್ಮ ಹೆಗಲ ಮೇಲಿದ್ದ ಉತ್ತರೀಯವನ್ನು ಮಗನ ಹೆಗಲ ಮೇಲೆ ಹಾಕಿ ಹೇಳಿದರು. ‘ಸುಧೀ, ಇವತ್ತಿಂದ ನನ್ನ ನಿನ್ನ ಪಾತ್ರ ಅದಲು ಬದಲಾಗಬೇಕು. ಇನ್ನು ದೇವಸ್ಥಾನದ ಪೂಜೆ ಮತ್ತು ಮನೆ ಕಡೆಯ ಜವಾಬ್ದಾರಿ ನಿನ್ನದೇ. ಈ ಕೊರೊನಾ ಎಂಬ ಮಾರಿ ನಮ್ಮ ಊರಿನ ಹೆಬ್ಬಾಗಿಲಿಗೇ ಬಂದು ನಿಂತಿದೆ. ನನ್ನೂರಿನ ಜನರ ಈ ಸ್ಥಿತಿಯನ್ನು ನಾನು ನೋಡಲಾರೆ. ಆ ದೇವರು ನನ್ನಲ್ಲಿ ಇನ್ನೂ ಶಕ್ತಿ ಉಳಿಸಿದ್ದಾನೆ. ನಾನು ಕೊರೊನಾ ರೋಗಪೀಡಿತರಿಗೆ ಸ್ವಯಂಸೇವಕನಾಗಿ ಕೆಲಸ ಮಾಡಲು ಹೋಗುತ್ತಿದ್ದೇನೆ. ರೋಗಿಗಳ ಮೂಲಭೂತ ಸೌಕರ್ಯ, ಶುಶ್ರೂಷೆ, ಪೊಲೀಸ್, ಡಾಕ್ಟರುಗಳಿಗೆ ನನ್ನಿಂದಾಗಬಲ್ಲ ಸಹಾಯವನ್ನು ಮಾಡುತ್ತ, ಸಾಮಾಜಿಕ ಕಾರ್ಯಕರ್ತನಾಗಿ ಬೀದಿಯಲ್ಲಿ ನಿಂತು ಸೇವೆ ಮಾಡುವ ಮನಸ್ಸಾಗಿದೆ. ನನ್ನನ್ನು ತಡೆಯಬೇಡ. ನೀನು ಜೋಪಾನ’ ಎಂದವರು ಹೊರಟೇಬಿಟ್ಟರು. 

ತಮ್ಮೆಲ್ಲ ಶಕ್ತಿಯನ್ನು ಭಟ್ಟರು ಊರ ಜನರ ಸೇವೆಗೆ ಧಾರೆ ಎರೆಯತೊಡಗಿದರು. ಕೊರೊನಾ ವೈರಸ್ ಹರಡುವ ಬಗ್ಗೆ ಜನಜಾಗೃತಿ ಮೂಡಿಸುವುದು, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಬಳಕೆಯ ಬಗ್ಗೆ ಮಾಹಿತಿ ನೀಡುವುದು, ಜನರಿಗೆ ಔಷಧಿ ತಲುಪಿಸುವುದು, ಕೆಲವೊಮ್ಮೆ ಆಸ್ಪತ್ರೆಯಲ್ಲಿ ಸೋಷಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡಿಸುವ ಕೆಲಸವನ್ನು ಕೂಡ ಗೈಡ್ ಲೈನ್ ಪ್ರಕಾರ ಮಾಡುತ್ತಿದ್ದರು. ಪರಮೇಶ್ವರನ ಪೂಜೆಯ ತೀರ್ಥ ಕುಡಿಯದ ದಿನವೇ ಇಲ್ಲ ಎಂಬಂತಿದ್ದ ಭಟ್ಟರು ನಿಂತಲ್ಲಿಯೇ ನೀಲಕಂಠನನ್ನು ಸ್ಮರಿಸಿದರು.

ಇತ್ತ ಸುಧೀರ ಪೂರ್ತಿ ಹೊಸ ಮನುಷ್ಯನಾಗಿದ್ದ. ಸಮಯಕ್ಕೆ ಸರಿಯಾಗಿ ಅಡುಗೆ, ಪೂಜೆ ಮತ್ತು ಮನೆಯ ಎಲ್ಲ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸತೊಡಗಿದ. ಒಂದೆಡೆ ಒಣ ಮರ ಮುರಿದು ಬೀಳುವುದು, ಇನ್ನೆಲ್ಲೋ ಹೊಸ ಚಿಗುರು ಮೂಡುವುದು ಎರಡೂ ಪ್ರಕೃತಿಯಲ್ಲಿ ಸಹಜವೆಂಬಂತೆ, ಸುಧೀರನ ಜೀವನ ಹೊಸ ಹಾದಿ ಹಿಡಿದು ಹಸಿರಾಗತೊಡಗಿತ್ತು. ದಿನವೂ ದೇವಸ್ಥಾನಕ್ಕೆ ಬರುತ್ತಿದ್ದ ಶಾಂತಲಾ ಈಗ ಸುಧೀರನಿಗೆ ವಿಶೇಷವೆನಿಸತೊಡಗಿದ್ದಳು. ಸ್ವಲ್ಪ ಕುಂಟುತ್ತಿದ್ದ ಶಾಂತಲಾ ಎಣ್ಣೆಗಪ್ಪಿನ ಬಣ್ಣದವಳು, ನೋಡಲು ಸುಂದರಿಯಲ್ಲ. ಅದೇ ಕಾರಣಕ್ಕೆ ಅವಳಿಗೆ ಇನ್ನೂ ಮದುವೆಯಾಗಿರಲಿಲ್ಲ. ದಿನಾಲು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದವಳನ್ನು ಸುಧೀರ ನೋಡದವನೇನೂ ಅಲ್ಲ. ಆದರೆ ಮೊದಲು ಅವಳಲ್ಲಿ ಕಾಣದ ಸೌಂದರ್ಯ, ವಿಶೇಷತೆ ಇತ್ತೀಚೆಗೆ ಅವಳಲ್ಲಿ ಅವನಿಗೆ ಕಾಣುತ್ತಿತ್ತು.ಕ್ರಮೇಣ ಕಣ್ಣುಗಳು ಪರಸ್ಪರ ಸಂಧಿಸಿದವು. ಭೇಟಿ, ಮಾತುಕತೆ ಇಬ್ಬರನ್ನೂ ಹತ್ತಿರ ತಂದಿತ್ತು. ಶಾಂತಲಾ ಸುಧೀರನ ಮನ ತುಂಬಿದ್ದಳು. ಸುಧೀರನ ಬದುಕಿನಲ್ಲಿ ಒಳಗಿನಿಂದ ಹುಟ್ಟಿದ ಪ್ರೇಮವೆಂಬ ಬೀಜ, ಹೊರಗೆ ಶಾಂತಲಾಳ ಅನುರಾಗದಲ್ಲಿ ಮರವಾಗಿತ್ತು.

***
ಕೊರೊನಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತ ಸಾಗಿದಂತೆ, ದೇವಸ್ಥಾನಕ್ಕೂ ಜನ ಬರುವುದು ನಿಂತಿತು. ಕೊರೊನಾ ಸ್ವಯಂಸೇವಕರಾದ ನಂತರ ಭಟ್ಟರು ಮನೆ, ಮಗನಿಂದ ಅಂತರ ಕಾಪಾಡಿಕೊಳ್ಳಲು ತಮ್ಮ ವಾಸ್ತವ್ಯವನ್ನು ಮನೆಯ ಕಡಿಮಾಡಿಗೆ ಬದಲಾಯಿಸಿಕೊಂಡರು. ಸುಧೀರ ಅಡುಗೆ ಮಾಡಿ, ಅಲ್ಲಿ ತಂದಿಟ್ಟು ಹೋಗುತ್ತಿದ್ದ. ಸಮಯವಾದಾಗ ಭಟ್ಟರು ಬಂದು ಊಟ ಮಾಡುತ್ತಿದ್ದರು. ಪರಸ್ಪರರ ಪಾತ್ರಗಳು ಅದಲು ಬದಲಾಗಿದ್ದವು.

ಅಂತೂ ಸಾಕಷ್ಟು ಬಲಿ ತೆಗೆದುಕೊಂಡರೂ, ವೈದ್ಯರ, ಪೊಲೀಸರ, ಸರ್ಕಾರದ ನಿರಂತರ ಪ್ರಯತ್ನ, ಹೋರಾಟಕ್ಕೆ ಮಣಿದು ಕೊರೊನಾ ವ್ಯಾಧಿ ತನ್ನ ಅಟ್ಟಹಾಸವನ್ನು ನಿಲ್ಲಿಸಿತು. ಸಾವುನೋವುಗಳು ಕಡಿಮೆಯಾದವು. ಸೋಂಕಿತರ ಸಂಖ್ಯೆ ಇಳಿಮುಖವಾಗತೊಡಗಿ ಲೋಕ ಸಹಜ ಸ್ಥಿತಿಗೆ ಮರಳತೊಡಗಿತು. ಆದರೆ ನೂರಾರು ಜನರ ಸೇವೆ ಮಾಡಿದ್ದ ಜನಾರ್ದನ ಭಟ್ಟರಿಗೆ ಅದಾಗಲೇ ಕೊರೊನಾ ಸೋಂಕು ತಗುಲಿತ್ತು. ಅವರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಕೊರೊನಾ ಹಬ್ಬುತ್ತಿದ್ದ ಸಮಯದಲ್ಲಿ ಅವರ ಅನುಪಮ ಸೇವೆಯನ್ನು ಗುರುತಿಸಿ ಸರ್ಕಾರ ಅವರನ್ನು ಸ್ಮರಿಸಿತು. ಆದರೆ ಜನಸೇವೆಯಲ್ಲೇ ದೇವರನ್ನು ಕಂಡ ಜನಾರ್ದನ ಭಟ್ಟರು, ಚಿಕಿತ್ಸೆ ಫಲಕಾರಿಯಾಗದೇ ಪರಮೇಶ್ವರನ ಸನ್ನಿಧಿ ಸೇರಿಯಾಗಿತ್ತು. 

ಅಪ್ಪನ ಕ್ರಿಯಾಕರ್ಮಗಳನ್ನು ಪೂರೈಸಿ, ಅಧೀರನಾಗಿ ನಿಂತಿದ್ದ ಸುಧೀರನ ಬಳಿ ಶಾಂತಲಾ ಬಂದಳು. ಸಾಂತ್ವನ ಹೇಳುವ ರೀತಿಯಲ್ಲಿ ಅವನ ಹೆಗಲ ಮೇಲೆ ಕೈ ಇಟ್ಟಳು. ಕಣ್ಣಲ್ಲಿ ಕಣ್ಣಿಟ್ಟು ‘ನಿನ್ನ ಜೊತೆ ನಾನಿದ್ದೇನೆ’ ಎಂಬಂತೆ ನೋಡಿದಳು. ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ನಿನ್ನ ಜೊತೆಯಾಗಿರುವೆ ಎಂಬ ಆಶ್ವಾಸನೆ ಇತ್ತು ಆ ಕಂಗಳಲ್ಲಿ. ಸ್ವಲ್ಪ ಸಮಾಧಾನವಾದ ಮೇಲೆ ಸುಧೀರ ಹೇಳಿದ ‘ಶಾಂತಲಾ, ನನಗೆ ತಂದೆಯೂ ತಾಯಿಯೂ ಆಗಿದ್ದ ನನ್ನ ಅಪ್ಪ ಬದುಕಿದ ರೀತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಮೊದಲು ನನಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಆ ಪರಮೇಶ್ವರನ ಪೂಜೆಯಲ್ಲೇ ನೆಮ್ಮದಿ ಕಂಡರು. ದೇವರ ಪೂಜೆ, ಪುನಸ್ಕಾರ ಮಾಡುತ್ತಿದ್ದವರು ಊರಿಗೆ ಕೊರೊನಾ ಎಂಬ ಮಾರಿ ಬಂದಾಗ ಮಡಿ, ಮೈಲಿಗೆಯನ್ನು ಬಿಟ್ಟು ಕೆಲಸ ಮಾಡುತ್ತ, ಜನಸೇವೆಯ ಕಾಯಕದಲ್ಲೇ ಕೈಲಾಸವನ್ನು ಕಂಡರು. ಎಲ್ಲಿಯೂ ಧರ್ಮವನ್ನು ಬಿಡದೇ ಬಾಳಿದರು. ಅವರ ನೆನಪೇ ನನ್ನ ಮುಂದಿನ ಬದುಕಿಗೆ ದಾರಿದೀಪ’.ಇಬ್ಬರ ಕಣ್ಣುಗಳಿಂದಲೂ ಅಶ್ರುನಮನವೆಂಬಂತೆ ಹನಿಗಳು ನೆಲಕ್ಕುರುಳಿದವು.

-ಡಾ. ಅಜಿತ್ ಹರೀಶಿ


ಪರಿಚಯ: ಅಜಿತ್ ಹುಟ್ಟೂರು ಹರೀಶಿಯಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಾ, ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ ( ಕಾವ್ಯ ಮಾಣಿಕ್ಯ ಪ್ರಶಸ್ತಿ ), ಸೂರು ಸೆರೆಹಿಡಿಯದ ಹನಿಗಳು ಪ್ರಕಟಿತ ಕವನ ಸಂಕಲನಗಳು. ಪರಿಧಾವಿ ಮತ್ತು ಕಾಮೋಲ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು ಎಂಬ ಅಂಕಣ ಬರಹದ ಗುಚ್ಛ ಪುಸ್ತಕವಾಗಿ ಪ್ರಕಟಗೊಂಡಿದೆ. ಮೂಚಿಮ್ಮ ಕಥಾಸಂಕಲನ ಇವರ ಆರನೇಯ ಕೃತಿ.

ಕನ್ನಡ ಪ್ರತಿಲಿಪಿ ರಾಷ್ಟ್ರೀಯ ಹಾಗೂ ಕಿರುಗಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಸಂಪದ ಸಾಲು ಪತ್ರಿಕೆಯ ಜಾಗತಿಕ ಕವನ ಸ್ಪರ್ಧೆಯಲ್ಲಿ ವಿಜೇತರು. ಇವರ  ‘ಕನ್ನಡಿಗಂಟದ ಬಿಂದಿ’ಕಥೆಗೆ ಮುಂಬೈನ ಕನ್ನಡ ಭವನ ಎಜುಕೇಷನ್ ಸೊಸೈಟಿಯವರ ರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಇವರ ‘ತಿರುವು’ ಕಥೆ ಹಿಂದಿ ಭಾಷೆಗೆ ‘ಮೋಡ್’ ಎಂಬ ಹೆಸರಿನಲ್ಲಿ  ಅನುವಾದಗೊಂಡಿದೆ. ಇವರನ್ನು  ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೪ ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ. 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
GIRIJA JNANASUNDAR
GIRIJA JNANASUNDAR
3 years ago

Inspiring story sir

1
0
Would love your thoughts, please comment.x
()
x