ಯಶಸ್ಸಿನ ಬೆನ್ನು ಹತ್ತಿ:ಪ್ರಸಾದ್ ಕೆ.

 

ರಿಚರ್ಡ್ ಬ್ರಾನ್‌ಸನ್! ಈ ಶತಮಾನದ ಓರ್ವ ಯಶಸ್ವಿ ಉದ್ಯಮಿ, ಲೇಖಕ, ಸಾಹಸಿ ಮತ್ತು ವರ್ಜಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷ. ವಿಶ್ವದಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳ ಮಾಲೀಕ. ಸಂಗೀತ, ಏರ್ ಲೈನ್ಸ್, ಮೊಬೈಲ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವರ್ಜಿನ್ ಸಮೂಹ ಸಂಸ್ಥೆಗಳು ಹಬ್ಬಿಕೊಂಡಿವೆ. ಇವರ ಆತ್ಮಕಥೆ ’ಲೂಸಿಂಗ್ ಮೈ ವರ್ಜಿನಿಟಿ’ ಜಗತ್ತಿನಾದ್ಯಂತ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಿಕರಿಯಾದ ಬಹುಚರ್ಚಿತ ಕೃತಿ. ರಿಚರ್ಡ್ ತನ್ನ ಜೀವನದಲ್ಲಿ ಅನುಭವಗಳಿಂದ ಕಲಿತ ಪಾಠಗಳನ್ನು ’ಸ್ಕ್ರ್ಯೂ ಇಟ್, ಲೆಟ್ಸ್ ಡು ಇಟ್’ ಎಂಬ ಕೃತಿಯಲ್ಲಿ ತಮ್ಮದೇ ಆದ ಅದ್ಭುತವಾದ ಬರಹ ಶೈಲಿಯಿಂದ ನಮ್ಮ ಮುಂದಿರಿಸಿದ್ದಾರೆ. ೨೦೦೬ ರಲ್ಲಿ ಬಿಡುಗಡೆಯಾದ ಈ ಕೃತಿ ಹಲವು ಮರುಮುದ್ರಣಗಳನ್ನೂ ಕಂಡಿದೆ. ಅರವತ್ತರ ಅರಳುಮರಳಿನ ವಯಸ್ಸಿನಲ್ಲೂ ಹದಿನಾರರ ಹರೆಯದ ಹುಡುಗನಂತೆ ಲವಲವಿಕೆಯಿಂದ ಬಲೂನು-ದೋಣಿ-ಅಂತರಿಕ್ಷ ಎಂದು ದೇಶದೇಶ ಸುತ್ತುವ ಇವರು ಜೀವನೋತ್ಸಾಹದ ಚಿಲುಮೆ. ಶಾರ್ಟ್ ಆಂಡ್ ಸ್ವೀಟ್ ಶೈಲಿಯಲ್ಲಿ ಮನಮುಟ್ಟುವಂತೆ ಬರೆದ ರಿಚರ್ಡ್ ರವರ ಸಾಹಸಗಾಥೆಯ ಒಂದೆರಡು ಅಧ್ಯಾಯಗಳನ್ನು ಅನುವಾದಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಮುಂದಿನದನ್ನು ಅವರ ಮಾತಲ್ಲೇ ಓದುವಿರಂತೆ.      

"ಈವರೆಗೆ ನಾನು ನನ್ನ ಬಹಳಷ್ಟು ಕಾರ್ಯಗಳಲ್ಲಿ ಯಶಸ್ಸನ್ನು ಕಂಡಿದ್ದೇನೆಂಬುದನ್ನು ನಾನು ಅಲ್ಲಗಳೆಯುತ್ತಿಲ್ಲ. ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆಂದು ಜನರು ಹೇಳುತ್ತಾರೆ. ಇನ್ನು ಕೆಲವರು ’ನಿಮ್ಮ ಯಶಸ್ಸಿನ ರಹಸ್ಯವೇನು’ ಎಂದು ಕೇಳುತ್ತಾ ಸದಾ ಬೆನ್ನು ಬೀಳುತ್ತಾರೆ. ನಿಜಕ್ಕೂ ವಿಷಯವೇನೆಂದರೆ ನಾನು ಇಷ್ಟು ಹಣವನ್ನು ಹೇಗೆ ಕೂಡಿಹಾಕಿದೆ ಎಂಬುದೇ ಅವರ ಆಸಕ್ತಿ. ಅಪಾರವಾದ ಹಣವನ್ನು ಹೇಗೆ ಗಳಿಸುವುದು ಎಂಬುದು ಅವರ ಪ್ರಶ್ನೆ.  ಈಗಿನ ದಿನಗಳಲ್ಲಿ ಎಲ್ಲರೂ ಬಿಲಿಯನೇರ್ ಆಗಬಯಸುತ್ತಾರೆ ಮತ್ತು ಅಂಥಾ ಒಂದು ಆಸೆ ಸ್ವಾಭಾವಿಕ ಕೂಡ. 

ನನ್ನ ಮಟ್ಟಿಗೆ ಅಂತಹಾ ಯಾವುದೇ ರಹಸ್ಯವಿಲ್ಲವೆಂದು ನಾನು ಪ್ರತೀಬಾರಿಯೂ ಇಂಥಾ ಉತ್ಸಾಹಿಗಳಿಗೆ ಹೇಳಿದ್ದನ್ನೇ ಹೇಳುತ್ತೇನೆ. ಉದ್ಯಮದ ಜಗತ್ತಿನಲ್ಲಿ ಯಶಸ್ಸನ್ನು ಕಾಣಲು ಯಾವುದೇ ರೆಡಿಮೇಡ್ ಫಾರ್ಮುಲಾಗಳು ಇಲ್ಲ. ನಾನು ಕಠಿಣ ಪರಿಶ್ರಮವನ್ನಷ್ಟೇ ಮಾಡಿದೆ. ಖಂಡಿತವಾಗಿ ಗೆಲ್ಲೇ ಗೆಲ್ಲುತ್ತೇನೆಂಬ ಛಲವಿತ್ತು ಮತ್ತು ಅದರಂತೆ ಅದೇ ಗುರಿಯನ್ನರಸಿ ಮುನ್ನಡೆದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನನ್ನ ಪ್ರತಿಯೊಂದು ಕೆಲಸವನ್ನೂ, ಅದರ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೆ. 

೧೯೯೭ ರಲ್ಲಿ ಬಿಸಿ ಏರ್ ಬಲೂನಿನಲ್ಲಿ ಪ್ರಪಂಚ ಪರ್ಯಟನೆಗೆ ಹೊರಟಾಗಲೂ ಒಮ್ಮೆ ತುಂಬಾ ರಿಸ್ಕ್ ಅನಿಸಿತ್ತು. ನಾನು ಸುರಕ್ಷಿತವಾಗಿ ಹಿಂತಿರುಗುತ್ತೇನೆಯೇ ಎಂಬ ಖಾತ್ರಿಯಿರಲಿಲ್ಲ. ಕೊನೆಯದಾಗಿ ಹೊರಡುವ ಮುನ್ನ ನನ್ನ ಮುದ್ದಿನ ಮಕ್ಕಳಾದ ಹಾಲಿ ಮತ್ತು ಸ್ಯಾಮ್ ಗೆ ಪತ್ರವೊಂದನ್ನು ಬರೆದೆ. "ಜೀವನವನ್ನು ಪೂರ್ತಿಯಾಗಿ ಅನುಭವಿಸಿ. ಅದರ ಒಂದೊಂದು ಕ್ಷಣವನ್ನೂ ತಮ್ಮದಾಗಿಸಿಕೊಳ್ಳಿ. ಅಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳಿ" ಎಂಬುದು ಅದರ ಸಾರಾಂಶವಾಗಿತ್ತು. ನಾನು ಜೀವನದುದ್ದಕ್ಕೂ ನಂಬಿಕೊಂಡು ಬಂದಿರುವ ಸತ್ಯವೇ ಇದು. ಅಮೂಲ್ಯ ಸಮಯವನ್ನು ಹಾಳುಮಾಡಬೇಡಿ. ನಿಮ್ಮ ಕುಟುಂಬವನ್ನು ಪ್ರೀತಿಸಿ. ಜೀವನದ ಪ್ರತಿಯೊಂದು ಕ್ಷಣವನ್ನೂ ಅನುಭವಿಸಿ. ಈ ಪಟ್ಟಿಯಲ್ಲಿ ಹಣ ಗಳಿಸುವ ಯಾವುದೇ ಮಾಸ್ಟರ್ ಪ್ಲಾನ್ ಗಳಿಲ್ಲವೆಂಬುದನ್ನೂ ಗಮನಿಸಿ. 

ಯಾವತ್ತೂ ಬಿಲಿಯನೇರ್ ಆಗಬೇಕೆಂಬ ಏಕಮಾತ್ರ ಗುರಿಯನ್ನಿಟ್ಟು ನಾನು ಜೀವಿಸಿಲ್ಲ. ಪ್ರತೀ ಸಾಹಸದಲ್ಲೂ, ರಿಸ್ಕ್ ತೆಗೆದುಕೊಳ್ಳುವುದರಲ್ಲೂ ಇರುವ ರೋಮಾಂಚಕತೆಯನ್ನಷ್ಟೇ ನಾನು ಬಯಸಿದ್ದು ಮತ್ತು ಈಗಲೂ ಬಯಸುತ್ತಿರುವುದು. ನಮಗೆ ಹಣದ ಅವಶ್ಯಕತೆಯಿಲ್ಲವೆಂದು ನಾನು ಹೇಳುತ್ತಿಲ್ಲ. ನಾವೇನೂ ಕಾಡುಮನುಷ್ಯರಲ್ಲ. ಬೇರು – ಕಾಯಿಗಳನ್ನು ತಿಂದು ಜೀವಿಸುವವರಲ್ಲ ನಾವು. ಈ ಕಾಲಘಟ್ಟದಲ್ಲಿ ಒಂದು ಸಂತೃಪ್ತಿಯ ಜೀವನವನ್ನು ನಡೆಸಲೂ ತಕ್ಕಮಟ್ಟಿನ ಬ್ಯಾಂಕ್ ಬ್ಯಾಲೆನ್ಸ್ ಬೇಕು. ಮುಂಜಾನೆಯ ಒಂದು ಉಪಾಹಾರ, ಒಂದು ಮದ್ಯಾಹ್ನದ ಭೋಜನ, ಒಂದು ರಾತ್ರಿಯೂಟ ಇಷ್ಟಿದ್ದರೆ ನನಗೆ ಸಾಕು ಎಂದು ಯಾವತ್ತೋ ಒಮ್ಮೆ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಹಣ ಗಳಿಸಲು ನಾನು ಉದ್ಯಮಕ್ಕೆ ಬರಲಿಲ್ಲ. ಆದರೆ ಒಂದು ವಿಷಯವಂತೂ ನನಗೆ ಗೊತ್ತಿತ್ತು. ಉದ್ಯಮದ ಜಗತ್ತಿನಲ್ಲಿ ಸಾಹಸಗಳಿದ್ದವು, ರಿಸ್ಕ್ ಗಳು ಇದ್ದವು ಮತ್ತು ಒಂದೊಂದು ಸಾಹಸದಲ್ಲೂ ಗುರಿಗಳಿದ್ದವು ಮತ್ತು ಅದನ್ನು ಗೆದ್ದು ಬೀಗುವ ಕ್ಷಣಗಳಿದ್ದವು. ನನ್ನ ಅಭಿಪ್ರಾಯವೇನೆಂದರೆ ಯಾವ ಕೆಲಸವನ್ನು ನಾವು ಸಂತೋಷದಿಂದ ಮಾಡುತ್ತಿದ್ದೇವೋ ಅಲ್ಲಿ ಯಶಸ್ಸೂ ಇದೆ ಮತ್ತು ಗಳಿಕೆಯೂ ಇದೆ. ಈ ಕೆಲಸವೇ ನನ್ನ ಸಂತೋಷದ ಸೆಲೆಯೋ ಹೇಗೆ ಎಂದು ಕೆಲವೊಮ್ಮೆ ನನಗೆ ನಾನೇ ಕೇಳಿಕೊಳ್ಳುತ್ತೇನೆ ನಾನು. ಹೌದು ಎನಿಸುತ್ತದೆ. ಈ ಪರಿಶ್ರಮದಲ್ಲಿರುವ ಸಂತೋಷವು ಹಣ ಮತ್ತು ವಿಖ್ಯಾತಿಯು ಕೊಡುವ ಸಂತಸಕ್ಕಿಂತಲೂ ನೂರು ಪಟ್ಟು ದೊಡ್ಡದು. ಯಾವುದೇ ಕೆಲಸವು ಮೊದಲಿನಷ್ಟು ಸಂತೋಷವನ್ನು ಕೊಡುತ್ತಿಲ್ಲವೆಂದು ಭಾಸವಾದರೆ ಅದಕ್ಕೇನಾದರೂ ಕಾರಣಗಳಿವೆಯೇ ಎಂದು ಹುಡುಕತೊಡಗುತ್ತೇನೆ. ಯಾವುದೇ ಪರಿಹಾರವಿಲ್ಲವೆಂದು ಗೊತ್ತಾದ ಕೂಡಲೇ ಅದನ್ನು ಬಿಟ್ಟು ಮುಂದಕ್ಕೆ ನಡೆಯುತ್ತೇನೆ. 

ಈಗ ಸಂತೋಷವನ್ನು ಕೊಡುವ ಕೆಲಸದಿಂದಷ್ಟೇ ಹಣ ಗಳಿಸುವುದು ಹೇಗೆ ಎಂದು ನೀವು ನನ್ನನ್ನು ಕೇಳಬಹುದು. ಅದು ಯಾವಾಗಲೂ ಯಶಸ್ವಿಯಾಗುವುದಿಲ್ಲವೆಂಬುದೂ ಅಷ್ಟೇ ಸತ್ಯ. ನನ್ನ ದಾರಿಯಲ್ಲೂ ಸಾಕಷ್ಟು ಏಳು ಬೀಳುಗಳಿದ್ದವು. ಅಲ್ಪ ಸ್ವಲ್ಪ ಅದೃಷ್ಟವೂ ಜೊತೆಗಿತ್ತು ಎನ್ನಿ. ಒಟ್ಟಾರೆ ಸಾರಾಂಶವೆಂದರೆ ನಾನು ಕಷ್ಟಪಟ್ಟು ದುಡಿದೆ, ಹಣ ಗಳಿಸಿದೆ ಮತ್ತು ಮೋಜನ್ನೂ ಮಾಡಿದೆ.

ಉದ್ಯಮದ ಜಗತ್ತಿನ ನನ್ನ ಮೊದಲ ಅನುಭವಗಳು ಗೆಲುವಿನದ್ದಾಗಿರಲಿಲ್ಲ. ಈ ಸೋಲುಗಳು ನನಗೆ ಮರೆಯಲಾರದ ಪಾಠಗಳಾದವು. ಒಂಭತ್ತು ವರ್ಷದ ಹುಡುಗನಾಗಿದ್ದಾಗ ನಾನು ಮೊದಲ ಬಾರಿಗೆ ಈ ಹಣಗಳಿಸುವ ಸಾಹಸಕ್ಕಿಳಿದೆ. ಒಂದು ಈಸ್ಟರ್ ಹಬ್ಬದ ರಾತ್ರಿ ಇದಕ್ಕೆ ಮುನ್ನುಡಿಯನ್ನು ಬರೆಯಿತು. ಕ್ರಿಸ್ಮಸ್ ಗಿಡಗಳನ್ನು ಮಾರುವ ಪ್ಲಾನ್ ಆಗಿತ್ತು ಇದು. ನಾನು ಮತ್ತು ನನ್ನ ಅಚ್ಚುಮೆಚ್ಚಿನ ಗೆಳೆಯ ನಿಕ್ ಪೊವೆಲ್ ಸುಮಾರು ನಾಲ್ಕು ನೂರು ಬೀಜಗಳನ್ನು ಇದಕ್ಕಾಗಿ ಖರೀದಿಸಿದೆವು. ಮನೆಯ ಹಿಂದೆಯೇ ಇರುವ ಸಣ್ಣ ಜಾಗದಲ್ಲಿ ಬೀಜಗಳನ್ನು ಬಿತ್ತಿದ್ದೂ ಆಯಿತು. ಮಣ್ಣಿನೊಂದಿಗೆ ಈ ನಮ್ಮ ಆಟ ಸಾಕಷ್ಟು ಮೋಜನ್ನೂ ತರುತ್ತಿತ್ತು. ನಾವಿಬ್ಬರೂ ಕ್ರಿಸ್ಮಸ್ ಬರುವಷ್ಟರಲ್ಲಿ ಬೀಜ ಗಿಡವಾಗಿ ಬೆಳೆವುದನ್ನೇ ನೋಡುವ ತವಕದಲ್ಲಿದ್ದೆವು. ಈ ಪ್ರಕ್ರಿಯೆಗೆ ಬೇಕಾಗಿದ್ದ ಒಟ್ಟಾರೆ ಸಮಯ ಒಂದೂವರೆ ವರ್ಷ. ಈ ಸಾಹಸ ನನ್ನನ್ನು ಗಣಿತದಲ್ಲಿ ತಕ್ಕಮಟ್ಟಿನ ಆಸಕ್ತಿಯನ್ನುಂಟುಮಾಡಿಸಿತು. ಶಾಲೆಯ ಗಣಿತದಲ್ಲಿ ನಾನು ಯಾವಾಗಲೂ ದಡ್ಡನಾಗಿದ್ದೆ. ಪೇಪರುಗಳು ಅಸಂಬದ್ಧ ಎನಿಸತೊಡಗಿದ್ದವು. ಆದರೆ ಈ ಕ್ರಿಸ್ಮಸ್ ಗಿಡಗಳ ಬ್ಯುಸಿನೆಸ್ ಗಣಿತವನ್ನು ಪ್ರೀತಿಯಿಂದ ಆಸಕ್ತಿಯಿಂದ ಮಾಡುತ್ತಿದ್ದೆ. ಬೀಜದ ಒಂದೊಂದು ಚೀಲದ ದರ ೫ ಡಾಲರ್ ಗಳಾಗಿದ್ದರೆ, ಒಂದೊಂದು ಗಿಡವನ್ನು ೨ ಡಾಲರ್ ದರದಲ್ಲಿ ನಾವು ಮಾರಲು ನಿರ್ಧರಿಸಿದ್ದೆವು. ಈ ಮೂಲಕ ಏಳುನೂರಾ ತೊಂಭತ್ತೈದು ಡಾಲರುಗಳನ್ನು ಗಳಿಸುವ ಗುರಿಯಾಗಿತ್ತು ನಮ್ಮದು. ಆ ಸಣ್ಣ ವಯಸ್ಸಿನಲ್ಲೇ ದೂರದ ಯೋಜನೆಗಳನ್ನು ನಾನು ಹಾಕಿಕೊಳ್ಳುತ್ತಿದ್ದೆ. ಹಣವು ಮರದಲ್ಲಿ ಬೆಳೆಯುವುದಿಲ್ಲವೆಂಬ ಸತ್ಯ ನನಗೆ ಆಗ ಗೊತ್ತಿರಲಿಲ್ಲ. ನಮ್ಮಿಬ್ಬರ ದುರಾದೃಷ್ಟವೇ ಎಂಬಂತೆ ಮೊಲಗಳು ಎಲ್ಲಾ ಬೀಜಗಳನ್ನು ಒಂದೂ ಬಿಡದಂತೆ ತಿಂದುಹಾಕಿದವು. ಆಮೇಲೆ ಸೇಡು ತೀರಿಸಿಕೊಂಡಂತೆ ನಾವು ಮೊಲಗಳನ್ನು ಗುಂಡಿಕ್ಕಿ ಕೊಂದು ಹಾಕಿದೆವು ಎಂಬುದು ಬೇರೆ ವಿಷಯ. ಈಗ ಅದನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ. ಒಂದೊಂದು ಮೊಲವನ್ನು ಒಂದು ಶಿಲ್ಲಿಂಗ್ ದರದಲ್ಲಿ ನಾವು ಕಸಾಯಿಖಾನೆಗೆ ನೀಡಿದೆವು. ಅಂತೂ ಇಂತೂ ಚಿಲ್ಲರೆ ಹಣ ನಮ್ಮ ಜೇಬು ಸೇರಿತು." 


 

"ಸೂರ್ಯರಶ್ಮಿಯನ್ನು ಹೊದ್ದು ಮಲಗಿದ ಸಮುದ್ರತೀರಗಳಲ್ಲಿ ಏನೇನು ಹೊಳೆಯುತ್ತದೆಂಬುದನ್ನು ಅನುಭವಿಸಿಯೇ ಹೇಳಬೇಕು. ಇಂಥದ್ದೇ ಒಂದು ವಿಹಾರದ ಸಮಯದಲ್ಲೇ ದ್ವೀಪವೊಂದನ್ನು ಕೊಳ್ಳುವ ಮತ್ತು ಏರ್ ಲೈನ್ಸ್ ಐಡಿಯಾಗಳು ನನಗೆ ಹೊಳೆದದ್ದು. ೧೯೭೬ ರ ಸಮಯದಲ್ಲಿ ವರ್ಜಿನ್ ಮ್ಯೂಸಿಕ್ ಬೆಳೆಸುವುದರಲ್ಲಿ ನಾನು ಮಗ್ನನಾಗಿದ್ದೆ. ’ಟ್ಯೂಬ್ಯೂಲಾರ್ ಬೆಲ್ಸ್’ ಎಂಬ ಹೆಸರಿನಲ್ಲಿ ೧೯೭೩ ರಲ್ಲಿ ನಮ್ಮ ಸಂಸ್ಥೆಯಿಂದ ಮೂಡಿಬಂದ ಮೈಕ್ ಓಲ್ಡ್ ಫೀಲ್ಡ್ ನ ಮ್ಯೂಸಿಕ್ ಆಲ್ಬಮ್ ಆಗಲೇ ಜನಪ್ರಿಯತೆಯನ್ನು ಗಳಿಸಿತ್ತು. ಈ ಯಶಸ್ಸಿನ ಬೆನ್ನಲ್ಲೇ ’ದ ಸೆಕ್ಸ್ ಪಿಸ್ಟೋಲ್’ ಎಂಬ ಇನ್ನೊಂದು ಬ್ಯಾಂಡ್ ನಮ್ಮ ಜೊತೆ ಗುರುತಿಸಿಕೊಂಡಿತ್ತು. ಅಂತಹಾ ಬಿಡುವಿಲ್ಲದ ದಿನಗಳು ಅವಾಗಿದ್ದರೂ ನಮ್ಮ ಎಂದಿನ ಮೋಜಿಗೇನೂ ಕಮ್ಮಿಯಿರಲಿಲ್ಲ. ಜನಸಮೂಹವಂತೂ ’ಟ್ಯೂಬ್ಯೂಲಾರ್ ಬೆಲ್ಸ್’ ಯಶಸ್ಸಿನ ಗುಂಗಲ್ಲಿದ್ದ ನನಗೆ ಆಗಲೇ ’ಅದೃಷ್ಟವಂತ’ನ ಪಟ್ಟಕಟ್ಟಿತ್ತು. ಅದೃಷ್ಟವಿತ್ತು ಹೌದು ಆದರೆ ಅದನ್ನು ನಾವು ನಮ್ಮೆಡೆಗೆ ನಾವು ಸೆಳೆದುಕೊಂಡಿದ್ದೆವು. ಎಷ್ಟೋ ಮ್ಯೂಸಿಕ್ ಕಂಪನಿಗಳು ಈ ಹಾಡನ್ನು ತಿರಸ್ಕರಿಸಿದ್ದವು. ಆದರೆ ನಾವು ಒಂದು ಅವಕಾಶವನ್ನು ಮೈಕ್ ಗೆ ಕೊಟ್ಟೆವು. ಈ ಆಲ್ಬಮ್ ನಲ್ಲಿ ನಮಗೆ ಅಪಾರ ವಿಶ್ವಾಸವಿತ್ತು. ಏನಾದರೂ ಮಾಡಿ ಈ ಆಲ್ಬಮನ್ನು ಹಿಟ್ ಮಾಡುವ ಗುರಿ ನಮ್ಮೆದುರಿಗಿತ್ತು. ಈ ನಿಟ್ಟಿನಲ್ಲಿ ಇತರರಿಗಿಂತ ವಿಶಿಷ್ಟವಾಗಿ ಯೋಚಿಸಲೇಬೇಕಾಗಿದ್ದ ಅನಿವಾರ್ಯತೆ ನಮಗಿತ್ತು. ಆಗಿನ ಸಮಯದಲ್ಲಿ ಮೈಕ್ ಒಂದು ಹೊಸ ಮುಖವಾದ ಕಾರಣ ಜಾನ್ ಪೀಲ್ ಕಂಠದಿಂದ ಈ ಆಲ್ಬಮ್ ನ ಹಾಡುಗಳನ್ನು ಅವನ ಷೋ ಒಂದರಲ್ಲಿ ಹಾಡಿಸಿದವು. ಜನರು ಸಂಗೀತದ ಉನ್ಮಾದದಿಂದ ವಿಶ್ವದಾದ್ಯಂತ ಹುಚ್ಚೆದ್ದರು. ನಮ್ಮ ಸೇಲ್ಸ್ ಗಳಿಕೆಯ ಮೊತ್ತ ಗಗನಕ್ಕೇರಿತು. ವರ್ಜಿನ್ ಮ್ಯೂಸಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಹಾಡಿನ ಅಸಲಿ ಸೂತ್ರಧಾರ ಮೈಕ್ ತನ್ನ ನಾಚಿಕೆಯ ಸ್ವಭಾವದಿಂದ ಪ್ರಮೋಷನ್ ಮಾಡಲು ಜಗತ್ತಿಗೆ ತನ್ನ ಮುಖವನ್ನು ತಿಂಗಳುಗಟ್ಟಲೆ ತೋರಿಸಲೇ ಇಲ್ಲ. ಆದರೆ ಇದಕ್ಕೂ ನಾವು ದಾರಿಯೊಂದನ್ನು ಕಂಡುಕೊಂಡೆವು. ಸಣ್ಣ ವೀಡಿಯೋ ತುಣುಕೊಂದನ್ನು ನಿರ್ದೇಶಿಸಿ ಟೆಲಿವಿಷನ್ ನಲ್ಲಿ ನಾವು ಹರಿಯಬಿಟ್ಟೆವು. ವಿಶ್ವವಿಖ್ಯಾತ ಹಾರರ್ ಚಲನಚಿತ್ರ ’ದ ಎಕ್ಸಾರ್ಸಿಸ್ಟ್’ ಈ ಹಾಡಿನ ಹಕ್ಕನ್ನು ನಮ್ಮಿಂದ ಖರೀದಿಸಿ ಚಲನಚಿತ್ರದಲ್ಲಿ ಬಳಸಿಕೊಂಡಿತು. ಸ್ವಾಭಾವಿಕವಾಗಿಯೇ ಕಂಪೆನಿಯ ಲಾಭದ ಮೊತ್ತ ನಂಬಲಸಾಧ್ಯವಾದ ರೀತಿಯಲ್ಲಿ ಏರಿ ಹಲವು ದಾಖಲೆಗಳನ್ನು ಮಣ್ಣುಮುಕ್ಕಿಸಿತು. ಇಷ್ಟೊಂದು ಯಶಸ್ಸನ್ನು ನಾವು ಒಮ್ಮೆಲೇ ಬಾಚಿದರೂ ನಾವು ಅಲ್ಲೇ ನಿಂತು ಮೈಮರೆಯಲಿಲ್ಲ. ಮುಂದೆಯೂ ನಮ್ಮ ವರ್ಜಿನ್ ಮ್ಯೂಸಿಕ್ ಹೊಸ ಪ್ರತಿಭೆಗಳನ್ನು ಜನರ ಮುಂದೆ ಸಾದರಪಡಿಸುತ್ತಲೇ ಮುಂದುವರಿಯಿತು. 

೧೯೭೭ ರ ಉತ್ತರಾರ್ಧ ನನ್ನ ಮಟ್ಟಿಗೆ ಅಷ್ಟೇನೂ ಹೊಂದಿಬರಲಿಲ್ಲ. ಒಂದು ಬ್ರೇಕ್ ಅನಿವಾರ್ಯವಾಗಿತ್ತು ಅನಿಸುತ್ತದೆ. ನನ್ನ ಪ್ರೇಯಸಿ ಜೋನ್ ಆಗಲೇ ನನ್ನಿಂದ ಬೇರೆಯಾಗಿದ್ದಳು. ಆ ದಿನಗಳು ದುಃಖಭರಿತವಾಗಿದ್ದರೂ ಏನಾದರೂ ಹೊಸದೊಂದು ಸಾಹಸಕ್ಕೆ ಧುಮುಕುವ ಹುಮ್ಮಸ್ಸು ಇನ್ನೂ ಜೀವಂತವಾಗಿತ್ತು. ಸಂಗೀತ ಮತ್ತು ಸಮುದ್ರ ತೀರದ ಬಿಸಿಲು ನನಗೆ ಮೊದಲಿನಿಂದಲೂ ಬಹುಪ್ರಿಯವಾಗಿದ್ದ ಸಂಗತಿಗಳು. ಚಳಿಗಾಲದ ಸಮಯದಲ್ಲಿ ಲಂಡನ್ ನಗರವನ್ನು ಬಿಟ್ಟು ಇನ್ನೆಲ್ಲಾದರೂ ಕಾಲಕಳೆಯುವುದು ನನ್ನ ಅಭ್ಯಾಸವಾಗಿತ್ತು. ಆದರೆ ಇದು ಈ ಬಾರಿ ಅನಿವಾರ್ಯವಾಯಿತು. ಲಂಡನ್ನಿನಿಂದ ಇರುವ ದೂರದ ಜಾಗ ಒಂದು ಹೊಸ ಸ್ವಾತಂತ್ರ್ಯವನ್ನು ಕೊಡುವುದರ ಜೊತೆಯೇ ಮನಸ್ಸಿಗೆ ಉಲ್ಲಾಸವನ್ನೂ, ಹೊಸ ಐಡಿಯಾಗಳನ್ನೂ ಕೊಡಬಹುದೆಂದು ಮನಸ್ಸಿನಲ್ಲೇ ಲೆಕ್ಕಹಾಕಿಕೊಂಡೆ. ಈ ಬಾರಿ ನಾನು ಸೀದಾ ಜಮೈಕಾಗೆ ತೆರಳಿದೆ. ನನ್ನ ಕೆಲಸ-ವಿಹಾರ ಎರಡೂ ಇಲ್ಲಿ ನಡೆಯುತ್ತಿದ್ದವು. ಸಮುದ್ರದಲ್ಲಿ ಈಜಿದೆ, ತೀರದಲ್ಲಿ ಅಡ್ಡಾಡಿದೆ. ಅಲ್ಲಲ್ಲಿ ಅಲೆದಾಡುವ ಜಮೈಕಾದ ’ರೆಗ್ಗೀ’ ಬ್ಯಾಂಡ್ ಗಳೆಂದು ಕರೆಯಲ್ಪಡುವ ತಂಡಗಳ ಸಂಗೀತವನ್ನೂ ಆಲಿಸಿದೆ. ಇವೆಲ್ಲದರ ನಡುವೆ ನಾವೊಂದು ಹೊಸ ಸಂಗೀತ ಪ್ರಕಾರವನ್ನು ಕಂಡುಕೊಂಡೆವು. ಗ್ರಾಮೀಣ ಡಿಸ್ಕ್ ಜಾಕಿಗಳು ಮತ್ತು ರೇಡಿಯೋ ಜಾಕಿಗಳು ಒಂದು ವಿಶಿಷ್ಟವಾದ ಶೈಲಿಯ ಸಂಗೀತವನ್ನು ಹಾಡಿಕೊಳ್ಳುತ್ತಾ ಜಮೈಕಾದ ತೀರಗಳಲ್ಲಿ ಜನರನ್ನು ಮನರಂಜಿಸುತ್ತಿದ್ದವು. ಇವರುಗಳನ್ನು ಅಲ್ಲಿಯ ಜನ ’ಟೋಸ್ಟರ್‍ಸ್’ ಎಂದು ಕರೆಯುತ್ತಿದ್ದರು. ಅದೊಂದು ವಿಚಿತ್ರವಾದ ಪ್ರಾಚೀನ ಶೈಲಿಯ ರ್‍ಯಾಪ್ ಸಂಗೀತವಾಗಿತ್ತು. ನನ್ನ ಮನಸ್ಸಿನಲ್ಲಿ ಹೊಸದೊಂದನ್ನು ಮಾಡುವ ಇರಾದೆ ಆಗಲೇ ಚಿಗುರೊಡೆದಿತ್ತು. ನಾವು ಹೆಚ್ಚು ತಡಮಾಡದೆ ಅಲ್ಲೇ ಹಲವು ಜಮೈಕನ್ ಸಂಗೀತಗಾರರ ಜೊತೆ, ಟೋಸ್ಟರ್ ಗಳ ಜೊತೆ ಹಲವು ಹಾಡುಗಳ ಹಕ್ಕುಗಳನ್ನು ಖರೀದಿಸಿದೆವು. ಅವರು ಬ್ಯಾಂಕ್ ಚೆಕ್ ತೆಗೆದುಕೊಳ್ಳುವ ಅಭ್ಯಾಸವಿಟ್ಟುಕೊಳ್ಳದಿದ್ದುದರಿಂದ ನಗದು ಹಣವನ್ನೇ ಅವರಿಗೆ ಕೊಡಬೇಕಾಯಿತು. ಮುಂದಿನ ದಿನಗಳಲ್ಲಿ ಇವರ ಸಂಗೀತ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೇ ನಮ್ಮ ಲಾಭವನ್ನೂ ಹೊಸ ಎತ್ತರಕ್ಕೇರಿಸಿತು. ಇದೇ ನಾನು ಹೇಳಿದ್ದು, ಸಂತೋಷ ಮತ್ತು ಪರಿಶ್ರಮದ ಕೆಲಸವಿದ್ದಲ್ಲಿ ಹಣವೂ ಹರಿದು ಬರುತ್ತದೆಂದು. ಇದರ ನಡುವೆಯೇ ನನಗೆ ನ್ಯೂಯಾರ್ಕ್ ನಿಂದ ಜೋನ್ ಳ ಕರೆ ಬಂತು. ಸಿಗೋಣವೇ ಎಂದಳು. ನಾನು ನ್ಯೂಯಾರ್ಕ್‌ಗೆ ಹಾರಿದೆ. ಅಲ್ಲಿ ನಾವು ಉತ್ತಮ ಸಮಯವನ್ನು ಜೊತೆಯಾಗಿ ಕಳೆದೆವು. ಎಂದಿನಂತೆಯೇ ಅಲ್ಲೂ ಕೂಡ ನನ್ನ ದೂರವಾಣಿ ಕರೆಗಳಿಗೆ ವಿಶ್ರಾಂತಿಯೇ ಇರಲಿಲ್ಲ. ನಾನು ವರ್ಜಿನ್ ದ್ವೀಪವನ್ನು ಖರೀದಿಸಿದ ನಂತರವೇ ನನ್ನ ಕಂಪೆನಿಗಳಿಗೆ ವರ್ಜಿನ್ ಎಂಬ ಹೆಸರು ಬಂತು ಎಂದು ಬಹಳಷ್ಟು ಜನ ತಪ್ಪು ತಿಳಿದುಕೊಂಡಿದ್ದಾರೆ. ನಾವು ಬಂದ ಹೊಸದರಲ್ಲಿ, ಉದ್ಯಮದ ಜಗತ್ತಿನಲ್ಲಿ ಅನನುಭವಿ ಯುವಶಕ್ತಿಗಳು ಎಂಬುದನ್ನೇ ನಾವು ’ವರ್ಜಿನ್’ ಎಂಬ ನಾಮಧೇಯದೊಂದಿಗೆ ತೋರಿಸಿಕೊಂಡೆವೇ ಹೊರತು ಮತ್ತೇನೂ ಅಲ್ಲ. ನಮ್ಮ ಕಂಪೆನಿಗಳಿಗೆ ಈ ಹೆಸರಿಡುವ ಕಾಲಘಟ್ಟದಲ್ಲಿ ’ವರ್ಜಿನ್’ ಎಂಬ ಹೆಸರಿನ ದ್ವೀಪ ಇದೆ ಎಂಬುದೇ ನನಗೆ ತಿಳಿದಿರಲಿಲ್ಲ. 

ನನ್ನ ಬಹಳಷ್ಟು ಹಣ ಜಮೈಕಾದ ಸಂಗೀತಗಾರರ ಹಾಡುಗಳ ಹಕ್ಕನ್ನು ಖರೀದಿಸುವುದರಲ್ಲೇ ಸೋರಿಹೋಯಿತು. ಇದರ ನಡುವೆಯೂ ಎಲ್ಲಿಂದಲೋ ನನ್ನ ಕಿವಿಗೆ ಬಿದ್ದ ಹೊಸ ಸುದ್ದಿಯೊಂದು ನನ್ನನ್ನು ಹಿಡಿದಿಟ್ಟುಕೊಂಡಿತು. ಯಾರಾದರೂ ಐಷಾರಾಮಿ ಬಂಗಲೆಯನ್ನು ಆ ಪರಿಸರದಲ್ಲಿ ಖರೀದಿಗಾಗಿ ಹುಡುಕಾಡುತ್ತಿದ್ದರೆ ಅವರಿಗೊಂದು ಭರ್ಜರಿ ಪ್ರವಾಸವನ್ನು ಉಚಿತವಾಗಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಆಯೋಜಿಸುತ್ತಿತ್ತು. ತಕ್ಷಣವೇ ನಾನು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಕಂಪೆನಿಯ ಎಸ್ಟೇಟ್ ಏಜೆಂಟಗ ಗೆ ಕರೆ ಮಾಡಿದೆ. ನಾನು ಮ್ಯೂಸಿಕ್ ರೆಕಾರ್ಡ್ ಕಂಪೆನಿಯೊಂದರ ಮಾಲೀಕನೆಂದೂ, ಸ್ಟುಡಿಯೋ ನಿರ್ಮಾಣಕ್ಕಾಗಿ ದ್ವೀಪವನ್ನು ಖರೀದಿಸಲು ಉತ್ಸುಕನೆಂದೂ ಅವರ ಕಿವಿಚುಚ್ಚಿದೆ. ’ನಮ್ಮ ಅತಿಥಿಗಳಾಗಿ ಬನ್ನಿ. ಬಹಳಷ್ಟು ಸುಂದರವಾದ ದ್ವೀಪಗಳು ಇಲ್ಲಿ ಖರೀದಿಗಾಗಿಯೇ ಇವೆ. ಒಮ್ಮೆ ನಿಮಗೂ ತೋರಿಸುತ್ತೇವೆ’ ಎಂದರು. ಮರುದಿನವೇ ಜೋನ್ ಮತ್ತು ನಾನು ಅಲ್ಲಿಗೆ ಹಾರಿದೆವು. ನಾವು ರಾಜಮನೆತನದ ಕುಡಿಗಳೆಂಬಂತೆ ಐಷಾರಾಮಿ ಆತಿಥ್ಯ ದೊರೆಯಿತು. ಉದ್ದನೆಯ ಹೊಳೆಯುವ ಕಾರೊಂದು ವಿಮಾನ ನಿಲ್ದಾಣದಲ್ಲೇ ನಮ್ಮನ್ನು ಬರಮಾಡಿಕೊಂಡು ಬಂಗಲೆಗೆ ಕರೆತಂದವು. ಮರುದಿನ ದ್ವೀಪಸಮೂಹದ ದರ್ಶನಕ್ಕೆ ಹೆಲಿಕಾಪ್ಟರ್ ನಲ್ಲಿ ಪಯಣ. ಪ್ರಕೃತಿ ಸೌಂದರ್ಯವನ್ನು ಸ್ವರ್ಗವೆಂದರೂ ಕಮ್ಮಿಯೇ. ಪಾಮ್ ಮರಗಳ, ನೀಲಿ ಸಮುದ್ರದ ಮೇಲೆ ಹಾರುತ್ತಾ ಎಲ್ಲಾ ದ್ವೀಪಗಳನ್ನೂ ಒಂದೊಂದರಂತೆ ನೋಡುತ್ತಾ ಬಂದೆವು. ಕೊನೆಗೂ ಪ್ರವಾಸ ಮುಗಿಯಿತು ಎನ್ನುವಷ್ಟರಲ್ಲಿ ’ನಿಜವಾದ ವಜ್ರವನ್ನು ನೀವು ಇನ್ನೂ ನೋಡಲೇ ಇಲ್ಲ’ ಎಂದ ಏಜೆಂಟ್. ಒಂದು ಮೈಲು ದೂರದಲ್ಲಿ ನೆಕರ್ ಐಲ್ಯಾಂಡ್ ಎಂಬ ಸುಂದರ ದ್ವೀಪವಿದೆಯೆಂದೂ, ಅಲ್ಲಿ ಕಾಲೇ ಇರಿಸದ ಇಂಗ್ಲಿಷ್ ವ್ಯಕ್ತಿಯೊಬ್ಬ ಅದರ ಮಾಲೀಕನೆಂದೂ ಅವನು ತಿಳಿಸಿದ. ಆಗಲಿ, ಇದನ್ನೂ ನೋಡುವೆಯೆಂದು ಜೋನ್ ಜೊತೆ ನಾನು ಹೆಲಿಕಾಪ್ಟರ್ ಕಡೆಗೆ ಹೆಜ್ಜೆ ಹಾಕಿದೆ. ಅಲ್ಲಿಯ ನೀರು ಎಷ್ಟು ಶುದ್ಧವಾಗಿತ್ತೆಂದರೆ ಉದ್ದನೆಯ ಹೊಳಪಿನ ಮೀನುಗಳ ಈಜಾಟವನ್ನು ನೋಡಬಹುದಿತ್ತು. ಸುತ್ತಲೂ ದಟ್ಟನೆಯ ಅರಣ್ಯ, ಎರಡು ಪುಟ್ಟ ಸರೋವರಗಳು, ಸಮೃದ್ಧ ಪಕ್ಷಿ ಸಂಕುಲ, ಇದ್ದೂ ಇಲ್ಲವೆಂಬಂತೆ ದೂರದಲ್ಲಿದ್ದ ಒಂದೆರಡು ಬಂಗಲೆಗಳು ಹೀಗೆ ಎಲ್ಲಾ ರೀತಿಯಲ್ಲೂ ಅದೊಂದು ಅದ್ಭುತ ವಿಲಾಸಿ ತಾಣವಾಗಿತ್ತು. ಮೊದಲು ಕೇವಲ ಮೋಜಿಗಾಗಿ ಬಂದ ಈ ಅದ್ಭುತ ಪ್ರವಾಸ ಈಗ ನಿಜಕ್ಕೂ ನನ್ನ ಆಸಕ್ತಿಯನ್ನು ಕೆರಳಿಸಿತ್ತು. ದ್ವೀಪವೊಂದನ್ನು ಖರೀದಿಸುವೆನೆಂದು ಎಂದಿಗೂ ಯೋಚಿಸಿದವನೇ ಅಲ್ಲ ನಾನು. ಆದರೆ ಈ ದ್ವೀಪ ಆಗಲೇ ನನ್ನ ಮನಸೂರೆಗೊಂಡಿತ್ತು. ಈಗ ಏನಾದರೂ ಮಾಡಿ ಸ್ವರ್ಗದಲ್ಲೊಂದು ಮನೆಯನ್ನು ಮಾಡುವುದು ನನ್ನ ಹೊಸ ಕನಸಾಯಿತು. ಒಂದು ಹೊಸ ಚಾಲೆಂಜ್ ನನ್ನೆದುರಿಗಿತ್ತು. 

 ಮನೆಗೆ ನೀರಿನ ಪೂರೈಕೆಯಿಲ್ಲವೆಂದೂ, ಸಾಗರವೇ ನೀರಿನ ಸೆಲೆಯೆಂದೂ ಏಜೆಂಟ್ ವಿವರಿಸೊಡಗಿದ. ಒಳ್ಳೆಯದೇ ಆಯಿತು, ಈ ನಿರ್ಜನ ದ್ವೀಪದ ಬೆಲೆ ಇನ್ನೂ ಕಮ್ಮಿಯಿರಬಹುದು ಎಂದೆನಿಸಿ ಬೆಲೆ ಕೇಳಿದೆ. ಮೂರು ಮಿಲಿಯನ್ ಪೌಂಡ್ಸ್ ಎಂದ ಅವನು. ಈ ಮೊತ್ತ ನನ್ನ ಸಾಮರ್ಥ್ಯಕ್ಕೆ ನಿಲುಕದ್ದಾಗಿತ್ತು. ನಾನು ಒಂದೂವರೆ ಲಕ್ಷ ಪೌಂಡ್ ಮಾತ್ರ ಕೊಡಬಲ್ಲೆ ಎಂದೆ ನಾನು. ಅವನು ಕೇಳಿದ ಮೊತ್ತದ ಐದು ಪ್ರತಿಶತಕ್ಕಿಂತಲೂ ಕಮ್ಮಿ ಬೆಲೆಯನ್ನು ನಾನು ಆಫರ್ ಮಾಡಿದ್ದೆ. ನಾನು ಇದರಲ್ಲಿ ನಿಜಕ್ಕೂ ಗಂಭೀರವಾಗಿದ್ದರೂ ಏಜಂಟ್ ಗೆ ನಾನು ಸಮಯವನ್ನು ಕೊಲ್ಲುತ್ತಿರುವ ಹುಂಬನಂತೆ ಅನಿಸಿರಬಹುದು. ’ಬೆಲೆ ಮೂರು ಮಿಲಿಯನ್ ಪೌಂಡ್ಸ್’, ಪುನರುಚ್ಚರಿಸಿದ ಅವನು.  ’ಕೊನೆಯದಾಗಿ ನಾನು ಎರಡು ಲಕ್ಷ ಪೌಂಡ್ ಕೊಡಬಲ್ಲೆ’ ಎಂದೆ ನಾನು. ಡೀಲ್ ಮುರಿದುಬಿತ್ತು. ನಾವು ಹೋಟೇಲ್ ಗೆ ಹಿಂತಿರುಗುವಷ್ಟರಲ್ಲಿ ನಮ್ಮ ಲಗೇಜುಗಳು ಹೊರಗಿದ್ದವು. ನಮ್ಮ ರಾಜಾತಿಥ್ಯ ಅಲ್ಲಿಗೇ ಕೊನೆಗೊಂಡಿತ್ತು. ಮರುದಿನವೇ ಬೆಳಗಿನ ಉಪಾಹಾರ ಮುಗಿಸಿ ನಾವು ಅಲ್ಲಿಂದ ಅಧಿಕೃತವಾಗಿ ಹೊರಬಿದ್ದೆವು. 

ಅಲ್ಲಿಂದ ನಾವು ಮುಂದಿನ ವಿಹಾರದ ಕೆಲದಿನಗಳನ್ನು ಇತರ ಚಿಕ್ಕಪುಟ್ಟ ದ್ವೀಪಗಳಲ್ಲಿ ಕಳೆದೆವು. ನಾವು ಪೋರ್ಟೆ-ರಿಕೋಗೆ ಹೋಗಲು ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ನಮ್ಮ ವಿಮಾನ ರದ್ದಾಗಿತ್ತು. ಜನ ಏನು ಮಾಡಬೇಕೆಂದು ತಿಳಿಯದೆ ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದರು. ಯಾರಾದರೂ ಏನಾದರೂ ಆ ಕ್ಷಣಕ್ಕೆ ಮಾಡಬೇಕಾಗಿತ್ತು. ನಾನು ಎರಡು ಸಾವಿರ ಡಾಲರ್ ಮೊತ್ತದಲ್ಲಿ ಬೇರೆ ವಿಮಾನವೊಂದನ್ನು ಆ ಕ್ಷಣಕ್ಕೆ ಬಾಡಿಗೆಗೆ ಸಾಲದ ರೂಪದಲ್ಲಿ ಪಡೆದುಕೊಂಡೆ. ಒಂದು ಕರಿಹಲಗೆಯನ್ನು ತೆಗೆದುಕೊಂಡು ’ವರ್ಜಿನ್ ಏರ್ ಲೈನ್ಸ್: ೩೯$ ಸಿಂಗಲ್ ಫ್ಲೈಟ್ ಟು ಪೋರ್ಟೆ-ರಿಕೋ’ ಎಂದು ಬರೆಯಿಸಿ ವಿಮಾನಕ್ಕೆ ತಗುಲಿಸಿದೆ. ತಲೆಗೆ ಮೂವತ್ತೊಂಭತ್ತು ಡಾಲರ್ ಲೆಕ್ಕದಲ್ಲಿ ದರ ನಿಗದಿಪಡಿಸಿ ನಾನೇ ಎಲ್ಲರನ್ನು ವಿಮಾನ ಹತ್ತಿಸಿದೆ. ಹೀಗೆ ’ವರ್ಜಿನ್ ಏರ್ ಲೈನ್ಸ್’ ಎಂಬ ಕಲ್ಪನೆ ಇಂತಹಾ ಒಂದು ನಂಬಲಸಾಧ್ಯವಾದ ಸಂದರ್ಭದಲ್ಲಿ ಜನ್ಮವೆತ್ತಿತು. ಅವಕಾಶವನ್ನು ಬಳಸಿಕೊಳ್ಳುವುದು ಎಂದರೆ ಇದುವೇ. ಇವತ್ತು ನಮ್ಮ ’ವರ್ಜಿನ್ ಅಟ್ಲಾಂಟಿಕ್’ ಸಂಸ್ಥೆಯನ್ನು ನೋಡಿ. ನಾವು ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಹಾರಾಡುತ್ತೇವೆ. ಆಸ್ಟ್ರೇಲಿಯಾದಲ್ಲಿ ’ವರ್ಜಿನ್ ಬ್ಲೂ’, ಯೂರೋಪಿನಲ್ಲಿ ’ವರ್ಜಿನ್ ಎಕ್ಸ್‌ಪ್ರೆಸ್’, ವರ್ಜಿನ್ ನೈಜೀರಿಯಾ ಹೀಗೆ ಹತ್ತು ಹಲವು. ಅಮೆರಿಕಾದಲ್ಲೂ ವರ್ಜಿನ್ ಅಮೆರಿಕಾ ಎಂಬ ಹೆಸರಿನೊಂದಿಗೆ ನಾವು ಬರಲಿದ್ದೇವೆ. ನಮ್ಮ ’ವರ್ಜಿನ್ ಗ್ಯಾಲಕ್ಟಿಕ್’ ಅಂತರಿಕ್ಷಯಾನವನ್ನು ನಿಮ್ಮ ಮುಂದಿಡಲಿದೆ. ಇಂತಹ ಒಂದು ದಿಟ್ಟ ಹೆಜ್ಜೆಯನ್ನು ಇಲ್ಲಿಯವರೆಗೆ ಯಾರೂ ಇಟ್ಟಿಲ್ಲ. ನಾವು ಎಲ್ಲರಿಗಿಂತಲೂ ಬಹುದೂರ ಪ್ರಗತಿಯ ಪಥದಲ್ಲಿ ಸಾಗಿದ್ದೇವೆ. ಇಪ್ಪತ್ತೊಂದು ವರ್ಷಗಳಲ್ಲಿ ಮನೆಯಂದನ್ನು ಬಾಡಿಗೆ ಕೊಡುವ ಉದ್ಯಮದಿಂದ ಆರಂಭಿಸಿ ಅಂತರಿಕ್ಷಯಾನದವರೆಗೆ ಬಂದು ಮುಟ್ಟಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ. 

ಲಂಡನ್ನಿಗೆ ಹಿಂತಿರುಗಿದ ನಂತರವೂ ನೆಕರ್ ಐಲ್ಯಾಂಡ್ ನನ್ನ ಮನಸ್ಸಿನಿಂದ ದೂರವಾಗಿರಲಿಲ್ಲ. ನಾನು ಈ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡಲಾರಂಭಿಸಿದೆ. ನೆಕರ್ ಐಲ್ಯಾಂಡ್ ನ ಮಾಲೀಕ ಶ್ರೀಮಂತನಲ್ಲವೆಂದೂ, ತನಗಾಗಿ ಲಂಡನ್ ನಗರದಲ್ಲಿ ಮನೆಯೊಂದನ್ನು ಕಟ್ಟಿಸಲು ತುರ್ತಾಗಿ ಅವನಿಗೆ ಎರಡು ಲಕ್ಷ ಡಾಲರ್ ಮೊತ್ತದ ಅವಶ್ಯಕತೆಯಿದೆಯೆಂದೂ, ಇದಕ್ಕಾಗಿಯೇ ಅವಸರದಲ್ಲೇ ದ್ವೀಪವನ್ನು ಮಾರಲು ಹೊರಟಿರವನೆಂದೂ ನನಗೆ ತಿಳಿದುಬಂತು. ಎರಡು ಲಕ್ಷ ಡಾಲರ್ ಮೊತ್ತವನ್ನೇ ನಾನು ತಿಂಗಳುಗಳ ಹಿಂದೆ ಏಜೆಂಟ್ ಬಳಿ ಆಫರ್ ಮಾಡಿದ್ದೆ. ಆದರೆ ತಮಾಷೆಯ ವಿಷಯವೆಂದರೆ ಎರಡು ಲಕ್ಷ ಡಾಲರ್ ಮೊತ್ತ ನನ್ನಲ್ಲಿ ಸಿದ್ಧವಿರಲಿಲ್ಲ. ಯಾರಿಂದಲಾದರೂ ಇಷ್ಟು ದೊಡ್ಡ ಮೊತ್ತವನ್ನು ಸಾಲದ ರೂಪದಲ್ಲಿ ತೆಗೆದುಕೊಳ್ಳುವುದೇ ನನಗುಳಿದಿದ್ದ ಮಾರ್ಗವಾಗಿತ್ತು. ಆದದ್ದಾಗಲಿ ಎಂದೆನಿಸಿ ಕೈಯಲ್ಲಿ ಹಣವಿರದಿದ್ದರೂ ಏಜೆಂಟ್ ಗೆ ಕರೆ ಮಾಡಿ ಒಂದು ಲಕ್ಷದ ಎಪ್ಪತ್ತೈದು ಸಾವಿರ ಪೌಂಡ್ ಗೆ ಆಫರ್ ನೀಡಿದೆ. ನೋ ಅಂದ ಅವನು. ಇಲ್ಲಿಗೇ ನಾನು ಈ ವಿಷಯವನ್ನು ಕೈಬಿಟ್ಟೆ. ಅಚ್ಚರಿಯೆಂಬಂತೆ ಮೂರು ತಿಂಗಳ ನಂತರ ಏಜೆಂಟ್ ಕಡೆಯಿಂದ ನನಗೆ ಕರೆ ಬಂದಿತು. ’ಒಂದು ಲಕ್ಷದ ಎಂಭತ್ತು ಸಾವಿರ ಕೊಟ್ಟರೆ ನೆಕರ್ ಐಲ್ಯಾಂಡ್ ನಿಮ್ಮದು’ ಎಂದರು. ಒಪ್ಪಂದದಂತೆ ಈ ದ್ವೀಪದಲ್ಲಿ ಮನೆಯನ್ನು ಕಟ್ಟಿಸುವುದರ ಜೊತೆಗೆ ಪ್ಲಾಂಟೇಷನ್ ವ್ಯವಸ್ಥೆಯನ್ನೂ ದ್ವೀಪದ ಅಭಿವೃದ್ಧಿಯ ನಿಟ್ಟಿನಲ್ಲಿ ಐದು ವರ್ಷಗಳ ಕಾಲಾವಧಿಯಲ್ಲಿ ಮಾಡಬೇಕಿತ್ತು. ಈ ಖರೀದಿಯ ಒಪ್ಪಂದ ನಿಜಕ್ಕೂ ಬಹಳ ದುಬಾರಿಯಾಗಿತ್ತು. ಆದರೆ ಹಣವನ್ನು ಹೇಗಾದರೂ ಮಾಡಿ ಹೊಂದಿಸುವೆನೆಂಬ ದೃಢವಿಶ್ವಾಸ ನನ್ನಲ್ಲಿತ್ತು ಮತ್ತು ನಾನು ಹಾಗೆಯೇ ಮಾಡಿದೆ ಕೂಡ. ಸ್ನೇಹಿತರು, ಕುಟುಂಬ, ಬ್ಯಾಂಕುಗಳು ಹೀಗೆ ಯಾರೂ ನನ್ನ ಕೈ ಬಿಡಲಿಲ್ಲ. ಅವರಿಗೆ ನನ್ನಲ್ಲಿ ನಂಬಿಕೆಯಿತ್ತು, ಎಲ್ಲದಕ್ಕಿಂತಲೂ ಹೆಚ್ಚಾಗಿ ನನಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿತ್ತು. 

ಇವತ್ತಿನ ದಿನ ನೆಕರ್ ಐಲ್ಯಾಂಡ್ ಜಗತ್ತಿನ ಐಷಾರಾಮಿ ಅತ್ಯಂತ ಸುಂದರ ಖಾಸಗಿ ತಾಣಗಳಲ್ಲೊಂದು. ಇದು ನನ್ನ ಕನಸಿನ ಮನೆ. ನಮ್ಮ ಟೆಲಿವಿಷನ್ ಸೀರೀಸ್ ’ದ ರೆಬೆಲ್ ಮಿಲಿಯನೇರ್’ ನ ಕೊನೆಯ ಎಪಿಸೋಡ್ ನ ಚಿತ್ರೀಕರಣ ಇದೇ ಬಂಗಲೆಯ ತಾರಸಿಯಲ್ಲಿ ನಡೆಯಿತು. ವಿಶಾಲ ನೀಲ ಸಾಗರ, ಆಭರಣದಂತೆ ಹೊಳೆವ ತೀರದ ಮರಳು, ಪಾಮ್ ಮರಗಳ ನಿರಂತರ ಸರಣಿ ಎಲ್ಲವೂ ಈ ಎಪಿಸೋಡಿನ ಕ್ಯಾಮೆರಾದಲ್ಲಿ ಸೆರೆಯಾದವು. ಈ ಚಿತ್ರವನ್ನು ನಾನು ವರ್ಷಗಳ ಹಿಂದೆ ನನ್ನ ಮನಸ್ಸಿನಲ್ಲಿ ನೋಡಿದ್ದೆ. ಜಮೈಕಾದ ನನ್ನ ವಿಹಾರ ಹಲವು ಮ್ಯೂಸಿಕ್ ಬ್ಯಾಂಡುಗಳ ಜೊತೆಗಿನ ಸಾಂಗತ್ಯದಲ್ಲಿ ಮತ್ತು ರಮ್ಯ ತಾಣವೊಂದನ್ನು ತನ್ನದಾಗಿಸುವಲ್ಲಿ ಅಂತ್ಯವಾಯಿತು. ವರ್ಜಿನ್ ಏರ್ ಲೈನ್ಸ್ ಎಂಬ ದೈತ್ಯಕಲ್ಪನೆಯೂ ಇಲ್ಲೇ ಮೂರ್ತರೂಪತಾಳಿತು. ಇವೆಲ್ಲವೂ ಹೇಳುವಷ್ಟು ಸುಲಭವಾಗಿರಲಿಲ್ಲವೆಂಬುದು ಸತ್ಯ. ಆದರೆ ಜೀವನದಲ್ಲಿ ಗುರಿ ಮತ್ತು ಸಕಾರಾತ್ಮಕ ಚಿಂತನೆಯಿದ್ದರೆ ನಾವು ಏನನ್ನೂ ಸಾಧಿಸಬಹುದು ಮತ್ತು ಅಂತಹ ಜೀವನವೊಂದು ಅರ್ಥಪೂರ್ಣ ಎಂದು ಹೇಳಬಯಸುತ್ತೇನೆ. ನನ್ನ ಮಟ್ಟಿಗೆ ಜೀವನವೆಂದರೆ ಕಠಿಣ ಪರಿಶ್ರಮ ಮತ್ತು ಒಂದೊಂದು ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸುವುದಷ್ಟೇ."    

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
AYYANNA
AYYANNA
8 years ago

ಅದ್ಬುತ ಚರಿತ್ರೆ ಇದೆ

1
0
Would love your thoughts, please comment.x
()
x