ಎ.ಟಿ.ಎಂ. ನಲ್ಲೊಂದು ದಿನ……: ಪಿ.ಎಸ್. ಅಮರದೀಪ್

“ಥೋ…….. ನಮ್ದೇನ್ ಕರ್ಮನಪ್ಪ… ಎಸೆಲ್ಸಿ ಕಂಡೋರ್ ಕೈಲಿ ಪರೀಕ್ಷೆ ಬರೆಸಿ ಪಾಸಾಗಿ ಅವರಪ್ಪನ ನೌಕ್ರೀನ ಅಯ್ಯೋ ಪಾಪ ಅಂತ ಅನುಕಂಪದ ಆಧಾರದ ಮೇಲೆ ತಗಂಡಿದ್ದೇ ಬಂತು… ಒಂದ್ ಸೆಂಟೆನ್ಸ್ ಇಂಗ್ಲೀಷು, ಒಂದ್ ಸೆಂಟೆನ್ಸ್ ಕನ್ನಡಾನ ಒಂದು ಸ್ಪೆಲಿಂಗ್ ಮಿಸ್ಟೇಕ್ ಇಲ್ದೇ ಒಂದಕ್ಷರ ತಪ್ಪಿಲ್ದೇ ಬರೆಯೋಕ್ ಯೋಗ್ತೆ ಇಲ್ದಂತವರಿಗೆ ಎಲ್ಡೆಲ್ಡ್ ಪ್ರಮೋಷನ್ನೂ, ದೊಡ್ಡ ಹುದ್ದೆ ಬೇರೆ ಕೇಡು.. ಅಂತ ಹೆಬ್ಬೆಟ್ಟು “ಎಲ್ಲಪ್ಪ”ನಿಗೆ ನಾವು ಕೊಳ್ಳಿಗೊಂದ್ ಹಾರ ಹಾಕಬೇಕು… ಸ್ವೀಟು, ಖಾರ ತಂದು ಪುಗಸಟ್ಟೆ ಬಹುಪರಾಕ್ ಹೇಳಿ, ಚಪ್ಪಾಳೆ ತಟ್ಟಿ ಬೀಳ್ಕೊಡುಗೆ ಸಮಾರಂಭ ಮಾಡಬೇಕು..” ಮೌಲಾ ಹುಸೇನ್ ಗೊಣಗುತ್ತಿದ್ದ.

ಸಾಹೇಬನದು ವರ್ಗಾವಣೆ ಆಗಿದೆ. ಸ್ಟಾಫ್ ಎಲ್ಲಾ ಸೇರಿ ಬೀಳ್ಕೊಡುಗೆ ಸಮಾರಂಭ ಮಾಡಬೇಕು. ಅದಕ್ಕೆಲ್ಲಾ ಹೂವು, ಹಣ್ಣು, ಶಾಲು, ಲೈಟಾಗಿ ನಾಷ್ಟ ಸ್ವೀಟು, ಕಾಫಿ ಖರ್ಚು ಮಾಡಬೇಕಲ್ಲ? ಈ ತರಹ ಕಾರ್ಯಕ್ರಮಗಳು ಬಂದರೆ ಎಲ್ಲರೂ ಮೊದಲು ನೋಡುತ್ತಿದ್ದುದೇ ಮೌಲಾ ಹುಸೇನ್ ಕಡೆಗೆ. ಮೌಲಾ ಹುಸೇನ್ ಎಂಥವನೆಂದರೆ, ಅಸಲಿಗೆ ಮಾತು ಬಾಯಲ್ಲಿ ನಿಲ್ಲದ, ಗುಟ್ಟುಗಳನ್ನು ತಡೆದಿಟ್ಟುಕೊಳ್ಳದ ಮನುಷ್ಯ. ಆದರೆ, ಚೂರು ಪೂಸಿ ಹೊಡೆದರೂ, “ ನಿಂಗೂ ಪ್ರಮೋಷನ್ನು ಇಷ್ಟರಲ್ಲೇ ಕೊಡ್ತಾರಂತಲ್ಲೋ ಮಾರಾಯಾ…. ಆತ್ ಬಿಡಪಾ, ನೀನೂ ಮ್ಯಾನೇಜರ್ ಆಗ್ತೀ” ಅಂದರೂ ಸಾಕು. ಇದ್ದುದರಲ್ಲೇ ಕೈ ಸಡಿಲ ಮಾಡಿ ದುಡ್ಡು ಖರ್ಚು ಮಾಡುತ್ತಿದ್ದ.

ಅವತ್ತೂ ಹಾಗೇ ಆಯಿತು. ಆದರೆ, ಬೇಸರವಿದ್ದದ್ದು ಸಾಹೇಬನ ಮೇಲೆ. ಮಾತಿಗೆ ಮುಂಚೆ “ಚ್ವಣ್ಣ ಹಾಕ್ಕೊಂಡ್ ದನಾ ಮೇಯ್ಸೋಕ್ ಹೋಗ್” ಅಂದು ಬಿಡುತ್ತಿದ್ದ, ಅದೂ ಎಲ್ಲರ ಎದುರಿಗೆ. ಇರಬಹುದಪ್ಪ, ಮೌಲಾ ಹುಸೇನ್ ತೀರ ದಡ್ಡನಲ್ಲ. ಚೂರು ಕರೆಕ್ಷನ್ ಮಾಡಿಕೊಟ್ಟರೆ ಸಾಕು, ಕೆಲಸವೇನೋ ಮಾಡುತ್ತಿದ್ದ. ಆದರೆ, ಹೇಳುವವರು ಮೈ ಮರೆತರೋ? ಭಯಂಕರ ಮರೆವಿರುವ ಮೌಲಾ ಹುಸೇನ್, ಎಡವಟ್ಟುಗಳನ್ನು ತಂದಿಟ್ಟುಬಿಡುತ್ತಿದ್ದ. ಅಡ್ರೆಸ್ಸೇ ಇಲ್ಲದಂತೆ ಲೆಟರ್ ಮಾಡುವುದು, “ತಮ್ಮ ವಿಶ್ವಾಸಿ” ಇಲ್ಲದೇ ಪ್ರಿಂಟ್ ತೆಗೆಯುವುದು, ಯಾವ್ದೋ ಪೇಪರ್ ಜೋಪಾನ ಮಾಡಿಡುವುದನ್ನು ಇನ್ನೆಲ್ಲೋ ಇಟ್ಟು ಮರೆತುಬಿಡುವುದು ಹೀಗೆ… ಸಹಜವಾಗೇ ಸಾಹೇಬ ಸಿಟ್ಟಿಗೆದ್ದು ಬೈಯಲು ಶುರು ಮಾಡುತ್ತಿದ್ದ. ಆದರೂ ಮೌಲಾ ಹುಸೇನ್ ತುಂಬಾ ಸಭ್ಯ ಮನುಷ್ಯ. ಎಷ್ಟೇ ಬೈದರೂ ಚೂರು ಸಿಟ್ಟು ಮಾಡಿಕೊಳ್ಳುತ್ತಿದ್ದಿಲ್ಲ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ.

ಆದರೆ, ಹೇಳಿದರೆ ತಪ್ಪಿಲ್ಲದೇ ಬರೆಯಲು ತನ್ನಷ್ಟೂ ಬಾರದ ಅಡ್ನಾಡಿಯೊಬ್ಬನಿಗೆ ಸುಳ್ಳೇ ಬಹುಪರಾಕ್ ಹೇಳಿ ಹಾರ, ಶಾಲು ಹಾಕುವುದೆಂದರೆ ಯಾರಿಗಾದರೂ ಆಗಬಹುದಾದ ಸಹಜ ಬೇಸರವೇ ಅದು. ಆಗಲೇ ಮೌಲಾ ಹುಸೇನ್ ಗೊಣಗಿದ್ದು;

“ಥೋ, ನಮ್ದೇನ್ ಕರ್ಮನಪ್ಪ…..”

ಸರಿ, ಅನ್ನಂಗಿಲ್ಲ, ಆಡಂಗಿಲ್ಲ. ಹಾಳಾಗ್ ಹೋಗ್ಲಿ ಅತ್ಲಾಗೆ ಅಂದುಕೊಂಡು ಮೌಲಾ ಹುಸೇನ್ ಆಫೀಸ್ ಪಕ್ಕದಲ್ಲೇ ಇರುವ ಎ.ಟಿ.ಎಂ. ಗೆ ಹಣ ಬಿಡಿಸಲು ಹೋದ. ಕಾರ್ಡ್ ತೆಗೆಯಬೇಕು. ಮುಂಚೆ ಯಾರೋ ದುಡ್ಡು ಪಡೆಯುವಾಗ ಉಳಿದ ಐದು ನೂರರ ಎರಡು ನೋಟು ಕಂಡಿದೆ. ಪಟ್ಟನೆ ಎತ್ತಿಕೊಂಡು ದುಡ್ಡು ಕೂಡ ಡ್ರಾ ಮಾಡದೇ ಬಂದಿದ್ದಾನೆ. ಅದೇ ದುಡ್ಡಿನಲ್ಲಿ ಹಾರ, ಹಣ್ಣು, ಶಾಲು ಖರೀದಿಸಿ ಸಾಹೇಬನ ಬೀಳ್ಕೊಡುಗೆ ಸಮಾರಂಭ ಸರಳವಾಗಿ ಮಾಡಿ ಸಿಬ್ಬಂದಿಯೊಂದಿಗೆ ಕೈ ಕುಲುಕಿ “ಹೋದ್ನಲ್ಲ ಬಿಡಪ್ಪ, ಪೀಡೆ ತೊಲಗಿದಂತಾತು” ಅಂದುಕೊಂಡ.

ಮೊದಲೇ ಮೌಲಾ ಹುಸೇನ್ ಬಾಯಲ್ಲಿ ಮಾತು ನಿಲ್ಲಲ್ಲ. ಗುಟ್ಟು ಉಳಿಯಲ್ಲ. ಎ.ಟಿ.ಎಂ. ನಲ್ಲಿ ಸಿಕ್ಕ ದುಡ್ಡಿನ ಬಗ್ಗೆ ಹಿರಿಹಿರಿ ಹಿಗ್ಗುತ್ತಲೇ ಹೇಳಿಕೊಂಡ. ಮೌಲಾ ಹುಸೇನ್ ಗೆ ಇಡೀ ಒಂದು ತಿಂಗಳ ಕಾಡಾಟ ಅಲ್ಲಿಂದ ಶುರುವಾಗುತ್ತೆಂಬ ಅಂದಾಜಿರಲಿಲ್ಲ. ಅದರಲ್ಲೂ ಮಲ್ಲಿನಾಥನೆಂಬ ಮ್ಯಾನೇಜರ್ ನೋಡಲು ಕೆ.ಜಿ.ಎಫ್. ನಿಂದ ಎದ್ದು ಬಂದ ವಿಲನ್ ಲುಕ್ ನಲ್ಲಿ ಭಯಂಕರ ಸೀರಿಯಸ್ಸಾಗಿರುತ್ತಿದ್ದ. ಅವನ ಸೀರಿಯಸ್ಸ್ ನೆಸ್ ಯಾವ ಮಟ್ಟದ್ದೆಂದರೆ, ಹಾಸ್ಯ ಮಾಡಿದರೆ ಅದೂ ಕೂಡ ಸೀರಿಯಸ್ ಸೀನ್ ಕ್ರಿಯೇಟ್ ಆಗುವಂತಿರುತ್ತಿತ್ತು.

ಆಫೀಸ್ ಶುರುವಾಗಿ ಹಾಜರಿ ಹಾಕುತ್ತಲೇ, “ಮೌಲಾಸಾಬ್, ಥೋಡಾ ಅಕೇಲೇ ಮೆ ಬಾತ್ ಕರ್ನಾ ಹೈ… ಆವೋ ಚಾಯ್ ಪೀತೆ ಬಾತ್ ಕರೆಂಗೆ” ಅಂತ ಮೌಲಾ ಹುಸೇನ್ ನನ್ನು ಕರೆದುಕೊಂಡು ಹೊರಟ. “ದೇಖೋ ಬಾ, ಎ.ಟಿ.ಎಂ. ಕಿ ಕಹಾನಿ ಅಕ್ಕಪಕ್ಕದಲ್ಲಿ ಎಲ್ಲಾ ಗೊತ್ತಾಗಿಬಿಟ್ಟಿದೆ. ಮೊನ್ನೆ ಚಾಯ್ ವಾಲಾ ಬ್ಯಾಂಕ್ ನಲ್ಲಿ ಹೋದಾಗ ಮ್ಯಾನೇಜರ್ ಸಿ.ಸಿ. ಟೀವಿ ಫೂಟೇಜ್ ಗಳನ್ನು ನೋಡ್ತಾ ಕೂತಿದ್ದನಂತೆ. ಎದುರಿಗೆ ಎ.ಟಿ.ಎಂ. ನಲ್ಲಿ ದುಡ್ಡು ಬಾರದೇ ದೂರು ಕೊಟ್ಟ ವ್ಯಕ್ತಿ ಕೂತಿದ್ದ. ಇಡೀ ಒಂದು ವಾರದ್ದು ಫೂಟೇಜ್ ನೋಡ್ತಿದ್ದರಂತೆ.” ಮಲ್ಲಿನಾಥ ಗಾಬರಿಬೀಳಿಸಿದ. “ಮೌಲಾಸಾಬ್, ಕೆಟ್ಟ ಬಿಸ್ಲು ನೋಡು, ಬೆಳಿಗ್ಗೆ ಎಂಟಕ್ಕೆ ತಿಂದಿದ್ದ ನಾಷ್ಟ… ಮತ್ತೆ ಹೊಟ್ಟೆ ಹಸೀತಾ ಇದೆ. “ ರಾಗಿ ದೋಸೆ ಹೇಳಿಬಿಡು” ಅಂದ. ರಾಗಿ ದೋಸೆ ತಿಂದು ಬಿಸಿ ಬಿಸಿ ಕಾಫಿ ಕುಡಿದ ಮಲ್ಲಿನಾಥ ಆ ಹೊತ್ತಿಗೆ ಫುಲ್ ಖುಷ್. ಬಿಲ್ಲು ಕೊಟ್ಟಿದ್ದು ಮಾತ್ರ ಮೌಲಾ ಹುಸೇನ್.

ಅದಾಗಿ ಒಂದರೆಡು ದಿನ ಸಿಬ್ಬಂದಿ ಎಲ್ಲರೂ ಸುಮ್ಮನಿದ್ದರು. ಯಾರೋ ಬ್ಯಾಂಕ್ ನ ನೌಕರರೊಬ್ಬರು ಮೌಲಾ ಹುಸೇನ್ ನನ್ನು ಕೇಳಿಕೊಂಡು ಬರುತ್ತಾರೆ. ಆ ದಿನ ಮೌಲಾ ಹುಸೇನ್ ಓಓಡಿ ಮೇಲೆ ಬೇರೆ ಆಫೀಸಲ್ಲಿದ್ದ. ಹಾಗಂತ ಮಲ್ಲಿನಾಥ ಮೌಲಾ ಹುಸೇನ್ ಗೆ ಹೇಳಿದ್ದೇ ತಡ ಮೌಲಾ ಹುಸೇನ್ ತಡಬಡಾಯಿಸಿದ. ನಿಜಕ್ಕೂ ತಡಬಡಾಯಿಸಿದನೋ ಅಥವಾ ಮಲ್ಲಿನಾಥನಿಗೆ ಕಾಣುವಂತೆ ಹಾಗೆ ನಟಿಸಿದನೋ ಗೊತ್ತಿಲ್ಲ.

ಇಷ್ಟರ ಮಧ್ಯೆ ಒಮ್ಮೆ ಮಲ್ಲಿನಾಥ ಮತ್ತೊಮ್ಮೆ ಸಿಬ್ಬಂದಿ ಎಲ್ಲರೂ ಮೌಲಾಹುಸೇನ್ ಗೆ ಒಂದಲ್ಲ ಒಂದು ರೀತಿಯಲ್ಲಿ ನಾಷ್ಟ, ಕಾಫಿಗಾಗುವಷ್ಟು ಸ್ಕ್ರೀನ್ ಪ್ಲೇ ಬರೆಯುತ್ತಲೇ ಇದ್ದರು. ಎಲ್ಲರ ಮೇಲೂ ಸಂಶಯ ಉಂಟಾಗಿ ಮೌಲಾ ಹುಸೇನ್ ಸೀದಾ ಹೊಸದಾಗಿ ಬಂದ ಅವರ ಸಾಹೇಬನ ಹತ್ತಿರ ಕೇಳಿದ್ದಾನೆ; ಸಾಬ್ ಜೀ, ಹೀಗಾಗಿದೆ, ಏನಾದ್ರೂ ತೊಂದ್ರೆ ಆಗುತ್ತಾ? ಅಂತ.

ಸಾಹೇಬ, “ ನೋಡಪ್ಪ ಸಾಬು, ಆಫೀಸ್ ಪಕ್ಕದಲ್ಲೇ ಎ.ಟಿ. ಎಂ. ಇದೆ ಅಂತಿಯಾ, ನೀನು ಬೇರೆ ಪರಿಚಿತ ಮುಖ, ಕರೆದು ಕೇಳಿದ್ರೆ ಇಲ್ಲಾಂತ ಹೆಂಗ್ ಹೇಳ್ತಿ? ನೀನ್ ಎ.ಟಿ.ಎಂ. ನಲ್ಲಿ ಕಾರ್ಡ್ ಬಳಸಿಲ್ಲ, ಸ್ಕ್ರೀನ್ ಬಳಸಿಲ್ಲ, ಪಿನ್ ಒತ್ತಿಲ್ಲ. ಆದ್ರೂ ದುಡ್ಡು ತಗಂಡಿದ್ದು, ಸಿ.ಸಿ. ಟೀವಿಯಲ್ಲಂತೂ ಫೂಟೇಜ್ ಸಿಕ್ಕಿದೆಯಂತೆ. ನೋಡಿ ಮಾತಾಡ್ಕೊಂಡ್ ಬಗೆಹರಿಸಿಕೊಂಡು ಬಿಡು. ಇಲ್ಲಾಂದ್ರೆ ಕ್ರಿಮಿನಲ್ ಕೇಸ್ ಹಾಕಿದ್ರೆ ಏನ್ ಮಾಡ್ತೀ? ಮೊದ್ಲೇ ನಿಂಗ್ ಪ್ರಮೋಷನ್ ಬರೋದದಾ, ಯಾಕಿದ್ದೀತು?” ಅಂದಿದ್ದಾನೆ.

ಅದಾಗಿ ಒಂದು ವಾರವಾಗಿಲ್ಲ. ಮೌಲಾ ಹುಸೇನ್ ಮತ್ತೆ ಓಓಡಿ ಮೇಲೆ ಒಂದೆರಡು ದಿನ ಬೇರೆ ಊರಿನ ಆಫೀಸಲ್ಲಿದ್ದಾನೆ. ಆ ಸಮಯದಲ್ಲಿ ಮಲ್ಲಿನಾಥ ಕಾಲ್ ಮಾಡಿ “ ಮೌಲಾಸಾಬ್, ಇಲ್ಯಾರೋ ಕೋರ್ಟ್ ಮಂದಿ ನಿನ್ ಹೆಸರಿಲೇ ಟಪಾಲ್ ತುಗೊಂಡ್ ಬಂದಾರ, ಅದೇನೋ ಕೇಸಿಂದ ಅದ. ಏನ್ ಹೇಳೂಣೂ?” ಕೇಳಿದ್ದಾನೆ. ಮೌಲಾ ಹುಸೇನ್ ಧಿಡಿಗ್ಗನೆಂದು ಎದ್ದು ನೂರೆಂಟು ಯೋಚನೆಗೆ ಬಿದ್ದಿದ್ದಾನೆ. ಎ.ಟಿ.ಎಂ. ನದೇನಾದ್ರೂ ಇದ್ದೀತಾ? ಅಂತ. ಹಾಗೂ ಹೀಗೂ ಚೌಕಾಸಿ ಮಾಡಿ “ಮೌಲಾ ಹುಸೇನ್ ಇನ್ನೂ ಒಂದು ವಾರ ಸಿಗೋದಿಲ್ಲ, ಬರೋ ಸ್ವಾಮಾರ ಸಿಗ್ತಾರ” ಹಾಗಂತ ಮಲ್ಲಿನಾಥ ಹೇಳಿ ಕಳಿಸಿದ್ದಾನೆ.

ಇಡೀ ಒಂದು ತಿಂಗಳು ಮೌಲಾ ಹುಸೇನ್ ಯಾರದೋ ಐದು ನೂರರ ಎರಡು ನೋಟು ಎ.ಟಿ.ಎಂ. ನಲ್ಲಿ ತೆಗೆದುಕೊಂಡದ್ದಿರಲಿ, ಏನಾಗುತ್ತೋ ಎನ್ನುವ ದಿಗಿಲಿನಲ್ಲೇ ಕಳೆದು ಹೋಯಿತು. ಮಲ್ಲಿನಾಥ ಮತ್ತು ಸಿಬ್ಬಂದಿ ದಿನಕ್ಕೊಂದರಂತೆ ಎಪಿಸೋಡ್ ಲೆಕ್ಕದಲ್ಲಿ ಪರಿಣಾಮಗಳನ್ನು ವಿವರಿಸುತ್ತಿದ್ದರು. ಪರಿಣಾಮಗಳನ್ನು ಊಹೆ ಮಾಡಿಕೊಂಡೇ ಮೌಲಾ ಹುಸೇನ್ ಬೆಚ್ಚಿ ಬೀಳುತ್ತಿದ್ದ. ಕೊನೆಗೂ ಮೌಲಾ ಹುಸೇನ್ ಗೆ ಮಲ್ಲಿನಾಥ ಮತ್ತು ಸಿಬ್ಬಂದಿ ಮಾತಾಡಿದ್ದು, ಏನು ಶಿಕ್ಷೆ ಆಗಬಹುದು? ಅಂತೆಲ್ಲಾ ಹೇಳಿದ್ದೆಲ್ಲಾ ಸುಳ್ಳೆಂಬುದು ತಿಳಿಯಿತೆನ್ನಿ. ಆದರೆ, ಅಷ್ಟು ಹೊತ್ತಿಗೆ ಎ.ಟಿ.ಎಂ. ನಲ್ಲಿ ಸಿಕ್ಕಿದ ಐದು ನೂರರ ಎರಡು ನೋಟಿಗಿಂತ ಹೆಚ್ಚೇ ಅವರ ನಾಷ್ಟ, ಕಾಫಿಗೆಂದು ಖರ್ಚು ಮಾಡಿದ್ದ.

ಹೊಸದಾಗಿ ಬಂದ ಮೌಲಾ ಹುಸೇನ್ ನ ಸಾಹೇಬನಿಗೆ ಆಗಾಗ ಚೂರು ಕತೆ ಬರೆವ ಅಭ್ಯಾಸ. ಹಾಗಾಗಿ
“ಮೌಲಾ ಹುಸೇನ್, ಎಲ್ಲೀಗ್ ಬಂತು ನೀನ್ ಎ.ಟಿ.ಎಂ. ನಿಂದ ಎಸ್ಕೇಪ್ ಆದ ಕತಿ” ಎಂದು ಕೇಳಿದರೆ, “ಅಂಥಾದ್ದೇನಿಲ್ರೀ ಸರ, ಹಿಂಗ್ ಆಟ ಆಡ್ಸಿ, ಎ.ಟಿ.ಎಂ. ನಿಂದ ತಂದ ಪುಗಸಟ್ಟೆ ರೊಕ್ಕಕ್ಕಿಂತ ಹೆಚ್ಗೀನ ಖರ್ಚು ಮಾಡ್ಸ್ಯಾರ ನೋಡ್ರಿ, ಸುಳ್ಳು ಹೇಳಿ” ಅನ್ನುತ್ತಲೇ ಕಿಸಿಕಿಸಿ ನಗತೊಡಗಿದ.

“ಸರ, ನಿಮಗ ಇನ್ನೊಂದ್ ಸಿಕ್ರೇಟ್ ಹೇಳ್ತೀನಿ ಕೇಳ್ರಲ್ಲ, ಇವ್ನೌನ್ನ, ಅದೊಂದ ಸರ್ತಿ ಅಲ್ರೀ, ಅದಾದ ಮ್ಯಾಲಾ ಮತ್ತೆರಡು ಸರ್ತಿ ಹಂಗ ದುಡ್ಡು ಸಿಗ್ತದೇನಂತ ಎ.ಟಿ.ಎಂ.ಗೆ ಹೋಗಿದ್ನೆ…. ದುಡ್ಡೇನ್ ಸಿಗಲಿಲ್ಲ ಬಿಡ್ರಿ” ಅನ್ನುವುದರಲ್ಲೇ ಮೌಲಾ ಹುಸೇನ್ ಮುಖದಲ್ಲಿ ಏನೋ ಕಳಕೊಂಡ ಲುಕ್ಕು. ಹೊಸದಾಗಿ ಬಂದ ಸಾಹೇಬ,
“ನಿಂದಾ ಒಂದು ಕತಿ ಬರಿತೀನಿ ಇರು” ಅಂದರೆ, “ಸರ, ಬರ್ಕೋರಿ, ಆದ್ರ ಹೆಸ್ರು ಮಾತ್ರ ಹಾಕಬ್ಯಾಡ್ರಿ” ಅನ್ನಬೇಕೇ?……….

-ಪಿ.ಎಸ್. ಅಮರದೀಪ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Ganesh iyer
Ganesh iyer
3 years ago

ತಮಾಷೆಯಾಗಿತ್ತು.. ಚೆನ್ನಾಗಿದೆ, ಎಟಿಎಂ ಚಿತ್ರಣ ಕಣ್ಣಮುಂದೆ ಬಂತು.

1
0
Would love your thoughts, please comment.x
()
x