ಟೆನಿಸನ್‍ನ ಎರಡು ಕವಿತೆಗಳು: ನಾಗರೇಖಾ ಗಾಂವಕರ


ಗ್ರೀಕ ಮಹಾಕವಿ ಹೋಮರನ ಒಡೆಸ್ಸಿಯಲ್ಲಿ ಬರುವ ದಿ ಗ್ರೇಟ್ ಗ್ರೀಕ್ ಹೀರೋ Ithacaದ ರಾಜ ಒಡಿಸೆಸ್ ಅಥವಾ ಯೂಲಿಸಿಸ್‍ನ ಸಮುದ್ರಯಾನದ ರೋಚಕ ಅನುಭವದ ಕಥೆಯನ್ನೆ ಹಾಡುವ ಟೆನಿಸನ್‍ನ “ದಿ ಲೋಟಸ್ ಇಟರ್” ಕವಿತೆ ಮೊದಲು ಪ್ರಕಟವಾದದ್ದು 1832ರಲ್ಲಿ. ಟ್ರೋಜನ್ ಯುದ್ಧದ ನಂತರ ಯೂಲಿಸಿಸ್ ತನ್ನ ಗ್ರೀಕ್ ಸೈನಿಕರೊಂದಿಗೆ ಮರಳಿ ನಾಡಿಗೆ ವಾಪಸಾಗುತ್ತಿದ್ದ ದಾರಿಯಲ್ಲಿ ಮಾರ್ಗಮಧ್ಯೆ ಭೀಕರ ಬಿರುಗಾಳಿಗೆ ಸಿಕ್ಕು ತತ್ತರಿಸತೊಡಗಿದರು. ಜಲಮಾರ್ಗದ ಉದ್ದಗಲಕ್ಕೂ ಅಲೆದಾಡಿದರು. ಒಂಬತ್ತು ದಿನಗಳು ಹಾಗೂ ಹೀಗೂ ಸುತ್ತಿ ಸುಳಿದು ಹತ್ತನೇಯ ದಿನ ನಡುಗಡ್ಡೆಯೊಂದು ಕಣ್ಣಿಗೆ ಬೀಳುತ್ತಲೆ ಆನಂದಿತರಾದರು. ಆ ನಡುಗಡ್ಡೆಯ ಜನ ಕೇವಲ ಕಮಲದ ಹೂಗಳ ತಿಂದು ಬದುಕುತ್ತಿದ್ದರು. ಆಫ್ರಿಕಾದಲ್ಲಿ ಕಾಣಬರುವ ‘ಸೈರೇನಿಯನ್ ಲೊಟಸ್’ ಎಂಬ ಜಾತಿಯ ಹೂವದು. ಜೇನು ಸವಿಯಂತೆ ಮಧುರವಾಗಿರುವ ಆ ಹೂವನ್ನು ಹಸಿವೆಯಿಂದ ತತ್ತರಿಸುತ್ತಿದ್ದ ಗ್ರೀಕ್ ಸೈನಿಕರು ಸೇವಿಸುತ್ತಾರೆ. ಜಲಮಾರ್ಗದ ಮಧ್ಯೇ ಏಕತಾನತೆಯಿಂದ ಜಡ್ಡುಗಟ್ಟಿದ ಸೈನಿಕರು ಈ ಹೂವನ್ನು ತಿನ್ನುತ್ತಲೇ ಸಾಹಸಕಾರ್ಯದಲ್ಲಿ ನಿರುತ್ಸಾಹಿಗಳಾಗಿ ಪುನಃ ಮನೆಗೆ ಹಿಂತಿರುಗುವ ಆಸಕ್ತಿಯನ್ನೆ ಕಳೆದುಕೊಂಡು, ಆ ನಡುಗಡ್ಡೆಯಲ್ಲಿಯೇ ವಾಸಿಸುತ್ತಾ ಸವಿ ಜೇನಿನ ಹೂ ತಿನ್ನುತ್ತಾ ಆಲಸ್ಯದ ಜೀವನ ಪ್ರೀತಿಸತೊಡಗಿದರು.

ಈ ವಿಷಯವಸ್ತುವನ್ನೆ ಆಧಾರವಾಗಿಟ್ಟುಕೊಂಡ “ಲೋಟಸ್ ಇಟರ್” ಕವಿತೆ ಎರಡು ಭಾಗಗಳಲ್ಲಿ ನಿರೂಪಿತವಾಗಿದೆ. ಮೊದಲ ಭಾಗ ನಾಂದಿ ಹಾಗೂ ಎರಡನೆಯ ಭಾಗ ಕಮಲದ ಹೂವಿನ ಸವಿಯಲ್ಲಿ ಉನ್ಮತ್ತರಾದ ಗ್ರೀಕ ಸೈನಿಕರು ಆ ನೆಲದ ಹೂವಿನ ಪ್ರಭಾವ ಪರಿಣಾಮವನ್ನು ಕೊಂಡಾಡುವ ಸೈನಿಕರ ಹಾಡಿನ ಕೋರಸನಿಂದ ಕೂಡಿದೆ.
ನಾಂದಿಯ ಪ್ರಾರಂಭದಲ್ಲೆ ಯೂಲಿಸಿಸ್ ಜಲರಾಶಿಯ ನಡುವೆ ಸತತ ಒಂಬತ್ತು ದಿನಗಳ ದೀರ್ಘಪ್ರಯಾಣದಿಂದ ಚೈತನ್ಯ ಕಳೆದುಕೊಂಡ ತನ್ನ ಸೈನಿಕ ನಾವಿಕರಿಗೆ ಹುರಿದುಂಬಿಸುತ್ತಾನೆ. ಧೈರ್ಯದ ಮಾತುಗಳಾಡುತ್ತಾನೆ.

“Courage! He said, and pointed toward the land
This mountain wave will roll us shoreward soon.

ದಿಕ್ಕೆಟ್ಟ ಸ್ಥಿತಿಯಲ್ಲಿ ಕೊನೆಗೂ ನೆಲವನ್ನು ಕಂಡ ಸೈನಿಕರು “ಲೋಟಸ್ ಇಟರ್” ನಾಡನ್ನು ತಲುಪಿದ್ದಾರೆ. ಅಲ್ಲಿಯ ನಿಸರ್ಗವನ್ನು ಕವಿ ವರ್ಣಿಸುತ್ತಾನೆ.ಅಲ್ಲಿ ಎಲ್ಲವೂ ನಿಧಾನ. ಸ್ತಬ್ಧ, ಯಾವ ತ್ವರಿತ ಕ್ರಮದ ಹಂಗಿಲ್ಲ.ಎಲ್ಲೆಲ್ಲೂ ಆಲಸ್ಯವೇ ಹಾಸಿ ಬಿದ್ದಿದೆ. “Fall, pause, fall” ಎನ್ನುವಲ್ಲಿ ಕ್ರಿಯೆ ಮತ್ತು ಜವಾಬ್ದಾರಿಗಳೇ ನಾಪತ್ತೆಯಾದಂತಿರುವ ಆ ನಾಡು ನೈಸರ್ಗಿಕವಾಗಿ ಬಹು ಆಕರ್ಷಣಿಯವಾಗಿದೆ. ಎಲ್ಲೆಲ್ಲೂ ತೊರೆ ಜರಿಗಳಿಂದ ಕೂಡಿದೆ. ಅಲ್ಲೆಲ್ಲಾ ಆ ಮಾಂತ್ತಿಕ ಹೂವಿನ ಪ್ರಭಾವಲಯವೇ ಹಬ್ಬಿದೆ. ಯೂಲಿಸಿಸ್‍ನ ನಾವಿಕರು ಆ ದಡದತ್ತ ಹೋಗುತ್ತಲೇ ಇವರಿದ್ದ ಹಡಗಿನ ಕಡೆ ಆ ನೆಲದ ವಾಸಿಗಳು ಬಂದರು. ಕವಿ ಅದನ್ನು ಹೀಗೆ ಹೇಳುತ್ತಾನೆ.

“Dark faces place against the rosy flame
The mild eyed melancholy Lotos-Eaters came”

ಅವರು ಸೈನಿಕರಿಗೆ ಹೂವನ್ನು ತಿನ್ನಲು ನೀಡಿದರು. ಹಸಿವೆಯಿಂದ ಬಳಲಿದ ಸೈನಿಕರು ಅತ್ಯಂತ ಸ್ವಾದಭರಿತ ಹೂವನ್ನು ಆಸ್ವಾದಿಸುತ್ತಲೇ ಭ್ರಾಂತ ಸ್ಥಿತಿಗೆ ತಲುಪುತ್ತಾರೆ. ಆ ನಾಡಿನ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಆಲಸಿಗಳಾಗುತ್ತಾರೆ. ತಮ್ಮ ಮನೆಮಾರು ಮರೆತು ಅಲ್ಲಿಯೇ ಶಾಶ್ವತವಾಗಿ ನೆಲೆನಿಲ್ಲುವ ಇರಾದೆ ಹೊಂದುತ್ತಾರೆ.
“We will return no more.
We will no longer roam.”

ಎನ್ನತೊಡಗುವ ಅವರ ವರ್ತನೆಯಲ್ಲಾದ ಬದಲಾವಣೆಯನ್ನು ಟೆನ್ನಿಸನ್ ಬಹು ಮನೋಜ್ಞವಾಗಿ ಕಟ್ಟಿಕೊಡುತ್ತಾನೆ.

ಎರಡನೇಯ ಭಾಗದಲ್ಲಿ ಲೋಟಸ್ ಸೇವನೆಯ ಪರಿಣಾಮವಾಗಿ ಯೂಲಿಸಿಸ್‍ನ ಸಹಾಯಕರು ತಾವು ಆ ನೆಲದಲ್ಲಿಯೇ ತಂಗಲು ಕಾರಣಗಳನ್ನು ಕುರಿತು ಬಣ್ಣಿಸತೊಡಗುತ್ತಾರೆ. ಎಲ್ಲ ರೀತಿಯಿಂದಲೂ ನೆಮ್ಮದಿದಾಯಕವಾದ ಅಲ್ಲಿಯ ಬದುಕು ಅವರಿಗೆ ಸುಖ ನೀಡುತ್ತಿದೆ.
ಮೊಟ್ಟಮೊದಲು ಲೋಟಸ್ ನಡುಗಡ್ಡೆಯನ್ನು, ಅಲ್ಲಿ ಗುಪ್ತವಾಗಿ ಹಬ್ಬಿದ ದೇವಲೋಕದ್ದೆ ಎನ್ನಿಸುವ ಸಂಗೀತವನ್ನು, ರುಚಿಕರವಾದ ಹೂವನ್ನು ವರ್ಣಿಸತೊಡಗುತ್ತಾರೆ. ಮುಂದೆ ನಾವಿಕರು ಹತ್ತಾರು ಪ್ರಶ್ನೆಗಳ ಯೂಲಿಸಿಸ್‍ನ ಮುಂದಿಡುತ್ತಾರೆ.

“Why are we weigh’d upon with heaviness?
And utterly consumed with sharp distress?” ಎಂದು ಪ್ರಶ್ನಿಸುತ್ತಾರೆ. ಈ ಮಾನವ ಜನ್ಮದ ನೋವು ಆರ್ತತೆಗಳ ಎತ್ತಿ ಹೇಳುತ್ತಾರೆ. ನಿಸರ್ಗದ ಹೂ, ಬಳ್ಳಿ. ಹಣ್ಣುಗಳು ಅರಳುತ್ತವೆ, ಬೆಳಗುತ್ತವೆ ಮುದುಡಿಹೋಗುತ್ತವೆ. ಅವುಗಳಿಗೆ ಬಾಧಿಸದ ನೋವು ನಿರಾಶೆ, ಮನುಕುಲಕ್ಕೆ ಮಾತ್ರ ಯಾಕೆ? ಮನುಷ್ಯ ಸೃಷ್ಠಿಯಲ್ಲಿ ಶ್ರೇಷ್ಠನಾಗಿರುವುದಕ್ಕೆ ಆಗಿರಬಹುದು ಎನ್ನುತ್ತಾನೆ ಕವಿ. ಆದರೂ ಬದುಕಿನ ಕೊನೆಯವರೆಗೂ ಮಾನವ ಕ್ಷಣಕ್ಷಣವೂ ಶ್ರಮದ ಜೀವನ ನಡೆಸುತ್ತಾ ಕರಗಿ ಹೋಗುತ್ತಾನೆ. ಆರಾಮ ವಿಶ್ರಾಂತಿ, ನೆಮ್ಮದಿಗಳಿಲ್ಲದೇ ಬದುಕುತ್ತಾನೆ. ಅದಕ್ಕಾಗಿಯೇ ನಾವಿಕರು ಆ ಜಗತ್ತನ್ನು ಮರೆತು ಲೋಟಸ್ ನಡುಗಡ್ಡೆಯಲ್ಲಿಯೇ ಉಳಿಯಬಯಸುವ ತಮ್ಮ ಇರಾದೆಯನ್ನು ಹಾಡಿಹೊಗಳುತ್ತಾರೆ.

Ithacaಗೆ ಮರಳುವ ತಮ್ಮ ಆಶಯ ಬಿಟ್ಟ ನಾವಿಕರು ಅದನ್ನು ಯೂಲಿಸಿಸ್‍ನಲ್ಲಿ ಹೇಳುತ್ತಾರೆ.

“ Dear is the memory of our wedded lives/
And dear the last embraces of our wives/
And their warm tears but all bath suffer’d change”.

ತಮ್ಮ ದೀರ್ಘ ಅನುಪಸ್ಥಿತಿಯಲ್ಲಿ ತಮ್ಮ ಮನೆಗಳಲ್ಲಿ ಆಗಿರುವ ಹತ್ತು ಹಲವು ಬದಲಾವಣೆಗಳು ಪುನಃ ತಮ್ಮ ಪುನರಾಗಮನದಿಂದ ತಮ್ಮ ಮನೆಗಳಲ್ಲಿ ಇಲ್ಲದ ತೊಂದರೆಗಳನ್ನು ಉಂಟುಮಾಡಬಹುದು. ಹಾಗಾಗಿ ಇಲ್ಲಿಯೇ ನಡುಗಡ್ಡೆಯಲ್ಲಿ ಉಳಿದುಬಿಡುವುದು ಒಳ್ಳೆಯದೆನ್ನುತ್ತಾರೆ.

ಕೊನೆಯ ಹಾಡಿನಲ್ಲಿ ದೇವ ಮಾನವರ ನಡುವಿನ ಬದುಕಿನ ಭಿನ್ನತೆಯನ್ನು ವ್ಯಕ್ತಗೊಳಿಸುವ ನಾವಿಕರು ಈ ನಾಡು ದೈವಿಕ ಲೋಕದ ಎಲ್ಲ ಲಕ್ಷಣಗಳ ಹೊಂದಿದೆ. ಮಾನವ ಲೋಕದ ಕಷ್ಟಕೋಟಲೆಗಳು ಇಲ್ಲಿಲ್ಲ. ದೇವರು ಪಕ್ಷಪಾತಿ. ಮಾನವರನ್ನು ಸಂಕಟಗಳಿಗೆ ಈಡುಮಾಡಿ ಅವರು ತೊಳಲಾಡುವುದನ್ನು ನೋಡುತ್ತಾ, ತನ್ನ ಆರಾಧಿಸುವಂತೆ ಮಾಡುತ್ತಾನೆ. ಮಾನವರು ಆತನ ಸ್ತುತಿಸುತ್ತಾ ದೀನರಾಗುವಂತೆ ಮಾಡುತ್ತಾನೆ. ಅದಕ್ಕಾಗಿ ಜನರು ತಮ್ಮ ಸಂಕಟಗಳಿಗೆ ತಲೆಕೆಡಿಸಿಕೊಳ್ಳದೇ ಲೋಟಸ್ ನಡುಗಡ್ಡೆಯ ಸುಂದರ ಕ್ಲೇಶರಹಿತ ಬದುಕನ್ನು ಒಪ್ಪಿಕೊಳ್ಳುವುದೇ ಹಿತವೆಂದು ಹೇಳುತ್ತಾರೆ. “Slumber is more sweet than toil”.

ಜೀವನದ ದಾರಿಯಲ್ಲಿ ಬರಿಯ ಸಂಪತ್ತು, ಕೀರ್ತಿಗಳೇ ಪ್ರಮುಖವಾಗಿರದೇ ಆತ್ಮ ಸಂತೃಪ್ತಿ ತರುವ ಕೆಲವು ನಿರ್ಧಾರಗಳು, ಸೌಂದರ್ಯ ಪ್ರಜ್ಞೆ ನೀಡುವ ಆನಂದ ಇವು ಕೂಡಾ ಬದುಕನ್ನು ಸಂಭ್ರಮಿಸಲು ಕಾರಣವಾಗುತ್ತವೆ ಎಂಬ ಶ್ರೇಷ್ಠ ಸಂದೇಶ ನೀಡುವ ಟೆನಿಸನ್‍ನ ಕವಿತೆ “The Beggar Maid”. ಇದೊಂದು ಬಹು ಸುಂದರವಾದ ಕವಿತೆ. ಕಾವ್ಯಾತ್ಮಕವಾದ ಲಯಪ್ರದವಾದ ಕಲೆ ಆತನಿಗೆ ಸಿದ್ದಿಸಿತ್ತು. ಆಫ್ರಿಕನ್ ದಂತಕಥೆಗಳಲ್ಲಿ ಬರುವ ಕೊಪೆಟುವಾ ಚಕ್ರವರ್ತಿ ಒಬ್ಬ ಸಾಮಾನ್ಯ ಬಿಕ್ಷುಕ ಹುಡುಗಿಯ ಸೌಂದರ್ಯಕ್ಕೆ ಮಾರುಹೋಗಿ ಆಕೆಯನ್ನು ವರಿಸುವ ಸುಂದರ ಪರಿಕಲ್ಪನೆಯ ಕವಿತೆ. ಆಕೆ ರಾಜನೆದುರು ಹಾಜರಾಗುವ ಸನ್ನಿವೇಷವನ್ನು ಕವಿ ಹೀಗೆ ವರ್ಣಿಸುತ್ತಾನೆ.

“Her Arms across her breast she laid:
She was more fair than words can say:
Bare footed came the beggar maid
Before the king Cophetua.”

ರಾಜನೆದುರು ಬರಿಗಾಲಲ್ಲಿ ಬರುವ ಆ ಭಿಕ್ಷುಕ ಹುಡುಗಿಯ ಸೌಂದರ್ಯ ಕಂಡು ಬೆರಗಾದ ರಾಜ ತನ್ನ ಸಿಂಹಾಸನದಿಂದ ಇಳಿದುಬಂದು ಆಕೆಯನ್ನು ಇದಿರುಗೊಳ್ಳುತ್ತಾನೆ. ದಿನದ ಬೆಳಕಿಗಿಂತ ಹೆಚ್ಚು ಸೌಂದರ್ಯವನ್ನು ಹೊಂದಿದ ಆಕೆಯನ್ನು ಆಸ್ಥಾನಿಗರು ಒಬ್ಬೊಬ್ಬರಾಗಿ ಬಣ್ಣಿಸತೊಡಗುತ್ತಾರೆ.ಒಬ್ಬ ಆಕೆಯ ಕಣ್ಣನ್ನು ಹೊಗಳಿದರೆ, ಇನ್ನೊಬ್ಬ ಆಕೆಯ ಹೇರಳ ಕಡುಕಪ್ಪುಗೂದಲನ್ನು ಬಣ್ಣಿಸುತ್ತಾನೆ ಇನ್ನೊಬ್ಬ ಆಕೆಯ ಮೊಣಕಾಲಿನ ಚೆಂದವನ್ನು ವರ್ಣಿಸಿದರೆ ಮತ್ತೊಬ್ಬ ಆಕೆಯ ಸುಂದರ ಮುಖ ಚಹರೆಯನ್ನು ಕೊಂಡಾಡುತ್ತಾನೆ. ಆಕೆ ಬರಿಯ ಮಾನವ ಸ್ತ್ರೀಯಾಗಿರದೇ ದೈವಿಕ ಸೌಂದರ್ಯದ ಪ್ರತಿನಿಧಿಯಂತೆ ಕಂಗೊಳಿಸುತ್ತಿದ್ದಾಳೆ. ಆಕೆಯ ಅನುಪಮ ನಿಲುವಿಗೆ ಮರುಳಾದ ರಾಜ ಹೀಗೆ ಉದ್ಘೋಷಿಸುತ್ತಾನೆ. “This beggar maid shall be my queen”

ಇದಲ್ಲದೇ ಇಂಗ್ಲೆಂಡಿನ ಇತಿಹಾಸದಲ್ಲಿ ವಿಜ್ಞಾನ ಮತ್ತು ಧರ್ಮದ ನಡುವಿನ ಬಹುದೊಡ್ಡ ಸಂಘರ್ಷದ ಕಾಲವೆಂದರೆ ಅದು ವಿಕ್ಟೋರಿಯನ್ ಪಿರಿಯಡ್. ಒಂದೆಡೆ ಆಗಷ್ಟೇ ವೈಜ್ಞಾನಿಕ ಪರಿಶೋಧನೆಗಳು ಲಗ್ಗೆ ಇಟ್ಟು, ಹೊಸಹೊಸ ಆವಿಷ್ಕಾರಗಳು ನಡೆದು ವೈಚಾರಿಕ ಗುಂಪು ಧರ್ಮದ ಗೊಡ್ಡು ತತ್ವಗಳನ್ನು ಹೀಗಳೆಯಲಾರಂಭಿಸಿದರೆ, ಇನ್ನೊಂದೆಡೆ ಧಾರ್ಮಿಕ ಪ್ರತಿಪಾದಕರು ಧರ್ಮದ ಪರಿಕಲ್ಪನೆಗಳನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಿದ್ದರು. ಈ ಸಂಧಿಕಾಲದಲ್ಲಿ ಬರೆಯಲು ಪ್ರಾರಂಭಿಸಿದ ಟೆನ್ನಿಸನ್ ತನ್ನ ಇನ್ನಿತರ ಕಾವ್ಯಗಳಲ್ಲಿ ಈ ದ್ವಂದ್ವಗಳನ್ನು ಕೂಡಾ ಪ್ರತಿಪಾದಿಸುತ್ತಾನೆ.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x