ಮರೆಯಲಾಗದ ಮದುವೆ (ಭಾಗ 10): ನಾರಾಯಣ ಎಮ್ ಎಸ್

-೧೦-

ಬಹುಶಃ ಬದುಕಿನಲ್ಲಿ ಮೊದಲಬಾರಿಗೆ ಅಯ್ಯರಿಗೆ ತನಗೆ ವಯಸ್ಸಾಗುತ್ತಿರುವ ಅರಿವಾಯಿತು. ಕೊಮ್ಮರಕುಡಿಯಿಂದ ಗೂಡೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯರ್ ಒಂದೆರಡು ಮೈಲು ನಡೆಯುವಷ್ಟರಲ್ಲೇ ಹೈರಾಣಾಗಿ ಬಿಟ್ಟಿದ್ದರು. ಮೊದಲೇ ಅಯ್ಯರಿಗೆ ಒರಟು ರಸ್ತೆಯಮೇಲೆ ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಡೆದು ಅಭ್ಯಾಸವಿರಲಿಲ್ಲ, ಸಾಲದ್ದಕ್ಕೆ ಏರುಬಿಸಿಲು ಬೇರೆ. ಅರೆಕ್ಷಣಕ್ಕೆ ಸುಮ್ಮನೆ ಕೊಮ್ಮರಕುಡಿ ರೈಲ್ವೇ ಸ್ಟೇಷನ್ನಿಗೆ ಮರಳಿ ಸಂಜೆ ನಾಲ್ಕೂಕಾಲಿನವರೆಗೂ ಕಾದು ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ನೆಲ್ಲೂರಿಗೆ ಹೋದರೆ ಹೇಗೆಂಬ ಯೋಚನೆ ಬಂತು. ಮರುಕ್ಷಣವೇ ಟಿಕೆಟ್ಟಿಗೆ ಹಣವಿಲ್ಲದ್ದು ನೆನಪಾಗಿ ಖೇದವಾಯಿತು. ಹಿಂದೆಯೇ ಆಪತ್ಕಾಲದಲ್ಲಿ ಅನಿವಾರ್ಯವಾಗಿ ಮಾಡುವ ತಪ್ಪು ಪಾಪವಾಗಲಾರದೆನಿಸಿತು. ತಕ್ಷಣ “ಸರಿತಪ್ಪುಗಳ ಲೆಕ್ಕಾಚಾರದ ತಾಕಲಾಟ ನಮ್ಮ ವಿವೇಕಕ್ಕೆ ನಿಲುಕದ್ದು ಕಂದಾ. ಅದನ್ನೆಲ್ಲಾ ಆ ತಿಮ್ಮಪ್ಪನಿಗೆ ಬಿಡು. ನಾವು ನಮ್ಮ ನಿಯತ್ತು ನಮ್ಮ ಆತ್ಮಸಾಕ್ಷಿ ಶುದ್ಧ ಇಟ್ಕೋಳೋದಷ್ಟೆ ಮುಖ್ಯ ನೋಡು, ಉಳಿದದ್ದೆಲ್ಲಾ ಆ ಭಗವಂತ ನೋಡ್ಕೋತಾನೆ” ಎಂದ ಅವಧೂತರ ದನಿ ಕಿವಿಯಲ್ಲಿ ರಿಂಗಣಿಸಿದಂತಾಯ್ತು. ಹಿಂದಿನ ರಾತ್ರಿಯ ಅನುಭವದ ನೆನಪಾದೊಡನೆ ಮೊದಲೇ ಕ್ಷೀಣಗೊಂಡಿದ್ದ ಅಯ್ಯರಿಗೆ ಇನ್ನಷ್ಟು ಸುಸ್ತಾದಂತೆನಿಸಿತು. ಉಸ್ಸಪ್ಪಾ… ಎಂದು ಹಾದಿ ಬದಿಯಲ್ಲಿದ್ದ ಕಲ್ಲಿನಮೇಲೆ ಕುಳಿತರು.

ಮನಸ್ಸು ತನ್ನಷ್ಟಕ್ಕೆತಾನೇ ಹಿಂದಿನ ರಾತ್ರಿಯ ಅನುಭವದ ಸುತ್ತ ಗಿರಕಿ ಹೊಡೆಯತೊಡಗಿತು.’ಅಬ್ಬಾ! ಅದೇನ್ಕನಸೋ ಕಣ್ಕಟ್ಟೋ… ಭ್ರಮೆಯೋ ಭ್ರಾಂತೋ… ಆ ಭಗವಂತ ಬಲ್ಲ. ಒಟ್ಟಾರೆ ನೆನಸ್ಕೊಂಡ್ರೆ ನಡ್ಕ ಹುಟ್ಟತ್ತೆ’ ಅಂದುಕೊಂಡರು. ಸ್ವರ್ಗ ನರಕ ಅನ್ನೋದೆಲ್ಲಾ ಶುದ್ಧ ಸುಳ್ಳು, ಮಾಡಿದ ಪಾಪಗಳ ಫಲವನ್ನು ಈ ಜನ್ಮದಲ್ಲೇ ಅನುಭವಿಸಬೇಕು ಅನ್ನಿಸಿ ಹಿಂದಿನ ರಾತ್ರಿಯಿಂದ ತಾವು ಅನುಭವಿಸುತ್ತಿದ್ದ ಪಡಿಪಾಟಲು ಅದರದೇ ಒಂದು ಭಾಗವೆಂದುಕೊಂಡರು. ಟಿಕೆಟ್ಟಿಲ್ಲದೇ ಪ್ರಯಾಣಿಸುವ ಯೋಚನೆ ತನ್ನಷ್ಟಕ್ಕೇ ಸತ್ತುಹೋಯಿತು. ಇನ್ನೆಂದೂ ಪರಸ್ತ್ರೀಯರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಮಾಡಕೂಡದೆಂಬ ಸಂಕಲ್ಪವೂ ಮೂಡಿತು. ಬದುಕಿನ ಉಳಿದ ಭಾಗವನ್ನಾದರೂ ಕಳಂಕರಹಿತವಾಗಿ ನಡೆಸಿ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಜೀವಿಸಬೇಕೆನಿಸಿತು. ಎಷ್ಟೇ ಕಷ್ಟವಾದರೂ ನಡೆದುಕೊಂಡೇ ಗೂಡೂರಿಗೆ ಹೋಗಬೇಕೆಂಬ ನಿಶ್ಚಯ ಮೂಡಿತು. ಭವಿಷ್ಯದಲ್ಲಿ ನೈತಿಕತೆಯಿಂದ ಬದುಕಬೇಕೆಂಬ ಯೋಚನೆಯಿಂದಲೇ ತನ್ನ ದಣಿದ ದೇಹಕ್ಕೆ ನವಚೈತನ್ಯ ತುಂಬುತ್ತಿದೆ ಅನ್ನಿಸಿತು. ಕುಳಿತಲ್ಲಿಂದೆದ್ದು ಹೊಸ ಹುಮ್ಮಸ್ಸಿನಿಂದ ಗೂಡೂರಿನತ್ತ ಹಜ್ಜೆಹಾಕಿದರು.

ಹೊಸದಾಗಿ ಮೂಡಿದ ಹುಮ್ಮಸ್ಸು ಅಯ್ಯರನ್ನು ಇನ್ನೆರಡು ಮೈಲು ದೂರ ಕೊಂಡೊಯ್ದಿತ್ತಾದರೂ ಕ್ರಮೇಣ ಹೆಚ್ಚುತ್ತಿದ್ದ ಆಯಾಸದಿಂದ ಅವರ ನಡಿಗೆಯ ವೇಗ ಕುಂಠಿತಗೊಂಡಿತ್ತು. ಬೆಳಗ್ಗೆ ಹೊಟ್ಟೆ ಸೇರಿದ್ದ ನಾಕಿಡ್ಲಿ ಗುರುತಿಲ್ಲದಂತೆ ಕರಗಿ ಹಸಿವು ಮತ್ತೊಮ್ಮೆ ಹಾಜರಿ ಹಾಕಿತ್ತು. ದೂರದಲ್ಲೆಲ್ಲೋ ಲೌಡ್ ಸ್ಪೀಕರಿನ ಸದ್ದು ಕೇಳುತ್ತಿತ್ತು. ಸಮೀಪ ಬಂದಂತೆಲ್ಲಾ ಸ್ಪೀಕರಿನ ಸದ್ದು ನಿಧಾನಕ್ಕೆ ಜೋರಾಗುತ್ತಿತ್ತಾದರೂ ಇನ್ನೂ ವಿಚಾರ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಇನ್ನಷ್ಟು ಹತ್ತಿರವಾಗುತ್ತಿದ್ದಂತೆ ಯಾವುದೋ ಪ್ರವಚನ ನಡೆಯುತ್ತಿರಬೇಕೆಂದು ಅಂದಾಜಿಸಿದರು. ಹಣೆಯಮುಂದೆ ಬಿಸಿಲಿಗೆ ಅಡ್ಡವಾಗಿ ಅಂಗೈಯನ್ನು ಹಿಡಿದು ಕಣ್ಣು ಕಿರಿದಾಗಿಸಿ ನೋಡಿದರು. ಯಾವುದೋ ದೇವಸ್ಥಾನ ಇರಬೇಕೆನಿಸಿತು. ಭಗವಂತಾ ನೀನೇ ಏನಾದ್ರೂ ದಾರಿ ತೋರಪ್ಪಾ ಎನ್ನುತ್ತಾ ದೇಗುಲದತ್ತ ಮುನ್ನಡೆದರು. ಹತ್ತಿರ ಹೋದಾಗ ಎದುರಾದ ಹನುಮದೇವರ ಗುಡಿಯಲ್ಲಿ ಏನೋ ಸಮಾರಂಭ ನಡೆಯುತ್ತಿದ್ದುದು ತಿಳಿಯಿತು. ಏನಾದರೂ ಪ್ರಸಾದ ಸಿಗಬಹುದೆಂಬ ವಿಶ್ವಾಸ ಮೂಡಿ ಹುಟ್ಟಿಸಿದ ದೇವರು ಹಲ್ಲುಮೇಯಿಸುವುದಿಲ್ಲ ಎಂದುಕೊಳ್ಳುತ್ತಾ ದೇಗುಲದ ಹೊರಗಿನಿಂದಲೇ ಮಾರುತಿಗೆ ಕೈಮುಗಿದು ಅಲ್ಲೇ ಪ್ರಾಂಗಣದಲ್ಲಿ ಕುಳಿತರು. ಪ್ರವಚನಕಾರರ ಮಾತುಗಳು ಈಗ ಸ್ಪಷ್ಟವಾಗಿ ಕೇಳುತ್ತಿತ್ತು. “…ಹೇ ಗೋಸಾಯಿಯೇ, ಧರ್ಮರಕ್ಷಣೆಗೆಂದು ಅವತಾರವೆತ್ತಿರುವ ನೀನು ವ್ಯಾಧನಂತೆ ಅವಿತು ನನ್ನನ್ನು ಕೊಂದದ್ದೇಕೆ? ನಾ ಶತ್ರುವಾಗಿ ಸುಗ್ರೀವ ನಿನಗೆ ಪ್ರಿಯನಾದದ್ದಾದರೂ ಏಕೆ? ನನ್ನ ಯಾವ ತಪ್ಪಿಗೆ ಈ ದಂಡನೆ ಮಹಾಪ್ರಭೂ” ಮಾತು ಕೇಳುತ್ತಿದ್ದಂತೆಯೇ ವಾಲೀವಧೆಯ ಪ್ರಸಂಗದ ಪ್ರಸ್ತಾಪವಾಗುತ್ತಿದೆಯೆಂದು ಅರಿವಾಯಿತು. ಮೊದಲೇ ಧರ್ಮಸೂಕ್ಷ್ಮಗಳ ಗುಂಗಿನಲ್ಲಿದ್ದ ಅಯ್ಯರ್ ಮೈಯೆಲ್ಲಾ ಕಿವಿಯಾಗಿ ಕೇಳಿದರು.

“ಅನುಜವಧೂ ಭಗಿನೀ ಸುತನಾರೀ, ಸುನು ಸಠ ಕನ್ಯಾ ಸಮ ಏ ಚಾರೀ
ಇನ್ಹಹಿ ಕುದೃಷ್ಠಿ ಬಿಲೋಕಯಿ ಜೋಯಿ, ತಾಹಿ ಬಂಧೆ ಕುಛ್ ಪಾಪ ನ ಹೋಯಿ”

ರಾಗವಾಗಿ ರಾಮಚರಿತ ಮಾನಸದ ದೋಹವನ್ನು ಹಾಡಿದ ದಾಸರು ವ್ಯಾಖ್ಯಾನ ಮುಂದುವರೆಸಿದರು. “ಹೇ ಮೂರ್ಖನೇ ಕೇಳು, ತಮ್ಮನ ಹೆಂಡತಿ, ಸಹೋದರಿ, ಸೊಸೆ ಮತ್ತು ಕನ್ಯೆ ಈ ನಾಲ್ವರೂ ಸಮಾನರು. ಇವರನ್ನು ಕೆಟ್ಟದೃಷ್ಟಿಯಿಂದ ನೋಡುವವರನ್ನು ಕೊಲ್ಲುವುದರಿಂದ ಯಾವ ಪಾಪವೂ ಬರುವುದಿಲ್ಲ. ಬದಲಿಗೆ ಪುಣ್ಯವೇ ಬರುತ್ತದೆ. ಕೆಲವು ಪ್ರಾಣಿಗಳು ಸಂಬಂಧದ ಪರಿವೆಯಿಲ್ಲದೇ ಸಂಭೋಗನಡೆಸುವಂತೆ ಮನುಷ್ಯರೂ ಪಶುಪ್ರವೃತ್ತಿಯಿಂದ ನಡೆದುಕೊಂಡರೆ ನಮಗೂ ಮೃಗಗಳಿಗೂ ಇರುವ ವ್ಯತ್ಯಾಸವಾದರೂ ಏನು? ಕೇವಲ ಮನಷ್ಯನಾಗಿ ಹುಟ್ಟಿದರೆ ಮಾತ್ರ ಸಾಲದು ನಮ್ಮ ವರ್ತನೆಯಲ್ಲೂ ಮಾನವೀಯತೆ ಇರಬೇಕು” ಅಯ್ಯರಿಗೆ ದಾಸರು ನೇರವಾಗಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಂತೆ ತೋರಿತು. ಎದ್ದು ತುಸುದೂರದಲ್ಲಿದ್ದ ಕೊಳಾಯಿಯಲ್ಲಿ ಕೈಕಾಲು ತೊಳೆದು ಸ್ವಲ್ಪ ನೀರುಕುಡಿದು ದೇಗುಲದ ಒಳನಡೆದರು.
ಒಳಗೆ ಸಾಕಷ್ಟು ಜನಜಂಗುಳಿಯಿತ್ತು. ದೇವಸ್ಥಾನದ ಒಳಗಿನ ಪ್ರಾಕಾರದ ಬಲಭಾಗದಲ್ಲಿ ಪ್ರವಚನ ನಡೆಯುತ್ತಿತ್ತು. ಒಂದಷ್ಟು ಜನ ಕುಳಿತು ಪ್ರವಚನ ಕೇಳುತ್ತಿದ್ದರು. ಗರ್ಭಗುಡಿಯೊಳಗೆ ಇಣುಕಿದಾಗ ತೆರೆಯೆಳೆದಿದ್ದು ಕಂಡಿತು. ಮೂರುಸುತ್ತು ಪ್ರದಕ್ಷಿಣೆ ಹಾಕಿದ ಅಯ್ಯರ್ ಪ್ರವಚನ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ವೇದಿಕೆಯಮೇಲೆ ಕುಳಿತು ಪ್ರವಚನ ಮಾಡುತ್ತಿದ್ದ ದಾಸರ ಪಕ್ಕದಲ್ಲಿ ಮರದ ಕುರ್ಚಿಯಮೇಲೊಂದು ರಾಮದೇವರ ಪಟವಿತ್ತು. ಸೀತಾಲಕ್ಷ್ಮಣ ಸಮೇತನಾಗಿದ್ದ ಶ್ರೀರಾಮನ ಕೆಳಗೆ ಎಂದಿನಂತೆ ಭಜರಂಗಬಲಿ ವೀರಾಸನದಲ್ಲಿ ವಿರಾಜಮಾನರಾಗಿದ್ದರು. ಪಟದ ಕೆಳಗೊಂದು ಚಿಕ್ಕ ಪೀಠ. ಆ ಪೀಠದಲ್ಲಿಟ್ಟಿದ್ದ ಚಿಕ್ಕಫೋಟೋ ಪರಿಚಿತವಾಗಿದ್ದಂತೆ ತೋರಿತು. ಸೂಕ್ಷ್ಮವಾಗಿ ಗಮನಿಸಿ ನೋಡಿದರು. ಅನುಮಾನವೇ ಇಲ್ಲ! ತಿರುವಾರೂರಿನ ತಮ್ಮ ಮನೆಯ ದೇವರಕೋಣೆಯಲ್ಲಿದ್ದ ಅವಧೂತರದ್ದೇ ಫೋಟೋ! ಅರೆಕ್ಷಣ ಅಯ್ಯರಿಗೆ ರೋಮಾಂಚನವಾದಂತಾಯ್ತು. ಆ ಫೋಟೋವನ್ನೇ ದಿಟ್ಟಿಸಿದರು. ಅವಧೂತರ ನಗುಮುಖ ಇನ್ನಷ್ಟು ಅರಳಿದಂತೆ ಭಾಸವಾಯಿತು. “ಇಂದಿನಿಂದಲೇ ಹೊಸ ಮನುಷ್ಯನಾಗು ಮಗೂ…ಮನದ ಎಲ್ಲ ಗೊಂದಲಗಳನ್ನು ಆ ತಿಮ್ಮಪ್ಪನ ಮಡಿಲಿಗೆ ಹಾಕಿ ಹಗುರವಾಗು, ಶ್ರೇಯಸ್ಸಾಗುವುದು” ವಾತ್ಸಲ್ಯಭರಿತ ಅವಧೂತರ ದನಿ ಕಿವಿ ತುಂಬಿದಂತಾಯಿತು. ಒಂದು ರೀತಿ ನಿರುಮ್ಮಳ ಸ್ಥಿತಿಯ ಅನುಭವವಾಯಿತು.

ಹಿಂದಿನ ರಾತ್ರಿಯಿಂದ ನಡೆಯುತ್ತಿದ್ದ ಘಟನಾವಳಿಗಳು ಕೇವಲ ಕಾಕತಾಳೀಯವಾಗಿರಲು ಹೇಗೆ ಸಾಧ್ಯವೆಂಬ ಪ್ರಶ್ನೆ ಹುಟ್ಟಿತು. ಕೊಮ್ಮರಪುಡಿ ಸ್ಟೇಷನ್ನಿನಲ್ಲಿ ಕಂಡ ಕನಸಿನಲ್ಲಿ ಅವಧೂತರು ಬಂದದ್ದು, ತಾವು ನೆಲ್ಲೂರಿಗೆ ಹೋಗದೆ ಗೂಡೂರಿಗೆ ನಡಿಗೆಯಲ್ಲಿ ಹೊರಟದ್ದು, ದಾರಿಯಲ್ಲಿ ಈ ದೇಗುಲ ಸಿಕ್ಕಿ ಇಲ್ಲಿ ಬಂದೊಡನೆ ದಾಸರು ತನ್ನ ಪರಿಸ್ಥಿತಿಗೆ ಹೊಂದುವಂಥದ್ದೇ ದೋಹಾ ವಾಚಿಸಿ ವ್ಯಾಖ್ಯಾನ ಮಾಡಿದ್ದು, ಒಳಗೆ ಹೋದಾಗ ಅಲ್ಲಿಯೂ ಅವಧೂತರ ಭಾವಚಿತ್ರವಿದ್ದದ್ದು ಇವೆಲ್ಲವೂ ಕಾಕತಾಳೀಯವಾಗಿರಲು ಸಾಧ್ಯವಿಲ್ಲವೆಂಬ ಭಾವನೆ ಮೂಡಿತು. ಅಷ್ಟರಲ್ಲಿ ಗರ್ಭಗುಡಿಯಿಂದ ತೆರೆಸರಿಸಿದ ಸದ್ದು ಕೇಳಿದಂತಾಗಿ ಹಿಂದೆಯೇ ಘಂಟಾನಾದವೂ ಮೊಳಗಿತು. ಮಹಾಮಂಗಳಾರತಿಯ ಸಮಯವಾದ್ದರಿಂದ ಪ್ರವಚನ ನಿಲ್ಲಿಸಿ ದಾಸರಾದಿಯಾಗಿ ಎಲ್ಲರೂ ಗರ್ಭಗುಡಿಯ ಮುಂದೆ ನೆರೆದರು. ಅಯ್ಯರ್ ಸಹ ಸಿಕ್ಕಿಕೊಂಡಿದ್ದ ಸಂಕಟದಿಂದ ಪಾರುಮಾಡುವಂತೆ ಕೋರಿ ತಾದಾತ್ಮ್ಯತೆಯಿಂದ ಮಾರುತಿಯ ಮೊರೆಹೋದರು. ಅರ್ಚಕರು ಕೊಟ್ಟ ತೀರ್ಥ, ಮಂಗಳಾರತಿ ಸ್ವೀಕರಿಸಿ ಹೊರಬಂದರು.

ದೇವಾಲಯದ ಪಕ್ಕದಲ್ಲಿ ಹಾಕಿದ್ದ ಚಪ್ಪರದಡಿಯಲ್ಲಿ ಊಟದ ವ್ಯವಸ್ಥೆ ಇರುವುದು ತಿಳಿದೊಡನೆ ಹೊಟ್ಟೆಯ ಕವಕವ ಒಮ್ಮೆಲೆ ಉಲ್ಬಣಗೊಂಡಂತಾಯಿತು. ತಡಮಾಡದೆ ಹೋಗಿ ಊಟದ ಸರತಿ ಸಾಲಿನಲ್ಲಿ ನಿಂತರು. ಕೆಲವೇ ನಿಮಿಷಗಳಲ್ಲಿ ಸಾಲು ಕರಗಿ ಮೊದಲ ಪಂಕ್ತಿಯಲ್ಲೇ ಊಟಕ್ಕೆ ಕೂರಲು ಅವಕಾಶವಾಯಿತು. ಊಟಮಾಡುತ್ತಿದ್ದ ಅಯ್ಯರಿಗೊಂದು ಅಚ್ಚರಿ ಕಾದಿತ್ತು. ಕಜ್ಜಾಯ ಬಡಿಸುತ್ತ ಬಂದ ವ್ಯಕ್ತಿಯೊಬ್ಬ ಅಯ್ಯರನ್ನು ಕಂಡು “ಇದೇನ್ ಸಾವ್ಕಾರ್ರೇ ಇಲ್ಲಿ ನೀವೂ…ಚೆನ್ನಾಗಿದೀರಾ?” ಎಂದು ಹಾಗೇ ಮುಂದಿನವರಿಗೆ ಬಡಿಸುತ್ತಾ ಹೊರಟುಹೋದ. ಆ ವ್ಯಕ್ತಿಯ ಮುಖ ಪರಿಚಿತವೆನಿಸಿತಾದರೂ ತಕ್ಷಣಕ್ಕೆ ಯಾರೆಂದು ಗುರುತು ಹತ್ತಲಿಲ್ಲ. ಮುಳುಗುತ್ತಿದ್ದವನಿಗೆ ಸಿಕ್ಕ ಹುಲ್ಲುಕಡ್ಡಿ ಮತ್ತೆ ಮರೆಯಾದರೆ ಹೇಗಾಗುತ್ತದೋ ಹಾಗಿತ್ತು ಅಯ್ಯರ್ ಪರಿಸ್ಥಿತಿ. ಆ ಮನುಷ್ಯ ಇನ್ನೇನಾದರೂ ಬಡಿಸಲು ಬರಬಹುದೆಂಬ ನಿರೀಕ್ಷೆಯಿಂದ ಅಯ್ಯರ್ ಬಡಿಸಲು ಬಂದವರನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ ಆ ವ್ಯಕ್ತಿ ಮತ್ತೆ ಇತ್ತ ಸುಳಿಯಲಿಲ್ಲ. ಬೇಗ ಊಟ ಮುಗಿಸಿ ಶತಗತಾಯ ಅವನನ್ನು ಹುಡುಕಿಯೇ ತೀರಬೇಕೆಂದುಕೊಂಡರು.

ಆತುರಾತುರದಲ್ಲಿ ಗಬಗಬನೆ ಒಂದಷ್ಟು ಹೊಟ್ಟೆಗಿಳಿಸಿದ ಅಯ್ಯರ್ ಬೇಗಬೇಗನೆ ಕೈ ತೊಳೆದುಕೊಂಡು ಹಿಂತಿರುಗುವಷ್ಟರಲ್ಲಿ ಆ ವ್ಯಕ್ತಿಯೇ ಎದುರಾಗಿ “ಇದೇನ್ ಸಾವ್ಕಾರ್ರೇ ನೀವಿಲ್ಲಿ…ಈ ಸ್ಥಿತೀಲಿ… ಯಾಕೆ ಏನ್ಸಮಾಚಾರ” ಎಂದು ವಿಚಾರಿಸಿದ. ಅಯ್ಯರಿಗೆ ಆ ವ್ಯಕ್ತಿಯ ಗುರುತು ಹತ್ತಲಿಲ್ಲವಾದರೂ “ಅಯ್ಯೋ ಅದೊಂದೊಡ್ಕತೆ, ಎಲ್ಲಾ ನನ್ಕರ್ಮ ಕಣಪ್ಪಾ ಏನ್ಹೇಳ್ಲಿ…ಅಂದ್ಹಾಗೆ ನೀನೂ…” ಎಂದದ್ದೇ ತಡ ಆ ವ್ಯಕ್ತಿ “ಯಾಕ್ಸಾವ್ಕಾರ್ರೆ ನನ್ಗುರ್ತಾಗ್ಲಿಲ್ವೇ…ನಾನು ಚಿನ್ನಪ್ಪ ತಿರುವಾರೂರಿನ ನಿಮ್ಹೋಟ್ಲುಗೆ ಸಣ್ಣ ಪುಟ್ಟ ರಿಪೇರೀ ಕೆಲ್ಸಕ್ಕೆ ಬರ್ತಿರ್ಲಿಲ್ವೇ, ನಾನು ಸ್ವಾಮಿ ಎಲೆಕ್ಟ್ರೀಷಿಯನ್ ಚಿನ್ನಪ್ಪಾ” ಎಂದು ಪರಿಚಯ ನೆನೆಪಿಸಿದ. ಠಕ್ಕನೆ ಅಯ್ಯರಿಗೆ ಚಿನ್ನಪ್ಪನ ಗುರುತು ಹತ್ತಿ ಅವನ ಕೈ ಹಿಡಿದು “ಚಿನ್ನಪ್ಪಾ…ದೇವ್ರು ಸಿಕ್ದಂಗೆ ಸಿಕ್ದೆ ನೋಡು” ಎನ್ನುವಷ್ಟರಲ್ಲಿ ದನಿ ಗದ್ಗದಗೊಂಡು ಮುಂದೆ ಮಾತು ಹೊರಡದೆ ಕಣ್ಣು ನೀರಾಡಿತು. “ಛೇ…ಸಾವ್ಕಾರ್ರೇ ಇದ್ಯಾಕೆ, ಏನಾಯ್ತು…ಸಮಾಧಾನ ತಂದ್ಕೋಳಿ” ಅಂದ ಚಿನ್ನಪ್ಪನಿಗೆ ಸಾವ್ಕಾರ್ರು ಯಾವುದೋ ದೊಡ್ಡ ತೊಂದರೆಗೇ ಸಿಲುಕಿರಬೇಕೆನಿಸಿತು. “ಬನ್ನಿ ಪಾಪ ತುಂಬಾ ದಣ್ದೀದೀರ ಹೊರ್ಗಡೆ ಅರ್ಳೀಮರದ ಕೆಳ್ಗೆ ಒಳ್ಳೇ ನೆರ್ಳಿರತ್ತೆ ಸ್ವಲ್ಪ ರೆಸ್ಟ್ ತಗೋಳೋರಂತೆ” ಎಂದು ಅಯ್ಯರ್ ಕೈಹಿಡಿದು ಹೊರಗಿದ್ದ ಅರಳೀಮರದ ಬಳಿ ಕರೆತಂದು “ಇಲ್ಲೇ ಒಂದ್ಗಳಿಗೆ ಮಲೀಕೊಂಡಿರಿ, ಅಷ್ಟ್ರಲ್ಲಿ ನಾನೂ ಒಂದೆರಡ್ತುತ್ ಹೊಟ್ಟೇಗ್ಹಾಕೊಂಡು ಬಂದ್ಬುಡ್ತೀನಿ, ನಿಧಾನ್ದಲ್ ಕೂತ್ಕೊಂಡ್ ಮಾತಾಡೋಣಂತೆ” ಎಂದು ಹೇಳಿ ಊಟ ಮಾಡಿ ಬರಲು ಹೊರಟ. ಉರಿಬಿಸಿಲಿನಲ್ಲಿ ನಾಲ್ಕೈದು ಮೈಲು ಬರಿಗಾಲಿನಲ್ಲಿ ನಡೆದಿದ್ದ ಅಯ್ಯರ್ ನಿಜಕ್ಕೂ ಬಹಳ ದಣಿದಿದ್ದರು. ಉಂಡು ಮರದನೆರಳಿನಲ್ಲಿ ಅಡ್ಡಾದೊಡನೆ ಅವರಿಗರಿವಿಲ್ಲದಂತೆ ನಿದ್ರೆ ಆವರಿಸಿತು.

“ಸಾವ್ಕಾರ್ರೇ… ಸಾವ್ಕಾರ್ರೇ…” ಎನ್ನುತ್ತಾ, ನೆಮ್ಮದಿಯಿಂದ ಮಲಗಿದ್ದ ಅಯ್ಯರನ್ನು ಚಿನ್ನಪ್ಪ ಒಲ್ಲದ ಮನಸ್ಸಿನಿಂದಲೇ ಎಚ್ಚರಿಸಿದ. ನಿದ್ದೆಯಿಂದೆದ್ದ ಅಯ್ಯರ್ “ಚಿನ್ನಪ್ಪಾ ನಂಗೂ ನಿಂಗೂ ಅದೇನ್ ಋಣಾನ್ಬಂಧಾನೋ ಕಷ್ಟ ಕಾಲ್ದಲ್ಲಿ ದೇವ್ರು ಸಿಕ್ಹಾಗ್ ಸಿಕ್ಕೀದೀಯ, ದಯ್ಮಾಡಿ ನಂಗ್ಸೊಲ್ಪ ಸಹಾಯ ಮಾಡಪ್ಪಾ…” ಎಂದಾಗ ದನಿ ನಡುಗುತ್ತಿತ್ತು. “ಛೇ ಛೆ…ಅದೇನ್ಮಾತೂಂತಾಡ್ತೀರಿ, ಬನ್ನಿ ಇಲ್ಲೇ ರೋಡ್ಸೈಡಲ್ಲಿ ಹೋಟ್ಲಿದೆ ಕಾಫೀಕುಡೀತ ಮಾತಾಡೋಣ ಅದೇನಾಯ್ತು ಹೇಳೋರಂತೆ” ಎಂದು ಅಲ್ಲೇ ರಸ್ತೆಬದಿಯಲ್ಲಿದ್ದ ಗುಡ್ಲು ಹೋಟ್ಲಲ್ಲಿ ಎರಡು ಕಾಫಿ ಹೇಳಿದ. ಹೋಟೆಲ್ಲಿನವನು ಕೊಟ್ಟ ಕಾಫಿಯಲ್ಲಿ ಒಂದು ಲೋಟವನ್ನು ಅಯ್ಯರ್ ಕೈಗಿತ್ತು “ಈಗ್ಹೇಳಿ ಸಾವ್ಕಾರ್ರೇ ನೀವ್ ಹ್ಯಾಗಿಲ್ಲೀಗ್ಬಂದ್ರೀ ಅದ್ಯಾಕೆ ಸರಿಯಾದ ಬಟ್ಟೇಬರೇನೂ ಇಲ್ದೆ ಈ ಸ್ಥಿತೀಲಿದೀರಿ? ಏನಾಯ್ತು” ಕೇಳಿದ. ಅಯ್ಯರ್ ತಾವು ತಿರವಾರೂರಿನಿಂದ ಮಗನ ಮದುವೆಗೆಂದು ಹೊರಟಾಗಿನಿಂದ ಹಿಡಿದು ಹನುಮದೇವರ ಗುಡಿಯಲ್ಲಿ ಚಿನ್ನಪ್ಪನನ್ನು ಭೇಟಿಯಾದವರೆಗಿನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದರು. ಕಥೆ ಕೇಳಿದ ಚಿನ್ನಪ್ಪ “ಅಯ್ಯೋದೇವ್ರೇ ಎಂಥೋರ್ಗೆ ಎಂಥಾ ಶೋಧನೆಯಪ್ಪಾ” ಎಂದು ನಿಟ್ಟುಸಿರು ಬಿಟ್ಟು “ಸಾವ್ಕಾರ್ರೇ ಅಮ್ಮೋರು ಮನೆಯೋರು ಏನ್ಮಾಡ್ತಿರ್ತಾರೋ!? ಎಲ್ಲಾ ತುಂಬಾ ಗಾಬ್ರಿ ಆಗಿರ್ತಾರಲ್ವಾ” ಅಂದ. ಅಯ್ಯರಿಗೆ ಮನೆಯವರ ನೆನಪಾಗಿ ಕಣ್ಣು ಒದ್ದೆಯಾಯಿತು. “ನಿಜಾ ಚಿನ್ನಪ್ಪಾ ಹ್ಯಾಗಾದ್ರೂ ಮಾಡಿ ಮೊದ್ಲು ಅವ್ರಿಗೆ ನನ್ನ ಸಮಾಚಾರ ತಿಳುಸ್ಬೇಕಲ್ಲಾ…” ಅಂದರು. “ವಿಚಾರ ತಿಳ್ಸಕ್ಕೆ ನಿಮ್ಹತ್ರ ಯಾವ್ದಾನ ಫೋನ್ ನಂಬರ್ ಏನಾರ ಇದ್ಯಾ ಸಾವ್ಕಾರ್ರೇ?” ಎಂದು ಕೇಳಿದ. ಅದಕ್ಕೆ ಅಯ್ಯರ್ “ಅಯ್ಯೋ ಫೋನ್ನಂಬರ್ ಯಾವ್ದೂ ಇಲ್ಲಪ್ಪಾ, ಆದ್ರೆ ನಂ ಬೀಗ್ರು ಹೋಟ್ಲು ಗ್ರ್ಯಾಂಡ್ ರೆಸಿಡೆನ್ಸೀಂತ, ತುಂಬಾ ದೊಡ್ಹೋಟ್ಲು, ಅಲ್ಲೀಗೆ ಬೇಕಾದ್ರೆ ಟೆಲಿಗ್ರಾಂ ಕಳುಸ್ಬೋದು ನೋಡು” ಅಂದರು. ಚಿನ್ನಪ್ಪ ತನ್ನ ವಾಚಿನಲ್ಲಿ ಸಮಯ ನೋಡಿಕೊಂಡ. ವಾಚು ನಾಲ್ಕೂವರೆ ತೋರಿಸುತ್ತಿತ್ತು. “ಈಗೇನೂ ಮಾಡಕ್ಬರಂಗಿಲ್ಲ ಸಾವ್ಕಾರ್ರೇ, ಈಗಿಂದೀಗ್ಲೆ ಗೂಡೂರಿಗೆ ಹೊರಟ್ರೂ ನಾವ್ತಲ್ಪೋ ಹೊತ್ಗೆ ಪೋಸ್ಟಾಫೀಸು ಮುಚ್ಬಿಟ್ಟಿರತ್ತೆ, ಇನ್ನೇನಿದ್ರೂ ಬೆಳಗ್ಗೆ ನೋಡ್ಬೇಕಷ್ಟೆ” ಅಂದ ನಿರಾಶನಾಗಿ.

ಇಷ್ಟಾದರೂ ಚಿನ್ನಪ್ಪ ಅಲ್ಲಿಗೇಕೆ ಬಂದಿದ್ದನೆಂಬುದು ಅಯ್ಯರಿಗೆ ತಿಳಿದಿರಲಿಲ್ಲ. ಚಿನ್ನಪ್ಪ ತಾನಾಗಿಯೇ ತನ್ನ ಹೆಂಡತಿಯ ಮನೆ ಒಂದೆರಡು ಮೈಲು ದೂರದಲ್ಲಿದ್ದ ಮನುಬೋಲವೆಂಬ ಹಳ್ಳಿಯಲ್ಲಿರುವುದಾಗಿ ಹೇಳಿದ. ಹೆಂಡತಿ ಬಾಣಂತನಕ್ಕೆಂದು ತವರಿನಲ್ಲಿದ್ದಿದ್ದರಿಂದ ಹೆಂಡತಿ ಮಕ್ಕಳನ್ನು ನೋಡಬಂದವನು ಹನುಮದೇವರ ಗುಡಿಯಲ್ಲಿದ್ದ ಹಬ್ಬಕ್ಕೆಂದು ಅಲ್ಲಿಗೆ ಬಂದಿದ್ದಾಗಿ ತಿಳಿಸಿದ. ಚಿನ್ನಪ್ಪನನ್ನು ತನ್ನ ಬಳಿ ಕರೆಸಿಕೊಂಡು ತಮ್ಮಿಬ್ಬರ ಭೇಟಿಮಾಡಿಸಿದ ಮಾರುತಿಗೆ ಅಯ್ಯರ್ ಮನದಲ್ಲೇ ವಂದಿಸಿದರು. ಚಿನ್ನಪ್ಪ ಅಯ್ಯರಿಗೆ ರಾತ್ರಿ ತನ್ನೊಂದಿಗೆ ಮನುಬೋಲದಲ್ಲಿ ತಂಗಲು ಹೇಳಿ ಮುಂಜಾನೆಯೇ ಗೂಡೂರಿಗೆ ಹೋಗಿ ಅಯ್ಯರ್ ಮನೆಯವರಿಗೆ ಟೆಲಿಗ್ರಾಂ ಕಳಿಸಬಹುದೆಂದು ತಿಳಿಸಿದ. ಮನುಬೋಲಕ್ಕೆ ಹೋಗುವ ಬಸ್ಸು ಸಂಜೆ ಆರು ಘಂಟೆಗೆ ಬರವುದಿತ್ತು. ಇಬ್ಬರೂ ಅಲ್ಲೇ ಬಸ್ಸಿಗಾಗಿ ಕಾಯುತ್ತಾ ಕುಳಿತರು.

ಬಸ್ಸಿಗೆ ಕಾಯುತ್ತಿದ್ದ ಅಯ್ಯರ್ ಬೆಳಗ್ಗೆವರೆಗೆ ಟೆಲಿಗ್ರಾಂ ಕಳಿಸಲು ಸಾಧ್ಯವಿಲ್ಲವೆಂಬ ಸತ್ಯವನ್ನು ಕಷ್ಟಪಟ್ಟು ಅರಗಿಸಿಕೊಂಡರು. ಟೆಲಿಗ್ರಾಂ ಕಳಿಸಿದಮೇಲೆ ಮುಂದೇನೆಂಬ ಪ್ರಶ್ನೆ ಎದುರಾಯಿತು. ವಿಶಾಖಪಟ್ಟಣಕ್ಕೆ ಹೋಗುವುದರಲ್ಲಿ ಅರ್ಥವಿಲ್ಲವೆನಿಸಿತು. ತಿರುವಾರೂರಿಗೆ ಹೋದರೂ ಮನೆಯ ಬೀಗದ ಕೈ ತಮ್ಮಬಳಿ ಇರಲಿಲ್ಲ. ಯಾರಾದರೂ ತಿಳಿದವರ ಮನೆಗೆ ಹೋಗಬಹುದಿತ್ತಾದರೂ ಊರವರ ನೂರಾರು ಪ್ರಶ್ನೆಗಳಿಗೆ ಉತ್ತರಿಸಲು ಮುಜುಗರವಾದೀತೆನಿಸಿತು. ಬೇರೆಲ್ಲಿಗೆ ಹೋಗಬಹುದೆಂದು ಯೋಚಿಸುತ್ತಿದ್ದಾಗ ಅವಧೂತರು ಮತ್ತೆಮತ್ತೆ ತಿರುಪತಿ ತಿಮ್ಮಪ್ಪನ ಪ್ರಸ್ತಾಪ ಮಾಡುತ್ತಿದ್ದುದು ನೆನಪಾಯಿತು. ಅಯ್ಯರ್ ಮೂರನೇ ಮಗಳು ರೇವತಿಯ ಯಜಮಾನರು ಕುಟುಂಬದೊಂದಿಗೆ ತಿರುಪತಿಯಲ್ಲಿ ನೆಲೆಸಿದ್ದರು. ಅಳಿಯಮಗಳಿಬ್ಬರೂ ಮದುವೆಗೆಂದು ವಿಶಾಖಪಟ್ಟಣಕ್ಕೆ ಹೋಗಿದ್ದರಾದರೂ ತಿರುಪತಿಯ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ರೇವತಿಯ ಮೈದುನ ಸೀನ ಯಾವುದೋ ತುರ್ತುಕೆಲಸವಿದ್ದುದರಿಂದ ಮದುವೆಗೆ ಹೋಗದೆ ಊರಲ್ಲೇ ಉಳಿದಿದ್ದುದು ನೆನಪಾಯಿತು. ಗೂಡೂರಿನಿಂದ ತಿರುಪತಿಗೆ ಎಷ್ಟುದೂರವಿರಬಹುದೆಂದು ಚಿನ್ನಪ್ಪನನ್ನು ಕೇಳಿದಾಗ ಅವನು ಸುಮಾರು ಎಪ್ಪತ್ತು ಮೈಲಾಗಬಹುದೆಂದೂ ಬಸ್ಸಿನಲ್ಲಿ ಎರಡೆರಡೂವರೆ ಘಂಟೆ ಪ್ರಯಾಣವೆಂದು ತಿಳಿಸಿದ. ಬೆಳಗ್ಗೆದ್ದು ಟೆಲಿಗ್ರಾಂ ಕಳಿಸಿ ತಿರುಪತಿಗೆ ಹೊರಟು ತಿಮ್ಮಪ್ಪನ ದರ್ಶನಪಡೆದು ಅವಧೂತರು ತಿಳಿಸಿದಂತೆ ಹೊಸಬದುಕು ಶುರುಮಾಡಬೇಕೆಂದುಕೊಂಡಾಗ ಅಯ್ಯರಿಗೆ ನಿರಾಳವೆನಿಸಿತು. ಸುಮಾರು ಆರರ ಆಸುಪಾಸಿಗೆ ಪ್ರೈವೇಟ್ ಬಸ್ಸು ಬಂತು. ಇಬ್ಬರೂ ಬಸ್ಸು ಹತ್ತಿ ಮನುಬೋಲಕ್ಕೆ ಹೊರಟರು.

ಮನುಬೋಲದಲ್ಲಿ ಚಿನ್ನಪ್ಪನ ಹೆಂಡತಿ, ಅತ್ತೆಮಾವಂದಿರು ಅಯ್ಯರಿಗೊದಗಿದ್ದ ಅವಸ್ಥೆಯನ್ನು ಕಣ್ಣೂ ಬಾಯಿ ಬಿಟ್ಟುಕೊಂಡು ಕೇಳಿದರು. ಮನೆಗೆ ಬಂದಿದ್ದವರು ಬಹಳ ಅನುಕೂಲಸ್ಥರೆಂದು ತಿಳಿದು ತಕ್ಕಮಟ್ಟಿಗೆ ಅಚ್ಚುಕಟ್ಟಾಗಿ ಅಡುಗೆಮಾಡಿ ಅಕ್ಕರೆಯಿಂದ ಸತ್ಕರಿಸಿದರು. ಅಯ್ಯರಿಗೆ ಮಲಗಲು ಇದ್ದುದುರಲ್ಲೇ ಒಳ್ಳೆಯ ಹಾಸುಹೊದಿಕೆಗಳ ವ್ಯವಸ್ಥೆ ಮಾಡಿಕೊಟ್ಟರು. ಬಡವರ ಮನೆಯ ಹೃದಯವಂತಿಕೆ ಮತ್ತು ಆತಿಥ್ಯಕಂಡ ಅಯ್ಯರ್ ಮನಸ್ಸು ಕೃತಜ್ಞತೆಯಿಂದ ತುಂಬಿಹೋಯಿತು. ಕೊಮ್ಮರಪುಡಿ ರೈಲ್ವೇ ಸ್ಟೇಷನ್ನಿನಲ್ಲಿ ಒಂಟಿಯಾಗಿ ಕಳೆದ ಹಿಂದಿನ ದಿನದ ರಾತ್ರಿಯ ಭೀಕರತೆ ನೆನಪಾಯಿತು. ಇಂದು ಅಪರಿಚಿತ ಮನುಬೋಲದಲ್ಲಿ ಚಿನ್ನಪ್ಪನ ಮನೆಯಲ್ಲಿ ಕಳೆಯುತ್ತಿದ್ದ ರಾತ್ರಿಯಲ್ಲಿ ಒಂದು ರೀತಿಯ ಸುಭದ್ರತೆಯ ಭಾವನೆ ಮೂಡಿತ್ತು. ನಿನ್ನೆಯಂತೆಯೇ ಇಂದೂ ಸಹ ತನ್ನ ಕುಟುಂಬ ತನ್ನಿಂದ ದೂರವೇ ಇತ್ತು. ಆದರೂ ನಿನ್ನೆ ಇರದಿದ್ದ ಈ ಭದ್ರತೆಯ ಭಾವನೆಯ ಅನುಭವಕ್ಕೆ ಕಾರಣವೇನಿರಬಹುದೆಂದು ಮನಸ್ಸು ಹುಡುಕತೊಡಗಿತು. ಹಿಂದಿನ ದಿನ ರೈಲ್ವೇ ಸ್ಟೇಷನ್ನಿನಲ್ಲಿ ಮಲಗಿದ್ದಾಗ ತಲೆಯಮೇಲೊಂದು ಸೂರಿತ್ತಾದರೂ ಇಂದಿನಂತೆ ಸುತ್ತಲೂ ಗೋಡೆಗಳಿಲ್ಲದಿದ್ದುದು ನೆನಪಾಯಿತು. ಆದರೂ ತಮ್ಮಲ್ಲಿಂದು ಮೂಡಿದ್ದ ಸುರಕ್ಷಾಭಾವಕ್ಕೆ ಜಡವಸ್ತುಗಳಿಂದ ಕಟ್ಟಿದ್ದ ಸುತ್ತಲಿನ ಗೋಡೆಗಳಿಗಿಂತಲೂ ಪರಿಚಿತ ಚಿನ್ನಪ್ಪನ ಸಂಸಾರದ ಸಾಮಿಪ್ಯವೇ ಮುಖ್ಯ ಕಾರಣವಿರಬೇಕೆಂಬ ಭಾವ ಮೂಡಿತು. ಸಾಮಾನ್ಯ ಮನುಷ್ಯನ ಮಾನಸಿಕ ಸ್ವಾಸ್ಥ್ಯಕ್ಕೆ ಕೌಟುಂಬಿಕ ವ್ಯವಸ್ಥೆಯ ಬೆಂಬಲ ಅನಿವಾರ್ಯವಿರಬೇಕೆನಿಸಿತು. ಚಿನ್ನಪ್ಪನ ಈ ಬೆಲೆಕಟ್ಟಲಾಗದ ಉಪಕಾರಕ್ಕೆ ಪ್ರತಿಯಾಗಿ ಊರಿಗೆ ಹೋದಕೂಡಲೆ ಏನಾದರೂ ಮಾಡಬೇಕೆಂಬ ಸಂಕಲ್ಪದೊಂದಿಗೆ ನಿದ್ರೆಗೆ ಜಾರಿದರು.

ನಾರಾಯಣ ಎಮ್ ಎಸ್

ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x