ರಾಧಾಕೃಷ್ಣ: ಆರಾ

“ನೀನೆ ನನ್ನಯ ಪ್ರಾಣ
ನೀನೆ ತ್ರಾಣ.
ನೀನೆ ಆಸರೆ
ನೀನೇನೆ ನನ್ನ ಜೀವನ..
ಸನಿಹವೆ ನೀ ಇರದಿರಲು…
ಹುಡುಕಿದೆ ನನ್ನ ಮನವನ್ನೆ!.
ಕಣ್ಣೆದುರು ನೀನಿರದೆ,
ಕಾಣದೆ ಹೋದೆ ನನ್ನೆ ನಾ ರಾಧೆ.
ನಿನ್ನ ಬಿಟ್ಟು ಹೇಗೆ ಇರಲಿ
ನಾನು ಒಬ್ಬಳೆ……”

ಪ್ರಸ್ತುತ ಕೊರೋನಾ ಸಂಕಷ್ಟದಲ್ಲಿ ಹಿರಿಯ-ಕಿರಿಯ ಭೇದಭಾವವಿಲ್ಲದೆ ಎಲ್ಲರ ಮನಸೂರೆಗೊಂಡಿರುವ ಧಾರಾವಾಹಿ ರಾಧಾಕೃಷ್ಣ. ರಾಧಾಕೃಷ್ಣರ ಅಮರ ಪ್ರೇಮಕಥೆಯ ಸಾರಾಂಶವನ್ನೊಳಗೊಂಡಿದೆ. ಇದಾಗಲೇ ಹಿಂದಿಯಲ್ಲಿ 450 ಕ್ಕೂ ಅಧಿಕ ಎಪಿಸೋಡ್ ಗಳನ್ನು ದಾಟಿ ನೋಡುಗರ ಮನಗೆದ್ದಿದೆ. ಕನ್ನಡದಲ್ಲಿ 100ಕ್ಕೂ ಅಧಿಕ ಕಂತುಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

“ರಾಧ…ರಾಧ…ರಾಧ..ಕೃಷ್ಣ” ನಾಲ್ಕು ವರುಷದ ಪುಟ್ಟ ಮಗುವೊಂದರ ಬಾಯಲ್ಲಿ ರಾಧಾಕೃಷ್ಣ ಧಾರಾವಾಹಿಯ ಲಿರಿಕ್ಸ್. ಮತ್ತೊಂದು ಪುಟಾಣಿ… ‘ಟುಟ್ಟು….ಟುಟ್ಟು…ಟುಡುಡುಡೂ’ ಸಂಗೀತವನ್ನ ಗುನುಗುತ್ತಿದ್ರೆ, ಗೆಳತಿಯ ಮಗ ಪ್ಲಾಸ್ಟಿಕ್ ಕೊಳವೆಯ ಸಹಾಯದಿಂದ ರಾಧಾಕೃಷ್ಣ ನಾಮಾಂಕಿತವನ್ನು ಮುಗ್ಧವಾಗಿ ನುಡಿಸುವುದನ್ನು ಕಂಡ ನನಗೆ ಆಶ್ಚರ್ಯವೆನಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ರಾಧಾಕೃಷ್ಣ ತುಂಬಾ ಫೇಮಸ್. “ಎಲ್ಲರಿಗೂ ರಾಧಾಕೃಷ್ಣ ಸೀರಿಯಲ್ ಹುಚ್ಚು ಹೆಚ್ಚಾಯ್ತಾ” ತಲೆಕೆರೆದುಕೊಂಡು ನಾನು ಒಮ್ಮೆ ನೋಡೆ ಬಿಡುವಾ ಅಂತ ಶಪಥ ಮಾಡಿ ಕುಳಿತೇಬಿಟ್ಟೆ. ನಿಜಕ್ಕೂ ಆ ಒಂದು ಗಂಟೆ ನನ್ನೇ ನಾ ಮರೆತೆ. ನೈಜ-ಕಲ್ಪನೆಗಳ ಪರಿಧಿಯಲ್ಲಿ ಅರಳಿದ ಮನಮೋಹಕ ಕಥೆಯನ್ನು ಆಸ್ವಾದಿಸುವುದೇ ಒಂದು ಚಂದ. ರಾಧಾಕೃಷ್ಣರ ಪ್ರೇಮ, ಶ್ರೀಕೃಷ್ಣನ ಬೋಧನೆ ಅನನ್ಯವಾದುದು.

ಉತ್ತರ ಭಾರತದ ಸಂಸ್ಕೃತಿ ಬಿಂಬಿಸುತ್ತೆ ನಮಗೆ ಇಷ್ಟ ಆಗೊಲ್ಲ ಅದಲ್ಲದೇ ಡಬ್ಬಿಂಗ್ ಸೀರಿಯಲ್ ಎಂಬುದು ಬೆರಳೆಣಿಕೆಯಷ್ಟು ಮಂದಿಯ ಅಭಿಪ್ರಾಯವೆಂದಿಟ್ಟುಕೊಳ್ಳೋಣ. ಸ್ಥಳ -ಭಾಷೆ, ಆಚಾರ-ವಿಚಾರಗಳು ಬೇರೆಯಾಗಿದ್ದರೂ ಜಗತ್ತಿನಲ್ಲಿ ಪ್ರೀತಿಗೆ ಭೇದವಿಲ್ಲ. ಮನುಜನ ಮನದೊಳಗಿಡುವುದು ಒಂದೇ ಪ್ರೀತಿ.. ನಿರ್ವಿಕಾರವಾದ ನಿಷ್ಕಲ್ಮಶ ಪ್ರೀತಿಯ ಅನುಭವಕ್ಕೆ ಚೌಕಟ್ಟಿನ ಸರಳು ಬೇಕೆ?.

ಪುರಾಣದ ರಾಧಾಕೃಷ್ಣ:::

ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತ ರಾಗಿದ್ದರು. ವೃಂದಾವನದಲ್ಲಿ ರಾಸಲೀಲೆ ಮಾಡಿದ ಗೋಪಿಕೆಯರಲ್ಲಿ ರಾಧೆಯು ಒಬ್ಬಳಾಗಿದ್ದಳು. ಗೋಪಿಕೆಯರೆಲ್ಲರೂ ಕೃಷ್ಣನಿಗೆ ಹತ್ತಿರವಾಗಿದ್ದರೂ ರಾಧೆಯನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದ. ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆ ಹಾಡುತ್ತಾ ನೃತ್ಯ ಮಾಡುತ್ತಿದ್ದಳು.ಆದರೆ ಈ ಪ್ರೀತಿಯು ಪ್ರೌಢತೆಗೆ ಹೋಗಲೇ ಇಲ್ಲ..ಯಾಕೆಂದರೆ 12ನೇ ವಯಸ್ಸಿನಲ್ಲಿ ಕೃಷ್ಣನು ವೃಂದಾವನವನ್ನು ಬಿಟ್ಟು ಗುರುಕುಲ ಸೇರಲು ಹೋದ ಮತ್ತು ಮಥುರಾದಲ್ಲಿದ್ದ ತನ್ನ ಮಾವ ಕಂಸನ ವಧಿಸಲು ಹೋದನೆಂಬ ಪ್ರತೀತಿ ಇದೆ.

ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು. ಇದು ನಿಷ್ಕಾಮ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು. ಇದರಿಂದಾಗಿಯೇ 16,008 ಮಂದಿ ಪತ್ನಿಯರಿದ್ದರೂ ಕೃಷ್ಣನಿಗೆ ಅತೀ ಮೆಚ್ಚಿನ ಸಖಿಯಾಗಿದ್ದವಳು ರಾಧೆ. ಏಕಕಾಲದಲ್ಲಿ ಎಲ್ಲಾ ಪತ್ನಿಯರೊಂದಿಗಿನ ಅವನ ಇರುವಿಕೆ ಮಾಯಾವಿ ಕೃಷ್ಣ ಎಂದು ಬಿಂಬಿಸದೆ ಇರಲಾರದು. ಮನೆಯಲ್ಲಿ ಪತ್ನಿಯಾಗಿ ಬರದಿದ್ದರೂ ರಾಧೆ ಮಾತ್ರ ಕೃಷ್ಣನ ಆತ್ಮ ಸಂಗಾತಿಯಾಗಿದ್ದಳು.

ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ.

ಕೃಷ್ಣನ ಮತ್ತು ಈಕೆಯ ಸಂಬಂಧವನ್ನು ಭಕ್ತಿ ಪರಾಕಾಷ್ಠತೆಯ ಪವಿತ್ರ ಸಂಬಂಧ ವೆಂದು ಪುರಾಣಗಳಲ್ಲಿ ನಿರೂಪಿಸಲಾಗಿದೆ. ಅಯಾನ ಎಂಬಾತನೊಡನೆ ಮದುವೆಯಾದ ರಾಧೆಯು ಕೃಷ್ಣನೊಂದಿಗೆ ಬೆಳೆಸಿದ ಸಂಬಂಧ ನೈತಿಕವೇ ಅನೈತಿಕವೇ ಎಂಬ ಜಿಜ್ಞಾಸೆ ಎಂದಿನಿಂದಲೂ ನಡೆದಿದೆ.

ಭಾಗವತದ ಪ್ರಕಾರ ರಾಧಾಳ ಭಕ್ತಿ::

16ನೆಯ ಶತಮಾನದಲ್ಲಿ ಬಂಗಾಲದಲ್ಲಿ ವೈಷ್ಣವ ಪಂಥ, ಚೈತನ್ಯ ಪಂಥಗಳು ಪ್ರಾರಂಭ ವಾದವು. ಚೈತನ್ಯ ಪಂಥದ ಮುಖ್ಯವ್ಯಕ್ತಿ ಚೈತನ್ಯ. ಈತನ ಪದ್ಯಗಳಲ್ಲಿ ಭಕ್ತನೇ ರಾಧೆಯಾಗಿ ಕೃಷ್ಣನಲ್ಲಿ ತನ್ನನ್ನು ಅರ್ಪಿಸಿಕೊಳ್ಳುವನು. ಈ ತತ್ತ್ವದ ಪ್ರಕಾರ ಒಬ್ಬ ಭಕ್ತ ದೇವನಲ್ಲಿ ಇಡುವ ಭಕ್ತಿ ಮತ್ತು ಶ್ರದ್ಧೆ ವಿವಿಧ ರೀತಿಗಳದ್ದಾಗಿರುತ್ತದೆ. ಭಕ್ತನಿಗೆ ಭಗವಂತ ಪೋಷಕನಾಗಿ, ಗುರುವಾಗಿ ಮತ್ತು ಪ್ರೇಮಿಯಾಗಿ ಕಂಡುಬರುವನು. ಆದರೆ ಪ್ರೇಮಿಯಾಗಿ ಕಾಣುವ ಭಾವವೇ ಹೆಚ್ಚು ಆಪ್ತವಾದದ್ದು. ಹೀಗಾಗಿ ಚೈತನ್ಯ ಪಂಥದ ಧೋರಣೆಗಳ ಹಿನ್ನೆಲೆಯಲ್ಲಿ ರಚಿತವಾದ ಪದ್ಯ, ಸಾಹಿತ್ಯ ಎಲ್ಲದರಲ್ಲೂ ರಾಧೆಯ ಪಾತ್ರ ಮುಖ್ಯವಾಗಿ ಕಂಡು ಬರುತ್ತದೆ.

ಆಧುನಿಕ ಟ್ರೆಂಡ್::

ಪ್ರಸ್ತುತ ಎಲ್ಲಾ ಹೆಂಗಳೆಯರ ಕಂಗಳಲಿ ಮಾದವನದೆ ಪ್ರತಿಬಿಂಬ. ನಮ್ ಹುಡುಗರು ಇದಕ್ಕೆ ಹೊರತಾಗಿಲ್ಲ ರಾಧಾರಾಣಿ ಅವರ ಮನವನ್ನು ಕದ್ದಿರುವುದಂತು ಸುಳ್ಳಲ್ಲ!.

ಕೃಷ್ಣ ಸ್ತ್ರೀ ಲೋಲನೆಂದು ಬಿಂಬಿಸಲ್ಪಟ್ಟಿದ್ದರೂ ಅನೇಕಾನೇಕ ಹುಡುಗಿಯರು ಕೃಷ್ಣನಂತಹ ಜೊತೆಗಾರನನ್ನೆ ಬಯಸುತ್ತಾರೆ. ಜೊತೆಗಾರನೊಂದಿಗೆ ಅದೇ ಬಾಂಧವ್ಯದ ಭ್ರಮೆಯೊಳಗೂ ಬದುಕುತ್ತಿರಬಹುದು.. ಭ್ರಮೆಯ ಪರದೆ ಸರಿದಾಗ ವಾಸ್ತವ ಕಣ್ಣೆದುರಿಗೆ ಬಂದು ಭೂತವಾಗಿ ನರ್ತಿಸುತ್ತದೆ, ಬಣ್ಣ ಬಯಲಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಮನಗಳು ಅವೆಷ್ಟಿವೆಯೊ? ರಾಧಾಕೃಷ್ಣರ ನಿಷ್ಕಲ್ಮಶ, ನಿಷ್ಕಾಮ ಪ್ರೇಮ ಸಾಮಾನ್ಯರಾದ ಮಾನವರಿಂದ ಅನುಭವಿಸಲು ಸಾಧ್ಯವೇ?
ಕೃಷ್ಣನ ಹೆಸರನ್ನು ಕೊಳಕು ಪ್ರೀತಿಗೆ ಹಚ್ಚಿ, ವಿಕೃತಿ ಮೆರೆಯುವ ಮಂದಿಯೂ ಇದ್ದಾರೆ. ಅದರಲ್ಲಿ ಗಂಡು-ಹೆಣ್ಣುಗಳ ಪಾಲೆಷ್ಟೆಂಬುದು ಕೌತುಕದ ವಿಚಾರವೇ ಸರಿ. ಅವರವರ ಭಾವಕ್ಕೆ!.

ಅದೇನೆ ಇರಲಿ, ನಮ್ಮ ಇಂದಿನ ಯುವ ಸಮೂಹಕ್ಕೆ ರಾಧಾಕೃಷ್ಣರ ಪ್ರೇಮ ನೂತನ ಪಾಠವನ್ನು ತಿಳಿಸಲಿ, ಎಲ್ಲೆಡೆ ಆತ್ಮಗಳ ಸಂಗಾತ ಅಜರಾಮರವಾಗಲಿ…ಜಗತ್ತಿನಲ್ಲಿ ಹೊಸ ಪ್ರೇಮದ ಪರಿಭಾಷ್ಯೆ ತುಂಬಿ ತುಳುಕಾಡಲಿ. ಪ್ರೇಮ ತುಂಬಿದ ಜಗತ್ತು ಸಂತಸವಾಗಿಯೂ, ಆರೋಗ್ಯಕರವಾಗಿಯೂ, ತೃಪ್ತಿಕರವಾಗಿಯೂ ಇರುತ್ತದೆ.

ಭಗವದ್ಗೀತೆಯ ಬೋಧಕ ಶ್ರೀಕೃಷ್ಣ ಪರಮಾತ್ಮನ ಗುಣಗಳು ಆಯಾ ಸಂದರ್ಭಕ್ಕೆ ಅನುಚಿತ.

-ಆರಾ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x