ಮೊದಲು ಓದುಗನಾಗು

‘ವಿಚಿತ್ರ ವಿಕ್ಷಿಪ್ತ ನಿಕೃಷ್ಠ ಬಿಸಿಯುಸಿರ ಬೇಗೆಯಲಿ ತಣ್ಣನೆ ರೋಧಿಸುವ ಕೆಂಗುಲಾಬಿ’: ಎಂ. ಜವರಾಜ್

ಹನುಮಂತ ಹಾಲಗೇರಿ ಅವರ “ಕೆಂಗುಲಾಬಿ” ಯ ವಯಸ್ಸು ಹತ್ತತ್ತಿರ ದಶಕಗಳೇ ಆಗಿವೆ. ಇದು ಪುಸ್ತಕ ರೂಪದಲ್ಲಿ ಇದುವರೆಗೆ ಐದು ಆವೃತ್ತಿ ಕಂಡಿದೆ. ಈ ‘ಕೆಂಗುಲಾಬಿ’ ಪುಸ್ತಕ ರೂಪ ತಾಳುವ ಮೊದಲು ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಈ ಕೃತಿಯ ಕುರಿತಾಗಿ ಪತ್ರಿಕೆಗಳಲ್ಲಿ ಒಂದೆರಡು ಬರಹ ಓದಿದ್ದು ಬಿಟ್ಟರೆ ನಾನು ಈ ಕೃತಿ ಓದಿರಲಿಲ್ಲ. ನನ್ನ ಕಿರಿಯ ಮಿತ್ರರೊಬ್ಬರು ಸಾಕಷ್ಟು ಪುಸ್ತಕಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಾರೆ. ಅವರಿಗೆ ಈ ಎಲ್ಲ ಪುಸ್ತಕ ಓದಲು ಸಮಯಾಭಾವ ಇರುವುದು ಅವರಿಂದಲೇ ನನಗೆ ತಿಳಿಯಿತು. ಕೆಲ ದಿನಗಳ ನಂತರ ಅವರೇ ನನ್ನಲ್ಲಿಗೆ ಬಂದು ಅವರಲ್ಲಿರುವ ಕೆಲ ಪುಸ್ತಕಗಳನ್ನ ನನ್ನ ಕೈಗಿತ್ತು ಓದಿರಿ ಎಂದು ಕೊಟ್ಟರು. ಅದರಲ್ಲಿದ್ದವುಗಳಲ್ಲಿ ‘ಕೆಂಗುಲಾಬಿ’ ಯೂ ಒಂದು. ಆ ನನ್ನ ಕಿರಿಯ ಮಿತ್ರ ಈ ‘ಕೆಂಗುಲಾಬಿ’ಯನ್ನು ವಿಶೇಷವಾಗಿ ನನ್ನ ಗಮನಕ್ಕೆ ಬರುವಂತೆ ಒತ್ತಿ ಹೇಳಿದ್ದರು. ಇದೇ ಲೇಖಕರ ಇನ್ನೊಂದು ಪುಸ್ತಕ ‘ಏಪ್ರಿಲ್ ಫೂಲ್’ ಈಚೆಗಷ್ಟೆ ಓದಿದ್ದರಿಂದ ನನ್ನ ದಿಗಿಲು ‘ಕೆಂಗುಲಾಬಿ’ ಯತ್ತ ಸೆಳೆಯಿತು.

ಸೂಳೆ, ವೇಶ್ಯೆ- ಇವು ಯಾವ ಜಾತಿಗೆ ಸೇರಿವೆ? ಯಾವ ಧರ್ಮಕ್ಕೆ ಸೇರಿವೆ? ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ನೀಡಿವೆ ಎಂದು ಹೇಳುತ್ತಲೆ ಹೆಣ್ಣನ್ನು ನಿಕೃಷ್ಠವಾಗಿ ಕಂಡಿರುವುದಕ್ಕೆ ಇತಿಹಾಸದಲ್ಲಿ ದಾಖಲಾಗಿದೆ. ಹಾಗೆ ಜಾನಪದ ಪುರಾಣದಂಥ ಹತ್ತಾರು ಬಗೆಯ ಕಥಾ ಕಾವ್ಯದೊಳಗೆ ಹೆಣ್ಣಿನ ಬಗ್ಗೆ ಭಾವಪೂರ್ಣ, ಸೌಂದರ್ಯಪೂರ್ಣ, ಲಾಲಿತ್ಯಪೂರ್ಣ ವರ್ಣನೆಗಳಿವೆ. ಇದರೊಂದಿಗೆ ಯುದ್ಧ ಗೆದ್ದ ರಾಜ ಅದರ ನೆನಪಿಗೆ ಯಜ್ಞಯಾಗ ಮಾಡುತ್ತಾನೆ. ಈ ವೇಳೆ ಅಶ್ವಗಳ ವೀರ್ಯವನ್ನು ಹೆಣ್ಣಿನ ಅಂಗಾಂಗದ ಮೇಲೆ ಸೃಜಿಸುವ ಸಂಪ್ರದಾಯವೂ ಉಂಟು. ಯಾಗ ಮಾಡಿದ ರಾಜ ಅಶ್ವ ಸೃಜಿಸಿದ ವೀರ್ಯದ ಓಕುಳಿಯಲ್ಲಿ ಮುಳುಗಿದ ಆ ಹೆಣ್ಣನ್ನು ಇಡೀ ರಾತ್ರಿ ತನ್ನ ಅಂತಃಪುರದಲ್ಲಿರಿಸಿ ಭೋಗಿಸಿ ಸುಖಸುತ್ತಾನೆ. ಹಾಗೆ ಭೋಗಿಸಿಕೊಂಡ ಇತರ ದಾಸಿಯರ ಕತ್ತಲ ಕೋಣೆಯಲ್ಲಿ ಅವಳನ್ನೂ ಇರಿಸುತ್ತಾನೆ. ಹೊರಗೆ ದೇಶಪ್ರೇಮದ ಬಗ್ಗೆ, ಧರ್ಮದ ಬಗ್ಗೆ, ಹೆಣ್ಣಿನ ತಾಯ್ತನದ ಬಗ್ಗೆ ತುಂಬಿದ ಜನನಿಬಿಡ ಸಭೆಯಲ್ಲಿ ಮಾತಾಡಿ ಮೆಚ್ಚುಗೆ ಗಿಟ್ಟಿಸುತ್ತಾನೆ.

ನಾನು ಇದನ್ನು ಹೇಳಲು ‘ಕೆಂಗುಲಾಬಿ’ ಎಂಬ ಕಾದಂಬರಿ.ಅದು ವೇಶ್ಯಾ ಜಗತ್ತಿನ ಕಥಾನಕವನ್ನು ಹೇಳುವುದರಿಂದ. ಭಾರತೀಯ ಸಾಂಸ್ಕೃತಿಕ ಪರಂಪರೆ ಎನ್ನುವುದು ಏನು? ಎಂದು ಪ್ರಶ್ನಿಕೊಳ್ಳುತ್ತಲೇ ಪುರಾಣ ಜಾನಪದ ಚಾರಿತ್ರಿಕ ದಿನಗಳ ಹಾಗೆ ಈ ಆಧುನಿಕ ಕಾಲದ ಪರಿಸ್ಥಿತಿಯೂ ಹೆಣ್ಣಿಗೆ ಮುಕ್ತ ವಾತಾವರಣದ ಬಗ್ಗೆ, ಹೆಣ್ಣನ್ನು ನೋಡುತ್ತಿರುವ ದೃಷ್ಡಿಕೋನಗಳ ಕಡೆಗೂ ಯೋಚಿಸುವಂತಿದೆ.

ಹಾಗೆ “ಓದುವ ಪಿಶಾಚಿ ಹೆಗಲೇರಿದರೆ ಅದರಿಂದ ಬಿಡುಗಡೆ ಸುಲಭವಲ್ಲ. ಏನಾದರು ಓದುತ್ತಲೇ ಇರುತ್ತೇವೆ. ಓದಿದ್ದನ್ನು ಮರೆಯುತ್ತೇವೆ. ಆದರೆ ಕೆಲವು ಪುಸ್ತಕಗಳು ಹಾಗಲ್ಲ. ನಮ್ಮ ತಿಳುವಳಿಕೆಯನ್ನೆಲ್ಲ ಬುಡುಮೇಲು ಮಾಡುತ್ತವೆ; ನಾವು ಯೋಚಿಸುವ ವಿಧಾನವನ್ನೇ ಬದಲಾಯಿಸಿಕೊಳ್ಳಲು ಕಾರಣವಾಗುವ ಪುಸ್ತಕಗಳು ಕೆಲವಿರುತ್ತವೆ.” ಎಂದು ಸಿಮೋನ್ ದ ಬೋವಾ ಅವರ ‘ದ ಸೆಕೆಂಡ್ ಸೆಕ್ಸ್’ ಪುಸ್ತಕದ ಡಾ.ಎಚ್.ಎಸ್.ಶ್ರೀಮತಿ ಅವರ ಕನ್ನಡಾನುವಾದದ ಮುನ್ನುಡಿಯಲ್ಲಿ ಕೆ.ವಿ.ನಾರಾಯಣ ಹೇಳುವ ಮಾತಿದು. ಇದನ್ನು ಯಥಾವತ್ ಹನುಮಂತ ಹಾಲಿಗೇರಿ ಅವರ ‘ಕೆಂಗುಲಾಬಿ’ ಕೃತಿಗೆ ಅನ್ವಯಿಸಿ ಹೇಳಬಹುದೇನೋ ಅನ್ನುವಷ್ಟು ಓದುಗನನ್ನು ಬಿಟ್ಟೂ ಬಿಡದೆ ಓದಿಸಿಕೊಳ್ಳುವ ಪಿಶಾಚಿ ಗುಣವಿದೆ. ಈ ‘ಕೆಂಗುಲಾಬಿ’ ವಸ್ತು ವಿಷಯ ವೇಶ್ಯಾವೃತ್ತಿ ಬದುಕಿನ ಕಥಾನಕವನ್ನು ಬಿಚ್ಚಿಡುವ ಕುತೂಹಲಕಾರಿ ಕಾದಂಬರಿ.

ಲೇಖಕ ಹನುಮಂತ ಹಾಲಿಗೇರಿ ಕಾದಂಬರಿ ಆರಂಭಕ್ಕು ಮುನ್ನ ‘ಈ ಗರ್ಭ ಹೊತ್ತಾಗಿನ ತಳಮಳ’ ದಲ್ಲಿ ಪ್ರಸ್ತುತ ಕಾದಂಬರಿಯ ಹಾಸು ಹೊದಿಕೆ ಬಗ್ಗೆ ಇದು ಪಿ.ಲಂಕೇಶರ ‘ಅಕ್ಕ’, ಶಿವರಾಮ ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಕಥೆಗಳ ಪ್ರಥಮ ನಿರೂಪಣೆಗಳ inspire ಎಂದು ಗುಟ್ಟು ಬಿಟ್ಟು ಕೊಟ್ಟಿರುವುದರಿಂದ ಓದುಗನು ಕಾದಂಬರಿಯ ಪ್ರತಿ ಪುಟ ಓದುವ ಪ್ರತಿ ಸಾಲುಗಳಲ್ಲು ‘ಅಕ್ಕ’ ಮತ್ತು ‘ಮೈ ಮನಗಳ ಸುಳಿಯಲ್ಲಿ’ ಚಿತ್ರಣವನ್ನು ಕಣ್ಣ ಮುಂದೆ ತಂದುಕೊಳ್ಳಬಹುದಾದ ಸಾಧ್ಯತೆ ಇದೆ. ಆದರೆ ಪ್ರತಿ ಓದುಗನೂ ಹಾಗೆ ಅಂದುಕೊಳ್ಳಬಹುದು ಅಂತೇನೂ ಇಲ್ಲ. ಪ್ರಸ್ತುತ ಕಾದಂಬರಿಯ ಎದೆಯ ಧ್ವನಿಯತ್ತ ನೋಡುವ ಪ್ರಾಮಾಣಿಕತೆಯನ್ನು ಅಲ್ಲಗಳೆಯಲಾಗದು. ಒಂದು ಕತೆ, ಒಂದು ಕಾದಂಬರಿ, ಒಂದು ಕವಿತೆಯ ಹುಟ್ಟು, ಬೆಳವಣಿಗೆ ಲೇಖಕನ ಧ್ಯಾನಸ್ಥ ಸ್ಥಿತಿಯಿಂದ ಹೊಸ ರೂಪ ಪಡೆದು ಎದ್ದು ನಿಲ್ಲುವಂಥವು. ಅವುಗಳ ಹುಟ್ಟಿನ ಮೂಲವು ಇನ್ನೊಬ್ಬ ಲೇಖಕನ ಒಟ್ಟು ಗುಚ್ಛ inspire ಇರಬಹುದು. ಆದರೆ ಇಂಥದ್ದೇ ಕೃತಿಯೊಂದರ inspire ಎಂದರೆ ಲೇಖಕನೊಬ್ಬ ತಾನು ಧೇನಿಸಿ ಸೃಷ್ಟಿಸಿದ ಕೃತಿಯೊಂದರ ಆಶಯ, ಗುಣ, ಅವಗುಣ ಇವುಗಳಲ್ಲಿ ಯಾವುದೇ ಲೋಕಪ್ರಿಯವಾದರು ಅದರ inspire ಆದ ಕೃತಿಯೊಂದಿಗೆ ತಳುಕು ಹಾಕಿ ಪ್ರಸ್ತುತ ಕೃತಿಯ ಮೇಲೆ ಪರಿಣಾಮ ಬೀರದೆ ಇರದು!

ಇಲ್ಲಿ ಲೇಖಕರೇ ಗುಟ್ಟು ಬಿಟ್ಟು ಕೊಟ್ಟ ಕಾರಣ ನಾನು ಓದುವ ಪ್ರತಿ ಸಾಲುಗಳನ್ನು ‘ಅಕ್ಕ’ ಅಥವಾ ‘ಮೈ ಮನಗಳ ಸುಳಿಯಲ್ಲಿ’ – ಕಥೆಯ ನಿರೂಪಣೆಯ ಹತ್ತಿರ ಸುಳಿಯಲು ಬಿಡದೆ ಹಾಲಿಗೇರಿಯವರ ‘ಕೆಂಗುಲಾಬಿ’ ಯನ್ನಷ್ಟೆ ಓದಲು ನಿರತನಾದೆ.

ಈ ‘ಕೆಂಗುಲಾಬಿ’ ಯಲ್ಲೊಬ್ಬ ಕಥಾ ನಾಯಕನಿದ್ದಾನೆ. ಅವನೇ ಈ ಕಥೆಯ ಪ್ರಧಾನ ನಿರೂಪಕ.‌ ಅವನ ಹುಟ್ಟು ಮತ್ತು ಬೆಳವಣಿಗೆ ಕುತೂಹಲಕರವಾಗಿದೆ. ಅವನ ಅವ್ವನ ಅಂತರಂಗದ ಬದುಕು ಬವಣೆಯನ್ನು, ಆ ಅವ್ವನ ಮನೆಯನ್ನು, ಆ ಅವ್ವನ ಊರಿನ ಚಿತ್ರಣವನ್ನು, ಆ ಅವ್ವನ ಊರೊಂದಿಗಿನ ಬಾಳಾಟದ ಚಿತ್ರಣವನ್ನು ಚಿತ್ರವತ್ತಾಗಿ ನಿರೂಪಿಸುತ್ತ ನಿರೂಪಕನ ಬಾಲ್ಯದ ಕಣ್ಣು ಎದೆಯಲ್ಲಿ ಅವ್ವನ ಸಂಗಡದ ವ್ಯಾವಹಾರಿಕ ಬದುಕನ್ನು ಕಂಡು ಒಳ ವೇದನೆಯಲ್ಲಿ ದುಮುಗುಡುತ್ತಾನೆ. ಊರಿನ ಸಾಂಪ್ರದಾಯಿಕ ಜೀವನ ವಿಧಾನ, ಹಬ್ಬ ಹರಿದಿನ, ಊರ ದೇವರ ಹೆಸರಲ್ಲಿ ಮೈನೆರೆದ ಹೆಣ್ಣುಗಳನ್ನು ದೇವದಾಸಿಯರಾಗಿಸಿ ‘ಮೇಲು ಜನ’ ತಮ್ಮ ತೆವಲುತನ ತೀರಿಸಿಕೊಳ್ಳುವ ಅವಸ್ಥೆಯೂ ಉಂಟು. ಅದಕ್ಕೆ ಕುಟುಂಬದೊಳಗೇ ಅವನವ್ವನ ಅಪ್ಪ ಬದುಕುತ್ತಿದ್ದ ರೀತಿ ರಿವಾಜು ಕಟು ವಾಸ್ತವವೂ, ಆನಂತರದ ಅವ್ವ, ಅವ್ವನ ಹೊಟ್ಟೇಲಿ ಹುಟ್ಟಿದ ಕಥಾ ನಿರೂಪಕ ಮಲ್ಲೇಶಿ, ಅದಕ್ಕು ಮುನ್ನಿನ ಜನ್ಮ ಪಡೆದು ಕಿಲಕಿಲ ನಲಿದಾಡಿ ಅಂಗಳ ತುಂಬ ಆಡಿ ಬೆಳೆದು ದೊಡ್ಡವಳಾಗಿ ನಲಿಯುತ್ತಿದ್ದ ಅಕ್ಕನ ಬಾಳುವೆಯಲ್ಲಿ ಅವ್ವನ ಕತೆಯೇ ಪುನರಾವರ್ತನೆಯಾಗುತ್ತದೆ. ಅಕ್ಕನ ಸೌಂದರ್ಯವನ್ನು ದಿನಕ್ಕೊಬ್ಬರು ಇಬ್ಬರು ಸವಿಯುವ ನಿರ್ಲಜ್ಜತನ. ಈ ಎಲ್ಲ ಅವನ ಕಣ್ಣ ಮುಂದೆ ಜರುಗುವ, ಅನಿವಾರ್ಯವೋ ಎಂಬಂತೆ ಈ ಎಲ್ಲವನ್ನು ಸಹಿಸಿಕೊಂಡು ಒಂದರೊಳಗೊಂದು ಸತ್ತು ಬದುಕಿ ಬಾಳುತ್ತ ರಾತ್ರಿ ಹಗಲುಗಳಲಿ ಬಂದು ಹೋಗುವ ಕಾಣದ ಪಾದದ ಗುರುತುಗಳು ಅಡ್ಡಡ್ಡ ಗೀರುಗಳಾಗಿ ತನ್ನ ಆಕಾರ ಬದಲಿಸುತ್ತಿರುತ್ತವೆ.

ತನ್ನ ಕಣ್ಣ ಮುಂದೇ ಘಟಿಸಿ ಬಿಡುವ ಘಟನೆಗಳನು ನೋಡಲಾರದ ಮಲ್ಲೇಶಿ ಒಂದು ಅನಿರೀಕ್ಷಿತ ಘಟ್ಟದಲ್ಲಿ ಬೇಸತ್ತು ಊರು ಬಿಡುವ ಪ್ರಸಂಗ ಒದಗುತ್ತದೆ. ಆಗ ಅವನ ಬದುಕು ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಈ ದುಮ್ಮಾನದ ಬೇಗುದಿಯಿಂದ ಒಳಗೊಳಗೆ ನರಳುತ್ತ ಲೈಫು ಸಾಕು ಸಾಕೆನಿಸಿ ಮನೆಯನ್ನ, ಎದೆ ಹಾಲುಣಿಸಿ ಬೆಳೆಸಿದ ತನ್ನವ್ವಳನ್ನ, ಒಡುಟ್ಟ ಅಕ್ಕಳನ್ನ, ಹುಟ್ಟಿ ಆಡಿ ಬೆಳೆದ ಊರನ್ನ ಕಡಿದುಕೊಂಡ ಮಲ್ಲೇಶಿ ಬದುಕಿನ ಸ್ಥಿರತೆಗಾಗಿ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಇರುವ ಸಂಸ್ಥೆಗಳಲಿ ಕೆಲಸ ನಿರ್ವಹಿಸುತ್ತ ದಿನ ದೂಡುತ್ತಾನೆ. ಹೀಗಿರುವಾಗ ಅವರೂರಿನ ಡ್ರೈವರ್ ಸಾಬಣ್ಣ ಸಿಕ್ಕ ಸಂದರ್ಭದಲ್ಲೆಲ್ಲ ಊರಿನ ವಾರ್ತೆ ಓದುವ ಮುಖೇನ ಮತ್ತೆ ಅವ್ವ-ಊರು- ಅಕ್ಕನ ನೆನಪಾಗಿ ಎದೆಯಲ್ಲಿ ಬೆಸುಗೆಯಾಗಿ ಬೆಸೆಯುತ್ತದೆ. ಡ್ರೈವರ್ ಸಾಬಣ್ಣನಿಂದ – ಬರ್ಪ್ ಮಾರೊ ಸಾಬಣ್ಣನೊಂದಿಗೆ ನಿನ್ನಕ್ಕ ಓಡಿ ಹೋದ – ವಿಚಾರ ತಿಳಿದುದರ ಬಗ್ಗೆ ಬೇಸರ ಪಡುವ ಬದಲು ‘ಅಕ್ಕ ದಿನಾ ಒಬ್ಬೊಬ್ಬರ ಜೊತೆ ಮಲಗೋದಕ್ಕಿಂತ ಈಗ ಓಡಿ ಹೋಗಿ ಒಬ್ಬನ ಕೂಡ ಸಂಸಾರ ಮಾಡುವಂಗ ಆತಲ್ಲ’ ಅನ್ನೊ ಮೇಲ್ ಸ್ತರದ ದನಿಯಲ್ಲಿ ಮಲ್ಲೇಶಿ ಎದೆಯೊಳಗಿನ ಜೀವಪರ ನಿಲುವಿಗೆ ಸಾಕ್ಷ್ಯ ಒದಗಿಸುತ್ತದೆ!

ಅವನ ಮುಂದಿನ ಹೆಜ್ಜೆ ಜಾಡು ಇದೆ ರಿವಾಜಿನಲ್ಲಿ ಮುಂದರಿಯುತ್ತದೆ. ಅವನ ಅಂತರಂಗದಲ್ಲಾಗುವ ತಳಮಳವನ್ನು ಲೇಖಕ ಕಟ್ಟಿ ಕೊಡುವ ರೀತಿಯೇ ಭಿನ್ನ ಧಾಟಿಯದ್ದಾಗಿದೆ. ಈ ಭಿನ್ನವಾದ ಸ್ಪಷ್ಟ ಛಾಯೆಯಲ್ಲಿ ‘ಕೆಂಗುಲಾಬಿ’ಯನ್ನು ಒಪ್ಪಿ ಅಪ್ಪಿದ ನಿಮಿತ್ತ ವೇಶ್ಯಾವೃತ್ತಿ ವೃತ್ತಿ ಬದುಕಿನ ವಿವಿಧ ಮಗ್ಗುಲುಗಳ ಕಠೋರ ಸತ್ಯ ಅನಾವರಣಗೊಳ್ಳುತ್ತ ಹೋಗುತ್ತವೆ!

ಇಲ್ಲಿ ಕಥಾ ನಿರೂಪಕ ಮಲ್ಲೇಶಿ ಮುಂದೆ ಇಡುವ ಪ್ರತಿ ಹೆಜ್ಜೆಯೂ ಕಲ್ಲು ಮುಳ್ಳಿನ ಹಾದಿಯೇ ಅನ್ನುವುದಕ್ಕಿಂತ ಅಲ್ಲೆಲ್ಲ ಅವನು ಒಬ್ಬ ಸಂಶೋಧಕನಂತೆಯೋ, ಸೆನ್ಸೇಷನಲ್ ನ್ಯೂಸ್ ರೀಡರ್ ನಂತೆಯೋ, ಕೇಸ್ ಒಂದರ ಬೆನ್ನತ್ತಿ ಎಂಕ್ವೈರಿ ಮಾಡುವ ಪೊಲೀಸ್ ಅಧಿಕಾರಿಯಂತೆಯೋ, ಒಮ್ಮೊಮ್ಮೆ ಅನುನಾಸ್ಪದ ವ್ಯಕ್ತಿಯಂತೆಯೋ ಕಾಣುತ್ತ ತನ್ನ ಕರ್ತವ್ಯದ ಕರ್ಮಭೂಮಿ ‘ಕೆಂಗುಲಾಬಿ’ ಗೆ ನಿಷ್ಠೆಯ ವಕ್ತಾರನಂತೆ ವ್ಯವಹರಿಸುತ್ತಾನೆ. ಈ ಹೊತ್ತಲ್ಲೆ ಮಲ್ಲೇಶಿಯ ಹಿಂದಿನ ಅಧ್ಯಾಯವೊಂದು ಪುಟ ತೆರೆದು ಮಾತಾಡಿಕೊಳ್ಳುತ್ತದೆ. ಅಲ್ಲಿಂದ ‘ಕೆಂಗುಲಾಬಿ’ ಕಥಾ ಹಂದರ ಭಿನ್ನ ಆಯಾಮ ಪಡೆದುಕೊಳ್ಳುತ್ತದೆ.

‘ಕೆಂಗುಲಾಬಿ’ ಗು ಮುನ್ನಾ ಸ್ವಯಂ ಸೇವಾ ಸಂಸ್ಥೆಯ ರೂರಲ್ ಆಫಿಷರ್ ಆಗಿ ಕಾಲಿಟ್ಟಾಗ ಆ ಊರಿನಲ್ಲಿ ಬೋರ್ವೆಲ್ ನಲ್ಲಿ ನೀರು ಸೇದು, ತುಂಬಿದ ಬಿಂದಿಗೆಯನು ವಯ್ಯಾರದಲಿ ಬಳುಕುವ ಸೊಂಟದ ಮೇಲಿಟ್ಟು ನಡೆಯುವ ಅವಳು ರಾತ್ರಿಯ ಚಂದ್ರನಂತೆ ಬೆಳಗಿ ಎದೆಯಂಗಳದಲಿ ಸ್ಥಾಪಿತವಾದವಳೇ ಶಾರಿ-ಶಾರದ.

ಕಿತ್ತು ತಿನ್ನುವ ಬಡತನದ ಬೇಗೆಯ ನೀಗಲೋ, ರೋಗದಿಂದ ನರಳಿ ಹಾಸಿಗೆ ಹಿಡಿದಿರುವ ಅವ್ವಳಿಗೆ ಮಗಳು ಶಾರಿ- ಮಲ್ಲೇಶಿ ಜೊತೆಗಿನ ಪ್ರೇಮಪುರಾಣ ಗೊತ್ತಾಗಿ ಅದನ್ನು ತಪ್ಪಿಸಲು ಅವಳವ್ವ ಒತ್ತಡ ಹಾಕಿದ್ದರ ಪರಿಣಾಮವೋ ಏನೋ ಅವಳು ಕೆಲಸದ ನಿಮಿತ್ತ ಹಾವೇರಿ ಕಡೆ ಮುಖ ಮಾಡುವ ಮಾತಾಡಿ ದುಃಖಿಸುತ್ತಾಳೆ. ಅವರಿಬ್ಬರ ಪ್ರೇಮ ಎಷ್ಟು ಗಾಢವಾಗಿತ್ತೆಂದರೆ ಊರು ತೊರೆಯುವ ಮುನ್ನ ಕದ್ದು ಮುಚ್ಚಿ ಕಡೆಯ ಆ ರಾತ್ರಿಯಲ್ಲಿ ಎರಡು ದೇಹಗಳೂ ಒಂದಾಗುತ್ತವೆ. ಆ ರಾತ್ರಿಯ ಸವಿ ಸವಿಯುತ್ತ ಬೆಳಗಾಗುವುದರೊಳಗೆ ಅವಳಿಲ್ಲದ ಊರು ಕಥಾ ನಿರೂಪಕ ಮಲ್ಲೇಶಿಗೆ ಬಿಕೋ ಎನಿಸತೊಡಗುತ್ತದೆ. ಅದ್ಯಾಕೋ ಏನೋ ಜೊತೆಗಿದ್ದ ಚಿರಪರಿಚಿತರಾಗಿರುವ ಆ ಊರಿನಲ್ಲಿ ತುಂಬಿದ ಬಿಂದಿಗೆ ಸೊಂಟದ ಮೇಲಿಟ್ಟು ನಲಿದಾಡುವ ಇತರ ಮಿನುಗುವ ನಕ್ಷತ್ರಗಳು ಅಣಕಿಸುವಂತೆಯೋ, ಕೆಣಕುವಂತೆಯೋ ಭಾಸವಾಗಿ ಅವಳಿಲ್ಲದ ಆ ಊರನ್ನು ಬಿಟ್ಟು ಹುಬ್ಬಳ್ಳಿಯಲ್ಲಿ ತನ್ನ ಕೆಲಸದತ್ತ ನಿರತನಾಗುತ್ತಾನೆ. ಈ ಹೊತ್ತಲ್ಲೆ ಮಲ್ಲೇಶಿಗೆ ಪರಪುರುಷರ ಜೊತೆ ದೇಹ ಹಂಚಿ ಬದುಕು ಸಾಗಿಸುವ ವೇಶ್ಯೆಯರ ಹೊಸ ಪ್ರಪಂಚದ ಪರಿಚಯವಾಗುತ್ತಾ ಹೋಗುತ್ತದೆ.

ಲೇಖಕ ಹನುಮಂತ ಹಾಲಿಗೇರಿ ‘ಕೆಂಗುಲಾಬಿ’ಯ ಪ್ರತಿ ಅಧ್ಯಾಯ ರೂಪಿಸುವಾಗಲು ಬಲು ಎಚ್ಚರಿಕೆ ವಹಿಸಿರುವ ರಿವಾಜು ಎದ್ದು ಕಾಣುತ್ತದೆ. ತಾನು ದುಡಿಯುತ್ತಿರುವ ಸಂಸ್ಥೆಗಾಗಿ ಲೈಂಗಿಕ ಕಾರ್ಯದಲ್ಲಿ ತೊಡಗಿ ಜೀವನ ನಿರ್ವಹಿಸುವ ವೇಶ್ಯೆಯರ ಬದುಕು ಬವಣೆಯ ವಿಷಯ ಕಲೆ ಹಾಕುವ ಸರತಿಯಲ್ಲಿ ಕಥಾ ನಿರೂಪಕ ಮಲ್ಲೇಶಿ ಆರಂಭಿಕ ಎಚ್ಚರ ತಪ್ಪಿ ವೇಶ್ಯೆಯ ಕೈಗೆ ಸಿಕ್ಕಿಕೊಳ್ಳುವ ಪ್ರಸಂಗ ಎದುರಾಗುತ್ತದೆ.

ಈ ಪ್ರಸಂಗ ಬಹುಶಃ ಪಿ.ಲಂಕೇಶರ ಅನುಭವದ ಸಾರ ಇರಬಹುದೆಂದು ನನ್ನ ಊಹೆ. ನನ್ನ ಸಂಗ್ರಹದಲ್ಲಿಲ್ಲದ ಎಲ್ಲೊ ಓದಿದ್ದು ನೆನಪಷ್ಟನ್ನೆ ಹೇಳುವುದಾದರೆ,

ಒಮ್ಮೆ ಪಿ.ಲಂಕೇಶ್ ತಮ್ಮ ‘ಪತ್ರಿಕೆ’ ಆರಂಭಿಸುವ ಮುನ್ನ ದಿನಪತ್ರಿಕೆಯೊಂದರ ಅಂಕಣಕಾರರಾಗಿ ಅಂಕಣ ಬರಹಕ್ಕೆ – ವಸ್ತು ವಿಷಯ ವಿಚಾರದ ನೈಜತೆಗಾಗಿ ಮತ್ತು ಸ್ವ ಅನುಭವಕ್ಕಾಗಿ ವೇಶ್ಯಾಗೃಹಕ್ಕೆ ಹೋಗಿ ದುಡ್ಡು ಕೊಟ್ಟು ರೂಮು ಹೊಕ್ಕು ‘ಆಕೆಯನ್ನು’ ಹತ್ತಿರ ಕೂರಿಸಿಕೊಂಡು ‘ಈ ವೇಶ್ಯಾವೃತ್ತಿಗೆ ಇಳಿಯಲು ನಿಮ್ಮ ಸಮಸ್ಯೆ ಏನು? ಯಾಕಾಗಿ ಇದನ್ನು ಆಯ್ಕೆ ಮಾಡಿಕೊಂಡಿರಿ?’ ಎಂದು ಕೇಳುತ್ತಾರೆ. ಎಲ್ಲ ಗಂಡಸರಂತೆ ಇವರೂ ‘ಮಾಡಲು’ ಬಂದವರೆಂದು ತಿಳಿದ ‘ಆಕೆ’ ಬೆರಗಾಗಿ ಕುಳಿತುಕೊಳ್ಳುತ್ತಾಳೆ. ಆದರೆ ವಾಸ್ತವದಲ್ಲಿ ಪಿ.ಲಂಕೇಶ್ ಸಾಧಿಸಿದ್ದನ್ನು ‘ಕೆಂಗುಲಾಬಿ’ಯ ಕಥಾ ನಿರೂಪಕ ಮಲ್ಲೇಶಿ ಸಾಧಿಸಲಾಗದೆ ಆಟೋ ಹತ್ತಿ ಕುಂತ ಆಟೋ ಒಳಗೇ ಅವರಿಗೆ ಸಿಕ್ಕಿ ಫಜೀತಿಗೊಳಗಾಗುತ್ತಾನೆ.ಹೀಗೆ ತನ್ನ ವೃತ್ತಿ ಬದುಕಿನ ಪ್ರತಿ ಹೆಜ್ಜೆ ಜಾಡು ಮಲ್ಲೇಶಿಯ ವಾಸ್ತವದಲ್ಲಿ- ಅರಿವಿನ ವಿಚಿತ್ರ ಮತ್ತು ವಿಕ್ಷಿಪ್ತ ಸನ್ನಿವೇಶಗಳು ಎದುರಾಗುತ್ತವೆ.

ಈ ನಡುವೆ ಲೈಂಗಿಕ ಕಾರ್ಯಕರ್ತೆಯರು ತಮ್ಮ ನೋವು ಯಾತನೆ ಬವಣೆ ಹೇಳಿಕೊಳಲಿಕ್ಕಾಗಿ ಮಾಧ್ಯಮ ಗೋಷ್ಠಿಯೊಂದು ಜರುಗುತ್ತದೆ. ಅಲ್ಲಿ ಮಲ್ಲೇಶಿ ಎಲ್ಲರ ದುಮ್ಮಾನಗಳನು ಆಲಿಸುವಾಗ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಮುಖವೊಂದು ಮಲ್ಲೇಶಿಯ ಎದೆಯೊಳಗೆ ಸಂಚಲನವಾದ ಅನುಭವವಾಗುತ್ತದೆ. ಆ ಸಂಚಲನದ ಬೆನ್ನು ಬಿದ್ದು ದಿಕ್ ದಿಕ್ಕಿಗು ಕಣ್ಣಾಡಿಸಿದರು ಆ ಸಂಚಲನದ ಮಿಂಚು ಮಾಯವಾಗಿ ಅದರ ಗುಂಗಿನಲ್ಲೆ ಕಂಡ ಕಂಡ ಏರಿಯಾಗಳು ಅಡ್ಡೆಗಳಾಗಿ, ಸ್ಲಂಗಳು ಸಂತೆಯಾಗಿ, ಎತ್ತ ನೋಡಿದರು ಸಿಗದ ಅವಳು, ಒಂದಿನ ಅಕಸ್ಮಾತ್ ಅವಳನ್ನು ಕಾಣುತ್ತಾನೆ. ಅವಳು – ಶಾರಿ! ತನ್ನ ಬದುಕಿನ ಕನಸುಗಳನು ಸಾಕಾರಗೊಳಿಸಲು ಇದ್ದ ಹೃದಯ ಸಾಮ್ರಾಜ್ಞೆ ಶಾರಿ!

ಶಾರಿ ಈಗಾಗಲೇ ಅನೇಕ ಮಜಲುಗಳನು ದಾಟಿ ಬಂದವಳು. ಈಗಿರುವ ಸೂರಿನಡಿಗೆ ಕದ್ದು ಮುಚ್ಚಿ ಬರುವವರು ಹೋಗುವವರು ಇದ್ದರು. ಅಕಸ್ಮಾತ್ ಇಂದೊ ನಾಳೆಯೋ ಯಾರೊ ಬಂದು ಅವಳ ಸೀರೆ ಬಿಚ್ಚಿ ಬಡಿದು ಎಳೆದಾಡಿ ಬೆತ್ತಲಾಗಿಸಿ ಓಡಿಸಬಹುದು! ಅಂತ ಆತಂಕ ಸಂದಿಗ್ಧ ಸ್ಥಿತಿ. ಕೊಚ್ಚೆಯಂತಿರುವ ಆ ಸ್ಲಂ ಮನೆಯಾಸರೆಯಲ್ಲಿ ಯಾರೋ ಸಿಕ್ಕ ಅಪರಿಚಿತ ಮುದುಕಿ ಜೊತೆ ವಾಸವಿರುವ ಚಿತ್ರ. ಹಾಗೆ ಅವಳ ಕರುಳ ಬಳ್ಳಿ ರಾಜಿಯೂ ಇರುವಳಲ್ಲಾ..! ಸನ್ನಿವೇಶದ ಚಿತ್ರ ನೋಡುತ್ತಲೆ ಮಲ್ಲೇಶಿ ದಿಗ್ಮೂಢನಾಗುತ್ತಾನೆ.

ಶಾರಿ ಇದುವರೆಗಿನ ತಾನು ದಿಕ್ಕು ತಪ್ಪಿದ ಕಥೆಯನ್ನ ಇಂಚಿಂಚು ಹೇಳುತ್ತಾಳೆ. ಅಲ್ಲಿ ಅವಳ ದಿಕ್ಕಿಗೆ ಸಿಕ್ಕುವವಳೇ ತುಂಬಾ ರೂಪವತಿಯಾದ ರೂಪ ಎಂಬ ವೇಶ್ಯೆ. ಅವಳ ಪ್ರಥಮ ಭೇಟಿಯೂ ಒಂದು ವಿಕ್ಷಿಪ್ತ, ಆಪ್ತ, ಮರುಕ, ಮನೋ ಯಾತನೆಯ ಸಂಕಟಮಯ ಸನ್ನಿವೇಶವನ್ನು ಹಾಲಿಗೇರಿ ತಾವೇ ಹೆಣ್ಣಾಗಿ ಅನುಭಿಸಿದ ಸಂಕಟವೇನೋ ಅನ್ನುವಷ್ಟು ವಿವರಿಸಿರುವ ರೀತಿ ಕರುಳು ಹಿಂಡುತ್ತದೆ. ಅಂತಹ ಆಗಿನ ಆ ಒಂದು ಸನ್ನಿವೇಶ ಹೀಗಿದೆ:

“ನಿಧಾನಕೆ ನನ್ನ ಹತ್ತಿರ ಬಂದಳು.ನನ್ನನ್ನು ದುರುದುರು ನೋಡುತ್ತ ‘ಅದಕ್ಕೆ ಹಸಿವೆಯಾಗಿದೆ ಹಾಲು ಕುಡಿಸು’ ಎಂದಳು. ನಾನು ಕೇಳಿಯೂ ಕೇಳದವಳಂತೆ ಸುಮ್ಮನಿದ್ದೆ. ಅವಳು ‘ಎಷ್ಟು ಧಿಮಾಕು ನಿನಗೆ. ಯಾಕೆ ಸುಮ್ನೆ ಇದಿಯ.ರಸ್ತೆ ಅಂತ ಸಂಕೋಚ ಮಾಡ್ಕೊಬೇಡ . ಕಲ್ಲು ಬೆಂಚಿನ ಮೇಲೆ ಹೋಗಿ ಕುಳಿತು ಹಾಲು ಕುಡಿಸು. ಕತ್ತಲಿನೊಳಗ ಯಾರು ನೋಡ್ತಾರೆ. ನೋಡಿದ್ರು ಏನಂತೆ. ಅಳುತಿರೊ ಮಗುವಿನ ಹೊಟ್ಟೆ ತುಂಬೋದು ಮುಖ್ಯ’ ಎಂದಳು. ನಾನು ಸಂಕಟದಿಂದ ‘ಹಾಲಿದ್ದರಲ್ಲವ್ವ ಕುಡಿಸೋದು. ಹಾಲಿಲ್ಲದ ಎದಿಯಿಂದ ಹ್ಯಾಂಗ ಕುಡಿಸಲಿ’ ಎಂದು ಅವಳ ಮೇಲೆ ಸಿಡುಕಿದೆ” ಆಗ ಯಾರೋ ಬಂದು ಕಾರಿನಲ್ಲಿ ಸನ್ನೆ ಮಾಡಿದ ಸದ್ದಾದ ಅನುಭವವಾಯ್ತು. ಅವಳು ನನ್ನ ಕೈಗೆ ಐವತ್ತು ರೂಪೈ ತೆಗೆದು ನನ್ನ ಕೈಯಲ್ಲಿಟ್ಟು ‘ಹೋಗು ಎಲ್ಲಾದರು ಹತ್ತಿರದಲ್ಲಿ ಬೇಕರಿ ಇದ್ರ ಹಾಲು ತಗೊಂಡು ಕುಡುಸು ನೀನೂ ಸ್ವಲ್ಪ ತಿನ್ನು ಹಿಡಿ ಲಗೂನ’ ಎಂದು ಅವಸರಿಸಿದಳು. ಹೋದಳು. ಓಡಿದಳು. ಹೋದವಳು ಮತ್ತೆ ಬಂದು ನನ್ನ ಮಗುವನ್ನು ಕಿತ್ತುಕೊಂಡಳು. ನನಗೆ ಗಾಬರಿಯಾಯ್ತು. ನಾನು ಕೊಸರಿದೆ. ಅವಳು ಸಿಟ್ಟಿನಿಂದ ನನ್ನನ್ನು ಅಡ್ಡಲಾಗಿ ನಿಲ್ಲಿಸಿ ತನ್ನ ರವಿಕೆ ಸಡಿಲಿಸಿ ತನ್ನ ಮೊಲೆತೊಟ್ಟು ಮಗುವಿನ ಬಾಯಿಗಿಟ್ಟಳು. ಮಗು ಯಾವಾಗ ಮೊಲೆಯನ್ನು ಕಂಡಿತೊ ಚಪ್ಪರಿಸಿ ಚೀಪತೊಡಗಿತು.ನಾನು ಸೈತ ದಂಗಾಗಿ ಮೂಖಳಂತೆ ನೋಡುತ್ತ ನಿಂತುಬಿಟ್ಟೆ. ಹಸಿದಿದ್ದ ಮಗು ಲೊಚಲೊಚನೆ ಹೀರುತ್ತಲೇ ಇತ್ತು.”

ಬದುಕು ನೀಗಿಸಲು ಮಾಡಿಕೊಂಡ ಒಲ್ಲದ ಮನಸಿನಲಿ ಮಾಡಿಕೊಂಡ ಒಪ್ಪಂದ. ಅದಕು ಮುನ್ನ ರಂಜನೆ ತುಂಬಿ ಬೀದಿಬೀದಿಯಲಿ ಹಾಡುವನೊಬ್ಬನ ಜೊತೆಗಿನ ಆಕರ್ಷಣೀಯ ಸಂಬಂಧ. ಆ ನಂತರದ ಬಸುರಿತನ. ನಂಬಿದವನ ಮಾಡಿದ ವಂಚನೆ. ಅವನ ವಂಚನೆಯ ಫಲವಾಗಿ ಒಗ್ಗಿ ಹೋದ ಅಡ್ಡದಾರಿ. ಹೆತ್ತ ಕೂಸಿಗೆ ಹಾಲುಡಿಸುವಷ್ಟು ಸಾಧ್ಯವಾಗದ ಹಾಗೆ ಬದುಕು ಬರ್ಬರ ಮಾಡಿದ ಕುಲಗೆಟ್ಟ ಸಮಾಜದ ಕ್ರೌರ್ಯ. ಹೊಟ್ಟಗಿಲ್ಲದೆ ಬಟ್ಟೆಗಿಲ್ಲದೆ ತಲೆಗೆ ಎಣ್ಣೆಗಾಣದ ಹಗಲು ರಾತ್ರಿಯೆನದೆ ಅಸುಗೂಸ ಮಡಿಲೊಳಗಿಟ್ಟು ಸಂಕಟಮಯ ಸನ್ಮಿವೇಶದ ಕತೆಯನ್ನು ವೇಶ್ಯೆ ರೂಪಳ ಮುಂದೆ ಅನಾವರಣಗೊಳಿಸುವ ಶಾರಿ ಮಗುವಿನ ಹಾಲಿನ ಕಾರಣಕ್ಕಾದರು ದೇಹ ತ್ಯಾಗಕ್ಕು ಸಿದ್ದಳಾದ ಮನಸ್ಥಿತಿಯೇ “ಅಡ್ಡೆ ಮನೆ” ಸೇರಿದ ಮೇಲೆ ಮತ್ತೊಂದು ದುರ್ಮಾರ್ಗದ ದಿನಗಳ ಕತೆ ಮಲ್ಲೇಶಿ ಮುಂದೆ ಬಿತ್ತರಿಸುತ್ತಾಳೆ. ಮಲ್ಲೇಶಿ ಮೌನವಾಗುತ್ತಾನೆ. ಯೋಚಿಸುತ್ತಾನೆ. ಅವಳ ಬದುಕಿನ ಅನಾವರಣವಾದಾಗಲು ಹೇಳುತ್ತಾನೆ- ಶಾರಿ ಈಗಲೂ ಕಾಲ ಮಿಂಚಿಲ್ಲ. ಬಂದು ಬಿಡು ನನ್ನೊಂದಿಗೆ. ನಿನ್ನ ನೆನಪು ಎದೆಯೊಳಗಿದೆ. ಅನೇಕ ಕನಸುಗಳಿವೆ ಇಲ್ಲಿ. ಆಗಿದ್ದು ಆಗಿ ಹೋಯ್ತು. ಅದೊಂದು ಕನಸೆಂದು ಭಾವಿಸಿ ಬಿಡು’ ಎನುವ ಅವನ ನಿಷ್ಕಲ್ಮಶ ಪ್ರೀತಿ ವಾತ್ಸಲ್ಯಕ್ಕೆ ಮರುಗಿ ಧನ್ಯತಾಭಾವದಲಿ- ಬೇಡ. ನನ್ನಂಥ ಕೆಟ್ಟು ಹೋದವಳ ಜೊತೆ ಯಾಕೆ ನೀನು ಬದುಕು ರೂಪಿಸಿಕೊಳಬೇಕು? ನೀನು ಚೆನ್ನಾಗಿರು. ಚೆಂದದ ಹೆಣ್ಣು ಮದುವೆ ಮಾಡಿಕೊಂಡು ಸುಖವಾಗಿರು. ನನ್ನದು ಬದುಕು ನನ್ನದು ನಿನ್ನ ಬದುಕು ನಿನ್ನದು. ನಿನ್ನ ಬೇಡಿಕೆಗೆ ನನ್ನ ಮನಸ್ಸು ಒಪ್ಪದು ಎಂದು ಖಡಕ್ ದನಿಯಲ್ಲಿ ಹೇಳುತ್ತಾಳೆ. ಆನಂತರ ಮಲ್ಲೇಶಿಗೆ ಬೇರೊಂದು ಹುಡುಗಿಯೊಂದಿಗೆ ಮದುವೆಯೂ ಆಗುತ್ತದೆ. ಮಗುವೂ ಆಗುತ್ತದೆ. ಶಾರಿಯ ಕಾರಣ ಡೈವೋರ್ಸೂ ಆಗುತ್ತದೆ. ಶಾರಿಗಿದು ಯಾತನೆಯಾಗಿ ಮಲ್ಲೇಶಿಗೆ ಕಾಣದಾಗೆ ಕಣ್ಮರೆಯಾಗುತ್ತಾಳೆ. ಮಲ್ಲೇಶಿ ತನ್ನ ಸಹಪಾಠಿ ದೀಪಗಳ ಮುಖೇನ ಮತ್ತೆ ಎದುರಾಗುತ್ತಾರೆ. ಅವಳಿಗೊಂದು ಸಾಮಾಜಿಕ ಸ್ಥಾನಮಾನ ದೊರಕುವಂತೆ ಮಾಡುತ್ತಾನೆ. ಈಗವಳು ಸೊಗಸಾಗಿದ್ದಾಳೆ. ಹಿಂದಿನ ಶಾರಿ ಮತ್ತೆ ಹುಟ್ಟಿ ರಂಜಿಸುತ್ತಿದ್ದಾಳೆ. ಮಗಳಿಗೆ ಮದುವೆಯನ್ನು ಮಾಡುತ್ತಾಳೆ. ಸುಖ ಅರಸಿ ಬಂತೇನೋ ಎನುವಾಗ ಅಳಿಯನ ತೊದಲು ಮಾತು, ಹಿಯಾಳಿಕೆ ಪ್ರವೃತ್ತಿ, ಸೂಳೆ ಪದ, ಕುಡಿತದ ಅಮಲು, ಶಾರಿಗಾದ ಅಸಹ್ಯ ಅಪಮಾನ ಅವಮಾನ ರಾಜಿಗೂ ಬಳುವಳಿಯಾಗಿ ಬಂತೇನೋ ಎನುವಷ್ಟು ಭೀಕರತೆಯಲ್ಲಿ ಅಳಿಯನ ಕುಡಿತದ ರಾತ್ರಿಯ ಗದ್ದಲ. ಅದೊಂದು ರಾತ್ರಿ ದುರಂತವಾಗಿ ಅಂತ್ಯವಾಗುವ ಮಗಳು. ಅವಳ ಹೆಣ ನೋಡಲಾರದೆ ಮತ್ತೆ ಅದೇ ಚಾಳಿಗೆ ಬೀಳುವ ನಿರ್ಧಾರ ಮಾಡಿದಳೇ? ಬಾಟಲಿ ಬಾಯಿಗಿಟ್ಟು ಕಿಕ್ ಏರಿಸಿಕೊಂಡವಳು ತೀರಾ ಅಸ್ತವ್ಯಸ್ತ! ಮಲ್ಲೇಶಿ ಅವಳ ಸನಿಹದಲಿ ನಿಂತು ಸ್ಪರ್ಶಿಸುತಾನೆ. ಅವಳ ಕಣ್ಣು ತೇವಗೊಳ್ಳುತ್ತವೆ. ಇಬ್ಬರ ಬಿಸಿಯುಸಿರ ಬೇಗೆಯಲಿ ಸಾಂತ್ವಾನದ ಅಪ್ಪುಗೆಯೊಂದು ಕಟ್ಟಿಕೊಳುವ ಬೆಚ್ಚನೆಯ ಕನಸುಗಳಿಗೆ ಸಾಕ್ಷಿಯಾಗುತ್ತದೆ.

ಇಲ್ಹಿ ಹಾಲಗೇರಿಯವರ ಕಥಾ ನಿರೂಪಣಾ ಶೈಲಿ ಕ್ಲಿಷ್ಟತೆ ಇಲ್ಲದೆ ಓದುಗನ ಮನಸ್ಸು ಇತರ ಕಡೆ ವಿಚಲಿತವಾಗದ ಹಾಗೆ ಕಾದಂಬರಿ ಓದುತ್ತ ಹೋದಂತೆ ಯಾವುದೋ ಹೊಸ ಪ್ರಪಂಚಕ್ಕೆ ಪ್ರವೇಶ ಪಡೆಯುತ್ತಿರುವ ಅನುಭವ ಒದಗಿಸುತ್ತದೆ. ಸಮಾಜದ ಕೆಟ್ಟ ವಾಸನೆ ಕೆಂಗುಲಾಬಿಯನ್ನು ಮೆತ್ತಿಕೊಂಡು ಅದರ ಸುವಾಸನೆ ಹರಡದ ವಾತಾವರಣದ ಚಿತ್ರಣ ಕಾದಂಬರಿ ಉದ್ದಕ್ಕು ಗೋಚರಿಸುತ್ತದೆ. ಇಲ್ಲಿ ಹೆಣ್ಣು ಸೋಲುತ್ತಾಳೆ. ಹಾಗೆ ಗೆಲ್ಲುತ್ತಾಳೆ. ಇಲ್ಲಿ ಗಂಡು ಗೆಲ್ಲುತ್ತಾನೆ. ಹಾಗೆ ಸೋಲುತ್ತಾನೆ. ಇಲ್ಲಿ ವ್ಯವಸ್ಥೆ ಈ ಇಬ್ಬರನ್ನೂ ತುಳಿಯುತ್ತದೆ. ಹಾಗೆ ಈ ಇಬ್ಬರೂ ವ್ಯವಸ್ಥೆಯನ್ನೆ ತುಳಿದು ಸೇಡು ತೀರಿಸಿಕೊಳುವ ಹೊರ ಹಾಕಲಾರದ ಒಳ ರೊಚ್ಚೂ ರೋಧಿಸುತ್ತದೆ.

ಮೇಲಿನ ಈ ಕಥೆಯ ಧಾಟಿ ಗಮನಿಸಿದಾಗ ಹಾಲಗೇರಿ ಅವರ ಈ ‘ಕೆಂಗುಲಾಬಿ’ ಯಾವ ವರ್ಗಕ್ಕೆ ಸೇರಬಹುದು? ವೇಶ್ಯೆಯನ್ನು ಯಾವ ಗುಂಪಿಗೆ ಸೇರಿಸಬೇಕು? ಈ ಸಮಾಜ ಬಹು ವರ್ಷಗಳ ಹಿಂದಿನಿಂದಲು ದಬ್ಬಾಳಿಕೆ ದೌರ್ಜನ್ಯವನ್ನೇ ತನ್ನ ಮೆಟ್ಟಿಲಾಗಿಸಿಕೊಂಡು ನಡೆದು ಬಂದದ್ದು. ಅದರಲು ಶತಮಾನಗಳಿಗೂ ಹೆಚ್ಚು ವರ್ಷಗಳಿಂದ ಹೆಣ್ಣನ್ನು ಒಂದು ಭೋಗದ ವಸ್ತುವಾಗಿಸಿ ನೋಡುತ್ತಿದೆ. ದಲಿತ ಬದುಕೂ ಇದಕ್ಕಿಂತ ಭಿನ್ನವೇನಲ್ಲ. ಆರಂಭದಲ್ಲೆ ಉಲ್ಲೇಖಿಸಿರುವಂತೆ ಇವು ಒಟ್ಟೊಟ್ಟಿಗೆ ಸಾಗಿ ಇವತ್ತಿಗೂ ಈ ಸಮಾಜದೊಳಗೆ ಆತಂಕದಿಂದಲೇ ಬದುಕುತ್ತ ತಿರಸ್ಕೃತ ಪಟ್ಟಿಯೊಳಗೆ ಕುಂತು ಮುಂದೇನಾದರು ಸ್ವೀಕೃತರ ಪಟ್ಟಿಗೆ ಸೇರ್ಪಡೆಯಾಗಬಹುದಾ ಅಂತ ಇಣುಕಿ ಆಸೆಗಣ್ಣಿನಲಿ ನೋಡುತ್ತಿವೆ.

ಹಾಗೆ ನೋಡುವುದಾದರೆ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಹಾಗು ಹಾಲಗೇರಿ ಅವರ ‘ಕೆಂಗುಲಾಬಿ’ ಎರಡನ್ನೂ ಎರಡು ಭಿನ್ನ ಕೋನದಿಂದ ಗುರುತಿಸಬಹುದು.

‘ಕೆಂಗುಲಾಬಿ’ ಸ್ತ್ರೀ ಸಂವೇದನೆಯ ಮೇಲೆ ಹೊಸ ಭಾಷ್ಯ ಬರೆದಂತಿದ್ದರೆ, ‘ಕುಸುಮ ಬಾಲೆ’ ದಲಿತ ಸಂವೇದನೆ ಮೇಲೆ ಭಾಷ್ಯ ಬರೆದಂತಿದೆ. ಅಂದರೆ ಇಲ್ಲಿ ಎರಡೂ ಕೃತಿಗಳು ಒಂದೇ ತಕ್ಕಡಿಯಲ್ಲಿ ತೂಗುತ್ತವೆ ಎಂದಲ್ಲ, ಬದಲಿಗೆ ಎರಡೂ ಕೃತಿಗಳು ಶೋಷಿತ ವರ್ಗವನ್ನು ನೇರವಾಗಿ ಪ್ರತಿನಿಧಿಸುತ್ತವೆ ಎನ್ನುವುದು. ‘ಕೆಂಗುಲಾಬಿ’ ಸ್ತ್ರೀ ಪ್ರಧಾನವಾಗಿಯೂ ‘ಕುಸುಮ ಬಾಲೆ’ ದಲಿತ ಪ್ರಧಾನವಾಗಿಯೂ ಪ್ರತ್ಯೇಕವಾಗಿ ನಿರೂಪಿಸಲ್ಪಟ್ಟ ಕೃತಿಗಳಿವು.

ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಆಡುನುಡಿಯಲ್ಲಿ ನಿರೂಪಿತಗೊಂಡು ಒಂದು ವರ್ಗದ ಓದುಗರನ್ನು ಸೆಳೆದದ್ದು ಬಿಟ್ಟರೆ ಇನ್ಯಾವ ಹೊಸತನವನ್ನು ಅದು ಕಟ್ಟಿ ಕೊಡಲಿಲ್ಲ ಎಂಬುದು ಬೇರೆ ಮಾತು. ಆದರೆ ಹಾಲಿಗೇರಿ ಅವರ ‘ಕೆಂಗುಲಾಬಿ’ ಓದುಗನ ಒಳಗೆ ಆ ‘ಬಾಲೆ’ಗೆ ಹೊರತಾದ ಒಂದು ಹೊಸ ಅನೂಹ್ಯ ತಲ್ಲಣವನ್ನು ಸೃಷ್ಟಿಸುತ್ತದೆ. ಆ ‘ಬಾಲೆ’ ಗೆ ದಶಕಗಳಿಂದಲೂ ಹಲ್ಲುಗಿಂಜಿದ ಬಹು ವಿದ್ವಾಂಸ ಮಟ್ಟದ ವಿಮರ್ಶೆಯಿದೆ. ಆ ವಿಮರ್ಶೆಯ ಬೆನ್ನು ಬಿದ್ದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಾಗುತ್ತ ತನ್ನದೇ ಹೊಸ ಮೈಲಿಗಲ್ಲು ಸೃಷ್ಟಿಸಿಕೊಂಡು ಬಂದಿದ್ದರೆ ‘ಕೆಂಗುಲಾಬಿ’ ಆತರದ ಹಲ್ಲುಗಿಂಜು ಬಹು ವಿದ್ವಾಂಸ ಮಟ್ಟದ ವಿಮರ್ಶೆಯಿಂದ ಕಳಚಿಕೊಂಡು ಒಂದಿಷ್ಟು ಪ್ರಾಮಾಣಿಕವಾದ ವಿಮರ್ಶೆಯಿಂದ ತನ್ನ ನೆಲೆ ಭದ್ರಪಡಿಸಿಕೊಂಡಿದೆ. ಆದರೆ ‘ಬಾಲೆ’ ಗೆ ಇದುವರೆವಿಗೂ ಒಂದು ಪ್ರಾಮಾಣಿಕ ವಿಮರ್ಶೆ ಅಂತ ಬಂದಿದೆ ಅಂದರೆ ಅದು ಪಿ.ಲಂಕೇಶ್ ಅವರದು. ಅವರು ‘ ಕುಸುಮ ಬಾಲೆ’ ಯನ್ನು “ಇದೊಂದು ಅರ್ಥವಾಗದ ಓದಲು ಅರ್ಹವಲ್ಲದ ಕೃತಿ” ಎಂದು ಒಂದೇ ಸಾಲಿನಲಿ ಹೇಳಿ ಬೆರಗು ಹುಟ್ಟಿಸಿದರು. ಇದರ ಬಗೆಗಿನ ಎಲ್ಲ ವಿಮರ್ಶಾ ಮಾನದಂಡಗಳಿಗೆ ಹೊಸದೇ ಆದ ವ್ಯಾಖ್ಯಾನಕ್ಕೆ ಮುನ್ನುಡಿ ಬರೆದವರು. ಆದರೆ ಇವತ್ತಿನ ಎಲ್ಲ ವಿಮರ್ಶಾ ಮಾನದಂಡ ಇಟ್ಟು ನೋಡಿದರು ಹಾಲಿಗೇರಿ ಅವರ ‘ಕೆಂಗುಲಾಬಿ’ ಸುಲಭವಾಗಿ ಅರ್ಥೈಸಿಕೊಳಬಲ್ಲ ಎಲ್ಲ ಓದುಗ ವರ್ಗವನ್ನು ತನ್ನೆಡೆ ಸೆಳೆದು ಸ್ವೀಕೃತಾಭಾವದಿಂದ ಓದಿಸಿಕೊಳ್ಳ ಬಲ್ಲಂತ ಒಂದು ತಾಕತ್ತಿನ ಕೃತಿ ಅನ್ನಬಹುದು.

ದಲಿತ ಕಥಾನಕದ ಒಂದು ಭಾಗವಾಗಿಯೂ ‘ಕೆಂಗುಲಾಬಿ’ ತೀವ್ರತರ ಸಂವೇದನೆಗೊಳಪಡಿಸುವ ಕೃತಿ. ಅದುವರೆಗೂ ದೇವನೂರರ ಅಡಂಬೋಲದಂತಿದ್ದ ವಿಮರ್ಶಾ ಲೋಕ ಇತ್ತೀಚಿನ ದಲಿತ ತಲೆಮಾರಿನ ಬರಹಗಾರರ ಸೃಜನಶೀಲ ಚಿಂತನ ಕ್ರಮದಿಂದ ವಿಚಲಿತವಾದಂತಿದೆ. ಪಿ.ಲಂಕೇಶ್ ಮುನ್ನುಡಿ ಹೊತ್ತ ಮೊಗಳ್ಳಿ ಗಣೇಶ್ ಅವರ ‘ಬುಗುರಿ’ ಕನ್ನಡ ಸಾಹಿತ್ಯ ಲೋಕದೊಳಗೆ ಸರಸರನೆ ಹರಿದು ಹೋದ ಗಳಿಗೆಯಲ್ಲೆ ದೇವನೂರರ ಅದುವರೆಗಿನ ಸಾಹಿತ್ಯ ತಂತ್ರಗಾರಿಕೆ ಮಸುಕಾಗುತ್ತಾ ಬಂತು. ‘ಕುಸುಮಬಾಲೆ’ ಯ ಗದ್ಯ- ಕಾವ್ಯ ಶೈಲಿಯದ್ದಾದರೆ, ‘ಬುಗುರಿ’ ರಂಗೋಲಿ ಕೆಳಗಿನ ಚಿತ್ತಾರದಂತೆ ದಲಿತ ಕೇರಿಯ ನೋವು ಯಾತನೆ ಒಳಗುದಿಯನ್ನು ಚಿತ್ರವತ್ತಾಗಿ ನಿರೂಪಿಸಿ ಓದುಗ ವಲಯದಲ್ಲಿ ಸಂಚಲನ ಸೃಷ್ಟಿಸಿ ಬೆರಗುಗೊಳಿಸುತ್ತಾ ಸಾಗಿತು. ಆಗ ಸ್ವಲ್ಪ ಎಚ್ಚೆತ್ತ ‘ಬಾಲೆ’ ಯ ಅಭಿಮಾನದ ತರಾವರಿ ಮುಖಗಳು ತನ್ನ ವಿಸ್ತಾರತೆಯನ್ನು ವಿಸ್ತೃತಗೊಳಿಸಿಕೊಳ್ಳುತ್ತ ಇರುವಾಗಲೆ ಎನ್ಕೆ ಎದ್ದು ನಿಂತರು. ಅವರ ‘ಚಿತ್ರದ ಬೆನ್ನು’ ‘ಹಿಮದ ಹೆಜ್ಜೆ’ ಪದ್ಯಗಳು ಓದುಗ ವಲಯದ ಇನ್ನೊಂದು ಸೃಜನಶೀಲ ಗುಂಪು ಸೃಷ್ಟಿಯಾಯ್ತು.

ನಾನಿಲ್ಲಿ ಹೇಳ ಹೊರಟಿರುವುದು ಎನ್ಕೆ ಅವರ ಕಥನ ಕಾವ್ಯದ ಶೈಲಿಗು, ಮೊಗಳ್ಳಿ ಗಣೇಶ್ ಅವರ ‘ತಕರಾರು’ ರೂಪದ ರಂಗೋಲಿ ಕೆಳಗಿನ ಚಿತ್ತಾರದ ಕಥನ ಶೈಲಿಗು, ದೇವನೂರರ ಆಡುನುಡಿ ಭಾಷಾ ತಾಂತ್ರಿಕಾಂಶಗಳಿಗೂ ಇರುವ ಮೇಲ್ಪದರದ ಧ್ವನಿ ಶೈಲಿ ಹಾಗು ಹನುಮಂತ ಹಾಲಿಗೇರಿ ಅವರ ‘ಕೆಂಗುಲಾಬಿ’ಯ ಕಥಾ ನಿರೂಪಕನ ಸರಳ ನಿರೂಪಣಾ ಶೈಲಿ -ಬದುಕಿನಲ್ಲಿ ಘಟಿಸುವ ವಿವಿಧ ಘಟ್ಟಗಳು ವೈಚಿತ್ರ್ಯಕಾರಕವಾಗಿ ಮೂಡಿ ಬಂದಿರುವ ಘಟನಾವಳಿಗಳಿಗೂ ಇರುವ ತುಲನಾತ್ಮಕ ಅಂಶ.

‘ ಕೆಂಗುಲಾಬಿ’ ಯ ಆರಂಭಿಕ ಕಥಾ ನಿರೂಪಕನ ಬಾಲ್ಯದ ಚಿತ್ರಣಗಳು ಎನ್.ಕೆ.ಹನುಮಂತಯ್ಯ ಅವರ ಜೀವನ ಚಿತ್ರವನ್ನು ನೆನಪಿಗೆ ತರುತ್ತವೆ. ಎನ್ಕೆ ಅವರೇ ಸಂಕ್ಷಿಪ್ತವಾಗಿ ನಿರೂಪಿಸಿರುವ ‘ಹೊಲಗೇರಿ ಹಾದಿಯಲಿ ಸೋಬಾನೆ ದೀಪಗಳು’ ಆತ್ಮ ಕಥನದಲ್ಲಿ “ಅಪ್ಪನಿಲ್ಲದ ರಾತ್ರಿ ಅವ್ವನ ಮೈತುಂಬಾ ಮಿಂಚು ಸೋರುತ್ತಿತ್ತು. ಮಧ್ಯ ರಾತ್ರಿಯಲ್ಲಿ ಗುರುತಿಲ್ಲದ ನೆರಳುಗಳು ಮನೆಯೊಳಗೆ ನುಸುಳುತ್ತಿದ್ದವು. ಅವ್ವನ ಜೊತೆ ಕತ್ತಲಿನಲ್ಲಿ ನಲಿದಾಡಿ ಮುಂಜಾನೆಯಾದೊಡನೆ ಕರಗುತ್ತಿದ್ದವು. ನನ್ನ ತಮ್ಮ ಗಾಢ ನಿದ್ರೆಯಲ್ಲಿರುತ್ತಿದ್ದ. ಆದರೆ, ನೆರಳುಗಳ ಸದ್ದಿಗೆ ನಾನು ಎಚ್ಚರವಾಗುತ್ತಿದ್ದೆ. ಆ ನೆರಳುಗಳು ನನ್ನ ಕಣ್ಣಲ್ಲಿ ಚಿತ್ರಗಳಾಗಿ ಚುಚ್ಚುತ್ತಿದ್ದವು. ಅಪ್ಪನಿಲ್ಲದ ರಾತ್ರಿಗಳು ಅವ್ವನ ಬಾಳಿನಲ್ಲಿ ಗಾಢವಾಗತೊಡಗಿದವು” ಎಂದು ಗಾಢ ಧ್ವನಿಯಲ್ಲಿ ಹೇಳುವಾಗ ಓದುಗನ ಉಸಿರು ಬಸಿರಾಗುತ್ತದೆ.

‘ಕೆಂಗುಲಾಬಿ’ ಯ ನಿರೂಪಕ ಮಲ್ಲೇಶಿ “ನಮ್ ಕಡೀಗಿ, ನಮ್ ಕುಲದ ಹೆಣ್ಗೂಸಳಿಗೆ ಮುತ್ತ ಕಟ್ಟಿ ಸೂಳಿ ಬಿಡಾದು ಹಳ್ಳಳ್ಳಗೂ ಐತಿ. ನಮ್ಮವ್ವ ಮೈ ನರೆಯೋದನ್ನೆ ಕಾಯುತ್ತಿದ್ದ ನಮ್ಮಜ್ಜ, ಅವಳು ಮೈ ನರೆದ ಮ್ಯಾಲ ಮುತ್ತು ಕಟ್ಟಿಸಿ ಮೆರುವಣಿಗೆ ಮಾಡಿಸೊ ಮೂಲಕ ತನ್ನ ಮಗಳು ಸೂಳಿಗಾರಿಕೆ ಮಾಡಾಕ ಇಂದಿನಿಂದತಯಾರಾಗ್ಯಾಳ ಅನ್ನೊದನ್ನ ಢಂಗ್ರ ಸಾರಿದ. ಅವತ್ತಿಂದ ನಮ್ಮವ್ವ ಊರವರ ವಸ್ತು ಆದ್ಲು. ಊರಾಗಿನ ಮ್ಯಾಗಳ ಕುಲಸ್ಥರೆಲ್ಲ ನಮ್ಮವ್ವನನ್ನು ಹರಕೊಂಡು ತಿನ್ನಾಕ ಶುರು ಮಾಡಿದ್ರು. ಕೆಲವೊಬ್ಬರಿಗಂತೂ ದುಡ್ಡಿಲ್ಲ ಕಾಸಿಲ್ಲ.ಪುಗಸಟ್ಟೆ ಮಾಲ ಆಗಿಬಿಟ್ಲು ನಮ್ಮವ್ವ. ಹಂಗಾಗಿ ಕಂಡ ಕಂಡ ಹಡಬೇ ಮಕ್ಕಳೆಲ್ಲ ಎಳಕಂಡು ಹೋಗಾವರೇ ಆಕಿನ್ನ.”

“ಓಕಳಿ ಆಡಿದ ಬಣ್ಣದ ಗುರ್ತು ಅವ್ವನ ಮುಖದ ಮ್ಯಾಲೆಲ್ಲ ಇನ್ನೂ ಹಂಗ ಇತ್ತು. ಅಷ್ಟರೊಳಗ ಒಂದಿಬ್ಬರು ಗಣಮಕ್ಕಳು ನಮ್ಮನಿಗೆ ಬಂದ್ರು. ಅವರು ನಿನ್ನೆಯ ಓಕಳಯೊಳಗ ತೊಯ್ದ ಅರಬ್ಯಾಗ ನಮ್ಮವ್ವನ ನೋಡಿದ್ರು. ದೂರದ ಪ್ಯಾಟಿಯಿಂದ ನಮ್ಮವ್ವನಂತ ಸೂಳೆರನ್ನ ನೋಡುದಕ್ಕಾಗಿಯೇ ಬಂದಿದ್ರಂತ. ನಮ್ಮವ್ವನ ಮೈಮಾಟದಿಂದ ಸಾಕಷ್ಟು ವ್ಯಾಪಾರ ಮಾಡಕೋಬೌದು ಅಂತ ಅವರಿಗೆ ಅನಿಸಿತ್ತು”

“ಅಕ್ಕ ಮೊಣ ಕಾಲುಗಳ ಮಧ್ಯೆ ಕೈಯನ್ನಿಟ್ಟುಕೊಂಡು ನಿದ್ದೆಗಣ್ಣಲ್ಲಿ ಇನ್ನೂ ಮುಲುಗುತ್ತಲೇ ಇದ್ದಳು. ಕಾಲ್ಮರಿಗಳ ಜರಕ್ ಜರಕ್ ಶಬ್ಧ ಅವರಿಬ್ಬರು ಒಳ ಬಂದಿದ್ದನ್ನು ಘೋಷಿಸುತ್ತಿತ್ತು. ನಿದ್ರೆಯ ಮಂಪರಿನಲ್ಲಿದ್ದ ನನ್ನನ್ನು ಅವ್ವ ಎತ್ತಿಕೊಂಡು ಹೊರ ಹೋದಳು. ಅಕ್ಕ ಬೇಡ ಬೇಡ ಎಂದು ರೋಧಿಸುವುದು ಕೇಳತೊಡಗಿತು. ಅವ್ವ ರೂಪಾಯಿ ನೋಟುಗಳ ಕಟ್ಟೊಂದನ್ನು ಎಣಿಸುತ್ತಿದ್ದಳು. ಆವತ್ತು ಅಕ್ಕ ಐದಾರು ಸಲ ಜೋರಾಗಿ ಚೀರಿದ್ದನ್ನು ನನ್ನ ಗಮನಕ್ಕೆ ಬಂತು. ಆಕೆ ಚೀರಿದಾಗಲೊಮ್ಮೆ ನಾನು ಅವ್ವನತ್ತ ನೋಡುತ್ತಿದ್ದೆ.”

-ಎಂಬ ಸಾಲುಗಳ ಮೂಲಕ ಹಾಲಿಗೇರಿ ಅವರು ಈ ಕಾದಂಬರಿಯೊಳಗೆ ಹೆಣ್ಣಿನ ಬಾಳುವೆ ಮತ್ತು ಬದುಕಿನ ಜೀವಂತ ಸತ್ಯ ದರ್ಶನ ಮಾಡಿಸುವುದರೊಂದಿಗೆ ಕ್ರೌರ್ಯದ ನರಕ ದೃಶ್ಯವನ್ನು ಯಥಾವತ್ ಕಣ್ಣ ಮುಂದಿನ ವ್ಯವಸ್ಥೆಯ ಜೀವಂತಿಕೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಎನ್ಕೆ ಅವ್ವನ ಬಗ್ಗೆ ವಿಷಾದ ಮತ್ತು ಒಣಗಿದ ದುಃಖದ ಧ್ವನಿಯಲ್ಲಿ ಆತ್ಮಕಥನ ಕಟ್ಟಿರುವ ಕಥನ ಕಲೆ ಅದರ ಭಾಷಾ ಸೊಗಡಿಂದ ಕಾವ್ಯಾತ್ಮಕವಾಗಿಯೂ, ತೀವ್ರವಾದ ಭಾವುಕತೆಯಿಂದ ಆರ್ದ್ರವಾಗಿ ಧ್ವನಿಸಿದರೆ, ‘ಕೆಂಗುಲಾಬಿ’ ಎದೆಯಲ್ಲಿ ನಿರೂಪಕನು ನಿರೂಪಿಸುತ್ತ ಸಾಗುವ ಅವ್ವನ ಬಗೆಗಿನ ಬಾಳುವೆಯ ಬದುಕಿನ ನೋವನ್ನು ನಿರ್ಭೀತಿಯಿಂದ ನೋವಿನ ಲಹರಿಯಲ್ಲಿ ಹಾಲಿಗೇರಿ ಅವರು ತಮ್ಮ ನೆಲದ ದನಿಯ ಭಿನ್ನ ಭಾಷಾ ಸೊಗಡಿನಲ್ಲಿ ಹಿಡಿದಿಡುತ್ತಾರೆ. ಕಾದಂಬರಿಯ ಕೆಲ ಸನ್ನಿವೇಶಗಳ ಪ್ರತಿ ಸಾಲಿನ ಪದವು ಅವ್ವನ ಅಂತರಂಗವನ್ನು ಶೋಧಿಸಿ ಕೆಣಕಿ ಕೆಣಕಿ ತೆಗೆದು ಒಬ್ಬ ಕಲಾಕಾರನ ಶೈಲಿಯಲ್ಲಿ ಕೆತ್ತಿ ರೂಪಿಸಿದ ಕಲಾಕೃತಿಯ ಕುಶಲತೆ ಇದೆ. ಪ್ರತಿ ಅಸ್ಸಹಾಯಕ ಹೆಣ್ಣಿನ ಅಂತರಂಗದ ರೋಧನವಿದೆ. ಈ ರೋಧನೆ, ವೇಶ್ಯಾವೃತ್ತಿಯ ಹೆಣ್ಣನ್ನೇ ಕೇಂದ್ರೀಕರಿಸಿ ಹೇಳುವಂತಿಲ್ಲ. ಬದಲಿಗೆ ಅದರಾಚೆಗೂ ವಿವಿಧ ಬಗೆಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುವ/ಒಳಗಾಗುತ್ತಿರುವ ಹೆಣ್ಣು ಜೀವಗಳ ರೋಧನೆಯನ್ನು ‘ಕೆಂಗುಲಾಬಿ’ ಹೇಳುತ್ತದೆ.

ಈ ಬಗೆಯಲ್ಲಿ ಈ ಕಾದಂಬರಿಯನ್ನು ಓದುತ್ತ ವಿಶ್ಲೇಷಣೆಗೊಳಪಡಿಸುತ್ತ ನಾವು ಕಂಡುಕೊಳ್ಳುವ ಸತ್ಯದ ಜಾಡನ್ನು ಹಿಡಿಯ ಹೊರಟಾಗ ‘ವೇಶ್ಯಾ ಜಗತ್ತಿನ ಅನಾವರಣ’ ದಂತ ‘ಕೆಂಗುಲಾಬಿ’ ಅನ್ನುವ ಶೀರ್ಷಿಕೆಗೆ ಕೊಟ್ಟಿರುವ ಅಡಿ ಬರಹ ಬೇಕಿರಲಿಲ್ಲವೇನೋ ಅನಿಸುವಷ್ಟು ನನ್ನ ತಕರಾರಿದೆ.

‘ಕೆಂಗುಲಾಬಿ’ ಓದುತ್ತಾ ಓದುತ್ತಾ ಕಾದಂಬರಿಕಾರ ಹನುಮಂತ ಹಾಲಿಗೇರಿ ಬಹುಶಃ ಪ್ರವಾಸಿ (ಸುತ್ತಾಟದ ಮನಸ್ಥಿತಿ) ಇರಬಹುದಾ..? ಅನಿಸಿದ್ದಿದೆ. ಅವರ ಇಡೀ ಕಾದಂಬರಿ ಯೊವುದೋ ಒಂದು ಊರಿನ ಕರಾರುವಾಕ್ ನೆಲದಲ್ಲಿ ಜರುಗದೆ ಊರು ಕೇರಿ ದಾಟುತ್ತದೆ. ಅದು ದಿಕ್ ದಿಕ್ಕುಗಳನು ನೋಡುತ್ತ ಬಳಸುತ್ತ ವಿಸ್ತರಿಸುತ್ತದೆ. ಕಥಾ ನಿರೂಪಕನ ಕಣ್ಣೇದುರೇ ಅಥವಾ ಆ ಪ್ರವಾಸ ಗಳಿಗೆಯಲಿ ಸಿಗುವ ಪಾತ್ರಗಳು ಹೇಳುವ ಹಿನ್ನೋಟದ ಕಥಾ ನಿರೂಪಣೆ ಅವನೊಂದಿಗೆ ಗಂಟು ಹಾಕಿಕೊಂಡು ತಿರುಗುತ್ತದೆ. ಇದರಿಂದ ನಮಗೆ ಕಾದಂಬರಿ ಓದುತ್ತ ಅದರೊಳಗಿನ ಆ ನಿರೂಪಕನೊಂದಿಗೇ ಸುತ್ತಾಡುತ್ತಿರುವ ಅನುಭವಾಗುತ್ತದೆ. ಬಹುತೇಕ ಶಿವರಾಮ ಕಾರಂತರ ಕಾದಂಬರಿಗಳು ಈ ಬಗೆಯದ್ದಾಗಿವೆ.

ಈ ಕಾದಂಬರಿಗೆ ಮುನ್ನುಡಿ ಬರೆದಿರುವ ಮಲ್ಲಿಕಾ ಘಂಟಿ ಒಬ್ಬ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಕಾದಂಬರಿ ಕುರಿತು ಹೇಳಲು ಸಾಕಷ್ಟು ವಿಚಾರಗಳಿದ್ದವು. ಅದನ್ನು ತುಂಡರಿಸಿ ಕೇವಲ ಮೇಲ್ಪದರದ ದನಿಯಲ್ಲಿ ತಮ್ಮ ಮುನ್ನುಡಿಯನ್ನು ಮುಗಿಸಿದ್ದಾರೆ. ಕಾದಂಬರಿಕಾರ ಹನುಮಂತ ಹಾಲಿಗೇರಿ ‘ಕೆಂಗುಲಾಬಿ’ ಬಹುಶಃ ಹೆಣ್ಣಿನ ಕುರಿತ ಕಥಾ ವಸ್ತು ಇದಾಗಿರುವುದರಿಂದಲೊ ಏನೋ ಹೆಣ್ಣಿನ ನೋವು ಯಾತನೆ ತುಮುಲ ಹೇಳಿಕೊಳಲಾರದ ಇನ್ನಷ್ಟು ವಸ್ತು ವಿಷಯ ಬಯಸಿ ಮಲ್ಲಿಕಾ ಘಂಟಿ (ಈ ಸ್ಥಾನದಲ್ಲಿ ಯಾರೆ ಸ್ತ್ರೀ ಲೇಖಕಿ ಇರಬಹುದು) ಅವರಿಂದ ಬರೆಸಿರಬಹುದಾದ ಸಾಧ್ಯತೆ ಇರಬಹುದೆಂದು ನನ್ನ ಊಹೆ. ಆದರೆ ಕಾದಂಬರಿಯೊಳಗೆ ಧ್ವನಿಸುವ ಹೆಣ್ಣಿನ ಪಿಸುಮಾತನ್ನು ತಮ್ಮ ಒಳಗಿನ ಧ್ವನಿಯಲ್ಲಿ ಧ್ವನಿಸಬಹುದಿತ್ತು. ಲೇಖಕನೊಬ್ಬ ಕೃತಿಯೊಂದಕ್ಕೆ ಮುನ್ನುಡಿಕಾರರಲ್ಲಿ ಹೀಗೇ ಬರೆದುಕೊಡಿ ಎಂದು ಹೇಳಲಾಗದು. ಮುನ್ನಡಿ ಬರೆಯಲು ಒಪ್ಪಿಕೊಂಡವರೂ ಹೀಗೇ ಬರೆಯುತ್ತೇನೆಂದು ಹೇಳುವುದಿಲ್ಲ. ಆದರೆ ಮುನ್ನುಡಿ ಎನ್ನುವುದು ಲೇಖಕನನ್ನು ಮತ್ತು ಅವನ ಸೃಷ್ಟಿಯ ಬರಹವನ್ನು ಅವನೊಂದಿಗೆ ಹೊಂದಿರುವ ಆತ್ಮೀಯ ಧ್ವನಿಯಲ್ಲಿ ಬರೆಯದೆ ಅದೊಂದು ವಿಮರ್ಶಾ ಪುಟಗಳಲ್ಲಿ ಯಥಾವತ್ ಪ್ರಕಟಿಸಬಹುದಾದ ವಿಮರ್ಶೆಯ ರೂಪದ್ದಾದರೆ ಮುನ್ನುಡಿ ಪಡೆದ ಕೃತಿಯ ಮೌಲ್ಯ ಹೆಚ್ಚುತ್ತದೆ. ಅಂಥದ್ದೊಂದು ಮುನ್ನುಡಿಯಲ್ಲಿ ಪಿ.ಲಂಕೇಶ್ ಮೊಗಳ್ಳಿ ಗಣೇಶ್ ಅವರ ‘ಬುಗುರಿ’ ಕೃತಿಯದ್ದಾಗಿದೆ. ಹಾಗೆ ಪು.ತಿ.ನ, ಚದುರಂಗ, ಜಿ.ಹೆಚ್.ನಾಯಕ್ ಅವರು ದೇವನೂರರ ‘ಕುಸುಮ ಬಾಲೆ’ ಗೆ ಬರೆದ ಬೆನ್ನುಡಿಯದ್ದಾಗಿದೆ. ಯು.ಆರ್.ಅನಂತಮೂರ್ತಿ ಅವರು ಬರೆದ ಎನ್ಕೆ ಅವರ ‘ಚಿತ್ರದ ಬೆನ್ನು’ ಬೆನ್ನುಡಿಯದ್ದಾಗಿದೆ. ಹೀಗೆ ಕೀರ್ತಿನಾಥ ಕುರ್ತಕೋಟಿ, ಯಶವಂತ ಚಿತ್ತಾಲರು ‘ದ್ಯಾವನೂರು,’ ‘ಒಡಲಾಳ’ ಕ್ಕೆ ಬರೆದ್ದಾಗಿದೆ. ಹಾಗಾಗಿ ಮಲ್ಲಿಕಾ ಘಂಟಿ ಇಡೀ ಕಾದಂಬರಿಯನ್ನು ತಲಸ್ಪರ್ಶಿ ವಿಶ್ಲೇಷಣೆಗೊಳಪಡಿಸಿ ಮುನ್ನುಡಿ ಬರೆಯಬಹುದಿತ್ತು. ಹಾಗಾಗಿ ಈ ಕೃತಿಗೆ ಬರೆದಿರುವ ಅವರ ಮುನ್ನುಡಿ ಸುಮ್ಮನೆ ಮೇಲಾಡುವ ಮಾತಿನಂತಿದೆ.

‘ಕೆಂಗುಲಾಬಿ’ ಯಲ್ಲಿ ಕಾದಂಬರಿಕಾರರು ಕಥೆಯ ಒಳಗಿನ ನಿರೂಪಕನಿಂದ ಕಥೆ ನಿರೂಪಿತವಾಗುವಾಗ ಕೆಲ ಬಲವಂತದ ಕ್ರಿಯೇಟ್ ಸನ್ನಿವೇಶಗಳು ಅಚಾನಕ್ ಸೃಷ್ಟಿಯಾಗುತ್ತವೆ. ಹಾಗೆ ಎರಡು ಪಾತ್ರಗಳ ನಡುವೆ ಗಂಭೀರವಾದ ಮಾತುಕತೆಗಳು ನಡೆವಾಗ ಆ ನಡುವೆ ಅವಶ್ಯವಿಲ್ಲದ ಮಾತನ್ನು ತುರುಕಿ ಹೇಳಿಸುವ ಸಂಭಾಷಣೆಗಳಿವೆ. ಇವು ಸಿನಿಮಾ ಶೈಲಿಯದ್ದಾಗಿದೆ.

ಆಟೋ ಡ್ರೈವರ್ ಡೊಳ್ಳು ಹೊಟ್ಟೆಯವನಿಗೆ ಅವಾಜ್ ಹಾಕುವುದು; ಅವನಿಂದ ಅವನು ಗಿರಾಕಿಯಂತಿದ್ದವನನ್ನು ಪಾರು ಮಾಡುವುದು; ಮಲ್ಲೇಶಿ ಅವಿವಾಹಿತನಾಗಿದ್ದ ಸಂದರ್ಭದಲ್ಲಿ ಶಾರಿಗೆ ನಿನ್ನ ಮಗಳು ರಾಜಿಯನ್ನು ನಾನೇ ಸಾಕಿಕೊಳುವೆ ಎನುವುದು;ಗಿರಾಕಿಗಾಗಿ ಕಾಯುತ್ತಿದ್ದ ವೇಶ್ಯೆಯೊಬ್ಬಳು ಅಸ್ಸಹಾಯಕಳಾದ ಶಾರಿಗಾಗಿ ಮರುಗುವುದು; ಅದೇ ವೇಶ್ಯೆ ಶಾರಿಯ ಮಗುವಿಗೆ ತಿರುಗಿ ಬಂದು ಹಾಲುಡಿಸುವುದು; ಮಲ್ಲೇಶಿ ಅವಳ ಮೇಲಿನ ಪ್ರೀತಿಗೆ ಈಗಲೂ ಬಾ ನನ್ನೊಂದಿಗೆ ನಡೆದದ್ದು ಒಂದು ಕೆಟ್ಟ ಕನಸು ಎಂದು ಹೇಳುವುದು; ಕೊನೇ ತನಕ ಶಾರಿಯ ಧ್ಯಾನದಲ್ಲಿದ್ದು ಅವಳ ಹುಡುಕಾಟದಲ್ಲೆ ಇರುವುದು; ಆ ಹುಡುಕಾಟದಲ್ಲಿ ಅಕಸ್ಮಾತ್ ಅವಳು ಪದೇ ಪದೇ ಅವನೆದುರು ಪ್ರತ್ಯಕ್ಷಳಾಗುವುದು; ಕ್ಲೈಮ್ಯಾಕ್ಸ್ ಗೆ ಬರೊದಾದರೆ ಆಸ್ಪತ್ರೆಯಲ್ಲಿ ಮಗಳು ಸತ್ತು ಹೆಣ ಪಡೆಯಲು ಆಸ್ಪತ್ರೆ ಬಿಲ್ ಕಟ್ಟಲಾಗದೆ ಮೊಬೈಲ್ ಮಾರಿಕೊಂಡು ಅದೂ ಸಾಲದೆ ಆಸ್ಪತ್ರೆಯಿಂದ ಬೇಸತ್ತು ಅಲ್ಲಿಂದ ಕಣ್ಮರೆಯಾಗುವುದು; ಮಲ್ಲೇಶಿ ಬರುವುದು; ವಿಷಯ ತಿಳಿದು ಅವಳ ಬೆನ್ನತ್ತುವುದು; ಅವಳು ಬಾರ್ ಮುಂದೆ ನಿಂತು ಬಾಟಲಿ ಬಾಯಿಗೇರಿಸಿ ಅಸ್ತವ್ಯಸ್ತ ಓಡುವುದು; ಮಲ್ಲೇಶಿ ಅವಳತ್ತಿರ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಬಿಸಿಯುಸಿರ ಬೇಗೆಯಲಿ ತಣ್ಣಗೆ ಅಪ್ಪಿ ಸುಖಾಂತ್ಯ ಭಾವ ಮೂಡಿಸುವುದು;

ಇದು ಒಟ್ಟು ಕೃತಿಯ ಲೋಪವಲ್ಲದಿದ್ದರು ಬದುಕಿನ ಕಟು ವಾಸ್ತವವನ್ನು ಇಟ್ಟುಕೊಂಡ ಸೃಜನಶೀಲ ಲೇಖಕನೊಬ್ಬ ಪರದೆ ಮೇಲಿನ ವ್ಯಾಮೋಹದ ಗೀಳನ್ನು ಅಂಟಿಸಿಕೊಳದೆ ಎದೆಯ ಭಾಷೆಗೆ ಹತ್ತಿರವಾಗಿ ಬರೆಯುವ ಪ್ರಾಮಾಣಿಕತೆ ಉಳಿಸಿಕೊಂಡರೆ ಕೃತಿಗೆ ಗಟ್ಟಿತನ ದಕ್ಕುತ್ತದೆ. ಇದು ಅವರ ಈಚಿನ ‘ಏಪ್ರಿಲ್ ಫೂಲ್’ ಕತೆಗಳಲ್ಲು ಈ ಶೈಲಿ ಪುನರಾವರ್ತಿತವಾಗಿರುವುದನ್ನು ಕಾಣಬಹುದು. ಈ ಬಗ್ಗೆ ಹಾಲಿಗೇರಿ ಅವರು ಸ್ವಯಂ ವಿಶ್ಲೇಷಿಸಿಕೊಂಡರೆ ಮುಂದೆ ಅವರೊಳಗೆ ಹುಟ್ಟುವ ಕತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಭಿನ್ನವಾಗಿ ನಿಲ್ಲ ಬಲ್ಲರು.

‘ಕೆಂಗುಲಾಬಿ’ಯಲ್ಲಿ ಹಾಲಿಗೇರಿ ಅವರ ಸಂವೇದನೆ, ಎಲ್ಲ ದಲಿತ ಧ್ವನಿಗಳ ಸಂವೇದನೆ; ಎಲ್ಲ ಶೋಷಿತ ಧ್ವನಿಗಳ ಸಂವೇದನೆ; ಒಳಿತು ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳದೆ ಹೊಟ್ಟೆಗಾಗಿ ತುತ್ತು ಕೂಳಿಗಾಗಿ ನೈತಿಕವೋ ಅನೈತಿಕವೋ ಈ ಯಾವ ಪರಿವೆಯೂ ಇಲ್ಲದೆ ಪರಪುರಷನ ಮುಂದೆ ಬೆತ್ತಲಾಗಿ ಮಾಂಸದ ಮುದ್ದೆಯಂತಿರುವ ದೇಹ ಒಪ್ಪಿಸಿ ಕತ್ತಲಲ್ಲಿ ಕತ್ತಲಾಗಿ ಕರಗಿ ಬಿಡುವ ಎಲ್ಲ ಹೆಣ್ಣು ಜೀವಗಳ ಸಂವೇದನೆ; ಈ ಸಂವೇದನೆಯೊಳಗೆ ವಿಚಿತ್ರ ವಿಕ್ಷಿಪ್ತ ನಿಕೃಷ್ಠ ಬಿಸಿಯುಸಿರ ಬೇಗೆಯಲಿ ತಣ್ಣನೆ ರೋಧಿಸುವ ‘ಕೆಂಗುಲಾಬಿ’ ಲೇಖಕ ಹಾಲಿಗೇರಿ ಅವರ ಬದುಕಿನ ದಟ್ಟ ಅನುಭವವನ್ನು ಪರಿಚಯಿಸುತ್ತದೆ.

ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬರಾದ ಎಸ್.ಎಫ್. ಯೋಗಪ್ಪನವರ್ ‘ಲಂಕೇಶ್ ಪತ್ರಿಕೆ’ ಯಲ್ಲಿ ಮೊಗಳ್ಳಿ ಗಣೇಶ್ ಅವರ ಎರಡನೇ ಕೃತಿ ‘ಅತ್ತೆ’ ಕೃತಿ ವಿಮರ್ಶಿಸುವಾಗ ಆ ವಿಮರ್ಶಾ ಬರಹಕ್ಕೆ ಕೊಟ್ಟ ಶೀರ್ಷಿಕೆ ‘ಒಂದೇ ರಾಗದ ಅದೇ ಗೋಳುಗಳು’! ಇದನ್ನು ಅವರು ಆ ಕೃತಿಗೆ ಅನ್ವಯಿಸಿ ಹೇಳಿದ್ದಾ ಅಥವಾ ಆ ಕೃತಿಯ ಕತೆಗಳ ತಂತ್ರ ಆಶಯ ‘ಬಗುರಿ’ ಕೃತಿಯ ದಲಿತ ಧ್ವನಿಯ ಪುನರಾವರ್ತಿತ ಆಗಿದ್ದರ ಬಗ್ಗೆನಾ..? ಎಂಬುದು ಆವತ್ತಿನ ವಿಮರ್ಶಾ ವಲಯ ಕೂದಲು ಸೀಳುವ ಚಿಂತನೆಯಲ್ಲಿ ತೊಡಗಿತ್ತು. ಆದರೆ ‘ಈ ಒಂದೇ ರಾಗದ ಅದೇ ಗೋಳುಗಳು’ ಎಂಬುದು ಹಾಲಗೇರಿ ಅವರ ‘ಕೆಂಗುಲಾಬಿ’ಯೊಳಗೆ ಬರುವ ಶಾರಿ ಎಂಬ ಹೆಣ್ಣು ಜೀವದ ಪ್ರತ ಘಟ್ಟದಲ್ಲು ಏದುಸಿರಂತೆ ಪುನರಾವರ್ತಿತವಾಗುವ ವೇಶ್ಯಾವೃತ್ತಿಯ ನಿಕೃಷ್ಠ ಬದುಕಿಗೆ ಯಥಾವತ್ ಹೇಳಿದರೆ ಅದೇ ‘ಕೆಂಗುಲಾಬಿ’ ಯ ಒಳ ಹೂರಣ ಎನಬಹುದು!

-ಎಂ.ಜವರಾಜ್