ಪ್ರಸಾದ್‌ ನಾಯ್ಕ್‌ ಅವರ ಸಫಾ ಪುಸ್ತಕದಿಂದ


ಪುಸ್ತಕವಾಗಿ ಹೊರಬಂದಿದ್ದ ನನ್ನ ಆತ್ಮಕಥನವನ್ನು ಚಲನಚಿತ್ರವಾಗಿ ತೆರೆಯ ಮೇಲೆ ಮೂಡಿಸಲು ಆಫರ್ ಗಳು ಬರುತ್ತಲೇ ಇದ್ದರೂ ನಾನು ಹಲವು ವರ್ಷಗಳ ಕಾಲ ನಿರಾಕರಿಸುತ್ತಲೇ ಬಂದಿದ್ದೆ. 1998 ರಲ್ಲಿ ಪುಸ್ತಕವು ಬಿಡುಗಡೆಯಾದಾಗಿನಿಂದ ಹಾಲಿವುಡ್ ನ ಹಲವು ಖ್ಯಾತ ನಿರ್ದೇಶಕರುಗಳು ನನ್ನ ಬಳಿ ಬಂದು ಈ ಕಥೆಯನ್ನು ಚಲನಚಿತ್ರವಾಗಿ ಪ್ರೇಕ್ಷಕರ ಮುಂದಿಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧವಾಗಿ ಹಲವು ಕಾನ್ಸೆಪ್ಟುಗಳನ್ನೂ ನನ್ನ ಮುಂದಿಡಲಾಯಿತು. ಆದರೆ ಈ ಎಲ್ಲಾ ಕಾನ್ಸೆಪ್ಟುಗಳಲ್ಲಿ ಇದ್ದಿದ್ದು ಒಂದೇ ಥೀಮ್: ಆಫ್ರಿಕಾದ ಸಿಂಡ್ರೆಲ್ಲಾ; ಮರುಭೂಮಿಯಿಂದ ಫ್ಯಾಷನ್ ರ್ಯಾಂಪ್ ಗಳ ವರೆಗಿನ ಅಭೂತಪೂರ್ವ ಪಯಣ; ಬಡಹೆಣ್ಣುಮಗಳೊಬ್ಬಳು ಸೂಪರ್ ಮಾಡೆಲ್ ಆಗುವ ಹಿಂದೆಂದೂ ಕೇಳದ ಕಥೆ… ಇತ್ಯಾದಿಗಳು.

ಸೊಮಾಲಿಯಾದ ಮರಳುಗಾಡಿನಿಂದ ನಾನು ಪಲಾಯನಗೈದಿದ್ದು, ಲಂಡನ್ನಿನಲ್ಲಿ ಚಾಕರಿ ಮಾಡಿದ್ದು, ಮೆಕ್-ಡೊನಾಲ್ಡ್ ರೆಸ್ಟೊರೆಂಟ್ ಒಂದರಲ್ಲಿ ನೆಲ ಒರೆಸುವ ಕೆಲಸವನ್ನು ಮಾಡುತ್ತಿದ್ದಾಗ ಖ್ಯಾತ ಬ್ರಿಟಿಷ್ ಛಾಯಾಗ್ರಾಹಕರಾದ ಟೆರೆನ್ಸ್ ಡೋನೋವನ್ ನನ್ನನ್ನು ಕಂಡು ಗುರುತಿಸಿದ್ದು, ಮುಂದೆ ವಿಶ್ವದಲ್ಲೇ ಅತೀ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಸೂಪರ್ ಮಾಡೆಲ್ ಆಗಿ ನಾನು ಬೆಳೆದಿದ್ದು… ಹೀಗೆ ಈ ಯಶಸ್ಸಿನ ಕಥೆಯ ರೆಡಿಮೇಡ್ ಸೂತ್ರಗಳೆಲ್ಲಾ ಹಾಲಿವುಡ್ ನ ಬ್ಲಾಕ್-ಬಸ್ಟರ್ ಹಿಟ್ ಗಳಿಗಾಗಿಯೇ ಇದ್ದ ಫಾರ್ಮುಲಾಗಳೆಂಬ ಸತ್ಯದಲ್ಲಿ ಸಂದೇಹವೇ ಇರಲಿಲ್ಲ. ಆದರೆ ನನ್ನ ಉದ್ದೇಶವು ಬೇರೆಯದೇ ಆಗಿತ್ತು. ಯಾವೊಬ್ಬ ನಿರ್ದೇಶಕನಿಗೂ ನನ್ನ ಜೀವನದ ಬಹುಮುಖ್ಯ ತಿರುವಾಗಿದ್ದ ಯೋನಿ ಛೇದನವನ್ನು ಮುಖ್ಯ ಥೀಮ್ ಆಗಿ ಪ್ರಸ್ತುತಪಡಿಸುವ ಉತ್ಸಾಹವೇ ಕಾಣಬರಲಿಲ್ಲ. ಬಹುಶಃ ಹಾಲಿವುಡ್ ಎಂಬ ಗ್ಲ್ಯಾಮರ್ ಫ್ಯಾಕ್ಟರಿಯಲ್ಲಿ ಎಫ್.ಜಿ.ಎಮ್ ಎಂಬ ನನ್ನ ಭಯಾನಕವಾದ ಕಥೆಗೆ ಜಾಗವೇ ಇರಲಿಲ್ಲ ಅಥವಾ ಸೂಪರ್-ಹಿಟ್ ಆಗಲು ಇದ್ದ ಫಾರ್ಮುಲಾಗಳಲ್ಲಿ ಎಫ್.ಜಿ.ಎಮ್ ನಂಥಾ ಆಫ್ರಿಕಾದ ಕರಾಳ ಸಂಪ್ರದಾಯಗಳು ಒಂದಾಗಿರಲಿಲ್ಲ. ಎಲ್ಲರಿಗೂ ನನ್ನ ಯಶಸ್ಸಿನ ಕಥೆಯೇ ಬೇಕಿತ್ತೇ ಹೊರತು, ನನ್ನ ಜೀವನವನ್ನು ಬುಡಮೇಲಾಗಿಸಿದ ಎಫ್.ಜಿ.ಎಮ್ ಬಗ್ಗೆ ಮಾತನಾಡಲು ಯಾರಿಗೂ ಆಸಕ್ತಿಯಿರಲಿಲ್ಲ. ಹೀಗಾಗಿ ಸಾಲುಸಾಲಾಗಿ ಬರುತ್ತಿದ್ದ ಆಫರ್ ಗಳ ಹೊರತಾಗಿಯೂ ನಾನು ಚಲನಚಿತ್ರವನ್ನು ನಿರ್ಮಿಸಲು ಸಿದ್ಧಳಾಗಿರಲಿಲ್ಲ ಎಂಬ ಸಂಗತಿಯು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.

ಚಿತ್ರರಂಗದ ಖ್ಯಾತನಾಮರಲ್ಲೊಬ್ಬರಾದ ಎಲ್ಟನ್ ಜಾನ್ ಕೂಡ ಇದೇ ವಿಷಯವನ್ನೆತ್ತಿಕೊಂಡು ಒಮ್ಮೆ ನನ್ನ ಬಳಿಗೆ ಬಂದಿದ್ದರು. ನನ್ನ ಆತ್ಮೀಯರೂ ಆಗಿದ್ದ ಅವರನ್ನು ನಂಬಿ, ಅವರ ಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ರಾಕೆಟ್ ಪ್ರೊಡಕ್ಷನ್ಸ್ ನೊಂದಿಗೆ ಒಂದು ಒಪ್ಪಂದವನ್ನೂ ಮಾಡಿಕೊಂಡಿದ್ದೆ. ಜಾನ್ ನನ್ನ ಜೊತೆ ಗಂಟೆಗಟ್ಟಲೆ ಕುಳಿತುಕೊಂಡು ನನ್ನ ವಿಚಾರಧಾರೆಗಳು ಚಲನಚಿತ್ರದಲ್ಲಿ ಮೂಡಿಬರುವಂತೆ ಚಿತ್ರಕಥೆಯನ್ನು ರಚಿಸುವುದರಲ್ಲಿ ತೊಡಗಿದ್ದರು ಕೂಡ. ಅವರ ಲಂಡನ್ನಿನ ಬಂಗಲೆಯಲ್ಲಿ ಚಿತ್ರಕಥೆಯನ್ನು ತಿದ್ದಿತೀಡಿ ರೂಪುಗೊಳಿಸುತ್ತಿದ್ದ, ಲೇಖಕರೊಂದಿಗೆ ನಡೆಯುತ್ತಿದ್ದ ಚರ್ಚೆಗಳಲ್ಲಿ ನನ್ನನ್ನೂ ಹಲವು ಬಾರಿ ಆಹ್ವಾನಿಸಿದ್ದರು. ಆದರೆ ಎಫ್.ಜಿ.ಎಮ್ ಎಂಬ ವಸ್ತು ಸಾಮಾಜಿಕವಾಗಿ ಮಡಿಮೈಲಿಗೆಯ ಸ್ಥಾನಮಾನವನ್ನು ಪಡೆದುಕೊಂಡಿದ್ದರಿಂದಲೋ ಅಥವಾ ನನ್ನ ಮತ್ತು ಲೇಖಕರ ವಿಚಾರಧಾರೆಗಳು ಒಂದೇ ದಿಕ್ಕಿನಲ್ಲಿ ಸಾಗದಿದ್ದ ಪರಿಣಾಮವೋ ಏನೋ… ಈ ಬಹುನಿರೀಕ್ಷಿತ ಪ್ರಾಜೆಕ್ಟ್ ನೆಲಕಚ್ಚಿತ್ತು.

ಇದಾದ ಕೆಲ ತಿಂಗಳುಗಳ ಬಳಿಕ ಜರ್ಮನ್ ನಿರ್ಮಾಪಕರಾದ ಪೀಟರ್ ಹರ್ಮನ್ ಮತ್ತು ನಿರ್ದೇಶಕರಾದ ಶೆರಿ ಹೋರ್ಮನ್ ತಾವಾಗಿಯೇ ನನ್ನ ಬಳಿ ಬಂದು ‘ಎಫ್.ಜಿ.ಎಮ್’ ಅನ್ನೇ ಪ್ರಧಾನ ವಿಷಯವನ್ನಾಗಿ ಬಳಸಿ, ಚಿತ್ರಕಥೆಯನ್ನು ಹೆಣೆದು ನನ್ನ ಕಥೆಯನ್ನು ಚಲನಚಿತ್ರವಾಗಿ ಮಾಡುತ್ತೇವೆಂದು ಮುಂದೆ ಬಂದಿದ್ದರು. ಮುಂದೆ ಚಿತ್ರಕಥೆಯನ್ನು ಅಂತಿಮಗೊಳಿಸಲೆಂದೇ ಶೆರಿ ಹಲವು ತಿಂಗಳುಗಳನ್ನು ಕಳೆಯಬೇಕಾಯಿತು. ಮುಂದೆ ನಡೆದಿದ್ದು ಇತಿಹಾಸ. ಎಲ್ಲರ ಶ್ರಮ, ಸಹಕಾರ ಮತ್ತು ಹಾರೈಕೆಯೊಂದಿಗೆ ಚಿತ್ರವು ಅದ್ದೂರಿಯಾಗಿ ಮೂಡಿಬಂದಿತ್ತು. ಇನ್ನೂ ವಿವರವಾಗಿ ಹೇಳಹೊರಟರೆ ಈ ಚಿತ್ರವು ನನ್ನ ಹೃದಯಕ್ಕೆ ಅದೆಷ್ಟು ಹತ್ತಿರವಾಯಿತೆಂದರೆ ನನ್ನ ಜೀವನದ ಭಾಗವೇ ಎಂಬಂತಾಗಿ ನನ್ನ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡು ಬಿಟ್ಟಿತು.

ಚಿತ್ರೀಕರಣ ಮತ್ತು ತತ್ಸಂಬಂಧಿ ಚಟುವಟಿಕೆಗಳು ಮುಗಿದ ನಂತರ ಶುರುವಾಗಿದ್ದು ಪ್ರಮೋಷನಲ್ ಟೂರ್ ಗಳು. ಚಿತ್ರದ ಪ್ರಚಾರವನ್ನು ಮಾಡುತ್ತಾ ಕಾಲಿಗೆ ಚಕ್ರವನ್ನು ಕಟ್ಟಿಕೊಂಡಂತೆ ಹಲವು ದೇಶಗಳಿಗೆ ಪ್ರವಾಸವನ್ನು ಮಾಡಿ ಬಂದಿದ್ದೆ. ಯಾವ ಸಂದರ್ಶನವನ್ನೂ ನಾನು ಎಫ್.ಜಿ.ಎಮ್ ನ ವಿಚಾರವನ್ನು ಪ್ರಸ್ತಾಪಿಸದೆ ಮುಗಿಸುತ್ತಿರಲಿಲ್ಲ. ಪ್ರತಿಯೊಂದು ಟಾಕ್ ಶೋಗಳು ನನ್ನ ಲೈಂಗಿಕ ಜೀವನದ ಬಗ್ಗೆ ಕೇಳುತ್ತಾ ಹೋದಾಗ ಯಾವುದೇ ಮುಚ್ಚುಮರೆ ಅಥವಾ ಮುಜುಗರಗಳಿಲ್ಲದೆ ಯೋನಿ ಛೇದನಾ ಕ್ರಿಯೆಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದೆ. ಚಲನಚಿತ್ರವು ಒಂದು ಪ್ರಭಾವಿ ಮಾಧ್ಯಮವಾಗಿದ್ದುದರಿಂದ ಎಫ್.ಜಿ.ಎಮ್ ವಿರುದ್ಧದ ನನ್ನ ಮಹಾಯುದ್ಧವನ್ನು ಇನ್ನಷ್ಟು ಬಲಶಾಲಿಗೊಳಿಸುವ ಯಾವುದೇ ಅವಕಾಶಗಳನ್ನು ಬಿಟ್ಟುಕೊಡಲೂ ನಾನು ತಯಾರಿರಲಿಲ್ಲ. ಹೀಗೆ ಮುಗಿಯುವ ಸುಳಿವೇ ಇಲ್ಲದೆ ನಡೆಯುತ್ತಿದ್ದ ತರಹೇವಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮರಳಿ ಹೋಟೇಲಿನ ಕೋಣೆಗೆ ಬರುವಷ್ಟರಲ್ಲಿ ದೇಹ, ಮನಸ್ಸು ಎರಡೂ ದಣಿದಿರುತ್ತಿದ್ದವು. ಎಫ್.ಜಿ.ಎಮ್ ವಿರುದ್ಧ ಕತ್ತಿ ಮಸೆದು ಹೋರಾಡುವ ಛಲ ಒಂದು ಕಡೆಯಾದರೆ ನನ್ನ ಅಸ್ತಿತ್ವವನ್ನೇ ಅಲುಗಾಡಿಸಿ, ಜೀವನವನ್ನು ಬುಡಮೇಲಾಗಿಸಿದ ಎಫ್.ಜಿ.ಎಮ್ ಜೀವನದುದ್ದಕ್ಕೂ ಕೊಟ್ಟ ನೋವು ಮತ್ತು ನನ್ನ ತೀರಾ ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಾಗಿ ಬಂದ ಪರಿಸ್ಥಿತಿ ಇನ್ನೊಂದು ಕಡೆ. ಇವೆರಡರ ನಡುವೆ ನಜ್ಜುಗುಜ್ಜಾದ ನನಗೆ ರೋಸಿ ಹೋಗಿ, ಎಲ್ಲಾದರೂ ಓಡಿ ಹೋಗುವ ಮತ್ತು ಅನಾಮಿಕಳಂತೆ ಜೀವನವೊಂದನ್ನು ಹೊಸದಾಗಿ ಆರಂಭಿಸುವ ಯೋಚನೆಗಳು ಆಗಾಗ ಬರುತ್ತಿದ್ದವು.

ಆದರೆ ಚಿತ್ರವು ತೆರೆಗೆ ಬಂದ ಬಳಿಕ ವಿಶ್ವದ ಮೂಲೆಮೂಲೆಗಳಿಂದ ಹರಿದು ಬರುತ್ತಿದ್ದ ಲಕ್ಷಾಂತರ ಇ-ಮೇಲ್ ಗಳು ಮತ್ತು ಪತ್ರಗಳು ನನ್ನನ್ನು ಮತ್ತೆ ಕೆಲಸಕ್ಕೆ ಹಚ್ಚುವುದರಲ್ಲಿ ಯಶಸ್ವಿಯಾಗಿದ್ದವು. ಪ್ರಪಂಚದಾದ್ಯಂತ ಜನರು ನಮ್ಮ ಚಿತ್ರವನ್ನು ನೋಡಿ ಮೆಚ್ಚಿದರಲ್ಲದೆ ನಮ್ಮ ಕಾರ್ಯಗಳನ್ನು ಅಭಿನಂದಿಸಿ, ಹೀಗೆಯೇ ನಿಮ್ಮ ಸೇವೆಯು ಮುಂದುವರೆಯುತ್ತಿರಲಿ ಎಂದು ಹಾರೈಸಿದ್ದರು. ಇನ್ನೇನು ಬೇಕಿತ್ತು ನನಗೆ?
ಚಲನಚಿತ್ರದ ಪ್ರೀಮಿಯರ್ ಅನ್ನು ಇಥಿಯೋಪಿಯಾದ ರಾಜಧಾನಿಯಾಗಿದ್ದ ಅಡೀಸ್ ಅಬಾಬಾದಲ್ಲಿ ಆಯೋಜಿಸಲಾಗಿತ್ತು. ನನ್ನ ಜೀವನದಲ್ಲಿ ಹಲವು ದೇಶಗಳನ್ನು ನಾನು ಸುತ್ತಿ ಬಂದಿದ್ದರೂ ಈ ಒಂದು ಪ್ರಯಾಣವು ಮೈಲುಗಲ್ಲಿನಂತೆ ಸದಾ ನೆನಪಿನಲ್ಲುಳಿಯುವಂಥದ್ದು. ಅಮ್ಮ, ಸಹೋದರರು ಹಾಗೂ ಅವರ ಮಕ್ಕಳು… ಹೀಗೆ ಕುಟುಂಬದ ಬಹುತೇಕ ಸದಸ್ಯರೂ ನನ್ನ ಸಂತಸದಲ್ಲಿ ಭಾಗಿಯಾಗಲು ಸೊಮಾಲಿಯಾದಿಂದ ಬಂದಿದ್ದರು. ಹಲವು ತಿಂಗಳುಗಳ ನಂತರ ಅಮ್ಮನನ್ನು ನಾನು ಭೇಟಿಯಾಗುತ್ತಿದ್ದೆ. ಹೀಗಾಗಿ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ, ಉಲ್ಲಾಸ, ಉತ್ಸಾಹಗಳಿದ್ದವು. ಬಾಲ್ಯದಲ್ಲಿ ಏನೇ ಕಹಿಘಟನೆಗಳು ನಡೆದುಹೋಗಿದ್ದರೂ ಆಕೆ ನನ್ನೆದುರು ಬಂದು ನಿಂತಾಗ ನನ್ನ ಹೃದಯವು ಕರಗಿಹೋಗುತ್ತದೆ. ಈ ಬಾರಿಯೂ ಹಾಗೆಯೇ ಆಯಿತು. ಶುಭ್ರವಾದ ಉದ್ದನೆಯ ಹಸಿರು ಬಣ್ಣದ ಮೇಲುಡುಪು ಮತ್ತು ಚರ್ಮದ ಚಪ್ಪಲಿಗಳನ್ನು ಧರಿಸಿ ನಮ್ಮ ಚಿತ್ರದ ನಾಯಕಿಯರಲ್ಲಿ ಒಬ್ಬಳೇನೋ ಎಂಬಂಥಾ ಆತ್ಮವಿಶ್ವಾಸದ ನಗೆಯನ್ನು ಬೀರುತ್ತಾ ಆಕೆ ನನ್ನೆದುರಿಗೆ ನಿಂತಾಗ ನನ್ನ ಕಣ್ಣಾಲಿಗಳು ತೇವಗೊಂಡು ಬಿಗಿಯಪ್ಪುಗೆಯಲ್ಲಿ ಅಂತ್ಯವಾಗಿತ್ತು.

ಅಮ್ಮ ಕೊಂಚವೂ ಬದಲಾಗಿರಲಿಲ್ಲ. ಈಗಲೂ ಮೊಮ್ಮಕ್ಕಳನ್ನು ಆಡಿಸುತ್ತಾ, ಮೇಕೆಗಳನ್ನು ಕಾಯುತ್ತಾ, ರಣಬಿಸಿಲಿನ ಮರಳುಗಾಡಿನಲ್ಲಿ ಮೈಲುಗಟ್ಟಲೆ ದಿನಗಟ್ಟಲೆ ನಡೆಯುತ್ತಾ ಬದುಕನ್ನು ಸವೆಸುತ್ತಿರುವ ಸರಳ ಸೊಮಾಲಿಯನ್ ಮಹಿಳೆ ಆಕೆ. ಆದರೆ ಇಥಿಯೋಪಿಯನ್ ಮಾಧ್ಯಮ ಬಂಧುಗಳಿಗಾಗಿ ಮೀಸಲಿಟ್ಟಿದ್ದ ಫೋಟೋ ಸೆಷನ್ ಗಳಲ್ಲಿ ನಮ್ಮೊಂದಿಗೆ ಪಾಲ್ಗೊಂಡ ಅಮ್ಮನನ್ನು ನೋಡಿದಾಗ ಅಚ್ಚರಿಯಾಗುವ ಸರದಿಯು ನನ್ನದಾಗಿತ್ತು. ತನ್ನ ಜೀವಮಾನವಿಡೀ ಕ್ಯಾಮೆರಾಗಳ ಕಣ್ಣುಕುಕ್ಕುವ ಬೆಳಕಿನಲ್ಲೇ ಇದ್ದಳೇನೋ ಅನ್ನುವಂಥಾ ಆತ್ಮವಿಶ್ವಾಸದಲ್ಲಿ ಮಾಧ್ಯಮದವರ ಅಸಂಖ್ಯಾತ ಕ್ಯಾಮೆರಾಗಳಿಗೆ ಖುಷಿಯಿಂದ ಪೋಸ್ ಕೊಡುತ್ತಿದ್ದಳು ನನ್ನಮ್ಮ. ಅವಳ ಕಣ್ಣುಗಳಲ್ಲಿ ಅದೆಂಥದ್ದೋ ಒಂದು ಹೊಳಪು, ಶಬ್ದಗಳಲ್ಲಿ ಹಿಡಿದಿಡಲಾಗದ ಒಂದು ಆಕರ್ಷಣೆ. ಆದರೆ ಅಚ್ಚರಿಗಳು ಮುಂದೆಯೂ ಬರಲಿವೆಯೆಂಬುದು ನನಗಿನ್ನೂ ತಿಳಿದಿರಲಿಲ್ಲ.


ಸಪ್ನಾ, ಅಂಕಿತ, ನವಕರ್ನಾಟಕ ಸೇರಿದಂತೆ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಸಫಾ ಕೃತಿಯು ಲಭ್ಯವಿದೆ… ಈ ಕೂಡಲೇ ಖರೀದಿಸುವುದಾದರೆ ಋತುಮಾನ ಮತ್ತು ನವಕರ್ನಾಟಕ ಆನ್ಲೈನ್ ತಾಣಗಳಲ್ಲಿ ಖರೀದಿಸಬಹುದು. ಋತುಮಾನ ಆಪ್ ಮೂಲಕ ಖರೀದಿಸಿದರೆ ಸಿಗುವ 15% ರಿಯಾಯಿತಿ ಓದುಗರಿಗೊಂದು ಬೋನಸ್. ಇನ್ನು ಇತರೆ ಆನ್ಲೈನ್ ತಾಣಗಳಲ್ಲಿ ಕೃತಿಯು ಶೀಘ್ರದಲ್ಲೇ ಲಭ್ಯವಾಗಲಿದೆ! ಆಸಕ್ತರಿಗಾಗಿ

ನವಕರ್ನಾಟಕ ಆನ್ಲೈನ್ ಲಿಂಕ್ ಇಲ್ಲಿದೆ

ಋತುಮಾನ ಲಿಂಕ್: https://store.ruthumana.com/product/safa/


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gerald Carlo
Gerald Carlo
3 years ago

ಕೆಲವು ವರ್ಷಗಳ ಹಿಂದೆ ಡಾ. ಜಗದೀಶ್ ಕೊಪ್ಪರವರು ಅನುವಾದಿಸಿದ್ದ, ವಾರಿಸ್ ಡೀರಿಯ ಆತ್ಮಕತೆ “ಮರುಭೂಮಿಯ ಹೂವು” ಹಾಸನದಲ್ಲೂ ಬಿಡುಗಡೆಯಾಗಿತ್ತು. ಜೊತೆಯಲ್ಲಿ “Desert Flower” ಚಲನಚಿತ್ರವನ್ನೂ ತೋರಿಸಿದ್ದರು. ಇರು ಅದೇ ಕತೆಯಂತೆ ಭಾಸವಾಗುತ್ತಿದೆ. ಸಫಾ ಯಾರು?

1
0
Would love your thoughts, please comment.x
()
x