Facebook

ಪ್ರಥಮ ಆಂಗ್ಲೋ ಇಂಡಿಯನ್ ಕವಯತ್ರಿ-ತೋರು ದತ್ತ: ನಾಗರೇಖಾ ಗಾಂವಕರ

ಕನ್ನಡದ ಬರಹಗಳನ್ನು ಹಂಚಿ ಹರಡಿ

ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇಹಲೋಕ ತ್ಯಜಿಸಿದ ತೋರು ದತ್ತ ಅವಿಸ್ಮರಣೀಯವೆನಿಸುವ ಕೃತಿಗಳನ್ನು ರಚಿಸಿ ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಒತ್ತಿದ್ದಾಳೆ. ರಾಮ ಬಾಗನ್ ದತ್ತ ಕುಟುಂಬದಲ್ಲಿ 1856 ಮಾರ್ಚ 4ರಂದು ಜನಿಸಿದ ತೋರು ದತ್ತರ ತಂದೆ ಗೋವಿನ್ ಚಂದರ ದತ್ತ. 1862ರಲ್ಲಿ ಕುಟುಂಬ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿತು. ತೋರುವಿನ ಸಹೋದರ ಅಬ್ಜು,ಅಕ್ಕ ಅರು ಕೂಡಾ ಅತಿ ಚಿಕ್ಕ ವಯಸ್ಸಿನಲ್ಲೇ ಮರಣಿಸಿದರು. ಆ ಮರಣ ತೋರುವಿನ ಮೇಲೆ ಬೀರಿದ ಪರಿಣಾಮ, ನೆನಪುಗಳು ಹೊಂಚು ಹಾಕುವುದನ್ನು ಅವರ ಕೆಸುರಿನಾ ಟ್ರೀ ಕವನದಲ್ಲಿ ತೋರು ಬಿಂಬಿಸಿರುವುದು ಹೀಗೆ.

ಇಂಗ್ಲೀಷ ಸಾಹಿತ್ಯದಲ್ಲಿ ಅಮೋಘ ಕವನವೆಂದೆ ಬಣ್ಣಿಸಲ್ಪಟ್ಟ ಕವನ ಅವರ “ಕ್ಯಾಸುರಿನಾ ಟ್ರೀ”. ಅಭೂತಪೂರ್ವವಾದ ಕ್ಯಾಸುರಿನಾ ಮರ ವರ್ಣನೆ. ಕವನ ಗಿಡದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತದೆ. ಹೊರ ನೋಟಕ್ಕೆ ಕವನ ಮರವನ್ನು ಬಣ್ಣಿಸುತ್ತಿದ್ದರೂ ಗೂಡಾರ್ಥದಲ್ಲಿ ತೋರು ತನ್ನ ಭೂತದ ಬದುಕನ್ನು ವರ್ತಮಾನದ ಬದುಕಿನೊಂದಿಗೆ ಬೆಸೆಯಲು ಗಿಡ ಒಂದು ಸಾಧನವಷ್ಟೆ. ಗಿಡದ ಸುತ್ತ ಬಳ್ಳಿಯೊಂದು ಹೆಬ್ಬಾವಿನಂತೆ ಸುತ್ತುವರೆದಿದೆ. ಬಳ್ಳಿ ಗಿಡದ ಬಡ್ಡೆಯ ಸುತ್ತಲೂ ಹಬ್ಬಿಸಿದ ಗುರುತು ಅಳಿಸಲಾಗದಂತಿದೆ. ಆದಾಗ್ಯೂ ಬಳ್ಳಿಯ ಆಕ್ರಮಣಕ್ಕೂ ಕಮರದೆ ಬೆಳೆದ ಗಿಡ ಬಳ್ಳಿಯ ಕೆಂಪು ಕ್ರಿಮ್ ಸನ್ ಹೂಗಳನ್ನು ತಲೆ ತುಂಬಾ ಸ್ಕಾರ್ಪಿನಂತೆ ಧರಿಸಿದೆ. ಇನ್ನು ರಾತ್ರೀ ಇಡಿ ಬೆಳಗು ಹರಿಯುವವರೆಗೂ ಉದ್ಯಾನವನದ ತುಂಬಾ ಕೋಗಿಲೆಯ ಗಾನದಿಂದ ಪ್ರತಿಧ್ವನಿಸುತ್ತಿವೆ.ಅದೇ ಚಳಿಗಾಲದಲ್ಲಿ ಬೂದು ಬಣ್ಣದ ಬಬೂನ್‍ಗಳು ಮರಿಗಳೊಂದಿಗೆ ಚೆನ್ನಾಟವಾಡುತ್ತಿವೆ. ಹೊರ ನೋಟಕ್ಕೆ ಮರದ ಸುಂದರ ಚಿತ್ರಣದಂತೆ ಕವನ ಕಂಡುಬರುತ್ತದೆ.

ಆದರೆ ತೋರು ದತ್ತ ಹೇಳುತ್ತಾಳೆ -ಬರಿಯ ಕ್ಯಾಸುರಿನಾ ಮರದ ಘನಚಹರೆಯಲ್ಲ ಆಕೆಗೆ ಇಷ್ಟವಾದದ್ದು.ಆದರೆ ತನ್ನ ಒಡಹುಟ್ಟಿದವರೊಂದಿಗಿನ ಸಾಂಗತ್ಯದ ಬಾಲ್ಯದ ಮಧುರ ನೆನಪುಗಳು ಆ ಮರದೊಂದಿಗೆ ಬೆಸೆದುಕೊಂಡಿವೆ. ಆಕೆ ಪ್ರಾನ್ಸನಲ್ಲಿರಲಿ ಇಲ್ಲವೇ ಇಟಲಿಯಲ್ಲಿರಲಿ ಆಕೆ ಆ ಮರದೊಂದಿಗಿನ ಮಧುರ ನೆನಪುಗಳು ಆಕೆಗೆ ನೆಮ್ಮದಿ ಹಾಗೂ ಸಮಾಧಾನವನ್ನು ನೀಡುತ್ತವೆ. ತೋರು ಒಡಹುಟ್ಟಿದವರ ಸಾವಿಂದ ವಿಚಲಿತಗೊಂಡ ಮನಸ್ಸನ್ನು ಹೃದಯದ ನೋವನ್ನು ಹೀಗೆ ನಿಸರ್ಗದ ಒಂದು ಸಂಕೇತದೊಂದಿಗೆ ವ್ಯಕ್ತಗೊಳಿಸುತ್ತಾಳೆ. ಸಾವಿನ ದಾರಿಯಲ್ಲಿ ಅವರ ಹಿಂಬಾಲಿಸುತ್ತಿದ್ದಾಳೆ. ಅವರಿಗಾಗಿ ಆಕೆ ಮರವನ್ನು ಅಮರಗೊಳಿಸುತ್ತಾಳೆ ತನ್ನ ಕವನದ ಮೂಲಕ.

ತೋರು ದತ್ತ ಆಂಗ್ಲೋ ಇಂಡಿಯನ್ ಕವಿಗಳ ತಾಯಿ ಎಂದೆ ಪ್ರಸಿದ್ದಳು. ಇಂಗ್ಲೆಂಡಿನಲ್ಲಿ ಉನ್ನತ ಪ್ರೆಂಚ ಶಿಕ್ಷಣವನ್ನು ಮುಂದುವರೆಸಿದ ತೋರು ಬಂಗಾಲಿ, ಇಂಗ್ಲೀಷ, ಪ್ರೇಂಚ, ಹಾಗೂ ಸಂಸ್ರ್ಖತದಲ್ಲೂ ಪಾಂಡಿತ್ಯವನ್ನು ಗಳಿಸಿದ್ದಳು.ಆಕೆಯ ಎರಡು ಅಪೂರ್ಣ ಕಾದಂಬರಿಗಳು ಇಂಗ್ಲೀಷನಲ್ಲಿ ಬರೆದ “ದಿ ಯಂಗ ಸ್ಪಾನಿಷ್ ಮೇಡನ್”ಹಾಗೂ ಭಾರತೀಯನೊಬ್ಬನ ಪ್ರಥಮ ಪ್ರೇಂಚ ಕೃತಿಯೆಂದೆ ಪ್ರಸಿದ್ಧವಾದ ‘ಲೆ ಜರ್ನಲ್ ಡಿ ಮಡೆಮೊಯ್ಸೆಲ್ಲೆ ಡಿ’ಎವರ್ಸ” ಆಕೆಯ ಭಾಷಾ ಪ್ರಾವೀಣ್ಯಕ್ಕೆ ಪಾಂಡಿತ್ಯಕ್ಕೆ ಕುರುಹಾಗಿ ನಿಲ್ಲುತ್ತವೆ.ಭಾಷೆ ಹೊರತು ಪಡಿಸಿ ಪಾತ್ರಗಳು ಭಾರತೀಯ ತೊಗಲು ಧರಿಸಿರುವುದು ಈ ಕಾದಂಬರಿಗಳ ವಿಶೇಷವಂತೆ.

ಪೆಟ್ರಾಕನ್ ಸಾನೆಟ್ ಶೈಲಿಯಲ್ಲಿ ಬರೆದ ಆಕೆ ಇನ್ನೊಂದು ಬಹು ಜನಪ್ರಿಯ ಕವನ “ದಿ ಲೋಟಸ್”. ಶಾಲಾ ದಿನಗಳಲ್ಲಿ ಕಲಿತ ಕವನ. ಹೂವುಗಳಲ್ಲಿ ಶ್ರೇಷ್ಟ,ಸುಂದರ ಹೂವಿಗೆ ಹೂಗಳ ರಾಣಿ ಪಟ್ಟ ನೀಡಲು ಪ್ರೇಮ ಹುಡುಕಾಟದಲ್ಲಿದೆ. ಅದು “ದಿ ಅನ್ ಡಿಸ್ಪುಟೆಡ್ ಕ್ವೀನ್” ಆಗಿರಬೇಕು. ಆದರೆ ಇದು ಸುಲಭದ ಕಾರ್ಯವಲ್ಲ. ಸುಂದರ ಹೂವುಗಳಿಲ್ಲಿ ಲಿಲ್ಲಿ ಮತ್ತು ರೋಸ್‍ಗಳಲ್ಲಿ ಯಾವುದು ಹೆಚ್ಚು ಸುಂದರ ಎಂದು ತಿರ್ಮಾನಿಸುವುದು ವರ್ಷಗಳಿಂದ ಸಾಧ್ಯವಾಗದೇ ಇದ್ದ ವಿಚಾರ. ಕೆಂಪು ರೋಸ್ ಸೌಂದರ್ಯಕ್ಕೆ ಸಂಕೇತವಾದರೆ, ಬಿಳಿಯ ಲಿಲ್ಲಿ ಮುಗ್ದತೆ ಹಾಗೂ ಸರಳತೆಗೆ ಸಂಕೇತ. ಪ್ರೇಮ ಅದಕ್ಕಾಗಿ ಪ್ಲೋರಾದೇವತೆಯ[ ಸಸ್ಯದೇವತೆ] ಬಳಿ ಬರುತ್ತಾಳೆ.”ದಿ ಕ್ವೀನ್ಲಿಯಸ್ಟ ಫ್ಲಾವರ್ ದೆಟ್ ಬ್ಲೂಮ್ಸ್”ಆಕೆ ರೋಸ್‍ನಂತೆ ಕೆಂಪಗೆ ಲಿಲ್ಲಿಯಂತೆ ಬೆಳ್ಳಗೆ ಇರುವ ಲೋಟಸ್‍ನ್ನು ಆರಿಸುತ್ತಾಳೆ.
ಹೀಗೆ ನಿಸರ್ಗದ ಸಂಕೇತಗಳನ್ನು ಬದುಕಿನ ಹಾಡಿನೊಂದಿಗೆ ಬೆಸೆದು ಕವನ ರಚಿಸಿದ ತೋರು ದತ್ತಳ ಕಾವ್ಯಗಳು ಆಪ್ತ ಎನಿಸಿಕೊಳ್ಳುವುದು ಅವರ ಮೂಲ ಭಾರತೀಯ ಪ್ರಜ್ಞೆಗೆ ಸಾಕ್ಷಿಯಾಗಿ ನಿಲ್ಲುವ ಸಾವಿತ್ರಿ,ಜಗೋದ್ಯ ಉಮಾ ಇತ್ಯಾದಿ ಕವನಗಳಲ್ಲಿನ ಹಿಂದೂ ಪಾತ್ರಗಳ ಸಜೀವ ಚಿತ್ರಣಗಳ ಮೂಲಕ.

-ನಾಗರೇಖಾ ಗಾಂವಕರಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಪ್ರಥಮ ಆಂಗ್ಲೋ ಇಂಡಿಯನ್ ಕವಯತ್ರಿ-ತೋರು ದತ್ತ: ನಾಗರೇಖಾ ಗಾಂವಕರ”

  1. ಶ್ರೀನಿವಾಸ says:

    ಲೇಖನ ಬಹಳ ಉಪಯುಕ್ತ ವೇನಿಸಿತು. ಭಾರತೀಯ ಬರಹ ಗಾರ್ತಿ ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಬರೆದು ಪ್ರಸಿದ್ಧ ವಾಗಿರುವುದನ್ನು ಪರಿಚಯಿಸಿದ ನಾಗರೇಖಾ ಅವರಿಗೆ ಅಭಿನಂದನೆಗಳು. ಇಂತಹ ಲೇಖನಗಳನ್ನು ಕೊಟ್ಟ ಪಂಜುವಿಗೂ ಅಭಿನಂದನೆಗಳು.

    ಶ್ರೀನಿವಾಸ

Leave a Reply