ಕವಡಿ ಈರಯ್ಯ..: ತಿರುಪತಿ ಭಂಗಿ

ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು.

“ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ ಅಪ್ಪಳಿಸದ ಅಲೆಗಳಂತೆ, ಅವತ್ತ ಒಂದಿನ ಮಾದ್ಯಮದವರು ಕವಡಿ ಈರಯ್ಯನ ಸುತ್ತಮುತ್ತ ಮುತ್ತಿಕೊಂಡು ಅಂವನ ಜೀವಾ ಜಾಲಾಡಸಾಕತ್ತಿದ್ರು. ಈ ಮಾದ್ಯಮದಾವ್ರ “ಒಂದ ಇದ್ದದ್ದ ಹನ್ನೊಂದ ಮಾಡ್ತಾರ” ಅನ್ನುದ ಮೊದಲ ಗೊತ್ತಿದ್ದ, ಕವಡಿ ಈರಯ್ಯ ಅವತ್ತ ಅವರ ಜೋಡಿ ಭಾಳ ಶಾಂತ ಚಿತ್ತದಿಂದ ವರ್ತಿಸಿದ್ದ. ಮಾದ್ಯಮದವರು ಪ್ರಶ್ನೆಗಳ ಮ್ಯಾಲ ಪ್ರಶ್ನೆ ಹಾಕಿ, ಕವಡಿ ಈರಯ್ಯನ ದಾರಿ ತಪ್ಪಸಾಕ ಗುದ್ದಾಡ್ತಿದ್ರು. ಬೆರಕಿ ಕುಳಾ, ಈರಯ್ಯ ಅವರಿಗೆ ಬಗ್ಗಲಿಲ್ಲ,ಕುಗ್ಗಲಿಲ್ಲ.

“ನನ್ನ ಕೈಯಾಗ ಏನ್ ಐತ್ರೀ.. ಆ ಮಾಯಕಾರ ಹೆಂಗ ಹೇಳ್ತಾನೋ ಹಂಗ ಮಾಡ್ತಿನಿ..” ದೇವ್ರಿಗೂ ತನಗು ಮದ್ಯ ಸಣ್ಣದೊಂದು ಸಂಬಂಧ ಐತಿ ಅನ್ನುವಂತೆ ಮಿಡಿಯಾದವರಿಗೆ ಕವಡಿ ಈರಯ್ಯ ಕಿಸಿಕಿಸಿ ನಕ್ಕೊಂತ ಹೇಳತಿದ್ದ.
“ಅಲ್ರೀ ನೀವ ಮಾಟ ಮಂತ್ರ ಮಾಡ್ತಿರಂತ ಹೌದಾ?” ಎಂದು ಒಬ್ಬ ಮಾದ್ಯಮದ ಹುಡುಗ ಕೇಳಿದ.

“ಖಂಡಿತ ನಾ ಅಂತಾ ಕೆಟ್ಟ ಕೆಲಸಾ ಮಾಡಂವ ಅಲ್ಲ, ನಾ ಕೆಟ್ಟ ಕೆಲಸಾ ಮಾಡಿದ್ರ, ಈ ಜನರೆಲ್ಲ ಡಾಕ್ಟರ್‍ನ ಬಿಟ್ಟು, ತಾವ ನಂಬಿದ ದೇವ್ರನ ಬಿಟ್ಟು, ನನ್ನ ಹಂತ್ಯಾಕ ಬರ್ತಿದ್ರಾ? ನೀವ ಹೇಳ್ರೀ?” ಎಂದು ದೇವರಗಿಂತಾ ನಾ ಯಾವುದ್ರಾಗೂ ಕಮ್ಮಿ ಇಲ್ಲ ಅನ್ನುವ ರೀತಿಯಲ್ಲಿ ಜಂಬಕೊಚ್ಚಿಕೊಂಡು ಉತ್ತರಿಸಿದ್ದ.ಕೆಲವು ಊರ ಜನರ್ನ, ಕವಡಿ ಈರಯ್ಯನ ಹಂತ್ಯಾಕ ಬಂದು ಹ್ವಾದವ್ರನ್ನ, ಮಾದ್ಯಮದವರು “ಕವಡಿ ಈರಯ್ಯ ನಿಂದ ನಿಮಗ ಹೆಂಗ ಒಳ್ಳೆದ ಅನಿಸೇತಿ” ಅಂತ ಪ್ರಶ್ನೆಗಳನ್ನು ಕೇಳಿದರು.
“ನೋಡ್ರೀ ಸಾಹೇಬ್ರ.. ಕವಡಿ ಈರಯ್ಯ ನಮಗ ಯಾವದರಾ ತೊಂದರಿಗಿಂದ್ರಿ ಇದ್ದರ ಅದನ್ನ ಹೋಳ ಮಾಡ್ತಾನ ರೀ.. ಅಂತಾ ಶಕ್ತಿ ದೇವ್ರ ಅಂವಗ ಕೊಟ್ಟಾನ” ಅಂತ ಹೇಳುತ್ತ ಹನಿಮ್ಯಾಲ ಬಂದ ಬೆವರನ್ನು ವರಿಸಿಕೊಂಡ.
ಮತ್ತೊಬ್ಬ “ಕವಡಿ ಈರಯ್ಯ ನಮ್ಮ ಪಾಲಿನ ದೇವ್ರರೀ” ಎಂದು ಹೇಳಿದ. ಆಗ ಈರಯ್ಯ ತನ್ನ ತುಟಿ ಅಂಚಿನಲ್ಲಿಯೇ ನಗತಿದ್ದ.

ಅದ್ಯಾಕೋ ಏನೋ ಟಿ.ವಿ ಯವರು ಕವಡಿ ಈರಯ್ಯನ ಸಂದರ್ಶನ ಮಾಡಿಕೊಂಡು ಹ್ವಾದ್ರೂ ಖರೆ, ಆದ್ರ ಟಿ.ವಿ ಒಳಗೆ ಆ ಸಂದರ್ಶನಾನ ಹಾಕಲಿಲ್ಲ. ಪತ್ರಿಕೆಯವರು ಉಪಯೋಗಕ್ಕ ಬಾರದ ಸಣ್ಣದೊಂದು ಸುದ್ದಿಯಷ್ಟೇ ಮಾಡಿದ್ದರು.

“ಆ ಕವಡೆಪ್ಪಾ.. ಸಾಮನ್ಯದ ಮನಶ್ಯಾ ಅಲ್ಲ.. ಟಿ.ವಿ ಅವರಿಗೆ ರೊಕ್ಕಾ ವಗದ ಅವರ ಬಾಯನ ಬಂದ ಮಾಡ್ಯಾನ ನೋಡ ಹಲಕಟ್ಟ” ಎಂದು ಈರಯ್ಯ ಮಾಡುವ ಕೆಲಸಾ ಕುರಿತು ಕಿಟ್ಟಪ್ಪ ಕುಂತ ನಿಂತಲ್ಲಿ ಮಾತಾಡ್ತಿದ್ದ. ಕಿಟ್ಟಪ್ಪ ವಡಕ ಬಾಯಿ ಮನಷ್ಯಾ ಅಂತ ಊರ ಮಂದಿನ ನಂಬಿತ್ತು. ಹಿಂಗಾಗಿ ಅವ್ನ ಬಗ್ಗೆ , ಅಂವನ ಆಡು ಮಾತಿನ ಬಗ್ಗೆ, ಯಾರೂ ತಲಿ ಕೆಡಸ್ಕೊತಿದ್ದಿಲ್ಲ. ಈರಯ್ಯನ ಕಂಡರೆ ನಿಗಿನಿಗಿ ಉರಿಂಯಾಂವ ಅಂದ್ರ ಕಿಟ್ಟಪ್ಪ ಒಬ್ನ. ಅದಕೊಂದ ಕಾರಣಾನೂ ಇತ್ತು.

ಈರಯ್ಯ ಕಿಟ್ಟಪ್ಪ ಇಬ್ಬರೂ ದೋಸ್ತರು. ಕಿಟ್ಟಪ್ಪ ಅರೆಬುದ್ದಿ ಮನಷ್ಯಾ. ವಡಕ ಬಾಯಿ ಅವಂದು. ಈರಯ್ಯ ಗುಮ್ಮನ ಗುಸಕ್ ಬುದ್ದಿಯಂವ. ಕಿಟ್ಟಪ್ಪ ನೂರ ಮಾತಾಡಿದ್ರ, ಈರಯ್ಯ ಬರೀ ಆರ ಮಾತ ಮಾತಾಡ್ತಿದ್ದ. ಹಿಂಗಿದ್ದು ಇವರಿಬ್ರೂ ಭಾರಿ ದೋಸ್ತರು.

ಧಾರ್ವಾಡಕ್ಕ ಬಿ.ಎಸ್ಸೀ. ಡಿಗ್ರಿ ಮಾಡಾಕ ಇಬ್ಬರು ಹೋಗಿದ್ದಾಗ, ಕಿಟ್ಟಪ್ಪ ಒಂದ ಹುಡಗಿ ಹಿಂದ ಬಿದ್ದಿದ್ದ. ಅದನ ಅಂವ ಪ್ರೀತಿ-ಪ್ರೇಮ ಎಂದು ಈರಯ್ಯನ ಮುಂದ ಹೇಳಕೋತ.. ಮತ್ತ ಸಿಕ್ಕಸಿಕ್ಕವರ ಮುಂದೂ ಡಂಗರಾ ಸಾರಿದಂಗ ಹೇಳ್ಕೋತ ನಡದಿದ್ದ. ಈರಯ್ಯಗೆ ಅದ್ಯಾಕೋ ಏನೋ ಮಂತ್ರ- ತಂತ್ರದ ವಿದ್ಯಾ ಮ್ಯಾಲ ಭಾಳ ಲಕ್ಷ ಹೋಗಿತ್ತು. ಕಿಟ್ಟಪ್ಪನ ದಾರಿ ಪ್ರೀತಿ-ಪ್ರೇಮದ ಹಿಂದ, ಈರಯ್ಯನ ದಾರಿ ಮಂತ್ರ-ತಂತ್ರದಿಂದ ಹಿಂದ ಸಾಗಿ ಸಾಗಿ ಅವರು ತಮ್ಮ ಓದನ್ನೇ ಪಕ್ಕಕ್ಕೆ ಸರಸಿದ್ರು.

ಈರಯ್ಯ ಮಂತ್ರ ತಂತ್ರದ ಪುಸ್ತಕ, ಗ್ರಂಥಾಲಯ ಹೊಕ್ಕು, ತಿಳಿದುಕೊಂಡ, ಮತ್ತೆ ಅದಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳ ಪರಿಚಯ ಮಾಡ್ಕೊಂಡು, ಅದರತ್ತ ಚಿತ್ತಶಕ್ತಿ ಹರಬಿಟ್ಟ. ಕಿಟ್ಟಪ್ಪ ಪಾರ್ಕು, ಹೊಟೇಲು ಅಂತ ಅಲೆದಲೆದು ದುಡ್ಡೆಲ್ಲಾ ಕಾಲಿ ಮಾಡಿಕೊಂಡು, ಸಾಲ-ಶೋಲ ಮಾಡಿಕೊಂಡು ಜೀವನದ ಸೌಕ್ಯವನ್ನು ಅನುಭವಿಸುತ್ತಿದ್ದ. ಈರಯ್ಯ ಕವಡಿ ಶಾಸ್ತ್ರವನ್ನು, ಮಾಟ-ಮಂತ್ರಾದಿಗಳನ್ನು ಮಾಡುವುದರಲ್ಲಿ ನಿಸ್ಶೀಮನಾದ. ಒಂದು ಸಲ ತಾನು ಕಲಿತ ವಿದ್ಯೆ ಬರೊಬ್ಬರಿ ಐತೋ, ಇಲ್ಲೋ ಎಂದು ತಿಳಿಯಲು ಒಂದು ಪರೀಕ್ಷೆ ಮಾಡಿದ. ಅದೇನಂದ್ರ ಗೆಳೆಯ ಕಿಟ್ಟಪ್ಪ ಪ್ರೀತಿಸುವ ಹುಡಗಿಯ ಮ್ಯಾಲ ವಶೀಕರಣ ವಿದ್ಯೆಯನ್ನು ಪ್ರಯೋಗ ಮಾಡಿದ. ಒಂದೇ ಒಂದು ವಾರದಾಗ ಆ ಹುಡುಗಿ ಕಿಟ್ಟಪ್ಪನ ಬಿಟ್ಟು ನಾಯಿಯಂತೆ ಈರಯ್ಯನ ಹಿಂದೆ ಸುತ್ತುತ್ತಿರುವುದು ಕಂಡು, ಈರಯ್ಯನಿಗೆ ತನ್ನ ವಿದ್ಯಾದ ಮ್ಯಾಲ ಘಾಡವಾದ ನಂಬಿಕೆ ಮೂಡಿತು. ಸುಂದರವಾದ ಹುಡಗಿಯನ್ನು ಅನುಭವಿಸಬೇಕೆಂಬ ಈರಯ್ಯನ ಚಪ¯ ದಿವಸಾದಿವಸಾ ಹೆಚ್ಚಾದಾಗ, ಒಂದು ದಿನ ಆ ಹುಡುಗಿ ಈರಯ್ಯನ ಹಾಸಿಗೆವರೆಗೂ ಬಂದಳು. ಹಾಸಿಗೆ ತನಕ ಬಂದವ್ಳನ್ನು ಮನೆತನಕ ಕರೆದೊಯ್ಯಬೇಕೆಂದು ಈರಯ್ಯ ಅಕಿನ ಮದವಿ ಆಗಿದ್ದ. ಅಂದಿನಿಂದ ಕಿಟ್ಟಪ್ಪ ಈರಯ್ಯನ ಕಂಡರೆ ಕಟಕಟ ಹಲ್ಲು ಕಡಿತ್ತಿದ್ದ. “ನಾ ಪ್ರೀತ್ಸಿದ ಹುಡಗಿ ಪಟಾಯಿಸಿದ ಹಲಕಟ್ಟನನ್ನ ಮಗಾ” ಎಂದು ಬಾಯಿಗೆ ಬಲ್ಲಂಗ ಬೈಯುತ್ತಿದ್ದ. ಈರಯ್ಯ ಎಂದೂ ಕಿಟ್ಟಪ್ಪನ ಮಾತಿನತ್ತ ತೆಲಿಕೆಡಿಸಿಕೊಳ್ಳಲಿಲ್ಲ. ಅದೊಂದು ಬೊಗಳುವ ನಾಯಿ ಅನ್ನುವ ವಿಚಾರ ಈರಯ್ಯನದಾಗಿತ್ತು.
****

ಒಂದು ಸಲ ನಮ್ಮೂರ ದೇವಿಯ ಬೆಳ್ಳಿಯ ಮೂರ್ತಿ ಕಳುವಾಗಿತ್ತು.ಊರ ಮಂದಿಯಲ್ಲರೂ “ಊರಿಗೇನು ಗಂಡಾಂತರ ಬಂತಪೋ.. ದೇವಿ ಮೂರ್ತಿ ಮಂಗಮಾಯ ಆಗೇತಂದ್ರ ನಮ್ಮೂರಿಗೆ ಉಳಿಗಾಲಿಲ್ಲ” ಎಂದು ಹಳಹಳಿಸುತ್ತಿದ್ದಾಗ ಅಲ್ಲಿ ಈರಯ್ಯ ಪ್ರತ್ಯಕ್ಷಣಾಗಿದ್ದ. “ಆ ದೇವ್ರ ಮೂರ್ತಿ ಎಲ್ಲೂ ಹೋಗಿಲ್ಲಾ.. ನಮ್ಮ ಊರಾಗ ಐತಿ” ಎಂದು ಹೇಳಿದ. ಆಗ ಈರಯ್ಯನ ಮಾತ ಕೇಳಿದ ಮಂದಿ ತೆಲಿಗೊಂದ ಮಾತಾಡಿದ್ರು. ಈರಯ್ಯ ಮಂದಿ ಏನಂದ್ರೂ ತಲಿ ಕಡಸ್ಕೊಳ್ಳಲಿಲ್ಲ.

“ಊರ ಹೊರಗ ಇರುವ ಕಟ್ಟ ಕಡೆ ಮನಿ, ಉತ್ತರ ದಿಕ್ಕಿಗೆ ಬಾಗಲೈತಿ, ಆ ಮನಿ ಮುಂದ ಒಂದ ದೊಡ್ಡ ಹುನಸಿ ಮರಾ ಐತಿ, ಆ ಮನ್ಯಾಗ ದೇವಿ ಮೂರ್ತಿ ಐತಿ” ಎಂದು ಜನಸಭೆದಾಗ ಕಿರಚಿದ್ದ. ಎಲ್ಲರೂ ಕವಡಿ ಈರಯ್ಯನ ಮಾತ ಕೇಳಿ ದಂಗಾಗಿದು.್ರ ಯಾಕಂದ್ರ ಅಂವ ಹೇಳಿದ ಮನಿ ಬ್ಯಾರೇ ಆರ್ದೂ ಅಲ್ಲ, ಊರಗೌಡ್ರಾದ ತಿಮ್ಮನ್ನ ಸಾವಕಾರ್ದು.

ತಿಮ್ಮನ್ನ ಸಾವಕಾರಂದ್ರ ಭಾಳ ಕ್ವಟ್ಟಿ ಮನಷ್ಯಾ ಇದ್ದ. ಎರ್ಡ ಮೂರ ಖೂನಿ ಮಾಡಿ, ಜೈಲ್ ಕೋನಿವಳಗ ವಸ್ತಿ ಇದ್ದ ಬಂದಿದ್ದ. ಊರಾಗ ಅಂವಗ ಯಾರೂ ಪ್ರೀತಿಯಿಂದ ನಮಸ್ಕಾರ ಮಾಡತಿರ್ಲಿಲ್ಲ. ಬದಲಿಗೆ ಭಯದಿಂದ ಹೆದರಿ ಬಿಲ್ಲಿನಗತೆ ಭಾಗತಿದ್ರು.

ಈರಯ್ಯನ ಮಾತ ಕೇಳಿ, “ಏನೋ ತಮ್ಮಾ ನೀ ಹೇಳು ಮಾತ ಹುಲಿ ಬಾಯಾಗ ಗೋಣ ಕೊಡವಂತಾದೈತಿ, ಹಾವಿನ ಹುತ್ತನ್ಯಾಗ ಕೈಹಾಕಂತದೈತಿ” ನಿನ್ನ ಮಾತ ನಿನಗ ಆಪತ್ತ ತಂದೀತು, ಇದು ಜೀವ ಹೋಗುವಂತದ್ದು. ಹೋಗಿ ಹೋಗಿ ಆ ಮನಸ್ಯಾನ ಮನಿಯಾಗ ಐತಿ ಅಂತ ಹೇಳತಿಯಲ್ಲ. ಆ ಸಾವಕಾರಂದ ಸುಟ್ಟರ ಸುಡಲಾರ್ದಷ್ಟ ಆಸ್ತಿ ಐತಿ. ಸಿಳ್ಳಿಮಿಳ್ಳಿ ಸಿಟಕ್ ಅಂತ ಐದಾರ ಸಾವಿರ ರೂಪಾಯಿದ ಮೂರ್ತಿ ತಗೊಂದ ಅಂವೇನ್ ಮಾಡ್ಯಾನ..? ಈ ಸುದ್ದಿ ಅಂವ್ನ ಕಿವಿಗೆ ಬಿದ್ದರ ನೀ ಹರಾಹರಾ ಅಕ್ಕಿ ಎಂದು ಕಮತರ ಬಸಪ್ಪಜ್ಜ, ಈರಯ್ಯಗೆ ತಾಕೀತ ಮಾಡಿದ.

“ಏನ್ ಭಾರಿ ದೇವ್ರಾ ಹೇಳು ಮನಷ್ಯಾರಗತೆ ಮಾತಾಡಬ್ಯಾಡ.. ಧಾರ್ವಾಡದಾಗ ಸಾಲಿ ಕಲತಿನಂತ ಜಂಬ ಮಾಡಬ್ಯಾಡೋ ತಮ್ಮಾ.. ಪುಸ್ತಾಕದಾನ ನಿನ್ನ ವಿದ್ಯಾ ಈ ಹಳ್ಳಿ ಮಂದಿಗೆ ಪಸಂದ ಬರಂಗಿಲ್ಲ, ಹೋಗಹೋಗತ್ತಾಗ ಮನಿ ಹಾದಿ ಹಿಡಿ” ಎಂದು ಕಲ್ಲಪ್ಪಜ್ಜನೂ ಈರಯ್ಯಗೆ ತಾಕೀತ ಮಾಡಿದ.

ಅಷ್ಟೊತ್ತಿಗಾಗಲೇ ಈರಯ್ಯ ನಿಮ್ಮ ಬಗ್ಗೆ ಹಿಂಗಿಂಗ ಅಂದಾನಂತ ಯಾರೋ ಒಬ್ಬರ ಹೋಗಿ ತಿಮ್ಮನ್ನಸಾವಕಾರ ಕಿವಿ ಊದಿ ಬಂದಿದ್ರು. ತಿಮ್ಮನ್ನ ಸಾವಕಾರ ಎಲ್ಲಿ ಅದಾನಂವ ಹಲಕಟ್ಟ ಸೂಳಿಮಗಾ ಅಂತ ಕಟಕಟ ಹಲ್ಲ ಕಡಕೋತ ಈರಯ್ಯನ ಮುಂದ ಹಾಜರಾಗಿದ್ರು.

ಈರಯ್ಯ ತಿಮ್ಮನ್ನ ಸಾವಾಕರಗ ಹೆದರಲಿಲ್ಲ. ಎದರು ವಾದಿಸಿದ.
“ನಿಮ್ಮ ಮನ್ಯಾಗ ಐತಿ, ಆ ಮೂರ್ತಿ, ಇಲ್ಲಂದ್ರ ನಾ ಇಲ್ಲೇ ಪ್ರಣಾ ಬಿಡ್ತಿನಿ” ಅಂತ ಈರಯ್ಯ ಸಡ್ಡ ಹೊಡದಂಗ ಹೇಳಿದ್ದ.

ಈರಯ್ಯನ ಶರತ್ತಿಗೆ ತಿಮ್ಮನ ಸಾವಕಾರನೂ ಗಾಬರಿ ಆಗಿದ್ದ. ಮತ್ತೊಂದಕಡೆ ಈ ಮಳ್ಳನನ್ನ ಮಗಾ ತುಡಗ ಅನ್ನು ಪಟ್ಟಾ ನನಗ ಹೊರಸ್ಯಾನಲಾ.. ಇಂವ್ನ ಒಂದಕೈ ನೋಡ್ಕೊಂದ್ರಾತು ಎಂದು ಸಾವಕಾರ ಕಟಕಟ ಹಲ್ಲು ಕಡೆಯುತ್ತಿದ್ದ.

ಇಡೀ ಊರ ತಿಮ್ಮನ್ನ ಸಾವಕಾರ ಮನಿಮುಂದ ಸೇರಿತ್ತು, ಕಲ್ಲಪ್ಪಜ್ಜಾ..ಮತ್ತ ಬಸಪ್ಪಜ್ಜ ಅವರ ಜೋಡಿ ಐದಾರ ಮಂದಿ ಸಾವಕಾರ ಮನಿ ಹೊಕ್ಕ ಹುಡಕ್ಯಾಡಾಕ ಹತ್ತಿದ್ರು. ಅದ ಸಿಗಲಿಲ್ಲಂದ್ರ ಈರಯ್ಯನ ಕಂಬಕ್ಕ ಕಟ್ಟಿ ಊರ ಮಂದಿಮುಂದ ಹಿಗ್ಗಾ ಮುಗ್ಗಾ ಹೊಡಿಬೇಕಂತ ಸಾವಕಾರ ಎದಿಯಾಗ ಇಟಗೊಂದ ಕುಂತಿದ್ದ. ಅಷ್ಟೊತ್ತಿಗೆ ತಿಮ್ಮನ್ನ ಸಾವಕಾರ ತಮ್ಮ ಹುಚ್ಚ ಭರಮ್ಯಾ ದೇವಿ ಮೂತಿ ತೆಲಿಮ್ಯಾಲ ಹೊತಗೊಂದ ಥೈ.. ಥೈ.. ಕುಣಿಯುತ್ತ “ನತ್ತರೆ ನತ್ತರೆ..ಒದ್ದ ಒದ್ದ ಗಾಡಿ ಗಾಡಿ..” ಅನ್ನುವ ಹುಚ್ಚ ಭಾಷೆ ಮಾತಾಡುತ್ತ ಅಂಗಳಕ್ಕೆ ಬಂದಿದ್ದ.

ಇದನ್ನ ಕಂಡು ಊರ ಮಂದಿ ಎಲ್ಲ ಗರ ಬಡಿದಂಗ ಆದ್ರು. ತಿಮ್ಮಪ್ಪ ಸಾವಕಾರ್ನೂ ಹೌಹಾರಿದಂಗಾದ. ಹುಚ್ಚನಾದ ತನ್ನ ತಮ್ಮನ ಮ್ಯಾಲ ಸಿಟ್ಟ ಬಂದ್ರೂ ಅಂವನ ಹೊಡಿಯಾಕ ಹೋಗಲಿಲ್ಲ. ಇಡೀ ಊರಿಗೆ ಕೈ ಮುಗಿದು ನಂದ ತಪ್ಪ ಆಗೇತಿ, ನಮ್ಮ ತಮ್ಮ ಗೊತ್ತಾಗಲಾರ್ದ ತಂದಿರ್ಬೇಕು ಎಂದು ಕೈಜೋಡಿಸಿದ. ಅಷ್ಟೊತ್ತಿಗಾಗಲೇ ಈರಯ್ಯ ಮನಿ ಹಾದಿ ಹಿಡದಿದ್ದ.

ಈರಯ್ಯ ಒಂದ ದಿನ ಹುಚ್ಚ ಭರಮ್ಯಾ ದೇವಿ ಮೂರ್ತಿ ಜೋಡಿ “ನತ್ತರೆ.. ನತ್ತರೆ..ಒದ್ದ..ಒದ್ದ..ಗಾಡಿ..ಗಾಡಿ.. ಅನ್ನಕೋತ ಮಾತಾಡುವುದನ್ನು ಗಮನಿಸಿದ್ದ, ಅದನ್ನ ಕಿತ್ತುದೂ ಎತ್ತೂದೂ ಮಾಡಿದ್ದೂ ಕಂಡಿದ್ದ, ಖಂಡಿತ ಮೂರ್ತಿಯನ್ನು ಆ ಹುಚ್ಚ ಓದರಿಬಹುದಾ? ಅಂತ ಅನುಮಾನಿಸಿ ಕವಡಿ ವಗೆದು ಲೆಕ್ಕಾಚಾರ ಹಾಕಿದಾಗ ಅದು ಸರಿ ಬಂದಿತ್ತು. ತನ್ನ ಕವಡಿ ಶಾಸ್ತ್ರ ಫಲಕೊಡಬಹುದೇ? ಕೊಟ್ಟರೆ ಊರವರ ಮುಂದೆ ತನ್ನ ಶಕ್ತಿಯನ್ನು ತೋರಿಸಲು ಇದೊಂದು ಒಳ್ಳೆಯ ಅವಕಾಶ ಎಂದು ನಿರ್ಧಾರ ಮಾಡಿಯೇ ಜನರೆದರು ಹೇಳಿದ್ದ. ಕೊನಿಗೂ ಈರಯ್ಯ ಊರವರಿಂದ ಸೈ ಅನಿಸಿಕೊಂಡ.

ಅಂದಿನಿಂದ ನಮ್ಮ ಊರಾಗ ಒಂದೊಂದೆ ಈರಯ್ಯನ ಹೇಳಿಕೆಗಳು ಪ್ರಾರಂಭವಾದವು. ಇಡೀ ಊರಿಗೆ ಕವಡಿ ಈರಯ್ಯ ಮಾತಗಳು ವೇದವಾಕ್ಯಗಳಾದವು. ಕಿಟ್ಟಪನ್ನನ್ನು ಬಿಟ್ರೇ ಎಲ್ಲರ ಪಾಲಿಗೆ ಕವಡಿ ಈರಯ್ಯ ದೇವ್ರಾಗಿದ್ದ.
*

ಊರಾಗ ಯಾರ್ದರ ಎಮ್ಮಿಕರಾ ಕಳ್ಕೊಂಡ್ರೂ ಅಂವನ ಹಂತ್ಯಾಕ ಹೊಗಾಕ ಹತ್ತಿದ್ರು. ಎಮ್ಮಿ ಸರಿಯಾಗಿ ಹಿಂಡಲಿಲ್ಲಂದ್ರೂ ಅಂವನ ಅವ್ರ ಪಾಲಿಗೆ ಗತಿಯಾದ. ನೌಕರಿ ಆಗದವ್ರು, ಲಗ್ಗನ ದೌಡ ಆಗದವ್ರು, ಹೊಲದಾಗ ಸರಿಯಾಗಿ ಬೆಳಿ ಬರಲಿಲ್ಲಂದ್ರ, ಮಕ್ಕಳ ಸರಿಯಾಗಿ ಮಾತ ಕೇಳಲಿಲ್ಲಂದ್ರ, ಅತ್ತಿ-ಸ್ವಸಿ ಜಗಳಾ, ಗಂಡ-ಹೆಂಡರ ಜಗಳ, ಅಣ್ಣ-ತಮ್ಮರ ಜಗಳ, ಒಂದಲ್ಲ ಎರಡಲ್ಲ ಸಣ್ಣ ವಾಟಗಾ ಕಳದ್ರೂ ಕವಡಿ ಈರಯ್ಯನ ಹಂತ್ಯಾಕ ಹೊಂಟ್ರು. ಮದವಿ ಮಾಡ್ಸೂದ್ರಿಂದ ಹಿಡ್ಕೊಂಡ, ಸತ್ತ ಮ್ಯಾಲ ಕುಣಿಯಾಗ ಹುಗಿಬೇಕಾದ್ರು ಅಲ್ಲಿ ಕವಡಿ ಈರಯ್ಯನ ಹಾಜರಾತಿ ಇರದಿದ್ರ, ಹೆಣಕ ಬೆಂಕಿನ ಹತ್ತಂಗಿಲ್ಲ ಅನ್ನುಂತಾ ವಾತಾವರ್ಣ ಈರಯ್ಯ ಜನರ ಮನಸನ್ಯಾಗ ಭಾಳ ಆಳಕ ತೆಗ್ಗ ತಗೆದ ಹುಗದಬಿಟ್ಟಿದ್ದ.

ಜೋರ ಗಾಳಿಬಿಟ್ರ ಹಾರಿ ಹೋಗುವಂತಾ ಬಡಕ ಶರೀರದ ಆಸಾಮಿ,ಯಾವಾಗಲೂ ಹಣಿತುಂಬ ಮೂರ ಬಟ್ಟ ಇಬತ್ತಿ ಬಡ್ಕೊಂಡ, ಕೊಳ್ಳಾಗ ಎರಡ ಎಳಿ ರುದ್ರಾಕ್ಷಿ ಸರಾ ಹಕ್ಕೊಂಡ, ಕೈಯಾಗೊಂದ ಹಾಲಬಿಳಿಪಿನಂತ ಬೆಳ್ಳಿ ಕಡಗಾ ಹಾಕಿ, ಶಿವ ಶಿವ ಅಂತ ಬಲು ಗತ್ತಿನಿಂದ ದೇವ್ರ ಸ್ಮರಣಿ ಮಾಡ್ಕೋತ ಊರ ಮಂದಿ ದಂಗ ಆಗುವಂಗ ಮಾಡು ಕಸರತ್ತು ಕವಡಿ ಈರಯ್ಯಗ ವಲದಿತ್ತು. ಹಿಂಗಾಗಿ ಅಂವ ಕಲಿತ ವಿದ್ಯೆ ನಮ್ಮೂರಲ್ಲಿ ಫಲಿಸಿತ್ತು.

ಕರ್ನಾಟಕದ ಮೂಲಿ ಮೂಲಿಯಿಂದ ಜನ್ರು ಬರುದನ್ನ ಕಂಡು ಕಿಟ್ಟಪ್ಪ ಸಹಿಸಿಕೊಳ್ಳದ.. ಈ ಜನ್ರಿಗೆ ಏನ ಹುಚ್ಚೋ ಮಳ್ಳಗೊಳ ಅಳೆಮಳ್ಳಗೋಳ. ಆ ಮಂತ್ರ-ತಂತ್ರದ ಸೂಳಿಮಗನ್ನ ನಂಬಿ ಸುಮ್ಮ ಸುಮ್ಮ ಹಾಳ ಅಕ್ಕವ. ನೋವ ಮನಿಷ್ಯಾರಿಗೆ ಬರಲಾರ್ದ ಮರಕ್ಕ ಬರ್ತಾವೇನ..? ಮನ್ಯಾಗ ಮಂದಿ ಇರ್ತಿವಿ ಅಂದ್ರ ಜಗಳಾ ಜೋಟಿ ಆಗ್ದ ಇರ್ತೈತಾ..? ಮಕ್ಕಳ ಹಟಾ ಮಾಡ್ದ ದೊಡ್ಡವ್ರ ಮಾಡಾಕ ಅಕ್ಕತೇನ..? ಎಮ್ಮಿ ಹಿಂಡಲಿಲ್ಲಾ.. ಎತ್ತ ಹಾಯಾಕತ್ತಿ, ಹೊಲಾ ಬೆಳಿತಿಲ್ಲಾ..? ಇಂತಾ ಪ್ರಶ್ನೆ ಆ ಮಳ್ಳ ಸೂಳಿಮಗನ ಮುಂದ ಕೇಳಿ ಸಣ್ಣವ್ರ ಆಗಿ ಸುಮ್ಮ ಸುಮ್ಮನ ಸುಣ್ಣಾ ಕುಡಿತಾವ ಎಂದು ಕಿಟ್ಟಪ್ಪ ಹೊಟ್ಟಿ ಉರಿದು ಈರಯ್ಯನ ಬೈಯ್ಯುವ ಬದಲಿಗೆ ಅವನ ಹತ್ತಿರ ಹೋಗುವ ಜನರನ್ನು ಬೈತಿದ್ದ.
ಕವಡಿ ಈರಯ್ಯ ತಾನು ಕೈಯಾಗ ಕವಡಿ ಹಿಡದಾಗಿನಿಂದ ಕಮ್ಮಿ ಕಮ್ಮಿ ಅಂದ್ರೂ ಹತ್ತ ಎಕರೆ ಜಮೀನ ಮಾಡ್ಕೊಂಡಿದ್ದ. ಆ ಜಮೀನಿನ್ಯಾಗ ಆರ ಕೋಣಿಗಳ ಒಂದ ದೊಡ್ಡ ಮನಿ ಕಟ್ಟಸಿದ್ದ. ಇದ್ದ ಒಬ್ಬ ಮಗನ ಓದಸಾಕ ಬೆಂಗಳೂರಾಗ ಸಾಲಿಗೆ ಇಟ್ಟಿದ್ದ. ಮಗನಿಗೆ ವಿದ್ಯಾ ತಲಿಗೆ ಹತ್ತಲಾರ್ದಕ್ಕ ಹೊಡಮರಳಿ ಮಗಾ ಊರ ಸೇರಿದ್ದ. ಅಪ್ಪನ ಉದ್ಯೋಗ ಕಲಿಬೇಕಂತ ತಿನಕ್ಯಾಡಿದ್ರೂ ಆಗಿರಲಿಲ್ಲ. ತ್ವಾಟದಾಗ ನೀಗಿದಷ್ಟ ದುಡಕೋತ ಹೊಂಟಿದ್ದ. ಕವಡಿ ಈರಯ್ಯಗ ಮಗಾ ಒಂದ ಸರಿಯಾಗಿ ಓದಲಿಲ್ಲ ಅನ್ನುವ ಚಿಂತಿ ಆಗಾಗ ಅಂವ್ನ ಕಾಡದೇ ಇರ್ತಿರಲಿಲ್ಲ.

                          ****

ನಮ್ಮಜ್ಜಿಗೆ ಒಂದ ಯಾವಾಗ್ಲೂ ನಂದ ಹೆಚ್ಚ ಚಿಂತಿ. ತಾಯ ಸತ್ತ ಮಗಾ ಐತಿ, ಚಲೋತಂಗ ಉಣಿಸಿ,ತಿಣಿಸಿ, ಪಾಡತಂಗ ಓದಸಿದ್ರ ಮುಂದ ತನ್ನ ಕಂಡಬುದ್ದಿ ತಾನ ಕಂಡಕೊಂಡಾನ ಅಂತ ದಿನಾ ಅದ ಚಿಂತ್ಯಾಗ ಜೀವ ಸಗಸಾಕಿ. ನಾ ಅರಾ ಊರ ಉಡಾಳ ನನ್ನ ಮಗಾ ಇದ್ಯಾ.

ಒಂದ ಜಾಗದಾಗ ನಿಂದ್ರಾಂವ ಅಲ್ಲ, ಒಂದ ಜಾಗದಾಗ ಕುಂದ್ರಾಂವ ಅಲ್ಲ. ಹಿಂಗಾಗಿ ನಮ್ಮ ಅಜ್ಜಿಗೆ ನನ್ನ ಸಮಂದ ತೆಲಿ ಚಿಟ್ಟ ಹಿಡದಂಗ ಆಗಿತ್ತು. “ಹೆಂಗ ಮಾಡ್ಬೇಕಪಾ.. ಇಂವಗ ಬುದ್ದಿನ ಬರವಲ್ದಲ್ಲ” ಅಂತ ಭಾಳ ಮನಸಿಗೆ ಹಚಗೊಂಡ, ಕಂಡ ಕಂಡವ್ರ ಮುಂದ ನಂದ ಪಿರ್ಯಾಧಿ ಹೇಳ್ಕೋತ ಅಡ್ಡಾಡ್ತಿದ್ಳು.

ಬಜಿಮಾರು ಗಂಗವ್ವ ಆಯಿ ಒಂದ ದಿನ ಬಿಸಿ ಬಿಸಿ ಬಜಿಮಾಡಿ ಕಡಾಣಗಿ ತುಂಬ ಹಾಕಿ ಇಟ್ಟಿದ್ದಳು. ಅದನ್ನ ಕಂಡು ನನ್ನ ಮಂಗ್ಯಾನಂತ ಮನಸ್ಸು ಸುಮ್ಮ ಕುಂದ್ರಲಿಲ್ಲ. ಕೈಗೆ ಹತ್ತುವಷ್ಟು ಬಜಿ ಹಿಡಕೊಂಡ ಗಂಗವ್ವ ಆಯಿಗೆ ಕಾಣಕಾಣುತಿದ್ದಂಗ ಮಂಗಮಾಯ ಆಗಿಬಿಟ್ಟಿದ್ಯಾ. ಊರ ಹೊರಗಿದ್ದ ಹನಮಪ್ಪನ ಗುಡಿಹಿಂದ ಹೋಗಿ, ದಾಸರ ಭೀಮಾ, ಮುಲ್ಲಾಗೋಳ ಪೀರ್ಯಾ, ಮೂರು ಮಂದಿ ಕೂಡಿ ತಿಂದ ಬಾಯ ವರಸ್ಕೊಂಡ ಮನಿಕಡೆ ಹರಿಗಲ್ಲ ಬಿದ್ದಿದ್ವಿ. ನಮ್ಮ ಮನಿ ಮುಂದ ಬಜಿಮಾರು ಗಂಗವ್ವ ಆಯಿ ನಮ್ಮ ಅಜ್ಜಿ ಜೋಡಿ ಜಗಳಕ್ಕ ನಿಂತಿದ್ಳು. “ನನ್ನ ಕೈಗೆ ಸಿಕ್ಕರ ಆ ಭಾಡ್ಯಾನ ಕುಂಡಿಮ್ಯಾಲ ಬರಿ ಕೊಡ್ತಿನಿ, ಹುಚನನ್ನ ಹಾಟ್ಯಾಗ, ಚಂದಂಗ ಬುದ್ದಿಕಲಸ ನಿನನ್ನ ಮೊಮ್ಮಗ” ಎಂದು ಗುಡುಗುಡು ಗುಡಗುತ್ತ ಗಂಗವ್ವ ಆಯಿ ಒದರ್ಕೋತ ಮನಿ ಹಾದಿ ಹಿಡದದ್ದಳು. ಅದನ್ನ ಕಂಡ ನಾನು ಅಂದು ಮನೆಗೆ ಒಂದೀಟ ತಡವಾಗಿ ಹೊಕ್ಕಿದ್ದೆ.

ಅಜ್ಜಿ ನನ್ನ ನೋಡಿದ್ದ ತಡಾ “ನೀ ಒಳೆ ಗಂಟ ಬಿದ್ದಿ ನನ್ನ ಜೀವಕ್ಕ, ನಿನ್ನ ಸಮಂದ ಇನ್ನ ಯಾರ್ಯಾರ ಕಡೆಯಿಂದ ಏನೇನ ಅನಸ್ಕೊಳ್ಳುದೈತೋ.. ಏನೋ” ಎಂದು ಮೋತಿ ಸಣ್ಣ ಮಾಡ್ಕೊಂಡ ಅಳು ಬಂದವರ ಹಂಗ ಮಾತಾಡುದ ಕಂಡ ಆ ಕ್ಷಣಕ “ಮುಂದ ಹಿಂಗೆಲ್ಲಾ ಮಾಡ್ಬಾರ್ದು” ಅಂತ ಆ ಹೊತ್ತನ್ಯಾಗ ನನ್ನ ಮನಸಿಗೆ ಅನಸ್ತಿತ್ತ, ಆದ್ರ ಮತ್ತ ನನ್ನ ಮನಸ್ಸು ನಾಯಿ ಬಾಲ.

ಒಂದಿನ ನಮ್ಮ ಅಜ್ಜಿ ಯಂಕವ್ವನ ಮನಿಗೆ ಮಜ್ಜಗಿ ತರಾಕ ಹ್ವಾದ್ಳು. ಮಜ್ಜಗೆ ಇಸ್ಗೋಳದ ಬಿಟ್ಟ ನಮ್ಮ ಅಜ್ಜಿ ಅಕಿ ಮುಂದ ನನ್ನ ಪಿರ್ಯದಿ ಕಥಿಮಾಡಿ ಹೇಳಿ ಕಣ್ಣೀರ ಇಟ್ಟಿದ್ಳು. ನಾ ಮಾಡುವ ಅಡಮುಟ್ಟ ಕೆಲಸಾ ತಿಳಕೊಂಡ ಯಂಕವ್ವ ನರಿ ಹಂಚಗಿ ಹಾಕಿ, ನಮ್ಮ ಅಜ್ಜಿಗೆ ಹಿಂಗ ಅಂದಿದ್ಳು. “
ನೋಡ ಆಯಿ, ಕವಡಿ ಈರಯ್ಯನ ಹಂತ್ಯಾಕ ಹೋಗಿ ನಿನ್ನ ಮೊಮ್ಮಗನ ಒಗಿ, ಅಂವ ಸುದ್ದ ಮಾಡಿ ಕೊಡ್ತಾನ, ಮಾಟ ಮಂತ್ರದ ಶಕಾ, ಇಲ್ಲಾ ಗಾಳಿಶಕಾ, ಆಗಿ ಹಿಂಗತಿ ಹುಡಗ ಮಾಡ್ತಿರ್ಬೆಕು” ಎಂದು ಕಿವಿ ಊದಿ ಕಳಿಸದ್ಳು. ಯಂಕವ್ವನ ಮಾತ ಕೇಳಿದ್ದ ತಡಾ, ನಮ್ಮಜ್ಜಿ ನನ್ನ ಜುಲಮಿ ಮಾಡಿ, ಕವಡಿ ಈರಯ್ಯನ ಕಡೆ ಕರ್ಕೊಂಡ ಹೋಗಾಕ, ನನ್ನ ಮ್ಯಾಕ ಓದ ತಳ್ಯಾಕ ಓದ ಕರ್ಕೊಂಡ ಹೋಗಿ ಕವಡಿ ಈರಯ್ಯನ ಮುಂದೆ ಅವತ್ತ ಕುಂದ್ರಿಸಿ ಬಿಟ್ಟಿದ್ಳು.
*

ಅಂದು ಯಾವದೋ ಒಂದು ಅಮವಾಸೆ ಇತ್ತು. ಈರಯ್ಯನ ಒಂಟಿ ಕೋನಿ ಮನಿ ವಳಗೆ ಕಿಕ್ಕಿರಿದು ಜನಾ ಸೇರಿದ್ರು. ಈರಯ್ಯ ಕಂಬಳಿ ಹಾಸಿಕೊಂಡು ಕುಳಿತಿದ್ದ. ಅವನ ಪಕ್ಕದಲ್ಲಿ ವಿಧವಿಧವಾದ ದೇವಾನ-ದೇವತೆಗಳ ಪೋಟೊಗಳು ಗಪ್ಪಚುಪ್ಪ ಕುಂತಿದ್ವು. ಒಂದೆರಡು ಪೋಟೋಳಲ್ಲಿ ದೇವರುಗಳು ನಾಲಗಿ ಹೋರಗ ಚಲ್ಲಕೊಂಡ ರಾಕ್ಷರಂತೆ ಕಾಣತಿದ್ರು. ಈರಯ್ಯನ ಮುಂದೆ ಒಂದು ದಪ್ಪಗಿನ ಕೆಂಪು ಬಟ್ಟೆ ಹಾಸಿತ್ತು. ಅದರ ಮ್ಯಾಲೆ ಕವಡಿಳು ಇದ್ದವು. ನನಗೆ ಆ ಕವಡಿಗಳನ್ನು ನೋಡಿ ಪಟಕ್ನ ಕದ್ದಕೊಂದ ಓಡ್ಬೇಕು, ಗೋಲಿ,ಗುಂಡಾ, ಗಜ್ಜಗಾ ಆಡಿದಂಗ, ಇವನೂ ಆಡ್ಬೇಕು ಅಂತ ಭಾಳ ಆಸೆ ಹುಟ್ಟಿತು. ನನ್ನ ಮನಸನ್ಯಾಗ ಕವಡಿ ಕದಿಬೇಕು, ಆಟಾ ಆಡ್ಬೇಕು ಎಂದು ಹುಟಗೊಂದ ಆಸೆ ಎಷ್ಟೋ ಹೊತ್ತ ಮನಸ ಬಿಟ್ಟ ಹೋಗ್ಲಿಲ್ಲ.

ಈರಯ್ಯ ತನ್ನ ಕೈ-ಹಿಡಿ ತುಂಬ ಊದಿನ ಕಡ್ಡಿ ಹಿಡಿದು, ಅದಕ್ಕ ಕಡ್ಡಿ ಗೀರಿ, ಚಂದಂಗ ಊದಿನ ಕಡ್ಡಿ ಹೊತ್ತಿಸಿ, ಕಣ್ಣ ಮುಚ್ಚಿ, ಅಂವನ ಆಜುಭಾಜು ಇದ್ದ ಪೋಟೋಗಳಿಗೆ ಬೆಳಗಕೋತ ಏನೋ ಒಂದು ಮಂತ್ರ ಯಾರಿಗೂ ಅರ್ಥ ಆಗದಂಗ ಗೊಣಗತಿದ್ದ. ಎಲ್ಲ ಪೋಟೋಕ ಬೆಳಗಿದ ಮ್ಯಾಲ ಲಾಸ್ಟ್ ಲಾಸ್ಟ್‍ಕ ಕವಡಿಕಡೆ ಅವನ ಕೈಗಳು ಹ್ವಾದು. ಒಂದೀಟ ಹೊತ್ತ ಹೆಚ್ಚಿಗೆ ಕವಡಿ ಜೋಡಿ ಗುದಮುರ್ಗಿ ಮಾಡಕ ಹತ್ತಿದ. ಆ ಕೋನ್ಯಾಗ ಕುಂತವ್ರೆಲ್ಲ ಕೈ ಮುಕ್ಕೊಂದ ಏಕ ಚಿತ್ತದಿಂದ ಈರಯ್ಯನ ಪೂಜಾ ವಿಧಾನ, ಅಂವ ಹೇಳುವ ತಿಳಿಲಾರ್ದ ಮಂತ್ರದ ಮೋಡಿಯನ್ನು ಕಣ್ಣ-ಮನ ತುಂಬಕೋತ ಕುಂತಿದ್ರು.

ಪೂಜಾ ಮುಗದ ಮ್ಯಾಲ ಎಷ್ಟಕೊಂದ ಹೊತ್ತ ಕಣ್ಣ ಮುಚ್ಚಿ ಕುಂತು, ತುಟಿಯಲ್ಲಿಯೇ ಮಂತ್ರಾ ಹೇಳತಿದ್ದ. ಅವತ್ತ ಹೊಸದಾಗಿ ಅಂವನ ಹತ್ತಿರ ಬಂದ ಮಂದಿಗೆಲ್ಲಾ, “ಅಬ್ಬಾ..ಇಂವ ಭಯಂಕರಾ ಶಕ್ತಿಪುರುಷ್ನ ಇದ್ದಂಗ ಕಾಣ್ತಾನ” ಅಂತ ಭಾವಗಳು ಬಂದ ಹೋಗದ ಇರ್ಲಿಲ್ಲ. ಮೆಲ್ಲಕಾಸ ಕಣ್ಣ ಬಿಟ್ಟು, ಕೈಯಿಂದ ಕಣ್ಣ ಉಜ್ಜಕೊಂಡು, ಈರಯ್ಯ ಕೋನ್ಯಾಗ ಕುಂತವ್ರ ಮ್ಯಾಲ ನೆದರ ಹರಸಿದ. ಅಷ್ಟೊತ್ತಿಗೆ ಒಬ್ಬ ಹುಡಗ ಅಂವ್ನ ಮುಂದ ಒಂದ ಕೈಚಾಚಿ ಗ್ಲಾಸ್ ಕೊಟ್ಟ ಹಿಂದ ಸರದ ಹೋತು. ಈರಯ್ಯ ಗ್ಲಾಸ್‍ನ್ಯಾಗ ಇದ್ದ ಚ್ಯಾನೋ ಹಾಲನೋ ಕುಡಿಯುವಾಗೂ ಅಲ್ಲಿ ಕುಂತ ಮಂದಿ ಚಿತ್ತ ಅಂವನ ಕಡೇನ ಇತ್ತು.

ಮೊದಲ ಒಬ್ಬಕಿ ನಡು ವಯ್ಯಸಿನ ಹೆಣಮಗಳು “ಯಪ್ಪ ಇಕಿದು ಲಗ್ನ ಆಗಿ ಇಂದಿಗೆ ಬರೊಬ್ಬರಿ ಎಂಟವರ್ಷ ಆತು, ಮಕ್ಕಳ್ನ ಇನ್ನ ಆಗವಲ್ಲು.., ನಾ.. ನೀ.. ಅನ್ನು ಡಾಕ್ಟರ್‍ಗೆ ತೋರ್ಸಿದೆ, ಎಲ್ಲ ದೇವ್ರ ದಿಂಡ್ರಗೆ ಹರಕಿ ಹೊತ್ತೆ, ಏನಮಾಡಿದ್ರೂ ಯಾವದೂ ಕೆಲಸಾನ ಕೊಡಲಿಲ್ಲ, ಈಗ ಅದಕ ನಿನನ್ನ ಪಾದಕ ಬಂದ ಬಿದ್ದಿವಿ ನಮಗ ಕೈಬಿಡಬ್ಯಾಡಪೋ..” ಎಂದು ಆ ಹೆಣಮಗಳು ಬೇಡಿಕೊಂಡ್ಳು. ಯಾರೂ ಮಾಡದ ಕೆಲಸಾ ನಾ ಮಾಡಬಲ್ಲೆ ಅನ್ನುವ ನಂಬಕಿಮ್ಯಾಲ ಆಡಿದ ಆ ಹೆಣಮಗಳ ಮಾತ ಕೇಳಿ ಈರಯ್ಯ ಒಂದೀಟ ಗತ್ತಿನಿಂದ ನಕ್ಕ.
“ಏನ್ ಹೆಸರು ?” ಅಂತ ಆ ಹೆಣಮಗಳಿಗೆ ಕೇಳಿದ.
“ರುಕಮವ್ವ” ಅಂದ್ಳು.
“ನಿಂದಲ್ಲ ನಿನ್ನ ಮಗಳ್ದು” ಅಂದ.
“ಸತ್ಯವ್ವ” ಅಂತ ಹೇಳಿದ್ಳು.
ಗಂಡನ ಹೆಸರೇನು..? ಅಂತ ಕೇಳಿದ.
“ಮಲ್ಲಪ್ಪ” ಅಂದ್ಳು.
ಒಂದ ಅರ್ಧಮುರ್ಧಾ ಕವಡಿ ಕಯ್ಯಾಗ ಹಿಡ್ಕೊಂಡ ಏನೇನೋ ದ್ಯಾನಿಸಿ ಕೈ ಕುಲಕ್ಯಾಡಸಿ ಕೆಳಗೆ ವಗೆದ, ಕವಡಿಗಳು ಚಿತ್ತ-ಡಬ್ಬಾ ಬಿದ್ದವುಗಳನ್ನು ಎಣಕಿ ಹಾಕಿ, ಮತ್ತೊಮ್ಮೆ ಕೈ ಕುಲಕ್ಯಾಡಿಸಿ ವಗೆದು, ಲೆಕ್ಕ ಹಾಕಿದ. “ಐದ ಅಮವಾಸಿ ನನ್ನ ಹತ್ರ ತಪ್ಪಸಲಾರ್ದ ಬಂದು ಐದೈದ ನಿಂಬಿ ಹಣ್ಣ ತಗೊಂದ ಹೋಗ್ರಿ, ಗಂಡಾ ಹೆಂತಿ ಇಬ್ಬರೂ ನಿಂಬಿ ಹಣ್ಣ ಹಚಗೊಂದ ಸ್ನಾನಾ ಮಾಡ್ರಿ.. ಆರನೆ ಅಮವಾಸಿಗೆ ಅಕಿ ಗರ್ಭಧರಿಸುದು ಪಕ್ಕಾ ಐತಿ” ಎಂದು ಹೇಳಿದ. ಈರಯ್ಯ ಅಂದ ಮಾತ ಕೇಳಿದ ಮುಂದ ಕುಂತ ಹೆಣಮಗಳು ಮತ್ತ ಅಕಿ ಮಗಳು ಇಬ್ಬರೂ ಹಿರಿಹಿರಿ ಹಿಗ್ಗಿದ್ರು. “ಯಾಕ ಆಗವಲ್ದರೀ.. ಐದ್ಯಾಕ..? ಹತ್ತ ಅಮಾಸಿಗೆ ಬರ್ತಿವಿ, ಒಟ್ಟ ಮಕ್ಕಳ ಆದ್ರ ಸಾಕೆಂದು” ಅಂವನ ಕಾಲಿಗೆ ಹಣಿ ಒತ್ತಿ, ಮುಂದಿದ್ದ ಪೋಟಾದ ಕಡಿಗೆ ಐವತ್ತರ ಎರಡ ನೋಟ ಇಟ್ಟು “ನಾಂವ ಬರ್ತಿವ್ರಿ” ಅಂತ ಎದ್ದು ಹ್ವಾದ್ರು. ಆಗ ಈರಯ್ಯನ ಕಣ್ಣುಗಳು ನೋಟಗಳತ್ತ ಸುಳಿದಾಡಿದವು.

ಇನ್ನೊಬ್ಬಕಿ ಹೆಣಮಗಳು ಈಯ್ಯನ ಮುಂದ ಕುಂತ ತನ್ನ ಸಮಸ್ಯಾನಂದ ಹೇಳಾಕ ಶುರುಮಾಡಿದ್ಳು. “ಯಪ್ಪಾ ದೇವ್ರ.. ನನಗ ಗಂಡನ ಮನ್ಯಾಗ ಭಾಳ ನಿಗ್ಗರ್ಸಿ ನೀರಕುಡಿತಾರ.. ಗಂಡಂತು ನನ್ನ ಕಂಡ್ರ ಬೆಂಕಿ ಕಾರ್ತಾನ, ನೀ ಅಂವ್ನ ಜೋಡಿ ಅದಿ.. ಇಂವ್ನ ಜೋಡಿ ಅದಿ ಅಂತ ವಣಾ ಸಂಶ್ಯಾ ಕಟಗೊಂದ ನನ್ನ ಹಿಗ್ಗಾಮುಗ್ಗಾ ಥಳಸ್ತಾನ ನನಗೊಂದ ದಾರಿ ತೋರ್ಸು” ಎಂದು ಕಣ್ಣೀರ ಹಾಕತೊಡ್ಗಿದ್ಳು. ಮಗ್ಗಲಿದ್ದ ಒಬ್ಬಾಕಿ “ಅಳಬ್ಯಾಡ ತಂಗಿ, ಹಂಗ ಹೇಳ” ಅಂತ ಸಮಾಧಾನ ಮಾಡಿದ್ಳು.

ಈರಯ್ಯ ಅಕಿ ಗಂಡನ ಮನಿಯಾವ್ರ ಮ್ಯಾಲ ಸಿಟ್ಟ ಮಾಡ್ಕೊಂಡರಗತೆ ಕಣ್ಣ ಕೆಂಪ ಮಾಡ್ಕೊಂಡ.. “ಆ ಮಕ್ಕಳಗೆ ಒಂದ ಗತಿ ಕಾಣ್ಸೂನು ಸುಮ್ಮ ಕುಂದ್ರ ತಂಗಿ ನೀ” ಎಂದು ಗುಡಗುತ್ತ, ಕವಡಿ ಕೈಗೆತ್ತಿಕೊಂಡು ಕುಲಕ್ಯಾಡ್ಸಿ ಕೆಳಗ ಹಾಕಿ, ಲೆಕ್ಕಾಚಾರ ಹಾಕಿದ.
“ನಾ ಒಂದ ತಾಯಿತಾ ಮಾಡಿ ಕೊಡ್ತಿನಿ, ಅದನ ನೀ ಕಟಗೋ.. ಅವ್ರ ನಾಯಿ ಕುನ್ನಿಗತೆ ಅಕ್ಕಾರ” ಎಂದ. “ಅಷ್ಟ ಮಾಡ್ರೀ ಅಜ್ಜರಾ, ಸಾವೂಮಟಾ ನಿಮ್ಮ ಹೆಸರ ಹೇಳಕೊಂಡ ಇರ್ತಿನಪಾ” ಎಂದು ಕೈಜೋಡ್ಸಿದ್ಳು.
“ಆ ತಾಯತಕ್ಕ ಎರ್ಡ ಸಾವಿರ ಕರ್ಚ ಅಕೈತಿ” ಎಂದು ಹೇಳಿದ.
“ಎರ್ಡಯಾಕ ರೀ.. ನಾಕ ಆದ್ರೂ ಆಗ್ಲಿ” ಎಂದು ಆ ಹೆಣಮಗಳು ಹುರಪಾಗಿ ಪೋಟೋದ ಮುಂದೆ ನೂರು ರೂಪಾಯಿ ಇಟ್ಟು ನಮಸ್ಕಾರ ಮಾಡಿದ್ಳು.
“ಮುಂದಿನ ಅಮವಾಸಿಗೆ ಬಾ” ಎಂದು ಈರಯ್ಯ ಅಕಿಗೆ ಹೇಳಿ ಕಳಿಸಿದ.

ನನಗ ಒಂದ ಜಾಗದಾಗ ಕುಂತಕುಂತ ಕಾಲ ಜುಮ್ಮ ಹಿಡದಂಗ ಆಗಿತ್ತು. ಹಂಗೊಮ್ಮೆ ಹಿಂಗೊಮ್ಮೆ ಕುಂಡಿ ಹೊಳ್ಳಾಡ್ಸಿ ಹೊಳ್ಳಾಡ್ಸಿ ಸಾಕಾಗಿತ್ತು. ಆದ್ರ ಕವಡಿ ಈರಯ್ಯ ಮಾಡು ಆಟಾ ನೋಡಾಕ ನನಗ ಆಗ ಭಾಳ ಮಜಾ ಮತ್ತ ಖುಷಿ ಆಗಿತ್ತು. ನಾ ಗಪ್ಪಚುಪ್ಪ ಕುಂತದ್ದ ಕಂಡ ನಮ್ಮ ಅಜ್ಜಿ ಜೀವಕ್ಕ ಒಂದೀಟ ಸಮಾಧಾನ ಅನಿಸಿತ್ತು. ಈರಯ್ಯನ ಮುಂದ ಬಂದ ಕುಂತ ಹಿಂಗತಿ ಸನ್ಮಂತ ಆಗ್ಯಾನ, ಈರಯ್ಯ ನನ್ನ ಮೊಮ್ಮಗನ ಮ್ಯಾಲ ನೆದರ ಚೆಲ್ಲಿದ್ರ ತೀರ ಪಾಡ ಅಕ್ಕಾನ, ಅನ್ನುವ ನಂಬಿಕಿ ಹೊತಗೊಂಡ ನಮ್ಮ ಅಜ್ಜಿ ಕುಂತಿದ್ಳು.
ಲಾಸ್ಟ್ ಲಾಸ್ಟಕ್ಕ ನಮ್ಮ ಪಾಳೆ ಬಂತು. ಅಷ್ಟೊತ್ತಿಗೆ ಈರಯ್ಯ ಕೋನಿ ಬಿಟ್ಟ ಎದ್ದ ಹೊರಗ ಹ್ವಾದ.. “ಅಜ್ಜಾರ ಪ್ರಸಾದ ಸ್ವೀಕರಸಾಕ ಹೋಗಿರ್ಬೇಕಂತ” ಒಬ್ಬರಂದ್ರ, ಮತ್ತೊಬ್ಬರು, “ಕುಂತ ಕುಂತ ಕಾಲ ಹಿಡ್ದಂಗ ಆಗಿರ್ತಾವ,ಒಂದೀಟ ನೆಡದಾಡಿ ಬರ್ತಿರ್ಬೇಕಂತ” ಮತ್ತೊಬ್ಬ ಹೇಳ್ತಿದ್ದ. ಇನ್ನೊಬ್ಬಾಕಿ “ನಮ್ಮ ಪಾಳೆ ಬರೂಕ ಅಜ್ಜಾರ ಹ್ವಾದ್ರಲ್ಲ, ನಮ್ಮ ನಶೀಬ ಭಾಳ ಸುಮಾರ ಐತಿ ನೋಡ” ಎಂದು ಹಳಹಳಿಸುತ್ತಿದ್ದಳು.
“ಅಜ್ಜಿ ಎಲ್ಲಿ ಹ್ವಾದ ಈ ಕವಡೆಪ್ಪಾ” ನನಗ ಕುಂತ ಕುಂತ ಸಾಕಾಗಿ ಅಂದೆ.
“ಏ ಯಪ್ಪಾ ಹಂಗೆಲ್ಲಾ ಕವಡೆಪ್ಪಾ ಗಿವಡೆಪ್ಪಾ ಅನಬ್ಯಾಡ, ಅವ್ರ ಕಿವಿಗೆ ಬಿದ್ದರ ಅವ್ರ ಸುಮ್ಮಕಿರಂಗಿಲ್ಲ, ಅಜ್ಜಾರ..ಅನ್ನು” ಅಂದ್ಳು.
ಕವಡೆಪ್ಪಾ ಅಂದ್ರೇನಾತ, ಅಂದ್ಯಾ?

“ನಿನ್ನ ಎಲ್ಲಿ ಕರ್ಕೊಂಡ ಹ್ವಾದ್ರೂ ಮಂಗ್ಯಾನ ಬುದ್ದಿನ ಬಿಡಬ್ಯಾಡ” ಎಂದು ಅಜ್ಜಿ ಕಣ್ಣ ಕಿಸದು ನನ್ನ ಮ್ಯಾಲ ಸಿಟ್ಟಿಗೆ ಬಂದ್ಳು. ಮೂಕದ್ಯಾವ್ರಗತೆ ಸುಮ್ಮನ ಕುಂತೆ. ಕವಡಿ ಈರಯ್ಯ ಹೊರಗ ಹ್ವಾದಂವ ಅರ್ಧ ತಾಸ ಆದ ಮ್ಯಾಲ ಪ್ರತ್ಯಕ್ಷನಾದ.
ನನ್ನ ಪಾಳೆ ಬಂತು. ನನ್ನ ನೋಡಿ
“ಇಂವ್ನ ಅನ.. ನಮ್ಮ ಪಾರ್ವತೆವ್ವನ ಮಗಾ? ಅಂದ
“ಹೌದ್ರಿ ಯಪ್ಪಾ ದೇವ್ರ” ಅಂದ್ಳು ಅಜ್ಜಿ.
“ಪಾರ್ವತೆವ್ವಂದ ಭಾಳ ಸಣ್ಣ ವಯ್ಯಸ್ಸು,ಹೋಗಿಬಿಟ್ಳು ಪಾಪ..” ಎಂದು ಅವ್ವನ ಸಾವಿನ ಕುರಿತು ಕಾರುಣ್ಯದ ಮಾತನ್ನಾಡಿದ. ಅಜ್ಜಿಗೆ ಈರಯ್ಯನ ಮಾತು ಕೇಳಿ ಕಣ್ಣಾಗಿದ್ ಕಣ್ಣೀರು ತಟಗೂಡಿದವು. ಮೆಲ್ಲಕಾಸ ಸೀರಿ ಸೇರಗಿಂದ ಕಣ್ಣ ತಿಕ್ಯಾಡಕೊಂಡ್ಳು.
“ಇರ್ಲೀ ಸುಮ್ನಿರ.. ಅಜ್ಜಿ.. ಎಲ್ಲರ್ದೂ ಒಂದಿಲ್ಲ ಒಂದಿನ ಪಾರ್ವತೆವ್ವ ಹ್ವಾದಕಡೆನ ಹೋಗೂದೈತಿ, ಯಾರ ಇಲ್ಲಿ ಚಿರಂಜೀವಿ ಪಡದ ಬಂದಿಲ್ಲಾ..ಸುಮ್ನಾಗ” ಅಂಥ ಈರಯ್ಯ ಅಜ್ಜಿನ ಸನ್ಮಂತ ಮಾಡಾಕ ಮಾತೊಂದು ಮಾತ ಹೇಳಿದ.
“ಇಂವಗೇನ ಸಮಸ್ಯಾ ಇತ್ತು” ಎಂದು ಕೇಳಿದ.

“ಇದ ಹುಡಗನ ಸಮಂದ ನಿನ್ನ ಹಂತ್ಯಾಕ ಬಂದಿನಪಾ.. ಭಾಳ ಮಂಗ್ಯಾನಂಗ ಮಾಡ್ತೈತಿ, ಸಾಲಿಗೆ ಹ್ವಾದ್ರೂ ಪುಸ್ತಾಕ ಒಂದ ಕಡೆ, ಸಾಲಿ ಒಂದ ಕಡೆ, ತನ್ನ ಹೆಸರ ತನಗ ಬರ್ಯಾಕ, ಬರಂಗಿಲ್ಲ, ಮನ್ನೆ ಮಾರು ಗಂಗವ್ವನ ಬಜಿ ಕದ್ದಾ,ಅಕಿ ಮನಿ ಮಟ ಬಂದು ಉಗಳಿ ಹ್ವಾದ್ಳು. ಗೌಡರ ಹ್ವಲದಾನ ಮಾವಿನ ಕಾಯಿ ಕದ್ದಾ.. ಅವ್ರು ಸಾವಿರ ರೂಪಾಯಿ ದಂಡಾ ಇಸ್ಕೊಂಡ್ರು, ಹೊಳಿಗೆ ಈಜಾಡಾಕ ಹೋಗಿ ಕುಲಕರ್ಣಿ ಸೀನಪ್ಪನ ಮಗನ ಮುಳಗಿಸಿ ಇನ್ನಟರಾಗ ಕೊಂದ ಹಾಕತಿದ್ದ, ದನದ ಗತೆ ಗುಡ್ಡ ಗುಡ್ ತಿರಗಾಡ್ತಾನ, ಗುಡ್ಡಕ ಹೋಗಿ ಜೇನ ಬಿಡಸಿ ತಂದ ಅದರ ಜಿಬಟ ಓನ್ಯಾಗ ಅಡ್ಯಾಡು ಹೆಣ್ಣ ಹುಡಗ್ಯಾರ ತಲಿಗೆ ಹಚ್ಚಿ ಸೊಂಟದ ಮ್ಯಾಲ ಭಾರಸ್ಕೊತಾನ, ನನ್ನ ಅಡಕಿ ಚಿಲ್ದಾನ ರೊಕ್ಕ ಕದಕೊಂಡ ಹೋಗಿ ಬರ್ಪಾ, ಬಂಬೈಯ ಮಿಟಾಯಿ ತಿಂದ, ಸಾಲದಕ್ಕ ಶೆಟ್ಟರ ಅಂಗಡ್ಯಾನ ಪೇಡೆ ಪಾಕಿಟ ಕದ್ದಕೊಂಡ ಹೋಗಿ, ಮೈಮ್ಯಾಲಿನ ಚರ್ಮಾ ಸುಲಸ್ಕೋತಾನ, ಹಿಂಗತಿ ಹುಚ್ಚನಗತೆ ಮಾಡ್ಕೊಂತ ಹೊಂಟೈತಿ, ನನಗ ಏನ್ ಮಾಡ್ಬೇಕ ಅನ್ನೂದ ಹತ್ತವಲ್ದಪೋ.. ನೀ ಏನರ ಒಂದ ದಾರಿ ಮಾಡಿಕೊಡು, ಇದನ ಒಂದೀಟ ದಾರಿಗೆ ತಗೊಂದ ಬಾ” ಎಂದು ಅಜ್ಜಿ ನನ್ನ ದಿಗ್ವಿಜಯದ ಪಟ್ಟಿಯನ್ನು ಈರಯ್ಯನ ಮುಂದೆ ಎಳಿಎಳಿಯಾಗಿ ಬಿಡಿಸಿ ಇಟಗೋತ ಮತ್ತೊಮ್ಮ ಕಣ್ಣ ಒದ್ದಿ ಮಾಡ್ಕೊಂಡ್ಳು.

ಕವಡಿ ಈರಯ್ಯ ಕವಡಿ ಬದಿಗೆ ಸರಿಸಿ ಇಟ್ಟು ನನ್ನ ಗೆಡ್ಡಿ ಮ್ಯಾಲ ಒಂದು ಇಕ್ಕರ್ಸಿದ. ಕಿವಿ ದಿಮಿದಿಮಿ ಅನ್ನಾಕತ್ತಿ. ಇನ್ನೊಂದ ಹೊಡತ ಬಿದ್ದಿದ್ರ ನನ್ನ ಚಡ್ಡಿ ತೊಯ್ತಿತ್ತೋ ಏನೋ? ಕಣ್ಣೀರು ತಟ ತಟ ನನ್ನ ಮಂಡ ಚಡ್ಡಿಯಲ್ಲಿ ಕಾಣುತಿದ್ದ ತೊಡಿ ಮ್ಯಾಲೆ ಜಿಟಿಜಿಟಿ ಮಳಿಯಂತೆ ಉದರುತ್ತಿದ್ದವು. ನಾ ಅಳುದ ಕಂಡು ನಮ್ಮ ಅಜ್ಜಿ ಹೊಟ್ಯಾಗ ಕಾರಕಲಿಸಿದಂಗ ಆಗತೊಡಗಿತು. ಏನೋ ನನ್ನ ಮೊಮ್ಮಗ ಅಂವ ಸರಿ ಆಗುವಂಗ ಒಂದ ತಾಯತಾ ಮಾಡಿ ಕೊಡ್ತಾನ, ಅಂತ ಅಂದಕೊಂಡಿದ್ಳು, ಆದ್ರ ಅಲ್ಲಿ ಆದದ್ದ ಬ್ಯಾರೆ ಆದಾಗ, “ಈ ಮೂಳ ನನ್ನ ಹಾಟ್ಯಾನ ಕೈಯಾಗ ತಂದ ಕೊಟ್ಟ, ಮೊಮ್ಮಗನ ಮುಂದ ಕುಂತ ನಾನ ಬಡಸಿದಂಗ ಆತಲಾ..?” ಎಂದು ಮನದಲ್ಲಿ ಮರಗತೊಡಗಿದ್ಳು. ಈರಯ್ಯನಿಗೂ ಏನೂ ಅನ್ನದೆ ನನ್ನ ರಮಿಸುತ್ತ ಸುಮ್ಮನಾಗು ಅಂತ ಹಲಬತೊಡಗಿದ್ಳು. ಅಲ್ಲಿ ಕುಂತವ್ರು ದಂಗಾಗಿದ್ರು. ಈ ಕವಡಿ ಈರಯ್ಯ ಅಜ್ಜಾರಿಗೆ ಈ ಪರಿ ಕೋಪ ಐತ್ಯಾ? ಅಂತ ಗೊತ್ತ ಆಗಿದ್ದೆ ನನ್ನ ಕಪಾಳಗೆಡ್ಡಿಗೆ ಗಜ್ಜ ಬಿದ್ದಾಗ.

ನಮ್ಮ ಅಜ್ಜಿಗೆ ಹಿಂಗ್ಯಾಕ ಹುಡಗನ ಬಡಿದೆಪ್ಪಾ.? ಅಂತ ಕೇಳಬೇಕಂತ ಅನಸಿದ್ರು ಕೆಳೂದ ಆಗಲಿಲ್ಲ. ನಾ ಯಂಕವ್ವನ ಮಾತ ಕೇಳಿ ಇಲ್ಲಿಗೆ ಸುಮ್ನ ಬಂದ್ಯಾ ಅಂತ ಮನಸನ್ಯಾಗ ಅಜ್ಜಿ ಭಾಳ ಮರಗಿದ್ಳು. ಈರಯ್ಯ ನನ್ನ ಯಾಕ ಬಡದಾ ? ಅಂತ ನನಗಷ್ಟ ಗೊತ್ತಿತ್ತು.

ಅವತ್ತ ಮಟಮಟಾ ಮದ್ಯಾನದಾಗ ಬಿಸಲಿಗೆ ಅಂಜಿ ಮನಿ ಬಿಟ್ಟ ಯಾರೂ ಹೊರಗ ಬರಲಾರ್ದ, ಮನ್ಯಾಗ ಕುಂತಗೊಂದ ಕೈಗೆ ಸಿಕ್ಕದ ರಟ್ಟನೋ, ಪುಸ್ತಕನೋ ತಗೊಂದ ಗಾಳಿ ಬೀಸ್ಕೋತ ಕುಂತಿದ್ರು. ಕವಡಿ ಈರಯ್ಯ ಮಡ್ಡಿ ಬಸಪ್ಪನ ಗುಡಿ ಹಾದ್ಯಾಗಿದ್ದ ಗಡಚ ಕಂಟಿ ಕಡೆ ತಂಬಗಿ ತಗೊಂದ ಹೊಂಟಿದ್ದ. ನಾನು, ಪೀರ್ಯಾ ಅದ ಕಂಟ್ಯಾಗ ಇದ್ದ ಜೇನ ಬಿಡಸಾಕ ಹೋಗಿದ್ದಿವ.. ಈರಯ್ಯನ ಹಿಂದ ಖಾಸಿಂನ ಹೆಂತಿ ಅತ್ತಾಗ ಇತ್ತಾಗ ಮಂದಿ ನೋಡ್ಕೋತ ಬರೂದ ನಮ್ಮ ಗಮನಕ್ಕ ಬಂತು. ನನಗಿಂತ ಎರಡ ವರ್ಷ ದೊಡ್ಡಾಂವ ಇದ್ದ ಪಿರ್ಯಾಗ ಎಲ್ಲಾ ಗೊತ್ತ ಅಕ್ಕಿತ್ತು. “ಲೇ ..ಲೇ ಸುಮ್ನ ಇರ ಈಗ ಇಲ್ಲೊಂದ ಮಜಾ ನೆಡಿತೈತಿ” ಅಂತ ಹೇಳಿ ನನ್ನ ಬಾಯಿ ಮಾಡದಂಗ ಸೂಚನಾ ಕೊಟ್ಟ.

ಕವಡಿ ಈರಯ್ಯ ಮತ್ತ ಖಾಸಿಂನ ಹೆಂತಿ ಮೈಮ್ಯಾಲಿನ ಬಟ್ಟಿ ಕಿತ್ತ ಒಗದ ಹಾಂವ ತಳಕ ಬಳಕ ಬಿದ್ದಂಗ ಬಿದ್ದರು. ಅವರ ಮಾಡು ಆಟಾ ನೋಡಿ, ನೋಡಿ ನಮಗ ಮಜಾ ಅನಸಾಕತ್ತಿ. ನನಗಿಂತ ಉಡಾಳ ಇದ್ದ ಪಿರ್ಯಾ ನೋಡುದ ಬಿಟ್ಟ ಜೇನ ಹುಳಕ್ಕ ‘ರಿಪ್’ ಅಂತ ಕಲ್ಲ ವಗದ. ಎಲ್ಲ ಹುಳಗೊಳ ದಪಾದಪಾ ಅಂತ ಕವಡಿ ಈರಯ್ಯನ ದುಬ್ಬದ ಮ್ಯಾಲ, ಖಾಸಿಂನ ಹೆಂತಿ ಎದಿಮ್ಯಾಲ ಬಿದ್ದಾಗ ಸತ್ತಿವೋ.. ಕೆಟ್ಟಿವೋ ಅಂತ ಮೈಯಾಗಿನ ಅರಬಿ ಕಬರ ಇಲ್ಲದ ದಿಕ್ಕಾಪಾಲಾಗಿ ಓಡುದನ್ನ ನೋಡಿ ನಾನು ರಪ್ಯಾ ಉಳ್ಳಾಡಿ ಉಳ್ಳಾಡಿ ನಗತೊಡಗಿದೆವು. ಕವಡಿ ಈರಯ್ಯ ನಮಗ ಏನೂ ಮಾಡದ ಪರಸ್ಥಿತಿಯಲ್ಲಿದ್ದ. ಲುಂಗಿ ಸತಗೊಂದ ಹುಳಾ ಜಾಡಸ್ಕೋತ ಹೋಗುದ ಅಂವಗ ಹೆಚ್ಚಾಗಿತ್ತು. ನಮಗ ನಕ್ಕ ನಕ್ಕ ಸಾಕಾಗಿತ್ತು.

ಈರಯ್ಯಗ ಅವತ್ತಿದ್ದ ನನ್ನ ಮ್ಯಾಲಿನ ಕೋಪ ಕಪಾಳಗೆಡ್ಡಿಗೆ ಬಡದ ತಕ್ಕಮಟ್ಟಿಗೆ ತಿರಿಸ್ಕೊಂಡಿದ್ದ.
ಎಂಥದ್ದೋ ಒಂದ ತಾಯಿತಾ ಮಾಡಿ, ಮೂರ್ನಾಲ ಸರತಿ ಕವಡಿ ವಗದಂಗ ಮಾಡಿ, ನಮ್ಮ ಅಜ್ಜಿನ ಸಮದೂತಕ ಕೊಟ್ಟ, ಮತ್ತ ನಮ್ಮ ಅಜ್ಜಿಗೆ ಅಂವನ ಮ್ಯಾಲ ನಂಬಿಕಿ ಬರುವಂಗ ನಾಟಕ ಮಾಡಿದ್ದ.
ಮನಿಗೆ ಬರುಮಟಾ ನನ್ನ ಕಿವಿ ಗಡ್ಡಿ ಉರಿತಿತ್ತು. ಅಜ್ಜಿ ಕಟಗೋ ಅಂತ ಕೊಟ್ಟ ತಾಯತಾ ತಂಗೊಂಡ ಹೋಗಿ ಮನಿ ಗ್ವಾಡಿ ಹಿಂದ ವಗೆದು ಅದರ ಮ್ಯಾಲ ಉಚ್ಚಿ ಹೋದು ಈರಯ್ಯನ ಮ್ಯಾಲ ಸೇಡು ತೀರಿಸಿಕೊಂಡಿದೆ. ಆದರೂ ಅಂವನ ಮ್ಯಾಲಿನ ಸಿಟ್ಟು ನನಗ ಕಮ್ಮಿ ಆಗಿರಲಿಲ್ಲ.

ಒಂದು ದಿನ ಮದ್ಯಾನ “ಕವಡಿ ಈರಯ್ಯನ ದೆವ್ವಗೊಳ ಹೊತ್ತ ಹೊತ್ತ ವಗದ ಕೊಂದಾವಂತ, ಅಂವ ರಕ್ತಾ ಕಾರ್ಕೊಂಡ ಸತ್ತಾನಂತ” ಅನ್ನು ಸುದ್ದಿ ತಂದ ಅಜ್ಜಿ ನನ್ನ ಕಿವ್ಯಾಗ ಹಾಕಿದಾಗ ನನ್ನ ಕೋಪ ಇನ್ನೂ ಆರಿರಲಿಲ್ಲ. ಇಡೀ ಊರಿಗೂರೆ ಕವಡಿ ಈರಯ್ಯನ ಸಾವು ತಮ್ಮ ಮನಿಯ ಸಾವೇ ಎಂಬಂತೆ ದುಃಖ ಪಡುತ್ತಿದ್ದರು.

ನನಗೆ ಈರಯ್ಯ ಸತ್ತರೂ ಅಂವನ ಮ್ಯಾಲಿನ ಕೋಪ ಇನ್ನೂ ತಣ್ಣಗ ಆಗಿರಲಿಲ್ಲ. ಅದಕ್ಕ ಕವಡಿ ಈರಯ್ಯನ ಗೋರಿಯ ಮೇಲೆ ನಾನು ಮತ್ತು ಪಿರ್ಯಾ ಆಗಾಗ ಹೋಗಿ ಉಚ್ಚಿ ಹೋದು, ಸಂಡಾಸ ಮಾಡಿ ಅಂವನ ಮೇಲಿನ ನಮ್ಮ ಸಿಟ್ಟು ದಿನಾದಿನಾ ತೀರಿಸಿಕೊಂಡೆವು.

ತಿರುಪತಿ ಭಂಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x