ಸ್ನೇಹಲೋಕವೋ!! ಭ್ರಮಾಲೋಕವೋ?: ಚೈತ್ರಭೂಲಕ್ಷ್ಮೀ

ಸ್ನೇಹವೆಂಬುದು ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ. ಯಾವಾಗ ನಾವು ಚೌಕಟ್ಟುಗಳನ್ನು ಮೀರಿ ಮತ್ತೊಬ್ಬ ವ್ಯಕ್ತಿಯನ್ನು ತನ್ನಂತೆ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅಲ್ಲಿ ಸ್ನೇಹಬೀಜ ಮೊಳೆಯುತ್ತದೆ. ಕಾಲಚಕ್ರ ಉರುಳಿದಂತೆ, ಎಳೆವಯಸ್ಸಿನ ಬೆಸ್ಟೆಸ್ಟ್‌ ಆಗಿದ್ದವರು ಅಪರಿಚಿತರಾಗಿ ಹೋಗಬಹುದು. ಅಷ್ಟೇನೂ ಒಡನಾಟವಿಲ್ಲದವರ ಜತೆಗೆ ಗಾಢ ಬಾಂಧವ್ಯ ಬೆಸೆದು ಹೋಗಬಹುದು ಅಥವಾ ಹೊಸ ಪರಿಚಯವಾಗಿ ಅವರು ನಮ್ಮದೇ ಛಾಪೆನ್ನುವಷ್ಟು ಒಂದಾಗಿ ಬಿಡಬಹುದು. ಸ್ನೇಹವಿಲ್ಲದ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ವಯಸ್ಸಿನಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ನೇಹ ಇರುತ್ತದೆ. ಎಳೆ ವಯಸ್ಸಿನಲ್ಲಿ ಎಂಜಲು ಮಾಡಿ ತಿಂದ ಸಂಭ್ರಮ, ಕುಂಟೇ ಬಿಲ್ಲೆಯಾಟವಾಡುವಾಗ ಎಡವಿಬಿದ್ದು ಗುದ್ದಾಡಿ ಮತ್ತೆ ನಕ್ಕ ಖುಷಿ, ಬೆಳೆದಂತೆ ಸ್ನೇಹಿತೆಗೆ ಬಂದ ಪ್ರೇಮ ಪತ್ರವನ್ನು ಗುಂಪಾಗಿ ಗುಟ್ಟಾಗಿ ಓದಿದ ಸಂತೋಷ, ಒಟ್ಟಾಗಿ ಕೂತು ಓದು-ಬರಹದ ನೆಪವೊಡ್ಡಿ ಅರ್ಥಕ್ಕೇ ಬಾರದ ಮಾತುಗಳ ಹರಟೆಯ ಸಮ್ಮೇಳನ, ವಯಸ್ಸಾದಂತೆ ಮನದ ಮಾತು ತೋಡಿಕೊಳ್ಳುವ ಆಸರೆ… ಹೀಗೆ ಸ್ನೇಹವೆಂಬ ಭಾವತಂತು ಬುದ್ಧಿ ಅರಿತಂದಿನಿಂದಲೂ ನಮ್ಮೊಡನೆ ಅಮೃತವಾಹಿನಿಯಾಗಿ ಎದೆಯಿಂದ ಎದೆಗೆ ಹರಿಯುತ್ತಲೇ ಇದೆ.

ಸ್ನೇಹವಿಲ್ಲದ ಸಂಬಂಧವೇ ಇಲ್ಲ
ಬದುಕಿನ ಯಾವುದೇ ಸಂಬಂಧ ಅಥವಾ ಪಾತ್ರ ಪ್ರಭೇದಗಳಿರಲಿ, ಒಂದು ಜೀವದ ಮಿಡಿತ ಇನ್ನೊಂದು ಜೀವಕ್ಕೆ ತಾಕಿದರೆ ಅಲ್ಲಿ ಸ್ನೇಹವುಂಟಾಗುತ್ತದೆ. ಮನದ ಮರುಗುವಿಕೆಯನ್ನು ಕಂಡುಹಿಡಿದು ತನ್ನ ನಾಲಗೆಯಿಂದ ಪ್ರೇಮ ತೋರಿಸುವ ನಾಯಿಮರಿಯ ಪ್ರೇಮವಾಗಲಿ, ತಡರಾತ್ರಿ ಜೊತೆಗಿದ್ದು ಮನೆವರೆಗೂ ಮಾತಾಡಿ, ನಾಳೆ ಸಿಗೋಣವೆನ್ನುವ ಸಹೋದ್ಯೋಗಿಯ ಕಾಳಜಿಯಾಗಲಿ, ಬಸ್ಸಿನಲ್ಲಿ ಜೋತಾಡಿ ನಿಲ್ಲಲ್ಲಾಗದ ಮುದುಕಿಗೆ ಮಂದಹಾಸ ಬೀರಿ ಕುರ್ಚಿ ಬಿಟ್ಟುಕೊಡುವುದಾಗಲಿ ಎಲ್ಲವೂ ಸ್ನೇಹದ ನೂಲನ್ನು ಬೆಸೆದಿರುವ ಅಕ್ಕರೆಯ ಕೊಂಡಿಯೇ.

ಬಿಡದ ನಂಟು
ಸ್ವಾರಸ್ಯವೆಂದರೆ ಸ್ನೇಹ ಎಂಬ ಪದಕ್ಕೆ ಜಿಡ್ಡು, ಜಿಗುಟು, ಎಣ್ಣೆ ಎಂಬ ಅರ್ಥಗಳನ್ನೂ ನಿಘಂಟು ಸೂಚಿಸುತ್ತದೆ. ಬಹುಶಃ ಜಿಡ್ಡಿನ ಅನ್ವರ್ಥವೇ ಆಗಿ ಸ್ನೇಹವೆಂಬ ಪದ ರೂಪುಗೊಂಡಿರಬಹುದು. ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಸಾಧ್ಯವಾಗದ, ಯಾವ ನಿರೀಕ್ಷೆಗಳನ್ನೂ, ಯಾವ ವಿಮರ್ಶಾತ್ಮಕ ಧೋರಣೆಗಳನ್ನೂ ಹೇರಿಕೊಳ್ಳದೆ ಹದವಾಗಿ ಹೃದ್ಯವಾಗುವ ಹೆಗಲು ಸ್ನೇಹ. ಮುರಿದ ಬೇಲಿಯೊಳಗಿರುವ ಮೃದು ಹೂವನ್ನು ಮೆಚ್ಚುವ, ಸ್ವಭಾವದ ಓರೆಕೋರೆಗಳನ್ನು ಒಪ್ಪಿಯೇ ನಮ್ಮನ್ನು ಅಪ್ಪುವ ಸಾಧ್ಯತೆ ಸ್ನೇಹಭಾವಕ್ಕೆ ಮಾತ್ರ ಸಾಧ್ಯ.

ಒಬ್ಬ ಒಳ್ಳೆಯ ಸ್ನೇಹಿತ/ತೆ ಕನ್ನಡಿಯಂತೆ ನಮ್ಮನ್ನು ಗ್ರಹಿಸಬಲ್ಲವರು ಮತ್ತು ಕನ್ನಡಿಯಂತೆ ನಮಗೆ ಜತೆಯಾಗಬಲ್ಲವರು. ಹೊಗಳುಭಟ್ಟರಾಗಬೇಕಿಲ್ಲ, ತೆಗಳಿ ತಳ್ಳಿಹಾಕಬೇಕಿಲ್ಲ. ನಾವಿದ್ದಂತೆ, ನಮ್ಮಂತೆ ಸರಿಯಾದರೆ-ಸರಿ ತಪ್ಪಾದರೆ-ತಪ್ಪು ಎನ್ನುವ ಅಧಿಕಾರ ಇರುವುದು ಸ್ನೇಹವಿದ್ದಾಗ ಮಾತ್ರ.

ಸ್ನೇಹವೆಂಬುದು ರಕ್ತ ಸಂಬಂಧವಲ್ಲದ್ದು, ಪ್ರೀತಿ-ಪ್ರೇಮವಾಗದ್ದು, ಗಂಡು-ಹೆಣ್ಣಿನ ನಡುವೆ ಇಲ್ಲದ್ದು, ಒಂದೇ ಸಿದ್ಧಾಂತ-ಮೌಲ್ಯಗಳನ್ನುಳ್ಳದ್ದು ಎಂಬ ಸಂಕುಚಿತ ಗ್ರಹಿಕೆಗಳಿಗೆ ನಾವು ಇಂದು ಬಲಿಯಾಗಿದ್ದೇವೆ. ಈಗಿನ ಸ್ಥಿತಿ ನೋಡಿ. ‘ಗೆಳೆಯರೆಂದರೆ ಯಾರು, ಗೆಳೆಯರೇಕೆ ಬೇಕು’ ಎಂದು ಕೇಳಿದಾಗ ಬಹುತೇಕವಾಗಿ ವ್ಯಕ್ತವಾಗುವ ಉತ್ತರವೆಂದರೆ… ದುಃಖ ಮರೆಸುವ, ಕಷ್ಟಕಾಲದಲ್ಲಿ ನೆರವಾಗುವ ಗೆಳೆಯರಿದ್ದರೆಷ್ಟು ಚೆನ್ನ ಎಂಬುದು. ಬಹುಶಃ ಈ ಮಾತುಗಳು ಅವರ ಬಾಯಿಯಿಂದ ಯೋಚಿಸದೆಯೇ ಹೊರಬರುವಂಥವುಗಳೋ ಅಥವಾ ನಿರ್ಲಕ್ಷ್ಯದಿಂದಲೇ ಉದುರುವಂಥವುಗಳೋ… ಸ್ನೇಹ ಎಂಬದು ಕೇವಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ. ಅಕ್ಕ-ತಂಗಿ, ಅಣ್ಣ-ತಮ್ಮ, ಅಪ್ಪ-ಮಗ, ಅಜ್ಜಿ-ಮೊಮ್ಮಕ್ಕಳು, ಶಿಕ್ಷಕರು-ವಿದ್ಯಾರ್ಥಿಗಳು, ಹೆಣ್ಣು-ಗಂಡು, ಎಲ್ಲ ಸಂಬಂಧಿಕರ-ಸಂಬಂಧಗಳ ನಡುವೆಯೂ ಮೂಡುವಂತದ್ದು ಕೊನೆಯವರೆಗೂ ಉಳಿದುಕೊಳ್ಳುವುದು.

ಗೆಳೆತನದ ಪತನ
ಗೆಳೆತನವೆಂಬ ಬಂಧದ ಮೂಲಕ್ಕೇ ಕೊಡಲಿ ಹಾಕುವ, “ಏನಪ್ಪಾ ಅವ್ನು, ಒಂದ್ನೂರು ರೂಪಾಯಿ ಕೇಳ್ದಾಗ ಇಲ್ಲಾಂತಾನೆ\ಳೆ… ಎಂಥಾ ಫ್ರೆಂಡಪ್ಪಾ ಅವ್ಳು” ಅಂತ ಫ್ರೆಂಡ್‌ಶಿಪ್ ಅನ್ನೋ ಮಧುರ-ಪವಿತ್ರ ಸಂಬಂಧವನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸುವ ಮಂದಿಯ ನಡುವೆ ಗೆಳೆತನವನ್ನೆಲ್ಲಿ ಹುಡುಕೋದು ಎಂಬ ಒಂದಿಷ್ಟು ಗೊಂದಲಗಳೂ ಆಗಾಗ್ಗೆ ಯಾರಿಗಾದರೂ ಕಾಡಿದ್ದಿರಬಹುದು.
ನಾವಿಬ್ರು ಜಸ್ಟ್‌ ಫ್ರೆಂಡ್ಸ್‌ ಅಷ್ಟೆ. ಬೇರೇನೂ ಅಲ್ಲ, ಗಂಡು-ಹೆಣ್ಣು ಇಬ್ರು ಸ್ನೇಹಿತರಾಗಿರಕ್ಕೆ ಸಾಧ್ಯವೇ ಇಲ್ಲ, ಅವ್ರ ರೂಟೇ ಬೇರೆ ನಮ್ದೇ ಬೇರೆ ಎಂಬಿತ್ಯಾದಿ ಮಾತುಗಳನ್ನು ಕೇಳಿದಾಗ ಸ್ನೇಹವಿಲ್ಲದೇ ಸಂಬಂಧ ಇರತ್ತಾ ಎಂಬ ಪ್ರಶ್ನೆ ಮೂಡುತ್ತದೆ.ಒಬ್ಬ ಹುಡುಗ- ಒಬ್ಬ ಹುಡುಗಿ ಅಥವಾ ಒಬ್ಬ ಮಧ್ಯ ವಯಸ್ಕ ಪುರುಷ-ಮಹಿಳೆ ಸನ್ಮನದ ಮಿತ್ರರು ಅಂತ ಸಮಾಜದ ದೃಷ್ಟಿಯಲ್ಲಿ ಅನ್ನಿಸಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕಾಗುತ್ತದೆ. ಇಲ್ಲಿ ಗೆಳೆತನದ ಮಧ್ಯೆ ಲಿಂಗಭೇದ ಕಾಣಿಸಿಕೊಂಡಾಗ ಬಹುಶಃ ಅದು ಗೆಳೆತನದ ತಾಕತ್ತಿಗೆ ಸವಾಲು ಕೂಡ ಹೌದು, ಅಗ್ನಿಪರೀಕ್ಷೆಯೂ ಹೌದು.

ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಸಂಕೀರ್ಣವಾಗುತ್ತಿರುವ ಈ ಯುಗದಲ್ಲಿ, ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿರುವ ಈ ಕಾಲದಲ್ಲಿ, ಅದೆಲ್ಲಿಂದ ಈ ಗೆಳೆಯನನ್ನು- ಗೆಳತಿಯನ್ನು ಸೃಷ್ಟಿಮಾಡಿದನೋ ಆ ಭಗವಂತ… ತಪಸ್ಸು ಮಾಡಿದರೂ ಸಿಗಲಾರದ ಆ ಒಂದು ಸ್ನೇಹದ ಕುಡಿ ನಮ್ಮ ಜೀವನವನ್ನು ಅದೆಷ್ಟು ಸುಂದರವಾಗಿಸುತ್ತಿದೆ…!!!

ಸ್ನೇಹಿತರ ಬಗ್ಗೆ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೇಹಿತರ ದಿನವು ನಿಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ.

ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ. 2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಇಡೀ ವಿಶ್ವದ ಜನತೆ ಈ ದಿನವನ್ನು ಆಚರಿಸುತ್ತಿದೆ.

ಏನಪ್ಪಾ, ಇಡೀ ವಿಶ್ವಾನೇ ನಮ್ಮ ಮುಷ್ಠಿಯಲ್ಲಿಟ್ಕೋಬೌದು ಅನ್ನೋ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ನಮ್ಮ ಸಂಭ್ರಮವನ್ನ ಆವರಿಸಿಕೊಂಡಿದೆ. ಎಲ್ಲರೂ ನೋಡಿರಬಹುದು ಗೆಳೆಯರ ಬರ್ತ್-ಡೇ, ಫ್ರೆಂಡ್ ಶಿಪ್-ಡೇ, ಮದರ್ಸ್-ಡೇ, ಇಂಡಿಪೆಂಡೆಂಟ್ಸ್-ಡೇ ಯಾವುದೇ ಡೇ ಆಗಲಿ ವಾಟ್ಸಾಪ್ ಸ್ಟೇಟಸ್, ಫೇಸ್‌ಬುಕ್‌ ಪೋಸ್ಟ್‌, ಇನ್ಸ್ಟಾಗ್ರಾಮ್ ಇತರೆ ಆ್ಯಪ್ ಗಳಲ್ಲಿ ತೋರಿಸಿಕೊಳ್ಳುವುದರ ಮುಖಾಂತರ ಆಚರಣೆ ಮಾಡುತ್ತದ್ದಾರೆ. ಜೀವನ ಬರೇ ಯಾಂತ್ರಿಕವಾಗುತ್ತಿದೆಯಲ್ಲ… ಸ್ನೇಹಿತರು, ಕುಟುಂಬಸ್ಥರು ಯಾರೇ ಆಗಲೀ ಗುಂಪಾಗಿದ್ದರೂ, ಜೊತೆಗೂಡಿದರೂ ಆನ್ಲೈನ್ ಅಲ್ಲಿ ಬಿಸಿಯಾಗಿರುತ್ತಾರೆ. ಈ ಉಪಕರಣಗಳು, ತಂತ್ರಜ್ಞಾನಗಳು ಮನುಷ್ಯರ ನಡುವೆ ಗೋಡೆಯನ್ನು ಕಟ್ಟುತ್ತಿವೆ ಎಂದು ಪ್ರಶ್ನೆ ಮೂಡಿಬರುತ್ತದೆ. ತಮ್ಮ ಭಾವನೆಗಳನ್ನು ಸೋಶಿಯಲ್ ಮೀಡಿಯಾ ಮುಖಾಂತರ ವ್ಯಕ್ತಪಡಿಸುವ ಜಗತ್ತು ಭೌತಿಕವಾಗಿ ಆನಂದಕರ ಜೀವನವನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಸಂಬಂಧಗಳನ್ನು ನಾಶಮಾಡುತ್ತಿದೆ. ದುಡಿತವೇ ಮುಖ್ಯವಾದಾಗ ಗೆಳೆತನದ ಬಂಧ ಸಡಿಲವಾಗುತ್ತಿದೆಯಲ್ಲ…?! ಸ್ನೇಹವೆಂಬೊಂದು ಆತ್ಮೀಯ ಅನುಬಂಧ ಸಣ್ಣ ಕೂದಲೆಳೆಯ ಮೂಲಕ ಎರಡು ಮನಸ್ಸುಗಳನ್ನು ಅತ್ಯಂತ ಕ್ಷೀಣವಾಗಿ ಬೆಸೆಯುತ್ತಿದೆ. ಹಾಗಾಗಬಾರದು. ಮಾನವ ಸಂಘಜೀವಿ ನಾವೆಲ್ಲಾ ಸ್ನೇಹದ ಕಡಲಿನ ಪಯಣಿಗರೇ ಒಂದಿಲ್ಲೊಂದು ರೀತಿಯಲ್ಲಿ ಸ್ನೇಹದ ರುಚಿ ಸವಿದವರೇ, ಪ್ರಯೋಜನ ಪಡೆದವರೇ. ಪಡೆದ-ಪಡೆಯುತ್ತಿರುವ ನಮ್ಮನುಭವವನ್ನು ಈಗ ಮನನ ಮಾಡಬೇಕಿದೆ. ಏತಿ ಎಂದರೆ ಪ್ರೇತಿ ಎಂದು ಕಲಹ-ಮನಸ್ತಾಪಗಳು ಹೆಚ್ಚಾಗುತ್ತಿರುವ, ಒಬ್ಬರ ಮೇಲೊಬ್ಬರ ಕೆಸರೆರಚಾಟವು ಹಬ್ಬಿಕೊಳ್ಳುತ್ತಿರುವ ಇಂದಿನ ಸಾಮಾಜಿಕ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ನಂದನದ ತುಣುಕಾದ ಸ್ನೇಹ ಮನೋಭಾವವನ್ನು ಹರಡಬೇಕಿದೆ. ಎದೆಯೆದೆಗಳ ನಡುವೆ ಮುರಿಯುತ್ತಿರುವ ಸೇತುವೆಗಳನ್ನು ಮರುನಿರ್ಮಿಸಲು ಸ್ನೇಹಮಯ ವಾತಾವರಣದ ಅಗತ್ಯವಿದೆ. ಯಾವುದೇ ಸಂಕುಚಿತ ಮನೋಭಾವವಿಲ್ಲದೆ ಮುಕ್ತವಾಗಿ ನಮ್ಮ ಸ್ನೇಹಹಸ್ತವನ್ನು ಎಲ್ಲರಿಗೂ ಚಾಚಬೇಕಿದೆ. ಬಾಂಧವ್ಯ ಬೆಸೆಯುವಿಕೆಗೆ ಮೊದಲು ಸ್ನೇಹಭಾವ ಅಗತ್ಯ.

ಚೈತ್ರಭೂಲಕ್ಷ್ಮೀ, ಬೆಂಗಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x