ಅಂಜದೆ ಮುನ್ನುಗ್ಗುತ್ತಿರು: ಪ್ರೊ ಸುಧಾ ಹುಚ್ಚಣ್ಣವರ

ಪ್ರತಿಯೊಬ್ಬ ಮನುಷ್ಯ ತನ್ನ ಬಾಳ ಹಾದಿಯಲ್ಲಿ ಹಲವಾರು ರೀತಿಯ ಏಳು ಬೀಳುಗಳನ್ನು ಕಾಣುತ್ತಾ ಸಾಗುತ್ತಾನೆ, ಕಷ್ಟ ಸುಖ ನೋವು ನಲಿವು ಹೀಗೆ ಹಲವಾರು ರೀತಿಯ ವೈಪರೀತ್ಯಗಳನ್ನು ಜೀವನದ ವಿಭಿನ್ನ ಸನ್ನಿವೇಶಗಳಲ್ಲಿ ಎದುರಿಸುತ್ತಾ ಸಾಗುವ ಮನುಷ್ಯ ಕೆಲವೊಮ್ಮೆ ಜೀವನದ ಕಹಿ ಘಟನೆಗಳಿಂದ ವಿಚಲಿತನಾಗಿ ಬಿಡುತ್ತಾನೆ. ಮುಂದೇನು ಮಾಡಬೇಕು ಎಂಬ  ವಿಚಾರವೇ ತೋಚದಂತಾಗಿ ಗೊಂದಲಕ್ಕೀಡಾಗುತ್ತಾನೆ. ಆದರೆ ವಾಸ್ತವದಲ್ಲಿ ಯಾವುದೇ ಒಂದು ಸಮಸ್ಯೆಗೆ ಚಿಂತೆ ಮಾಡುವುದು ಪರಿಹಾರವಲ್ಲ ಬದಲಾಗಿ ಆ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಾ ಸಾಗುವುದೇ ಮನುಷ್ಯ ಧರ್ಮವಾಗಬೇಕು ಕಾರಣ ಸೃಷ್ಟಿಯ ಎಲ್ಲ ಜೀವರಾಶಿಗಳಲ್ಲಿ ಮನುಷ್ಯ ವಿಶೇಷ ಹಾಗೂ ವಿಶಿಷ್ಟ ಎನಿಸಿಕೊಂಡಿದ್ದಾನೆ ಅವನಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾಗಿ ಸಮಚಿತ್ತದಿಂದ ಸದ್ಬಳಕೆ ಮಾಡುತ್ತಾ ಹೋದರೆ ಯಾವುದೂ ಕೂಡ ಅಸಾಧ್ಯವೆಂಬುದೇ ಇಲ್ಲ.

ಈ ಜಗತ್ತು ಕಂಡ ಹಲವಾರು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅವಲೋಕಿಸಿದಾಗ ಅವರೆಲ್ಲರ ಅತ್ಯುನ್ನತ ಸಾಧನೆಗೆ ಬಾಹ್ಯ ಪ್ರೇರಕಗಳಿಗಿಂತ ಹೆಚ್ಚು ಆಂತರಿಕವಾಗಿರುವ ಅವರ ಮನೋ ಧೈರ್ಯವೇ ಅವರ ಆದರ್ಶ ವ್ಯಕ್ತಿತ್ವಕ್ಕೆ ಅವರ ಸಾಧನೆಗೆ ದಾರಿ ದೀಪವಾಗಿತು. ಇದೆಲ್ಲವನ್ನೂ ಗಮನಿಸುತ್ತಾ ಹೋದರೆ ನಮ್ಮ ಸುತ್ತಮುತ್ತಲೂ ಎಲ್ಲವೂ ನಮಗೆ ಒಳಿತಾಗುವ ಸಂಗತಿಗಳೇ ಇರುವುದಿಲ್ಲ ಆದರೆ ಆಯ್ಕೆಗಳು ಮಾತ್ರ ನಮಗೆ ಬಿಟ್ಟಿದ್ದು.! “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎನ್ನುವಂತೆ  ಉತ್ತಮರ ಸಹವಾಸವೇ ನಮ್ಮ ವ್ಯಕ್ತಿತ್ವಕ್ಕೆ ಕೆಲವೊಮ್ಮೆ ಮೆರುಗನ್ನು ತಂದುಕೊಡುವಂತಹದ್ದು. ಈ ಜಗದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಏನೇ ಬಂದರೂ ಅದೆಲ್ಲವನ್ನೂ ಸಮಚಿತ್ತದಿಂದ ಎದುರಿಸಬೇಕು ಎಂಬ ಮಾತಿಗೆ ಅರ್ಥಪೂರ್ಣವಾಗಿ ಹನ್ನೆರಡನೇ ಶತಮಾನದ ಮಹಾನ್ ಶರಣೆ ಅಕ್ಕಮಹಾದೇವಿಯ ಈ ವಚನ ನಮ್ಮಲ್ಲಿ ಅಂಜಿಕೆಯನ್ನು ದೂರ ಮಾಡಿ ಮನೋಧೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗುವಂತಿದೆ ಅದೆಂದರೆ,  

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

ಬೆಟ್ಟ ಕಾಡು ಎಂದ ಮೇಲೆ ಮೃಗ ಪಕ್ಷಿಗಳು  ಸಾಮಾನ್ಯವಾಗಿರುತ್ತವೆ. ಹಾಗೆಯೇ ಸಮುದ್ರ ಎಂದ ತಕ್ಷಣ ನೊರೆ ತೆರೆಗಳು ಬರುವುದು ಸಾಮಾನ್ಯ. ಸಂತೆಯೆಂದರೆ ಹಲವಾರು ಜನ ಒಂದು ಕಡೆ ಸೇರುವುದರಿಂದ ಶಬ್ದ ಎನ್ನುವುದು ಸಾಮಾನ್ಯ ಹಾಗೆಯೇ ಈ ಜಗತ್ತಿನಲ್ಲಿ ನಾವೆಲ್ಲ ಹುಟ್ಟಿದ್ದೇವೆ ಎಂದ ಮೇಲೆ ಎಷ್ಟೋ ಸಂದರ್ಭದಲ್ಲಿ ಸ್ತುತಿ ನಿಂದೆಗಳು ಬಂದೇ ಬರುತ್ತವೆ ಆದರೆ ಅದ್ಯಾವುದಕ್ಕೂ ನಾವು ವಿಚಲಿತರಾಗದೆ ಕೋಪ ತಾಪಗಳಿಗೆ ಒಳಗಾಗದೆ ಸಮಾಧಾನಿಯಾಗಿರಬೇಕು ಎಂಬ ತಿಳಿವಳಿಕೆಯ ಮಾತು ಎಲ್ಲರ ಜೀವನಕ್ಕೂ ದಾರಿದೀಪವಾಗುವುದು. ಪ್ರಪಂಚದಲ್ಲಿ ಸುತ್ತಲೂ ಒಳ್ಳೆಯದು ಇದೆ ಹಾಗೆಯೇ ಕೆಟ್ಟದ್ದು ಸಹ ಇದೆ ಆದರೆ  ಯಾವ ದಾರಿಯಲ್ಲಿ ಹೋದರೆ ನಮ್ಮ ಜೀವನ ಸಾರ್ಥಕ ಎಂಬ ಅಂಶವನ್ನು ನಾವು ಮನಗಾಣಬೇಕು. ಇಲ್ಲವಾದರೆ ದಿಕ್ಕು ದಾರಿಗಳನ್ನು ಮರೆತು ಹೋದರೆ ಬದುಕು ಸೂತ್ರವಿರದ ಗಾಳಿಪಟ ದಂತಾಗುತ್ತದೆ. ಯಾರೋ ನಮ್ಮನ್ನು ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗದೆ ಆ ಹೊಗಳಿಕೆ ತೆಗಳಿಕೆಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.

ಮಹಾ ಭಾರತದಲ್ಲೆಲ್ಲ ನಮಗೆ ಕಾಣುವ ಒಂದು ಧರ್ಮ ಸೂತ್ರವೆಂದರೆ “ಧರ್ಮೋ ರಕ್ಷತಿ ರಕ್ಷಿತಃ “ಎಂಬುದು ಹಾಗೆಯೇ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅಂಥವರನ್ನು ಧರ್ಮ ರಕ್ಷಿಸುತ್ತದೆ ಪಾಂಡವರು ಧರ್ಮವನ್ನು ಬಿಡಲಿಲ್ಲ ಕೊನೆಗೆ ಧರ್ಮ ಅವರನ್ನು ಬಿಡಲಿಲ್ಲ ಎಂತಹದೇ ಸಂಕಷ್ಟ ಬಂದರೂ ಧರ್ಮ ಅವರನ್ನು ರಕ್ಷಿಸಿತು. ಈ ಮಹಾಭಾರತದ ನೀತಿ ಸಂದೇಶ ಕೇವಲ ದ್ವಾಪರ ಯುಗಕ್ಕೆ ಮಾತ್ರ ಅನ್ವಯಿಸುವುದಿಲ್ಲ ಇಡೀ ಮಾನವ ಕುಲಕ್ಕೆ ಎಲ್ಲ ಯುಗಗಳಿಗೂ ಕೂಡ ಅನ್ವಯಿಸುವ ನೀತಿ ಸತ್ಯ ಇದರಲ್ಲಿದೆ.ಹಾಗೆ ಜೀವನದ ಎಷ್ಟೋ ಸಂದರ್ಭದಲ್ಲಿ ನಮ್ಮ ಜೀವನವೇ ಮುಗಿದು ಹೋಯಿತು ಎನ್ನುವ  ಸಂಕಷ್ಟಗಳನ್ನು ಎದುರಿಸುತ್ತಿರುತ್ತವೆ ಆದರೆ ಅದೆಲ್ಲವೂ ಸಹ ತಾತ್ಕಾಲಿಕವಷ್ಟೇ. ನಮ್ಮಲ್ಲಿ ದೃಢವಾದ ಮನಸ್ಥಿತಿ ಇದ್ದಾಗ ಅದೆಲ್ಲವನ್ನು ಸಹಜವಾಗಿ ಸ್ವೀಕರಿಸಿ ಜೀವನದ ಸವಾಲುಗಳಿಗೆ ದೃಢವಾಗಿ ನಿಲ್ಲಬೇಕು ಅಂದಾಗ ಮಾತ್ರ ಎಲ್ಲ ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ.

“ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ಧೈರ್ಯ ಹೊಂದಿದ್ದರೆ ಸಕಲವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜೀವನದ ದಾರಿ ನೀತಿ ಪಥದಲ್ಲಿ ಸಾಗುತ್ತಾ ಹೋದರೆ ಯಾವುದೇ ಭಯ ಆತಂಕವಿಲ್ಲದೆ ಅಂಜದೆ ಮುನ್ನುಗ್ಗಿ ನಮ್ಮ ಜೀವನದ ಧ್ಯೇಯವನ್ನು ಸಾಧಿಸಬಹುದು.

ಪ್ರೊ ಸುಧಾ ಹುಚ್ಚಣ್ಣವರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x