ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ

ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ ಪ್ರೇಮ, ಸ್ನೇಹಭಾವವನ್ನು ಕೊಂಡಾಡಿದ್ದಾನೆ. ಆ ಗೆಳೆಯನ ದೈಹಿಕ ಸೌಂದರ್ಯದೊಂದಿಗೆ ಆತನ ಬಗ್ಗೆ ತನಗಿರುವ ಅಸೀಮ ಪ್ರೇಮದ ರಾಗವನ್ನು ಮೀಟಿದ್ದಾನೆ. ಆ ಸುಂದರಾಂಗ Henry Wriothesley, the Earl Of Southompton. ಆತನೊಂದಿಗಿನ ಸ್ನೇಹವನ್ನು ತನ್ನ ಸಾನೆಟ್‍ಗಳ ಮೂಲಕ ಷೇಕ್ಸಪಿಯರ್ ಚಿರಸ್ಥಾಯಿಯಾಗಿಸುತ್ತಾನೆ
ಸಾನೆಟ್ 18ದಲ್ಲಿ ಕವಿ ಬೇಸಿಗೆಯ ಹೊಳಪಿನಂತೆ ತನ್ನ ಸ್ನೇಹಿತನ ಚೆಲುವು ಎಂದು ಕೊಂಡಾಡುತ್ತಾನೆ.

“Shall I compare thee to a summer’s day
Thou art more lovely and more temparate
rough winds do shake the darling buds of May
And summer’s lease hath all too short a date”

ದಿನದ ಚೆಲುವಿಗಿಂತ ಚೆಂದನಿರುವ, ಆತನ ಸೊಬಗು ಸುಂದರ ಮತ್ತು ಸ್ನಿಗ್ಧ. ಬಿರುಸಾದ ಗಾಳಿ ಸುಂದರ ಹೂಗಳನ್ನು ಕೊಂಡೊಯ್ಯಬಹುದು. ಬೇಸಿಗೆಯ ಸೊಗಸು ಕ್ಷಣಿಕವಾಗಬಹುದು. ರವಿಯ ಬಂಗಾರದ ಹೊಳಪು ಮೋಡದ ಮರೆಯಲ್ಲಿ ಮಸುಕಾಗಬಹುದು. ಎಲ್ಲ ನಿಸರ್ಗದ ಸೌಂದರ್ಯವೂ ಕ್ಷಣಿಕ. ಕಾಲ ಎಲ್ಲವನ್ನೂ ನುಂಗಿ ನೆಗೆಯುವುದು. ಆದರೆ ಗೆಳೆಯನದು ದೈವಿಕ ಸೌಂದರ್ಯ. ಅದನ್ನಾತ ಎಂದಿಗೂ ಕಳೆದುಕೊಳ್ಳಲಾರ.ಸಾವಿನ ನೆರಳು ಕೂಡಾ ಆತನ ಮೇಲೆ ಬೀಳಲಾರದು ಎನ್ನುವ ಕವಿ ಗೆಳೆಯನನ್ನು ತನ್ನ ಕಾವ್ಯದ ಮೂಲಕ ಅಮರಗೊಳಿಸುತ್ತಾನೆ.

“So long as men can breathe, or eye can see
So long lives this, and this gives life to thee”

ಈ ಲೋಕದಲ್ಲಿ ಮನುಕುಲದ ಕೊನೆಯವರೆಗೂ ತನ್ನ ಕಾವ್ಯ ಶಾಶ್ವತ. ಎನ್ನುತ್ತಾನೆ ಕವಿ. ತನ್ನ ಕಾವ್ಯದ ಮುಖೇನ ಗೆಳೆಯನ ಚಿರಚೆಲುವು ಇರಲೆಂಬುದು ಕವಿಯ ಆಸೆ.

ಸಾನೆಟ್ 29 ಕವಿತೆ ಬರೆಯುವ ಕಾಲಕ್ಕೆ ಶೇಕ್ಸಪಿಯರ ಆರ್ಥಿಕವಾಗಿ ಸಬಲನಾಗಿರಲಿಲ್ಲ. ಪ್ರಸಿದ್ಧನೂ ಆಗಿರಲಿಲ್ಲ. ಹಾಗಾಗಿ ಮೊದಲ ಎರಡು ಕ್ವಾಟ್ರೇನ್‍ಗಳು ಆತನ ನೈರಾಶ್ಯದ ಜೀವನವನ್ನು ಬಣ್ಣಿಸಿದರೆ ಕೊನೆಯ ನಾಲ್ಕು ಸಾಲು ಹಾಗೂ ಕಪ್ಲೆಟ್‍ನ ಎರಡು ಸಾಲು ಆತನ ನಲ್ಮೆಯ ಗೆಳೆಯನ ನೆನಪು ಮತ್ತು ಬದುಕಿನ ಆಶಾವಾದವನ್ನು ಬಣ್ಣಿಸುತ್ತದೆ.
ಶೇಕ್ಸಪಿಯರನ ಕಾಲಕ್ಕೆ ನಾಟಕ ಮತ್ತು ನಟನೆಗಳು ಅಂತಹ ಗೌರವವನ್ನು ಪಡೆದಿರಲಿಲ್ಲ. ಶೇಕ್ಸಪಿಯರನ ಸಮಕಾಲೀನ ಕವಿಯಾಗಿದ್ದ ರಾಬರ್ಟ ಗ್ರೀನ್ ಎಂಬಾತ ಒಬ್ಬ ಯುನಿವರ್ಸಿಟಿ ಪಂಡಿತನಾಗಿದ್ದು, ಅಗ್ರಪಂಕ್ತಿಯಲ್ಲಿ ಪರಿಗಣಿಸಲ್ಪಡುತ್ತಿದ್ದ. ಓಲೈಸಲ್ಪಡುತ್ತಿದ್ದ. ಆತ ಶೇಕ್ಸಪಿಯರನನ್ನು ಆತನ ಕೃತಿಗಳನ್ನು ಹೀನಾಯವಾಗಿ ತೆಗಳುತ್ತಿದ್ದ. ಅದನ್ನು ಕವಿ ಈ ಕವನದಲ್ಲಿ ವ್ಯಕ್ತಪಡಿಸುತ್ತಾನೆ.

“When in disgrace with fortune and men’s eyes
I all alone beweep my outcast state”

ಕವಿ ತನ್ನ ಅದೃಷ್ಟವನ್ನು ಶಪಿಸುತ್ತಾನೆ ತನ್ನ ದುಃsಸ್ಥಿತಿಗೆ ತನ್ನ ಬೇಜವಾಬ್ದಾರಿಯೇ ಕಾರಣ ಎನ್ನುತ್ತಾನೆ ಹೊರತು ಇತರರನ್ನು ನಿಂದಿಸುವುದಿಲ್ಲ. ಆದರೆ ತನ್ನ ನೆಚ್ಚಿನ ಗೆಳೆಯನ ನೆನಪೇ ಆತನಲ್ಲಿ ನವ ಚೇತನವನ್ನು ಮೂಡಿಸುತ್ತದೆ ಎನ್ನುವ ಕವಿ ಕೊನೆಯ ಕ್ವಾಟ್ರೇನ್‍ದಲ್ಲಿ ಅದನ್ನು
ಹೀಗೆ ಹೇಳುತ್ತಾನೆ.

Happy I think on thee, and then my state
Like to the lark at break of day arising
From sullen earth sings hymns at heaven’s gate

ಜನರೆಲ್ಲ ನಿದ್ದೆಯ ಮಂಪರಿನಲ್ಲಿ ಇರುವಾಗಲೇ ದಿನದ ನಸುಕಿನಲ್ಲೆ ತನ್ನ ಗೂಡು ಬಿಟ್ಟು ಆಕಾಶದ ಮುಖದಲ್ಲಿ ಹಾಡುತ್ತ ಬೆಳಗನ್ನು ಸ್ವಾಗತಿಸುವ ಹಕ್ಕಿಯಂತೆ ತನ್ನ ಪಾಡು ಎನ್ನುವ ಕವಿ ಗೆಳೆಯನ ನೆನಪು ಅದು ಕೊಡುವ ಸಂತಸ ರಾಜನ ಅರಮನೆಯ ವೈಭವ ನೀಡದು ಎನ್ನುತ್ತಾನೆ. ಗೆಳೆಯನ ಸವಿನೆನೆಪೇ ಆತನಲ್ಲಿ ಇಲ್ಲದ ಸಂಪತ್ತನ್ನು ತಂದುಕೊಡುವ ಏಕೈಕ ಆಸರೆ. ಆ ಪ್ರೀತಿ, ವಾತ್ಸಲ್ಯ ಕವಿಯ ಬದುಕಿಗೆ ಸಂಜೀವಿನಿ.

ಸಾನೆಟ್ 116 ಕವಿತೆಯಲ್ಲಿ ಕವಿ ಪ್ರೇಮವನ್ನು ಅಜರಾಮರಗೊಳಿಸುತ್ತಾನೆ. ಈ ಪ್ರೇಮ ಕೂಡಾ ಕವಿ ತನ್ನ ಚೆಲುವಾಂಗ ಗೆಳೆಯನನ್ನೆ ಸಂಕೇತಿಸಿ ಬರೆಯುತ್ತಾನೆ. ಪ್ರೇಮ ಬದುಕಿಗೆ ಅತಿ ಪ್ರಬಲ ಮೂಲ ಆಕಾಂಕ್ಷೆ. ನಿಜವಾದ ಪ್ರೇಮ ಯಾವ ಅಡೆತಡೆಗಳಿಗೂ ಅಂಜುವುದಿಲ್ಲ. ಅದು ಕಾಲದ ಹರಿತ ಅಲಗಿಗೆ ಜರ್ಜರಿತಗೊಳ್ಳುವುದಿಲ್ಲ. ಭೌತಿಕ ಶರೀರದ ಯೌವನಕಾಲದ ಕೆಂಪು ತುಟಿಗಳು, ರಸಭರಿತ ಕೆನ್ನೆಗಳು ಕಾಲದ ಕತ್ತಿಗೆ ಸಿಲುಕಿ ಮುದುಡಿಹೋಗಬಹುದು. ಕತ್ತರಿಸಿ ಬೀಳಬಹುದು. ಆದರೆ ಅಮರ ಪ್ರೇಮ ಕಾಲದ ಕೈಗೊಂಬೆಯಲ್ಲ.

Love is not Time’s fool, though rosy lips and cheeks
Within his bending sickle’s compass come:
Love alters not with his brief hours and weeks
But bears it out even to the edge of doom

ಜೀವನದ ಅಡಚಣೆಗಳಿಗೆ, ಬದುಕಿನಲ್ಲಿ ಬರುವ ಸಂಘರ್ಷಗಳಿಗೆ, ಅದು ಬೆದರಿ ಬದಲಾಗುವುದಿಲ್ಲ. ಈ ಜಗತ್ತು ಕೊನೆಯಾಗುವವರೆಗೂ ಅದು ಶಾಶ್ವತ ಎನ್ನುತ್ತಾನೆ

If this be error and upon me proved
I never writ, nor no man ever loved.

ತನ್ನ ಉಲ್ಲೇಖ ತಪ್ಪೆಂದು ಸಾಬೀತಾದರೆ ತಾನು ಇನ್ನೆಂದೂ ಬರೆಯುವುದಿಲ್ಲ ಎಂದೂ, ಮತ್ತು ಮುಂದೆಂದೂ ಜನರು ಪ್ರೇಮಿಸಲಾರರೆಂದು ಹೇಳುತ್ತ ಪ್ರೀತಿಯ ಚಿರಂತನತೆಯನ್ನು ವೈಭವಿಕರಿಸುತ್ತಾನೆ.

ತನ್ನ ಸಾನೆಟ್‍ಗಳಲ್ಲಿ ಸ್ನೇಹ ಮತ್ತು ಪ್ರೇಮವನ್ನು ಮುಖ್ಯ ತಿರುಳನ್ನಾಗಿ ಬಳಸಿದ ಷೇಕ್ಸಪಿಯರ್ ತನ್ನ ಬದುಕಿನ ಸಂಗತಿಗಳನ್ನೆ ಅಲ್ಲಿ ಎರಕ ಹೊಯ್ದಿದ್ದಾನೆ. ಆತನ ಬದುಕಿನಲ್ಲಿ ಕಾಮ ಪ್ರೇಮದ ಉತ್ತುಂಗಭಾವವನ್ನು ಮೂಡಿಸಿದ್ದ ಕಪ್ಪು ಹೆಣ್ಣೊಬ್ಬಳನ್ನು ಕವಿ ತನ್ನ ಕಾವ್ಯದಲ್ಲಿ ಅಮರಗೊಳಿಸಿದ್ದಾನೆ. ಆಕೆಯನ್ನು ಕ್ವೀನ್ ಎಲಿಜಬೆತ್‍ಳ ಗೌರವಾನ್ವಿತ ಸೇವಕಿ Miss Mary Fitton ಎಂದು ಹೇಳಲಾಗುತ್ತದೆ. ಸಾನೆಟ್‍ಗಳ ಎರಡನೇ ಭಾಗದಲ್ಲಿ ಕವಿ ತನ್ನ ಪ್ರೇಯಸಿಯನ್ನು ಅವಳ ಜೊತೆಗಿನ ತನ್ನ ಬಂಧ ಅನುಬಂಧ ಜೊತೆಗೆ ನಡುವಿನ ಭಿನ್ನತೆಗಳನ್ನು ಸಾಮ್ಯತೆಗಳನ್ನು ಬಣ್ಣಿಸುತ್ತಾನೆ. ಕಪ್ಪು ಹೆಣ್ಣಿನ ಕುರಿತ ಕವಿಯ ಕಲ್ಪನೆ ಹಾಗೂ ಅನುಭವಗಳ ಗಾಥೆ ಓದುಗರ ಹೃದಯವನ್ನು ತಟ್ಟುತ್ತದೆ.

ಸಾನೆಟ್ 138 ಅಂತಹದ್ದೊಂದು ಕವನ. ಇಲ್ಲಾತ ಆಕೆಯ ಸುಳ್ಳುಗಳನ್ನು ಸಿನಿಕತೆಯಿಂದ ವಿರೋಧಿಸದೇ ಸುಮ್ಮನೇ ಒಪ್ಪಿಕೊಳ್ಳುತ್ತಾನೆ.

“When my love swears that she is made of truth
I do believe her, though I know she lies”

ಆಕೆ ತಾನು ಸತ್ಯವನ್ನೆ ನುಡಿಯುತ್ತಿರುವುದಾಗಿ ಹೇಳಿದಾಗ ಆಕೆ ಸುಳ್ಳು ನುಡಿಯುತ್ತಿರುವುದು ತಿಳಿದೂ ಆತ ನಂಬುತ್ತಾನೆ. ಕಾರಣ ಜಗತ್ತಿನ ಮಿಥ್ಯೆಯ ಗೂಢತೆ ಆತನಿಗೂ ತಿಳಿದಿದೆ.ಯಾಕೆಂದರೆ ಆತನೂ ಆಕೆಗೆ ಎಲ್ಲ ಸತ್ಯವನ್ನೆ ಹೇಳಿಲ್ಲ. ಅವರಿಬ್ಬರೂ ಮಧ್ಯವಯಸ್ಕರು. ಆತ ಯುವಕನಲ್ಲವೆಂದು ಆಕೆಗೂ ಆಕೆ ತರುಣಿಯಲ್ಲವೆಂದೂ ಆತನಿಗೂ ಗೊತ್ತು. ಆದರೂ ತಮ್ಮಿಬ್ಬರ ನಡುವಿನ ವ್ಯವಹಾರಗಳು ಯುವ ಪ್ರೇಮಿಗಳಂತೆ ಇರುವುದು ಹಾಗೆ ವರ್ತಿಸುತ್ತಿರುವುದು ಗೊತ್ತು.

“Therefore I lie with her, and she with me
And in our faults by lies we flattered be”

ಈ ವಿಚಿತ್ರ ಸಂಬಂಧದಲ್ಲಿ ಹಿತಕರ ಅನುಭವ ಅವರು ಸ್ವೀಕರಿಸುತ್ತಾರೆ. ಪ್ರಾಯಶಃ ತೀವೃಸಂವೇದನೆಯ ಹಲವರ ಬದುಕಿನ ಒಂದು ಸಣ್ಣ ತಿರುವುಗಳ ನೋಟ ಇದೆಂದು ಹೇಳಲೂಬಹುದು.

ಇಂಗ್ಲೆಂಡಿನ “ಬಾರ್ಡ ಆಫ್ ಎ ವನ್” ಎಂದೇ ಪ್ರಸಿದ್ಧನಾದ ವಿಲಿಯಮ್ ಶೇಕ್ಸಪಿಯರ್ ತನ್ನ ನಾಟಕಗಳಿಂದ ಅಜರಾಮರನಾಗಿದ್ದಾನೆ. ಆತನ ನಾಟಕಗಳಲ್ಲಿಯ ಜೀವನ ಮೌಲ್ಯಗಳು, ಸಾಮಾಜಿಕ ಜನಜೀವನ ದರ್ಶನ, ವ್ಯಕ್ತಿ ನಿಲುವುಗಳು, ವೈವಿಧ್ಯಮಯವಾಗಿ ಬಳಸಿದ ತಂತ್ರಗಳು ಇಂದಿಗೂ ಪ್ರಸ್ತುತವೆನಿಸುವಷ್ಟು ಸಹಜವಾಗಿವೆ. ಅದೂ ಅಲ್ಲದೇ ಆತ ಕಾವ್ಯ ಜಗತ್ತಿನಲ್ಲೂ ಅಪ್ರತಿಮ ಕವಿ ಎಂದೇ ಗುರುತಿಸಲ್ಪಡುತ್ತಾನೆ. ಆತ ರಚಿಸಿದ ಎಲ್ಲ 154 ಸಾನೆಟ್‍ಗಳು , ಅವುಗಳ ಛಂದೋಬಂಧ ಶೈಲಿ, ಪ್ರಾಸಗಳ ನಿರ್ವಹಣೆ,ಕವನಗಳಲ್ಲಿ ಧ್ವನಿತವಾಗಿರುವ ಹತಾಶೆಯ ಮೂಲಕ ಗಮನ ಸೆಳೆದಿವೆ. ಅದರೊಂದಿಗೆ ಆತನ ವೈಯಕ್ತಿಕ ಬದುಕನ್ನು, ವ್ಯಕ್ತಿತ್ವವನ್ನು ಕೊಂಚ ಮಟ್ಟಿಗೆ ಅರಿಯಲು ಈ ಸುನೀತಗಳು ಸಹಕಾರಿಯೂ ಆಗಿರುವುದು.

[ಸುನೀತ ಕಾವ್ಯ ಪ್ರಕಾರ ಇಂಗ್ಲೀಷನ ಜನಪ್ರಿಯ ಶೈಲಿ. ಕನ್ನಡದಲ್ಲೂ ನವೋದಯ ನವ್ಯ ಕಾಲದ ಹಲವು ಕವಿಗಳೂ ಈ ಪ್ರಕಾರದಲ್ಲಿ ಕಾವ್ಯ ರಚಿಸಿದ್ದು, ಕನ್ನಡಕ್ಕೆ ತಕ್ಕಂತೆ ಅಲ್ಪಸಲ್ಪ ಬದಲಾವಣೆಗಳ ರೂಢಿಸಿಕೊಂಡು ಬಂದ ಸುನೀತಗಳು ಇವೆ. ಸುನೀತ ಹದಿನಾಲ್ಕು ಸಾಲಿನ ಪದ್ಯ. ಅದರಲ್ಲಿ ಪ್ರಮುಖ ಎರಡು ಪ್ರಕಾರಗಳನ್ನು ಕಾಣಬಹುದು. ಒಂದು ಪೆಟ್ರಾರ್ಕನ್ ಸಾನೆಟ್ ಅಥವಾ ಇಟಾಲಿಯನ್ ಸಾನೆಟ್ ಹಾಗೂ ಷೇಕ್ಸಪಿಯರಿನ್ ಸಾನೆಟ್ ಅಥವಾ ಇಂಗ್ಲೀಷ ಸಾನೆಟ್. ಎರಡೂ ವಿಭಿನ್ನ ಸಂರಚನೆ ಹೊಂದಿದ್ದು, ಪೆಟ್ರಾರ್ಕನ ಸಾನೆಟ್ ಮೊದಲ ಎಂಟು ಸಾಲುಗಳನ್ನು ‘octve’ಎಂದು ಕರೆಯಲಾಗುತ್ತದೆ. ಕೊನೆಯ ಆರು ಸಾಲುಗಳನ್ನು ‘sestet’ಎಂದು ಕರೆಯುತ್ತಾರೆ. ಮೊದಲ ಎಂಟು ಸಾಲು ವಸ್ತುವಿನ ಪೂರಕ ಸಂಗತಿಗಳನ್ನು ಬಿಚ್ಚಿಟ್ಟರೆ ಕೊನೆಯ ಆರು ಸಾಲು ಅದರಲ್ಲಿಯ ನಕಾರಾತ್ಮಕತೆ ಅಥವಾ ವಿಷಮತೆಯನ್ನು ಮೊದಲ ಭಾಗದ ಸಂಗತಿಗಳಿಗೆ ವಿರುದ್ಧವಾದ ಸಂಗತಿಗಳನ್ನು ಬಣ್ಣಿಸುತ್ತದೆ. ಅದೇ ಶೇಕ್ಸಪಿರಿಯನ್ ಸಾನೆಟ್ ನಾಲ್ಕು ನಾಲ್ಕು ಸಾಲಿನ ಮೊದಲ ಮೂರು ‘quatrains’ಗಳಲ್ಲಿ ಒಂದೇ ವಿಷಯದ ಕುರಿತು ಹಲವು ಆಯಾಮಗಳ ಚಿಂತಿಸುತ್ತದೆ. ಮತ್ತು ಕೊನೆಯ ಎರಡು ಸಾಲನ್ನು couplet ಎಂದು ಕರೆಯುತ್ತಾರೆ. ಅದು ಮೊದಲ ಮೂರು ‘quatrains ಗಳಿಗೆ ನಿರ್ದಿಷ್ಟ ಉಪಸಂಹಾರ ನೀಡುವ ಜಷ್ಟಿಪಿಕೇಷನ್‍ನಂತೆ ಹೊಮ್ಮುವ ಸಾಲಾಗಿರುತ್ತದೆ.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x