ಯುದ್ಧ ಗೆದ್ದ ಬಂದ ಪಾರ್ವತಿ: ಚಂದ್ರಿಕಾ ಆರ್ ಬಾಯಿರಿ

ಇದೇನಿದು ? ಯುದ್ಧ ಗೆದ್ದು ಬಂದ ಪಾರ್ವತಿ ಎಂದಾಕ್ಷಣ ಶಿವ ಪಾರ್ವತಿಯರ ಪುರಾಣ ಕಥೆ ಅಂದುಕೊಂಡಿರಾ? ಅಲ್ಲ, ಶಿವಪಾರ್ವತಿಯಂತಿರುವ ದಂಪತಿಗಳ ಕಥೆ. ಹೌದು ಮೊದಲನೆಯ ಮಗ ಸುಬ್ರಹ್ಮಣ್ಯ ಹುಟ್ಟಿ ಈಗಾಗಲೇ ಮೂರು ವರುಷ ಕಳೆದಿದೆ. ಮಗನ ಲಾಲನೆ ಪಾಲನೆ ಮಾಡಲು ಅಜ್ಜ ಅಜ್ಜಿ ಇರುವುದರಿಂದ ಮಗ ಬೆಳೆದು ದೊಡ್ಡವನಾದದ್ದೆ ಗೊತ್ತಾಗಲಿಲ್ಲ ಅವರಿಗೆ. ಕೆಲಸಕ್ಕೆ ಹೋಗಿ ಬಂದು ಮಗ ಅತ್ತೆ ಮಾವ ಗಂಡನನ್ನು ಬಹಳ ಅಕ್ಕರೆಯಿಂದಲೇ ನೋಡಿಕೊಂಡಳು ಪಾರ್ವತಿ. ಎರಡನೇ ಮಗುವಿಗಾಗಿ ಹಂಬಲಿಸುತ್ತಿದ್ದ ಗಂಡ ಈಗಲೇ ಇನ್ನೊಂದು ಮಗು ಹೆತ್ತರೆ ಅಪ್ಪ ಅಮ್ಮ ಇದ್ದು ನೋಡಿಕೊಳ್ಳುತ್ತಾರೆ ಎಂದ. ಗಂಡನ ಮಾತಿಗೆ ಒಪ್ಪಿ ಎರಡನೇ ಮಗುವಿಗೆ ಜನ್ಮ ನೀಡಲು ಅಣಿಯಾದಳು. ಆದರೆ ತನ್ನ ಸೊಸೆ ಎರಡನೇ ಬಸುರಿ ಎಂಬ ಸುದ್ದಿ ತಿಳಿಸಿದಾಗಲೇ ಅತ್ತೆಯ ಮುಖದಲ್ಲಿ ಏನೋ ತಾತ್ಸಾರ. ಗಂಡನಾದವನು ಕಂಪೆನಿ ಬದಲಾಗಿದ್ದರಿಂದ ತನ್ನ ಆಫೀಸ್ ಕೆಲಸದಲ್ಲೇ ಮಗ್ನನಾಗಿರುತ್ತಿದ್ದ. ಇನ್ನು ತಂದೆಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಮಾವ ಶ್ವಾಸಕೋಶದ ತೊಂದರೆಯಿಂದ ಹಾಸಿಗೆ ಹಿಡಿದರು. ಊರಿನಲ್ಲಿ ಸರಿಯಾದ ಚಿಕಿತ್ಸೆ ಕೊಡಿಸುತ್ತೇನೆಂದು ಅವರ ಮಗಳು ಬಂದು ಮಾವನನ್ನು ಊರಿಗೆ ಕರೆದುಕೊಂಡು ಹೋದಳು.

ಇತ್ತ ಪಾರ್ವತಿಯ ತಿಂಗಳ ಚೆಕಪ್ ಗೂ ಗಂಡ ಬರುತ್ತಿರಲಿಲ್ಲ. ತಾನೇ ಒಂದು ದಿನ ಕೆಲಸದಿಂದ ರಜೆ ತೆಗೆದುಕೊಂಡು ಸುಡುವ ಬಿಸಿಲಿನಲ್ಲಿ ಬಸ್ ಹತ್ತಿದಳು. ಬಸ್ ಇಳಿಯುವಾಗ ಸೀರೆ ಕಾಲಿಗೆ ಸಿಕ್ಕಿ ಬಿದ್ದೆ ಬಿಟ್ಟಳು ಅನ್ನುವಷ್ಟರಲ್ಲಿ ಕಂಡಕ್ಟರ್ ಅಲ್ಲೇ ಇದ್ದು ಕಾಪಾಡಿದ. ನಂತರ ಆಸ್ಪತ್ರೆಗೆ ಹೋಗಿ ಎಲ್ಲಾ ಟೆಸ್ಟ್ ಮಾಡಿಸಿಕೊಂಡು ರಿಪೋರ್ಟ್ ಬರುವವರೆಗೂ ಕಾದು ವೈದ್ಯರ ಬಳಿ ಹೋದಾಗ “ಮಗುವಿನ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ಶುಗರ್ ಬರುವ ಸಾಧ್ಯತೆ ಇದೆ ನಿಮಗೆ. ರಾಗಿ ಗೋಧಿ ಮೊಳಕೆ ಕಾಳುಗಳನ್ನು ಹೆಚ್ಚಾಗಿ ತಿನ್ನಿ” ಎಂದು ಸಲಹೆ ನೀಡಿದರು. ಕಷ್ಟಪಟ್ಟು ಮನೆಗೆ ಬಂದು ಸ್ವಲ್ಪ ಊಟ ಮಾಡಿ ದಾಳಿಂಬೆ ಹಣ್ಣು ತಿನ್ನುತ್ತಿರುವಾಗ ಮಗ ಸುಬ್ರಹ್ಮಣ್ಯ ಬಂದ. ಅಮ್ಮ ಪ್ರೀತಿಯಿಂದ ಮಗುವಿಗೆ ಹಣ್ಣು ಕೊಟ್ಟು ಅಜ್ಜಿಗೂ ಕೊಡು ಎಂದು ಹೇಳಿ ಮಲಗಿದಳು. ಮೈಕೈ ನೋವು, ತುಂಬಾ ಸುಸ್ತು. ಮೊದಲ ಬಸುರಿಯಲ್ಲಿದ್ದಷ್ಟು ಲವಲವಿಕೆ ಉತ್ಸಾಹ ಇರಲಿಲ್ಲ ಈಕೆಗೆ. ಯಾರಾದರೂ ಸ್ವಲ್ಪ ಕೆಲಸ ಮಾಡಿಕೊಟ್ಟರೆ ಎಷ್ಟು ಚೆನ್ನಾಗಿತ್ತು ಎಂದೆನಿಸುತ್ತಿತ್ತು. ಅಮ್ಮನ ನೆನಪು ಹೆಚ್ಚಾಗಿ ಬಾಧಿಸುತ್ತಿತ್ತು. ಇತ್ತ ವಯಸ್ಸಾದ ಅತ್ತೆ ನನ್ನನ್ನು ಸೊಸೆ ನೋಡಿಕೊಳ್ಳುತ್ತಿಲ್ಲ.

ಏನಾದರೂ ತಂದರೆ ಅವಳೊಬ್ಬಳೇ ತಿನ್ನುತ್ತಾಳೆ. ಯಾವಾಗಲೂ ಮಲಗಿರುತ್ತಾಳೆ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಮಗನ ಬಳಿ ದೂರು ಹೇಳಿ ತಾನೂ ಊರಿಗೆ ಹೋಗುವುದಾಗಿ ತಿಳಿಸಿದರು. ಅತ್ತೆ ಸೊಸೆ ಕೋಳಿ ಜಗಳ ಹೆಚ್ಚಾದದ್ದು ನೋಡಿ ತಾಯಿಯನ್ನು ತನ್ನ ಅಣ್ಣನ ಮನೆಗೆ ಕಳುಹಿಸಿದ. ಆದರೆ ಯಾವಾಗಲೂ ಹೆಂಡತಿಗೆ ಬೈದು ಹಂಗಿಸುತ್ತಿದ್ದ. “ನೀನು ಸರಿಯಾಗಿ ಇದ್ದಿದ್ದರೆ ನನ್ನ ಅಮ್ಮ ಇಲ್ಲೇ ಇರುತ್ತಿದ್ದಳು. ನಿನಗೆ ಹೊಂದಿಕೊಳ್ಳುವ ಬುದ್ದಿ ಇಲ್ಲ”. ನನ್ನ ಅಮ್ಮನಿಗೂ ವಯಸ್ಸು ಎಪ್ಪತ್ತಾಗಿದೆ. ನೀನು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಹಾಗೆ ಹೀಗೆ ಎಂದು. ಆದರೆ ಗರ್ಭಿಣಿ ಪಾರ್ವತಿಯ ಆರೋಗ್ಯ ಸರಿಯಿಲ್ಲ. ಶುಗರ್ ಬಿಪಿ ಮುಂತಾದ ಜೀವ ಹಿಂಡುವ ಕಾಯಿಲೆ ಇದೆ ಎಂಬ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೆಂಡತಿಯನ್ನು ನಿರ್ಲಕ್ಷಿಸುತ್ತಾ ಬಂದ. ತನ್ನ ತಾಯಿ ಮನೆ ಬಿಟ್ಟು ಹೋಗಲು ನೀನೆ ಕಾರಣ ಎಂದು ಆಗಾಗ ಹಂಗಿಸಿ ಆಕೆಯ ಮನ ನೋಯಿಸಿದ. ನಿತ್ಯವೂ ಗಂಡನ ಮಾತಿನಿಂದ ಬೇಸರಗೊಂಡ ಪಾರ್ವತಿ ಮನಸಿಗೆ ಹಚ್ಚಿಕೊಂಡು ಅಳುತ್ತಿದ್ದಳು. ಗಂಡನಿಂದ ಒಂದು ಸಮಾಧಾನಕರ ಮಾತೂ ಬರುತ್ತಿರಲಿಲ್ಲ. ಹೀಗಿರುವಾಗ ಊರಿನಲ್ಲಿ ಮಾವನನ್ನು ಆಸ್ಪತ್ರೆಗೆ ಸೇರಿಸಿದರು. ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ಮಾವನಿಗೆ “ಪವಮಾನ ಹೋಮ’ ಮಾಡುವುದಾಗಿ ನಿರ್ಧರಿಸಿದರು.

ಆರೋಗ್ಯದಲ್ಲಿ ಚೇತರಿಗೆ ಆಗಿ ಆಯುಷ್ಯ ವೃದ್ಧಿಯಾಗಬಹುದೆಂಬ ಸಣ್ಣ ಆಶಯ. ಹೋಮಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನು ಸಿದ್ಧಮಾಡಿಕೊಂಡರು. ಆಸ್ಪತ್ರೆಯಿಂದ ಮನೆಗೆ ಡಿಸ್ಚಾರ್ಜ್ ಆಗಿ ಬಂದ ತಂದೆಯನ್ನು ನೋಡಲು ಎಲ್ಲಾ ಮಕ್ಕಳು ಬಂದಿದ್ದು ತಂದೆಯ ಆರೈಕೆ ಮಾಡುತ್ತಿದ್ದರು. ಆದರೆ ಆ ದಿನ ಬೆಳಗಿನ ಜಾವ ಮೂರು ಗಂಟೆಗೆ ಮಗಳು ಕುಡಿಯಲು ಮೂಸಂಬಿ ಜ್ಯೂಸ್ ಮಾಡಿಕೊಟ್ಟು ಅಲ್ಲೇ ಸ್ವಲ್ಪ ಕಣ್ಣು ಮುಚ್ಚಿ ಮಲಗಿದಳಷ್ಟೇ. ತಂದೆಯ ಪ್ರಾಣಪಕ್ಷಿ ಹಾರಿಹೋಗುವ ಸಮಯ ಬಂದೇಬಿಟ್ಟಿತು. ಹೆಣ್ಣು ಮಕ್ಕಳು, ಗಂಡುಮಕ್ಕಳು ಎಲ್ಲರನ್ನೂ ಹೋಮಕ್ಕೆಂದು ಕರೆಯಿಸಿಕೊಂಡಿದ್ದ ಮಾವ ಗಂಗಾಜಲವನ್ನು ಬಾಯಿಗೆ ಹಾಕಿಸಿಕೊಂಡೇ ಬಿಟ್ಟರು. ಮಾವನ ಸಾವು ವಯೋಸಹಜವೇ ಆಗಿದ್ದರೂ ಪಾರ್ವತಿಯ ಆರ್ತನಾದ ಮುಗಿಲು ಮುಟ್ಟಿತ್ತು. ತಂದೆಯ ಸ್ವರೂಪರಾದ ಮಾವನ ಜೊತೆ ಐದು ವರುಷಗಳ ಕಾಲ ಸಲಿಗೆಯಿಂದ ಪ್ರೀತಿಯಿಂದ ಇದ್ದ ಪಾರ್ವತಿಗೆ ಬರಸಿಡಿಲು ಬಡಿದಂತಾಯಿತು. ಆರು ತಿಂಗಳ ಬಸುರಿ ಬೇರೆ. ತಾಯಿಯ ಮನೆಗೂ ಹೋಗಲಾಗದೇ ಮಾವ ಸತ್ತ ಮನೆಯಲ್ಲೇ ಸೂತಕ ಕಳೆಯುವವರೆಗೂ ಮನೆಯವರ ಮಕ್ಕಳ ಚಾಕರಿ ಮಾಡುತ್ತಾ ಇದ್ದಳು.

ಹೀಗಿರುವಾಗ ಮಾವ ಸತ್ತು ಹತ್ತನೇ ದಿನಕ್ಕೆ ಅವಳಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತು. ಅತ್ತೆ ಮನೆಯವರು ಏನೂ ಆಗುವುದಿಲ್ಲ ಜೀರಿಗೆ ಕಷಾಯ ಮಾಡಿ ಕುಡಿದರಾಯಿತು ಎಂದು ಗೊಣಗುತ್ತಿರುವಾಗ ಹೆತ್ತ ಕರುಳು ಮಗಳ ನೋವು ನೋಡಲಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋದಳು. ವೈದ್ಯರು ಒಂದಷ್ಟು ಪರೀಕ್ಷೆ ನಡೆಸಿ “ನಿಮ್ಮ ಮಗಳಿಗೆ ಬಿಪಿ ಶುಗರ್ ಎರಡೂ ಜಾಸ್ತಿ ಆಗಿದೆ. ಮಗು ಬೆಳವಣಿಗೆ ಆಗುತ್ತಿಲ್ಲ. ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಮಗುವಿನ ಬೆಳವಣಿಗೆಗೆ ತೊಂದರೆ ಆಗುತ್ತಿದೆ. ಈಕೆಗೆ ಬೆಡ್ ರೆಸ್ಟ್ ಅವಶ್ಯಕತೆ ಇದೆ ಎಂದರು. ತಾಯಿಯ ಮಾತೃ ಹೃದಯ ಒಡೆದು ಚೂರಾಯಿತು. ನಂತರ “ಇಲ್ಲ,ಡಾಕ್ಟರ್ ಇವಳನ್ನು ಆಸ್ಪತ್ರೆಗೆ ಸೇರಿಸುವುದು ಬೇಡ. ನಾನೇ ನನ್ನ ಮಗಳನ್ನು ನೋಡಿಕೊಳ್ಳುತ್ತೇನೆ ” ಎಂದು ಹೇಳಿ ಮನೆಗೆ ಕರೆದುಕೊಂಡು ಹೋದಳು. ಮಗಳು ಮಂಚದಿಂದ ಕೆಳಗೆ ಇಳಿಯದಂತೆ ಜೋಪಾನವಾಗಿ ನೋಡಿಕೊಂಡಳು. ವಾರ ವಾರ ಚೆಕಪ್ ಗೆ ಕರೆದುಕೊಂಡು ಹೋಗುತ್ತಿದ್ದಳು. ನಿಧಾನವಾಗಿ ಬಿಪಿ ಶುಗರ್ ಕಂಟ್ರೋಲ್ ಗೆ ಬಂತು. ಮಗವು ಬೆಳವಣಿಯಾಯಿತು. ಹೆರಿಗೆ ದಿನ ಹತ್ತಿರ ಬಂದಂತೆ ಪಾರ್ವತಿಗೆ ಪರಶಿವನ ಮೇಲಿನ ಪ್ರೀತಿ ನೆನಪು ಹೆಚ್ಚಾಯಿತು.

ಹೆರಿಗೆ ಸಮಯದಲ್ಲಿ ಗಂಡ ಜೊತೆಗಿರಬೇಕೆಂಬ ಆಸೆ ಯಾರಿಗೆ ಇರಲ್ಲ ಹೇಳಿ. ಮೂರು ದಿನ ಡ್ರಿಪ್ಸ್ ಹಾಕಿದರೂ ಹೆರಿಗೆ ಆಗುತ್ತಿಲ್ಲ ಈಕೆಗೆ. ಮೂರನೆ ದಿನ ಮದ್ಯಾಹ್ನ ಹನ್ನೆರಡು ಗಂಟೆಗೆ ಡಾಕ್ಟರ್ ಗಳು ಇನ್ನೇನು ಕೆಲವೇ ಕ್ಷಣದಲ್ಲಿ ಹೆರಿಗೆ ಆಗುತ್ತದೆ ಎಂದು ಹೇಳಿ ಹೊರಗಡೆ ಹೋಗಿ ಟೀ ಕುಡಿಯುತ್ತಾ ಲಲ್ಲೆ ಹೊಡೆಯುತ್ತಿದ್ದರೆ ಗಂಡ ಕಾದು ಕಾದು ಬೇಸತ್ತು ಶ್ರೀ ಕೃಷ್ಣನ ದೇವಸ್ಥಾನಕ್ಕೆ ಹೋಗಿ ಕಣ್ಣೀರಿಟ್ಟು ಬೇಡಿಕೊಳ್ಳುತ್ತಾನೆ. ಆಗ ಮಗು ಅರ್ಧ ಭಾಗ ಹೊರ ಬಂದಿರುತ್ತದೆ. ಬೇನೆ ತಾಳಲಾರದೆ ಚೀರಿ ಬೊಬ್ಬೆ ಹೊಡೆಯುತ್ತಾಳೆ ಪಾರ್ವತಿ. ಆದರೆ ಡಾಕ್ಟರ್ ನರ್ಸ್ ಗಳಿಗೆ ಕೇಳುತ್ತಿಲ್ಲ. ಅವರಿಗೂ ತಾತ್ಸಾರ ಎರಡನೇ ಹೆರಿಗೆ ತಾನೇ ಎಲ್ಲಾ ಗೊತ್ತಿರುತ್ತದೆ ಎಂದು. ಅಷ್ಟು ಹೊತ್ತಿಗೆ ಅವಳ ಅದೃಷ್ಟವೋ ಎಂಬಂತೆ ನರ್ಸ್ ಒಬ್ಬಳು ಕತ್ತರಿ ಬೇಕೆಂದು ಐ. ಸಿ. ಯು ಒಳಗೆ ಬಂದು ನೋಡಿದರೆ ಮಗು ಕೆಳಗೆ ಬೀಳುವುದೊಂದೇ ಬಾಕಿ. ನಂತರ ತಕ್ಷಣ ಆಕೆಯ ಹೆರಿಗೆ ಮಾಡಿಸುತ್ತಾರೆ. ಇಲ್ಲವಾದರೆ ಮಗುವಿನ ಬ್ರೈನ್ ಡ್ಯಾಮೇಜ್ ಆಗುತ್ತಿತ್ತು. ಮಗು ಮುದ್ದಾಗಿದೆ ಎಂದು ಸ್ಕಾನಿಂಗ್ ಮಾಡಿಸುವಾಗ ಡಾಕ್ಟರ್ ಹೇಳಿದಾಗಲೆಲ್ಲ ಆಕೆಗೆ ಹೆಣ್ಣು ಮಗುವೆಂಬ ಕಲ್ಪನೆ ಬರುತ್ತಿತ್ತು. ಆದರೆ ಹೆರಿಗೆ ಆದ ಮೇಲೆ ನೋಡಿದರೆ ಮುದ್ದಾದ ಗಣೇಶ ಹುಟ್ಟಿದ್ದಾನೆ. ಆದರೂ ಸ್ವಲ್ಪ ನಿಟ್ಟುಸಿರು ಬಿಟ್ಟು ನನ್ನ ಹಾಗೆ ನನ್ನ ಮಕ್ಕಳು ಹೆರಿಗೆ ನೋವು ಅನುಭವಿಸುವುದು ಬೇಡವಲ್ಲ ಎಂದು ಸಮಾಧಾನ ಪಟ್ಟಳು.

ಹೀಗೆ ಮಗುವಿಗೆ ಜನ್ಮ ನೀಡುವುದೆಂದರೆ ದೊಡ್ಡ ಯುದ್ಧವೇ ಗೆದ್ದಂತಾಯಿತು ಆಕೆಗೆ. ಒಂಭತ್ತು ತಿಂಗಳ ಯುದ್ಧ. ಮಾನಸಿಕ ಯುದ್ಧ. ದೈಹಿಕ ಹೋರಾಟ. ಮಗುವಿನ ನಗುಮುಖ ನೋಡಿ ಎಲ್ಲವನ್ನೂ ಮರೆತಳು. ಆದರೆ ಅವನನ್ನು ನೋಡಿಕೊಳ್ಳುವವರಿಲ್ಲದೆ ಕೆಲಸದವರ ಕೈಯಲ್ಲಿ ಮಗುವನ್ನು ಕೊಟ್ಟು ಬೆಳೆಸುವುದು ಇನ್ನೊಂದು ಮಹಾಯುದ್ಧ. ಮಗುವಿಗೆ ಸ್ಕಿನ್ ಅಲರ್ಜಿ ಇರುವುದರಿಂದ ಕಂಡ ಕಂಡ ದೇವರಿಗೆ ಹರಕೆ ಹೊತ್ತು ಯಾವ್ಯಾವುದೋ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿ ಮಗುವನ್ನು ಕಾಯಿಲೆಯಿಂದ ಗುಣಮಾಡಲು ಹರಸಾಹಸ ಪಟ್ಟಳು. ಆಗೆಲ್ಲಾ ಗಂಡ ಪರಶಿವ ಜೊತೆಗೆ ಇದ್ದು ಸ್ವಲ್ಪ ಧೈರ್ಯ ತುಂಬಿದ ಆಕೆಗೆ. ಗಂಡನ ಸಹಕಾರ ಇದ್ದರೆ ಹೆಂಡತಿ ಯಾವ ಯುದ್ಧ ಮಾಡಲೂ ಹೆದರುವುದಿಲ್ಲ ಬಿಡಿ. ಅವಳಲ್ಲಿ ಆತ್ಮಸ್ಥೈರ್ಯವೇ ಅವನು. ಹೀಗೆ ಒಂದು ಮಗುವನ್ನು ಹೆತ್ತು ದೊಡ್ಡದು ಮಾಡಿ ಶಾಲೆಯ ಮೆಟ್ಟಿಲು ಹತ್ತಿಸುವುದು,ನಿತ್ಯ ಶಾಲೆಗೆ ರೆಡಿ ಮಾಡಿ ಕಳಿಸುವುದು ಮಹಿಳೆಯರಿಗೆ ಹರಸಾಹಸವೇ ಸರಿ. ಪ್ರತಿಯೊಬ್ಬ ತಾಯಿಯು ಯೋಧಳೇ. ಹೆಣ್ಣಿನ ಬದುಕು ನಿತ್ಯ ಹೋರಾಟ. ಇಷ್ಟೆಲ್ಲಾ ಕಷ್ಟದ ನಡುವೆ ನಗುತ ನಗಿಸುತಾ ಬಾಳುವುದು ಅವಳಿಗೆ ದೇವರು ಕೊಟ್ಟ ವರವಲ್ಲವೇ ? ಹೆಣ್ಣು ತಾಯಿ ಆದಾಗಲೇ ತನ್ನ ತಾಯಿ ಪಟ್ಟ ಕಷ್ಟ ಅರಿವಾಗುವುದು ಅಲ್ಲವೇ ?ಎಲ್ಲಾ ತಾಯಂದಿರಿಗೂ “ಅಮ್ಮಂದಿರ ದಿನಾಚರಣೆ”ಯ ಶುಭಾಶಯಗಳನ್ನು ತಡವಾಗಿ ತಿಳಿಸುತ್ತಿದ್ದೇನೆ. ಏಕೆಂದರೆ ಇದು ನಿತ್ಯ ಪೂಜೆಯಾಗಬೇಕೇ ಹೊರತು ವರ್ಷಕೊಮ್ಮೆ ಬಂದು ಹೋಗುವ ಹಬ್ಬವಾಗಬಾರದು. ಮಾತೃ ದೇವೋ ಭವ.

ಚಂದ್ರಿಕಾ ಆರ್ ಬಾಯಿರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x