ಬಸು ಬೇವಿನಗಿಡದ ಅವರ “ನೆರಳಿಲ್ಲದ ಮರ”: ಅಶ್ಫಾಕ್ ಪೀರಜಾದೆ.

ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬೇವಿನಗಿಡದ ಕೂಡ ಒಬ್ಬರು. ಅದರಲ್ಲೆ ವಿಶೇಷವಾಗಿ ಉತ್ತರ ಕರ್ನಾಟಕದ ಅತ್ಯಂತ ಪ್ರಖ್ಯಾತ ಕಥೆಗಾರರು ಬಸು ಅವರು. ತಾಯವ್ವ, ಬಾಳೆಂಬ ಕಂಬ, ಹೊಡಿ ಚಕ್ಕಡಿ, ಹಾಗು ಉಗುಳು ಬುಟ್ಟಿ ಹೀಗೆ ಒಟ್ಟು ಐದು ಕಥಾಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಬಸುಬೇವಿನ ಗಿಡದ ಅವರು ಇತ್ತೀಚೆಗೆ ಆರನೇಯ ಕಥಾ ಸಂಕಲನ “ನೆರಳಿಲ್ಲದ ಮರ” ಕತಾಪ್ರಿಯರ ಕೈಗಿಟ್ಟಿದ್ದಾರೆ. ಪ್ರತಿಷ್ಠಿತ ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿ ತನ್ನ ಬಾಹ್ಯ ಸೌಂದರ್ಯದಿಂದ ಮನ ಸೆಳೆಯುವಂತೆ ಒಳ ಹೂರಣದಿಂದಲು ಸಾಹಿತ್ಯ ಪ್ರೇಮಿಗಳ ಮನ ತಣಿಸುತ್ತದೆ. ನೆರಳಿಲ್ಲದ ಮರ, ತುಳುಕಿ ಹೋಗಿತ್ತss.. , ಚೂರಾದ ಚಂದ್ರ, ಜರಿ ರುಮಾಲ, ಮಾರುಕಟ್ಟೆ ಭಾಷೆ, ತೇರಣಿ ಹುಳು, ಮರವಿದ್ದು ಫಲವೇನು, ಅರಗಿನ ಮನೆ.. ಹೀಗೆ ಒಟ್ಟು ಎಂಟು ಕತೆಗಳನ್ನು ಹೊಂದಿರುವ ಪುಸ್ತಕ ಒಟ್ಟು ೧೪೪ ಪುಟಗಳಲ್ಲಿ ಅನಾವರಣಗೊಂಡಿದೆ. ಮತ್ತು ೧೦೦/- ಮುಖ ಬಲೆ ಹೊಂದಿದೆ.

ಕನ್ನಡದ ಇನ್ನೊಬ್ಬ ಪ್ರಸಿದ್ಧ ಕತೆಗಾರ, ವಿಮರ್ಶಕ ಕೇಶವ ಮಾಳಗಿ ಈ ಸಂಕಲನಕ್ಕೆ ಪ್ರವೇಶಿಕೆಯನ್ನು ಒದಗಿಸಿದ್ದಾರೆ. ಒಬ್ಬ ಪರಿಣಿತ ಕತೆಗಾರನಿಗೆ ಮುನ್ನುಡಿಯ ಅವಶ್ಯಕತೆ ಇಲ್ಲ ಎಂದು ಹೇಳುವ ಕೇಶವ ಮಾಳಗಿಯವರು ತಮ್ಮ ಪ್ರವೇಶಿಕೆಯಲ್ಲಿ ಎಲ್ಲ ಕತೆಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತ ಮನುಷ್ಯ ಸಂಬಂದಗಳ ಜಟಿಲತೆ, ಸಂಕೀರ್ಣತೆ, ಸ್ವಾರ್ಥ, ಸ್ವಾರ್ಥ ಮೀರಿ ಅರೆಚಣ ಅರಳುವ ದೈವಿಕತೆ, ಹಳೆ ಹೊಸದರ ತಿಕ್ಕಾಟದಲ್ಲಿ ಗೆಲ್ಲುವ ಮಾನವೀಯತೆ ಈ ಸಂಕಲನದ ಎಂಟೂ  ಕತೆಗಳು ಆವರಿಸಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದರಂತೆ ಕತೆಗಾರ ತಮ್ಮ ಕತೆಗಳ ಹುಟ್ಟಿನ ವಿಸ್ಮಯ ಹಾಗು ಅವು ಬೆಳೆದು ಸಾಗುವ ಪರಿಯನ್ನು ತಮ್ಮ ನುಡಿಗಳಲ್ಲಿ ಅತ್ಯಂತ ಸೊಗಸಾಗಿ ಹೇಳುತ್ತಾರೆ. 

“ಅನೇಕ ಕೆಲಸಗಳ ಮಧ್ಯೆ ಕತೆಗಳು ನನ್ನನ್ನು ಕಾಡಿಸುವ ಹಾಗೂ ಅವು ತಮ್ಮಷ್ಟಕ್ಕೆ ತಾವು ಬೆಳೆದುಕೊಳ್ಳುವ ಪರಿ ನನ್ನಲ್ಲಿ ವಿಸ್ಮಯ ಹುಟ್ಟಿಸುವಂಥದ್ದು. ಅವು ಹೇಳದೆ ಕೇಳದೆ ಬರುತ್ತವೆ. ತಮಗೆ ಇಷ್ಟವಾಗುವ ಹಾಗೆ ಬರೆಸಿಕೊಳ್ಳುತ್ತವೆ. ಆ ಮೇಲೆ ನೀನ್ಯಾಕೋ ನಿನ್ನ ಹಂಗ್ಯಾಕೋ ಎಂದು ಅತ್ತ ದೂಡಿ ತಮ್ಮೊಳಗೆ ಹುದುಗಿರುವ ಅರ್ಥ-ಆಯಮಗಳನ್ನು ಹೇಳಿರೆಂದು ಓದುಗರ ಮತ್ತು ವಿಮರ್ಶಕರ ಬೆನ್ನು ಹತ್ತುತ್ತವೆ. ನಂತರ ಅವರು ಕೊಟ್ಟ ಅರ್ಥಗಳನ್ನು ನನಗೆ ತಿರುಗಿಸುತ್ತ, ಕಥೆಗಾರನನ್ನು ಆಶ್ಚರ್ಯಕ್ಕೀಡು ಮಾಡುತ್ತ ಅವನ ಸಾರ್ಥಕತೆಯನ್ನು ಹೆಚ್ಚಿಸುತ್ತವೆ ಎನ್ನುವ ಲೇಖಕರ ನುಡಿಗೆ ಸಾಕ್ಷಿಯಂಬಂತೆ ಇಲ್ಲಿನ ಕತೆಗಳು ಓದುಗರ ಮನಸ್ಸಿನಲ್ಲಿ ಹಲವು ಅರ್ಥ ಮತ್ತು ಹಲವು ಜೀವನ ಸೂಕ್ಷ್ಮತೆಗಳನ್ನು ತೆರೆದಿಡುವ  ಮೂಲಕ ವಿಸ್ಮಯಕಾರಿ ವಿಶ್ವವೊಂದನ್ನು ನಮ್ಮ ಕಣ್ಣುಮುಂದೆ ಒಡಮೂಡಿಸುತ್ತವೆ.

ಸಂಕಲನದ ಮೊದಲು ಕಥೆ ” ನೆರಳಿಲ್ಲದ ಮರ” ಕೃತಿಯ ಶೀರ್ಷಿಕೆಯೂ ಆಗಿರುವುದರಿಂದ ಇಡೀ ಸಂಕಲನದ ಆಶಯಕ್ಕೆ ಒಂದು ರೂಪಕವಾಗಿ ನಿಲ್ಲುತ್ತದೆ. ಈ ನೆರಳಿಲ್ಲದ ಮರ ಸಮಾಜಿಕ ಸಂಕಷ್ಟದ ದುರಿತ ಕಾಲದ ಕಡು ಬಿಸಿಲಿನಲ್ಲೂ ಒಂಟಿಯಾಗಿ ತನ್ನ ಅಸ್ತಿತ್ವಕ್ಕಾಗಿ ಏಕಾಂಗಿಯಾಗಿ ನಿಂತು ತನಗೇ ನೆರಳಿಲ್ಲದ ಪರಿಸ್ಥಿತಿಯಲ್ಲಿ ಇನ್ನೊಬ್ಬರ ತೆಲೆಗೂ ನೆರಳಾಗದ ನಿಸ್ಸಾಹಯಕತೆಯಲ್ಲಿ ನರಳುವುದು ಅರ್ಥರೂಪಕವಾಗಿ ಕಾಣುತ್ತೇವೆ. ಈ ಕತೆಯಲ್ಲಿ ಕಥಾನಾಯಕ ನಾಗರಾಜ ತನ್ನ ಸೋದರಮಾವನಿಂದಲೇ ಮೋಸಹೋಗಿ ಪರಿತಪಿಸುವ ಕತೆ. ಸುಶೀಲಾ ಎಂಬ ಬಾಲ್ಯದ ಗೆಳತಿಯೊಬ್ಬಳು ತೋರುವ ಕಕ್ಕುಲಾತಿ ಕುಂಚ ನೆಮ್ಮದಿ ನೀಡಿದರೂ ಅವಳಾಡುವ ಸತ್ಯದ ನುಡಿಗಳು ಇಡೀ ಗ್ರಾಮ್ಯಭಾರತದ ಚಿತ್ರಣ ಕಣ್ಮುಂದೆ ಬರುವಂತೆ ಮಾಡುತ್ತವೆ. ” ಗ್ರಾಮದ ಸೂಕ್ಷ್ಮಗಳು ಅವರಿಗೆ ಗೊತ್ತಿಲ್ಲ, ಒಬ್ಬ ಮನುಷ್ಯನನ್ನು, ಒಂದು ಕುಟುಂಬವನ್ನು, ಒಂದು ಹಳ್ಳಿಯನ್ನು ನಿಯಂತ್ರಣಕ್ಕೆ ತಗೆದುಕೊಳ್ಳುವ ಆಟದಲ್ಲಿ ಎಷ್ಟೆಲ್ಲ ಸಮರ ತಂತ್ರಗಳು ಅಡಗಿರುತ್ತವೆ ಎಂಬುದು ತಿಳಿಯಲಾರದು ಎನ್ನುವ ಸುಶೀಲಾಳ ಮಾತುಗಳು ಇಡೀ ಗ್ರಾಮದ ಒಳರಾಜಕೀಯ ಮತ್ತು ಅದರ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ‌.

ಸಂಕಲನದ ಎರಡನೇಯ ಕತೆ ‘ ತುಳಕಿ ಹೋಗಿತ್ತ..’ ಜೀವನ ಪರ್ಯಂತ ತನ್ನ ಟೇಲರ ವೃತ್ತಿಗೆ ನಿಷ್ಠನಾಗಿ ಕೊನೆಯವರೆಗೂ ಪ್ರಮಾಣಿಕತೆಯಿಂದ ಬದುಕಿದ ಟೇಲರ ಮಹಾದೇವನ ಜೀವನ ವೃತ್ತಾಂತ. ಸಮಯಕ್ಕೆ ತುಂಬಾ ಮಹತ್ವ ಕೊಡುವ ಹೇಳಿದ ಟೈಮಿಗೆ ಸರಿಯಾಗಿ ಬಟ್ಟೆ ಹೊಲಿದು ಕೊಡುತ್ತಿದ್ದ ಮಹಾದೇವ ಒಂದು ದಿನ ಇದ್ದಕ್ಕಿದಂತೆ ಮಾಯವಾಗಿ ಬಿಡುವುದು ಅವನ ಗಿರಾಕಿಗಳಲ್ಲಿ ಆತಂಕ ಮೂಡಿಸುತ್ತದೆ. ಅವನ ಗಿರಾಕಿಗಳಲ್ಲಿ ತುಂಬ ಆತ್ಮೀಯನಾದ ನಿರೂಪಕನಿಗೆ ಸುದ್ದಿ ತಿಳಿದು ಅವನ ಹುಡುಕಾಟಕ್ಕೆ ಹೊರಡುತ್ತಾನೆ.ರಸ್ತೆ ಅಗಲೀಕರಣದ ಕಾರಣ ಆತನಿಗೆ ಇದ್ದ ಒಂದು ಆಸ್ತಿ ಅಂಗಡಿ ಧ್ವಂಸವಾಗುವ ಸುದ್ದಿ ತಿಳಿದು ಜಿಗುಪ್ಸೆಗೊಂಡಿರುವ ಆತ ಮನಶ್ಶಾಂತಿಗೊಸ್ಕರ ದೇವಸ್ಥಾನ ಸೇರಿ ಭಜನೆ ಮಾಡುತ್ತ ಕಾಲಕಳೆಯುತ್ತಿದ್ದಾನೆ ಎಂಬ ವಿಷಯ ತಿಳಿದು ನಿರೂಪಕ ಗುಡಿಯ ಹೊರಗೆ ಕಾಯುತ್ತ ನಿಲ್ಲುವುದರ ಮೂಲಕ ಕತೆ ಮುಗಿಯುತ್ತದೆ. ಮುಂದೆ ಮಹಾದೇವನ ಭಜನೆ ಮುಗಿಯಿತೋ ಇಲ್ಲವೋ? ಕೊನೆಗೆ ನಿರೂಪಕ ಮಹಾದೇವನನ್ನು ಕಂಡು ಮಾತಾಡಿಸಿದನೋ ಇಲ್ಲವೋ, ಮಹಾದೇವ ಮನೆಗೆ ಮರಳಿದನೋ ಇಲ್ಲವೋ  ಎನ್ನುವ ಹಲವಾರು  ಪ್ರಶ್ನೆಗಳಿಗೆ ಓದುಗನೆ ತನ್ನಲ್ಲಿ ಕಲ್ಪನೆ ಕಟ್ಟಿಕೊಂಡು ಕಥೆ ಮುಕ್ತಾಯವಾಗಿಸಬೇಕು. ಅಪೂರ್ಣ ಕತೆಯ ತಂತ್ರ ಇಲ್ಲಿ ಲೇಖಕರು ಉಪಯೋಗಿಸುವುದರ ಉದ್ದೇಶ ಓದುಗನಲ್ಲಿ ಇನಷ್ಟು ಕುತೂಹಲ ಹುಟ್ಟಿಸುವುದು ಅಥವಾ ಕಥೆಗಳಿಗೆ ಅಂತ್ಯವೆನ್ನುವುದು ಇರುವದಿಲ್ಲ ಎಂದು ನಿರೂಪಿಸುವುದು ಆಗಿರಬಹುದು ಅನಿಸುತ್ತದೆ.

ಈ ಸಂಕಲನದ ಇನ್ನೊಂದು ಮುಖ್ಯ ಕತೆ ಜರಿ ರುಮಾಲ. ಈ ಕತೆ ಕಲಾವಿದರ ಸಂಕೀರ್ಣವಾದ ಬದುಕಿನ ವಿವಿಧ ಆಯಾಮಗಳನ್ನು ದರ್ಶಿಸುತ್ತದೆ. ಕತೆಯ ನಾಯಕ ಶಿಬಾರಗಟ್ಟಿ ಶಿವಲಿಂಗ ನಾಟಕದ ಹುಚ್ಚಿನಲ್ಲಿ ಬುದ್ದಿವಾದ ಹೇಳಿದ ಅಪ್ಪನಿಗೆ ” ನಿನ್ನ ಹೊಲಾ ಮನಿ ನೀನ ಇಟ್ಕೋ” ಎಂದು ಹೇಳಿ ಬೈಲಹೊಂಗಲದ ಸ್ವಾದರ ಮಾವನ ಮನೆ ಸೇರಿ, ಪಕ್ಕದ ಮನೆಯಲ್ಲಿ ನಡೆಯುತ್ತಿದ್ದ ಸಂಗ್ಯಾ ಬಾಳ್ಯಾ ಆಟದ ತಾಲೀಮು ಕಂಡು ಅದರತ್ತ ಆಕರ್ಷಿತನಾಗಿ ಅದರಲ್ಲಿ ಪಾತ್ರ ಮಾಡಬೇಕೆಂದು ಬಯಸಿ ನಾಟಕದ ಮಾಸ್ತರ ಮುಂದೆ ಡೈಲಾಗ್ ಹೊಡೆದು ತೋರಿಸುತ್ತಾನೆ. ಆಗ ಮಾಸ್ತರ ” ನಾಟಕ ಬಂದ್ರ ನಾಟಕ ಬಂದಾಂಗೇಣ? ಪ್ರೀತಿ ಪ್ರೇಮಾ ತಿಳ್ಕೋಳಾಕ ನಿನ್ಗ ಇನ್ನೂ ಟೈಮ ಹಿಡಿತೈತಿ. ಆ ಭಾವನಾ ಬರಬೇಕಾದರ ನೀ ಯಾರಿಗರ ಪ್ರೀತಿ ಮಾಡಬೇಕ” ಎಂದು ಸಲಹೆ ಕೊಟ್ಟಾಗ ಆತ ತನ್ನ ಮಾವನ ಮಗಳು ಲಲಿತಾಳಲ್ಲಿ ಅನುರಕ್ತನಾಗುತ್ತಾನೆ. ಆದರೆ ಶಿವಲಿಂಗನ ದುರಂತ ಅಂದರೆ ಲಲಿತಾ ಪತ್ರ ಬರೆದು ತಾನು ಅದೇ ನಾಟಕದ ಮಾಸ್ತರನನ್ನು ಪ್ರೀತಿಸುವದಾಗಿ ತಿಳಿಸಿ ಶಿವಲಿಂಗನ ಪ್ರೇಮ ತಿರಸ್ಕರಿಸುತ್ತಾಳೆ. ನಿರಾಸೆಯಿಂದ ಊರಿಗೆ ಮರಳಿದ ಶಿವಲಿಂಗ ತನ್ನದೇ ಒಂದು ಬಳಗ ಕಟ್ಟಿಕೊಂಡು ನಾಟಕ ಆಡುತ್ತ ಹೆಸರು ಸಂಪಾದಿಸಲಾರಂಭಿಸುತ್ತಾನೆ. ಅದೇ ಕಾಲಕ್ಕೆ ಆ ಮಾಸ್ತರ ಟೀಚರ ಒಬ್ಬಳೊಂದಿಗೆ ಊರು ಬಿಡುತ್ತಾನೆ.ಈ ವಿಷಯ ತಿಳಿದು ಶಿವಲಿಂಗನಿಗೆ ಖುಷಿಯಾದರೆ ಲಲಿತಾಗೆ ಆಘಾತವಾಗುತ್ತದೆ. ಮುಂದೆ ನಾಟಕದವರಿಗೆ ಮದುವೆಯಾಗುವುದು ಬೇಡವೆಂದರು ಕೇಳದೆ ಲಲಿತಾ ಹಟ ಹಿಡಿದು ಶಿವಲಿಂಗನನ್ನೆ ವರಿಸುತ್ತಾಳೆ. “ನಾಟಕಂದ್ರ ಅಷ್ಟ ಸರಳ ಅಲ್ಲ ಕತ್ತಿ ಮನಿ ಮ್ಯಾಲ ನಡೆದಾಂಗ, ಜೀವನ ಮತ್ತು ನಾಟಕ ಹೊಂದುಸುದ ತುಂಬಾ ಕಷ್ಟ” ಎಂದು ಮರಳಿ ಬಂದು ಶಿವಲಿಂಗನ ಕಂಪನಿ ಸೇರಿಕೊಂಡ ಮಾಸ್ತರ ಶಿವಲಿಂಗನಿಗೆ ಜರಿ ರುಮಾಲ ಹೊದಿಸಿ ಗೌರವ ನೀಡುವ ಮೂಲಕ ಜೀವನದ ಏರುಪೇರು ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯ ಸಂದೇಶ ನೀಡುತ್ತಾನೆ. ಮುಂದೆ ಶಿವಲಿಂಗನ ಜೀವನದ ಹಲವು ಘಟ್ಟಗಳನ್ನು ತೆರೆದಿಡುತ್ತದೆ. ನಾಟಕದ ಹುಚ್ಚಿನಿಂದ ಎಲ್ಲವನ್ನು ಕಳೆದುಕೊಂಡು ಹೆಸರು ಸಂಪಾದಿಸಿದ ತಂದೆಯನ್ನು ತಾತ್ಸಾರ ಭಾವನೆಯಿಂದ ಕಾಣುತ್ತಾರೆ. ಕೊನೆಗೆ ಒಂದು ಪವಾಡ ಸದೃಶ ಘಟನೆ ನಡೆದು ಕತೆ ಸುಖಾಂತ್ಯಗೊಳ್ಳುತ್ತದೆ.

ಚೂರಾದ ಚಂದ್ರ ಕೂಡ ಒಂದು ಅತ್ಯತಮ ಕತೆ. ಮುಖ್ಯವಾಗಿ ನಾಲ್ಕು ಪಾತ್ರಗಳ ಸುತ್ತ ಹಣೆಯಲ್ಪಟ್ಟಿದೆ, ಊರ ಇತಿಹಾಸ ಹೇಳುವ ರುದ್ರವ್ವ ಆಯಿ, ಅವಳ ಇಬ್ಬರು ಗಂಡ ಮಕ್ಕಳು ಮತ್ತು ಮೂಗಿ ಸೊಸೆಯ ಸುತ್ತ ಕಥೆ ತಿರಗುತ್ತದೆ. ಹಿರಿಯ ಮಗ ಅರ್ಜುನನಿಗೂ ಮತ್ತು ಕಿರಿಯ ಮಗ ಚನ್ನಪ್ಪನಿಗೂ ಮನಸ್ತಾಪ. ಈ ನಡುವೆ ಸಂಬಂಧ ಸುಧಾರಿಸಲು ಪರದಾಡುವ ರುದ್ರವ್ವ. ಒಂದು ದಿನ ಕಲಾದಗಿ ಮಾಸ್ತರನ ಕೊಲೆ ಕೇಸನಲ್ಲಿ ಹೆಸರು ಕೇಳಿ ಬಂದಿದ್ದಕ್ಕೆ ಚೆನ್ನಪ್ಪ ಊರು ಬಿಟ್ಟು ಫರಾರಿಯಾಗಿರುತ್ತಾನೆ. ಆದರೆ ಅವನ ಬೆನ್ನ ಹಿಂದೆ ಹತ್ತಾರು ಕಥೆ ಹುಟ್ಟಿಕೊಳ್ಳುತ್ತವೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತನ್ನ ಅಣ್ಣನನ್ನೆ ವಿರೋಧಿಸಿ  ರಾಮಣ್ಣ ಎಂಬವನ ಗೆಲುವಿಗೆ ಕಾರಣವನಾದ ಎನ್ನುವ ಕಾರಣಕ್ಕೆ ಸಹೋದರಲ್ಲಿ ಹಗೆತನ ಬೆಳೆದಿರುತ್ತದೆ. ಅದೇ ಸಮಯಕ್ಕೆ ಕಲಾದಗಿ ಮಾಸ್ತರನ ಕೊಲೆ ನಡೆದು ಆ ಕೊಲೆಗೆ ಚನ್ನಪ್ಪನ ಹೆಸರು ತಳಕು ಹಾಕಲಾಗುತ್ತದೆ. ಹೀಗಾಗಿ ಚನ್ನಪ್ಪ ಫರಾರಿಯಾಗುತ್ತಾನೆ. ಒಂದು ಕಡೆ ಮಾತಿನಲ್ಲೆ ವಿಷ ಕಕ್ಕುವ ಹಿರಿಯ ಮಗ, ಇನ್ನೊಂದು ಕಡೆ ಚನ್ನಪ್ಪನ ಮೂಗಿ ಸೊಸೆ ನೀಲವ್ವ. ಈ ನಡುವೆ ಮಗನಿಗಾಗಿ ತುಡಿಯುವ ತಾಯಿ ಮನಸ್ಸು. ಮುಗಿಯಲಾರದ ಮಾನಸಿಕ ತೋಳಲಾಟ. ಒಂದು ಕ್ಷಣ ಸಿಟ್ಟಿಗೇಳುವುದು ಮತ್ತೊಂದು ಕ್ಷಣ ಹೊಂದಿಕೊಳ್ಳುವುದು ರುದ್ರವ್ವ ಆಯಿಯ ಅನಿವಾರ್ಯ ಪರಿಸ್ಥಿತಿ. ವಯಸ್ಸು, ಕೆಮ್ಮು, ದಮ್ಮುಗಳಿಂದ ಬಸವಳಿದು ಹೋಗಿದ್ದ ಆಜ್ಜಿ ಕೊನೆಗೊಮ್ಮೆ ಮಗನ ಮುಖ ನೋಡಿ ಪ್ರಾಣ ಬಿಡಲು ಬಯಸುತ್ತಾಳೆ.ಆದರೆ ಕೊನೆಗಾಲದಾಗ ಒಬ್ಬ ಕೊಲೆಗಾರನ ಮುಖ ನೋಡಬೇಕಂತಿಯೇನ ಎಂದು ಹಿರಿಮಗ ಹಂಗಿಸುತ್ತಾನೆ. ಊರಿನ ಜನ ದ್ರೌಪದಿ ಮ್ಯಾಗ ಕರ್ಣಂದು ಆಸೆ ಇತ್ತಂತಲ್ಲ..ಎಂದು ಅರ್ಜುನ್ ಮತ್ತು ನೀಲ್ವಳ ಕುರಿತು ಆಡಿಕೊಳ್ಳುವುದು ಇತ್ಯಾದಿ ಊಹಾಪೋಹಗಳು ಹುಟ್ಟಿಕೊಂಡಿರುತ್ತವೆ. ಕತೆಗಾರ ಇಲ್ಲಿ ಕತೆಯನ್ನು ಕುಂತಿ, ಅರ್ಜುನ ಮತ್ತು ಕರ್ಣನ ಕತೆಯಾಗಿ ನೋಡುತ್ತಾರೆ. ಮಗನನ್ನು ಕಳೆದುಕೊಂಡ ದುಃಖದಲ್ಲಿ ರೋದಿಸುವ ತಾಯಿ, ತಂದೆಯಿಲ್ಲದೆ ಅನಾಥನಾದ ಮಗ, ಗಂಡ ಇಲ್ಲದೆ ಲೋಕ ನಿಂದನೆಗೆ ಗುರಿಯಾದ ನೀಲವ್ವಾ ಇವಗಳ ನಡುವೆ ಸ್ಪರ್ಶ ಚಿಕಿತ್ಸೆ  ಹೇಗೆ ಮನಸ್ಸುಗಳ ಒತ್ತಡಗಳನ್ನು ನಿವಾರಿಸುವ ಶಕ್ತಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ಕತೆಯ ಕೊನೆಯಲ್ಲಿ ಕತೆಗಾರರು ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ. ” ಮಗನನ್ನು ಮುದ್ದಿನಿಂದ ನೇವರಿಸಿದಂತೆಯೇ ತುಸು ಹಗುರಾಗಲೆಂದು ಅತ್ತೆಯ ಬೆನ್ನನ್ನು ನೇವರಿಸಿದಳು. ಗೋಡೆಯ ಆಸರೆಗೆ ಕೂಡ್ರಿಸಿ ಅವಳ ಕೈಕಾಲು ಒತ್ತಿದಳು. ಸೊಸೆ ಕೈ ಇಟ್ಟಲೆಲ್ಲ ಮುದಕಿಯ ಸುಕ್ಕುಗಟ್ಟಿದ ಚರ್ಮದ ನಿರಿಗೆಗಳು ಸಿಗುತ್ತಿದ್ದವು. ಆ ಗಂಟಿಕ್ಕಿದ ಮಡಿಕೆಗಳ ಮೇಲೆ ಅವಳ ಕೋಮಲ ಕೈಗಳು ಮಮತೆಯಿಂದ ಹರಿದಾಡಿದವು. ನಯ ನಾಜೂಕಿನ, ಕೈಯಿಟ್ಟರೆ ಜಾರುವ, ನಿಂಬೆಹಣ್ಣಿ ನಂತಹ ದೇಹದ ನುಣುಪು ಈ ರೀತಿ ರೂಪಾಂತರಗೊಳ್ಳುತ್ತದೆಯೇ ? ನಂಬಲಾಗದಂತೆ ನೀಲವ್ವ ತನ್ನ ತೋಳಗಳು ತಾನೇ ಸವರಿಕೊಂಡಳು… ಎನ್ನುವದರೊಂದಿಗೆ ಕತೆ ಮುಗಿಯುತ್ತದೆ. ಆದರೆ ಓಡಿ ಹೋದ ಮಗ ಮರಳಿ ಬಂದನೇ ಎನ್ನುವ ಪ್ರಶ್ನೆ ಮಾತ್ರ ಕತೆ ಮುಗಿದರು ಕಾಡುತ್ತಿರುತ್ತದೆ

‘ಮಾರುಕಟ್ಟೆ ಭಾಷೆ’ ಎಂಬ ಕತೆ ಲತಾ ಲಲಿತಾ ಎಂಬಿಬ್ಬರು ಗೆಳತಿಯರ ಕತೆಯಾಗಿದ್ದು. ಹೃದಯ ಭಾಷೆ ಮತ್ತು ಮಾರುಕಟ್ಟೆ ಭಾಷೆಯ ಅಂತರವನ್ನು ತೆರೆದಿಡುತ್ತದೆ. ಹೃದಯ ಭಾಷೆ ಕುರಿತು ಪ್ರಬಂಧ ಮಂಡಿಸಿ ಬಹುಮಾನ ಗಿಟ್ಟಿಸಿಕೊಂಡ ಈ ಗೆಳತಿಯರಲ್ಲಿ ಲಲಿತಾ ಎಂಬಾಕೆ ವಿಜಯನ ಮಾರುಕಟ್ಟೆ ಭಾಷೆಗೆ ಮಾರುಹೋಗಿ ವಿಜಯನೊಂದಿಗೆ ವಿವಾಹವಾಗುವ ಮೂಲಕ ತನ್ನ ಅಸ್ತಿತ್ವ ಕಳೆದುಕೊಳ್ಳುವದರ ಜೊತೆಗೆ ತನ್ನ ಗಂಡನ ರಾಜಕೀಯ ಜೀವನದ ಸಾಧನೆಗೆ ಮೆಟ್ಟಿಲಾಗುವುದು ಇಡೀ ಪುರುಷ ಪ್ರಧಾನ ಭಾಷೆಗೆ ಮಹಿಳೆಯರು ಬಲಿಯಾಗುವದನ್ನು ಸೂಚ್ಯವಾಗಿ ಧ್ವನಿಸುತ್ತದೆ.

ಒಂದು ಕಾಲಕ್ಕೆ ಶೌಚಕ್ಕೆಂದು ಹೊರಗಡೆಗೆ ಹೋಗುವ ಮಹಿಳೆಯರನ್ನು ಪೀಡಿಸುತ್ತ ಊರಿಗೆ ಬೇಸರವಾಗಿದ್ದ ಪುಂಡಲೀಕ ಈಗ ಅದೇ ಊರಿಗೆ ಶಾಲಾ ಶಿಕ್ಷಕನಾಗಿ ಬರುವ ಆಶ್ಚರ್ಯಕರ ಬೆಳವಣಿಗೆಯನ್ನು ಮತ್ತು ಇವನ ಪೀಡನೆಗೆ ಗುರಿಯಾದ ಕಮಲಿ ಎಂಬ ಮಹಿಳೆ ಈಗ ಗ್ರಾಮ ಅಧ್ಯಕ್ಷೆಯಾಗಿ ಬಯಲು ಮುಕ್ತ ಶೌಚಾಲಯ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸುವುದು ಎಲ್ಲ ಬದಲಾದ ಸಾಮಾಜಿಕ ಪರಿಸ್ಥಿಯನ್ನು ತುಂಬಾ ಹಾಸ್ಯಯಮಯವಾಗಿ ನಿರೂಪಿಸುವಲ್ಲಿ ಕಥೆಗಾರರು ಯಶಸ್ವಿಯಾಗಿದ್ದಾರೆ. “ಮರವಿದ್ದು ಫಲವೇನು” ದುಡಿದು ತಿನ್ನುವ ಬಡಕುಟುಂಬವೊಂದರ ಕತೆ. ಕುಟುಂಬ ಸದಸ್ಯರ ತುತ್ತಿನ ಚೀಲ ತುಂಬಿಸಲು ದುಡಿದ ದುಡಿದು ಸತ್ತ ಹೋದ ಗಂಡನ ನಂತರ ಕುಟುಂಬ ನಿರ್ವಹಣೆಗೆ ಟೊಂಕು ಕಟ್ಟಿ ನಿಲ್ಲುವ ಪಾರವ್ವಾ ತನ್ನ ಕರುಳು ಕುಡಿಯನ್ನು ಬೆಳೆಸಲು ಪರದಾಡುವ ಕತೆ. ಮಾವಿನ ಸುಗ್ಗಿಯಲ್ಲಿ ಮಾವು ಇಳಿಸುವ ಕೆಲಸಕ್ಕೆ ಹೋಗುವ ಪಾರವ್ವಳ ಮಗನಿಗೆ ಮಾವು ಅಂದರೆ ಪಂಚಪ್ರಾಣ. ಆದರೆ ಅವಳಿಗೆ ಮಾತ್ರ ವಾಕರಿಕೆ. ಇದರ ರಹಸ್ಯ ಅರಿಯಲು ಪ್ರಯತ್ನಿಸಿದ ಸಹಕೆಲಸಗಾರರಿಗೆ ಸಿಗುವ ಉತ್ತರ ಆಘಾತ ತರುವಂಥದ್ದು. “ಹೀಗೆ ಒಂದು ದಿನ ಕಾಯಿ ಇಳಸಲಿಕ್ಕೆ ಹೋದಾಗ ಮಾಲಿಕ ಮತ್ತವನ ಮಗ ಮಾವು ತಿನ್ನುತ್ತಿರುವುದು ಕಂಡು ಅಲ್ಲೇ ಹತ್ತಿರದಲ್ಲಿ ಆಡುತ್ತಿದ್ದ ತನ್ನ ಪುಟ್ಟ ಮಗಳು ತನಗೂ ಮಾವು ಬೇಕೆಂದು ಹಠ ಹಿಡಿಯಿತಂತೆ. ಆಗ ಆ ಮಾಲೀಕ ” ಒಂದು ಹಣ್ಣಿಗೆ ರೊಕ್ಕಾ ಎಷ್ಟು ಅಂತಾ ಗೊತ್ತೈತೇನು, ನೀ ಹಣ್ಣ ತಗೊಂಡಿ ಅಂದ್ರ ಇವತ್ತಿನ ಕೂಲಿ ಇಲ್ಲ” ಅಂತಾ ಸಾರುತ್ತಾನೆ. ಇದನ್ನು ಕೇಳಿದ ಪಾರವ್ವ ತನ್ನ ಮಗಳಿಗೆ ಮನೆ ಹೋಗಿ ಹಣ್ಣ ಕೊಡ್ತೀನಿ ಅಂತಾ ಎನೋ ಸಮಜಾಯಿಷಿ ಹೇಳಿ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಜ್ವರದಿಂದ ಬಳಲುತ್ತಿದ್ದ ಮಗು ಮಾವು ಬೇಡುತ್ತಲೇ ಕೊನೆಯುಸಿರು ಚಲ್ಲುವ ಘಟನೆ ತುಂಬ ಹೃದಯಸ್ಪರ್ಶಿಯಾಗಿ ದುಡಿಯುವ ವರ್ಗದ ಬದುಕಿನ ದಾರುಣತೆಯನ್ನು ಅನಾವರಣ ಗೊಳಿಸುತ್ತದೆ. ಒಂದು ಕಾಲಕ್ಕೆ ಬಡ್ಡಿ ಬಂಗಾರೆಮ್ಮ ಎಂದು ಪ್ರಸಿದ್ಧಿ ಹೊಂದಿದ್ದ ಅಡವೆಮ್ಮ ಈಗ ಇನ್ನೊಬ್ಬರ ಹಂಗಿನಲ್ಲಿ ಜೀವನ ಕಳೆಯಬೇಕಾದ ಬದಲಾದ ಪರಿಸ್ಥತಿಯ ಕತೆ. ಇದರಲ್ಲಿ ಹುಟ್ಟಿಕೊಳ್ಳುವ ಸಂಬಂಧಗಳ ಉಪಕತೆ ತುಂಬಾ ಕುತೂಹಲಕಾರಿಯಾಗಿಯೂ ನೈಜವಾಗಿಯೂ ಮೂಡಿ ಬಂದಿದೆ. ಅದನ್ನು ಇಲ್ಲಿ ಬಿಚ್ಚಿಟ್ಟರೆ ಸ್ವಾರಸ್ಯ ಉಳಿಯಲಾರದು.  ಹೀಗೆ ಪ್ರತಿಕಥೆಗೂ ಸ್ವಾರಸ್ಯಕರ ಉಪಕತೆಗಳು ಪೂರಕವಾಗಿ ಬಂದಿವೆ. ಅದನ್ನೆಲ್ಲ ಓದಿಯೇ ಸವಿಯಬೇಕು. ಧಾರವಾಡ ಭಾಗದ ಗ್ರಾಮ್ಯ ಭಾಷೆ ಮತ್ತು ಪರಿಸರದ ಸೊಗಡನ್ನು ಈ ಕತೆಗಳಲ್ಲಿ ಕಾಣಬಹುದಾಗಿದೆ. ನಾವು ಅತಿ ಸಣ್ಣದೆಂದು ನಿರ್ಲಕ್ಷಿಸಿ ಬಿಡುವಂಥ ಘಟನೆಗಳನ್ನು ವ್ಯಕ್ತಿಗಳನ್ನು ಎತ್ತಿಕೊಂಡು ಕತೆ ಕಟ್ಟಿರುವುದರಿಂದ ಎಲ್ಲಿಯೂ ಕೃತಕತೆಯ ಭಾವನೆ ಮೂಡುವದಿಲ್ಲ. ಎಲ್ಲ ಕತೆಗಳು ನಮ್ಮ ಕಣ್ಣು ಮುಂದಿನ ಘಟನೆಯಂತೆಯೇ ಭಾಸವಾಗುತ್ತವೆ ಮತ್ತು ಇಲ್ಲಿನ ಬಹುತೇಕ ಕತೆಗಳು ತಾರ್ಕಿಕವಾದ ಅಂತ್ಯ ಕಾಣದೆ ಕೊನೆಗೊಳ್ಳುವುದರಿಂದ Our story will never end ಎನ್ನುವ ಮಾತು ನೆನಪಿಗೆ ಬರುತ್ತದೆ.  ಒಟ್ಟಾರೆಯಾಗಿ  ಬಸು ಬೇವಿನಗಿಡದ ಅವರು ಇನ್ನೊಂದು ಉತ್ತಮವಾದ ಕಥಾಸಂಕಲನ ಕೊಟ್ಟಿದ್ದಕ್ಕೆ ಅಭಿನಂದನಾರ್ಹರು.

ಅಶ್ಫಾಕ್ ಪೀರಜಾದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Y.H.Mangodi
Y.H.Mangodi
3 years ago

ಬಸು ಅವರ ಎಲ್ಲ ಕಥೆ ಗಳ =ಪುಸ್ತಕ ಗ ಳ ಒಟ್ಟು ಬೆಲೆ ಎಷ್ಟಾಗುತ್ತದೆ?

1
0
Would love your thoughts, please comment.x
()
x