ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.


ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು.

“ ಹಾಂ,, ನನ್ ಮಗಳು ಅಂಥಾದ್ದೇನು ಮಾಡಿಲ್ರ್ಯೋ ಎಪ್ಪಾ,,,, ಅಕೀನ ತಪ್ಪ ಹೊಟ್ಯಾಗ ಹಾಕ್ಕೋಳ್ರ್ಯೋ,,, ಅಕೀನ ಜೀಂವಾ ಉಳಿಸ್ರ್ಯೋ ನಿಮ್ಮ ಕಾಲ ಬಿದ್ದ ಹೇಲ್ ತಿಂತೀನಿ ಸಾಯೂತನಕಾ ನಿಮ್ಮ ಋಣದಾಗ ಇರ್ತೀನ್ರ್ಯೋ” ಅಂತ ಕಂಡ ಕಂಡವರಿಗೆಲ್ಲಾ ಕೈ ಮುಗಿದು ಗೋಳಾಡುತ್ತಿದ್ದ ಕರವೀರನ ಸ್ಥಿತಿ ಕಂಡು ಮಂಜನ ಮನ ಕರುಗಿಹೋಗಿತ್ತು. ಮನೆಗೆ ಬಂದು ಕೈ ಕಾಲು ಮುಖ ತೊಳೆದು ಚಹಾ ಕುಡಿಯುವಷ್ಟರಲ್ಲಿಯೇ ಆತನಿಗೆ ಅಲ್ಲಿನ ಎಲ್ಲ ಬಾತಮಿ ತಿಳಿದು ಹೋಗಿತ್ತು. ಕೇರಿಯ ಯಾವೊಬ್ಬ ಗಂಡಸೂ ಅವನಿಗೆ ಆ ಸ್ಥಿತಿಯಲ್ಲಿ ಸಹಾಯ ಮಾಡಲು ಮುಂದಾಗಲು ಮನಸ್ಸು ಮಾಡಲಿಲ್ಲ. ಅದಕ್ಕೆ ಹಿನ್ನೆಲೆಯಿತ್ತಾದರೂ ಆ ಕ್ಷಣದ ಮಾನವೀಯತೆ ಮಂಜನ ಮನ ಕರುಗಿಸಿತ್ತು. ಸುತ್ತಲೆಲ್ಲ ನೆರೆದ ಹೆಂಗಸರು ಬಾಯಿಗೆ ಸೆರಗು ತುರುಕಿಕೊಂಡು ಲೊಚಗುಡುತ್ತಿದ್ದರು, ಹುಡುಗರು ಗಂಡಸರು ಅದೇನೋ ಸರ್ಕಸ್ ನೋಡುತ್ತಿರುವಂತೆ ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತುಬಿಟ್ಟಿದ್ದರು.

ಇದೆಲ್ಲವನ್ನು ಗಮನಿಸಿದ ಮಂಜನಿಗೆ ಅದೇನು ತಿಳಿಯಿತೋ ಗೊತ್ತಿಲ್ಲ ಪಟಕ್ಕನೇ ತನ್ನ ಜೇಬಿನಲ್ಲಿರಿಸಿದ ಮೊಬೈಲನ್ನ ಕೈಗೆತ್ತಿಕೊಂಡವನೇ 108 ಕ್ಕೆ ಫೋನಾಯಿಸಿದ. ಫೋನು ಜೇಬಿಗಿಳಿಸಿದ ಹತ್ತೇ ನಿಮಿಷದಲ್ಲಿ ಸದ್ದು ಮಾಡುತ್ತಲೇ ಅಂಬ್ಯಲೆನ್ಸ್ ವಾಹನ ಕೇರಿಗೆ ದೌಡಾಯಿಸಿತು. ಪಕ್ಕದಲ್ಲೇ ಇದ್ದ ಕರವೀರನ ಕೈ ಹಿಡಿದೆತ್ತಿಕೊಂಡು ಅವರ ಮನೆಯತ್ತ ಧಾವಿಸಿ ಆತನ ಮಗಳನ್ನು ಎತ್ತಿಕೊಂಡು ವಾಹನದಲ್ಲಿ ಮಲಗಿಸಿ ಕರವೀರನೊಂದಿಗೆ ಗಾಡಿ ಹತ್ತಿ ಬಾಗಿಲೆಳೆದುಕೊಂಡ. ತಕ್ಷಣ ಅಂಬ್ಯಲೆನ್ಸ್ ವಾಹನ ಪುನ: ಅದೇ ಸದ್ದಿನೊಂದಿಗೆ ತಿರುಗಿ ಆಸ್ಪತ್ರೆಯತ್ತ ಧಾವಿಸಿತು.


ಮಂಜನ ಅವ್ವನಿಗೆ ಏನೊಂದೂ ತಿಳಿಯದಾಗಿತ್ತು. “ ಇದರ ಮಾರಿ ಮಣ್ಣಾಗ ಅಡಗ್ಲೀ,,, ಇದಕ್ ಯಾಕ್ ಬೇಕಾಗಿತ್ತು ಅಂತೀನಿ ಸಾಯಾಕಿ ಸತ್ತ ಹೋಗ್ವಾಳ್ಳು ಬಿಡಬೇಕಿಲ್ಲ,,,, ತನಗ ಬೇಕಾಗಿ ವಿಷಾ ಕುಡದಾಳು ಕೇರ್ಯಾನ ಗಂಡಸರಿಗೆಲ್ಲ ಬ್ಯಾಸರಾದ ಮೂದೇವಿನ ದವಾಖಾನಿಗ ಕರಕೊಂಡ ಹೋಗೂದ ಇಂವಗ್ಯಾಕ ಬೇಕಿತ್ತು “ ಅಂತ ಹಿಡಿಶಾಪ ಹಾಕುತ್ತಿರುವಾಗಲೇ ಕೇರಿಯ ಹೆಂಗಸರೆಲ್ಲ ಮಂಜನ ಮನೆಯ ಮುಂದೆ ಜಮಾಯಿಸಿದ್ದರು. ಕುತೂಹಲ ಮನೆ ಮಾಡಿದ ಆ ಹುಡುಗಿ ಆತ್ಮಹತ್ಯೆಗೆ ಶರಣಾದ ಕಥೆಯ ತಿರುವು ಸ್ವತ: ಮಂಜನಿಗೂ ತಿಳಿದಿರಲಿಲ್ಲವಾದರೂ ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ಒಂದು ಜೀವವನ್ನು ಉಳಿಸುವ ಒಂದೇ ಒಂದು ಸದುದ್ದೇಶವನ್ನಿಟ್ಟುಕೊಂಡು ಸಹಾಯ ಮಾಡುವ ಮಂಜನ ಮನಸ್ಸಿಗೆ ಕೇರಿಯ ಹೆಂಗಸರೂ ಶಹಭ್ಭಾಶಗಿರಿ ಕೊಡುತ್ತಲೇ ಮಂಜನ ತಾಯಿಗೆ ಸಮಾಧಾನ ಮಾಡುತ್ತಿದ್ದರು.

ಅಲ್ಲಲ್ಲಿ ಕಟ್ಟೆಯ ಮೇಲೆ ಕೂತು ಆಕೆಯದೇ ಮಾತುಗಳನ್ನಾಡುತ್ತಿದ್ದ ಊರಿನ ಜನರೆಲ್ಲ ಸೂರ್ಯ ತನ್ನ ತಾಯಿಯ ಹೊಟ್ಟೆಗೆ ಹೋಗುವ ಹೊತ್ತಿಗೆ ಮರೆತು ತಂತಮ್ಮ ಮನೆ ಸೇರಿದ್ದರು. ಬೆಳಕು ಹರಿಯುವವರೆಗೂ ಮಂಜನದೇ ಚಿಂತೆ ಮಾಡುತ್ತಿದ್ದ ಆತನ ತಾಯಿಗೆ ರಾತ್ರಿಯಿಡೀ ನಿದ್ದೆಯೇ ಹತ್ತಲಿಲ್ಲ. ಬೆಳಕಾದ ಕೂಡಲೇ ಮಂಜನ ಬರುವಿಕೆಗಾಗಿ ಕಾಯುತ್ತ ಕೂತಿದ್ದ ಆತನ ತಾಯಿ ಮಂಜ ಬರುವವರೆಗೂ ಹನಿ ನೀರೂ ಕುಡಿದಿರಲಿಲ್ಲ. ಮಂಜ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದವನೇ ಸ್ನಾನ ಮಾಡಿ ಊಟಕ್ಕೆ ಅಣಿಯಾದ. ತಾಯಿ ಮಗ ಇಬ್ಬರೂ ಕೂಡಿ ಊಟ ಮಾಡಿ ಮುಗಿಸಿದರು. ಆವಾಗ ಮಂಜನ ತಾಯಿಗೆ ತನ್ನ ಮಗನು ಮಾಡಿದ ಕಾರ್ಯಕ್ಕೆ ಮನದಲ್ಲೇ ಅಭಿನಂದನೆ ಸಲ್ಲಿಸಿ “ ಮಗಾ ಅಕೀ ಈಗ ಹೆಂಗಾದಳೋ ? “ ಎಂದು ಮೆಲ್ಲಗೆ ಉಸುರಿದಳು. “ ಅಕಿ ಏನ ಅರಾಮಿದಾಳ ಬಿಡು ಅಂತ ಮಂಜ ತನ್ನ ತಾಯಿಗೆ ಸಮಾಧಾನ ಮಾಡುತ್ತ ಬಟ್ಟೆ ತನ್ನ ಕೆಲಸಕ್ಕೆ ಹೊರಟ.

ಕರವೀರನೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡ ಮಂಜ ಪಾರ್ವತಿಯ ಆರೋಗ್ಯ ವಿಚಾರಿಸುತ್ತಿದ್ದ. ಸಂಜೆಯಾದೊಡನೆ ಮತ್ತೇ ಆಸ್ಪತ್ರೆಗೆ ಭೇಟಿ ನೀಡಿದ ಮಂಜ ಕರವೀರನ ಕೈಗೆ ಒಂದಿಷ್ಟು ಹಣ ನೀಡಿ “ನಾಳೆ ಡಿಸ್ಚಾರ್ಜ ಮಾಡಿಸಿಕೊಂಡು ಬರ್ರೀ “ ಎನ್ನುತ್ತಲೇ ನಡೆದ. ಮಗಳು ವಿಷ ಕುಡಿದಿರುವ ಸುದ್ದಿಯಿಂದ ಅವಮಾನಿತನಾದ ಕರವೀರ ಪಾರ್ವತಿಯನ್ನು ಡಿಸ್ಚಾರ್ಜ ಮಾಡಿಸಿಕೊಂಡು ನೇರವಾಗಿ ಮನೆಗೆ ಬರದೇ ತನ್ನ ಸಂಬಂಧಿಯೊಬ್ಬರ ಮನೆಗೆ ಕರೆದುಕೊಂಡು ಹೋದ.

ನಿತ್ಯವೂ ಕುಡಿತ, ಜೂಜು, ಎಲೆ ಅಡಿಕೆ ತಂಬಾಕು ಜಗಿಯುತ್ತ ಮಗಳು ಆಕೆಯ ಭವಿಷ್ಯದ ಕುರಿತು ಕಿಂಚಿತ್ತೂ ಯೋಚನೆ ಮಾಡದ ಕರವೀರನಿಗೆ ನಿಜಕ್ಕೂ ಆಗ ಬುದ್ದಿ ಬಂದಿತ್ತು. ತನ್ನ ಹೆಂಡತಿಯನ್ನು ಕಳೆದುಕೊಂಡ ದು:ಖವನ್ನು ಈ ಮಗಳ ಮುದ್ದಾದ ಮುಖ ನೋಡುತ್ತಲೇ ಮರೆತಿದ್ದ ಕರವೀರನಿಗೆ ಮಗಳ ಈ ವರ್ತನೆಯಿಂದ ಆಕಾಶವೇ ಕಳಚಿ ಮೈ ಮೇಲೆ ಬಿದ್ದಂತಾಗಿದ್ದ. ತುಂಬಾನೇ ಗೊಂದಲಕ್ಕೀಡಾದ ಕರವೀರ ಮಂಜನ ಉಪಕಾರವನ್ನು ಮನದಲ್ಲೇ ನೆನೆದು ಆತನಿಗೆ ಫೋನು ಮಾಡಿ ಸುದ್ದಿ ಮುಟ್ಟಿಸಿದ. ನಂತರ ಮಂಜನೂ ಈ ವಿಷಯವನ್ನು ಅಲ್ಲಿಗೇ ಬಿಟ್ಟು ತನ್ನ ಕೆಲಸದಲ್ಲಿಯೇ ಮಗ್ನನಾಗಿದ್ದ. ಸಂಬಂಧಿಯೊಬ್ಬರ ಮನೆಗೆ ಹೋದ ನಂತರ ಕರವೀರನೂ ಒಂದಿಷ್ಟು ತಿಂಗಳು ಅಲ್ಲಿಯೇ ಉಳಿದುಕೊಂಡು ಕೂಲಿ ಕೆಲಸಕ್ಕೆ ಹೋಗುತ್ತ ಬರುವ ಆದಾಯದಲ್ಲಿಯೇ ಜೀವನ ಸಾಗಿಸುತ್ತಿದ್ದ. ಆತನೂ ಮಂಜನ ಸುದ್ದಿಗೆ ತಲೆ ಹಾಕಲೇ ಇಲ್ಲಾ. ಹೀಗೆಯೇ ಒಂದಿಷ್ಟು ತಿಂಗಳುಗಳ ನಂತರ ಊರಿನ ಜನರೂ ಆಕೆಯ ಸುದ್ದಿಯನ್ನು ಮರೆತೇ ಹೋಗಿದ್ದರು.


ಕರವೀರನದು ಅಷ್ಟೇನೂ ಸುಖೀ ಕುಟುಂಬವಲ್ಲ. ಈ ಮೊದಲೇ ಮದುವೆಯೊಂದನ್ನು ಮಾಡಿಕೊಂಡು ಮೂರು ಮಕ್ಕಳನ್ನೂ ಕೈಗಿತ್ತು ಆಕೆಯಿಂದ ದೂರವಾಗಿ ಮತ್ತೊಬ್ಬಳನ್ನು ಕಟ್ಟಿಕೊಂಡ ಭೂಪ. ರೆಟ್ಟೆ ಗಟ್ಟಿಯಿದ್ದಾಗಲೇ ಮೈ ಮುರಿದು ದುಡಿದು ಒಂದಿಷ್ಟು ಕಾಸು ಕೂಡು ಹಾಕಿ ಚಿಕ್ಕದೊಂದು ಮನೆ ಕಟ್ಟಿ ತಾನಾಯ್ತು ತನ್ನ ಹೆಂಡತಿ ಮಕ್ಕಳಾಯ್ತು ಎಂದು ಉಳಿದವನಲ್ಲ. ಸಾರಾಯಿ ದಾಸನಾದ ಕರವೀರ ದಿನವೂ ಸಾಲ ಮಾಡಿ ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಇದರಿಂದ ಹೆಂಡತಿ ಮಕ್ಕಳೊಡನೆ ನಿತ್ಯವೂ ಜಗಳ ಕಿರಿಕಿರಿ ಇದೆಲ್ಲವನ್ನೂ ನೋಡಿ ನೋಡಿ ಬೇಸತ್ತ ಈತನ ಹೆಂತಿ ಕೊನೆಗೊಮ್ಮೆ ಮಾರಿ ಬೇನೆಗೆ ತುತ್ತಾಗಿ ಕಣ್ಮುಚ್ಚಿದ್ದಳು.

ಕೈಗೊಂದು ಹೆಣ್ಣು ಮಗುವನಿತ್ತು ಕಣ್ಮುಚ್ಚಿದ ಹೆಂಡತಿಗೆ ಮನದಲ್ಲೇ ಹಿಡಿಶಾಪ ಹಾಕಿ ಒಂದಿಷ್ಟು ದಿನ ಒಂಟಿಯಾಗಿದ್ದುಕೊಂಡು ಕೂಲಿ ಮಾಡಿ ಅಂಬಲಿ ಕಾಸಿ ಕುಡಿಯುವ ಕರವೀರನಿಗೆ ಕೇರಿಯ ಜನ ಮರುಗಿ ಒಂದಿಷ್ಟು ಸಹಾಯ ಮಾಡಿದ್ದರು. ಕ್ರಮೇಣ ತನ್ನ ಹೆಂಡತಿಯ ಸಾವನ್ನು ಮರೆತ ಕರವೀರ ಮತ್ತೇ ಹಳೆ ಚಾಳಿ ಮುಂದುವರೆಸಿದ. ನಿತ್ಯವೂ ಕುಡಿಯುವ ಚಟಕ್ಕೆ ದಾಸನಾದ ಈತನಿಗೆ ಹಣದ ಮೂಲ ಹುಡುಕುವುದೇ ಕಾಯಕವಾಗಿತ್ತು. ಅಂಗೈಅಗಲ ಜಮೀನನ್ನೂ ಒತ್ತೆಯಿಟ್ಟು ಕುಡಿತದ ಚಟಕ್ಕೆ ಸಂಪೂರ್ಣ ದಾಸನಾಗಿ ಕಂಗಾಲಾಗಿದ್ದನು. ಈ ಸಮಯದಲ್ಲಿ ಮಗಳು ಪಾರ್ವತಿ ಮೈನೆರೆದದ್ದು ಖುಷಿಯೆನಿಸಿತಾದರೂ ಅವಳ ಭವಿಷ್ಯವನ್ನು ನೆನೆದು ಕಣ್ಣೀರು ಹಾಕಿದ. ತಾಯಿ ಇಲ್ಲದ ತಬ್ಬಲಿ ಮಗಳನ್ನು ಆದಷ್ಟು ಬೇಗನೆ ಮದುವೆ ಮಾಡಿ ಕೊಟ್ಟು ತಾನು ಹಾಳು ಬಾವಿ ಬಿದ್ದರೂ ಚಿಂತೆಯಿಲ್ಲ ಎಂಬಂತೆ ಪರಿಚಿತರಿಗೆಲ್ಲ ತನ್ನ ಮಗಳು ಮೈನೆರೆದ ಸುದ್ದಿಯನ್ನು ಹೇಳಿ ಕಳುಹಿಸಿದ. ಮಗಳು ಅಷ್ಟೇ ದುಂಡಗೆ ಬೆಳ್ಳಗೆ ಹೊಳೆಯುವ ಚಂದಿರನಂತಾಗಿದ್ದಳು. ತಾನು ತನ್ನ ತಂದೆಯೊಂದಿಗೆ ಕೂಲಿ ಕೆಲಸಕ್ಕೆ ಹೊರಟು ತನ್ನ ತಂದೆಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಿದ್ದಳು.

ನಿತ್ಯ ಕೂಲಿಗೆ ಹೋಗುವುದು ಸಂಜೆ ಸಾರಾಯಿ ಬಾಟಲಿಯೊಂದಿಗೆ ಮನೆಗೆ ಬರುವುದು ಬರುವಾಗ ತನ್ನ ಕುಡುಕ ಸ್ನೇಹಿತರನ್ನೆಲ್ಲ ಮನೆಗೆ ಕರೆ ತರುವುದು ಇದ್ದುದರಲ್ಲಿಯೇ ಊಟ ಮಾಡಿ ಮಲಗುವುದು ವಾಡಿಕೆಯಾಗಿತ್ತು. ಮಗಳು ಮೈ ನೆರೆದು ವರ್ಷ ತುಂಬುತ್ತಿದ್ದಂತೆಯೇ ಕೆಲಸಕ್ಕೆ ಹೋದಾಗ ದುಷ್ಟ ಕಾಮುಕನ ಕಣ್ಣಿಗೆ ಬಿದ್ದ ಈಕೆ ಆತನ ವಂಚನೆಗೆ ತುತ್ತಾಗುವುದಕ್ಕೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ತೀರ ಸಲುಗೆಯಿಂದಲೇ ಪ್ರಾರಂಭವಾದ ಪಾರ್ವತಿ ಹಾಗೂ ಇವಳೊಂದಿಗೆ ಕೆಲಸಕ್ಕೆ ಬರುತ್ತಿದ್ದ ಇಮಾಮಸಾಬಿಯ ಸ್ನೇಹ ಅಷ್ಟೇ ಬೇಗನೆ ಪ್ರೇಮಕ್ಕೆ ತಿರುಗಿತ್ತು.

ಒಂದಿಷ್ಟು ತಿಂಗಳು ಕರವೀರನ ಕಣ್ತಪ್ಪಿಸಿ ಇವರಿಬ್ಬರ ಪ್ರೇಮ ಹಿತ ನೀಡಿತ್ತಾದರೂ ಸಮಾಜದ ಕಣ್ಣಿಗೆ ಇವರು ಹೇಗೆ ಕಾಣುತ್ತಿದ್ದಾರೆ ಎಂಬುದನ್ನು ಅರಿಯಲು ಪಾರ್ವತಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಅಷ್ಟೊತ್ತಿಗಾಗಲೇ ಗುಟ್ಟು ರಟ್ಟಾಗಿತ್ತು. ಪಾರ್ವತಿ ಮೂರು ತಿಂಗಳ ಬಸುರಿಯಾಗಿದ್ದಳು. ಈ ಸುದ್ದಿ ಇಮಾಮಸಾಬಿಗೆ ತಿಳಿದಿದ್ದೇ ತಡ ತಾನು ಮದುವೆಯಾಗುವುದಾಗಿ ಮಾತು ನೀಡಿ ಮಾತುಕತೆಗೆ ಮುಂದಾಗಿಯೇ ಬಿಟ್ಟ. ಸಂಬಂಧಿಕರು ಬೀಗರು ಬಿಜ್ಜರನ್ನೆಲ್ಲ ಬಿಟ್ಟು ಮದುವೆ ಮಾಡಿಸುವುದು ಕರವೀರನಿಗೂ ಕಷ್ಟವಾಗಿತ್ತು. ಹೇಳಿ ಒಪ್ಪಿಸುವ ಇರಾದೆ ಅವನಿಗಿತ್ತಾದರೂ ಒಪ್ಪುವ ಮನಸ್ಥಿತಿ ಸಂಬಂಧಿಕರಿಗಿರಲಿಲ್ಲ. ಈ ಚಿಂತೆಯಲ್ಲಿಯೇ ದಿನ ದೂಡುತ್ತಿದ್ದ ಕರವೀರನಿಗೆ ಮಗಳು ಈ ರೀತಿ ಆತ್ಮಹತ್ಯೆಗೆ ಮುಂದಾಗಿರುವುದು ಆಘಾತವನ್ನುಂಟು ಮಾಡಿತ್ತು. ಯಾರ ಮುಂದೆಯೂ ಹೆಳುವಂತಿಲ್ಲ ಮಾನದ ಪ್ರಶ್ನೆ ಬೇರೆ. ಇನ್ನೂ ಮದುವೆಯಾಗದ ಮಗಳು ಈ ರೀತಿ ಮದುವೆಗೆ ಮುಂಚೆಯೇ ಬಸುರಿಯಾದರೆ ಅವಳ ಮುಂದಿನ ಗತಿ ಹೇಗೆ ಎಂದು ಚಿಂತಿಸುತ್ತಿರುವ ಕರವೀರನಿಗೆ ಅವಳ ಈ ಕೃತ್ಯ ತೀರಾ ಸಂಕಟದ್ದಾಗಿತ್ತು. ಕೊನೆಗೂ ಮಗಳ ಹೊಟ್ಟೆ ಸೇರಿದ ವಿಷ ಅದಾಗಲೇ ಗರ್ಭದಲಿ ಅಂಕುರಿಸಿದ ಅವಳ ಕುಡಿಯನ್ನು ಕೊಂದು ಹಾಕಿತ್ತು.ಹೋದರೆ ಹೋಗಲಿ ಮಗಳು ಬದುಕಿದಳಲ್ಲ ಎಂಬ ಸಮಾಧಾನದಿಂದ ಕರವೀರ ನಿಟ್ಟುಸಿರು ಹಾಕಿದ.


ಪಾರ್ವತಿಯನ್ನು ಅಷ್ಟು ಸರಳವಾಗಿ ಮದುವೆ ಮಾಡಿಕೊಡಲು ಕೇರಿಯ ಜನ ಒಪ್ಪದೇ ಇರುವುದಕ್ಕೆ ಹಲವಾರು ಕಾರಣಗಳಿದ್ದವು. ಆತನು ಬೇರೆ ಜಾತಿಗೆ ಸೇರಿದವನು ಮೇಲಾಗಿ ಇಮಾಮಸಾಬಿ ಅವಿವಾಹಿತನಲ್ಲ ಈಗಾಗಲೇ ಒಂದು ಮದುವೆಯಾದವ. ಇವಳನ್ನು ಮದುವೆ ಮಾಡಿಕೊಟ್ಟರೆ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಇರಲಿಲ್ಲ. ಆದಾಗ್ಯೂ ಅಣ್ಣತಮ್ಮಂದಿರು ಬೀಗರು ಬಿಜ್ಜರನ್ನೆಲ್ಲ ತಿರಸ್ಕರಿಸಿ ಮನೆಯನ್ನೇ ಬಿಟ್ಟು ಬೇರೊಂದು ಊರಿಗೆ ಹೋಗಿ ಕೂಲಿ ನಾಲಿ ಮಾಡಿ ಬದುಕಿದರಾಯಿತು ಎಂದುಕೊಂಡು ಕರವೀರನೂ ಗಟ್ಟಿ ಮನಸ್ಸು ಮಾಡಿ ಊರಿಂದ ಹೊರಟು ನಡೆದಿದ್ದ. ಇಮಾಮಸಾಬಿಯ ಒಂದಿಷ್ಟು ಹಿರಿಯರು ಹಾಗೂ ಈ ಮಂಜನ ಹಿರಿತನದಲ್ಲೇ ಅವರಿಬ್ಬರ ಮದುವೆ ಮಾಡಿ ಬಿರಿಯಾನಿಯೊಂದಿಗೆ ಮಾತುಕತೆ ಮುಗಿದುಹೋಗಿತ್ತು.

ಈ ಎಲ್ಲ ವಿಷಯ ಮಂಜನಿಗೆ ಗೊತ್ತಿರುವುದರಿಂದಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ ಮಂಜ ಸಾಯುವ ಒಂದು ಜೀವವನ್ನು ಬದುಕುಳಿಸಿದ್ದ. ತಾಯಿ ಕಳೆದುಕೊಂಡು ಅಣ್ಣ ತಮ್ಮರಿಲ್ಲದ ತಬ್ಬಲಿಯಾದ ಪಾರ್ವತಿಗೆ ಪಾಲಿಗೆ ಈತನೇ ಅಣ್ಣನಾಗಿದ್ದ. ಈ ಯಾವೊಂದು ವಿಷಯವನ್ನೂ ಯಾರೊಂದಿಗೂ ಹಂಚಿಕೊಳ್ಳದೇ ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆ ಹೆಣ್ಣು ಜೀವ ಎಲ್ಲಾದರೂ ಸರಿ ಬದುಕಿದ್ದರೇ ಸಾಕು ಎಂದುಕೊಂಡು ಅವಳನ್ನು ಮದುವೆ ಮಾಡಿಸಿದ ಸಮಾಧಾನದಿಂದಲೇ ಮನೆಗೆ ಮರಳಿದ್ದ. ಆಮೇಲೆ ಅವರ ಗೋಜಿಗೆ ಹೋಗುವ ಪ್ರಯತ್ನವನ್ನೂ ಮಂಜ ಮಾಡಿರಲಿಲ್ಲ. ಪಾರ್ವತಿಯೂ ಅಷ್ಟೇ ತನ್ನ ತಂದೆ ಕದ್ದು ಮುಚ್ಚಿ ತನ್ನನ್ನು ಭೇಟಿ ಮಾಡುವುದಕ್ಕೆ ಬಂದಾಗಲೆಲ್ಲ ಮಂಜಣ್ಣನ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಒಂದರ್ಥದಲ್ಲಿ ಮಂಜ ಅವಳಿಗೆ ಖಾಸ ಅಣ್ಣನಂತಾಗಿ ಹೋಗಿದ್ದ.

ಕರವೀರನೇ ಆಗಾಗ್ಗೆ ಪಾರ್ವತಿಯನ್ನು ಭೇಟಿ ಮಾಡಲು ಹೋಗುತ್ತಿದ್ದ. ಎರಡು ವರ್ಷಗಳವರೆಗೂ ಪಾರ್ವತಿಯ ಸುದ್ದಿ ವಿವಾದವಾಗಿಯೇ ಇತ್ತಾದರೂ ಅವಳು ಓಡಿ ಹೋದವನೊಂದಿಗೆಯೇ ಮದುವೆಯಾಗಿದ್ದಾಳೆಂಬ ಗುಮಾನಿಯಲ್ಲಿ ಊರಿನ ಜನ ಸುಮ್ಮನಾಗಿದ್ದರು. ಅವಳಿಗಾಗಿ ಮರಗುತ್ತಿದ್ದ ಅದೇಷ್ಟೋ ಹೆಣ್ಣುಮಕ್ಕಳು ಅವಳ ಈ ಕೆಲಸವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಹೀಗೆ ಒಂದಿಷ್ಟು ವರ್ಷ ಕೇರಿಯಿಂದ ದೂರವಾಗಿದ್ದ ಪಾರ್ವತಿ ಎಲ್ಲೋ ಒಂದು ಕಡೆ ಸುಖವಾಗಿರಬಹುದು ಎಂದುಕೊಂಡಿದ್ದ ಮಂಜನಿಗೆ ಮತ್ತೊಂದು ಆಘಾತ ಎದುರಾಗಿತ್ತು. ಇತ್ತ ಗಂಡನೊಂದಿಗೆ ಹೊಂದಿಕೊಂಡಿರಲಾರದೇ ಅವರ ಮನೆಯವರಿಂದಲೇ ಕೇವಲವಾದ ಮಾತುಗಳನ್ನು ಕೇಳುತ್ತ ಅಲ್ಲಿನ ಸಮಾಜದವರ ಕೆಂಗಣ್ಣಿಗೆ ಗುರಿಯಾದ ಪಾರ್ವತಿ ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಳು. ಒಂದು ಸಲ ಜಾರಿದ ಸೆರಗಿಗೆ ಬೆಂಕಿ ಹೊತ್ತಿಕೊಂಡೇ ಬಿಟ್ಟಿರುವುದು ಅವಳ ಗಮನಕ್ಕೆ ಬರುವುದಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ.


ಈ ಹದಿವಯಸ್ಸೇ ಹೀಗೆ ಕುಣಿಸುತ್ತೇ ಕುಣಿಸುತ್ತೇ ಕೊನೆಗೊಮ್ಮೆ ಸುಸ್ತು ಮಾಡಿ ನೆಲಕ್ಕುರುಳಿಸುತ್ತೇ. ಅದರ ತಾಳಕ್ಕೆ ಕುಣಿಯದೇ ಸಂಸ್ಕøತಿ, ಆಚಾರ, ವಿಚಾರದತ್ತ ಗಮನಹರಿಸಿ ನಯ ವಿನಯದಿಂದ ಬಾಳ್ವೆ ಮಾಡುವುದು ಅನಿವಾರ್ಯವಾದ ಹೆಣ್ಣಿನ ಮನಸ್ಥಿತಿಗೆ ಕಾಮದ ಕೆಂಗಣ್ಣು ಬರಸೆಳೆಯುತ್ತದೆ. ಕ್ರಮೇಣ ಕಾಮದ ಕೆಂಡ ತನ್ನ ಇಡೀ ದೇಹ ಮತ್ತು ಮನಸ್ಸನ್ನು ಸುಡುವ ಸಾರ್ವಕಾಲಿಕ ಸತ್ಯ ಪಾರ್ವತಿಗೆ ಅದಾಗಲೇ ಅರಿವಾಗಿತ್ತು. ಅದಾಗಲೇ ಪಾರ್ವತಿ ಸಂಶಯದ ಭೂತದಿಂದ ಗಂಡನಿಗೂ ಬೇಡವಾಗಿ ಹೋಗಿದ್ದಳು. ಸಮಾಜದಲ್ಲಿ ಓಡಿ ಬಂದವಳನ್ನು ನೋಡುವ ಪರಿಯೇ ಬೇರೆ ಇದೆ. ಈ ಕೆಟ್ಟ ದರಿದ್ರ ಸಮಾಜದಲ್ಲಿ ತನ್ನಿಡೀ ಜೀವನ ಸವೆಸುವುದು ಪಾರ್ವತಿಗೆ ಇಷ್ಟವಾಗಲಿಲ್ಲ. ಪಾರ್ವತಿ ಇದೆಲ್ಲದಿರಂದ ಮುಕ್ತಿ ಪಡೆಯುಯವ ಯೋಚನೆಯಲ್ಲ ಮಗ್ನಳಾಗಿದ್ದಳು.

ಮನೆಗೆ ಹೋಗಲೂ ಬಾರದ ತಂದೆಗೆ ಮುಖ ತೋರಿಸಲೂ ಆಗದ ಗಂಡನೊಂದಿಗೂ ಹೊಂದಿಕೊಂಡಿರಲಾರದ ಮನಸ್ಥಿತಿಯಲ್ಲಿರುವ ಪಾರ್ವತಿ ತುಂಬ ನೊಂದು ಹೋಗಿದ್ದಳು. ಮಂಜನಿಗೆ ಕೊನೆಯ ಬಾರಿ ಫೋನಾಯಿಸಿ ನನಗೆ ಈ ಗಂಡ ಮದುವೆ ಇದೆಲ್ಲವೂ ಬೇಡವಾಗಿವೆ. ಅಣ್ಣಾ ದಯಮಾಡಿ ನನ್ನ ಇಲ್ಲಿಂದ ಬಿಡಿಸಿ ಪುಣ್ಯ ಕಟ್ಟಿಕೋ ಮುಂದೆಂದೂ ನಾ ನಿನ್ನ ಕಾಡಲಾರೆ. ಎಲ್ಲಾದರೂ ದಊರ ಹೋಗಿ ದುಡಿದು ಒಬ್ಬಂಟಿಯಾಗಿಯೇ ಬದುಕುವೆ ಎಂದು ಕೇಳಿಕೊಂಡಳು. ಇಷ್ಟೆಲ್ಲಾ ಸಹಾಯ ಮಾಡಿದ ಮಂಜ ಇದೊಂದು ಬಾರಿ ಕೊನೆಯದಾಗಿ ಸಹಾಯ ಮಾಡುವೆನೆಂದುಕೊಂಡು ಅವಳ ಗಂಡನನ್ನು ಕರೆಯಿಸಿ ಇಬ್ಬರಿಗೂ ಬುದ್ದಿ ಹೇಳಿ ಒಂದಾಗಿಸಲು ನೋಡಿದ. ಈತನ ಪ್ರಯತ್ನಗಳೆಲ್ಲ ವಿಫಲವಾಗುವ ಲಕ್ಷಣಗಳು ಗೋಚರಿಸಿದ್ದರಿಂದಲೇ ಇಬ್ಬರಿಗೂ ತಾನೆ ಮುಂದೆ ನಿಂತು ಒಂದಿಷ್ಟು ಹಿರಿಯರ ಸಮಕ್ಷಮದಲ್ಲಿ ತಲಾಖ್ ಕೊಡಿಸಯೇ ಬಿಟ್ಟ.

ಸಮಾಜದಲ್ಲಿ ಆಕೆ ಮಾಡಿದ ತಪ್ಪು, ಸಮಾಜ ಆಕೆಯನ್ನು ನೋಡುವ ರೀತಿ ಆ ಅವಮಾನ, ನಿಂದನೆಗಳು ತೀರಾ ಅವಳನ್ನು ಘಾಸಿಗೊಳಿಸಿತ್ತಾದರೂ. ಸಂಶಯಿಸುವ ಗಂಡನಿಂದ ಮುಕ್ತಿ ಸಿಕ್ಕರೆ ಸಾಕು ಎಂದು ತನ್ನ ಗಂಡನಿಂದ ನಯಾಪೈಸೆ ಜೀವನಾಂಶವನ್ನೂ ಪಡೆಯದೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗದೇ ತಲಾಖ್ ಪಡಕೊಂಡ ಪಾರ್ವತಿ ಆ ಕ್ಷಣಕ್ಕೆ ಬೇಟೆಗಾರನಿಂದ ತಪ್ಪಿಸಿಕೊಂಡ ಜಿಂಕೆಯಂತಾಗಿದ್ದಳು. ಅವಳ ಜೀವನದಲ್ಲಿ ನಡೆದ ಈ ಎಲ್ಲ ಘಟನೆಗಳೂ ಒಂದೊಂದು ಅಧ್ಯಾಯವೆಂಬಂತೆ ಅಂದುಕೊಂಡು ಈ ಅನುಭವಗಳನ್ನು ಮೆಲುಕು ಹಾಕುತ್ತಲೇ ತಂದೆ ಕರವೀರನಿಗೆ ಕಾಲಿಗೆ ಬಿದ್ದು ತಬ್ಬಿ ಕಣ್ಣೀರು ಹಾಕುತ್ತಲೇ ತನ್ನ ಈ ಬಿಡುಗಡೆಗೆ ಶ್ರಮಿಸಿದ ಖಾಸ ಅಣ್ಣನಂತಿರುವ ಮಂಜನಿಗೆ ಮನದಲ್ಲೇ ನಮಿಸಿ ಪಾರ್ವತಿ ತುಂಬಾ ದೂರ ದೂರ ನಡೆದಳು.

ಸಿದ್ದರಾಮ ತಳವಾರ, ದಾಸ್ತಿಕೊಪ್ಪ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x